ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, July 24, 2023

ಪಾಪಪ್ರಜ್ಞೆ, ಪತನ ಮತ್ತು ವಿಮೋಚನೆ

ಪ್ರೇಮ್ ಸಾಗರ್ ಕಾರಕ್ಕಿ ಅವರು ಇಂಗ್ಲಿಷ್ ಸಾಹಿತ್ಯ ಅಧ್ಯಯನಕಾರರು. ವೃತ್ತಿಯಲ್ಲಿ ಆಂಗ್ಲ ಉಪನ್ಯಾಸಕರು. ಅವರ ಚಿಂತನಾಕ್ರಮದಲ್ಲಿ ಪೂರ್ವಗ್ರಹಗಳಿಂದ ಹೊರತಾದ ಅನನ್ಯ ನೋಟಗಳನ್ನು ಗಮನಿಸಬಹುದು. ವರ್ತಮಾನಕ್ಕೆ ಸ್ಪಂದಿಸುವಾಗ, ಅಥವಾ ಎಂತಹದ್ದೇ ಸಾಹಿತ್ಯಿಕ/ರಾಜಕೀಯ/ ಮಾನವಿಕ ವಿಷಯಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಹೆಚ್ಚು ಖಚಿತವಾದ ನಿಲುವುಗಳನ್ನು ವ್ಯಕ್ತಪಡಿಸಬಲ್ಲವರು ಪ್ರೇಮ್ ಸಾಗರ್.


ಕಮೂವನ್ನು ಅವರು ಎಷ್ಟು ಆವಾಹಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಕೃತಿ ಸಾಕ್ಷಿ. ಕಮೂ ಬಂದು ಅವರ ಒಳಗೆ ಕುಳಿತು ಕತೆ ಹೇಳುತ್ತಿರುವಾಗಿನ ಧಾಟಿ ಅದು. ಅನುವಾದ ಮುಗಿದ ಮೇಲೆ 'ನಾನೊಂದು ಕಾದಂಬರಿ ಬರೆದು ಮುಗಿಸಿದೆ' ಎಂಬ ಭಾವ ಅವರಿಗೆ ಬಂದಿರುವಷ್ಟು 'ಒಳಗಿನಿಂದ' ಈ ಕೃತಿ ರಚನೆಯಾಗಿದೆ (ಒಂದು ದಶಕದ ಧ್ಯಾನದ ಫಲ !).
*
ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಲ್ಜೀರಿಯನ್ ಮೂಲದ ಫ್ರೆಂಚ್ ಬರಹಗಾರ ಆಲ್ಬರ್ಟ್ ಕಮೂ . ದಿ ಫಾಲ್ ಅವನ ಕೊನೆಯ ಕಾದಂಬರಿ. ಅವನ ಹಿಂದಿನ ಕಾದಂಬರಿಗಳಾದ 'ದಿ ಸ್ಟ್ರೇಂಜರ್' ಮತ್ತು 'ದ ಪ್ಲೇಗ್' ನಲ್ಲಿ ಕಂಡುಬರುವ ತಂತ್ರ 'ದಿ ಫಾಲ್' ನಲ್ಲಿಲ್ಲದಿದ್ದರೂ, ಆ ಕೃತಿಗಳಲ್ಲಿ ಇರುವಂತೆ ವೈಯಕ್ತಿಕ ಸ್ವಾತಂತ್ರ್ಯ, ಮಾನವ ಸಂಬಂಧಗಳು, ಪ್ರಾಮಾಣಿಕ ಜೀವನದ ಸ್ವರೂಪ, ಸತ್ಯ, ನ್ಯಾಯ ನಿರ್ಣಯ, ಸಾವು, ಅಸ್ತಿತ್ವದ ಆಲೋಚನೆಗಳಿವೆ. ಪಾಪಪ್ರಜ್ಞೆಯ ಹಲವು ನೆಲೆಗಳನ್ನು ಶೋಧಿಸುವ ಕೃತಿ ಇದು. ಬಯೋಗ್ರಫಿಕಲ್ ಚಹರೆಗಳೂ ಹೆಚ್ಚಿವೆ ಇಲ್ಲಿ.


ಇದೊಂದು ಸ್ವಗತಗಳ ಸರಣಿ. ಕಥಾನಾಯಕ ಜ್ಯೀನ್ ಬಾಪ್ಟಿಸ್ಟ್ ಕ್ಲೆಮೆನ್ಸ್ ಸ್ವಗತದ ಮೂಲಕ ತನ್ನ ಬದುಕನ್ನೂ ಸಮಾಜವನ್ನೂ ಮುಚ್ಚುಮರೆಯಿಲ್ಲದೆ ತೆರೆದು ತೋರಿಸುತ್ತಾನೆ. ಆತ ಮಾಜಿ ನ್ಯಾಯವಾದಿ. ಕಾದಂಬರಿಯು ಆಮ್ಸ್ಟರ್ಡಾಂನ ಮೆಕ್ಸಿಕೋ ಸಿಟಿ ಎಂಬ ಬಾರಿನಲ್ಲಿ ಫ್ರೆಂಚ್ ಅಪರಿಚಿತನೊಡನೆ ಬಾರಿನ ಡಚ್ ಮಾಲೀಕನ ಕುರಿತು ಹೇಳುವಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಏಕಮಾತ್ರ ಧ್ವನಿ ಕ್ಲೆಮೆನ್ಸ್ . ಕಾದಂಬರಿಯು ತೀರಾ ಸಹಜವಾದ ಸಂಗತಿಗಳನ್ನು ಮಾತಿಗೆ ತೆಗೆದುಕೊಂಡು ಮುಂದೆ ಗಂಭೀರವಾಗಿ ಫಿಲಾಸಾಫಿಕಲ್ ನೆಲೆಗಳನ್ನು ಮುಟ್ಟುತ್ತದೆ. ಅದು ಏರ್ಪಡುವುದು ಬಾರಿನಲ್ಲಿ ಮತ್ತು ಆಮ್ಸ್ಟರ್ಡಾಂನ ರಸ್ತೆಗಳಲ್ಲಿ. ಓದುಗರನ್ನು ಹಿಡಿದಿಡಲು ತಾನೇ ಸಹವರ್ತಿಯ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಪರಿಹಾರವನ್ನು ಹುಡುಕುತ್ತಾನೆ ಕ್ಲೆಮೆನ್ಸ್.


ಮೊದಮೊದಲ ಅವನ ವೈಯಕ್ತಿಕ ಜೀವನಾನುಭವಗಳು ಗೆಲುವಿನಿಂದಲೂ ಪ್ರಾಮಾಣಿಕತೆಯಿಂದಲೂ ಕೂಡಿದ್ದವು. ಆ ಸಂಭ್ರಮ ಅವನ ಮಾತುಗಳಲ್ಲೇ ಧ್ವನಿಸುತ್ತಿತ್ತು. ಅಸಹಾಯಕರಿಗೆ ವಿಧವೆಯರಿಗೆ ಮಾತ್ರ ನ್ಯಾಯದಾನ ಮಾಡುತ್ತಿದ್ದವನು. ಎಂದೂ ಭ್ರಷ್ಟನಾಗದೆ ದುಡಿಯುತ್ತಿದ್ದವನು ಕ್ಲೆಮೆನ್ಸ್ . ಲೋಕಚಿಂತನೆಯ ಹಿನ್ನೆಲೆಯಲ್ಲಿ ನ್ಯಾಯವಾದಿ ವೃತ್ತಿಗೆ ರಾಜೀನಾಮೆ ನೀಡಿದ ಮೇಲೆ ಅವನ ಬೆನ್ನುಬೀಳುವುದು ಪಾಪಪ್ರಜ್ಞೆ ಮತ್ತು ಅವನ ಹೆಸರಿನೊಂದಿಗೇ ಇರುವ ಪಶ್ಚಾತ್ತಾಪ.

ಮನುಷ್ಯನ ನೈತಿಕ ಪತನ ಮತ್ತು ಅದರಿಂದ ಪಾರಾಗಲು ನಡೆಸುವ ಹೋರಾಟವೇ 'The Fall'. ಆತ್ಮರತಿಯಲ್ಲಿ ಮುಳುಗಿಹೋದವನಿಗೆ ಉಳಿದುದೇನೂ ನೆನಪಾಗುವುದಿಲ್ಲ. ಮಾಡಿದ ಹಲವು ಹೆಣ್ಣುಗಳ ಸಂಪರ್ಕದ ನೆನಪಿರುವುದಿಲ್ಲ, ಸೇತುವೆಯ ಬಳಿ ನಿಂತುಕೊಂಡಿದ್ದ ಹೆಂಗಸು ಇವನು ಮುಂದೆ ಸಾಗುವಷ್ಟರಲ್ಲಿ ನದಿಗೆ ಬಿದ್ದು ಆರ್ತನಾದಗೈಯ್ದರೂ ಇವನಿಗೆ ಹಿಂತಿರುಗಿ ನೋಡಬೇಕೆನಿಸುವುದಿಲ್ಲ.


ಕೊನೆಗೆ ತನ್ನ ಪತನದ ಸುಳಿವುಗಳನ್ನು ಅರಿತ ಕ್ಲೆಮೆನ್ಸ್ ಬದುಕಿನ ನಿರರ್ಥಕತೆಯನ್ನು ಪ್ರಶ್ನಿಸಿದ. ಫ್ರಾನ್ಸ್ ತೊರೆದು ಆಮ್ಸ್ಟರ್ಡಾಂಗೆ ಬಂದರೂ ತನ್ನ ಪತನದ ನೆನಪುಗಳು ಅವನ ಬೆನ್ನುಹತ್ತಿದವು.
ತನ್ನ ತಪ್ಪುಗಳನ್ನು ಕ್ರಿಸ್ತನ ತಪ್ಪುಗಳೊಂದಿಗೆ ಸಮೀಕರಿಸಿ ಹಗುರಾಗಲು ಬಯಸಿದ  . ನಾಸ್ತಿಕನಾದ ಅವನು ತನ್ನನ್ನು ದೈವವು ಶಿಕ್ಷಿಸುವುದಿಲ್ಲ. ಶಿಕ್ಷಿಸುವುದೇನಿದ್ದರೂ ಮನುಷ್ಯರು ಮಾತ್ರ  ಎಂದು ನಂಬಿದ. ಮನುಷ್ಯನು ಮಾತ್ರ ತೀರ್ಪು ನೀಡಬಹುದು. ತೀರ್ಪು ನೀಡುವ ವ್ಯಕ್ತಿಯು ತಪ್ಪಿತಸ್ಥನಾದರೆ, ಅವನು ಅಪಹಾಸ್ಯಕ್ಕೆ ಒಳಗಾಗುತ್ತಾನೆ, ಕಪಟಿ ಎಂದು ನಿರ್ಣಯಿಸಲ್ಪಡುತ್ತಾನೆ. ಈ ಸಾಕ್ಷಾತ್ಕಾರಗಳಿಂದ ಕ್ಲೆಮೆನ್ಸ್  ಪರಿಹಾರವನ್ನು ಕಂಡುಕೊಂಡ: ಅವನು ತನ್ನ ಪಾಪಗಳನ್ನು ಇತರರಲ್ಲಿ ಹೇಳಿಕೊಂಡ, ಇದರಿಂದ ಅವನು ಎಲ್ಲರ ಮೇಲೆ ತೀರ್ಪು ನೀಡಲು ಸಾಧ್ಯವಾಗುತ್ತದೆ ಎಂದುಕೊಂಡ.


ಕಮೂವಿನ ಪತ್ರಕರ್ತನ ಭಾಷೆ ಮತ್ತು ನಿರೂಪಣೆ ಈ ಕೃತಿಯಲ್ಲೂ ಕಾಣಸಿಗುತ್ತದೆ. ಓದುಗನ ಓದಿನೊಂದಿಗೆ ಓಡುವ ಭಾಷೆಯದು. ಇಡೀ ಕೃತಿಯು ಸ್ವಗತದಿಂದ ಕೂಡಿರುವಾಗ ಏಕತಾನತೆ ನುಸುಳುವುದು ಸಹಜ. ಆದರೆ ಕಮೂವಿನ ಅಸ್ತಿತ್ವವಾದದ ಪ್ರಶ್ನೆಗಳು ಓದುಗನನ್ನು ಚಿಂತನೆಗೆ ಹಚ್ಚಿ ಏಕತಾನತೆಯಿಂದ ಹೊರತರುತ್ತದೆ(ಅದಕ್ಕೆ ಕಾರಕ್ಕಿಯವರ ಸಹಜ, ಸಲೀಸು ಅನುವಾದವೂ ಬೆಂಬಲ ನೀಡುತ್ತದೆ). ಕಮೂವಿಗೆ ನೊಬೆಲ್ ಬಂದಾಗ ಮಾಡಿದ ಭಾಷಣದ ಅನುವಾದವೂ ಈ ಕೃತಿಯಲ್ಲಿದೆ.

*
ಕಾಜೂರು ಸತೀಶ್ 

No comments:

Post a Comment