ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ಕವಿತೆ. Show all posts
Showing posts with label ಕವಿತೆ. Show all posts

Tuesday, September 9, 2025

ನಿನ್ನೊಡಲಿನಲ್ಲಿ

ಪುಸ್ತಕದ ಒಳಗೆ ಭದ್ರವಾಗಿ ಬದುಕಿಕೊಂಡಿತ್ತು ನನ್ನೀ ಕವಿತೆ. ಇಪ್ಪತ್ತು ವರ್ಷಗಳ ಹಿಂದೆ, ನಾನು ವಿದ್ಯಾರ್ಥಿಯಾಗಿದ್ದಾಗ ಹುಟ್ಟಿದ್ದು . ಪತ್ರಿಕೆಗೆ ಕಳುಹಿಸಲು ಟೈಪ್ ರೈಟರಿನಲ್ಲಿ ಟೈಪು ಮಾಡಿಸಿ ಇಟ್ಟಿದ್ದೆ. ಅದರ ಛಾಯಾ ಪ್ರತಿಯನ್ನು ಸ್ಥಳೀಯ ಪತ್ರಿಕೆಯೊಂದಕ್ಕೆ ಕಳಿಸಿದ್ದೆ.ಅದು ಪ್ರಕಟವಾಗಲಿಲ್ಲ ಅನ್ನೋದು ನನಗೀಗ ಖುಷಿಯ ಸಂಗತಿ! (ಆದರೆ ಆಗ ಬೇಸರವಾಗಿತ್ತು!)

ಈ ಕವಿತೆಯಲ್ಲಿ ಮಾತು ಹೆಚ್ಚಿದೆ.  ಹೊಸ ನುಡಿಚಿತ್ರಗಳನ್ನು ಕಟ್ಟುವ ಹಂಬಲವಿದ್ದರೂ ಪೂರ್ವಸೂರಿಗಳ ನೆರಳಿದೆ. ಈಗ ನಾನು ಮೂರ್ನಾಲ್ಕು ಸಾಲುಗಳಲ್ಲಿ ಇದೇ ಅರ್ಥವನ್ನು ಹೆಣೆಯಬಹುದಾದ/ ಹೊಳೆಯಿಸಬಹುದಾದ ಈ ಕವಿತೆ ನನಗೆ ಹೊಸ ಭರವಸೆಯನ್ನೂ, ಅಧ್ಯಯನಕ್ಕೆ ಮುನ್ನುಡಿಯನ್ನೂ ಒದಗಿಸಿದ್ದಂತೂ ಸತ್ಯ.
*


 

ನಿನ್ನೊಡಲಿನಲ್ಲಿ
-----------------------

ನಿನ್ನ ಮೌನ ಸಾಮ್ರಾಜ್ಯದ ತುಂಬ ನಿತ್ಯ ಪರ್ವ
ಗರಿಬಿಚ್ಚಿ ಚಿಗಿಯುತಿದೆ ಹಸಿರು ಸೀರೆಯ ನೀರೆ
ಎದೆಯೊಳಗವಿತು ಹರಿದರೇನು ವೈತರಣಿಯ ನೆತ್ತರ ಧಾರೆ?
ಧಾರಣದ ಹಾಲುಮೊಗದಿ ನಲಿಯುತಿದೆ ಬೆರಗಿನ ಕೋಟಿ ತಾರೆ.

ಅರಿವಿನ ಝಳಪಿನಲಿ ಇರುಳು ಕ್ಷಯಿಸುವ ಹಾಗೆ
ಬೂರುಗ, ಮುತ್ತುಗದ ಸಾಲುದೀಪದ ಹೊಳಪಿಗೆ
ಸಕಲ ಕಣ್ಣ ಇರುಳ ತೆರೆಹರಿದು ಹೃದಯಸುಮ ಬಿರಿದು ದುಂಬಿಗಳ ಕರೆದು
ನೆನಪಿನಾಳದ ಬಿರುಕುಗಳೆಲ್ಲಾ ಬಿಗಿದು
ಚಿತ್ರ-ವಿಚಿತ್ರ ಸ್ವಪ್ನಗಳಾಗುತ್ತವೆ!

ನಿನ್ನುಸಿರ ಮಂದಾನಿಲದ ಸ್ಪರ್ಶಕೆ
ಈ ಲೇಖನಿ, ಕೋಟಿ ಉದರವಿರದ ಹಸುಳೆಗಳು ನಿದ್ರಿಸುತ್ತವೆ
ಒಮ್ಮೊಮ್ಮೆ ಉಸಿರು ಮಂದ್ರವಾಗಿ ಮೈಕೊಡವಿದಾಗ
ಜೀವಜಾಲ ನಿರ್ಲಿಪ್ತಗೊಳ್ಳುತ್ತದೆ
ಎದೆಯ ಮಬ್ಬು ಕರಗಿ ವಿಮಲ ದೀಪಗಳುರಿಯುತ್ತವೆ.

ಬೇಡ ತಾಯೇ, ಬೇಡ ಗುರುವೇ
ನಿನ್ನೊಡಲಿನಲ್ಲಿ ಬೋಧಿವೃಕ್ಷವಾಗುವುದು ಬೇಡ
ಒಂದು ಕಿರು ಮಿಂಚುಹುಳುವಾದರೂ ಸರಿಯೆ
ಹೆಸರಿರದ ಬಾಂದಳದ ಚುಕ್ಕಿಯಂತೆ
ನನ್ನದೇ ಬೆಳಕಿನಲಿ ಬದುಕಲವಕಾಶ ನೀಡು.
*

✍️ಕಾಜೂರು ಸತೀಶ್

Thursday, October 17, 2024

ಕಂತ್ರಿನಾಯಿ



ಕುಂಯ್ಕುಂಯ್ಗುಟ್ಟಿ ಮೈನುಲಿದು
ನಿಯತ್ತು ನಡೆದುಬರುತ್ತದೆ ಹಿಡಿತುತ್ತಿನ ನೆಪಕ್ಕಾಗಿ

ಅಲ್ಲೆಲ್ಲೋ 'ಕಂತ್ರಿನಾಯಿ' ಎಂಬೋ ಶಬುದ ಬೈಗುಳದ ಜೋಗುಳವಾಗಿ
ಹಾಡಿ ಹಾಡಿ ಮಲಗಿಸುತ್ತಿದೆ ಜಗವನ್ನು

ಪ್ರೀತಿಯನು ತುಂಬಿ ತೊನೆವ ಬಾಲದ ಕಟಾವಿಗಾಗಿ
ಕಠಾರಿಯ ಹರಿತಗೊಳಿಸುತ್ತಿದ್ದಾನೆ ಯಜಮಾನ

'ರಾಜ' 'ರಾಣಿ' ಎಂದು ಹೆಸರಿಡೋಣವೆಂದರೆ
'ಖಿತ್ಮೀರ್'* ಎಂದು ಹೆಸರಿಡೋಣವೆಂದರೆ
ಕವಿಯ ಮನೆಯಲ್ಲಿ ಕಂತ್ರಿನಾಯಿಗಳು ಬಲು ಅಪರೂಪ

ಕಾಯುವ ಮನೆಯೊಳಗೆ ಕೋಣೆಗಳೆಷ್ಟಿವೆಯೋ ತಿಳಿದಿಲ್ಲ
ಗೋಡೆಗಳೇ ಇಲ್ಲದ ಮೇಲೆ ಜಗತ್ತು ಎಷ್ಟು ದೊಡ್ಡ ಮನೆ

ಬೀದಿಬದಿಯ ಮಲ ತಿಂದರೂ ಗಬ್ಬೆದ್ದು ನಾರುವುದಿಲ್ಲ ಪ್ರೀತಿ
ಬೀದಿಯ ಬಲ್ಲವರು ಲೋಕ ಆಳಬಲ್ಲರು.
*

ಕಾಜೂರು ಸತೀಶ್


*ಖಿತ್ಮೀರ್ - ಖುರಾನಿನಲ್ಲಿ ಸ್ವರ್ಗ ಪ್ರವೇಶ ಪಡೆದ ನಾಯಿ

Friday, June 21, 2024

ಮದುವೆ

ಅವನ ಮದುವೆಯ ದಿನ ಇವನು ಜ್ವರದಿಂದ ಮಲಗಿದ್ದ.
ಅಂದಿನಿಂದ ಅವನು ಮಾತುಬಿಟ್ಟ
*
ಗುಂಡು, ತುಂಡು ಇಲ್ಲವೆಂಬ ಸಿಟ್ಟಿನಲ್ಲಿ ಕವರಿಗೆ ಹಾಕಿದ್ದ ಒಂದು ನೋಟನ್ನು ಕಿಸೆಗೆ ಇಳಿಸಿದ
ಅದು ಬಾರಿನ ಡ್ರಾಯರ್ ಸೇರಿತು
*
ಕಾರಿನಲ್ಲಿ ಬಂದು ಹೋದರು
ಸಾವಿರ ಸಾವಿರ ಮೌಲ್ಯದ ಬಟ್ಟೆ
ಕೆಜಿಗಟ್ಟಲೆ ಬಣ್ಣ - ಆಭರಣ
ಸ್ವಲ್ಪ ಉಂಡರು ಬಿಟ್ಟುಹೋದರು

ಇದೇನು ಇಷ್ಟೊಂದು ಕಾಗೆಗಳು ಇಲ್ಲಿ
ಇಂದು ಯಾವ ಕಾಗೆಯ ಮದುವೆ?
*
ಮನೆಯನ್ನು ಮಾರಿ ಮದುವೆ ಮಾಡಿದ್ದರು
ಈ ಕುಣಿಕೆ ಕೂಡ ಬಾಡಿಗೆಯದ್ದೇ!
*
ಸೂರ್ಯ ಹೇಳುತ್ತಿತ್ತು
ಇವತ್ತು ಮುಖಗಳೇ ಕಾಣಿಸುತ್ತಿಲ್ಲ
ಯಾರ ಗುರುತೇ ಸಿಗುತ್ತಿಲ್ಲ!
*
ಇರುವ ಒಂದು ಚೈನನ್ನೂ ಅಡವಿಟ್ಟಾಗ
ನೆರೆಮನೆಯವರ ಚೈನು ರಿಂಗುಗಳಿಗ ಸರಳ ವಿವಾಹದ ಕನಸು ಕಮರಿತು
*
ಅವನು ಐನೂರು ಹಾಕಿದ್ದ
ಇವನು ಐನೂರಾ ಒಂದು

ಕೊಳೆ ತೊಳೆಯಲೂ ಅದು ಒಳ್ಳೆಯದಂತೆ!
*
ಅವರಿಬ್ಬರದು ರಿಜಿಸ್ಟರ್ ಮದುವೆ
ಅವರೂರ ಮನದಲ್ಲಿ ಅಮರ ಕೈದಿಗಳು
*


- ಕಾಜೂರು ಸತೀಶ್ 

Friday, October 13, 2023

ನನ್ನ ಕವಿತೆ



ಖಿನ್ನನಾದ ಮೇಲೆ ಬೆಟ್ಟಗುಡ್ಡಕ್ಕೆ ನನ್ನ ಮಾತ ಕೊಟ್ಟೆ
ಸುರಿವ ಮಳೆಗೆ ಹರಿವ ಹೊಳೆಗೆ ನನ್ನ ದನಿಯ ಕೊಟ್ಟೆ

ಅವೆಲ್ಲಾ ಮಾತನಾಡುವುದ ಕೇಳಿಸಿಕೊಂಡ ನಾನು
ಅಳಿದುಳಿದ ಮಾತುಗಳ ಮೊಗೆಮೊಗೆದು ಲೇಖನಿಗುಣಿಸಿದೆ

ಹಾಗೆ ಕೊರೆದ ಗೆರೆಗೆರೆಗಳ ಮೈಯ ಬಳುಕು
ಅನ್ನವಿಲ್ಲದೇ ಆದದ್ದು ಪ್ರಿಯರೇ ಅನ್ನವಿಲ್ಲದೆ ಆದದ್ದು.
*
ಕಾಜೂರು ಸತೀಶ್

Saturday, November 13, 2021

ಕನಸು

ಅಪ್ಪ ತೀರಿಕೊಂಡ ಕನಸು ಕಂಡೆ
ಕನಸ ತುಂಬ ಅತ್ತುಬಿಟ್ಟೆ
ಎಚ್ಚರಗೊಂಡಾಗ
ಅಪ್ಪ ತೀರಿ ವರ್ಷವಾಗಿತ್ತು
*
ಕಾಜೂರು ಸತೀಶ್ 

Wednesday, October 6, 2021

ಸಂಗಮ

ನಿನ್ನ ಕೂಡಿದ ದಿನ
ಇರಲಿಲ್ಲ ಈ ನಾನು ಆ ನೀನು

ನನ್ನ ಆತ್ಮದ ಕಾಯ
ನಿನ್ನಾತ್ಮದ ಕಾಯದ ಕೂಡ
ಕೂಡಿತು ನೀರೊಳಗಣ ಆಗಸವಾಗಿ

ತಲೆಗೂದಲು ತುದಿಯೇ?
ಕಾಲ್ಬೆರಳು ಕೊನೆಯೇ?
ಎಡಬಲಗಳ ಕೈಯ ನಡುಬೆರಳ ತುದಿಯೇ ಮಿತಿಯೇ?

ನೀನು ಭೂಮಿ
ನಾನು ಆಕಾಶ
ಕೂಡಿದ ಸಾಕ್ಷಿಗೆ
ವೀರ್ಯದ ಕಡಲು

ನೋಡಿಲ್ಲಿ
ನೀನು ಪ್ರಸವಿಸಿದ
ಜೀವಜಾಲ
ಅಪಾರ ಹಸಿರು
*


ಕಾಜೂರು ಸತೀಶ್ 

Sunday, October 3, 2021

ಒಂದು ಬಹುಪರಾಕ್ ಕವಿತೆ



ನನ್ನ ರಕ್ತ ಹೀರಲು ಬರುವ ಸೊಳ್ಳೆಗಳೇ
ನಿಮ್ಮ ಕುರಿತು ಕವಿತೆ ಬರೆದು ಮಾನ ಕಳೆವೆನು

ಕವಿಗಳೆಲ್ಲರೂ ಓದುವ ಪತ್ರಿಕೆಗೆ ಕಳಿಸಿ
ದುಂಬಾಲುಬಿದ್ದು ಪ್ರಕಟಿಸುವವರೆಗೂ ಬಿಡೆನು

ಸಿಗುವ ಸಂಭಾವನೆಯಲ್ಲಿ ಕವಿಗೋಷ್ಠಿ ನಡೆಸುವೆನು
ಹಿರಿಯ ಕವಿಗಳಿಗೆ ಹಾರಗಳನ್ನರ್ಪಿಸುವೆನು

ಹೋಗಿರಿ ಬಸ್ ನಿಲ್ದಾಣಗಳಿಗೆ ಹೋಗಿರಿ ರೈಲು ನಿಲ್ದಾಣಗಳಿಗೆ
ಹೋಗಿರಿ  ಸ್ಲಮ್ಮುಗಳಿಗೆ ಹೋಗಿರಿ ಗುಡಿಸಲುಗಳಿಗೆ

ನನಗಿಲ್ಲಿ ಕೆಲಸವಿದೆ ಕವಿತೆ ಬರೆವ ಕೆಲಸ
ನೋಡಿ ಇಲ್ಲಿ ನಿದ್ದೆಗೆಟ್ಟು ಬರೆಯುತ್ತಿದ್ದೇನೆ
 ನನ್ನ ಕಣ್ಣುಗಳ ಮೇಲಾದರೂ ಕರುಣೆಯಿರಲಿ
*



ಕಾಜೂರು ಸತೀಶ್ 

Thursday, July 29, 2021

ಎಷ್ಟು ಸುಖಿ ನೀನು ಕವಿತೆಯೇ

ಎಷ್ಟು ಸುಖಿ ನೀನು ಕವಿತೆಯೇ

ನೋಡಲ್ಲಿ ಮರ 
ನೋಡಲ್ಲಿ ಹಕ್ಕಿ
ನೋಡಲ್ಲಿ ನೆಲ
ನೋಡಲ್ಲಿ ಬಾನು
ನೋಡಿಲ್ಲಿ ನಾನು
ಎಷ್ಟು ಸುಖಿ ನೀನು ಕವಿತೆಯೇ

ನೋಡೀ ಮನೆ
ನೋಡೀ ಬಿಸಿಲು
ನೋಡೀ ಮಳೆ
ನೋಡೀ ಮಾಳಿಗೆ
ನೋಡೀ ಗಾಳಿ
ಎಷ್ಟು ಸುಖಿ ನೀನು ಕವಿತೆಯೇ

ನೋಡೀ ಹೃದಯ
ನೋಡೀ  ಮೆದುಳು 
ನೋಡೀ ರಕುತ
ನೋಡೀ ಬೆವರು
ನೋಡೀ ಕಣ್ಣು
ಎಷ್ಟು ಸುಖಿ ನೀನು ಕವಿತೆಯೇ

ನೋಡು ಈ ಜನನ
ನೋಡು ಈ ಮರಣ
ಹುಟ್ಟದ ಸಾಯದ
ಕಾಣದ ಕೇಳದ
ಇರುವ ಬರೀ ಇರುವ 
ಎಷ್ಟು ಸುಖಿ ನೀನು ಕವಿತೆಯೇ
*


ಕಾಜೂರು ಸತೀಶ್ 

Sunday, July 11, 2021

ಎಲೆ, ಹಕ್ಕಿ ಮತ್ತು ನಾನು


ನಾನು ಎಲೆಯ ಮಗು

ಅದು ನನ್ನ ಮಗು

ಪರಸ್ಪರ ಉಸಿರು ಉಸಿರು ಬೆರೆತು ಹುಟ್ಟಿದ್ದು


ಹಕ್ಕಿಯೊಂದು ದಿನ ಹಾರಿಬಂದು

ಎಲೆಯ ಮೈಗೆ ಮೈತಾಕಿಸಿತು

ಪುಳಕಗೊಂಡ ಎಲೆಗೆ ಸತ್ತು ಹಾರುವ ತವಕ


ಸಾವು ಹುಟ್ಟಿದ ದಿನ

ಎಂದೋ ಹಕ್ಕಿ ಹಾರಿದ ದಾರಿಯಲ್ಲಿ

ಹಾರಿತು ಎಲೆ ಸಂಭ್ರಮದಿಂದ

ತನ್ನುಸಿರು ನನ್ನುಸಿರು ಹಕ್ಕಿಯುಸಿರು ಬೆರೆತ

ಗೆರೆಯಿರದ ದಾರಿಯಲ್ಲಿ.
*



ಕಾಜೂರು ಸತೀಶ್ 

Wednesday, June 30, 2021

ಎಲೆ



ಪುಟ್ಟ ಮಗು ಬಲೂನು ಊದುವುದ ನೋಡಿರಬೇಕು
ಅಂತೆ ಗಾಳಿಯನ್ನೂದುತ್ತಿತ್ತು ಎಲೆ
ಈ ಶೂನ್ಯ ಈ ಜೀವ ತುಂತುಂಬಿಕೊಂಡು ಒಡೆಯುವ ಹಾಗೆ

ಎಲೆ ಊದಿ ತುಂಬಿಸಿದ ಗಾಳಿಯಲ್ಲಿ
ತೊಟ್ಟು ಕಳಚಿಕೊಂಡು
ತನ್ನ ಸಾವನ್ನು ಅತ್ತಿಂದಿತ್ತ ಇತ್ತಿಂದತ್ತ ಹಾರಾಡಿ ಸುಖಿಸುತ್ತಿತ್ತು.

ಎಲೆ ಹಿಡಿವ ಆಟವಾಡುವ ಮಕ್ಕಳು
ಓಡೋಡಿ ಹಿಡಿದರು

ಪುಟ್ಟ ಹಸ್ತಗಳಲ್ಲಿ ಸಾವಿಗೆ ಪುಳಕ.
*


ಕಾಜೂರು ಸತೀಶ್

Thursday, May 27, 2021

ಬರೆಯಲಾರೆ

ಈ ರಾತ್ರಿ
ಮಿಡತೆಯ ಹಾಡು
ಕಾಡಾನೆಯ ಘೀಳು
ನಾಯಿಗಳ ಬೊಗಳು
ಮೈಸೋಕುವ ಗಾಳಿ
ಮಳೆಯ ಸಪ್ಪಳ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನಿನ್ನ ಕುರಿತು


ಈ ರಾತ್ರಿ
ಗಡಿಯಾರದ ಮುಳ್ಳಿನ ನಡಿಗೆ
ಹೆಂಚಿನ ಸೆರೆಯಿಂದ ಇಳಿವ ಮಳೆಹನಿ
ಕನವರಿಸುವ ಅಮ್ಮನ ದಣಿವು
ಭದ್ರವಿರದ ಗೋಡೆ
ಕಿರುಗುಡುವ ಹಾಸಿಗೆ
ಚರವಾಣಿಯ ರಿಂಗಣ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನನ್ನ ಕುರಿತು


ಕ್ಷಮಿಸಿ
ಬರೆಯಲಾರೆ
ನಿಮ್ಮ ಕುರಿತು
ಹಗಲಿನಲ್ಲೂ


ಅಳುತ್ತೇನೆ
ಅಷ್ಟೇ.
*


ಕಾಜೂರು ಸತೀಶ್ 

Tuesday, May 25, 2021

ಭಾಗ್ಯ

ಹಿನ್ನೀರಿನ ಮೇಲಿನ ಹಕ್ಕಿ
ನೀರು ಮುಟ್ಟದೆ
ಗಾಳಿ ಮುಟ್ಟದೆ
ಗಗನ ಮುಟ್ಟದೆ
ಈಜಿ ಈಜಿ
ನೀರು ಮುಗಿದು
ನೆಲ ಬಂದರೆ
ಹಾರತೊಡಗುತ್ತದೆ
ಗಾಳಿಯಲ್ಲಿ
ಗಗನ ಆಗ ಪ್ಯಾರಾಚೂಟು
ಬಿಚ್ಚಿಕೊಳುವುದು ಮೆಲ್ಲನೆ

ನೆಲದ ಒಳಗಿನ ನೀರಿಗೆ 
ಹಾರಲು ಈಜಲು
ರೆಕ್ಕೆಯ ಭಾಗ್ಯವಿಲ್ಲ


ಎಲಾ! ಕಪ್ಪೆಯ ಭಾಗ್ಯವೇ!
*



ಕಾಜೂರು ಸತೀಶ್ 

ಬೇಸಿಗೆಯಲಿ ಗಾಯಗೊಳ್ಳಬಾರದು

ಬೇಸಿಗೆಯಲಿ ಗಾಯಗೊಳ್ಳಬಾರದು

ಅಕಾಸ್ಮಾತ್ ಪಾದದಲ್ಲಿ 
ಅಥವಾ ತುಸು ಮೇಲೆ
ಮಂಡಿಯಲ್ಲಿ ತೊಡೆಯಲ್ಲಿ
...................................
ಗಾಯಗೊಂಡರೆ...


ಹೊಟ್ಟೆಪಾಡು ಬಿಸಿಲಿಗೆ ಬೆಂದು
ಕಡಲು ಅಪ್ಪಳಿಸಿ
ಹನಿಹನಿ
ಕೆಳಜಾರಿ
ತಾಗಿದರೆ
'ಚುರುಕ್'


ಅದಕ್ಕೇ ಹೇಳುತ್ತಿರುವುದು
ಮಳೆಸುರಿಯುತ್ತಿರಬೇಕು
ಕಾಲ ಚಂಡಿಯಾಗಿರಬೇಕು
ತಿಳಿಯಬಾರದು ಕಣ್ಣಿಗೂ..

ನಾಲಿಗೆಯೂ ಒಣಗಬಾರದು.
*




ಕಾಜೂರು ಸತೀಶ್ 

Thursday, May 20, 2021

ಸಂತೆ

ಈ ಸಂತೆಯನ್ನು ನನ್ನ ಕಣ್ಣುಗಳು ನುಂಗಿವೆ
ಕಿವಿಗಳು ಕುಡಿದಿವೆ
ನಾನೀಗ ಒಂಟಿ
ಯೋಗಿ


ಒಳಗೆ ಸರಿಯುವ ನೂರಾರು ಚಕ್ರಗಳು 
ಸಾವಿರಾರು ಕರೆಗಳು
ದಾರಿಯಲ್ಲಿ ನಾನು
ಒಂಟಿ


ಇಲ್ಲಿ ಮೇಲೆತ್ತುವ ಕೈಗಳು ಬೆಳಗುವ ಹಲ್ಲುಗಳು
ನಕ್ಕು ಕೆನ್ನೆ ನೋವು
ಹೆಗಲ ಮೇಲಿದೆ ಕೈ
ನನ್ನದೇ



ಯಾರೋ ಕೈಮುಗಿದು ಕೈಚಾಚುತ್ತಾರೆ
ಕೊಟ್ಟು ಆಚೆ ತಿರುವಿಗೆ ಬಂದರೆ
ಮತ್ತೆ ಅವೇ ಕೈಗಳು
ಸಂತೆಯದು

*


ಕಾಜೂರು ಸತೀಶ್



ಹುಟ್ಟು

ಪ್ರೀತಿ ಬಂದು ಹಾಸಿಗೆಯಲಿ ಕುಳಿತಿತು
ಮುತ್ತು ಮತ್ತು ಅಪ್ಪುಗೆ ಹುಟ್ಟಿದವು

ಪ್ರೀತಿ ಮತ್ತು ಕಾಮ ಹಾಸಿಗೆಯಲಿ ಕುಳಿತವು
ಅಳುಅಳುತಾ ಮಕ್ಕಳು ಹುಟ್ಟಿದವು.
*


ಕಾಜೂರು ಸತೀಶ್ 

Monday, May 10, 2021

ಸಾವು



ಬೀದಿ ದೀಪ ಕೆಟ್ಟುಹೋದ ಹಾಗೆ ಸೂರ್ಯ ಕಂತಿದ ಮೇಲೆ
ಕತ್ತಲಿಗೆ ಕಂಬಗಾಲುಗಳು ಹುಟ್ಟಿ ಅಗಲ ಕಿವಿಗಳು ಮೊಳೆತು
ಉದ್ದ ಮೂಗಲ್ಲಿ ಮೂಸುತ್ತಾ ನಡೆವಾಗ
ಎದುರಿಗೆ ಬತ್ತಿದ ಕೆರೆ - ಬತ್ತಿ ಇಟ್ಟು ಬೆಳಗಿಸಲೂ ಆಗದಂತೆ
ತೇಗದ ಒಳಗೆ ಅವಿತ ಚಿಲ್ಲರೆ ಹಣ
ಜಣ ಝಣ ಝ್ಜಣ ಪೊಟರೆ ತುಂಬ ಹಣ


ಕಡೆಗೆ ರಸ್ತೆಗಿಳಿದು- ಆ ಕಪ್ಪು ಈ ಕಪ್ಪು  ಒಂದಾದ ಹಾಗೆ
ಹಾಲು ಜೇನು ಬೆರೆತ ಹಾಗೆ ಜೀವ ಗಟಗಟಗಟ
ನೆಟ್ಟ ಬೆವರು ಬುಡಸಮೇತ ಕಿತ್ತು
ಅರ್ಜಿ ಹಾಕಿದರೆ ಕಾಲಾತೀತ ಉತ್ತರ


ಸಂಜೆ ನಂದಿಹೋಗುವ ಬೀದಿ ದೀಪದ ಸೂರ್ಯ
ಮರುದಿನ ಕಣ್ಣು ತೆರೆದವರ ಬೆಳಕಲ್ಲಿ ಉರಿದು
ಅಳಿದುಳಿದ ಕತ್ತಲು ಮರಳಿ  ಕಾಡಿಗೆ 
ನೋಡಬೇಕು ನೀವದರ ನಡಿಗೆ
*


- ಕಾಜೂರು ಸತೀಶ್ 

ಸೇತುವೆ ಮತ್ತು ಬಸ್ಸು



ಬಸ್ಸು ಸೇತುವೆಯ ಮೇಲಿದ್ದಾಗ
ನದಿಯ ಮೈಗೆ ಮೈತಾಕಿಸಿ ಹರಿವ ಬಸ್ಸು

ಬಸ್ಸು ಸೇತುವೆಯಲ್ಲಿ ಚಲಿಸುವಾಗ
ನೆರಳ ಮೈತಾಕಿಸಿ ಪುಳಕಗೊಳ್ಳುವ ನದಿ

ಬಸ್ಸಿಗೂ ನದಿಯ ತಣ್ಣನೆಯ ಮೈಯ್ಯೆಂದರೆ ಪ್ರೀತಿ
ಅಲೆಯ ಉಬ್ಬುತಗ್ಗುಗಳಲ್ಲಿ ಈಜು ಕಲಿಯುವುದು ಕನಸ್ಸಲ್ಲಿ

ಬಸ್ಸಿಗೆ ಹರಿಯುವ
ನದಿಗೆ ಚಲಿಸುವ
ಬಸ್ಸಿಗೆ ತಣ್ಣಗಾಗುವ
ನದಿಗೆ ಬೆಚ್ಚಗಾಗುವ
ಕನಸು
ವಿರಹ

ಒಂದು ದಿನ
ಮನೆಬಿಟ್ಟು ಓಡಿಹೋದ ಪ್ರೇಮಿಯ ಹಾಗೆ
ದಾರಿತಪ್ಪಿದ ಬಸ್ಸು
ರಸ್ತೆಯಿಂದ ಹಾರಿ
ನದಿಯ ತೋಳಲ್ಲಿ ಬಂಧಿ

ನದಿಗೂ ಬಸ್ಸಿಗೂ
ತುಂಬುಪ್ರೀತಿ
ಸಾವಿನಂಥ ಪ್ರೀತಿ

ಸಾವಿನ ಜನನ.
*


ಕಾಜೂರು ಸತೀಶ್

Sunday, April 18, 2021

ದೇಹ ಮೀಮಾಂಸೆ


ಚರುಮದ ಒಳಗೆ ಕೊಬ್ಬು ತುಂಬಿ
ಮೈಯ್ಯು ತುಸು ಹೆಚ್ಚೇ ಗಾಳಿಯ ಜಾಗವನು ಅತಿಕ್ರಮಿಸಿಕೊಂಡಾಗ
ಪಟ ನೋಡಿದ ಹುಡುಗಿ ತಿರಸ್ಕರಿಸಿದ ಹಾಗೆ ಬದುಕು

ಚೆಲುವು ತುಂಬಿದ ಹುಡುಗಿ ಕಣ್ಣಿಗೆ ಬಿದ್ದಾಗ
ಹಾದಿಯಲಿದ್ದ ಗಂಡಸರು 'ಬೇಕು' ಎಂದರು, 'ಸುಂದರಿ' ಎಂದರು.
ಅವಳಿಗೆ ಸಂಧಿವಾತವಿತ್ತು, ನೋಯುತ್ತಿದ್ದಳು ನಡೆಯುವಾಗ.

ಮುಖದ ಕಲೆಗಳಲಿ ಬಣ್ಣಗಳು ತುಂಬಿ
ತುಟಿಯ ಕಪ್ಪು ಕೆಂಪಾಗಿ ಹರಡಿ
ಕ್ಯೂ ನಿಂತ ಸುಕ್ಕುಗಳ ಸಾಲು ಯಾರಿಗೂ ಕಾಣದು


ಸರದಿ ಬರುವ ಹೊತ್ತಿಗೆ ಬೆನ್ನುಹುರಿಗೆ ಉರಿ

ಉಬ್ಬುಗಳು ಬಂದಾಗ ನಿಧಾನ ಸಾಗಬೇಕು

ಬೇಡ ಸಪಾಟು ಬಣ್ಣಗಳು ಕಣ್ಣಿಗೆ 


ಕಣ್ಣು ಮಾಂಸದ ಮಾರುಕಟ್ಟೆ



ಕಾಜೂರು ಸತೀಶ್ 

Wednesday, April 7, 2021

ಅರ್ಜಿ



ಅರ್ಜಿ ಕೊಟ್ಟು ಸ್ವೀಕೃತಿ ಪಡೆದು..

ಒಂದು ಮಳೆಗಾಲ ಆಕಾಶದಿಂದ ಬಿದ್ದು ತಲೆಯೊಡೆದುಕೊಂಡು ಆಸ್ಪತ್ರೆ ಸೇರಿತ್ತು
ಬೇಸಿಗೆಯು ಬೆವರಿ ಬೆವರಿ ಮೈಸುಟ್ಟು ಕಪ್ಪಾಗಿ ಮೂರ್ಛೆ ಹೋಗಿತ್ತು
ಚಳಿಗಾಲಕ್ಕೆ ಮದುವೆಯಾಗಿ ಮೂರ್ನಾಲ್ಕು ಮಕ್ಕಳು - 'ಕಂಯ್ಯೋ..'

ಒಂದು ತಡರಾತ್ರಿ ನಿದ್ದೆ ಹತ್ತಿತ್ತು

ಭಯಾನಕ ಕನಸು!
ನಾನವರ ರಕ್ತ ಹೀರುತ್ತಿದ್ದೆ!
ರಕ್ತಕ್ಕೆ ಬೆವರ ನಾತ
ನೂರು ಸಾವಿರ ಮಂದಿ ಒಂದಾದ ರಕುತ
ಅಲ್ಲಲ್ಲಿ ಸೂರ್ಯಗುಳ್ಳೆ ಥಳಥಳ ತಳತಳ
ಸಾಸಿವೆಯಿದ್ದಿದ್ದರೆ ಚಿಟಿಚಿಟಿಚಿಟಿ
ಆಹಾ.. ಕರಿಬೇವು ಇದ್ದಿದ್ದರೆ..

ಅದರಲ್ಲಿದ್ದ ನನ್ನ ರಕುತವೂ ನಾಲಗೆಗೆ ತಾಗಲು..
ಎಚ್ಚರಗೊಂಡೆ

ಕತ್ತಲು ಕೆಂಪಾಗಿತ್ತು
ಮೂಡಣ ಸೂರ್ಯ!
*



ಕಾಜೂರು ಸತೀಶ್

Wednesday, March 31, 2021

ಖಡ್ಗದ ಹೂವು



ಯಾರೋ ಅಡಗಿಸಿಟ್ಟ
ಈ ಖಡ್ಗವ ಹಾಗೇ ಹಿಡಿದು ನಿಲ್ಲು
ಅದರ ಹೊಕ್ಕುಳ ಹೊಳಪಲ್ಲಿ
ಮುಖ ನೋಡಿಕೊಳ್ಳಬೇಕಿದೆ

ಸ್ವಲ್ಪ ಓರೆ
ಅದರ ಚೂಪು ತುದಿಯನ್ನಿತ್ತ ತಾ
ಹುಬ್ಬು ಕಣ್ರೆಪ್ಪೆಗಳ ತೀಡಿ
ಬಿಲ್ಲೊಂದ ಕಟ್ಟಬೇಕು ಸ್ವಯಂವರಕ್ಕೆ

ನೋಡು
ಕೋಗಿಲೆಯ ಹಾಡು
ದಾಟುತಿದೆ ಅದರ ಮೈಮುಟ್ಟಿಕೊಂಡೇ
ಹರಿತದಂಚಿನ ತುಟಿಯಲ್ಲಿ
ಗಾಯಗೊಳ್ಳದ ಇರುವೆಯ ನಡಿಗೆ

ಮುಖಕ್ಕೆ ಸವರು
ಯೌವ್ವನದ ಮೊಡವೆಯ ಮೋಡ ತಾಗಲು
ಕರಗಿ ನಿನ್ನ ಖಡ್ಗವ ಮೀಯಿಸಿ
ಕೆಂಪು ಹೂವಾಗಿಸುವುದು

ಕೊಡು ಈಗ
ಖಡ್ಗದ ಹೂವ
ನಿನಗೆ
ಮು
ಡಿ
ಸಿ
ಬಿ
ಡು
ವೆ.
*




ಕಾಜೂರು ಸತೀಶ್