ಬೆಂಗಳೂರು ಸಾಹಿತ್ಯ ಮೇಳದ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ರವಿಗೆ ಆಹ್ವಾನ ಬಂದಾಗ ಅದನ್ನು ನಯವಾಗಿ ನಿರಾಕರಿಸಿದರೂ ಮತ್ತೆ ಮತ್ತೆ ಒತ್ತಾಯಿಸಿದ ಕಾರಣದಿಂದಾಗಿ ಒಪ್ಪಿಗೆ ಸೂಚಿಸಿದ್ದನು. ಇಷ್ಟು ದೂರದಿಂದ ಹೊರಡುವುದು, ಆ ನಗರದ ಗಡಿಬಿಡಿ ಎಲ್ಲ ನೆನೆದಾಗ ಹೊಟ್ಟೆ ತೊಳಸಿದಂತಾಗುತ್ತಿತ್ತು. ‘ಸಮಕಾಲೀನ ಸಾಹಿತ್ಯದಲ್ಲಿ ಸ್ತ್ರೀ’ ಎಂಬ ಗೋಷ್ಠಿ. ಅದೂ ಖ್ಯಾತ ವಿಮರ್ಶಕ ಹೃದಯೇಶ ಅವರ ಅಧ್ಯಕ್ಷತೆಯಲ್ಲಿ! ಸ್ವಲ್ಪ ನಡುಕ ಒಳಗೊಳಗೇ.
ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಚಿತ್ರಾ ಲಾಡ್ಜಿನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ಮೆಜಸ್ಟಿಕ್ನಿಂದ ನಡೆದೇ ಹೋದ. ಹಾಗೆ ದಿನಮೊದಲೇ ಲಾಡ್ಜು ಸೇರಿಕೊಂಡ ರವಿಯು ತಾನು ಬಂದಿರುವ ಸುದ್ದಿಯನ್ನು ಗೆಳೆಯರ್ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಗೋಷ್ಠಿಗೆ ತಯಾರಾಗಲು ಪುರುಸೊತ್ತು ಸಿಗದ ಕಾರಣ ಒಂದಷ್ಟು ಪುಸ್ತಕಗಳನ್ನು ತುಂಬಿಕೊಂಡು ಹೋಗಿದ್ದರಿಂದ ಸ್ವಲ್ಪ ದಣಿವು ಆವರಿಸಿತ್ತು. ಕುರ್ಚಿಗೆ ಮೈಯನ್ನೊಪ್ಪಿಸಿ ಕುಳಿತ. ಸುಮಾರು ಐದು ನಿಮಿಷ ಹಾಗೇ ನಿರಾಳವಾಗಿ ಕುಳಿತ. ಹೊರಗಿನ ವಾಹನಗಳ ಸದ್ದು ಒಟ್ಟು ಸೇರಿ ಕ್ರಮೇಣ ಕಿವಿಯೊಂದಿಗೆ ಹೊಂದಿಕೊಂಡಿತು.
ಬಾಗಿಲು ತಟ್ಟಿದ ಸದ್ದಾಯಿತು. ಥತ್ ಎಂದು ತೆರೆದು ನೋಡಿದರೆ ರೂಂಬಾಯ್ ಮತ್ತು ಮಧ್ಯವಯಸ್ಸಿನ ಒಬ್ಬಾತ.
‘ಏನಾದ್ರೂ ಸ್ಪೆಷಲ್ ಬೇಕಾ ಸರ್?’ ಮುಖದಲ್ಲಿ ನಗು ಬರಿಸಿಕೊಂಡು ನುಡಿದ ಆ ಮಧ್ಯವಯಸ್ಕ. ರೂಂಬಾಯ್‍ನ ಮುಖದಲ್ಲಿ ತುಸು ಹೆಚ್ಚೇ ನಗು ಕವಿದಿತ್ತು.
‘ಏನೂ ಬೇಡ, ರಾತ್ರಿಯ ಊಟ ಇಲ್ಲೇ ಸಿಗುತ್ತಲ್ಲಾ ಅಷ್ಟೆ ಸಾಕು’ ರವಿ ನಿರ್ಲಿಪ್ತನಾಗಿ ನುಡಿದ.
‘ಸ್ಸಾರಿ ಸರ್ ಅದಲ್ಲ... ನಮ್ಮಲ್ಲಿ ಇವೂ ಇವೆ... ಒಂದ್ನೈಟಿಗೆ ಥೌಸಂಡ್ ಅಷ್ಟೇ’. ಮೊಬೈಲಿನಲ್ಲಿದ್ದ ನಾಲ್ಕೈದು ಹುಡುಗಿಯರ ಚಿತ್ರ ತೋರಿಸಿದ.
‘ಅಯ್ಯೋ.. ಛೇ.. ಬೇಡ ಬೇಡ’ ಎಂದು ಸಾರಾಸಗಟಾಗಿ ತಿರಸ್ಕರಿಸಿ ಒಳಗೆ ಬಂದು ಬಚ್ಚಲ ಮನೆ ಸೇರಿ ತಣ್ಣೀರನ್ನು ಮುಖಕ್ಕೆ ಚುಮುಕಿಸಿಕೊಂಡ. ಟ್ರಾಫಿಕ್ಕಿನ ಹೊಗೆ, ಪ್ರಯಾಣದ ಆಯಾಸ, ಈಗಷ್ಟೇ ಕೇಳಿಸಿಕೊಂಡ ಇವನ ಮಾತು.. ಎಲ್ಲವೂ ಜರ್ರನೆ ಇಳಿದುಹೋಯಿತು.
ಇಂಥಾ ಅನುಭವಗಳೆಲ್ಲ ರವಿಗೆ ತೀರಾ ಹೊಸತು. ‘ಇನ್ನೂ ನಂಗೆ ಈ ರಸ್ತೆ ದಾಟ್ಲಿಕ್ಕೆ ಗೊತ್ತಿಲ್ವಲ್ಲಾ’ ಹಂಗಿಸಿಕೊಳ್ಳುತ್ತಾನೆ ತನನ್ನೇ. ಹಳ್ಳಿ ಹೈದರನ್ನೆಲ್ಲ ತನ್ನ ಕೆಂಪು ತುಟಿಗಳ ಕೊಂಕಿಸಿ ಆಕರ್ಷಿಸುವ ಈ ಬೆಂಗಳೂರು ತನ್ನನ್ನು ನೋಡುತ್ತಿರುವುದು ಎರಡನೇ ಬಾರಿ. ಹಕ್ಕಿಗಳಿಲ್ಲದ ನದಿಗಳಿಲ್ಲದ ಹಸಿರಿಲ್ಲದ ಮೌನವಿಲ್ಲದ ಊರು. ಆದರೆ ಸ್ವಾತಂತ್ರ್ಯವಿದೆ. ನಡೆಯುವಾಗ ಈ ರಸ್ತೆಗಳೂ ನನ್ನ ಕಾಲಿನ ಕುರಿತು ದೇಹದ ಕುರಿತು ಮತ್ತು ನನ್ನ ಮನಸ್ಸಿನಲ್ಲಿ ಹರಿದಾಡುತ್ತಿರುವ ಭಾವನೆಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಇದೊಂಥರಾ ಚಂದ ಎನಿಸಿತು ಅವನಿಗೆ .
ಐದು ವರ್ಷಗಳ ಹಿಂದೆ ಕೋವರ್‍ಕೊಲ್ಲಿಯ ಕೊಥಾರಿ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ. ಯಾವ ಪಟ್ಟೆಯಲ್ಲಿ ಕಾಡಾನೆಗಳಿರುತ್ತವೆ, ಸಿಲೋನ್ ಪಟ್ಟೆಯಲ್ಲೇ ಯಾಕೆ ಜಾಸ್ತಿ ಆನೆಗಳಿರುತ್ತವೆ, ಯಾವ ಪಟ್ಟೆಯಲ್ಲಿ ಕಪ್ಪೆಗಳು ತುಂಬಿಕೊಂಡಿರುತ್ತವೆ, ಎಲ್ಲಿ ಬೋರರ್ ಹಾವಳಿ ಜಾಸ್ತಿ ಮುಂತಾದ ಮಾಹಿತಿಗಳಿಗಾಗಿ ರೈಟರ್‍ಗಳು ರವಿಯನ್ನೇ ನೆಚ್ಚಿಕೊಂಡಿದ್ದರು. ಕಾಫಿ ಗಿಡಗಳಿಗೆ ನೀರು ಹಾಯಿಸುವಾಗ ಸ್ಪ್ರಿಂಕ್ಲರ್‍ಗೆ ಮುಖವೊಡ್ಡಿದಾಗಲೆಲ್ಲ ಹೀಗೇ ನಿರಾಳವಾಗುತ್ತಿದ್ದ. ಮೂರು ಬಾರಿ ಸಿವಿಲ್ ಸರ್ವೀಸ್ ಪರೀಕ್ಷೆಯ ಸಂದರ್ಶನವನ್ನು ಎದುರಿಸಿ ಬಂದಿದ್ದರೂ ಕೆಲಸ ಕೈಗೂಡಿರಲಿಲ್ಲ. ಕಡೆಗೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ತನ್ನನ್ನು ಅರ್ಪಿಸಿಕೊಂಡಿದ್ದ.
ಬಿಚ್ಚಿಟ್ಟಿದ್ದ ಕೈಗಡಿಯಾರವನ್ನೆತ್ತಿ ನೋಡಿದ- ಐದು ಗಂಟೆ. ಹಿಂದಿನ ದಿನದ ವಿಪರೀತ ಕೆಲಸಗಳು ನೆನಪಿಗೆ ಬಂದವು. ಎರಡು ದಿನದ ಕೆಲಸಗಳನ್ನು ಮಾಡಿದ್ದರೂ ರಜೆ ಸಿಗುವ ಸಾಧ್ಯತೆ ಕಡಿಮೆಯೇ ಆಗಿತ್ತು. ‘ ಅವಂಗೆ ಮಾಡಿಕೆ ಬ್ಯಾರೆ ಕೆಲ್ಸ ಇಲ್ಲೆ’ ಬಾಸ್ ತನಗೆ ಕೇಳುವಂತೆ ಗೊಣಗುಟ್ಟಿದ್ದ. ತನಗೂ ಹಾಗೇ ಅನಿಸಿತ್ತು. ಅಷ್ಟು ದೂರ ಕ್ರಮಿಸಿ ಅರ್ಧ ಗಂಟೆ ಮಾತನಾಡುವುದು. ಕುಳಿತಿರುವ ಮಂದಿ ಮೊಬೈಲ್ ಕುಟ್ಟುತ್ತಾ ಸ್ವಲ್ಪ ಕೇಳಿಸಿಕೊಳ್ಳುವುದು. ಆಮೇಲೆ ಸೆಲ್ಫಿ ತೆಗೆದುಕೊಳ್ಳುವುದು, ಡಿಪಿಗೆ ಹಾಕಿ ಖುಷಿಪಡುವುದು..
ಇನ್ನೇನು ಈ ವರ್ಷವೇ ನಿವೃತ್ತಿ ಬಾಸ್ಗೆ. ಮೈಸೂರಿನಲ್ಲಿ ಮನೆಮಾಡಿಕೊಂಡು ಎರಡು ವರ್ಷವಾಗಿದ್ದಷ್ಟೆ. ಹೆಂಡತಿ ತೀರಿಕೊಂಡು ಒಂದು ವರ್ಷ. ಒಂದು ತಿಂಗಳು ಇನ್ನೂ ಕಳೆದೇ ಇರಲಿಲ್ಲ ಹೊಸದಾಗಿ ಬಂದಿದ್ದ ಜ್ಯೋತಿಯೊಂದಿಗೆ ಚಕ್ಕಂದ ಆಡಿ ಸಿಕ್ಕಿಹಾಕಿಕೊಂಡಿದ್ದ. ನಿವೃತ್ತಿಯ ನಂತರ ಅವಳನ್ನೇ ಮದುವೆ ಆಗುತ್ತಾನಂತೆ.
ಹೋಗಲಿ. ಏನಾದರೂ ಮಾಡಿಕೊಳ್ಳಲಿ. ತಾನಿಲ್ಲಿ ಬಂದಿದ್ದು? ಯಾಕೋ ಇವೆಲ್ಲ ಬೇಡವಾಗಿತ್ತು ಎಂದು ತೀವ್ರವಾಗಿ ಅನಿಸತೊಡಗಿತು ರವಿಗೆ. ಅಷ್ಟಕ್ಕೂ ಈ ಉಪನ್ಯಾಸಗಳಿಂದ ಯಾರಿಗಾದರೂ ಉಪಯೋಗವಿದೆಯೇ? ತಮಾಷೆಯೆನಿಸಿತು. ಇಂಥಾ ಕಾರ್ಯಕ್ರಮಗಳಿಗೆ ಬರುವುದಿಲ್ಲವೆಂದು ಇನ್ನು ಮುಂದೆ ಮುಲಾಜಿಲ್ಲದೆ ಹೇಳಿಬಿಡಬೇಕು. ಇಂಥಾ ಹಿಂಸೆಗಳಿಂದ ಪಾರಾಗುವುದನ್ನು ಕಲಿಯಬೇಕು.
ಏನನ್ನೂ ಯೋಚಿಸದೆ ಸುಮ್ಮನೆ ಕುಳಿತುಕೊಳ್ಳಬೇಕೆನಿಸಿತು. ಯಾಕೋ ಆ ರೂಂಬಾಯ್ ಮತ್ತು ಆ ಮಧ್ಯವಯಸ್ಕ ಆಡಿದ ಮಾತುಗಳು ಅವನನ್ನು ಆಕ್ರಮಿಸತೊಡಗಿದವು. ಹುಡುಗಿ! ಅರವತ್ತು ತುಂಬಿದ ಮುದುಕನೇ ಅಷ್ಟೆಲ್ಲ ಆಟವಾಡುವುದಾದರೆ ತನ್ನಂಥ ಯುವಕ ಏನು ಮಾಡಬೇಡ! ಇದುವರೆಗೆ ಒಬ್ಬರೊಂದಿಗೂ ಕಣ್ಣಿಗೆ ಕಣ್ಣು ನೆಟ್ಟು ಮಾತನಾಡಲಿಲ್ಲ. ಅದನ್ನಾದರೂ ಕಲಿಯಲಿಲ್ಲ. ಪ್ರೇಮ-ಕಾಮವೆಲ್ಲ ಹಾಳುಬಿದ್ದು ಹೋಗಲಿ. ಕನಿಷ್ಟ ಅಷ್ಟಾದರೂ!
‘ಹುಡುಗಿ’ ಪದ ಕೇಳಿದರೇ ದೂರ ಉಳಿಯುವಷ್ಟು ಮುಜುಗರದ ರವಿಯ ಮನದ ಯಾವುದೋ ಮೂಲೆಯಲ್ಲಿದ್ದ ತುಮುಲವೊಂದು ಅವನ ಒಳಗನ್ನು ಮುಟ್ಟಿ ‘ಛೆ! ಬೇಡ ಅನ್ಬಾರ್ದಿತ್ತು’ ಎಂಬ ಮಾತನ್ನುದುರಿಸಿತ್ತು.
ಮತ್ತೆ ಬೆವರತೊಡಗಿದ. ಆದದ್ದಾಗಲಿ ಎಂದು ಧೈರ್ಯಮಾಡಿಕೊಂಡು ಫೋನಾಯಿಸಿದ.
ಅವರಿಬ್ಬರೂ ಅಷ್ಟೇ ವೇಗದಲ್ಲಿ ಬಂದರು. ‘ಅವರಲ್ಲಿ ಯಾರ್ನಾದ್ರೂ ಒಬ್ರನ್ನ ಕಳ್ಸಿ', ಎಂದವನೇ ರೂಮಿನ ಒಳಗೆ ಸೇರಿಕೊಂಡ.
ಪುಸ್ತಕ ತೆರೆದ. ಒಂದೊಂದನ್ನೇ ಹೊರಗೆ ತೆಗೆದು ಗುರುತುಮಾಡಿಟ್ಟುಕೊಂಡ. ಈಗಾಗಲೇ ಟಿಪ್ಪಣಿ ಮಾಡಿಟ್ಟುಕೊಂಡ ಹಾಳೆಯತ್ತ ಕಣ್ಣಾಡಿಸಿದ.
ಹಸಿವಾಗತೊಡಗಿತು. ಗೆಳೆಯ ಸುಕುಮಾರನ ಮೆಸೇಜು. ‘ಅರ್ಜೆಂಟ್ 2000 ದುಡ್ಡು ಹಾಕು ಅಕೌಂಟಿಗೆ’. ಕಳೆದ ತಿಂಗಳಲ್ಲಿ 5000 ಹಾಕು ಎಂದು ಹಾಕಿಸಿಕೊಂಡು ಅದನ್ನು ಮರೆತುಬಿಟ್ಟಿದ್ದ.
ಬಾಗಿಲು ಸದ್ದು ಮಾಡಿತು. ತೆರೆದ. ಎದೆಯಲ್ಲಿ ಮಿಂಚು ಹೊತ್ತಿಸಿದ ಅನುಭವ. ಹುಡುಗಿ!
‘ಬನ್ನಿ’ ಎಂದ.
ಅವಳು ಎಷ್ಟೋ ದಿನಗಳ ಪರಿಚಯ ಇರುವಂತೆ ಸಹಜವಾಗಿದ್ದಳು. ಕುಳಿತುಕೊಳ್ಳಲು ಹೇಳಿದ. ಮತ್ತೆ ಪುಸ್ತಕದ ಮೇಲೆ ಕಣ್ಣಾಡಿಸಿದ. ಆದರೆ ಏನೂ ಅರ್ಥವಾಗಲಿಲ್ಲ.
ಬಾಥ್ರೂಮಿಗೆ ಹೋಗಿ ಮುಖಕ್ಕೆ ನೀರು ಚಿಮುಕಿಸಿಕೊಂಡ. ಈ ಹಿಂದೆ ಕೊಟ್ಟ ಮುದವನ್ನು ಈಗ ಅದು ಕೊಡಲಿಲ್ಲ. ತಲೆಗೆ ನೀರು ಸುರಿದುಕೊಂಡ. ಹಿತವೆನಿಸಿತು.
ಹಾಸಿಗೆಯ ಮೇಲೆ ಸಿಮನ್ ದ ಬೊವಾಳ ‘ದಿ ಸೆಕೆಂಡ್ ಸೆಕ್ಸ್’ ಪುಸ್ತಕವಿತ್ತು. ‘ಏನಂದುಕೊಂಡಳೋ ಅವಳು’ ಹೇಳಿಕೊಂಡ ಮನಸ್ಸಿನಲ್ಲೇ.
ರವಿ ಯಾವ ಹುಡುಗಿಯರ ಹಿಂದೆ ಹೋದವನಲ್ಲ. ಅಷ್ಟು ಮುಜುಗರ ಅವನಿಗೆ. ಆದರೆ ಕುತೂಹಲವಿತ್ತು. ಅವನ ಬಡತನ ಅದನ್ನೆಲ್ಲ ದೂರ ಓಡಿಸಿತ್ತು. ಮೂವತ್ತು ದಾಟಿದರೂ ಮದುವೆಗೆ ಹುಡುಗ ಸಿಗದೆ ಪರದಾಡುತ್ತಿದ್ದ ಅಕ್ಕ, ಮೂವತ್ತರ ಆಸುಪಾಸಿನಲ್ಲಿದ್ದ ಕಿರಿಯ ಅಕ್ಕ, ಆಮೇಲೆ ಅವರಿಬ್ಬರನ್ನೂ ಮದುವೆ ಮಾಡಿಸಿದ್ದಕ್ಕೆ ಸಾಲದ ಮೇಲೆ ಸಾಲ. ಅಪ್ಪ-ಅಮ್ಮನನ್ನು ‘ಸಾವು’ ಪ್ರೀತಿಸಿ ಕದ್ದೊಯ್ದಿತ್ತು. ಸರ್ಕಾರಿ ಕೆಲಸ ಸಿಕ್ಕಿದ್ದರೂ ವಾಸ ಮಾತ್ರ ಅದೇ ಮುರುಕಲು ಮನೆಯಲ್ಲಿ. ಈ ಕಾರಣಕ್ಕಾಗಿಯೇ ಹುಡುಗಿ ಕೂಡ ಸಿಗಲಿಲ್ಲ. ಇನ್ನೇನು ತನಗೂ ಮೂವತ್ತು ದಾಟಿತು. ಹೀಗೇ ಇದ್ದುಬಿಡುವುದೊಳ್ಳೆಯದು ಎಂದು ನಿರ್ಧರಿಸಿದ್ದ.
ಬಚ್ಚಲಿನಿಂದ ಹೊರಬಂದ. ಅವಳು ಅವನನ್ನು ಸುಮ್ಮನೆ ದಿಟ್ಟಿಸಿದಳು. ಸಮುದ್ರವೊಂದು ಅಲುಗಾಡದೆ ಸುಮ್ಮನೆ ನಿಂತಂತೆನಿಸಿತು ಅವನಿಗೆ.
‘ಹಸಿವಾಗ್ತಿದೆಯಾ?’ ಕೇಳಿದ.
‘ಇಲ್ಲ’ ಎಂದಳು.
‘ಊಟ ಮಾಡೋಣ’ ಎಂದ
‘ಬೇಡ’ ಎಂದಳು.
‘ಪ್ಲೀಸ್’ ಎಂದ ತಡವರಿಸುತ್ತಾ.
ಸುಮ್ಮನಾದಳು.
‘ಹೆಸರು?’
‘ಶಾಲಿನಿ’
‘ನಿಜವಾಗ್ಲೂ ಶಾಲಿನಿ?’
‘ಹುಂ’.
ರೂಂ ಬಾಯ್ ಎರಡು ಊಟ ತಂದಿಟ್ಟು ಮುಖದ ತುಂಬ ಕಳ್ಳ ನಗು ತುಂಬಿಕೊಂಡು ಹೊರಹೋದ.
ಊಟ ಮಾಡಿದರು.
‘ಎಷ್ಟ್ ವರ್ಷ ಆಯ್ತು ಈ ಕೆಲ್ಸಕ್ಕಿಳ್ದು?’
‘ಒಂದು ವರ್ಷ’
ಅವಳು ಕೈತೊಳೆದು ಬರುವಾಗ ಒಮ್ಮೆ ದಿಟ್ಟಿಸಿದ. ಎಂಥಾ ಚೆಲುವು! ಅವಳು ನೀಲಿ ಜೀನ್ಸ್ ಮತ್ತು ಹಳದಿ ಟಿ-ಷರ್ಟನ್ನು ಧರಿಸಿದ್ದಳು. ತನಗಿಂತ ತುಸು ಹೆಚ್ಚೇ ಎತ್ತರವಿರುವಂತೆ ಕಂಡಳು. ಪ್ರಾಯ ಇಪ್ಪತ್ತೆರಡರಿಂದ ಇಪ್ಪತ್ತೈದು, ಅಷ್ಟೆ.
ಪುಸ್ತಕಗಳನ್ನು ಒಮ್ಮೆ ಕೈಗೆತ್ತಿಕೊಂಡು ಮತ್ತೆ ಪುಟಗಳನ್ನು ಸರಿಸಿದ.
‘ಸ್ವಲ್ಪ ಹೊರಗೆ ಹೋಗಿ ಬರೋಣ್ವಾ?’ ಕೇಳಿದ.
‘ಹುಂ’ ಎಂದಳು.
ಅಪರಿಚಿತ ಊರು. ಯಾರ ಮುಖ ಯಾರು ನೋಡುತ್ತಾರೆ? ಯಾರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ಅವಳಿಗೆ ಬೆಂಗಳೂರಿನ ರಾತ್ರಿಗಳು, ಹಗಲುಗಳು, ದಿಗಿಲುಗಳು, ರಸ್ತೆಗಳು, ಟ್ರಾಫಿಕ್ಕು... ಎಲ್ಲ ಚಿರಪರಿಚಿತ.
'ಎಷ್ಟೆಲ್ಲ ಕಣ್ಣುಗಳು ಇವಳನ್ನು ಸೀಳಿ ಆಚೆಗೆ ಬಂದಿರಬಹುದು.. ಅದರಲ್ಲಿ ಇವಳನ್ನು ಭೋಗಿಸಿದ ಕಣ್ಣುಗಳೂ ಇರಬಹುದು, ಆ ಕಣ್ಣುಗಳು ತನ್ನನ್ನೂ ಸ್ಕ್ಯಾನ್ ಮಾಡಿ ಏನೇನೋ ಕಲ್ಪನೆಗಳನ್ನು ಹೆಣೆದಿರಬಹುದು.. ಇವಳು ಅವರನ್ನು ನೋಡಿದರೆ ಗುರುತು ಹಿಡಿಯುತ್ತಾಳೆಯೇ?' ಹೀಗೆ ಪ್ರಶ್ನೆಗಳು ಒಂದೊಂದೇ ಮುತ್ತಿ ಇವನನ್ನು ಹಿಂಸಿಸಲಾರಂಭಿಸಿದವು. ಈ ನಡಿಗೆಯಲ್ಲಿ ಸ್ವಾತಂತ್ರ್ಯದ ಕೊರತೆಯಿದೆ ಎಂದು ಅನಿಸತೊಡಗಿತು...
ರಸ್ತೆ ದಾಟುವಾಗ ತಡಬಡಾಯಿಸುವಾಗ ಅವಳಿಗೆ ಒಳಗೊಳಗೇ ನಗು.
‘ಯಾವ್ನೋ ಮೆಂಟಲ್ ಕೈಗೆ ಸಿಕ್ಹಾಕೊಂಡೆ ಇವತ್ತು’ ಎಂದು ಅವಳು ಅಂದುಕೊಂಡಿರಬಹುದೆಂದು ಇವನು ಲೆಕ್ಕಹಾಕಿದ. ಆ ಕತ್ತಲೆಯ ಬೆಳಕಿಗೆ ಅವನಿಗೆ ಎದುರುಗೊಳ್ಳಲು ಆಗಲಿಲ್ಲ.
‘ಸಾಕು ಬನ್ನಿ’ ಮತ್ತೆ ಲಾಡ್ಜಿಗೆ ಕರೆದೊಯ್ದ.
ರಾತ್ರಿ ಸ್ವಲ್ಪ ಚಳಿ ಹೆಚ್ಚಿತ್ತು. ಆದರೆ ಸೆಖೆಯೆನಿಸುತ್ತಿತ್ತು ರವಿಗೆ. ಬಟ್ಟೆ ಬದಲಾಯಿಸಿ ಬಿಳಿಯ ಪಂಚೆ, ಬಿಳಿಯ ಟಿ-ಷರ್ಟ್ ಧರಿಸಿ ಕುಳಿತ.
‘ಬಟ್ಟೆ ಬದಲಾಯಿಸಿಕೊಳ್ಳಿ’ ಎಂದ. ‘ಇಲ್ಲ ತಂದಿಲ್ಲ’ ಎಂದಳು. ‘ಓ ಸ್ಸಾರಿ’ ಎಂದ. ತನ್ನ ಟೀ ಷರ್ಟ್ ಮತ್ತು ನೈಟ್ ಪ್ಯಾಂಟುಗಳನ್ನು ನೀಡಿದ. ಅವಳು ಧರಿಸಿಕೊಂಡಳು.
ನಾಳಿನ ಕಾರ್ಯಕ್ರಮದ ಬಗ್ಗೆ ನೆನೆದಾಗ ಮತ್ತೆ ಗಾಬರಿಯಾಗತೊಡಗಿತು. ಇನ್ನೂ ಏನೂ ತಯಾರಾಗಿಲ್ಲ. ಹೃದಯೇಶ ನಿಷ್ಠುರ ನುಡಿಯವರು. ಎಲ್ಲಾದರೂ ಎಡವಿದರೆ ಮಾನ ಹರಾಜಾಗುವಂತೆ ಮಾತನಾಡಿಬಿಡುತ್ತಾರೆ.
ಪುಸ್ತಕಗಳನ್ನು ಒಂದೊಂದಾಗಿ ತೆರೆದು ಟಿಪ್ಪಣಿ ಮಾಡುವುದನ್ನು ಮುಂದುವರೆಸಿದ. ಮುಕ್ಕಾಲು ಗಂಟೆ ಕಳೆದಿರಬಹುದು. ಸುಮ್ಮನೇ ಕುಳಿತಿದ್ದವಳು 'ಟಿವಿ ಆನ್ ಮಾಡ್ಲಾ?'ಕೇಳಿದಳು.
'ಮಾಡಿ' ಎಂದ.
ನಿಜವಾಗಿಯೂ ಅವಳು ಟಿವಿ ನೋಡುತ್ತಿದ್ದಳೋ ಅಥವಾ ಹಾಗೆ ನಟಿಸುತ್ತಿದ್ದಳೋ ಇವನಿಗೆ ಅರ್ಥವಾಗಲಿಲ್ಲ.
‘ಅಲ್ಲಾ, ನೀವ್ಯಾಕೆ ಈ ಕೆಲ್ಸಕ್ಕಿಳ್ದಿದ್ದು ಅಂತ ಹೇಳ್ಲಿಲ್ಲ?’ ಕೇಳಿದ.
‘ನನ್ನ ಫ್ರೆಂಡ್ ಕೆಲ್ಸ ಕೊಡಿಸ್ತೀನಿ ಅಂತ ಮೋಸ ಮಾಡ್ದ. ಎಲ್ಲಾ ಕಳ್ಕೊಂಡೆ ಅನ್ನಿಸ್ತು. ಒಂದ್ಸಲ ಕಳ್ಕೊಂಡ ಮೇಲೆ ಇನ್ನೇನ್ ಉಳ್ದಿರುತ್ತೆ ಹುಡ್ಗೀರಲ್ಲಿ... ಇಲ್ಲಿಗೆ ಬಂದೆ.’
ಸ್ವಲ್ಪ ಭಾವುಕವಾದಂತೆ ಕಂಡಳು.
ದನಿಯಲ್ಲಿ ಅಂಥಾ ಬದಲಾವಣೆಯೇನೂ ಕಾಣಿಸಲಿಲ್ಲ.
‘ಹಾಗಾದ್ರೆ ಇನ್ನು ಮದ್ವೆ ಆಗಲ್ವಾ?’ ಕೇಳಿದ.
ಮೊದಲ ಬಾರಿಗೆ ನಗು ತಂದುಕೊಂಡಳು ಮುಖದಲ್ಲಿ. ಮತ್ತಷ್ಟೂ ಮುದ್ದಾಗಿ ಕಂಡಳು.
‘ಅಯ್ಯೋ.. ಯಾರು ಬರ್ತಾರೆ ಮದ್ವೆ ಆಗ್ಲಿಕ್ಕೆ? ವಿಷಯ ತಿಳಿದವರ್ಯಾರೂ ಹತ್ರ ಬರಲ್ಲ... ತಿಳಿಯದವ್ರ ಜೊತೆಗೆ ಮದ್ವೆ ಆಗ್ಲಿಕ್ಕೆ ನಂಗೆ ಇಷ್ಟವಿಲ್ಲ’.
ಅರ್ಧ ಗಂಟೆಯಲ್ಲಿ ಸುಮಾರು ಮಹತ್ವದ ವಿಷಯಗಳನ್ನು ಕಲೆಹಾಕಿದ ಮೇಲೆ ಅವುಗಳನ್ನು ಕ್ರಮಪ್ರಕಾರವಾಗಿ ಜೋಡಿಸಿ ಲೇಖನ ಸಿದ್ಧಪಡಿಸಿದ. ಹತ್ತಿರ ಹತ್ತಿರ ಮಧ್ಯರಾತ್ರಿ. ನಿರಾಳ ಭಾವ ಕಾಡಿತು. ನಿದ್ದೆ ಕಣ್ಣಂಚಲ್ಲಿ ತಣ್ಣಗೆ ನಿದ್ದೆಗೆ ಇಳಿದಿತ್ತು.
ಅವಳು ಮೂರ್ನಾಲ್ಕು ಬಾರಿ ಆಕಳಿಸಿದಳು. ಕಣ್ಣುಗಳು ತೂಗಾಡುತ್ತಿದ್ದವು. ‘ಮಲ್ಕೊಳ್ಳಿ’ ಎಂದ. ಅವಳು ಹಠಾತ್ತನೆ ಎಚ್ಚರಗೊಂಡಂತೆ ಅವನನ್ನು ದಿಟ್ಟಿಸಿ ಹಾಸಿಗೆಯ ಮೇಲೆ ಬಿದ್ದುಕೊಂಡಳು. ಇವನೂ ಹಾಸಿಗೆಗೆ ಹೊರಳಿದ.
ಬೆಳಿಗ್ಗೆ ಬೇಗ ಎದ್ದು ಮತ್ತೊಮ್ಮೆ ಸೆಮಿನಾರ್ ಪೇಪರ್ ಓದಿಕೊಂಡ. ಪರವಾಗಿಲ್ಲ ಎನಿಸಿತು. ಸುಮಾರು ಹೊತ್ತಾದ ಮೇಲೆ ಅವಳು ಬೆರಗಾದಂತೆ ಎದ್ದು ಇವನನ್ನೇ ನೋಡಿದಳು. ಸಣ್ಣ ನಗು ಅವಳ ತುಟಿಯಂಚಿನಲ್ಲಿ ಮಿಂಚಿತು.
‘ಸೆಮಿನಾರಿಗೆ ಬನ್ನಿ ಪ್ಲೀಸ್’ ಒತ್ತಾಯಿಸಿದ. ಸುಮಾರು ಹೊತ್ತು ಯೋಚಿಸಿ ಒಪ್ಪಿಕೊಂಡಳು.
**
ಸಭಾಂಗಣ ತುಂಬಿತ್ತು. ಬ್ಯಾಗನ್ನು ಲಾಡ್ಜಿನಲ್ಲೇ ಇಟ್ಟು ಬಂದಿದ್ದ. ಇವನು ಕೊಡಿಸಿದ ಬಟ್ಟೆಯಲ್ಲಿ ಅವಳು ಚೆಲುವಾಗಿ ಕಾಣುತ್ತಿದ್ದಳು. ಅವನ ಹಿಂದೆಯೇ ಹೋಗುತ್ತಿದ್ದಳು.
ಹೃದಯೇಶ ಅವರನ್ನು ಸುತ್ತುವರಿದುಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದರು.
‘ಸರ್, ನಾನು ರವಿ, ಇವತ್ತಿನ ಗೋಷ್ಠಿಯ ಉಪನ್ಯಾಸ ಮಾಡ್ಲಿಕ್ಕೆ ಬಂದಿದ್ದು’. ಪರಿಚಯಿಸಿಕೊಂಡ.
ಇವಳನ್ನು ನೋಡಿದ್ದೇ ‘ಇವಳ್ನ ಯಾಕೆ ಇಲ್ಲಿಗೆ ಕರ್ಕೊಂಡು ಬಂದೆ? ಮಾಡೋದೆಲ್ಲಾ ಮಾಡಿ ಇಲ್ಲಿಗೂ ಎಳ್ಕೊಂಡು ಬಂದಿದ್ದಾನೆ!’ ಮುಖ ಕೆಂಪು ಮಾಡಿಕೊಂಡು ಅರಚಿ ಹೊರಟು ಹೋದರು ಹೃದಯೇಶ.
‘ಅವ್ರನ್ನು ಗೊತ್ತಾ?’ ಅವಳನ್ನು ಕೇಳಿದ.
‘ಹುಂ.. ವಾರಕ್ಕೊಮ್ಮೆ ಲಾಡ್ಜಿಗೆ ಬರ್ತಾರೆ.. ರಾಕ್ಷಸ!’
ರವಿಯ ಉಪನ್ಯಾಸ ಮುಗಿಯಿತು. ಒಂದೊಂದು ಮಾತುಗಳೂ ಹೃದಯೇಶರ ಹೃದಯಕ್ಕೆ ಕೊಳ್ಳಿ ಇಡುತ್ತಿದ್ದವು. ಅವಳ ಒಂದು ಕಣ್ಣಲ್ಲಿ ಒಂದು ಹನಿ ಮೆಲ್ಲಗೆ ಜಾರುತ್ತಿತ್ತು. ಅವಳದನ್ನು ಒರೆಸಿಕೊಳ್ಳದೆ ಕೇಳಿಸಿಕೊಳ್ಳುತ್ತಿದ್ದಳು. ಹೃದಯೇಶರ ಅಧ್ಯಕ್ಷೀಯ ನುಡಿಗಳು ಕೇವಲ ಐದು ನಿಮಿಷಕ್ಕೇ ಮುಗಿದುಹೋಯಿತು.
‘ಹುಷಾರಿಲ್ವಂತೆ’ ಜನ ಮಾತನಾಡುತ್ತಿದ್ದರು.
ಲಾಡ್ಜಿಗೆ ಹಿಂತಿರುಗಿ ಲಾಡ್ಜಿನವನಿಗೆ ಮತ್ತೊಂದು ಸಾವಿರ ನೀಡಿ 'ಈ ರಾತ್ರಿಗೆ' ಎಂದು ಅವಳನ್ನು ಕರೆದೊಯ್ದ.
ಸಂಜೆ ಹೊರಡುವಾಗ ‘ ನನ್ಜೊತೆ ಬರ್ತೀಯಾ?’ ಕೇಳಿದ. ಅವಳು ತುಟಿಬಿರಿಸಿ ನಕ್ಕು ಅವನ ಹಿಂದೆ ಹಿಂದೆ ನಡೆದಳು. ನಡಿಗೆ ಹಾಗೇ ಮುಂದುವರಿದಂತೆ ಅವಳು ಅವನ ಪಕ್ಕದಲ್ಲೇ ನಡೆಯತೊಡಗಿದಳು. ಮೊದಲ ಬಾರಿಗೆ ಅವಳ ಕೈಯನ್ನೊಮ್ಮೆ ಮುಟ್ಟಿದ. ಮೈ ಜುಮ್ಮೆನಿಸಿದರೂ ಏನೋ ಸಾಧಿಸಿದ ಖುಷಿ ಮೈತುಂಬ ಆವರಿಸಿತು. ಅವಳು ಅವನ ಬೆರಳುಗಳ ಒಳಗೆ ಬೆರಳು ಪೋಣಿಸಿದಳು.
‘ಸ್ಸಾರಿ ನನ್ಹೆಸ್ರು ಶಾಲಿನಿ ಅಲ್ಲ ಜಾನಕಿ’ ಎಂದಳು ಎದುರಿಗಿದ್ದ ತುಂಬಿದ ರಸ್ತೆಯನ್ನೇ ದಿಟ್ಟಿಸಿಕೊಂಡು.
*
ಕಾಜೂರು ಸತೀಶ್