ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ಕಂದ ಪದ್ಯ. Show all posts
Showing posts with label ಕಂದ ಪದ್ಯ. Show all posts

Saturday, October 12, 2024

ಜಿಗಣೆ


ಸಾ ಸಾ ಇದೇನು ಸಾ ಬೆರಳಿಗಂಟಿಕೊಂಡಿದ್ದು
ಚೂರೂ ನೋವು ಆಗದ ಹಾಗೆ ರಕ್ತಹೀರಿಕೊಂಡಿದ್ದು

ಸಾ ಸಾ ಇದ್ಯಾಕೆ ಸಾ ಬೆರಳ ತಿನ್ನೋದಿಲ್ಲ ಇದು
ಬರೀ ರಕ್ತ ಕುಡ್ಕಂಡಿದ್ರೆ ಬದ್ಕೋದ್ಹೇಗೆ ಹೇಳಿ ಇದು

ಸಾ ಸಾ ಇದೆಲ್ಲಿ ಸಾ ರಾತ್ರಿಯಲ್ಲಿ ಮಲ್ಗೋದು
ಚಳಿಚಳಿ ಆಗಲ್ವೇನು ಮಳೆಗಾಲ ಅಲ್ವಾ ಇದು

ಸಾ ಸಾ ಅದ್ಯಾಕೆ ಸಾ ಇಲ್ಲೀತನಕ ಬಂದಿದ್ದು
ಮನೆಕಟ್ಟೋ ಯೋಚ್ನೆ ಬಂತಾ ಅದ್ಕೂ ಇಲ್ಲಿಗೆ ಬಂದು.

*
ಕಾಜೂರು ಸತೀಶ್

Monday, March 29, 2021

ನಮ್ಮಿಸ್ಕೂಲ್ನ ಪುಟ್ಟ



ರಸ್ತೆಯಲ್ಲಿ ಓಡೋಡ್ಬಂದ
ನಮ್ಮಿಸ್ಕೂಲ್ನ ಪುಟ್ಟ;
ಎಲೆ,ಹೂವು,ಹಣ್ಣನ್ನೆಲ್ಲ
ಕಿತ್ತು ಬ್ಯಾಗಲ್ಲಿಟ್ಟ.

'ಬಾಯೊಳಗೇನೋ?' ಎಂದರೆ ಟೀಚರ್
'ಹಲ್ನೋವು ಟೀಚರ್' ಎಂದ್ಬಿಟ್ಟ;
'ಸರಿ ಮತ್ತೆ ತೋರ್ಸು' ಅಂದ್ರೆ
ನೆಲ್ಲಿಕಾಯಿ ಉಗಿದ್ಬಿಟ್ಟ.

'ನೋಟ್ಸ್ ಎಲ್ಲೋ?' ಎಂದರೆ ಟೀಚರ್
ಎಲೆಗಳ ಕಟ್ಟನು ತೋರ್ಸ್ಬಿಟ್ಟ;
'ಸರಿ ಮತ್ತೆ ಬರಿ' ಅಂದ್ರೆ
ಮುಳ್ಳಲಿ ಚೆನ್ನಾಗಿ ಬರ್ದ್ಬಿಟ್ಟ.

'ಬಣ್ಣ ಎಲ್ಲೋ?' ಎಂದರೆ ಟೀಚರ್
ಹೂಗಳ ರಾಶಿಯ ತೆಗೆದಿಟ್ಟ;
'ಸರಿ ಮತ್ತೆ ಹಚ್ಚು' ಅಂದ್ರೆ
ಹೂವನೆ ತೀಡುತ ಹಚ್ಬಿಟ್ಟ.

ರಸ್ತೆಯಲ್ಲಿ ಓಡೋಡ್ಬಂದ
ನಮ್ಮಿಸ್ಕೂಲ್ನ ಪುಟ್ಟ;
ಕಲಿತದ್ನೆಲ್ಲ ತಲೇಲಿಟ್ಟು
ಮನೆ ಕಡೆ ಹೊರಟ.

**

-ಕಾಜೂರು ಸತೀಶ್

ನೀರು ಕಾಗೆ



ನೀರು ಕಾಗೆ ಊರ ನದಿಯ ನೀರಿನಲ್ಲಿ ಸ್ನಾನ ಮಾಡಿ
ಬಂಡೆ ಮೇಲೆ ಹಿಕ್ಕೆ ಹಾಕಿ ಚಿತ್ರವನ್ನು ಬಿಡಿಸುತ್ತೆ.

ಮೈಯೆಲ್ಲ ಇದ್ದಿಲ ಕಪ್ಪು ಹಿಕ್ಕೆ ಮಾತ್ರ ಬೆಳ್ಳಂಬಿಳಿ
ಕಲ್ಲಮೇಲೆ ಚೆಲ್ಲಿಬಿಟ್ಟರೆ ಕೊಕ್ಕರೆಯೇ ನಿಂತಂತೆ. ||ನೀರು ಕಾಗೆ||

ಸೂರ್ಯ ಸಂಜೆ ಬಣ್ಣ ಹಚ್ಚಿ ಅಲಂಕಾರ ಮಾಡುವಾಗ
ಹಾರಿ ಅದರ ಕೆಂಪು ಕಣ್ಣಿಗೆ ಕಾಡಿಗೆ ಹಚ್ಚುತ್ತೆ.||ನೀರು ಕಾಗೆ||

ಮುಸ್ಸಂಜೇಲಿ ಸ್ನಾನ ಮಾಡಿ ಅತ್ತಿಮರವ ಹತ್ತಿ ಕುಳಿತು
ಮೈಯ ಕಪ್ಪುಹರಡಿ ಹರಡಿ ಕತ್ತಲ ತರ್ಸುತ್ತೆ.||ನೀರು ಕಾಗೆ||

**


-ಕಾಜೂರು ಸತೀಶ್

ತುಂಟಾ ತುಂಟಿ


‘ತುಂಟಾ ತುಂಟಾ ಎಲ್ಬಿಟ್ಟೆ
ಕೊಟ್ಟೆ ತುಂಬಾ ಮೊಟ್ಟೆ?’
‘ಎಲ್ಲಾ ಮೊಟ್ಟೆ ತಿಂದ್ಬಿಟ್ಟೆ
ನೋಡು ಡೊಳ್ಳು ಹೊಟ್ಟೆ’.

‘ತುಂಟಿ ತುಂಟಿ ಎಲ್ಬಿಟ್ಟೆ
ಕೊಟ್ಟೆ ತುಂಬಾ ಬಟ್ಟೆ?’
‘ಎಲ್ಲಾ ತೊಟ್ಟು ಬಂದ್ಬಿಟ್ಟೆ
ನೋಡು ಎಷ್ಟು ಪಟ್ಟೆ’.

‘ತುಂಟಾ ತುಂಟಾ ಎಲ್ಲಿಟ್ಟೆ
ಲೊಟ್ಟೆ ಹೊಡ್ಕೊಂಡ್ ತಟ್ಟೆ?’
‘ಎಲ್ಲಾ ಕಟ್ಟೇಲಿಟ್ಬಿಟ್ಟೆ
ನಿಂಗೆ ಬರೀ ಸಿಟ್ಟೇ’.

‘ತುಂಟಿ ತುಂಟಿ ಎಲ್ಲಿಟ್ಟೆ
ಕರುವಿನ ಕೊರಳ ಗಂಟೆ?’
‘ರಾಗಿ ಮೂಟೆ ಮೇಲಿಟ್ಟೆ
ಕೀಟ್ಲೆ ಬಿಟ್ಟೇ ಬಿಟ್ಟೆ’.
*


ಕಾಜೂರು ಸತೀಶ್

ಬಸ್ಸು



ಬಸ್ಸು ಕೂಡ ನಮ್ಮೂರಿಗೆ ಬರುತ್ತೆ
ಉಸ್ಸಪ್ಪಾ ಅಂತ ಉಸ್ರು ಬಿಡುತ್ತೆ

ಆಚೆಗೊಂದ್ಸಲ ಈಚೆಗೊಂದ್ಸಲ ವಾಲುತ್ತೆ
ಮರ ಬಳ್ಳಿ ಹಾವನ್ನೆಲ್ಲ ಮುಟ್ಟುತ್ತೆ

ಜಿಗಣೆ ಕೂಡ ಟಿಕೇಟ್ ಇಲ್ದೆ ಬರುತ್ತೆ
ಹೊಟ್ಟೆ ತುಂಬಾ ರಕ್ತ ಕುಡ್ಕೊಂಡ್ ಹೋಗುತ್ತೆ

ಎದ್ರಿಗೆ ಬಂದ್ರೆ ಕಣ್ಕಣ್ ಹೊಡ್ಕೊಂಡ್ಹೋಗುತ್ತೆ
ಆದ್ರೂ ದೂರ ದೂರಾನೇ ಇರುತ್ತೆ

ಲಾಲಿ ಲಾಲಿ ಜೋಕಾಲಿ ಆಡ್ಸುತ್ತೆ
ಅಜ್ಜಂಗೂ ಕೂಡ ನಿದ್ದೆ ಬರ್ಸುತ್ತೆ

ಕೈ ತೋರ್ಸಿದ್ರೆ ನಾಚ್ಕೊಂಡು ನಿಲ್ಲುತ್ತೆ
‘ರೈಟ್ ರೈಟ್’ ಅಂದ್ರೆ ಮತ್ತೆ ಹೋಗುತ್ತೆ

ಬಸ್ಸು ಕೂಡ ನಮ್ಮೂರಿಗೆ ಬರುತ್ತೆ
ಜಾಸ್ತಿ ತಿಂದ ಹಾಗೆ ‘ಡರ್ಡರ್ರ್’ ಬಿಡುತ್ತೆ.
*


ಕಾಜೂರು ಸತೀಶ್ 

Saturday, February 10, 2018

ಮದುವೆ

ಕಾಗೆ ಮತ್ತು ಬೆಳ್ಳಕ್ಕಿಯ
ಮದುವೆಯು ನಡೆಯಿತು
ಊರ ಮಂದಿಯೆಲ್ಲ ಬಂದು
ಉಂಡು ಹರಸಿ ಹೋದರು.

ಕಾಗೆಗೆ ಬಿಳಿಯಂಗಿ
ಬೆಳ್ಳಕ್ಕಿಗೆ ಕಪ್ಪು ಸೀರೆ
ಏನು ಅಂದ ಏನು ಚಂದ ಅಬ್ಬಬ್ಬಬ್ಬಬ್ಬಾ
ಥೇಟ್ ರಾಜ ರಾಣಿಯರಂತೆ ಹಹ್ಹಹ್ಹಹ್ಹಹ್ಹಾ.

ಕುಡಿಯಲು ಅತ್ತಿ ಬೇರಿನ ನೀರು
ತಿನ್ನಲು ಕಾಡಿನ ಹಣ್ಣುಗಳು
ಜೊತೆಗೆ ಹುರಿದ ಏಡಿ ಮೀನು
ಗಮ್ಮತ್ತೋ ಗಮ್ಮತ್ತು.

ಮರಕುಟಿಗ ಡೋಲು ಬಾರಿಸಿ
ಕೋಗಿಲೆ ಪೀಪಿ ಊದಿ
ಕಪ್ಪೆಗಳೆಲ್ಲ ಹಾಡು ಹಾಡಿ
ಸಂಭ್ರಮವೋ ಸಂಭ್ರಮ.

ಉದ್ದ ಉಗುರಿನ ಪಾರು ಜೊತೆ
ಹುಲಿಯಣ್ಣನ ತಕತಕ ಕುಣ ತ
ಡೊಳ್ಳು ಹೊಟ್ಟೆ ಮಾರನ್ಜೊತೆ
ಆನೆಯಕ್ಕನ ತಕಥೈ ಕುಣಿತ .

ಕಾಗೆ ಮತ್ತು ಬೆಳ್ಳಕ್ಕಿಯ
ಮದುವೆಯು ಮುಗಿಯಿತು
ಊರ ಮಂದಿಯ ಬಾಯ್ತುಂಬ
ಮದುವೆಯದೇ ಮಾತು.
*

ಕಾಜೂರು ಸತೀಶ್

ನಮ್ಮ ಪಿಂಕು

ನಮ್ಮ ಪಿಂಕುವಿಗೆ ಇಂದು ಒಂದು ವರ್ಷ ತುಂಬುತ್ತೆ
‘ಹ್ಯಾಪಿ ಬರ್ತ್‍ಡೇ’ ಅಂದ್ರೆ ಬಾಲ ಅಲ್ಲಾಡ್ಸುತ್ತೆ.

ಕೇಕು ತಂದು ಕ್ಯಾಂಡಲ್ ಹಚ್ಚಿ ಚಾಕು ಕೊಟ್ಟುಬಿಟ್ಟರೆ
ಕುಂಯ್ಕುಂಯ್ಗುಟ್ಟಿ ಜೊಲ್ಲು ಸುರಿಸಿ ಬಾಲ ಅಲ್ಲಾಡ್ಸುತ್ತೆ.

‘ಹಂಚಿ ಬಾ ತಗೋ’ ಎಂದು ಕೇಕು ಕೊಟ್ಟುಬಿಟ್ಟರೆ
ಮರದ ಕೆಳಗೆ ಎಲ್ಲಾ ತಿಂದು ಮೂತಿ ಒರೆಸಿ ಬರುತ್ತೆ.

‘ಅಯ್ಯೋ ಪೆದ್ದು ಹೀಗೇಕ್ಮಾಡ್ದೆ’ ಎಂದು ಕೇಳಿಬಿಟ್ಟರೆ
ಕಿವಿ ಬಾಗ್ಸಿ ಶರಣೆಂದು ಮುದುರಿ ಮಲ್ಕೊಳ್ಳುತ್ತೆ.
*

ಕಾಜೂರು ಸತೀಶ್