-1-
ತೋಳದ ಕಣ್ಣುಗಳು ಕೆಂಪು ಕೆಂಡದಂತಿವೆ.
ದಿಟ್ಟಿಸಿ ನೋಡಿ ನೀವು ಅದನ್ನು
ಅದರ ಕಣ್ಣ ಕೆಂಪು ನಿಮ್ಮ ಕಣ್ಣಿಗೆ ಬರುವವರೆಗೆ
ಇನ್ನೇನು ಮಾಡಲು ಸಾಧ್ಯ ನಿಮಗೆ
ಅದು ನಿಮ್ಮೆದುರಿಗೇ ನಿಂತುಬಿಟ್ಟರೆ?
ನೀವು ಮುಖ ಮುಚ್ಚಿಕೊಳ್ಳಬಹುದು
ತಪ್ಪಿಸಿಕೊಂಡು ಓಡಬಹುದು
ಆದರೂ ನಿಮ್ಮ ಒಳಗೊಂದು ತೋಳ
ನಿಂತುಬಿಟ್ಟಿರುತ್ತದೆ ಹಾಗೇ ಒಂದಿಷ್ಟೂ ಕದಲದ ಹಾಗೆ
ತೋಳದ ಕಣ್ಣುಗಳು ಕೆಂಪು ಕೆಂಡದಂತಿವೆ
ಮತ್ತೀಗ ನಿಮ್ಮ ಕಣ್ಣುಗಳು ?
-2-
ತೋಳ ಊಳಿಡುತ್ತದೆ
ನೀವೊಂದು ದೀಪ ಬೆಳಗಿಸಿ
ಅದರ ಮೈಮೇಲೆ ಬೆಳಕ ಚೆಲ್ಲಿ
ನಿಮ್ಮ ಮೈಯ್ಯ ಮೇಲೂ
ಒಂದೇ ಒಂದು ವ್ಯತ್ಯಾಸವೆಂದರೆ
ತೋಳಕ್ಕೆ ದೀಪ ಹಚ್ಚಲು ಬರುವುದಿಲ್ಲ
ಈಗ ಆ ದೀಪವನ್ನೆತ್ತಿಕೊಳ್ಳಿ
ತೋಳದ ಬಳಿ ಸಾಗಿರಿ
ಓಟಕ್ಕೀಳುತ್ತವೆ ಅವೆಲ್ಲಾ
ಸಾವಿರ ಸಾವಿರ ಕೈಗಳಲ್ಲಿ
ಕಂದೀಲು ಹಿಡಿದು
ಪೊದೆಯಿಂದ ಪೊದೆಗೆ ನುಗ್ಗಿರಿ
ದಿಕ್ಕು ತಪ್ಪಿ ಓಡುತ್ತವೆ ಅವು
ಒಂದೂ ಉಳಿಯದಂತೆ
ಆಮೇಲೆ ಕಾಡಿನಿಂದ ಹೊರಗೆಸೆಯಿರಿ
ಎಸೆದುಬಿಡಿ ಅವನ್ನು ಹಿಮದ ಮೇಲೆ
ಹಸಿದ ಅವು ಊಳಿಡುತ್ತವೆ ತಮ್ಮತಮ್ಮಲ್ಲೇ
ಸಿಗಿದು ತಿನ್ನುತ್ತವೆ ಒಂದನ್ನೊಂದು
ತೋಳಗಳು ಸಾಯುತ್ತವೆ
ಮತ್ತೆ ನೀವು?
- 3-
ಮತ್ತೆ ಬರುತ್ತದೆ ತೋಳ
ಇದ್ದಕ್ಕಿದ್ದಂತೆ ಒಂದು ದಿನ
ನಿಮ್ಮಲ್ಲೊಬ್ಬರು ತೋಳವಾಗುತ್ತೀರಿ
ಒಂದು, ನೂರು, ಸಾವಿರವಾಗಿ
ವೃದ್ಧಿಸುತ್ತದೆ ಸಂತತಿ
ನಿಜಕ್ಕೂ ಬರಬೇಕಿದೆ ತೋಳ
ನಿಮ್ಮನ್ನು ನೀವು ನೋಡಿಕೊಳ್ಳಲು
ನಿಮ್ಮ ನೀವು ಪ್ರೀತಿಸಲು
ಭಯರಹಿತ ಸ್ಥಿತಿಯನ್ನು ಸುಖಿಸಲು
ಗೆಲುವಿನಿಂದ ದೀಪ ಹಚ್ಚಲು
ಚರಿತ್ರೆಯ ಕಾಡಿನಲ್ಲಿ
ಗುಂಪಿನಿಂದ ಹೊರಹಾಕಲ್ಪಡುತ್ತದೆ ತೋಳ ಪ್ರತೀ ಬಾರಿಯೂ
ಆಗ ಮನುಜರೆಲ್ಲ ಒಂದಾಗಿ
ಕಂದೀಲು ಹಿಡಿದು ನಿಲ್ಲುತ್ತಾರೆ
ಚರಿತ್ರೆ ಜೀವಂತವಾಗುತ್ತದೆ
ನೀವೂ
ಮತ್ತು
ತೋಳವೂ.
*
ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ
ಕನ್ನಡಕ್ಕೆ- ಕಾಜೂರು ಸತೀಶ್
No comments:
Post a Comment