ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, July 31, 2023

ನನ್ನ ಮಾತು



ನನ್ನ ಮಾತು
ಬಸ್ಸಿನ ಕಿಟಕಿಯ ಸೀಟು ಬಿಟ್ಟು
ಈಚೆಗೆ ಬಂದು ಕೂರುತ್ತದೆ
ಗಾಳಿಮಳೆಯಲ್ಲಿ ನೆನೆದ
ಹಾಡುಗಳನ್ನು ಆಸ್ವಾದಿಸದೆ
ಮರುದಿನದ ಮಧ್ಯಾಹ್ನದ ಊಟಕ್ಕೆ
ಮಕ್ಕಳಿಗೇನು ಸಾರು ಮಾಡಲೆಂದು
ಲೆಕ್ಕ ಹಾಕುತ್ತದೆ

ಬಸ್ಸಿಂದಿಳಿದು
ಹಾದಿಬದಿಯ ಚೆಲುವನ್ನು ಆಸ್ವಾದಿಸದೆ
ಬಹುಬೇಗ ಹಾದಿ ಸಾಗಲೆಂದು
ಬಿರಬಿರನೆ ಹೆಜ್ಜೆಯಿಟ್ಟು
ಬೆವರಲ್ಲಿ ಸ್ನಾನಮಾಡಿ ಮನೆಸೇರುತ್ತದೆ

ಕತ್ತಲಾಗುವ ಕುರುಹುಗಳನ್ನು
ಒಲೆಯಲ್ಲಿಟ್ಟು ಕುದಿಸುತ್ತದೆ

ಬೆಳುಬೆಳದಿಂಗಳು ಮನೆಯನ್ನಾವರಿಸುವ
ಬೆರಗನ್ನು ಅರಿತೂ ಅರಿಯದಂತೆ
ಬಟ್ಟೆಗಳ ಮಡಚಿಟ್ಟು
ಪಾತ್ರೆಗಳ ತೊಳೆದಿಟ್ಟು
ತಡವಾಗಿ ಮಲಗುತ್ತದೆ
ನುಸುಳುವ ಕನಸುಗಳನ್ನು
ಮುಲಾಜಿಲ್ಲದೆ ಹೊರಗೇ ನಿಲ್ಲಿಸುತ್ತದೆ

ನನ್ನ ಮಾತು
ಬೆಳಿಗ್ಗೆ ಬೇಗ ಎದ್ದು
ಕಲ್ಪನೆಗಳಲಿ ಮುಳುಗೇಳದೆ
ಕಾಫಿ ಕುಡಿದು
ಯಾರ ಗಮನಕ್ಕೂ ಬರದಂತೆ
ಮನೆಯ ಒಳಗೆ, ಹಿತ್ತಿಲಿನಲ್ಲಿ
ಬಾವಿಯಲ್ಲಿ ಅಲೆದು 'ತೀರು'ತ್ತದೆ.
*
ಮಲಯಾಳಂ ಮೂಲ- ರಗಿಲ ಸಜಿ


ಕನ್ನಡಕ್ಕೆ- ಕಾಜೂರು ಸತೀಶ್

Sunday, July 30, 2023

ಎಲ್ಲವೂ ರಹಸ್ಯವಾಗಿಯೇ ಉಳಿದಿತ್ತು


ಅಪಾರ ಜನಸಂದಣಿಯಲ್ಲಿ
ಬೆರಳಿಗೆ ಬೆರಳು ಸೇರಿಸಿ ನಡೆದದ್ದು

ಡೈನಿಂಗ್ ಟೇಬಲಿನಲ್ಲಿ ಎದುರುಬದುರಾಗಿ ಕುಳಿತು
ಕಾಲಿಗೆ ಕಾಲು ತಾಗಿಸಿದ್ದು

ಸ್ಕೂಟರಿನ ಕನ್ನಡಿಯನ್ನು 
ನಿನಗೆ ನಾನು ನನಗೆ ನೀನು ಕಾಣುವ ಹಾಗೆ
ಜಾಣ್ಮೆಯಿಂದ ಹೊಂದಿಸಿ
ಹಿಂದೆ ಮುಂದೆ ರಸ್ತೆಯ ತುಂಬಾ ಸಾಗಿ
ಪರಸ್ಪರ ಮುಖನೋಡಿಕೊಂಡಿದ್ದು

ಹೆಸರನ್ನೇ ಬರೆಯದ ಉಡುಗೊರೆಗಳಿಗೆ
ಪ್ರೀತಿಯ ಹೊದಿಕೆ ಹಾಕಿ ರವಾನಿಸಿದ್ದು

ಯಾರನ್ನೋ ನೋಡುತ್ತಿರುವ ಹಾಗೆ
ರೆಪ್ಪೆಗಳ ಮಿಟುಕಿಸದೆ
ಸನಿಹಕೆ ಬಂದು ಕಡಲ ತಡಿಯಲ್ಲಿ ನಿಂತದ್ದು

ಒಂದೇ ಅಲೆಯಲ್ಲಿ ಮಿಂದ
ನಮ್ಮಿಬ್ಬರ ನಿಶ್ವಾಸವನ್ನು ಪರಸ್ಪರ ಉಸಿರಾಡಿದ್ದು

ಎಲ್ಲವೂ ರಹಸ್ಯವಾಗಿಯೇ ಉಳಿದಿತ್ತು.

ನಮ್ಮಿಬ್ಬರ ಸ್ಕೂಟರುಗಳು
ಒಂದೇ ಲಾರಿಯ ಚಕ್ರಕ್ಕೆ ಸಿಲುಕಿ
ನರಳಾಡಿ ಸಾಯುವವರೆಗೆ
ಎಲ್ಲವೂ ರಹಸ್ಯವಾಗಿಯೇ ಉಳಿದಿತ್ತು.
*
ಮಲಯಾಳಂ ಮೂಲ- ರಗಿಲ ಸಜಿ


ಕನ್ನಡಕ್ಕೆ- ಕಾಜೂರು ಸತೀಶ್ 

Saturday, July 29, 2023

ತೋಳ


-1-
ತೋಳದ ಕಣ್ಣುಗಳು ಕೆಂಪು ಕೆಂಡದಂತಿವೆ.

ದಿಟ್ಟಿಸಿ ನೋಡಿ ನೀವು ಅದನ್ನು
ಅದರ ಕಣ್ಣ ಕೆಂಪು ನಿಮ್ಮ ಕಣ್ಣಿಗೆ ಬರುವವರೆಗೆ 

ಇನ್ನೇನು ಮಾಡಲು ಸಾಧ್ಯ ನಿಮಗೆ
ಅದು ನಿಮ್ಮೆದುರಿಗೇ  ನಿಂತುಬಿಟ್ಟರೆ?

ನೀವು ಮುಖ ಮುಚ್ಚಿಕೊಳ್ಳಬಹುದು
ತಪ್ಪಿಸಿಕೊಂಡು ಓಡಬಹುದು
ಆದರೂ ನಿಮ್ಮ ಒಳಗೊಂದು ತೋಳ
ನಿಂತುಬಿಟ್ಟಿರುತ್ತದೆ ಹಾಗೇ ಒಂದಿಷ್ಟೂ ಕದಲದ ಹಾಗೆ

ತೋಳದ ಕಣ್ಣುಗಳು ಕೆಂಪು ಕೆಂಡದಂತಿವೆ
ಮತ್ತೀಗ ನಿಮ್ಮ ಕಣ್ಣುಗಳು ?

-2-
ತೋಳ ಊಳಿಡುತ್ತದೆ
ನೀವೊಂದು ದೀಪ ಬೆಳಗಿಸಿ
ಅದರ ಮೈಮೇಲೆ ಬೆಳಕ ಚೆಲ್ಲಿ
ನಿಮ್ಮ ಮೈಯ್ಯ ಮೇಲೂ

ಒಂದೇ ಒಂದು ವ್ಯತ್ಯಾಸವೆಂದರೆ
ತೋಳಕ್ಕೆ ದೀಪ ಹಚ್ಚಲು ಬರುವುದಿಲ್ಲ 

ಈಗ ಆ ದೀಪವನ್ನೆತ್ತಿಕೊಳ್ಳಿ
ತೋಳದ ಬಳಿ ಸಾಗಿರಿ
 ಓಟಕ್ಕೀಳುತ್ತವೆ ಅವೆಲ್ಲಾ 

ಸಾವಿರ ಸಾವಿರ ಕೈಗಳಲ್ಲಿ
ಕಂದೀಲು ಹಿಡಿದು
ಪೊದೆಯಿಂದ ಪೊದೆಗೆ ನುಗ್ಗಿರಿ
ದಿಕ್ಕು ತಪ್ಪಿ ಓಡುತ್ತವೆ ಅವು
ಒಂದೂ ಉಳಿಯದಂತೆ

ಆಮೇಲೆ ಕಾಡಿನಿಂದ ಹೊರಗೆಸೆಯಿರಿ 
ಎಸೆದುಬಿಡಿ ಅವನ್ನು ಹಿಮದ ಮೇಲೆ
ಹಸಿದ ಅವು ಊಳಿಡುತ್ತವೆ ತಮ್ಮತಮ್ಮಲ್ಲೇ
ಸಿಗಿದು ತಿನ್ನುತ್ತವೆ ಒಂದನ್ನೊಂದು

ತೋಳಗಳು ಸಾಯುತ್ತವೆ
ಮತ್ತೆ ನೀವು?

- 3-
ಮತ್ತೆ ಬರುತ್ತದೆ ತೋಳ

ಇದ್ದಕ್ಕಿದ್ದಂತೆ ಒಂದು ದಿನ
ನಿಮ್ಮಲ್ಲೊಬ್ಬರು ತೋಳವಾಗುತ್ತೀರಿ
ಒಂದು, ನೂರು, ಸಾವಿರವಾಗಿ
ವೃದ್ಧಿಸುತ್ತದೆ ಸಂತತಿ

ನಿಜಕ್ಕೂ ಬರಬೇಕಿದೆ ತೋಳ
ನಿಮ್ಮನ್ನು ನೀವು ನೋಡಿಕೊಳ್ಳಲು
ನಿಮ್ಮ ನೀವು ಪ್ರೀತಿಸಲು
ಭಯರಹಿತ ಸ್ಥಿತಿಯನ್ನು ಸುಖಿಸಲು
ಗೆಲುವಿನಿಂದ ದೀಪ ಹಚ್ಚಲು

ಚರಿತ್ರೆಯ ಕಾಡಿನಲ್ಲಿ 
ಗುಂಪಿನಿಂದ ಹೊರಹಾಕಲ್ಪಡುತ್ತದೆ ತೋಳ ಪ್ರತೀ ಬಾರಿಯೂ
ಆಗ ಮನುಜರೆಲ್ಲ ಒಂದಾಗಿ
ಕಂದೀಲು ಹಿಡಿದು ನಿಲ್ಲುತ್ತಾರೆ

ಚರಿತ್ರೆ ಜೀವಂತವಾಗುತ್ತದೆ
ನೀವೂ
ಮತ್ತು
ತೋಳವೂ.
*
ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ


ಕನ್ನಡಕ್ಕೆ- ಕಾಜೂರು ಸತೀಶ್

Wednesday, July 26, 2023

ಪ್ರೇಯಸಿಯೂ ಮತ್ತು ಹೆಂಡತಿಯೂ


ಹೆಂಡತಿ ತೀರಿಕೊಂಡ ದಿನ
ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು
'ಯಾವಾಗ ಬರ್ತೀಯ?'
'ಬೆಳಿಗ್ಗೆ'- ಅವನೆಂದ.

ಮುಖ ತೊಳೆದು
ಇಸ್ತ್ರಿ ಮಾಡಿದ ಬಟ್ಟೆ ಹಾಕ್ಬೇಡ
ಶೇವ್ ಮಾಡ್ಬೇಡ
ಮನೆಯ ಹಿಂದೆ ಬ್ಲ್ಯಾಕ್ ಟೀ ಮಾಡ್ತಿರ್ತಾರೆ
ಒಂದ್ಕಪ್ಪು ಕುಡಿದ್ಬಿಡು
ತೀರ್ಕೊಂಡವಳು ಬರ್ತಾಳಾ ಅಂತ
ಅಂಗಳದಲ್ಲಿ ಕಾಯ್ಕೊಂಡಿರು-
ನೆನಪಿಸಿದಳು ಅವಳು.

ನಂಗೆ ಕರಿಕಾಫಿ ಇಷ್ಟವಿಲ್ಲ
ಸಾವಿನ ಮನೆಯಲ್ಲಿ 
ಹಾಲು ಯಾಕೆ ಬಳಸ್ಬಾರ್ದು- ಕುಪಿತನಾದ
ಇವತ್ತೊಂದಿನ ತಡಿ- ಅವಳೆಂದಳು
ಸುಮ್ಮನಾದ.

ಬೇಜಾರಾ? ಕೇಳಿದಳು
ಗೊತ್ತಿಲ್ಲ ಎಂದ
ಇವತ್ತು ಅಳೋದೇ ಇರ್ಬೇಡ
ಜನ ನೋಡ್ತಿರ್ತಾರೆ- ಅವಳೆಂದಳು
ಅಳು ಬರದೆ ಹೇಗೆ ಅಳೋದು- ಅವನೆಂದ

ಹಳೆಯದೇನಾದ್ರೂ ನೆನಪಿಸ್ಕೊ
ಸುಡುಬೇಸಿಗೆಯ ಬಾವಿಯ ಹಾಗೆ
ಮಾತಲ್ಲಿ ನೋಟದಲ್ಲಿ
ಆಳದ ಪ್ರೀತಿಯನ್ನೆಲ್ಲ ಹೊರತೆಗೆದು 
ಬತ್ತುವ ಮೊದಲಿನ ಕಾಲದ ಏನನ್ನಾದರೂ ನೆನಪಿಸ್ಕೊ

ಏನೂ ನೆನಪಾಗಲಿಲ್ಲ
ನೀರಲ್ಲದ್ದಿದ ಬಣ್ಣಗಳಂತೆ
ಬೆರೆತುಹೋದವು ಒಂದರೊಳಗೊಂದು
ಏನಾದ್ರೂ ಸಿಕ್ಕೇ ಸಿಗುತ್ತೆ  ಯೋಚಿಸ್ತಿರು-
ಅವಳ ಸಲಹೆ

ಮದುವೆ ಸೀರೆ 
ಕಡುಹಸಿರು ಬಣ್ಣದ್ದೇ ಬೇಕೆಂದೂ
ಕುಪ್ಪಸದಲ್ಲಿ ನಕ್ಷತ್ರಾಕಾರದ 
ಸ್ವರ್ಣವರ್ಣದ ಚುಕ್ಕಿಗಳಿರಬೇಕೆಂದೂ
ಬರೆದ ಪತ್ರಗಳ ಭೂತಕಾಲದೊಳಗಿಣುಕಿ ನೆನೆದ
ಚಿಂತಿಸಿದ

ಕಡುಹಸಿರಿನ ಬದಲಿಗೆ
ಕಡುಗೆಂಪು ಸೀರೆಯ ಕೊಟ್ಟ
ನಕ್ಷತ್ರಗಳ ಬದಲು ಖಾಲಿ ಕುಪ್ಪಸ
ಅವಳ ನೋಯಿಸಿದೆನೆಂದು ಯೋಚಿಸಿದ
ಇನ್ನು ಅದೆಲ್ಲಾ ಅಸಾಧ್ಯವೆಂದು ನೆನೆದು
ನಿಜಕ್ಕೂ ದುಃಖಿಸಿದ.

ಯೋಚಿಸುತ್ತಲೇ ಇದ್ದ
ಅವಳಿಗೆ ನೀಡಲಾಗದ್ದು
ಅವಳಿಂದ ಪಡೆಯಲಾಗದ್ದು..
ಲೆಕ್ಕವಿಲ್ಲ.
ತಪ್ಪಿತಸ್ಥನ ಭಾವ ಮೂಡಿ
ಕಣ್ಣು ತುಂಬಿ ಕೆಂಪಗಾಗುತ್ತದೆಂದು
ನೆನಪಿಸಿದಳು ಫೋನಿನಲ್ಲಿ.

ನಾನೂ ಬರುತ್ತಿರುವೆ
ಅವಳನ್ನು ಮೊದಲು ಮತ್ತು ಕಡೆಯ ಬಾರಿ ನೋಡಲು
ನೀನು- ತೀರಿಕೊಂಡ ಅವಳ ಬಳಿ
ದುಃಖಿತನಾಗಿರುವುದ ನೋಡಿ
ನನ್ನ ಕಣ್ಣುಗಳು ತುಂಬುತ್ತವೆ
ಕಪ್ಪು ಗೆರೆಗಳುಳ್ಳ ಸೀರೆಯ ಸೆರಗ ತುದಿಯಲ್ಲಿ
ಬಾಯ್ಮುಚ್ಚಿ ಅಳು ನಿಲ್ಲಿಸುತ್ತೇನೆ
ಅವಳ ಮೇಲಿನ ಪ್ರೀತಿಯಿಂದಲ್ಲ
ಅವಳ ನೆನೆನೆನೆದು ಅಳುವ ನಿನ್ನ ಕಂಡು-
ಅವಳೆಂದಳು ಫೋನಿನಲ್ಲಿ.
*
ಮಲಯಾಳಂ ಮೂಲ- ಜಿಸಾ ಜೋಸ್


ಕನ್ನಡಕ್ಕೆ- ಕಾಜೂರು ಸತೀಶ್

Monday, July 24, 2023

ಪಾಪಪ್ರಜ್ಞೆ, ಪತನ ಮತ್ತು ವಿಮೋಚನೆ

ಪ್ರೇಮ್ ಸಾಗರ್ ಕಾರಕ್ಕಿ ಅವರು ಇಂಗ್ಲಿಷ್ ಸಾಹಿತ್ಯ ಅಧ್ಯಯನಕಾರರು. ವೃತ್ತಿಯಲ್ಲಿ ಆಂಗ್ಲ ಉಪನ್ಯಾಸಕರು. ಅವರ ಚಿಂತನಾಕ್ರಮದಲ್ಲಿ ಪೂರ್ವಗ್ರಹಗಳಿಂದ ಹೊರತಾದ ಅನನ್ಯ ನೋಟಗಳನ್ನು ಗಮನಿಸಬಹುದು. ವರ್ತಮಾನಕ್ಕೆ ಸ್ಪಂದಿಸುವಾಗ, ಅಥವಾ ಎಂತಹದ್ದೇ ಸಾಹಿತ್ಯಿಕ/ರಾಜಕೀಯ/ ಮಾನವಿಕ ವಿಷಯಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಹೆಚ್ಚು ಖಚಿತವಾದ ನಿಲುವುಗಳನ್ನು ವ್ಯಕ್ತಪಡಿಸಬಲ್ಲವರು ಪ್ರೇಮ್ ಸಾಗರ್.


ಕಮೂವನ್ನು ಅವರು ಎಷ್ಟು ಆವಾಹಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಕೃತಿ ಸಾಕ್ಷಿ. ಕಮೂ ಬಂದು ಅವರ ಒಳಗೆ ಕುಳಿತು ಕತೆ ಹೇಳುತ್ತಿರುವಾಗಿನ ಧಾಟಿ ಅದು. ಅನುವಾದ ಮುಗಿದ ಮೇಲೆ 'ನಾನೊಂದು ಕಾದಂಬರಿ ಬರೆದು ಮುಗಿಸಿದೆ' ಎಂಬ ಭಾವ ಅವರಿಗೆ ಬಂದಿರುವಷ್ಟು 'ಒಳಗಿನಿಂದ' ಈ ಕೃತಿ ರಚನೆಯಾಗಿದೆ (ಒಂದು ದಶಕದ ಧ್ಯಾನದ ಫಲ !).
*
ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಲ್ಜೀರಿಯನ್ ಮೂಲದ ಫ್ರೆಂಚ್ ಬರಹಗಾರ ಆಲ್ಬರ್ಟ್ ಕಮೂ . ದಿ ಫಾಲ್ ಅವನ ಕೊನೆಯ ಕಾದಂಬರಿ. ಅವನ ಹಿಂದಿನ ಕಾದಂಬರಿಗಳಾದ 'ದಿ ಸ್ಟ್ರೇಂಜರ್' ಮತ್ತು 'ದ ಪ್ಲೇಗ್' ನಲ್ಲಿ ಕಂಡುಬರುವ ತಂತ್ರ 'ದಿ ಫಾಲ್' ನಲ್ಲಿಲ್ಲದಿದ್ದರೂ, ಆ ಕೃತಿಗಳಲ್ಲಿ ಇರುವಂತೆ ವೈಯಕ್ತಿಕ ಸ್ವಾತಂತ್ರ್ಯ, ಮಾನವ ಸಂಬಂಧಗಳು, ಪ್ರಾಮಾಣಿಕ ಜೀವನದ ಸ್ವರೂಪ, ಸತ್ಯ, ನ್ಯಾಯ ನಿರ್ಣಯ, ಸಾವು, ಅಸ್ತಿತ್ವದ ಆಲೋಚನೆಗಳಿವೆ. ಪಾಪಪ್ರಜ್ಞೆಯ ಹಲವು ನೆಲೆಗಳನ್ನು ಶೋಧಿಸುವ ಕೃತಿ ಇದು. ಬಯೋಗ್ರಫಿಕಲ್ ಚಹರೆಗಳೂ ಹೆಚ್ಚಿವೆ ಇಲ್ಲಿ.


ಇದೊಂದು ಸ್ವಗತಗಳ ಸರಣಿ. ಕಥಾನಾಯಕ ಜ್ಯೀನ್ ಬಾಪ್ಟಿಸ್ಟ್ ಕ್ಲೆಮೆನ್ಸ್ ಸ್ವಗತದ ಮೂಲಕ ತನ್ನ ಬದುಕನ್ನೂ ಸಮಾಜವನ್ನೂ ಮುಚ್ಚುಮರೆಯಿಲ್ಲದೆ ತೆರೆದು ತೋರಿಸುತ್ತಾನೆ. ಆತ ಮಾಜಿ ನ್ಯಾಯವಾದಿ. ಕಾದಂಬರಿಯು ಆಮ್ಸ್ಟರ್ಡಾಂನ ಮೆಕ್ಸಿಕೋ ಸಿಟಿ ಎಂಬ ಬಾರಿನಲ್ಲಿ ಫ್ರೆಂಚ್ ಅಪರಿಚಿತನೊಡನೆ ಬಾರಿನ ಡಚ್ ಮಾಲೀಕನ ಕುರಿತು ಹೇಳುವಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಏಕಮಾತ್ರ ಧ್ವನಿ ಕ್ಲೆಮೆನ್ಸ್ . ಕಾದಂಬರಿಯು ತೀರಾ ಸಹಜವಾದ ಸಂಗತಿಗಳನ್ನು ಮಾತಿಗೆ ತೆಗೆದುಕೊಂಡು ಮುಂದೆ ಗಂಭೀರವಾಗಿ ಫಿಲಾಸಾಫಿಕಲ್ ನೆಲೆಗಳನ್ನು ಮುಟ್ಟುತ್ತದೆ. ಅದು ಏರ್ಪಡುವುದು ಬಾರಿನಲ್ಲಿ ಮತ್ತು ಆಮ್ಸ್ಟರ್ಡಾಂನ ರಸ್ತೆಗಳಲ್ಲಿ. ಓದುಗರನ್ನು ಹಿಡಿದಿಡಲು ತಾನೇ ಸಹವರ್ತಿಯ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಪರಿಹಾರವನ್ನು ಹುಡುಕುತ್ತಾನೆ ಕ್ಲೆಮೆನ್ಸ್.


ಮೊದಮೊದಲ ಅವನ ವೈಯಕ್ತಿಕ ಜೀವನಾನುಭವಗಳು ಗೆಲುವಿನಿಂದಲೂ ಪ್ರಾಮಾಣಿಕತೆಯಿಂದಲೂ ಕೂಡಿದ್ದವು. ಆ ಸಂಭ್ರಮ ಅವನ ಮಾತುಗಳಲ್ಲೇ ಧ್ವನಿಸುತ್ತಿತ್ತು. ಅಸಹಾಯಕರಿಗೆ ವಿಧವೆಯರಿಗೆ ಮಾತ್ರ ನ್ಯಾಯದಾನ ಮಾಡುತ್ತಿದ್ದವನು. ಎಂದೂ ಭ್ರಷ್ಟನಾಗದೆ ದುಡಿಯುತ್ತಿದ್ದವನು ಕ್ಲೆಮೆನ್ಸ್ . ಲೋಕಚಿಂತನೆಯ ಹಿನ್ನೆಲೆಯಲ್ಲಿ ನ್ಯಾಯವಾದಿ ವೃತ್ತಿಗೆ ರಾಜೀನಾಮೆ ನೀಡಿದ ಮೇಲೆ ಅವನ ಬೆನ್ನುಬೀಳುವುದು ಪಾಪಪ್ರಜ್ಞೆ ಮತ್ತು ಅವನ ಹೆಸರಿನೊಂದಿಗೇ ಇರುವ ಪಶ್ಚಾತ್ತಾಪ.

ಮನುಷ್ಯನ ನೈತಿಕ ಪತನ ಮತ್ತು ಅದರಿಂದ ಪಾರಾಗಲು ನಡೆಸುವ ಹೋರಾಟವೇ 'The Fall'. ಆತ್ಮರತಿಯಲ್ಲಿ ಮುಳುಗಿಹೋದವನಿಗೆ ಉಳಿದುದೇನೂ ನೆನಪಾಗುವುದಿಲ್ಲ. ಮಾಡಿದ ಹಲವು ಹೆಣ್ಣುಗಳ ಸಂಪರ್ಕದ ನೆನಪಿರುವುದಿಲ್ಲ, ಸೇತುವೆಯ ಬಳಿ ನಿಂತುಕೊಂಡಿದ್ದ ಹೆಂಗಸು ಇವನು ಮುಂದೆ ಸಾಗುವಷ್ಟರಲ್ಲಿ ನದಿಗೆ ಬಿದ್ದು ಆರ್ತನಾದಗೈಯ್ದರೂ ಇವನಿಗೆ ಹಿಂತಿರುಗಿ ನೋಡಬೇಕೆನಿಸುವುದಿಲ್ಲ.


ಕೊನೆಗೆ ತನ್ನ ಪತನದ ಸುಳಿವುಗಳನ್ನು ಅರಿತ ಕ್ಲೆಮೆನ್ಸ್ ಬದುಕಿನ ನಿರರ್ಥಕತೆಯನ್ನು ಪ್ರಶ್ನಿಸಿದ. ಫ್ರಾನ್ಸ್ ತೊರೆದು ಆಮ್ಸ್ಟರ್ಡಾಂಗೆ ಬಂದರೂ ತನ್ನ ಪತನದ ನೆನಪುಗಳು ಅವನ ಬೆನ್ನುಹತ್ತಿದವು.
ತನ್ನ ತಪ್ಪುಗಳನ್ನು ಕ್ರಿಸ್ತನ ತಪ್ಪುಗಳೊಂದಿಗೆ ಸಮೀಕರಿಸಿ ಹಗುರಾಗಲು ಬಯಸಿದ  . ನಾಸ್ತಿಕನಾದ ಅವನು ತನ್ನನ್ನು ದೈವವು ಶಿಕ್ಷಿಸುವುದಿಲ್ಲ. ಶಿಕ್ಷಿಸುವುದೇನಿದ್ದರೂ ಮನುಷ್ಯರು ಮಾತ್ರ  ಎಂದು ನಂಬಿದ. ಮನುಷ್ಯನು ಮಾತ್ರ ತೀರ್ಪು ನೀಡಬಹುದು. ತೀರ್ಪು ನೀಡುವ ವ್ಯಕ್ತಿಯು ತಪ್ಪಿತಸ್ಥನಾದರೆ, ಅವನು ಅಪಹಾಸ್ಯಕ್ಕೆ ಒಳಗಾಗುತ್ತಾನೆ, ಕಪಟಿ ಎಂದು ನಿರ್ಣಯಿಸಲ್ಪಡುತ್ತಾನೆ. ಈ ಸಾಕ್ಷಾತ್ಕಾರಗಳಿಂದ ಕ್ಲೆಮೆನ್ಸ್  ಪರಿಹಾರವನ್ನು ಕಂಡುಕೊಂಡ: ಅವನು ತನ್ನ ಪಾಪಗಳನ್ನು ಇತರರಲ್ಲಿ ಹೇಳಿಕೊಂಡ, ಇದರಿಂದ ಅವನು ಎಲ್ಲರ ಮೇಲೆ ತೀರ್ಪು ನೀಡಲು ಸಾಧ್ಯವಾಗುತ್ತದೆ ಎಂದುಕೊಂಡ.


ಕಮೂವಿನ ಪತ್ರಕರ್ತನ ಭಾಷೆ ಮತ್ತು ನಿರೂಪಣೆ ಈ ಕೃತಿಯಲ್ಲೂ ಕಾಣಸಿಗುತ್ತದೆ. ಓದುಗನ ಓದಿನೊಂದಿಗೆ ಓಡುವ ಭಾಷೆಯದು. ಇಡೀ ಕೃತಿಯು ಸ್ವಗತದಿಂದ ಕೂಡಿರುವಾಗ ಏಕತಾನತೆ ನುಸುಳುವುದು ಸಹಜ. ಆದರೆ ಕಮೂವಿನ ಅಸ್ತಿತ್ವವಾದದ ಪ್ರಶ್ನೆಗಳು ಓದುಗನನ್ನು ಚಿಂತನೆಗೆ ಹಚ್ಚಿ ಏಕತಾನತೆಯಿಂದ ಹೊರತರುತ್ತದೆ(ಅದಕ್ಕೆ ಕಾರಕ್ಕಿಯವರ ಸಹಜ, ಸಲೀಸು ಅನುವಾದವೂ ಬೆಂಬಲ ನೀಡುತ್ತದೆ). ಕಮೂವಿಗೆ ನೊಬೆಲ್ ಬಂದಾಗ ಮಾಡಿದ ಭಾಷಣದ ಅನುವಾದವೂ ಈ ಕೃತಿಯಲ್ಲಿದೆ.

*
ಕಾಜೂರು ಸತೀಶ್ 

Saturday, July 22, 2023

ಕಡಲಾಚೆಯ ಹುಡುಗಿಗೆ


ಪ್ರಿಯ ಹುಡುಗಿ,
ತೀರದ ನಕ್ಷತ್ರ ಮೀನುಗಳ ಕಡಲಿಗೆ ನೂಕುವಾಗ
ನಿನ್ನ ನೆನಪಾಗುತ್ತದೆ;
ಅಲ್ಲಿಗೆ ಓಡಿ ಬರಬೇಕೆನಿಸುತ್ತದೆ.
ನಿನ್ನ ಚರ್ಮಕ್ಕೆ,ರಕ್ತಕ್ಕೆ
ಎಷ್ಟು ಮಂದಿ ಕಾವಲಿರಬಹುದೆಂಬುದ ನೆನೆದಾಗ
ಭಯವಾಗುತ್ತದೆ-ಭಯವೂ ಭಯಗೊಳ್ಳುವ ಹಾಗೆ.

ಕಡಲಿನ ಆಚೆಬದಿಯಲ್ಲಿ ನಿನ್ನದೊಂದು ತೊಟ್ಟು ರಕ್ತ
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ
ಚೆಲ್ಲಿಬಿಡೋಣ
ಸುತ್ತಲಿನ ಶಾರ್ಕುಗಳು ಏನು ಮಾಡುತ್ತವೆಂದು ಕಾದು ಕೂರೋಣ.

ಅಥವಾ
ಅವೆರಡು ತೊಟ್ಟು ರಕ್ತವನ್ನು ಒಟ್ಟುಗೂಡಿಸಲು
ನಾವಿಬ್ಬರೇ ಶಾರ್ಕುಗಳಾಗೋಣ.

ಈ ಕತ್ತಲಲ್ಲಿ ನಿನ್ನ ಸಂದೇಶಗಳು
ಚಂದ್ರನಿಂದ ರವಾನೆಯಾಗುತ್ತಿವೆ.
ನೀನಲ್ಲಿ ಹಿಂಡುತ್ತಿರುವ ಕಣ್ಣ ಬೆವರ ಸದ್ದನ್ನು
ಇಬ್ಬನಿಗಳು ಅನುಕರಿಸುತ್ತಿವೆ ಇಲ್ಲಿ.
ನಿನ್ನೂರಿನ ಸಿಂಡು ಹೊತ್ತ ಹಕ್ಕಿ
ಹಿಕ್ಕೆ ಹಾಕುತಿದೆ ನನ್ನ ನೆತ್ತಿಯ ಮೇಲೆ.

ನನ್ನ ನಿನ್ನ ನೆತ್ತರ ವರ್ಣವನ್ನು ಅಂಟಿಸಿಕೊಂಡ
ಈ ಹೂವುಗಳನ್ನು ಮುಟ್ಟಲು
ಸುಟ್ಟುಹೋಗುತ್ತೇನೋ ಎಂಬ ಭಯವಿದೆ ನನಗೆ.

ಕಡಲಿಲ್ಲ ನನ್ನ-ನಿನ್ನ ನಡುವೆ
ಅಳಿಸಿದರಾಯಿತು ಗಡಿಯ ಒಂದು ಗೆರೆಯನ್ನು
ಅಥವಾ ನೆತ್ತಿಯೊಳಗಿನ ಒಂದು ಗೆರೆಯನ್ನು
ನಾವಿಬ್ಬರು ಒಂದಾಗಲಿಕ್ಕೆ,
ಕನ್ನಡಿಯಾಗಲಿಕ್ಕೆ.

ನನ್ನವ್ವನಂಥ ಹುಡುಗಿ,
ನನ್ನ ಮುಟ್ಟುವ ಸೂರ್ಯ
ಮರುದಿನ ನಿನ್ನ ಮುಟ್ಟಿ
ನಮ್ಮಿಬ್ಬರನ್ನು ಒಂದಾಗಿಸುತ್ತದೆ.
ಅಂಗ ಮೀರಿದ ನಮ್ಮ ಪ್ರೀತಿಯ ಸಂಗವನ್ನು
ಒಂದಾಗಿಸುತ್ತಲೇ ಇರುತ್ತದೆ.
*************
-ಕಾಜೂರು ಸತೀಶ್

To the Girl Overseas

------------------------

Dear girl,
while pushing the starfish
into the sea from the seashore
I remember you.
I want to come running to you.
But when I think of the number of guards
who may be guarding your skin, your blood,
I am so frightened
that even my fear is afraid.

Spill a drop of your blood
on the other side of the sea,
I will spill a drop of blood
on this side of the sea.
Let us wait and see what the sharks around here
will do.

Or
to bring those two drops of blood together,
let us become sharks.

In this darkness
your messages are being sent from the moon.
The sound of sweat dripping from your eyes
are being mimicked here by dew.
The bird carrying the smell of your village
is pooping on my head.

I am afraid I will burn
in my effort to touch these flowers
that bear the colour of blood
—yours and mine.

There is no sea between you and me.
We can erase that single line
representing the border
or the line within our heads,
so that we can be one,
mirroring each other.

My dear girl,
the sun who touches me today,
touches you the next day
and unites us in that touch.
And keeps uniting
our disembodied love.
*



Translation- Dr. Kamalakara Kadave

ಮಳೆಬಿಲ್ಲು



The Rainbow

  - Christina Rossetti

Boats sail in the rivers,
And ships sail on the seas;
But clouds that sail across the sky
Are prettier far than these.

There are bridges on the rivers,
As pretty as you please;
But the bow that bridges heaven,
And overtops the trees,
And builds a road from earth to sky,
Is prettier far than these.

 ಮಳೆಬಿಲ್ಲು

ದೋಣಿ ಸಾಗಿದೆ ನದಿಯ ನಾದಕೆ
ಹಡಗು ಸಾಗಿದೆ ಕಡಲ ಲಾಲಿಗೆ
ಇದಕೂ ಸುಂದರ ಗಗನ ಗಾನಕೆ  ಮೋಡದ ಸಾಲು

ಸೇತುವೆಗಳಿವೆ ನದಿಯ ಚೆಲುವಿಗೆ
ಎಷ್ಟು ಸುಂದರ ನರನ ಕಾಣಿಕೆ
ಆದರಿದೋ  ಮಳೆಯಬಿಲ್ಲು
ಸಪ್ತ ವರ್ಣದ ಕಾಮನಬಿಲ್ಲು 
ಸ್ವರ್ಗಕ್ಕೆ ಸೇತುವೆ ಕಟ್ಟಿ 
ಜಗಕೆ ಮುಡಿಸಿದೆ ಬೆರಗ ದೃಷ್ಟಿ 
ಮರದ ಮೇರೆಯ ಮೀರಿಮೀರಿ
ಭೂಮಿ-ಬಾನಿಗೆ ಮಾಡಿ ದಾರಿ 
 ಸಹಜ ಸೃಷ್ಟಿಯ ಚೆಲುವ ಗೆಲುವಿದು ಸುಂದರ ಅತಿ ಸುಂದರ
*
ಇಂಗ್ಲಿಷ್ ಮೂಲ- ಕ್ರಿಸ್ಟೀನಾ ರೊಸೆಟಿ


ಕನ್ನಡಕ್ಕೆ- ಕಾಜೂರು ಸತೀಶ್ 



Tuesday, July 4, 2023

ಪತ್ರಿಕೋದ್ಯಮದ ಸಮಗ್ರ ಚಿತ್ರಣ - 'ಸೊಡರು'

'ಶಕ್ತಿ' ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ ಜಿ ಅನಂತಶಯನ ಅವರ ಪತ್ರಿಕಾ ರಂಗದ ಅನುಭವ ಕಥನ 'ಸೊಡರು'. ಪತ್ರಿಕಾ ರಂಗದಲ್ಲಿ ಅವರಿಗೆ ನಾಲ್ಕೂವರೆ ದಶಕಗಳ ಅನುಭವ; ತಮ್ಮ ಹದಿನೇಳನೆಯ ವಯಸ್ಸಿಗೇ ಈ ಕ್ಷೇತ್ರವನ್ನು ಪ್ರವೇಶಿಸಿದವರು ಅನಂತಶಯನ ಸರ್. ಅದರೊಂದಿಗೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. UNI, ವಿಜಯ ಟೈಮ್ಸ್, ಸ್ಟಾರ್ ಆಫ್ ಮೈಸೂರ್, ಟೈಮ್ಸ್ ಆಫ್ ಡೆಕ್ಕನ್ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿರುವವರು.
ಈ ಸುದೀರ್ಘ ಅವಧಿಯ ಕೆಲವು ರೋಚಕ ಅನುಭವಗಳನ್ನು
'ಸೊಡರು' ಕೃತಿಯಲ್ಲಿ ಬೆಳಗಿದ್ದಾರೆ. ಪತ್ರಿಕಾ ಕ್ಷೇತ್ರಕ್ಕೆ ಬರುವವರಿಗೆ ಇದು ದಿಕ್ಸೂಚಿ .ಅದರಿಂದ ಹೊರತಾದವರಿಗೂ ರೋಚಕ ಅನುಭವಗಳ ಗುಚ್ಛ. ಯಾರು ಬೇಕಾದರೂ ಓದಿ ಅರ್ಥೈಸಿಕೊಳ್ಳಬಹುದಾದ ಕೃತಿ.


ಪತ್ರಕರ್ತನಿಗಿರಬೇಕಾದ ಮಾನಸಿಕ ದೂರ, ವಿಷಯ ಜ್ಞಾನ, ಬಹುಭಾಷಾ ಅರಿವು, ಪ್ರಾಮಾಣಿಕತೆ , ನಿಖರತೆ, ಧೈರ್ಯ ,ತಾಳ್ಮೆ , ಸ್ವಾಭಿಮಾನ ಮೊದಲಾದ ವಿಷಯಗಳ ಕುರಿತ ಅನುಭವ ಕಥನಗಳಿವು.

ಸ್ವತಃ ಅನುಭವಿಸಿದ ಜೀವ ಬೆದರಿಕೆಗಳು, ಪ್ರಾಣಾಪಾಯದಿಂದ ಪಾರಾಗಿ ಬಂದ ಅನುಭವ, ಪೊಲೀಸ್ ವಿಚಾರಣೆ, ನ್ಯಾಯಾಲಯದಲ್ಲಿ ಹಾಜರಾದ ವಿವರಗಳು, ವರದಿಗಾಗಿ ಗಣ್ಯರ ಭೇಟಿಯ ಸಂದರ್ಭದ ಸ್ವಾರಸ್ಯಗಳು ಕೃತಿಯಲ್ಲಿವೆ. ಕನ್ನಡ ಪತ್ರಿಕಾ ಇತಿಹಾಸದ ಕುರಿತ ಸಣ್ಣ ಟಿಪ್ಪಣಿಗಳಿವೆ.
*
ಕಾಜೂರು ಸತೀಶ್