ಬೀದಿ ದೀಪ ಕೆಟ್ಟುಹೋದ ಹಾಗೆ ಸೂರ್ಯ ಕಂತಿದ ಮೇಲೆ
ಕತ್ತಲಿಗೆ ಕಂಬಗಾಲುಗಳು ಹುಟ್ಟಿ ಅಗಲ ಕಿವಿಗಳು ಮೊಳೆತು
ಉದ್ದ ಮೂಗಲ್ಲಿ ಮೂಸುತ್ತಾ ನಡೆವಾಗ
ಎದುರಿಗೆ ಬತ್ತಿದ ಕೆರೆ - ಬತ್ತಿ ಇಟ್ಟು ಬೆಳಗಿಸಲೂ ಆಗದಂತೆ
ತೇಗದ ಒಳಗೆ ಅವಿತ ಚಿಲ್ಲರೆ ಹಣ
ಜಣ ಝಣ ಝ್ಜಣ ಪೊಟರೆ ತುಂಬ ಹಣ
ಕಡೆಗೆ ರಸ್ತೆಗಿಳಿದು- ಆ ಕಪ್ಪು ಈ ಕಪ್ಪು ಒಂದಾದ ಹಾಗೆ
ಹಾಲು ಜೇನು ಬೆರೆತ ಹಾಗೆ ಜೀವ ಗಟಗಟಗಟ
ನೆಟ್ಟ ಬೆವರು ಬುಡಸಮೇತ ಕಿತ್ತು
ಅರ್ಜಿ ಹಾಕಿದರೆ ಕಾಲಾತೀತ ಉತ್ತರ
ಸಂಜೆ ನಂದಿಹೋಗುವ ಬೀದಿ ದೀಪದ ಸೂರ್ಯ
ಮರುದಿನ ಕಣ್ಣು ತೆರೆದವರ ಬೆಳಕಲ್ಲಿ ಉರಿದು
ಅಳಿದುಳಿದ ಕತ್ತಲು ಮರಳಿ ಕಾಡಿಗೆ
ನೋಡಬೇಕು ನೀವದರ ನಡಿಗೆ
*
- ಕಾಜೂರು ಸತೀಶ್
No comments:
Post a Comment