ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ಕಣ್ಣಲ್ಲಿಳಿದ ಮಳೆಹನಿ. Show all posts
Showing posts with label ಕಣ್ಣಲ್ಲಿಳಿದ ಮಳೆಹನಿ. Show all posts

Tuesday, November 18, 2025

ಕಣ್ಣಲ್ಲಿಳಿದ ಮಳೆಹನಿ ಕುರಿತು ಕಿರುಟಿಪ್ಪಣಿ - ಡಾ. ಮಹಾಂತೇಶ ಪಾಟೀಲ

ನವೆಂಬರ- ೧೮, ೨೦೨೫.


@ಕಾಜೂರು ಸತೀಶ್ 
@ಸಂಗಾತ ಪುಸ್ತಕ, ರಾಜೂರು.

ಈ ಲೋಕಕ್ಕೆ ತುಂಬಾ ಅಗತ್ಯವಾಗಿರುವುದು ಕಾಡು ಮತ್ತು ಕವಿತೆ. ಭೂಮಿ ಮತ್ತು ಮನುಷ್ಯರನ್ನು ಅವೆರಡೂ ತಂಪಾಗಿ ಇಡಬಲ್ಲವು. ಅವುಗಳ ಸಾಂಗತ್ಯದಿಂದ ಹೊರತಾದ ಜಗತ್ತು ಏನಾಗುತ್ತಿದೆ ಅಂತ ನಿತ್ಯ ನರಕಗಳ ನೋಡಿದರೆ ಅರ್ಥವಾಗುತ್ತದೆ. ಇಂತಹ ಹೊತ್ತಲ್ಲಿ ನಮಗೆ ಕಾಜೂರು ಸತೀಶ್ ಅವರ 'ಕಣ್ಣಲ್ಲಿಳಿದ ಮಳೆಹನಿ ' ಎದೆಗಿಳಿಯುವ ದೆಸೆಯಿಂದ ಗುರುತರ ರಚನೆಗಳೆನಿಸುತ್ತವೆ. ಕಾಡನ್ನು, ಕವಿತೆಯನ್ನು, ಜೀವನ ಕೊನೆಯನ್ನು ಕ್ಯಾಮೆರಾ ಕಣ್ಣಿನ ಮೂಲಕ ಲೋಕವನ್ನು ನೋಡುವ ಕವಿಗೆ ಕಾಣಿಸುವ ಜಗತ್ತು ಬೇರೆಯದೇ ಬಗೆಯದು. ಅಂತಹ ಬೇರೊಂದು ಲೋಕದರ್ಶನ ಮಾಡಿಸುತ್ತಾನೆ ಕವಿ.

ಹೊಸ ತಲೆಮಾರಿನ ಕವಿಗಳಲ್ಲಿ ಅಪ್ಪಟ ಪರಿಸರ ಸಂವೇದನೆಯಿಂದ ಬರೆಯುತ್ತಿರುವ ಏಕೈಕ ಇಕೋಪೊಯಟ್ ಕಾಜೂರು ಸತೀಶ್. ಈ ಮಾತು ಉತ್ಪ್ರೇಕ್ಷೆಯಲ್ಲ ಎನ್ನುವುದು ಅವರ 'ಗಾಯದ ಹೂವುಗಳು, ಕಣ್ಣಲ್ಲಿಳಿದ ಮಳೆಹನಿ' ಸಂಕಲನಗಳನ್ನು ಓದಿದವರು ಬಲ್ಲರು. ವರ್ತಮಾನದ ತಲ್ಲಣಗಳಿಗೆ ಪ್ರಕೃತಿ ಆಪ್ತತೆಯಿಂದ ನಿರ್ವಾಣ ಹೊಂದಲು ಸಾಧ್ಯವೆನ್ನುವುದನ್ನು ನಿವೇದಿಸುತ್ತವೆ. ಒಂದು ಪದ, ಸಾಲು, ನುಡಿ, ಪಂದ್ಯವೊಂದರಲ್ಲಿ ಅಗಾಧವಾದುದನ್ನು ಭಾಷಿಕ ಶಕ್ತಿಯಲ್ಲಿ ಸಾಧ್ಯವಾಗಿಸಬಲ್ಲರು.

ಮರ ಯಾರದು?, ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ, ಒಂದಾದರೂ ಬರಬಾರದೇ?, ನನ್ನೊಳಗೆ ಇಳಿಯುವಾಗ, ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ, ಹೊಟೇಲ್, ಎಷ್ಟು ಸುಖಿ ನೀನು ಕವಿತೆಯೇ?, ಒಂದು ಕವಿತೆ ಹುಟ್ಟುವುದರಲ್ಲಿತ್ತು, ಕುರ್ಚಿ, ನನ್ನ ಶವಸಂಸ್ಕಾರದ ದಿನ, ನಾನು ಸತ್ತ ಮೇಲೆ, ಕಾಡುಗಳಿದ್ದವು ಕವಿತೆಯಲ್ಲಿ - ಇವೆಲ್ಲವೂ ಚೇತೋಹಾರಿ ರಚನೆಗಳು. ಒಂದು ಎಲೆ, ಚಿಗುರು, ಹೂವು, ಮರವನ್ನು ಕವಿತೆಯಾಗಿ ಧ್ಯಾನಿಸಬಲ್ಲ ಗುಣ ಬೆರಗು ಮೂಡಿಸುತ್ತದೆ. ಕಾಡಿನ ಹಾಗೆ ಕಾಂಕ್ರೀಟ್ ಬಗ್ಗೆಯೂ ಈ ಕವಿ ಬರೆಯಬಲ್ಲ. ಸಾವು ಇವರ ಕಾವ್ಯದ ಶೋಧಗಳಲ್ಲಿ ಒಂದು. ಈ ಸಾವು ಮಾಗಿಕಾಲದಂತೆ, ಮತ್ತೆ ವಸಂತದ ಮೂಲಕ ಮರುಹುಟ್ಟು ಪಡೆಯುವ ದಿವ್ಯ ಹಂಬಲವುಳ್ಳದ್ದು.


ಕಾಡುಗಳಿದ್ದವು ಕವಿತೆಗಳಲ್ಲಿ
ಮಾತಿಗಿಳಿದ ಮಾನವ ಬೇಲಿಕಟ್ಟಿ ಬಂದ.....

ನೇರಳೆಯ ಪೊಟರೆಯೊಳಗಿಟ್ಟ ಹೃದಯ
ಅಲ್ಲೇ ಇದೆ ಈಗಲೂ

ಕಾಡುಗಳಿಲ್ಲ ಕವಿತೆಗಳಲ್ಲಿ
ಮೃಗಾಲಯವಿದೆ (ಕಾಡುಗಳಿದ್ದವು ಕವಿತೆಯಲ್ಲಿ).
*

ಯಾರು ಹಡೆಯುತ್ತಾರೆ
ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಸುಡುತ್ತಾರೆ ಅವುಗಳನ್ನು
ನಾನು ಸತ್ತ ಮೇಲೆ

ಯಾರು ಕೈಹಿಡಿದು ಬರೆಸುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಮತ್ತೆ ಮತ್ತೆ ಓದಿಸುತ್ತಾರೆ
ಅವುಗಳನ್ನು ನಾನು ಸತ್ತ ಮೇಲೆ. (ನಾನು ಸತ್ತ ಮೇಲೆ).

*

ಈ ರಾತ್ರಿ
ಮಿಡತೆಯ ಹಾಡು
ಕಾಡಾನೆಯ ಘೀಳು
ನಾಯಿಗಳ ಬೊಗಳು
ಮೈಸೋಕುವ ಗಾಳಿ
ಮಳೆಯ ಸಪ್ಪಳ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನಿನ್ನ ಕುರಿತು (ಬರೆಯಲಾರೆ).
*

ಊಟಕ್ಕೆಂದು ಹೊಟೇಲಿನ ಬಳಿಬಂದೆ
ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿದೆ.

ಎಲ್ಲಿ ಹೋಗಿರಬಹುದು ಅದು
ಬೆವರಲ್ಲಿ ತೋಯ್ದ ತನ್ನ ಅಂಗಿಯ ಕಳಚಿಟ್ಟು.
(ಹೋಟೆಲ್).
*

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ...
ಎಲ್ಲ ಕಳೆದುಕೊಂಡ ಕಾಡು ನಡೆದು ಬಂದಿರಬಹುದು ಕಂಬಗಾಲುಗಳಲ್ಲಿ/
 ಹೆಜ್ಜೆ ಎತ್ತಿಟ್ಟಲ್ಲೆಲ್ಲ ಲದ್ದಿ ಹಾಕಿ
ಹಿಂತಿರುಗಿಸುತ್ತಿರಬಹುದು ಯಾರೋ ಮರೆತು ಬಂದ ಗರಗಸವನ್ನು (ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ...).
*

ಎಷ್ಟೊಂದು ಹಕ್ಕಿಗಳಿವೆ ಇಲ್ಲಿ
ಒಂದಾದರೂ ಬರಬಾರದೇ?

ಒಂದು ಮರಕುಟಿಗವಾದರೂ ಬಂದು
ಕುಟುಕುಟು ಕುಟುಕಿ
ಮೊಬೈಲಿನಲ್ಲೊಂದು ತೂತು ಮಾಡಿ ನುಗ್ಗಿ
ಜೋರಾಗಿ ಹಾಡಿ....
ಆಮೇಲೆ ಅದರ ಹಾಡೇ ರಿಂಗ್ಟೋನಾಗಿ
ಅದರ ಚಿತ್ರವೇ ಡಿಪಿಯಾಗಿ
(ಒಂದಾದರೂ ಬರಬಾರದೇ).
*

ಚಿಕ್ಕವನಿದ್ದಾಗ
ಈ ಮರ ನನ್ನದಾಗಿತ್ತು

ಅದರ ನೆರಳಲ್ಲಿ ಕುಳಿತು
ಪುಸ್ತಕ ಓದಿದೆ
ಕೊಂಬೆಗಳ ಮೇಲೆ ಕುಳಿತು
ಜಗದ ಸುದ್ದು ಮರೆತೆ (ಮರ ಯಾರದು).

ಕೊಡಗಿನ ಕವಿ ಕಾಜೂರು ಸತೀಶ್ ಕಾವ್ಯ ದಟ್ಟ ಕಾಡಿನ ಮಂಜಿನಂತೆ, ಜೇಡರ ಬಲೆಯಲ್ಲಿ ಹೆಣೆದ ನೀರ್ಮುತ್ತಿನಂತೆ, ಮರದ ಎಲೆಗಳ ನಡುವೆ ಸುಳಿದ ಸೆಳೆಯುವ ಕುಳಿರ್ಗಾಳಿಯಂತೆ- ಈ ದಿವ್ಯತೆ ಅನುಭೂತಿ ಪಡೆಯಲು ಓದಬೇಕಾದ ಕವಿತೆಗಳಿವು.
*


✍️ಮಹಾಂತೇಶ ಪಾಟೀಲ 

Monday, October 27, 2025

ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...



✍️ಡಾ. ಮಹಾಂತೇಶ ಪಾಟೀಲ, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ


ಕೃಪೆ- Alliance University

'ಕಾಡುಗಳಿದ್ದವು ಕವಿತೆಯಲ್ಲಿ' ಎನ್ನುವ ಕೊಡಗಿನ ಕಾಜೂರು ಸತೀಶ್‌, ಹೊಸ ತಲೆಮಾರಿನ ವಿಶಿಷ್ಟ ಸಂವೇದನೆಯ ಬರಹಗಾರ. ಒಳ್ಳೆಯ ಕಾವ್ಯ ಮತ್ತು ಕಾಡು ಕಡಿಮೆಯಾಗುತ್ತಿರುವ ವರ್ತಮಾನದಲ್ಲಿ ಅವರ ಬರಹಗಳು ಗಮನ ಸೆಳೆಯುತ್ತವೆ. ಚಾರಣ, ಹಾಡುಗಾರಿಕೆ, ಚಿತ್ರಕಲೆ ಮತ್ತು ಪೋಟೊಗ್ರಫಿಯಂತಹ ಬಹುಬಗೆಯ ಅಭಿವ್ಯಕ್ತಿಗಳಲ್ಲಿ ತೊಡಗಿಸಿಕೊಂಡಿರುವ ಕವಿಯ ನೋಟಕ್ರಮವು ಕವಿತೆಗಳಲ್ಲಿಯೂ ಮೈದಾಳಿದೆ. ಅವರ ಸಂವೇದನೆಗಳಿಗೆ ಅನೇಕ ಮುಖಗಳಿವೆ. ಅವುಗಳ ಹಿಂದಿರುವ ಮೂಲ ಚಾಲನಾಶಕ್ತಿ ಎಂದರೆ ಕಾಡು, ಮತ್ತದರ ಅನಂತತೆ, ಅನಿಕೇತನತೆ. ಕುವೆಂಪುರವರ ಸೌಂದರ್ಯ ವರ್ಣನಾ ದೃಷ್ಟಿ, ದ.ರಾ ಬೇಂದ್ರೆಯವರ ನಾದದ ನೆಲೆಗಳಿಗಿಂತ ವಿಭಿನ್ನವಾಗಿ ಪ್ರಕೃತಿಯ ಸಂವೇದನೆಯನ್ನು ಕಾಜೂರು ಸತೀಶರ ಕವನ ಸಂಕಲನಗಳಲ್ಲಿ (ಗಾಯದ ಹೂವುಗಳು-೨೦೧೫, ಕಡಲ ಕರೆ-೨೦೧೭) ಕಾಣುತ್ತೇವೆ. ಪ್ರಸ್ತುತ ಲೇಖನವು 'ಕಣ್ಣಲ್ಲಿಳಿದ ಮಳೆಹನಿ'(೨೦೨೧) ಸಂಕಲನದ ಕವಿತೆಗಳ ವಿವೇಚನೆಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಇಲ್ಲಿನ ಸಂವೇದನೆಯು ಕಾಡು, ಕಾವ್ಯ, ಸಮಾಜ ಮತ್ತು ಸಾವು; ನಾಲ್ಕು ಕವಲುಗಳಾಗಿ ಸಂಕಲನದಲ್ಲಿ ಹರಿದು ಓದುಗರನ್ನು ಸೇರುತ್ತವೆ. ಈ ನಾಲ್ಕು ಆಯಾಮಗಳಲ್ಲಿ ಕಾಡಿನ ನೆಲೆಯು ಮಹಾನದಿಯಂತಿದೆ. ಇಲ್ಲಿನ ಕಾಡು ಜೀವ, ಜೀವನ ಮತ್ತು ಲೋಕದ ಜೊತೆಗೆ ಸಾತತ್ಯತೆಯನ್ನು ಬೆಳಿಸಿದೆ. ಹಾಗಾಗಿ ಕವಿತೆ, ಸಾವು, ಸಮಾಜದ ಬಗ್ಗೆ ಬರೆಯುವಾಗಲೂ ಕಾಡೇ ಮುಂಚೂಣಿಯಾಗಿ ಬರುತ್ತದೆ. ಅದೆಲ್ಲವನ್ನು ಗಮನಿಸಿದಾಗ ಕವಿಗೆ ಕಾಡೇ ಏಕಾಂತ, ಲೋಕಾಂತವೆಲ್ಲ ಆಗಿರುವುದು ಅನುಭವಕ್ಕೆ ಬರುತ್ತದೆ.


-1-
ಕಾಡು, ಮರ, ಎಲೆ, ಮಳೆ, ಝರಿಯ ವಿವಿಧ ರೂಪಗಳು ಕಾಜೂರು ಸತೀಶರ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡರೂ, ಪ್ರತಿ ಸಲ ಹೊಸದಾಗಿಯೇ ತೋರುತ್ತವೆ. ಇಲ್ಲಿನ ಕೆಲವು ಕವಿತೆಗಳು ಕಾಡನ್ನು ಮಾತ್ರ ಒಳಗೊಂಡರೆ, ಇನ್ನೂ ಕೆಲವು ಕವಿತೆಗಳು ಕಾಡು ಮತ್ತು ಕಾಂಕ್ರಿಟ್ ಕಲ್ಚರ್ ಅನ್ನು ಮುಖಾಮುಖಿಯಾಗಿಸುತ್ತವೆ. ಪ್ರಕೃತಿಯ ಸೌಂದರ್ಯಕ್ಕಿಂತ ಅದರ ಅನುಭವದ ಅನುಭೂತಿಯ ಕಡೆಗೆ ಕವಿಯ ಗಮನವಿದೆ. 'ಚಿಕ್ಕವನಿದ್ದಾಗ ಈ ಮರ ನನ್ನದಾಗಿತ್ತು' ಎಂದು ಶುರುವಾಗುವ 'ಮರ ಯಾರದು?' ರಚನೆಯು ಮರ ಬೆಳೆದಂತೆ ಕವಿತೆಯು ಬೆಳೆಯುತ್ತ 'ನನ್ನದಲ್ಲ' ಎನಿಸಿಬಿಡುತ್ತದೆ. ಪಂಚಭೂತಗಳು, ಚರಾಚರಗಳು ಸೇರಿಕೊಂಡು ಪರಿಸರವಾದಿ ಹೆನ್ರಿ ಡೆವಿಡ್ ಥರೋ ಹೇಳುವ 'ಅತೀಂದ್ರತೆ(ಟ್ರಾನ್ಸೆನ್ಡೆಂಟಾಲಿಸ್ಮ್)ಯನ್ನು ಮಂಡಿಸುತ್ತದೆ. 'ಎಲೆ' ಕವಿತೆಯಲ್ಲಿ ಎಲೆಯ ಜೀವನಕ್ರಮದ ವಿದ್ಯಮಾನಗಳನ್ನು ಮಾನವರ ಬದುಕಿನೊಟ್ಟಿಗೆ ಸಮೀಕರಿಸಲಾಗಿದೆ. ಮರದಿಂದ ಹಣ್ಣೆಲೆ ಅಗಲಿ ಭೂಮಿ ಸೇರುವುದನ್ನು 'ಹೆಣ್ಣು ತವರು ಸೇರುವುದ'ರ ಜೊತೆಗೆ ಸಮೀಕರಿಲಾಗಿದೆ.

'ಒಂದಾದರೂ ಬರಬಾರದೇ?' ದಲ್ಲಿ ಹಕ್ಕಿ ಮತ್ತು ಮೊಬೈಲ್‌ನ್ನು ಎದುರುಬದುರು ಮಾಡಲಾಗಿದೆ. ಈ ಎದುರಾಟದಲ್ಲಿ 'ಭೋಗ ಸಂಸ್ಕೃತಿ' ಎದುರು ಪ್ರಕೃತಿಯನ್ನು ಪರ್ಯಾಯವಾಗಿ ಸ್ಥಾಪಿಸಲಾಗಿದೆ. ಬರಡು ನೆಲ ಕಾಡಾಗಬೇಕು, ಬರದ ಹೃದಯಗಳು ಹಸಿರಾಗಬೇಕೆಂಬ ಅಭೀಷ್ಟೆಯು ಕವಿತೆಯ ಕೊನೆಯಲ್ಲಿ ಒಡಮೂಡುತ್ತದೆ. ಕಾಡು ಮತ್ತು ನಾಯಿಯ ಆಕೃತಿಗಳು ಕಾಣಿಸುವ 'ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ' ರಚನೆಯಲ್ಲಿ ನಾಯಿ ಎಂಬುದು ಕಾಡುಗಳ್ಳ ಮನುಷ್ಯರು ಎನ್ನುವುದನ್ನು ಧ್ವನಿಸುತ್ತದೆ. ಗರಗಸ, ಧಣಿ- ಎಂಬ ಪದಬಳಕೆಯು ಮೇಲ್ವರ್ಗದವರೇ ಆ ಕಾಡುಗಳ್ಳರೆಂಬುವುದನ್ನು ಕವಿತೆಯು ಬೊಟ್ಟುಮಾಡಿ ತೋರಿಸುತ್ತದೆ.

'ನಡುರಾತ್ರಿ ನಾಯಿ ಬೊಗಳುತ್ತದೆ ಎಂದರೆ
ಎಲ್ಲ ಕಳೆದುಕೊಂಡ ಕಾಡು ನಡೆದು ಬಂದಿರಬಹುದು ಕಂಬಗಾಲುಗಳಲ್ಲಿ
ಹೆಜ್ಜೆ ಎತ್ತಿಟ್ಟಲ್ಲೆಲ್ಲ ಲದ್ದಿಹಾಕಿ
ಹಿಂತಿರುಗುತ್ತಿರಬಹುದು ಯಾರೋ ಮರೆತು ಬಂದ ಗರಗಸವನ್ನು' (ಪು-೩೦)

ಕವಿತೆಯಲ್ಲಿ ವ್ಯಂಗ್ಯದ ಧ್ವನಿಯಿದೆ. 'ಝರಿ'ಯಲ್ಲಿ ನಿಸರ್ಗದ ಚಲನವಲನ, ವಿದ್ಯಮಾನ, ಸಂಗತಿಗಳು ಕವಿತೆಯ ಅವಯವಗಳಾಗಿವೆ. ಸಂಕಲನದ ಪರಿಪೂರ್ಣ ಕವಿತೆಯೆಂದರೆ 'ಕಾಡುಗಳಿದ್ದವು ಕವಿತೆಗಳಲ್ಲಿ'. ಪರೋಕ್ಷವಾಗಿ ಕಾಜೂರು ಸತೀಶರು ಈಗ ಕವಿತೆಗಳಲ್ಲಿ ಕಾಡು ಇಲ್ಲ ಎನ್ನುತ್ತಾರೆ. ಆದರೆ ಕವಿಗೆ ಕಾಡು ಮತ್ತು ಕವಿತೆಯು ಏಕದೇಹಿಗಳು. ಕೊನೆಯಲ್ಲಿ

'ಕಾಡುಗಳಿಲ್ಲ ಕವಿತೆಗಳಲ್ಲಿ
ಮೃಗಾಲಯವಿದೆ' (ಪು-೬೬)

ಎಂಬ ಸಾಲು ವರ್ತಮಾನ ಲೋಕವು ಮಾನವಕೇಂದ್ರಿತ (ಎಂತ್ರಪೋಸೆಂಟ್ರಿಕ್) ಆಗಿರುವುದನ್ನು ಹೇಳುತ್ತದೆ. ಜೊತೆಗೆ ಪರಿಸರ ಕೇಂದ್ರಿತ (ಇಕೋಸೆಂಟ್ರಿಕ್) ಆಗಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತದೆ. ಅದನ್ನು ಪರಿಸರವಾದಿ ವಿಮರ್ಶೆಯು 'ಪ್ರಕೃತೀಕರಣ' (ವೈಲ್ಡರ್‌ನೆಸ್) ಎಂದು ಕರೆಯುತ್ತದೆ. ಅಂತಹ ಕವಿತೆಗಳು ವರ್ಡ್ಸ್ ವರ್ಥ್, ಕುವೆಂಪುರವರ ನಿಸರ್ಗ ಕವಿತೆಗಳ ಮುಂದುವರಿಕೆಯೆನಿಸದೆ, ವಿಭಿನ್ನ ಮತ್ತು ವಿಶಿಷ್ಟ ಅಭಿವ್ಯಕ್ತಿಗಳೆನಿಸುತ್ತವೆ.

-2-
ಕವಿತೆಯ ಕ್ರಿಯಾತ್ಮಕ ಕುಶರಿಯ ಕುರಿತು, ಮತ್ತದರ ಅರ್ಥ-ಶಬ್ದಲೋಕಗಳ ಬಗೆಗೆ ಕವಿಗಳು 'ಕಾವ್ಯ' ಕಟ್ಟುವುದು ಸಹಜ. ಕಾವ್ಯ ಕ್ರಿಯೆಯನ್ನು ಹೊಸದಾಗಿ ಮಂಡಿಸುವ ಕ್ರಮದಿಂದ ಪ್ರಸ್ತುತ ಸಂಕಲನವು ಬೇರೆಯಾಗಿ ನಿಲ್ಲುವುದು. ಅಂತಹ ವಿಕ್ರಮವನ್ನು ಕಾಜೂರು ಸತೀಶರವರ ಕಾವ್ಯಗಳಲ್ಲಿ ಗಮನಿಸುತ್ತೇವೆ. ಹೊಸ ತಲೆಮಾರಿನಲ್ಲಿ ಸಖಿ, ಸಖನಾಗಿ ಕಾಣಿಸುವ ಕವಿತೆಗಳು; ಇಲ್ಲಿನ ರಚನೆಗಳಲ್ಲಿ ಕಾವ್ಯವು ಕಾಡಾಗಿ, ಮರವಾಗಿ, ಲೋಕವಾಗಿ ಮತ್ತು ಮನುಷ್ಯರಾಗಿಯೂ ಮೈದಾಳಿದೆ.

'ಕಾಡುಗವಿತೆ'ಯು ಆನೆಯ ಹಾದಿಯನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುತ್ತಾ ಇರುವೆಯ ದಾರಿಗಳನ್ನು ಕಾಣಿಸುತ್ತದೆ. 'ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ'ಯು ಶುದ್ಧ ಸಮಾಜವಾದಿ ನಿಲುವಿನದು. ಮಲದ ಗುಂಡಿ, ಚರಂಡಿಯನ್ನು ಸ್ವಚ್ಛಗೊಳಿಸುವವರ ಪ್ರತಿನಿಧಿ. ದುರಂತವೆಂದರೆ ಬಾಯಿಬಡುಕು ಮಾಧ್ಯಮಗಳ ಮತ್ತು ವೈಟ್‌ಕಾಲರ್ ಕವಿಗಳ ಕಣ್ಣಿಗೆ ಅಂತಹ ಕವಿತೆಯು ಕಾಣಿಸದು:

'ಮ್ಯಾನ್ಹೋಲಿನಲ್ಲ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ, ಟಿವಿಗೂ ಸಿಗಲಿಲ್ಲ.' (ಪು-90)

ಕವಿಯು 'ಕಾವ್ಯಮೀಮಾಂಸೆ'ಯಲ್ಲಿ 'ನೀರಿಲ್ಲದೆ ಸ್ನಾನ ಮುಗಿಸಿದೆ' ಎನ್ನುತ್ತಾನೆ. ಕವಿತೆಗಾಗಿ ಧ್ಯಾನಿಸುತ್ತ ಮೌನವಾಗಿ ಕುಳಿತವರೆದುರು ಹಲ್ಲಿಯು ಲೊಚಗುಟ್ಟಿ ಮೌನಭಂಗಗೊಳಿಸುತ್ತದೆ. ಅಪಶಕುನವೆಂದು ಭಾವಿಸುವ ಕವಿ ಮಹೋದರರು ನಮ್ಮ ನಡುವಿದ್ದಾರೆ. ಅಂತವರ ಕಾವ್ಯದ ಮಡಿವಂತಿಕೆಯನ್ನು 'ನೀರಿಲ್ಲದ ಸ್ನಾನ'ವೆಂದು ಕವಿಯು ವ್ಯಂಗ್ಯವಾಡುತ್ತಾನೆ. 'ಬಂಧಿ' ಕವಿತೆಯಲ್ಲಿ ಮಗು, ಹೂವು, ನೀರು, ಸಾವು- ಅನುಕ್ರಮವಾಗಿ ಕಾಣಿಸುತ್ತ ಜೀವ ಮತ್ತು ಜೀವನಗಳ ಒಂದಾಗಿಸುತ್ತದೆ. ಅದೇ ಕಾವ್ಯ ಬಂಧುರತೆ.

ನಿಸರ್ಗ, ಮರ, ಹಕ್ಕಿ, ನೆಲ, ಮುಗಿಲಿನ ಅನಂತ ರೂಪಗಳನ್ನು ಕವಿತೆಯ ಅವತಾರವಾಗಿಸುವ ಪ್ರಯೋಗಶೀಲತೆಯನ್ನು 'ಎಷ್ಟು ಸುಖಿ ನೀನು ಕವಿತೆಯೇ?' ದಲ್ಲಿ ಕಾಣುತ್ತೇವೆ. 'ಒಂದು ಕವಿತೆ ಹುಟ್ಟುವುದರಲ್ಲಿತ್ತು' ಕಾಡಿನ ಕುರಿತು ಕವಿತೆಗಳಿರುವಂತೆಯೇ, ಕವಿತೆಯೇ ಕಾಡಾಗುವ, ಜೀವನದ ಪಾಡಾಗುವ ಕ್ರಮವನ್ನು ನೋಡುತ್ತೇವೆ. ಕವಿತೆಯೆಂದರೆ ಏಕಾಂತ ಮತ್ತು ಲೋಕಾಂತ. ಆದರೆ ಅವೆರಡು ಸಾವಯವ ರೂಪಗಳಾದರೆ ಕವಿತೆಯ ರಚನೆಯು ಕಷ್ಟಸಾಧ್ಯ. ಈ ಕಾಲಕ್ಕೆ ಕಾವ್ಯ ವಿಘ್ನಗಳಾಗಿರುವ ಟಿ.ವಿ, ಮೊಬೈಲ್, ಬೈಕು, ಕತ್ತಿಗಳಂತಹ ನಾಗರಿಕ ಸಮಾಜದ ಸಾಧನಗಳನ್ನು ಕವಿತೆಯು ಪ್ರತಿರೋಧಿಸುತ್ತದೆ. ಕವಿತೆ ಆಗುವಿಕೆ ಮಾಗುವಿಕೆಯಲ್ಲಿನ ಪಲ್ಲಟಗಳನ್ನು ಕಾಜೂರು ಸತೀಶರವರು ಹಿಡಿದಿಡುವ ಯತ್ನವನ್ನು ಮಾಡಿದ್ದಾರೆ.


-3-
ಕಾವ್ಯವು ಸಮಾಜದ ಭಾಗವಾಗಿ ಕಾಣಿಸುವಿಕೆಯು ಕಡಿಮೆಯಾಗುತ್ತಿರುವ ವರ್ತಮಾನದಲ್ಲಿ ಕಾಡಿನಷ್ಟೇ ಗಾಢವಾಗಿ ಸಮಾಜವನ್ನು ಚಿತ್ರಿಸುವ ಮನೋಭಾವವು ಕಾಜೂರು ಸತೀಶರ ಕಾವ್ಯದಲ್ಲಿದೆ. ಜಾತಿ ಮತ್ತು ಲಿಂಗನಿಷ್ಠ ಸಮಾಜಕ್ಕಿಂತ ವರ್ಗನಿಷ್ಠ ಸಮಾಜದ ರಚನೆಯನ್ನು ಮುಖಾಮುಖಿಯಾಗುತ್ತಾರೆ. 'ಗುಡಿಸಲು'ದಲ್ಲಿ ಬಡತನದ, ಹಸಿವಿನ ಸಾಂಕೇತಿಕತೆಗಿಂತ ಅದೊಂದು ತಪ್ತ ಧ್ಯಾನಸ್ಥ ಹೃದಯವಂತಿಕೆಯ ರೂಪ ಮತ್ತು ರೂಪಕವಾಗಿದೆ. ಒಳಗೊಳ್ಳುವಿಕೆ ಮತ್ತು ಮಮತೆಯ ಒಡಲಾಗಿ ಒಡಮೂಡಿದೆ.

'ಗುಡಿಸಲಿನ ಹೊಟ್ಟೆಗೆ ಒಂದು ಮಗು ಗೇರುಬೀಜದ ಹಾಗೆ ಅಂಟಿಕೊಂಡು ' (೨೧)

ಈ ಕವಿತೆಯ ಆರಂಭವು ಸಾಮಾನ್ಯವಾಗಿದ್ದರೂ ಅಂತಿಮವಾಗಿ ಅದು ಪಡೆದುಕೊಳ್ಳುವ ತಿರುವು ಕವಿತೆಗೆ ಚೈತನ್ಯವನ್ನು ಒದಗಿಸುತ್ತವೆ. 'ನನ್ನೊಳಗೆ ಇಳಿಯುವಾಗ'ದಲ್ಲಿ ಆಗಂತುಕರ ಆಹ್ವಾನವಿದೆ. ಅದು ವ್ಯಂಗ್ಯವಾಗಿರುವ ಕಾರಣದಿಂದ ಪರಿಣಾಮಕಾರಿ ಅನಿಸುತ್ತದೆ. ಇಲ್ಲಿ ಹೃದಯಹೀನರನ್ನು ಹೃದಯಕ್ಕೆ ಕರೆಯುವ ಬಗೆಯಿಂದಲೇ ಕವಿತೆ ಗೆಲ್ಲುತ್ತದೆ.

'ಕರೆಗಂಟೆ ಇಲ್ಲದ ಮನೆ ನನ್ನದು
ನನ್ನ ಪಕ್ಕೆಲುಬುಗಳ ತಟ್ಟಿದರೆ ಸಾಕು
ಬಾಗಿಲು ತೆರೆಯುವೆ' (ಪು-೨೮)

ಕವಿಯು ಮನೆಯನ್ನು ತನ್ನ ದೇಹಕ್ಕೆ, ಕಾಡಿಗೆ ಮತ್ತು ಮಣ್ಣಿನ ಜೊತೆಗೆ ಸಮೀಕರಿಸುತ್ತಾನೆ. ಹಾಗಾಗಿ ಏಕತ್ವದಿಂದ ಶುರುವಾಗುವ ಕವಿತೆಯು ಬಹುತ್ವದೆಡೆಗೆ ಜಿಗಿಯುತ್ತದೆ. ಅದನ್ನು ನಾವು ಕೊನೆಯ ಸಾಲು: 'ಮಣ್ಣೇ ನನ್ನ ಮನೆ'ಯು ಸರಿಯಾಗಿ ಧ್ವನಿಸುತ್ತದೆ. ಕಾಡಿನ ಸಂಕೀರ್ಣತೆ ಮತ್ತು ಸೊಬಗುಗಳು ಕವಿತೆಯಲ್ಲಿವೆ. ವೈಯಕ್ತಿಕತೆಯಿಂದ ಆರಂಭವಾಗಿ ಸಾರ್ವತ್ರಿಕತೆಯಡೆಗೆ ಸಾಗುತ್ತದೆ. ಹೀಗೆ ಕವಿತೆಯಲ್ಲಿ ಭಾವ ಮತ್ತು ಅನುಭಾವದ ಚಲನೆಯನ್ನು 'ಎದೆಯ ದನಿಯಿದು', 'ಶೃಂಗಾರ ಕಾವ್ಯವಲ್ಲ' ರಚನೆಯಲ್ಲೂ ಗಮನಿಸುತ್ತೇವೆ. ನನ್ನ(ಗಂಡು), ನಿನ್ನ(ಹೆಣ್ಣು) ಎನ್ನುವ ಸರ್ವನಾಮಗಳಿಗೆ ನಿರ್ದಿಷ್ಟತೆಯಿದೆ.

'ನನ್ನ ಎದೆಯ ದಾರಿಗಳು ಬೃಹತ್ ವಾಹನಗಳು ಸಂಚರಿಸಿ ದುರಸ್ತಿಯಲ್ಲಿವೆ
ನಮ್ಮಿಬ್ಬರ ನಡುವಿನ ಅವರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ' (ಪು-೩೯)

ಇಲ್ಲಿ ಸಂಗಮಿಸಿರುವ ಪ್ರೇಮಿಗಳು ತಮ್ಮ 'ಖಾಸಗಿ ರಸನಿಮಿಷಗಳ' ನಿವೇದನೆ, ವೇದನೆಯಲ್ಲಿ ತಲ್ಲೀನವಾಗಲಾರರು. ಅವರು ಶುದ್ಧ ಸಾಮಾಜಿಕರು ಮತ್ತು ಸಮಾಜವಾದಿಗಳು ಕೂಡ. ಮರ್ಯಾದೆಗೇಡು ಹತ್ಯೆಗೈವ ಜನರಿಗೆ ಗೂಡು ಕಟ್ಟಿ, ಮೊಟ್ಟೆಗೆ ಕಾವು ಕೊಟ್ಟು, ಅವರು ಕೋಗಿಲೆ ಮರಿಯಾಗಿ ಹೊರಬಂದು ಕುಹೂ ಕುಹೂ ಹಾಡಿಕೊಳ್ಳಲಿ ಎನ್ನುತ್ತಾನೆ ಕವಿ. ಈ ಸಂಕಲನದ ಕೆಲವು ಕವಿತೆಗಳಲ್ಲಿ ಆಹ್ವಾನದ ಕರೆ, ಹಾರೈಕೆಯ ಧಾಟಿಯಿದೆ. ಅದು ವ್ಯಂಗ್ಯ, ಮೊನಚಾದ ಶೈಲಿಯಲ್ಲಿ ಇರುವುದರಿಂದ ಕವಿತೆಗಳು ಧ್ವನಿಪೂರ್ಣ ಅನಿಸುತ್ತವೆ. 'ಅಪ್ಪ ಮತ್ತು ಮಳೆ'ಯಲ್ಲೂ ನೀರಿದೆ, ನೆರೆಯಿದೆ. ಆದರೆ ಕುಡಿಯುವ ನೀರಿಲ್ಲ ಎಂಬಲ್ಲಿ ಅದೇ ವ್ಯಂಗ್ಯದ ವಿಕ್ರಮವಿದೆ. 'ಬುಡ್ಡಿ ದೀಪದ ಬುಡ' ರಚನೆಯು ಹಸಿವು ಮತ್ತು ಅದನ್ನು ಅರಸಿ ಬರುವವರ ಆಹುತಿಯನ್ನು ದಾಖಲಿಸುತ್ತದೆ. ಬೆಳಕನ್ನು ಅರಸಿ ಬರುವ ಕೀಟಗಳು, ಅದರಿಂದಲೇ ಕೊನೆಯಾಗುವಂತೆ ಹಸಿದವರೇ ಹಸಿವಿಗೆ ಆಹಾರವಾಗುವ ಸಾಮಾಜಿಕ ದುರಂತಕ್ಕೆ ಕನ್ನಡಿ ಹಿಡಿಯುತ್ತದೆ. ಹಸಿವು-ಕೀಟ, ಬೆಳಕು-ಭ್ರಮೆಗಳನ್ನು ಸಾಮಾಜೀಕರಣಗೊಳಿಸಲಾಗಿದೆ. ಪರದೆ, ಹೋಟೆಲು, ಕ್ಷಮಿಸು- ಕವಿತೆಗಳು ವೈಯಕ್ತಿಕ ಅಥವಾ ಸ್ವ-ದ ನಿಲುವುಗಳನ್ನು ಸಾಮಾಜಿಕ ನೆಲೆಯಲ್ಲಿಟ್ಟು ಮಂಡಿಸುತ್ತವೆ.

-4-
ಸಂಕಲನದಲ್ಲಿ ಕೆಲವಷ್ಟು ಸಾವಿನ ಬಗೆಗಿನ ಕವಿತೆಗಳಿವೆ. ಇಲ್ಲಿ ಸಾವನ್ನು ಸುಖವಾಗಿ, ಮರುಹುಟ್ಟಾಗಿ, ಬಿಡುಗಡೆಯ ದಾರಿಯಾಗಿ ನೋಡಲಾಗಿದೆ. ಪರಿಸರದ ಭಾಗವಾಗಿ ಬರೆಯುವ ಕಾಜೂರು ಸತೀಶರಿಗೆ 'ಸಾವು ಸಾಮಾಜಿಕತೆಗಿಂತ ಪ್ರಾಕೃತಿಕ ಸ್ಥಿತಿಯಾಗಿ ಕಂಡಿದ್ದೇ ಹೆಚ್ಚು. ಹಣ್ಣಾದ ಎಲೆಯು ಮರದಿಂದ ಉದುರಿ, ಗಾಳಿಯಲ್ಲಿ ತೇಲಿ ತೇಲಿ ಮಣ್ಣಿಗೆ ಬಿದ್ದು ಮಣ್ಣಾಗುವುದನ್ನು ಕವಿಯು 'ಸಾಯ್ವ ಸುಖ' ಎಂದು ವ್ಯಾಖ್ಯಾನಿಸುತ್ತಾನೆ. ಮನುಷ್ಯರ ಕೊನೆಯ ಪಯಣದ ಸಾಂಕೇತಿಕತೆಯನ್ನು 'ಕುರ್ಚಿ'ಯು ನಿವೇದಿಸುತ್ತದೆ. ಅದರ ಎರಡು ಕಾಲುಗಳು ಮನುಷ್ಯರನ್ನು, ನಾಲ್ಕು ಕಾಲುಗಳು ಪ್ರಾಣಿಯನ್ನು ಹೋಲುತ್ತವೆ. ಕವಿತೆಯ ಮೊದಲರ್ಧ ಭಾಗವು ಮನುಷ್ಯ ಮತ್ತು ಕುರ್ಚಿಯನ್ನು ವಿವರಿಸುವಂತೆ ಕಂಡರೂ, ಕೊನೆಯಲ್ಲಿನ 'ನಾಲ್ಕೇ ನಾಲ್ಕು ಕಾಲು/ ಮುಂದೆ ಇಬ್ಬರು, ಹಿಂದೆ ಇಬ್ಬರು' ಎಂಬ ಸಾಲು ಹೊಸ ತಿರುವನ್ನು ಕೊಡುತ್ತದೆ.

'ನನ್ನ ಶವಸಂಸ್ಕಾರದ ದಿನ'ವು ಕವಿಗೆ ಬದುಕಿನಲ್ಲಿ ಹೇಗೋ ಹಾಗೆ ಸಾವಿನಲ್ಲೂ 'ಪ್ರಕೃತಿ'ಯ ಸಾಂಗತ್ಯವನ್ನು ಬಯಸುತ್ತಾನೆ. ಹುಟ್ಟು, ಯೌವನ, ಜೀವನ, ಸಾವು: ಈ ಎಲ್ಲೆಡೆಯಲ್ಲೂ ಕವಿಗೆ ಧ್ಯಾನವೊಂದೇ: ಕಾಡು. ಇಲ್ಲಿ ಸಾವು, ವಿಷಾದತೆ, ಭಯ-ಆತಂಕವಾಗಿ ಕಾಣಿಸದೇ, ಅದೊಂದು ನಿಸರ್ಗದ ಸಹಜ ವಿದ್ಯಮಾನವಾಗಿ ತೋರುತ್ತದೆ. 'ನಾನು ಸತ್ತ ಮೇಲೆ' ಎಂಬ ಗಜಲ್ ವ್ಯಕ್ತಿನಿರಪೇಕ್ಷವಾಗಿ ಸಾವನ್ನು ಮಂಡಿಸುತ್ತದೆ.

'ಯಾರು ರಸ್ತೆ ದಾಟಿಸುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಆಸ್ಪತ್ರೆಗೊಯ್ಯುತ್ತಾರೆ ಅವುಗಳನ್ನು ನಾನು ಸತ್ತ ಮೇಲೆ' (ಪು-೬೭)

ಮನುಷ್ಯರ ಜೀವನವು ಹಲವು ಅವಸ್ಥಾಂತರ, ಸಾಮಾಜಿಕ ನಡುವಳಿಕೆಯನ್ನು ದಾಟಿಕೊಂಡು ಸಾವನ್ನು ಸೇರುತ್ತದೆ. ಕವಿ ಸಾವಿನ ನಂತರ ಕವಿತೆಯು ಅನಾಥವಾಗುತ್ತದೆ, ಅಸಹಾಯಕವಾಗುತ್ತದೆ. ತನ್ನ ಗೈರಿನಲ್ಲಿ ಕವಿತೆಯನ್ನು ಕೈಹಿಡಿದು ಮುನ್ನಡಿಸುವವರಾರು? ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಈ ಕವಿತೆಯು 'ಲೇಖಕನ ಸಾವು' (ಡೆತ್ ಆಫ್ ದಿ ಆಥರ್) ಎನ್ನುವ ರೋಲಾನ್ ಬಾರ್ತೃ ಹೇಳಿಕೆಯನ್ನು ಒಡೆದುಹಾಕುತ್ತದೆ. ಇಲ್ಲಿ ಕವಿತೆಯು ಕವಿಯಂತೆ ಒಂದು ಜೀವ. ತಬ್ಬಲಿಯಾದ ಮಗುವಿಗೆ ಮರುಗುವಂತೆ ಹಳಹಳಿಸುತ್ತಾನೆ. 'ಶವದ ಮನೆ ಮತ್ತು ನೊಣ' ಕವಿತೆಯಲ್ಲಿ ಶವದಿಂದ ದೂರವಾಗುವ ಮಾನವರು ಒಂದೆಡೆಗೆ, ಶವದ ಮೇಲೆ ಕೂತು ಮುತ್ತಿಡುವ ನ
ನೊಣ ಇನ್ನೊಂದೆಡಗೆ ಇದೆ. ಈ ಕವಿತೆಯು ಕವಿಯ ಸೂಕ್ಷ್ಮ ಲೋಕಗ್ರಹಿಕೆಗೆ ನಿಶಾನೆಯನ್ನು ಹಿಡಿದಂತಿದೆ. ಸಾವು ಹುಟ್ಟಿನಂತೆಯೇ ಒಂದು ಸಂಭ್ರಮದ ಸಂಗತಿಯಾಗಿ ಭಾವಿಸಲಾಗಿದೆ.

'ಮತ್ತೆ ಮತ್ತೆ ಹಸಿರು'(ಪು-೧೯), 'ನೋಡಲ್ಲಿ, ನೋಡೀ, ನೋಡು' (-೪೪), 'ಒಂಟೀ ಮರ ನಿಂತೂ ನಿಂತೂ (೫೬), 'ಕಾದೂ ಕಾದೂ ದಣಿದೆ' (-೫೮)- ಇಂತಹ ದ್ವಿರುಕ್ತಿಗಳು ಕವಿತೆಯ ಮೈಮೇಲೆ ಅಲ್ಲಲ್ಲಿ ಕಾಣಿಸುತ್ತವೆ. ಹೀಗೆ ಭಾಷೆಯನ್ನು ಬಳಸುವಲ್ಲಿ ಓದುಗರಿಗೆ ಸ್ಪಷ್ಟಪಡಿಸಲು, ವಿಷಯವನ್ನು ಒತ್ತುಕೊಟ್ಟು ಹೇಳುವ ಆಶಯವಿರುವಂತೆ ತೋರುತ್ತದೆ. ಇಡೀ ಸಂಕಲನದ ಕಾವ್ಯಭಾಷೆ, ವಸ್ತುವಿಷಯ, ಸಂವೇದನೆಯ ನಿವೇದನಾ ಕ್ರಮವು ಹೊಸತನದಿಂದ ಕೂಡಿದೆ. ಒಂದರ್ಥದಲ್ಲಿ ನಿರಾಭರಣ ಸುಂದರಿಯೇ ಸರಿ. ಇಲ್ಲಿನ ಕೆಲವು ಕವಿತೆಗಳು ಹೂ ಬಿಡದ, ಹಣ್ಣು ಕೊಡದ ಹಸಿರಾದ ಮರಗಳಂತಿವೆ. ಆ ಹಸಿರು ಕಾವ್ಯದಲ್ಲಿ (ಗ್ರಿನ್ ಪೊಯಟ್ರಿ) ಕಾಣಬಹುದಾದ ಮಿತಿಗಳಿಗೆ ಹೊದಿಸಿದ ಮುಂಜಾವಿನ ಮಂಜಿನಂತಿದೆ. ವಾಚ್ಯ ಮತ್ತು ಗದ್ಯಮಯ ವಿವರಣೆ, ರಾಜಕಾರಣಿಗಳ ಭಾಷಣ ಶೈಲಿ, ಪ್ರೇಮಸಂಕಲ್ಪದ ವಿಷಾದಮಯ ಹಳಹಳಿಕೆ, ಹೇಳಿಕೆ(ಸ್ಟೇಟ್‌ಮೆಂಟ್) ರೀತಿಯ ನಿರೂಪಣೆಯಿಂದ ಈ ಕವಿತೆಗಳು ಹೊರತಾಗಿವೆ. ಅದಕ್ಕೆ ಮುಖ್ಯ ಕಾರಣ 'ಹಚ್ಚ ಹಸಿರಿನ ಹೃದಯದ ಮನುಷ್ಯರ ನೋಡಬಹುದಿತ್ತು' ಎಂಬ ದಿವ್ಯ ಹಂಬಲವು ಕವಿಯದು, ಕವಿತೆಯದು ಆಗಿರುವುದು.
*


✍️ ಡಾ. ಮಹಾಂತೇಶ ಪಾಟೀಲ


Friday, September 6, 2024

ಕಣ್ಣಲ್ಲಿಳಿದ ಮಳೆಹನಿಯ ಕುರಿತು ರಾಜು ಸರ್

ಎಲ್ಲಾ ಕವಿತೆಗಳೂ ಹೀಗೆ. ತಮ್ಮ ಪಾಡಿಗೆ ತಾವೇ ಹಾಡಿಕೊಳ್ಳುಬಹುದಾದ, ಏಕಾಂತಕ್ಕೆ ತನುಕೊಟ್ಟಂತೆ.
ಬರೆದವರೇ ಹೇಳುವಂತೆ:
ಅಳುವವರ ಅಳುವಲ್ಲಿ ಹರಿದು ಕಡಲ ಸೇರುವುದಾದರೆ ಎಷ್ಟು ಚೆಂದ ಎಷ್ಟು ಚೆಂದ

ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿನ ಕವಿತೆಗಳೆಷ್ಟು ಕಾಡಬಲ್ಲವೋ,ಕವಿಯೂ ಹಾಗೆ ಕಾಡಬಲ್ಲ. ಅದೆಷ್ಟು ಕವಿತೆಯ ವ್ಯಾವೋಹ ಇರಬಹುದು, ಅದೆಷ್ಟು ವ್ಯಾಪಕವಾಗಿ ಅವರನ್ನು ವ್ಯಾಪಿಸಿರಬಹುದು. ಪದ ,ಮೌನ ,ಹುಡುಕಾಟ, ಸುತ್ತಾಟ ,ಕೋಪ ಕವಿತೆಯೊಳಗೆ ನಾನು ಜೀವಿಸಿದ್ದೆನೆ ಎಂದು ಹೇಳುವಷ್ಟು ಮಾತುಗಾರ. ಇವೆಲ್ಲವೂ ಸತೀಶ್ ರನ್ನು ಕವಿತೆಗಳೊಟ್ಟಿಗೆ 'ಕವಿ'ಯನ್ನೂ ನಮಗೆ ಪರಿಚಯಿಸುತ್ತವೆ. ಎಲ್ಲಾ ಕವಿತೆಗಳು ಹೊಸ ಜಾಯಮಾನಕ್ಕೆ ತಕ್ಕ ಎನ್ನಬಹುದಾದ ಅನೂಹ್ಯ ಬೆಳವಣಿಗೆಯಾಗಿದೆ. ಹೊಸ ರೀತಿಯ ಕವಿತೆಗಳನ್ನು ಓದಿಸಿದ ಸಂಗಾತದವರಿಗೂ, ಹೊಸ ಪುಸ್ತಕವನ್ನು ಪದೇ ಪದೇ ಕೊಟ್ಟು ಓದಿಸುವ Krishna Chengadi ಅಣ್ಣನವರಿಗೂ ರಾಶಿ ಧನ್ಯವಾದಗಳನ್ನಷ್ಟೇ ನಾನಿಲ್ಲಿ ಹೇಳಬಹುದು .

ಯಾರ ತಿಂದು ಬದುಕುತ್ತವೆ ನನ್ನ ಕವಿತೆಗಳು ನಾನು ಸತ್ತ ಮೇಲೆ
ಯಾರ ಕಣ್ಣೀರ ಪೇಯ ಅವುಗಳಿಗೆ ನಾನು ಸತ್ತ ಮೇಲೆ
*


✍️ ರಾಜು

Saturday, April 6, 2024

'ಕಣ್ಣಲ್ಲಿಳಿದ ಮಳೆ ಹನಿ': ಪ್ರಕೃತಿ ಮೀಮಾಂಸೆ ಮತ್ತು ಆದಿಮ ಜಗತ್ತು: ಮಧು ಬಿರಾದಾರ


'ಲೋಕ ಸಂಕಟಕ್ಕೆ ಪರಿಹಾರ ಪ್ರಕೃತಿಯಲ್ಲಿಯೇ ಇದೆ. ಆ ಕಾರಣದಿಂದಲೇ ಪ್ರಕೃತಿಗೆ ಕಿವಿಗೊಡಬೇಕು. ಹಗಲು ರಾತ್ರಿ ಬದಲಾದಂತೆ ಕಾಡಿನ ನೆರಳು ಚಲಿಸುವಂತೆ ಮನುಷ್ಯ ಚಲಿಸಬೇಕಾಗಿದೆ. ಅಂತಹ ಸಂವೇದನೆ ಇಲ್ಲಿಯ ಕವಿತೆಯಲ್ಲಿ ಕಾಣಬಹುದು' ಎನ್ನುತ್ತಾರೆ ಕವಿ ಮಧು ಬಿರಾದಾರ ಅವರು ಕಾಜೂರು ಸತೀಶ ಅವರ ಕಣ್ಣಲ್ಲಿಳಿದ ಮಳೆಹನಿ ಸಂಕಲನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.


ಕಣ್ಣಲ್ಲಿಳಿದ ಮಳೆಹನಿ’ ದಟ್ಟವಾದ ಕಾಡಿನ ಅನುಭವವನ್ನು ಕಟ್ಟಿಕೊಡುವ ಸಂಕಲನ. ಇಲ್ಲಿಯ ಪ್ರಾಣಿ, ಪಕ್ಷಿ ನಿಸರ್ಗ ಸಹಜವಾಗಿ ಬದುಕುತ್ತವೆ. ಬದುಕನ್ನು ಸಂಭ್ರಮಿಸುತ್ತವೆ. ಕವಿಯೂ ಕಾಡಿನ ಭಾಗವಾದಂತೆ ಕಾಣುವನು. ದಟ್ಟವಾದ ಕಾಡು ಕ್ರಮೇಣ ಮೃಗಾಲಯವಾಗುವುದರ ಕುರಿತು ಕವಿಗೆ ಆತಂಕವಿದೆ. ಇಲ್ಲಿಯ ಸಂವೇದನೆಯ ಸೂಕ್ಷ್ಮತೆಯನ್ನು ಗಮನಿಸಬೇಕು. ಕಾಡಿನ ಮರ್ಮರವನ್ನು ಗ್ರಹಿಸಿಕೊಂಡ ಮನಸ್ಸಿಗೆ ಕಾಡೇ ಇಲ್ಲವಾಗುವ ಸಂದರ್ಭ ಬಂದಾಗ ಆಗುವ ಆಘಾತ ಭಯಂಕರವಾದದ್ದು. ಇದು ಕಾಡಿನ ಕಥೆಯಾದರೆ ನಾಡಿನ ವ್ಯಥೆ ಇನ್ನೊಂದು ತರಹವಿದೆ. ಹಳ್ಳಿ ಕೇಂದ್ರಿತ ಜೀವನ ಕ್ರಮವೆಂದರೆ ಅದು ನಿಸರ್ಗ ಜನ್ಯ ಬದುಕಿನಂತೆ. ಭೂಮಿಯ ಮಡಿಲಲ್ಲಿ ಉಸಿರಾಡುವ ಇಲ್ಲಿಯ ಬದುಕು ಕ್ರಮೇಣ ಆಧುನಿಕ ನಗರ ಕೇಂದ್ರಿತ ವಾಸನೆಗೆ ಬಲಿಯಾಗಿ ನರಳುತ್ತದೆ. ವಿಘಟನೆಯ ಬೀಜ ಬಿದ್ದು ಹೆಮ್ಮರವಾಗುವುದರ ಬಗ್ಗೆ ಕವಿ ಕಳವಳ ವ್ಯಕ್ತಪಡಿಸುವನು. ಇಲ್ಲಿಯ ಕವಿತೆ ಲೋಕದ ನಗಾರಿ ನುಡಿಸಿದರೂ ಅದು ಲೋಕಕ್ಕೆ ಸಂಬಂಧಿಸಿದ ಪ್ರತಿಮೆಗಳ ಮೂಲಕವಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಕಾಡಿನ ಪ್ರತಿಮೆಗಳನ್ನು ಬಳಸುವ ಕವಿ ಮಿತ ಭಾಷಿಕನಂತೆ ಕಾಣುವನು. ಎಲ್ಲಿಯೂ ಅಬ್ಬರ ವಾಚಾಳಿತನದ ವ್ಯಸನ ಕಾಣಲಾರದು. ತಾನು ಬದುಕುತ್ತಿರುವ ಕಾಲಮಾನದ ಅಬ್ಬರದ ಪ್ರವಾಹದಿಂದ ದೂರವಿದ್ದು, ಭಿನ್ನವಾದ ದಾರಿಯಲ್ಲಿ ಕ್ರಮಿಸುತ್ತಿರುವ ಕವಿಯೊಬ್ಬನ ಕವಿತೆಯಂತಿವೆ.


ಪ್ರಕೃತಿಯೊಂದಿಗೆ ಸಂವಾದಿಸುವ ಕವಿತೆ ಈ ಲೋಕದ ವಿದ್ಯಮಾನವನ್ನು ಅರ್ಥಪೂರ್ಣವಾಗಿ ಮತ್ತು ಭಿನ್ನವಾಗಿ ತೆರೆದಿಟ್ಟಂತೆ ಇಲ್ಲಿಯ ಕವಿತೆಗಳು ನೇರವಾಗಿ ಸಮಾಜದೊಂದಿಗೆ ಅಥವಾ ಲೋಕದೊಂದಿಗೆ ಸಂವಾದಿಸುವುದಿಲ್ಲ. ಆ ಚಪಲವೂ ಇಲ್ಲ. ಲೋಕ ಸಂಕಟಗಳನ್ನು ಮೈಮೇಲೆ ಹೊತ್ತು ಕಿರುಚಾಡುವುದಿಲ್ಲ. ಕವಿತೆಯ ನಡಿಗೆ ಪ್ರಕೃತಿಯ ಚಲನೆಯಂತಿದೆ. ಇಲ್ಲಿಯ ತಿಳಿವಳಿಕೆ, ಗ್ರಹಿಕೆಗಳು ಪೂರ್ವ ನಿರ್ಧರಿತವಲ್ಲ. ಪ್ರಕೃತಿಯೊಂದಿಗೆ ಮುಗ್ಧ ಮಗುವಿನ ಕೌತುಕದ ಮಾತಿನಂತೆ ಎದೆ ಹಾಲು ಕುಡಿಯುವ ಮಗು ತಾಯಿಯೊಂದಿಗೆ ಮಾತಿಗಿಳಿದಂತಿದೆ. ಇದು ತಾಯಿ ಮಗುವಿನ ನಡುವಿನ ಸಂಭಾಷಣೆಯಾದರೂ ಅದು ಲೋಕಕ್ಕೆ ಸಂಬಂಧಿಸಿದ್ದೇ ಹೊರತು (ತಾಯಿ-ಮಗು) ಆ ಇಬ್ಬರಿಗೆ ಸಂಬಂಧಿಸಿದಂತೆ ಭಾವಿಸಬೇಕಿಲ್ಲ. ಕವಿತೆಯಲ್ಲಿ ಗಟ್ಟಿಯಾದ ತಾತ್ವಿಕತೆ ರೂಪಗೊಳ್ಳುವುದು ಎಂದರೆ ಬೀಜದೊಳಗಿನ ಮರದಂತೆ. ಕೆಸರಿನ ಒಡಲಿಂದ ಎದ್ದು ಬರುವುದಕ್ಕೂ ಮೈಗೆ ಕೆಸರು ಲೇಪಿಸಿಕೊಂಡಿರುವುದಕ್ಕೂ ವ್ಯತ್ಯಾಸವಿದೆ. ಮೈಗೆ ಅಂಟಿಸಿಕೊಂಡಿರುವ ಕೆಸರಿನ ಪಸೆ ಆರಿದಂತೆ ಉದುರಿ ಬೀಳುತ್ತದೆ. ಕೆಸರಿನ ಒಡಲಿಂದ ಜೀವ ಪಡೆದ ಮೊಳಕೆಗೆ ಕೆಸರೇ ಜೀವ ದ್ರವ್ಯವಾಗಿರುತ್ತದೆ.


ಪ್ರಸ್ತುತ ಸಮಾಜ ವಿಘಟನೆ ಮತ್ತು ಕಲುಷಿತಗೊಳ್ಳುತ್ತಿರುವ ಕಾಲದಲ್ಲಿ ಪ್ರಕೃತಿಯೊಂದಿಗೆ ಸಂವಾದಿಸುವುದೆಂದರೆ ಅಂತರಂಗದೊಂದಿಗೆ ಮಾತಿಗಿಳಿದಂತೆ. ಲೋಕ ಸಂಕಟಕ್ಕೆ ಪರಿಹಾರ ಪ್ರಕೃತಿಯಲ್ಲಿಯೇ ಇದೆ. ಆ ಕಾರಣದಿಂದಲೇ ಪ್ರಕೃತಿಗೆ ಕಿವಿಗೊಡಬೇಕು. ಹಗಲು ರಾತ್ರಿ ಬದಲಾದಂತೆ ಕಾಡಿನ ನೆರಳು ಚಲಿಸುವಂತೆ ಮನುಷ್ಯ ಚಲಿಸಬೇಕಾಗಿದೆ. ಅಂತಹ ಸಂವೇದನೆ ಇಲ್ಲಿಯ ಕವಿತೆಯಲ್ಲಿ ಕಾಣಬಹುದು.

ನಾಗರಿಕತೆಯ ಇತಿಹಾಸ, ನಾಗರಿಕ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಒಂದು ಕಾಲಮಾನದ ಒಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವಂತಾಗಬಾರದು. ಮನುಷ್ಯನ ಕಥೆ ಅಥವಾ ಚರಿತ್ರೆಯೆಂದರೆ ಅದು ನೆನಪು ತಾನೆ? ಅಕ್ಷರ ಮನುಷ್ಯ ಜನ್ಮದ ಕೋಶ. (ನೆನಪಿನಕೋಶ, ಜ್ಞಾಪಕ ಕೋಶ) ಲಕ್ಷಾಂತರ ವರ್ಷಗಳ ಹಿಂದೆ ಸಂವಹನದ ಭಾಷೆಯಂತೆ ಲಿಪಿಯು ಮುಖ್ಯವಾಯಿತು. ಅಕ್ಷರಗಳ ಮೂಲಕ ಮನುಷ್ಯ ತನ್ನ ಭಾವ ಕೋಶಗಳನ್ನು ಕುತೂಹಲ, ಅಚ್ಚರಿ, ವಿಸ್ಮಯಗೊಳಿಸುವ ಸಂಗತಿಗಳನ್ನು ದಾಖಲಿಸುತ್ತ ಬಂದ. ಒಂದು ವೇಳೆ ಹಾಗೆ ಆಗದೆ ಹೋಗಿದ್ದರೆ? ಇವತ್ತಿನ ನಾವುಗಳು ಹೀಗೆ ಇರಲು ಸಾಧ್ಯವಿತ್ತೆ? ‘ಎಲ್ಲಿ’? ಕವಿತೆಯ ತಾತ್ಪರ್ಯವಿದು. ‘ಎಲ್ಲಿ’ ಅರ್ಥವಾದರೆ ಆದಿಮ ಜಗತ್ತು ಮತ್ತು ಸಮಕಾಲೀನ ಜಗತ್ತಿನ ಸ್ಥಾನ ಸ್ಪಷ್ಟವಾಗುತ್ತದೆ.


ಇಲ್ಲಿಯ ಪ್ರತಿಮೆಗಳು ಆದಿಮಾನವನ ಕಾಡಿನಿಂದ ಕಾಂಕ್ರೀಟ್ ಕಾಡಿನ ಜೆಸಿಬಿವರೆಗೆ ಹಾದುಬರುತ್ತವೆ. ಪ್ರಕೃತಿಯ ಚಲನೆಗೆ ಅನುಗುಣವಾಗಿ ನಾಗರಿಕತೆ ಬೆಳೆಯುತ ಬಂದಿದೆ. ಆದರೆ ಅದರೊಳಗೆ ಸೇರಿರುವ ಮೃಗತ್ವ ಅಥವಾ ರಾಕ್ಷಸಿತನ ಒಟ್ಟು ಚಲನೆಯ ದಿಕ್ಕನ್ನೇ ಬದಲಿಸುತ್ತಿದೆ. ಅದು ಮುಟ್ಟುವ ಗಮ್ಯದಿಂದ ಆಗುವ ಅನಾಹುತ ಪ್ರಾಯಶಃ ಯಾರಿಗೂ ಅರಿವಿಗೆ ಬಾರದಿಲ್ಲ. ವಿಚಿತ್ರವೆಂದರೆ ನೆರಳ ಮೋಹ ಪ್ರೇತವಾಗಿ ಕಾಡಿದಂತಿದೆ. ಬಿಡಿಸಿದಷ್ಟು ಗುಂಜಾಗುವುದನ್ನು ಕವಿತೆ ಸರಳವಾಗಿ ಮನವರಿಕೆ ಮಾಡಿಸುತ್ತದೆ.

ಒಂದೊಮ್ಮೆ ನನಗೆ ತುಂಬು ಮರೆವಿರುವುದಾದರೆ
ಮರಗಳು ಮತ್ತು ಮನೆಗಳು
ಹೀಗೆ ಹೇಳಿಕೊಳ್ಳಲು ಎಲ್ಲಿರುತ್ತಿದ್ದವು ಈ ಕಾಳರಾತ್ರಿಯಲ್ಲಿ”?(ಪು15)

ಕಾಡಿನ ಮಧ್ಯ ಅಲೆಮಾರಿ ಬೇಟೆಗಾರನಾಗಿದ್ದ ಮನುಷ್ಯ, ಆಧುನಿಕತೆಗೆ ತೆರೆದುಕೊಂಡಂತೆ ವಿನಾಶದ ದಾರಿಯನ್ನೇ ತುಳಿದ. ಆಧುನಿಕತೆ ಎಲ್ಲ ಕಾಲಕ್ಕೂ ಸಂಭ್ರಮದಿಂದಲೇ ಸ್ವಾಗತಿಸಲಾಯಿತು. ಆದರೆ ಅದರ ಒಡಲೊಳಗೆ ವಿಘಟನೆಯ ಬೀಜ ಬಿದ್ದು ಮೊಳಕೆ ಒಡೆದು ಮರವಾಗುವ ಪ್ರಕ್ರಿಯೆ ಸದ್ದಿಲ್ಲದ ನಡೆಯುತ್ತಿತ್ತು. ಈ ಪ್ರಕ್ರಿಯೆ ಬಹುತೇಕ ಇವತ್ತು ‘ವಸುದಾವಲಯ’ ಆವರಿಸಿಕೊಂಡಿದೆ. ಒಂದು ಕಾಲದಲ್ಲಿ ಬದುಕಿಗೆ ಬೆಳಕಾಗಿದ್ದು ಕಾಲಾಂತರದಲ್ಲಿ ಕಗ್ಗತ್ತಲೆಯಾಗಿದ್ದು ಇತಿಹಾಸದ ಪುಟದಿಂದ ತಿಳಿದು ಬರುತ್ತದೆ. ವಿಚಿತ್ರವೆಂದರೆ ಅಕ್ಷರವು ಮನುಷ್ಯನ ಬಾಳಿನ ಬೆಳಕೆಂದು ಭಾವಿಸಲಾಯಿತು. ಇದನ್ನು ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳು ಕವಿಗಳು ಸಾರಿ ಸಾರಿ ಹೇಳಿದ್ದಾರೆ. ದಂಡಿ- ಅಕ್ಷರವೆಂಬ ಬೆಳಕು ಇರದಿದ್ದರೆ ಜಗತ್ತು ಕತ್ತಲೆಯಿಂದ ಕೂಡಿರುತ್ತಿತ್ತೆಂದು ಸಾವಿರ ವರ್ಷಗಳ ಹಿಂದೆ ಹೇಳಿದ್ದಾನೆ. ಎರಡು ಸಾವಿರ ವರ್ಷಗಳ ಹಿಂದೆ ಚೀನಿ ತತ್ವಜ್ಞಾನಿ ಲಾವ್ ತ್ಸು ರಾಜ, ಪ್ರಜೆ, ರಾಜ್ಯ, ಮತ್ತು ಸೇವಕ ಈ ಎಲ್ಲ ದಾರಿಯೂ ವಿಘಟನೆಯದ್ದೇಯಾಗಿದೆ ಎನ್ನುವನು. ರಾಜನಾದವನು ಋಷಿಯಾಗಿರಬೇಕು. ಋಷಿಯಾದವನು ರಾಜನಾಗಬೇಕೆನ್ನುವನು. ‘ಎಲ್ಲಿ’, ಮರ ಯಾರದು? ಈ ಕವಿತೆಗಳು ಈ ತರಹದ ತಾತ್ವಿಕತೆಯನ್ನು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹಾಗಿದ್ದರೆ ಮನುಷ್ಯನಿಗೆ ಘಾಸಿಗೊಳಿಸುತ್ತಿರುವುದು ಯಾವುದು? ಅಕ್ಷರ ಪಥ ಬದಲಿಸಿದೆಯೆ? ಅಲ್ಲಮ ಇದನ್ನೇ ಹೇಳಲಿಲ್ಲವೆ? ಒಂದು ಕಾಲದ ಬರಹ ದೈವವಾಗಿತ್ತು. ಇವತ್ತು? ಕುತೂಹಲದಿಂದ ಕಣ್ಣರಳಿಸಿ ಜಗತ್ತಿನ ವಿಸ್ಮಯವನ್ನು ಅರಿಯುವ ಪ್ರಯತ್ನ ಮಾಡಬೇಕಾದ ಅದೆಷ್ಟೋ ಮೊದಲ ತಲೆಮಾರಿನ ಜನಾಂಗ ಘಾಸಿಗೊಂಡಂತ್ತಿದೆ. ಘಾಸಿಗೊಳ್ಳುವುದೆಂದರೆ ಮುಗ್ಧ ಲೋಕವನ್ನು ಹಾಳುಗೆಡುವುದು. ಭೀತಿ ತಲ್ಲಣವನ್ನು ಹುಟ್ಟು ಹಾಕುವುದು. ಇದು ನಿಜಕ್ಕೂ ಭಯಾನಕವಾದದ್ದು. ‘ಎಲ್ಲಿ’, ‘ಮರ ಯಾರದು’? ಎತ್ತುವ ತಾತ್ವಿಕ ಪ್ರಶ್ನೆ ಕೂಡ ಪ್ರಜ್ಞಾವಂತ ಜಗತ್ತಿನಿಂದ ಪ್ರಜ್ಞಾಪೂರ್ವಕವಾಗಿ ಎತ್ತಿದ ಪ್ರಶ್ನೆಯಂತಲ್ಲ. ಪ್ರಕೃತಿಯ ಭಾಗವಾದವನ್ನೊಬ್ಬ ಅದರಿಂದ ಬೇರ್ಪಟ್ಟ ಸಂಕಟದಂತಿದೆ. ತಾಯಿಯನ್ನು ಅಗಲಿದ ಕರುವಿನಂತೆ.

ತಳದಲ್ಲಿ ಕುಳಿತು
ಗೆಲ್ಲುಗಳಲಿ ಕುಳಿತು
ಓದದೆ ಇದ್ದಿದ್ದರೆ
ಕವಿತೆ ಬರೆಯದೆ ಇದ್ದಿದ್ದರೆ
ತಂಗಾಳಿಯಲಿ ಮುಳುಗೇಳದೆ ಇದ್ದಿದ್ದರೆ
ನನ್ನದೇ ಆಗಿರುತ್ತಿತ್ತು ಈ ಮರ
ನನ್ನದೇ ಮರ’ (ಪು-17)


ಇಲ್ಲಿಯ ಕವಿತೆಗಳ ಉದ್ದಕ್ಕೂ ಮನುಷ್ಯನ ಪ್ರವೇಶವೇ ಆದಂತೆ ಅನಿಸುವುದಿಲ್ಲ. ಪ್ರಕೃತಿಯ ಕೇಂದ್ರ ಚಲನೆಯೇ ಪಿಸುಗುಟ್ಟಿದಂತೇನಿಸುತ್ತದೆ. ಇದು ಉತ್ಪ್ರೇಕ್ಷಿತವೆನಿಸಿದರೂ ನಿಜ. ಕವಿ ಪ್ರಕೃತಿಯ ಚಲನೆಯ ಭಾಗವಾಗಿದ್ದಾನೆಯೇ? ಅಥವಾ ಕಾಲದ ಚಲನೆಯ ಭಾಗವಾಗಿದ್ದಾನಾ? ಎರಡೂ ಒಂದೇಯೆ? ಅಥವಾ ಎರಡೂ ಬೇರೆ ಬೇರೆ? ಯಾವುದು ಸರಳವಾಗಿಲ್ಲ. ಕವಿತೆಯ ಒಳಗೆ ಇಳಿದಂತೆ ಕಾಡು ಹೊಕ್ಕಂತೆ ಭಾಸವಾಗುತ್ತದೆ. ನಿತ್ಯ ವಿದ್ಯಮಾನದ ಭಾಷಿಕ ಕಿರುಚಾಟವೆಲ್ಲ ಪ್ರೇತದ ಎದುರು ನಿವಾಳಿಸಿದಂತೆ ಇಲ್ಲಿ ಎಲ್ಲವೂ ಸ್ತಬ್ಧ. ಹಾಗೆಂದ್ದರೇ ಗಾಳಿ, ಬೆಳಕು, ಎಲೆ ಬಳ್ಳಿಗಳ ಬಳುಕಾಟ, ಮನುಷ್ಯನ ರಕ್ತದ ಪರಿಚಲನೆ ನಿತ್ತಂತಲ್ಲ. ‘ನಿಶಬ್ದ ನಿಶಬ್ದ ಶಬ್ದದಾಚೆಯ ಶಬ್ದ/ ನಿಶಬ್ದವಿದ್ದರೂ ಮೌನವಲ್ಲ/ ನಿಸ್ಸೀಮ ್ನಿಟೇಸ್ಸೀಮ ಸೀಮದಲೆ ನಿಸ್ಸೀಮ/ ನಿಸ್ಸೀಮವೆಂದರೂ ಶೂನ್ಯವಲ್ಲ’(ನನ್ನನಲ್ಲ ಪುಟ-13) ಮಧುರ ಚೆನ್ನರ ಸಾಲು ಇನ್ನಷ್ಟು ಅದನ್ನು ಸ್ಪಷ್ಟಪಡಿಸುತ್ತದೆಂದು ಭಾವಿಸುವೆ.

ಕವಿಗೆ ಪ್ರಕೃತಿಯ ಬಗ್ಗೆ ಅದಮ್ಯವಾದ ಹಂಬಲವಿದೆ. ಅಳಿಯುತ್ತಿರುವ ಕಾಡಿನ ಬಗೆಗೆ ಬೇಸರವಿದೆ. ಇಲ್ಲಿಯ ಶಕ್ತಿ ಎಂದರೆ ದಟ್ಟವಾದ ಕಾಡು. ಮತ್ತು ಜುಳು ಜುಳು ಹರಿಯುವ ನೀರಿನಂತೆ, ಹಕ್ಕಿಗಳ ಕಲರವದಂತೆ ಕಾಡಿನ ಹಸಿರಂತೆ ಕವಿಯ ಒಳಗೆ ಗಟ್ಟಿಯಾದ ಸಕಾರಾತ್ಮಕ ಮನೋಭಾವವಿದೆ. ಕಣ್ಣೆದುರಿನ ವಿನಾಶಕ್ಕೆ ವಿಚಲಿತನಾದರೂ ಅದಕ್ಕಿಂತಲೂ ವೇಗವಾಗಿ, ತೀವ್ರವಾಗಿ ಭರವಸೆಯ ಬೀಜ ಬಿತ್ತುವ ಬಯಕೆ ಇಲ್ಲಿಯ ಕವಿಗೆ. ‘ಎಷ್ಟೊಂದು ಹಕ್ಕಿಗಳಿವೆ ಇಲ್ಲಿ ಒಂದಾದರೂ ಬರಬಾರದೆ’?(ಪುಟ-22) ಎನ್ನುವ ಕವಿ.

ಒಂದು ಮರಕುಟಿಗವಾದರೂ ಬಂದು ಕುಟುಕುಟು ಕುಟುಕಿ
ಮೊಬೈಲಿನಲ್ಲೊಂದು ತೂತುಮಾಡಿ ನುಗ್ಗಿ
ಜೋರಾಗಿ ಹಾಡಿ’

ವಿನಾಶ ಮತ್ತು ವಿದ್ರೋಹತನದ ಒಡದೊಳಗೆ ಪ್ರಚಂಡ ಇಚ್ಛಾಶಕ್ತಿ ಇರುವುದಕ್ಕೆ ಈ ಕವಿತೆ ಸಾಕ್ಷಿ. ಕವಿಯ ಬಯಕೆ, ಕನವರಿಕೆ ಎಲ್ಲವೂ ಆದಿಮ ಜಗತ್ತಿನದು. ಆದಿಮವೆಂದರೆ ಕಲುಷಿತಗೊಳ್ಳದ ಮುಗ್ಧ ಜಗತ್ತು. ಅಲ್ಲಿ ಮನುಷ್ಯನಷ್ಟೋ ಬಾಳುವ ಹಕ್ಕು ಎಲ್ಲ ಜೀವಿಗಳಿಗೆ ಇದೆ. ಆ ಎಲ್ಲದರೊಂದಿಗೆ ಮನುಷ್ಯ ಸಹಜೀವಿಯಾಗಿ ಬದುಕುವುದು ಹಾಗೂ ಮುಖ್ಯವಾಗಿ ಮನುಷ್ಯ ಮನುಷ್ಯರ ನಡುವೆ ಮತ್ಸರ, ವಂಚನೆ, ಕಾಳಗ ಮತ್ತು ಅಧಿಕಾರ ಈ ಯಾವುದು ಇಲ್ಲದ ಕಾಲದ ಬದುಕು. ಅದು ಆದಿಮವೆನ್ನಬಹುದೇನೋ. ಇಡೀ ಮನುಕುಲವೇ ಯಂತ್ರ ಮತ್ತು ಯಾಂತ್ರಿಕವಾಗಿರುವಾಗಲೂ ಕವಿ ವಿಚಲಿತನಾಗದೆ; ಒಂದು ಹಕ್ಕಿ ಮೊಬೈಲ್ ಕುಕ್ಕಿ, ಮೊಬೈಲಿನ ರಿಂಗ್ಟೋನಾಗಿ, ಡಿಪಿಯಾಗಿ ಹಾರಿ ಹೋಗುವಾಗ ಬಿದ್ದ ಹಿಕ್ಕಿಯಲ್ಲೊಂದು ಬೀಜ ಬಿದ್ದು ಅದರಿಂದ ಮರ ಹುಟ್ಟಿ ಆ ಮರದಿಂದ ಕಾಡಾಗಿ, ಇಡೀ ಯಂತ್ರ ಜಗತ್ತು ಪುಡಿಪುಡಿಯಾಗಿ ಮನುಷ್ಯನ ಎದೆಯಲ್ಲಿ ಹಕ್ಕಿ ಹಾಡುವುದ್ದನ್ನು ನೋಡುವ ಮತ್ತು ಮತ್ತೇ ಮನುಷ್ಯ ಬದುಕಿನ ಸಹಜತೆಗೆ ಮರಳುವುದನ್ನು ನೋಡುವ ಬಯಕೆ ಇಲ್ಲಿಯ ಕವಿತೆಯಲ್ಲಿ ಎದ್ದು ಕಾಣುತ್ತದೆ.

ಕಾಡು ಮತ್ತು ನಾಡಿನಲ್ಲಾದ ಪಲ್ಲಟದಿಂದಾಗಿ ಏನೆಲ್ಲ ಸಂಭವಿಸುತ್ತಿದೆ ಎನ್ನುವುದನ್ನು ನಾವು ಇವತ್ತು ನೋಡುತ್ತಿದ್ದೇವೆ. ನಗರ ಕೇಂದ್ರಿತ ಪ್ರದೇಶದ ಮಳೆಗಾಲದ ಸ್ಥಿತಿ. ಕಾಡು ಅಳಿದು ಉಳ್ಳವರ ಆಸ್ತಿಯಾದಾಗ ಸಂಭವಿಸಿದ ಪ್ರಾಕೃತಿಕ ವಿಕೋಪ ಒಂದೆಡೆಯಾದರೆ, ಕಾಡ ಪ್ರಾಣಿಗಳ ದಾಳಿ ಇನ್ನೊಂದು ಬಗೆಯದು. ಈ ಎಲ್ಲ ಅಂಶಗಳನ್ನು ಸೂಚಿಸುವ ಅತ್ಯಂತ ಸರಳ ಮತ್ತು ಅರ್ಥಪೂರ್ಣ ಸಾಲು ‘ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ’ ಮತ್ತು ‘ಕಾಡು ಗವಿತೆ’ ಈ ಎರಡು ಕವಿತೆಗಳು.

ಈ ಕಾಡು ಹಾದಿಯಲ್ಲಿ
ಇರುವೆಗಳೆರಡು ಮಾತನಾಡಿಕೊಂಡಂತೆ ಕವಿತೆ’ ಎಂದುಕೊಂಡೆ
‘ಈಗೀಗ ಕಾಡು ಕಡಿದಿದ್ದಾರೆ ಜನ
ಹಾದಿಯಲ್ಲಿ ಆನೆಗಳಿವೆ’ (ಕಾಡುಗವಿತೆ-ಪು-18)

ಈ ಕವಿತೆ ಕಾಡಿನ ವಿನಾಶದ ಬಗ್ಗೆ ಮಾತನಾಡಿದಂತೆ ಇಲ್ಲಿಯ ಹಲವು ಕವಿತೆಗಳು ಈ ಬಗೆಯಲ್ಲಿ ಪಿಸುಗುಡುವವು. ಕುತೂಹಲವೆನೆಂದರೆ ಇಲ್ಲಿಯ ಭಾಷೆ, ತಂತ್ರ, ಪ್ರತಿಮೆ, ರೂಪ ಹೊಸದನ್ನು ದರ್ಶಿಸುವಂತಿದೆ. ಇನ್ನೊಂದು ವಿಷಯವೇನೆಂದರೆ ಕವಿತೆ ಆಧುನಿಕ ನಗರ ಕೇಂದ್ರಿತ ಜಗತ್ತಿನಲ್ಲಿ ನಿಂತು ಮಾತನಾಡುವುದಿಲ್ಲವೆನ್ನುವುದು. ಇಲ್ಲಿಯ ಕವಿತೆ ಮಣ್ಣಿಗೆ ತಾಗಿ ಉಸಿರಾಡುತ್ತದೆ. ಮಣ್ಣಿಗೆ ಬಿದ್ದ ಬೀಜ ಮರವಾಗುವ, ಬೆಳಕಾಗುವ, ಗಾಳಿ, ಮಳೆ, ನೆರಳ, ಆಶ್ರಯ, ಆಶ್ರಮ ಲೋಕದ ಚರಾಚರ ಜೀವಿಗಳೊಂದಿಗೆ ಸಮೃದ್ಧಿಯಾಗಿ ಬದುಕುವ ಕನಸು. ಈ ಕನಸು ಬಣ್ಣದ ಬಲೂನಲ್ಲ. ವಾಸ್ತವದ ಉಸಿರಾಟ. ಇಲ್ಲಿಯ ಕವಿತೆಯದು ಹದಮಿರದಂತೆ, ಹದವರಿತ ಬದುಕುವ ದಾರಿ. ಮನುಷ್ಯ ಕಾಡಿನ ನಂಟನ್ನು ಬಿಡಿಸಿಕೊಳ್ಳದಂತೆ ಹೆಣೆದುಕೊಂಡಿದೆ ಇಲ್ಲಿಯ ಬದುಕು.


ಈ ಸಂಕಲನದ ಕವಿತೆಗಳು ಸಮರ್ಥ ಪ್ರತಿಮೆಗಳ ಮೂಲಕ ಮೂಲ ಸತ್ಯದ ಕುರಿತು ಮಾತನಾಡಿದಂತೆ ಹೊಸ ಬಗೆಯ ಚಿತ್ರವನ್ನೇ ಕಟ್ಟಿಕೊಡುತ್ತದೆ. ಇಲ್ಲಿಯ ಕೇಂದ್ರ ಕಾಳಜಿ ಕಾಡು ಮತ್ತು ಮನುಷ್ಯ. ಮನುಷ್ಯನ ವಿನಾಶತನವನ್ನು ತಣ್ಣಗೆ ಚಿತ್ರಿಸುವ ಕವಿ ಮತ್ತು ‘ಕಾವ್ಯ  ಮೀಮಾಂಸೆ’ಯ ಮೂಲಕ ಕಾವ್ಯ ತಳೆಯಬೇಕಾದ ನಿಲುವನ್ನು ಸ್ಪಷ್ಟಪಡಿಸುವನು. ಇಲ್ಲಿಯ ಬಹುತೇಕ ಪ್ರತಿಮೆಗಳು ಬೌದ್ಧಿಕ ಕಸರತ್ತಿನಾಚೆಯವು. ಸಹಜತೆ ಮತ್ತು ಸ್ಪಷ್ಟತೆಗೆ ಸಾಕ್ಷಿಯಂತೆ ‘ಬುಡ್ಡಿ ದೀಪದ ಬುಡ’ ಮುಖ್ಯವಾಗುತ್ತದೆ.

ಹಚ್ಚಿಟ್ಟರೆ ಬುಡ್ಡಿ ದೀಪ
ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು.

ಆಮೇಲೆ
ಬುಡ್ಡಿ ದೀಪದ ಬುಡದ ಕಪ್ಪುಗಂಬಳಿ
ಲಾಲಿ ಹಾಡುವುದು
ಸಾವನು ಲಾಲಿ ಹಾಡುವುದು

ಹಸಿದು ಸತ್ತವರಿಗೆಲ್ಲ ಹೀಗೇ
ಒಂದು ಹಣ್ಣು ಕಂಡಿರಬಹುದು
ಬೆಳಕ ಭ್ರಮೆಯಲ್ಲಿ’.(ಪು-50)

ಕಾಲ ಮತ್ತು ಸಾವು ಕವಿತೆಯ ಸ್ಥಾಯಿಭಾವವಾಗಿ ಗಮನ ಸೆಳೆದಂತೆ ಕತ್ತಲೆ ಹಾಗೂ ಬೆಳಕು ನಿಶ್ಶಬ್ದವಾಗಿ ದಿಗಂತದಾಚೆಯ ದಾರ್ಶನಿಕತೆಯ ಚಿತ್ರ ಮೂಡಿಸುತ್ತದೆ. ನಿಧಾನ ಮತ್ತು ಧ್ಯಾನ ಅರಿವಿನ ದಾರಿಯಾಗಿ ಕವಿತೆಗಳು ಎದೆಗಿಳಿಯುತ್ತವೆ. ಒಟ್ಟಾರೆ ಈ ಬ್ರಹ್ಮಾಂಡವೇ ಕಾಡು. ಮನುಷ್ಯನೂ ಎಲ್ಲ ಜೀವಿಗಳಂತೆ. ಹಾಗಾಗಿ ಇಲ್ಲಿ ಮನುಷ್ಯನಂತೆ ಇನ್ನುಳಿದ ಚರಾಚರವೆಲ್ಲವೂ ಮಾತನಾಡುತ್ತವೆ. ಆದರೆ ಎಲ್ಲಿಯೂ ತನ್ನ ಲಯವನ್ನು ತಪ್ಪಲಾರವು. ಲಯ ತಪ್ಪಿದ, ತಪ್ಪುತ್ತಿರುವ ಮನುಷ್ಯನಿಗೆ ಕಾಡೇ ಮರಳಿ ಲಯಕ್ಕೆ ತರುವಂತೆ ಇಲ್ಲಿ ಕವಿತೆಗಳಿವೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ‘ಕಣ್ಣಲ್ಲಿಳಿದ ಮಳೆಹನಿ’ ಪ್ರಕೃತಿಯ ಲಯವೆನ್ನಬಹುದೇನೋ.
*


 ✍️ ಡಾ. ಮಧು ಬಿರಾದಾರ

ಆಕರ ಗ್ರಂಥ: ಕಾಜೂರು ಸತೀಶ್- ಕಣ್ಣಲ್ಲಿಳಿದ ಮಳೆಹನಿ- ಸಂಗಾತ ಪುಸ್ತಕ ಗದಗ-2021

Thursday, February 2, 2023

ಕಣ್ಣಲ್ಲಿಳಿದ ಮಳೆಹನಿಗಳ ಕುರಿತು ಡಾ. ಕಮಲಾಕರ ಕಡವೆ

ಓದಿದರೆ 'ಉಫ್ ' ಎಂಬ ಉದ್ಗಾರ ಹೊರಬೀಳಬೇಕು, ಅದು ಕವಿತೆ. ಅರೆನಿಮಿಷ ಮುಂದೆ ಓದುವುದು ಅಸಾಧ್ಯವಾಗುವ ಧ್ಯಾನದಲ್ಲಿ ಮುಳುಗಬೇಕು. ಅದು ಕವಿತೆ. ಗಾತ್ರ ಕುಗ್ಗಿ ಕುಗ್ಗಿ ಗೆರೆ ಹೊಡೆದಷ್ಟು ಕಿರಿದಾದ ಸಾಲು, ಚರಣ ಅರ್ಥದ ಕಿಡಿ ಹೊತ್ತಿಸಬೇಕು. ಅದು ಕವಿತೆ. ಹೀಗೆ ಒಮ್ಮೊಮ್ಮೆ ಅನಿಸುತ್ತದೆ. ಅಪರೂಪಕ್ಕೆ ಕವಿ ಇಂತಹ ಕವಿತೆಗಳನ್ನೇ ನಮ್ಮ ಮುಂದೆ ಇಡುತ್ತಾರೆ. ಅಂತಹ ಒಂದು ಸಂಕಲನ ನನ್ನ ಕೈಯಲ್ಲಿದೆ. ಅದು ಕಾಜೂರು ಸತೀಶ್ ಅವರ "ಕಣ್ಣಲ್ಲಿಳಿದ ಮಳೆಹನಿ". (ಸಂಗಾತ ಪುಸ್ತಕ, ರಾಜೂರ. ಪ್ರತಿಗಳಿಗೆ 9341757653).


ನನ್ನ ಮಿತ್ರರಾದ ಜಯಶ್ರೀನಿವಾಸ್ ರಾವ್ ಕಾವ್ಯದ ಕುರಿತಾದ ಕವನಗಳ ಬಗೆಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಅವರಿಂದಾಗಿ ನನಗೂ ಅಂತಹ ಕವನಗಳ ಬಗ್ಗೆ ವಿಶೇಷ ಕುತೂಹಲ. ಇಲ್ಲಿ ನೋಡಿದರೆ, ಕಾಜೂರು ಸತೀಶ್ ಅವರು ಅನೇಕ ಕವನಗಳಲ್ಲಿ ಕಾವ್ಯ, ಕಾವ್ಯರಚನೆಗಳ ಕುರಿತಾಗಿಯೇ ಕವಿತೆಗಳನ್ನು ಬರೆದಿದ್ದಾರೆ. ಅದೂ ತುಂಬಾ ನವಿರಾಗಿ, ತುಂಬಾ ಸೂಕ್ಷ್ಮವಾಗಿ, ತುಂಬಾ ಸಂವೇದನಾಶೀಲತೆಯಿಂದ. ಕವನವನ್ನು ಶೃಂಗಾರ ಎಂದೇನೂ ಅವರು ನೋಡುವುದಿಲ್ಲ, ಖಡ್ಗವೆಂತಲೂ ನೋಡುವುದಿಲ್ಲ. "ಕೊಲೆ" ಎಂಬ ಕವನದಲ್ಲಿ ಎದೆ ಸೀಳಲು ಬಂದವರಿಗೆ ಹೂ ಕೊಡುವ ಕವಿತೆಯ ಚಿತ್ರಣವಿದೆ. ಆಹಾ, ಅದ್ಭುತ ಕಲ್ಪನೆ. ಅಂದರೆ, ಇಲ್ಲಿ ಧ್ಯಾನಕ್ಕೆ ಒಳಗಾಗಿರುವುದು ಕವಿತೆ ಆಗಿದ್ದರೂ, ಅರ್ಥವಿಸ್ತಾರದಲ್ಲಿ ನಮಗೆ ಇದರ ಹಿಂದೆ ಒಂದು ಆರ್ದ್ರ ಮಾನವೀಯತೆಯೇ ಕಾಣುತ್ತದೆ.

 "ರೊಟ್ಟಿ" ಎಂಬ ಕವನದಲ್ಲಿ "ನನ್ನ ಹೊಟ್ಟೆಗಿಳಿವ ರೊಟ್ಟಿ/ ಅವಳ ಹೆಬ್ಬೆಟ್ಟು ಸಹಿಗಳ ಜೀರ್ಣಿಸಿ/ ಕವಿತೆಗಳ ಜನನ" ಎಂದಾಗಲೂ ನಮ್ಮ ಲಕ್ಷ ಹೋಗುವುದು ತಾಯಿಯ ಕುರಿತಾಗಿ ಕವಿ ಹೇಳುವ ಮಾತಿನೆಡೆಗೆ. ಅತ್ಯಂತ ಏಕಾಗ್ರತೆಯಿಂದ, ಹೇಳ ಬೇಕಿರುವ ಮಾತಿನಲ್ಲಿ ಅತ್ಯವಶ್ಯಕವಾದುದನ್ನು ಮಾತ್ರ ಉಳಿಸಿ, ಎಲ್ಲಿಯೂ ಕ್ಲಿಷ್ಟತೆಗೆ ಆಸ್ಪದ ಕೊಡದೆ, ಎಲ್ಲಿಯೂ ವಾಚಾಳಿ ಆಗದೇ, ಸಮರ್ಥ ಪ್ರತಿಮೆಗಳ ಮೂಲಕವೇ ಕಮ್ಯುನಿಕೇಟ್ ಮಾಡುತ್ತಾರೆ ಸತೀಶ್. ಬಿಗಿ ಬಂಧದ ಅವರ ಈ ಕವನಗಳಲ್ಲಿ ಅಳೆದು ಅಳೆದು ಇಟ್ಟಂತಿವೆ ಪದಗಳು. ಬಹುತೇಕ ಕವನಗಳಲ್ಲಿ ಇಟ್ಟ ಪದಗಳು ವ್ಯರ್ಥವಲ್ಲ. ಹಾಗೆಯೇ, ಕವಿತೆಗಳು ಸ್ಫುರಿಸುವ ಭಾವಗಳೂ ಕೂಡ ತೋರಿಕೆಯದಲ್ಲ. ಅವರ ನೇರ, ನಿಖರ, ನಿರ್ದಿಷ್ಟ ಶೈಲಿಯ ಹಾಗೆಯೇ ಭಾವಗಳೂ ಸುಸ್ಪಷ್ಟ ಮತ್ತು ಸೂಕ್ಷ್ಮ. ಅನೇಕ ಕವನಗಳಲ್ಲಿ ಮುನ್ನೆಲೆಗೆ ಬರುವ ರೂಪಕಗಳು ಸತ್ವಶಾಲಿಯಾಗಿವೆ, ತಟ್ಟನೆ ನಮ್ಮನ್ನು ಆವರಿಸಿ ಬಿಡುತ್ತವೆ. ಹಾಗೆಂದೇ ಇಲ್ಲಿನ ಕವನಗಳು ತುಂಬಾ ಸಂಕ್ಷಿಪ್ತ. ದನಿಯೂ ಮೃದು - ಚೀರಾಟ, ಕೂಗಾಟಗಳಿಲ್ಲ. ಚರ್ವಿತ ಚರ್ವಣ ದಾರಿ ತೊರೆದು ತನ್ನದೇ ಆದ ದಾರಿ ಹುಡುಕುವ ಕವಿಗೆ ದೊರೆಯುವ ಯಶಸ್ಸು ಕಾಜೂರು ಸತೀಶ್ ಅವರಿಗೆ ದೊರಕಿದೆ.
 ಸುಳ್ಳಾ, ನೀವೇ ನೋಡಿ:

"ಬುಡ್ಡಿ ದೀಪದ ಬುಡ"

ಹಚ್ಚಿಟ್ಟರೆ ಬುಡ್ಡಿ ದೀಪ
ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು

ಆಮೇಲೆ
ಬುಡ್ಡಿ ದೀಪದ ಬುಡದ ಕಪ್ಪುಗಂಬಳಿ
ಲಾಲಿ ಹಾಡುವುದು
ಸಾವನು ಲಾಲಿ ಹಾಡುವುದು

ಹಸಿದು ಸತ್ತವರಿಗೆಲ್ಲ ಹೀಗೇ
ಒಂದು ಹಣ್ಣು ಕಂಡಿರಬಹುದು
ಬೆಳಕ ಭ್ರಮೆಯಲ್ಲಿ.

*


  ✍️ಕಮಲಾಕರ ಕಡವೆ

Friday, July 15, 2022

ಕಣ್ಣಲ್ಲಿಳಿದ ಮಳೆಹನಿಗಳ ಕುರಿತು


'ಕಣ್ಣಲ್ಲಿಳಿದ ಮಳೆಹನಿ' ಕವನ ಸಂಕಲನ
ನಿಮ್ಮದೇ ಅಲ್ವಾ. ತಿಳಿದು ತುಂಬಾ ಖುಷಿಯಾಯ್ತು.
ನಿಮ್ಮ ಕವನಗಳು ತುಂಬಾ ನೈಜವಾಗಿವೆ, ಎಲ್ಲೂ ದೊಡ್ಡ ದೊಡ್ಡ ಪದಗಳ ಪ್ರದರ್ಶನ ಮಾಡದೆ ನೈಜ ಅನ್ನಿಸೊ ಹಾಗಿದೆ ನಿಮ್ಮ ಬರಹ. ಕವನಗಳಲ್ಲಿ Mild satirical nature(ರೊಟ್ಟಿ..ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ etc..) ಇದೆ ಅದು ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ನಿಮ್ಮ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದೆ.
ನಿಮ್ಮನ್ನ ನೋಡಿದ ನೆನಪು ಈಗ ಬಂತು.
ನಿಮ್ಮ ಬರಹಗಳಿಗೆ ಒಳ್ಳೆಯದಾಗಲಿ. ಇನ್ನಷ್ಟು ಬರಹಗಳು ಹೀಗೆ ಬರಲಿ.
ಶುಭಾಶಯ ನಿಮಗೆ💐💐
*
ಸುವರ್ಣ ಚೆಳ್ಳೂರು

Tuesday, April 19, 2022

ಕಣ್ಣಲ್ಲಿಳಿದ ಮಳೆಹನಿ- ವಿಜಯ ಕರ್ನಾಟಕ - ಪರಿಚಯ

ವಿಜಯ ಕರ್ನಾಟಕ ಪತ್ರಿಕೆಯು ಪ್ರಕಟಿಸಿದ ಕಣ್ಣಲ್ಲಿಳಿದ ಮಳೆಹನಿ ಸಂಕಲನದ ಪರಿಚಯ

Monday, February 14, 2022

ಏನು ಮಾಡಲಿ ಹೂಗಳು ಕೊಲೆಯಾದ ಕಾಲದಲ್ಲಿ?



ಜಗತ್ತು ಬಂದು ತಲುಪಿರುವ ಹತಾಶ ಹಂತವನ್ನು "ಕಣ್ಣಲ್ಲಿಳಿದ ಮಳೆಹನಿ"ಯ ಒಂದೊಂದು ಕವಿತೆಗಳೂ ಹೀಗೇ ಎದೆಗೆ ತಾಕಿಸುತ್ತವೆ. ಮನುಷ್ಯ-ಪ್ರಾಣಿ-ಪಕ್ಷಿ-ಗಿಡ-ಮರಗಳೆಲ್ಲವೂ ಕೊಲ್ಲಲ್ಪಟ್ಟವು. ಇದೀಗ ಎದೆ ದನಿಗಳ ಕವಿತೆಗಳೂ ಕೊಲೆಯಾಗುತ್ತಿರುವುದರ ನೋವು, ಸಂಕಟ, ಮನುಷ್ಯತ್ವ ಸತ್ತುಹೋದ ಹೊತ್ತಿನ ಸಂದಿಗ್ಧತೆಯನ್ನು ಕವಿ ತಣ್ಣಗೆ ಹೇಳುತ್ತಾರೆ. ಈ ನೆಲದೊಂದಿಗೆ, ಈ ಪರಿಸರದೊಂದಿಗೆ ಕವಿಯ ಅದಮ್ಯ ಒಡನಾಟವನ್ನು ಸಂಕಲನದಲ್ಲಿನ ಅನೇಕ ಕವಿತೆಗಳು ಉಸಿರಾಡುತ್ತವೆ. ಈ ಒಡನಾಟದಿಂದಲೇ ಪ್ರಕೃತಿಯ ಮೇಲಾಗುತ್ತಿರುವ ಅತ್ಯಾಚಾರವನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾರೆ. 'ಎಲ್ಲಿ?' 'ಮರ ಯಾರದು?' 'ಕಾಡುಗವಿತೆ, 'ಕಾಡುಗಳಿದ್ದವು ಕವಿತೆಗಳಲ್ಲಿ' 'ನಡುರಾತ್ರಿ ನಾಯಿ ಬೊಗಳುತ್ತಿದೆ' ಯ ಸಾಲುಗಳು, ಕಣ್ಮರೆಯಾಗುತ್ತಿರುವ ಗಿಡ ಮರಗಳ ಹಸಿರು, ಅದನ್ನೇ ನಂಬಿಕೊಂಡಿರುವ ಅಸಂಖ್ಯಾತ ಜೀವಜಂತುಗಳು ಅನುಭವಿಸುತ್ತಿರುವ ಪಾಡನ್ನು ಕಣ್ಣಿಗೆ ಕಟ್ಟಿಕೊಡುತ್ತವೆ. 'ಒಂದು ಕವಿತೆ ಹುಟ್ಟುವುದರಲ್ಲಿತ್ತು' ಎಂದು ಹೇಳುವಾಗ ಕವಿ ಅನುಭವಿಸುತ್ತಿರುವ ತಲ್ಲಣ ತಿಳಿಯುತ್ತದೆ! ಕೊನೆಗೆ,
"ಯಾರು ಕೊಲ್ಲುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ ಯಾರು ಬದುಕುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ" ಎಂದು ಕೇಳುತ್ತಾ, ಕವಿತೆಗಳು ಉಳಿಯಬೇಕಾದ ತುರ್ತನ್ನು ಕಾಳಜಿ ಮಾಡುತ್ತಾರೆ.

ನೆಮ್ಮದಿಯ ಹುಡುಕಾಟಕ್ಕೆ ತೊಡಗುವ ಕವಿಯ ಎದೆಯಲ್ಲಿ ನೋವುಗಳೇ ನೇತಾಡುತ್ತಿವೆ. ಧಾರಾಳಿಯಾಗಿರುವ ಪ್ರಕೃತಿಯ ಮೇಲೆಯೇ ದಬ್ಬಾಳಿಕೆ ಮಾಡಿ, ಆಕ್ರಮಿಸಿಕೊಂಡು, ನನ್ನದೆನ್ನುವವರ ಕಡೆಗೆ ಕನಿಕರದ ನೋಟ ಬೀರುವ ಕವಿಯೊಬ್ಬ ನಿಜಮನುಷ್ಯ... ಯಾಂತ್ರಿಕತೆಗೆ ಒಡ್ಡಿಕೊಂಡಿರುವ ಈ ಸೃಷ್ಟಿಗೆ ಮರುಚೈತನ್ಯ ಬರುವುದಾದರೆ ಮರಕುಟುಕನನ್ನು ಕರೆದು, ಕುಕ್ಕಿ, ಕುಟುಕಿ ಹೊಸದಾರಿ ಮಾಡಲು ತನ್ನೆದೆಯನ್ನೇ ಒತ್ತೆಯಿಡ ಬಯಸುವ ಕವಿಯದು ಅದೆಂಥ ಜೀವಪ್ರೀತಿ! ಕೃತ್ರಿಮತೆಗೆ ನರಳಿದ ಹೃದಯ! "ಛೇ! ಎಷ್ಟೊಂದು ಹಕ್ಕಿಗಳಿವೆ ಇಲ್ಲಿ, ಒಂದಾದರೂ ಬರಬಾರದೇ?" ಹಕ್ಕಿಗಳೂ ಯಾಂತ್ರಿಕತೆಗೆ ಒಗ್ಗಿಕೊಂಡವೇ ಎಂಬ ದಿಗಿಲನ್ನೂ ಈ ಸಾಲು ಧ್ವನಿಸುತ್ತದೆ.


ಕವಿಗೆ ಯಾವುದೂ ಅಮುಖ್ಯವಲ್ಲ. ಎಲೆಯೊಂದು- ಪತಿಯ ಬೆರಳು ಬಿಡಿಸಿಕೊಂಡ ಹೆಣ್ಣಾಗಿ, ತವರ ಮಣ್ಣಾಗಿ, ಬೆಳಕಾಗಿ, ಹಕ್ಕಿಯೊಡನೆ ಏಕವಾಗಿ, ಉಸಿರು ಬೆರೆವ ಗೆರೆಯಿರದ ದಾರಿಯಾಗಿ; ಗಾಳಿ- ಸಮುದ್ರವಾಗಿ, 'ಉಳಿದ ನಮ್ಮ ನಾಳೆಗಳ' ಲೆಕ್ಕವಿಡುವ ಜ್ಞಾನಿಯಾಗಿ; ಅವ್ವನ ರೊಟ್ಟಿ- ಕವಿತೆಯಾಗಿ, ಯುದ್ಧವಿಲ್ಲದ ಭೂಪಟವಾಗಿ, ಮರುಭೂಮಿಯಾಗಿ ರೂಪಾಂತರಗೊಳ್ಳುವ ಬಗೆಯನ್ನು ಎಲೆ, ಗಾಳಿ, ಏಕ, ರೊಟ್ಟಿ ಕವಿತೆಗಳು ಬಿಚ್ಚಿಡುವ ರೀತಿಯೇ ವಿಸ್ಮಯ!

ಗುಡಿಸಲಿಗೆ ಆತುಕೊಂಡೇ ಅದರ ಭೀಕರತೆಯನ್ನು ಅನುಭವಿಸಿಕೊಂಡು ನೆನಪುಗಳನ್ನು ಒಳಗಿಳಿಸಿಕೊಂಡು ಸಹಜತೆಗಾಗಿ ಧ್ಯಾನಿಸುವ ಕವಿ,
"ಆಯುಧಗಳು ಇದ್ದೇ ಇರುತ್ತವೆ
ಬೆಳಕ ಹಚ್ಚುತ್ತೇನೆ
ಬೆಳಕಿನ ಕುರಿತೂ ಮಾತಾಡುವುದಿಲ್ಲ" ಎನ್ನುತ್ತಾರೆ.

ಸಾವು, ಮಹೋನ್ನತ ಆನಂದವನ್ನು ಅನುಭವಿಸಲು ಇರುವ ಭೂಮಿಕೆ ಎಂದು ತಿಳಿಯುತ್ತಾ, ಗಾಳಿಯಲ್ಲಿ ಅತ್ತಿಂದಿತ್ತ ತೂರಾಡಿ ಸುಖಿಸುವ ಎಲೆಯ ಆನಂದವೇ ಸಾವಿನಿಂದಲೂ ಸಿಗಬೇಕೆಂದು ಬಯಸುತ್ತಾರೆ.
"ಚಟ್ಟಕ್ಕೆ ಮೋಟುಬೀಡಿಯ ಕಿಡಿ ತಾಗಿ
ಚಟಪಟ ಉರಿದು ಹೋಗುವುದಾದರೆ
ಎಷ್ಟು ಚಂದ ಎಷ್ಟು ಚಂದ" ಎಂದು ಸಾವಿನ ದಿನದ ಒಣ ಆಚರಣೆಗಳನ್ನು ಧಿಕ್ಕರಿಸುತ್ತಾರೆ.

ಕಾವ್ಯಮೀಮಾಂಸೆ, ಹೊಟೇಲು, ಕ್ಷಮಿಸು, ಜಲವರ್ಣ ಮುಂತಾದ ಕವಿತೆಗಳೂ,
"ಮ್ಯಾನ್ಹೋಲಿನಲ್ಲಿ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ ಟಿವಿಗೂ ಸಿಗಲಿಲ್ಲ" ಎಂಬ ಸಾಲುಗಳು
ಸಿದ್ಧಾಂತಗಳಾಚೆಗೂ ಉಸಿರಾಡಬೇಕಾದ ಮಾನವತೆಯನ್ನು ಪ್ರತಿನಿಧಿಸುತ್ತವೆ.

ಅಪ್ಪನ ವಿಸ್ತಾರತೆಯನ್ನೂ, ಅವ್ವನ ಸೀರೆಯ ಅಗಾಧತೆಯನೂ, ಎದೆಯ ದನಿಯನ್ನು, ಪ್ರೇಮದ ಸರಳತೆಯನ್ನು ಧೇನಿಸುವ ಇವರ ಕವಿತೆಗಳಲ್ಲಿ ಅಪರೂಪದ ರೂಪಕಗಳಿವೆ, ಪ್ರತಿಮೆಗಳಿವೆ, ಪ್ರಾಮಾಣಿಕ ಅಭಿವ್ಯಕ್ತಿಯಿದೆ. ನಿಜ! ಇವರ ಕವಿತೆಗಳಲ್ಲಿ ತೀವ್ರವಾದ ಭಾವೋದ್ವೇಗಗಳಿಲ್ಲ, ಜಿದ್ದಿಗೆ ಬೀಳುವ ಬಿರುಸುಗಳಿಲ್ಲ... ಕಡು ತಣ್ಣಗಿನ ನೀರಿನ ಇರಿತವಿದೆ! ಬದುಕಿನ ಸಂದೇಶವನ್ನು ದಾಟಿಸುವ ನೋಟವಿದೆ. ನಮ್ಮ ಬಾಧ್ಯತೆಗಳನ್ನು ನೆನಪಿಸಿ, ಎಚ್ಚರಿಸುವ ಬದ್ಧತೆಯಿದೆ...

ಪ್ರೀತಿಯ ಕಾಜೂರು ಸತೀಶ್ ಸರ್... ನಿಮ್ಮ ಮತ್ತಷ್ಟು ಪ್ರಾಮಾಣಿಕ ಮಾತುಗಳಿಗಾಗಿ ಕಾಯುತ್ತಾ...


-ರಮ್ಯ ಕೆ ಜಿ, ಮೂರ್ನಾಡು.

Friday, February 11, 2022

ಕಣ್ಣಲ್ಲಿಳಿದ ಮಳೆಹನಿಯ ಕುರಿತು ನೂತನಾ ದೋಶೆಟ್ಟಿಯವರ ಅಭಿಪ್ರಾಯ

ಕೃಪೆ- ಸಂಗಾತಿ

ಕಣ್ಣಲ್ಲಿಳಿದ ಮಳೆಹನಿ – ಕಾಜೂರು ಸತೀಶ್ ಅವರ ಹೊಸ ಕವನ ಸಂಕಲನ.. ಚಿ. ಶ್ರೀನಿವಾಸ ರಾಜು ಕಾವ್ಯ ಪುರಸ್ಕಾರ ಪಡೆದ ಈ ಕೃತಿ ಸಂಗಾತ ಪುಸ್ತಕದಿಂದ ಪ್ರಕಟವಾಗಿದೆ. 40ಕವಿತೆಗಳ ಈ ಸಂಕಲನ ಸೊಗಸಾದ ಮುಖಪುಟದಿಂದ ಓದಲು ಹಿಡಿದಾಗಲೇ ಹತ್ತಿರವಾಗುತ್ತದೆ.


ಮೊದಲ ಕವಿತೆ – ಎಲ್ಲಿ- ಕಾಡು ನಾಡಾದ ಬಗೆಗಿನ ಈ ಪ್ರಶ್ನೆಯೊಂದಿಗೆ ಸಂಕಲನದ ಓದು ಆರಂಭ. ಪುಟ್ಟ ಪುಟ್ಟ ಶೀರ್ಷಿಕೆಯ ಇಲ್ಲಿನ ಪದ್ಯಗಳು ಆಳದಲ್ಲಿ ಅಪಾರ ಜಿಜ್ಞಾಸೆಯಿಂದ ಕೂಡಿವೆ.

ಮರ ಯಾರದು? ಕವಿತೆ , ಎಲ್ಲರದ್ದೂ ಆಗಬಹುದಾಗಿದ್ದ ಮರ ಈಗ ಯಾರಾದ್ದೂ ಅಲ್ಲದೆ ನೆನಪುಗಳ ಸಂತೆಯನ್ನು ಎದೆಯಲ್ಲಿ ನೆಟ್ಟು ಬಿಡುತ್ತದೆ.

ಎಲೆಯನ್ನು ಪತ್ನಿಯಾಗಿ ಕಾಣುವ ಈ ಕವಿ ತವರನ್ನು ನೆನೆನೆನೆದು ಪುಳಕಗೊಳ್ಳುವ ಅವಳಲ್ಲಿ. ಮತ್ತೆ ಮತ್ತೆ ಹಸಿರು/ ಮತ್ತೆ ಮತ್ತೆ ಬೆಳಕು/ ಕಂಡು ಈ ಸಾಲುಗಳಲ್ಲಿ ಎಷ್ಟು ಅರ್ಥಗಳ ಹೊಳಹಿಸಿದೆ.

ಮ್ಯಾನ್ ಹೋಲಿನಲ್ಲಿ ಸತ್ತ ಕವಿತೆ- ಒಂದು ಸಶಕ್ತ ವಿಡಂಬನೆ. ಇಲ್ಲಿ ಸಾಯುವುದು ಕವಿತೆಯೋ, ನಿಜ ಸಾಹಿತ್ಯವೋ, ಒಳ್ಳೆಯ ಸಂಸ್ಕಾರವೋ ಅಥವಾ ಮುಚ್ಚಳ ಮುಚ್ಚಿದ ಕವಿತೆ ಬರೆಯುವ ಕೈಗಳ ಹೊಲಸು ಯಾರ ಅರಿವಿಗೂ ಸಿಗದೆ ಅಡಗಿ ಹೋದಂತಿದೆಯೋ!

ಗುಡಿಸಲು- ಕವಿತೆಯಲ್ಲಿನ ರೂಪಕಗಳು, ಅದರೊಳಗಿನ ಬದುಕಿನಂತೆ, ಅದರ ಸುತ್ತಲಿನ ಸಮಾಜವನ್ನು ಚಿತ್ರಿಸುವ ಬಗೆ ಆಶ್ಚರ್ಯ ಹುಟ್ಟಿಸುತ್ತದೆ.

ಒಂದಾದರೂ ಬರಬಾರದೆ? ಕವಿತೆಯಲ್ಲಿ ಮರಕುಟಿಗ ಹಕ್ಕಿಯ ಮೂಲಕ ಆಧುನಿಕತೆಯ ಐಬುಗಳನ್ನೆಲ್ಲ ಬಗೆದು, “ಹಚ್ಚಹಸಿರು ಹೃದಯದ ಮನುಷ್ಯರ ನೋಡುವ ” ಹಂಬಲ ಕವಿಯದು.

ಕೊಲೆ, ಕವಿತೆ – ಸುಕೋಮಲ ಹೂಗಳನ್ನು ಕೊಲೆ ಮಾಡುವ. ಈ ದುರುಳ ಕಾಲದ ತಣ್ಣಗಿನ ಕ್ರೌರ್ಯನನ್ನು ಧ್ವನಿಸಿದರೆ , ರೊಟ್ಟಿ- ಕವಿತೆಯಲ್ಲಿ ರೊಟ್ಟಿ ಸುಡುತ್ತದೆ ನೆಲದ ಕಾವಲಿಯಲ್ಲಿ/ ನೇಗಿಲು ಸೌದೆ ಎಷ್ಟು ಚೆನ್ನಾಗಿ ಉರಿಯುತ್ತದೆ , ಎಂದು ಚುಚ್ಚುವ ವ್ಯಂಗ್ಯವಿದೆ.

ನನ್ನೊಳಗೆ ಇಳಿಯುವಾಗ – ಕವಿತೆಯಲ್ಲಿ ವಚನಗಳನ್ನು ನೆನಪಿಸುವ ಭಾವವಿದೆ. ದೇಹವೇ ದೇಗುಲ ಎಂಬಂತೆ ಪಕ್ಕೆಲುಬುಗಳ ತಟ್ಟಿದರೂ ಮನೆ- ಮನದ ಕದ ತೆರೆಯುತ್ತದೆ .

ಎದೆಯ ದನಿಯಿದು; ಶೃಂಗಾರ ಕಾವ್ಯವಲ್ಲ! ಕವಿತೆಯಲ್ಲಿ ಅಂಗೈ ಗೆರೆಗಳು ಸಲಾಕೆಯ ಹಿಡಿತಕ್ಕೆ ಸವೆಯುವುದಿಲ್ಲ. ಬದಲಾಗಿ ಅವು ನಿರ್ಮಿಸಿದ ಹಳಿಗಳು ಸವೆಯುತ್ತವೆ.. ಎದೆಗಳು ವಾಹನ ಸಂಚಾರದಿಂದ ದುರಸ್ತಿಯಲ್ಲಿವೆ. ಆ ಎದೆಯೊಳಗೆ ಮಲಗಲು ಹೊತ್ತಾಗಿರುವ ಮಗುವಿಗೆ ಹಾಲೂಡಿಸಲು ಕವಿ ಆ ತಾಯಿಯನ್ನು ಕರೆಯುವುದಾದರೂ ಹೇಗೆ? ನೇತು ಹಾಕಿರುವ ಕೆಂಬಟ್ಟೆಯ ತುಂಡೊಂದು ಧ್ವಜವಾಗಿ , ಆ ಧ್ವಜವನ್ನು ಇಳಿಸಿ, ಟಾರು ಕುದಿಯುವುದರೊಳಗೆ ಆಕೆ ಹಾಲು ಕುಡಿಸಬೇಕು. ಅವರಿಬ್ಬರೂ ಬೇರೊಬ್ಬರಿಗಾಗಿ ರಸ್ತೆ, ರೈಲು ಹಳಿ, ಮನೆಗಳನ್ನು ಕಟ್ಟುತ್ತಲೇ ಇರುತ್ತಾರೆ. ತಮಗೆ ನೆರಳೆಂಬ ಕಪ್ಪನ್ನು ಉಳಿಸಿಕೊಂಡು, ಅದನ್ನೇ ಹಾಸಿ ಹೊದೆಯುತ್ತಾರೆ. ಇಲ್ಲಿ ಜಗದ ಕಾರ್ಮಿಕ ವರ್ಗದ ನೋವು, ಸಂಕಟ ತಣ್ಣಗೆ ಕೊರೆಯುತ್ತದೆ.
ಬಂಧಿ, ಕವಿತೆ ಬದುಕಿನ ನಾಲ್ಕು ಮಜಲುಗಳು ಎದುರಿಸಬಹುದಾದ ಸಂದಿಗ್ಧ ಗಳನ್ನು ಧ್ವನಿಪೂರ್ಣವಾಗಿಸಿದೆ. ಅವುಗಳನ್ನು ಮೀರಿ ನಿಲ್ಲಲಾರದ್ದೂ ಒಂದು ಸಂದಿಗ್ಧವೆ. ಕಾಲಕಾಲಕ್ಕೆ ಎದುರಾಗುವ ಅವು ಹೇಗೆ ಒಂದಿಡೀ ಬದುಕನ್ನು ಇಷ್ಟಿಷ್ಟೇ ಮುಗಿಸಿಬಿಡಬಲ್ಲವು ಎಂಬುದನ್ನು ಬಹಳ ಮಾರ್ಮಿಕವಾಗಿ ಹೇಳಲಾಗಿದೆ.

ಬುಡ್ಡಿ ದೀಪದ ಬುಡ ಕವಿತೆಯಲ್ಲಿ ಬಿಸಿಲಿಗೂ, ಸಾವಿಗೂ ಲಾಲಿ ಹಾಡುತ್ತ ನಿಲ್ಲುವ ಪರಿಗೆ ಮನಸ್ಸು ಮೂಕವಾಗುತ್ತದೆ.

ಇಲ್ಲಿಯ ಕವಿತೆಗಳ ಮಳೆಯಲ್ಲಿ ಬೆಂಕಿ ಮಳೆಹನಿ ಉದುರುತ್ತದೆ. ಅನೇಕ ಕವಿತೆಗಳು ಕವಿತೆಯ ಕುರಿತಾಗಿಯೇ ಬರೆದುವಾಗಿದ್ದು ಕವಿತೆ ಬೇರೆ ಬೇರೆ ರೂಪಕಗಳಾಗಿ ಕಾಣುತ್ತದೆ. ಕೆಲವು ಬಾರಿ ಕವಿತೆ ಹಾಡಾದರೆ, ಕೆಲವು ಬಾರಿ ಅತ್ಯಂತ ಸುಖೀ ಜೀವವಾಗುತ್ತದೆ. ಕೆಲವೊಮ್ಮೆ ಕವಿತೆ ಅಂತರಂಗದ ನೋವಾಗಿ ಕವಿತೆಯನ್ನು ಕಬಳಿಸುವ ಟಿವಿ, ಮೊಬೈಲು, ಬೈಕು, ಕತ್ತಿ ಮೊದಲಾದ ಅಭೀಪ್ಸೆಗಳಾಗಿ ಕಾಣುತ್ತದೆ.

ಬೆಳಕಿನ ಕುರಿತು ಬರೀ ಮಾತಾಡುವ ಇಂದಿನ ದಿನಗಳಲ್ಲಿ ಬೆಳಕ ಕುರಿತು ಮಾತಾಡದೆ ಬೆಳಕು ಹಚ್ಚುತ್ತೇನೆ ಎಂಬ ಕವಿಯ ನಿರ್ಮಲ ಭಾವ ಹಾಗೂ ಸದಾಶಯ ಎಲ್ಲ ಕವಿತೆಗಳಲ್ಲೂ ಕಾಣುವುದೇ ಇವುಗಳ ಸೊಗಸು. ಅಮ್ಮನ ಸೀರೆಯಲ್ಲಿ ಬಿದ್ದಿರುವ ತೂತು ಹೊಟ್ಟೆ ತುಂಬಿದಾಗಲೆಲ್ಲ ಸುಡಲೆಂಬಂತೆ ಉಳಿದಿದೆ ಎಂದು ಈ ಕವಿಯಷ್ಟೇ ಹೇಳಬಲ್ಲರು.
*


ನೂತನಾ ದೋಶೆಟ್ಟಿ


ಗಾಢ ವಿಷಾದದ ನೆರಳಿನಂತಿರುವ ‘…. ಮಳೆಹನಿ’


ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.
ಕವಿ ಕಾಜೂರು ಸತೀಶ್ ರವರ “ಕಣ್ಣಲ್ಲಿಳಿದ ಮಳೆಹನಿ” ಕವನ ಸಂಕಲನದ ಕುರಿತು ಡಾ. ಸಿ.ಬಿ. ಐನಳ್ಳಿ ಬರಹ

ಒಂದು ವಿಶಿಷ್ಟವಾದ ವಸ್ತು ವಿಷಯ ಸಂವೇದನಾಕ್ರಮ ಮತ್ತು ಅಭಿವ್ಯಕ್ತಿಯನ್ನು ಈ ಸಂಕಲನದ ಕವಿತೆಗಳು ಪರಿಚಯಿಸುವಂತಿವೆ. ಆಧುನಿಕತೆಯ ಸಹವಾಸದಲ್ಲಿ ನಿಸರ್ಗದ ಸಾಂಗತ್ಯ ಮತ್ತು ಅದರ ಸೃಷ್ಟಿಶೀಲತೆ ಒಡಮೂಡಿಸುವ ಜೀವಧ್ವನಿಯನ್ನು ಅಕ್ಷರಶಃ ಕಳೆದುಕೊಂಡಿರುವ ಇಂದಿನ ಸ್ಥಿತಿಯ ಬಗೆಗಿನ ಆತಂಕ ಮತ್ತು ಅದರಿಂದ ಬಿಡುಗಡೆಗೊಳ್ಳುವ ಹಂಬಲ ಇಲ್ಲಿಯ ಬಹುತೇಕ ಕವಿತೆಗಳಲ್ಲಿ ತುಡಿಯುತ್ತದೆ. ನಿಸರ್ಗವನ್ನು ತನ್ನ ಸ್ವತ್ತಾಗಿ ವಶಪಡಿಸಿಕೊಳ್ಳಲು ಹವಣಿಸುವ ಮಾನವನ ಸಣ್ಣತನದ ವಿಡಂಬನೆ (ಮರ ಯಾರದು?, ಕಾಡುಗವಿತೆ) ಇಲ್ಲಿಯ ಕವಿತೆಗಳಲ್ಲಿದೆ. ನಿಸರ್ಗದ ನಾಶದ ಕುರಿತ (ಎಲ್ಲಿ, ನಡುರಾತ್ರಿ…, ಕಾಡುಗಳಿದ್ದವು ಕವಿತೆಗಳಲ್ಲಿ) ಗಾಢ ವಿಷಾದವಿದೆ. ಅಮೆರಿಕದ ಕವಿ ರಾಬರ್ಟ ಫ್ರಾಸ್ಟ್ ನ ಕವನಗಳಲ್ಲಾಗುವಂತೆ ನಿಸರ್ಗದಲ್ಲಿ ವ್ಯಕ್ತಿ ಕಾಣುವ ಸಾಮಾನ್ಯ ಚಿಕ್ಕಪುಟ್ಟ ದೃಶ್ಯಗಳು ಬದುಕಿನ ಮೀಮಾಂಸೆಯ ಕುರಿತ ಆಳವಾದ ಜಿಜ್ಞಾಸೆಗೆ ತೊಡಗಿಸುತ್ತವೆ. ಫ್ರಾಸ್ಟ್ ನನ್ನು ನೆನಪಿಸುವ ಇನ್ನೊಂದು ಮುಖ್ಯ ಗುಣವೆಂದರೆ ಈ ಕವನಗಳಿಗಿರುವ ಮುಕ್ತಅಂತ್ಯವುಳ್ಳ ಅರ್ಥ ಸಾಧ್ಯತೆಗಳು.



ದೈನಂದಿನ ಬದುಕಿನ ಸರಳ ಸಾಮಾನ್ಯ ವಸ್ತು ಮತ್ತು ಘಟನೆಗಳಲ್ಲಿ ಕವಿ ಕಾಣುವ ಆಳವಾದ ಕಾಣ್ಕೆ(ಏಕ, ಕಾವ್ಯಮೀಮಾಂಸೆ) ಎಪಿಫ್ಯಾನಿಕ್ ಎನಿಸುವಂಥ ಅಚ್ಚರಿಯನ್ನು ಮೂಡಿಸುತ್ತದೆ. ಬಯಲಿಗೆ ಅರ್ಥಗಳನ್ನು ಹಚ್ಚುವ (ಗಾಳಿ) ಮತ್ತು ಎಲ್ಲಾ ಅರ್ಥಗಳಲ್ಲಿ ಬಯಲನ್ನು ಕಾಣುವ (ನನ್ನೊಳಗೆ….) ಸಮಚಿತ್ತತೆ ಕವಿಗಿದೆ ಎನಿಸುತ್ತದೆ. ‘ಝರಿ ಮಾತನಾಡುವುದು ಬಿಟ್ಟರೆ/ ಮೌನ ಬಡಕಲಾಗಿ ಹುಟ್ಟಿ/ ಕವಿತೆ ಮುಖವಾಡವಾಗುವುದು ಲೋಕಕ್ಕೆ’ ಎಂಬುದು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಎಚ್ಚರ. ನಿಸರ್ಗದ ಪ್ರತಿ ನಡೆಯ ಬಗೆಗಿನ ಬೆರಗುಗಣ್ಣು ಕವನಗಳಲ್ಲಿ ತೆರೆದೇ ಇದೆ. ಕೆಲವು ಕವನಗಳಲ್ಲಿ (ನನ್ನ ಶವಸಂಸ್ಕಾರದ ದಿನ, ಸಾಯ್ವ ಸುಖ, ಏಕ, ಇತ್ಯಾದಿ) ಸಾವು ನಿಸರ್ಗ ಸಹಜವಾದ ಪ್ರಕ್ರಿಯೆಯ ಭಾಗವೆಂಬಂತೆ ಸಂಭ್ರಮಿಸಲ್ಪಡುತ್ತದೆ ; ಆದರೂ, ವ್ಯಕ್ತಿಯ ವೈಯಕ್ತಿಕ ಬದುಕಿನ ಹೆಪ್ಪುಗಟ್ಟಿದ ವಿಷಾದ ಈ ಚಿತ್ರಣಗಳ ಮೂಲಕ ಬಿಡುಗಡೆಯನ್ನು ಬಯಸುತ್ತಿರುವಂತೆಯೂ ಕಾಣುತ್ತದೆ. ಮಾನವ, ಪ್ರಕೃತಿ, ಅನ್ಯಜೀವಿಗಳು, ಪ್ರಕೃತಿಯ ಭಾಗವಾದ ವಸ್ತುಗಳು ಎಲ್ಲವೂ ಅಂತರಾವಲಂಬನೆ ಮತ್ತು ಸಹಕಾರದಲ್ಲಿ ಬಾಳಬೇಕಿರುವ ಅಗತ್ಯತೆಯನ್ನು ಮಾನವೋತ್ತರವಾದದ (ಪೋಸ್ಟ್ ಹ್ಯುಮ್ಯಾನಿಜಂ) ಒಂದು ಕವಲು ಪ್ರತಿಪಾದಿಸುತ್ತಾ ಮಾನವಕೇಂದ್ರಿತ ಜಗತ್ತಿನ ಪರಿಕಲ್ಪನೆಯನ್ನು ನಿರಾಕರಿಸಿರುವುದು ತಿಳಿದಿದೆದೆಯಷ್ಟೆ. ಈ ಸಂಕಲನದ ಕವಿತೆಗಳಲ್ಲಿ ವ್ಯಕ್ತವಾಗುವ ಮುಖ್ಯ ಕಾಳಜಿಗಳು ಎಲ್ಲೋ ಒಂದು ಕಡೆ ಈ ದೃಷ್ಟಿಕೋನದ ವಿನ್ಯಾಸಕ್ಕೆ ಹೊಂದಿಕೊಳ್ಳುವಂತಿವೆಯೇನೋ ಎನಿಸುತ್ತದೆ. ಆದರೆ, ಇದು ಈ ಕವಿತೆಗಳನ್ನು ನೋಡಬಹುದಾದ ನೋಟಕ್ರಮಗಳಲ್ಲಿ ಒಂದು ಎನ್ನಬಹುದಷ್ಟೆ.

ಈ ಸಂಕಲನ ಕಾವ್ಯದ ಹುಟ್ಟು ಉದ್ದೇಶ ಮತ್ತು ಬಾಳಿಕೆಯ ಕುರಿತ ಜಿಜ್ಞಾಸೆಯೂ ಆಗಿದೆ. ಕಾವ್ಯಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವೆ ಭೇದವೆಣಿಸದೆ ಸಾಹಿತಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಶುದ್ಧತೆ ಮತ್ತು ಶ್ರೇಷ್ಠತೆಯ ವ್ಯಸನವನ್ನೂ, ಈ ವ್ಯಸನದಿಂದ ಹುಟ್ಟಿದ ಕ್ರೌರ್ಯ ಮತ್ತು ಹಿಂಸೆಯನ್ನು (ಮ್ಯಾನ್ ಹೋಲಿನಲ್ಲಿ ಸತ್ತಕವಿತೆ) ಸೂಕ್ಷ್ಮವಾಗಿ ವಿಡಂಬಿಸುತ್ತದೆ. ಕಾವ್ಯಮೀಮಾಂಸೆಯ ಹೆಸರಲ್ಲಿ ಹೇರಲಾದ ರೂಪ-ವಿರೂಪಗಳ ಮಡಿ-ಮೈಲಿಗೆಯ ಹೇರಿಕೆಯ ಮೌಲ್ಯಗಳ ಮೀರುವಿಕೆಯೂ ಇಲ್ಲಿ (ಕಾವ್ಯಮೀಮಾಂಸೆ) ಕಾಣುತ್ತದೆ. ನಿಸರ್ಗ, ಮಾನವನ ಬದುಕು ಮತ್ತು ಕಾವ್ಯಗಳ ನಡುವೆ ಬೆಸೆದುಕೊಂಡಿರುವ ಅಂತರಸಂಬಂಧಗಳ ಬಗ್ಗೆ ಕವಿಗೆ ಗಾಢವಾದ ನಂಬಿಕೆಯಿರುವುದು ಇಲ್ಲಿಯ (ಎಷ್ಟುಸುಖಿ ನೀನು…) ಕವನಗಳಲ್ಲಿ ತಿಳಿಯುತ್ತದೆ. ಕವಿಗೆ ಪೆನ್ನು ಬೆಳಕು ಹಚ್ಚಬೇಕಾದ ಸಾಧನವಷ್ಟೇ ಅಲ್ಲ, ಹುಟ್ಟುವ ತವಕದಲ್ಲಿರುವ ಕವಿತೆಯ ಕತ್ತು ಹಿಸುಕುವ ಆಯುಧವೂ ಹೌದು. ಎದೆಯಲ್ಲಿ ಮೂಡಿದ ಸಂವೇದನೆಗಳೆಲ್ಲವನ್ನೂ ವ್ಯಕ್ತಪಡಿಸಲಾಗದ ಕವಿತೆ ‘ಬಂಧಿ’ಯಾಗಿರುವುದರ ತೊಳಲಾಟ ಒಂದೆಡೆಯಾದರೆ, ಇನ್ನೊಂದೆಡೆ ಕವಿತೆ ಎಂಬುದು ಸದಾ ಆಗುವಿಕೆಯ(ಕವಿತೆ ಹುಟ್ಟುವುದರಲ್ಲಿತ್ತು) ಪ್ರಕ್ರಿಯೆಯಲ್ಲಿರುವ ಅರಿವಿನ ಒರತೆ ಎಂಬ ನಿಲುವು ‘ಕೇಳಿರದ ಹಾಡುಗಳೇ ಹೆಚ್ಚು ಮಧುರ’ ಎಂಬ ಕೀಟ್ಸ್ ಕವಿಯ ಸಾಲನ್ನು ನೆನಪಿಸುತ್ತವೆ. ಈ ಕವಿತೆಗಳ ಅವಲೋಕನ ಕವಿತೆಯೆಂಬುದು ಕವಿಗೆ ನಿರಂತರವಾದ ಬದುಕಿನ ಜಿಜ್ಞಾಸೆ ಅಥವಾ ಶೋಧವಾಗಿದೆ ಎಂಬುದನ್ನು ಹೇಳುತ್ತದೆ (‘ಬೆಳಕ ಹಚ್ಚುತ್ತೇನೆ’ ಮತ್ತು ‘ಕವಿತೆ ಹುಟ್ಟುವುದರಲ್ಲಿತ್ತು’). ಇವು ಒಂದು ಸಲಕ್ಕೆ ಓದಿ ಮುಗಿಸುವ ಕವನಗಳಾಗಿರದೇ ಒಂದು ಮಟ್ಟಿನ ಧ್ಯಾನವನ್ನು ಬೇಡುತ್ತವೆ. ಇಲ್ಲಿಯ ಮೌನ ಮಾತನಾಡುತ್ತದೆ.



ಸಾವು ನಿಸರ್ಗ ಸಹಜವಾದ ಪ್ರಕ್ರಿಯೆಯ ಭಾಗವೆಂಬಂತೆ ಸಂಭ್ರಮಿಸಲ್ಪಡುತ್ತದೆ; ಆದರೂ, ವ್ಯಕ್ತಿಯ ವೈಯಕ್ತಿಕ ಬದುಕಿನ ಹೆಪ್ಪುಗಟ್ಟಿದ ವಿಷಾದ ಈ ಚಿತ್ರಣಗಳ ಮೂಲಕ ಬಿಡುಗಡೆಯನ್ನು ಬಯಸುತ್ತಿರುವಂತೆಯೂ ಕಾಣುತ್ತದೆ.
ಕೈಗೂಡದ ಪ್ರೇಮದ ನೋವು ಎದೆಯ ದನಿಯಾಗಿ (ಎದೆಯ ದನಿಯಿದು) ಇಲ್ಲಿ ಹಾಡಿಕೊಳ್ಳುತ್ತದೆ. ಭಗ್ನಗೊಳ್ಳುತ್ತಿರುವ ಪ್ರೇಮದ ಗಾಢ ವಿಷಾದವನ್ನು ಅದರ ಸುಡುವ ಮೌನದ ಸಮೇತ ಬರಹಕ್ಕೆ(ಬರೆಯಲಾರೆ) ಕವಿ ದಾಟಿಸಬಲ್ಲರು. ಎಲ್ಲೆಡೆ ಮಾನವಸಹಜ ಪ್ರೀತಿಯ ಬೇರುಗಳೇ ಮುರುಟುವಂತಾಗಿ, ಮೌಲ್ಯಗಳಿಗೆ ಗೆದ್ದಲು ಹಿಡಿಯುತ್ತಿರುವಾಗ ಹುಟ್ಟುವ ಹತಾಶೆ ಇಲ್ಲಿಯ (ಕೊಲೆ) ಕವನದಲ್ಲಿ ಕಾಣುತ್ತದೆ. ವರ್ತಮಾನದ ಸಾಂಸ್ಕೃತಿಕ ರಾಜಕಾರಣದ ವಿದ್ಯಮಾನಗಳು ಹುಟ್ಟಿಸಿದ ಜಿಗುಪ್ಸೆಯಿಂದ ವಿಮುಖವಾಗುವ ಪ್ರಯತ್ನವೆಂಬಂತೆ ಈ ಕವಿತೆಗಳು ಮೇಲ್ನೋಟಕ್ಕೆ ಕಂಡರೂ, ಅಂಥ ವಿದ್ಯಮಾನಗಳಿಗೆ ಅತ್ಯಂತ ಸೂಕ್ಷ್ಮ ಮತ್ತು ಪ್ರಬುದ್ಧವಾದ ಪ್ರತಿಭಟನೆಯನ್ನು ಅವು ದಾಖಲಿಸುತ್ತವೆ. ‘ಎಲ್ಲ ಹೃದಯಗಳ ಬಣ್ಣ ನನ್ನ ಮನೆಗೆ….. ಕರುಳ ಚಾಪೆ ಹಾಸುವೆ/ ಕೂತು ಸುಧಾರಿಸಿಕೊಳ್ಳಿ….. ಬೇಕಿದ್ದರೆ / ಮೆದುಳು ಹೃದಯ ರಕ್ತದ ಕೋಣೆಗಳ ಬಗ್ಗೆ /ಚರ್ಚೆ ನಡೆಸಿರಿ’ (ನನ್ನೊಳಗೆ ಇಳಿಯುವಾಗ) – ಈ ಸಾಲುಗಳು ಸೂಕ್ಷ್ಮ ಪ್ರತಿಭಟನೆಯ ಜೊತೆಗೆ, ಬೇಡದ ವಿಷಯಗಳ ಬಗೆಗಿನ ಮೌನವನ್ನೂ ಬಿತ್ತುತ್ತಿವೆ.


ಆಧುನಿಕೋತ್ತರ ಬದುಕಿನ ಅರ್ಥಹೀನತೆ ಸತ್ವಹೀನತೆಯ ವಿಡಂಬನೆ, ಅದರಿಂದ ಬಿಡುಗಡೆಯ ಬಯಕೆ (ಮರೆತುಬಿಟ್ಟೆ, ಒಂದಾದರೂ… ) ಇಲ್ಲಿದೆ. ಸತ್ಯ-ಮಿಥ್ಯಗಳ ನಡುವಿನ ಗೆರೆ ಅಳಿಸಿಕೊಂಡ ಬದುಕಿನ ಪೊಳ್ಳುತನದ ರೂಪಕಗಳೂ (ಪರದೆ) ಕಾಣುತ್ತವೆ. ‘ಹಚ್ಚಿಟ್ಟರೆ ಬುಡ್ಡಿ ದೀಪ / ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು,…. ಹಸಿದು ಸತ್ತವರಿಗೆ ಹೀಗೇ / ಒಂದು ಹಣ್ಣು ಕಂಡಿರಬಹುದು /ಬೆಳಕ ಭ್ರಮೆಯಲ್ಲಿ’ (ಬುಡ್ಡಿ ದೀಪದ ಬುಡ)- ಇವು ವರ್ತಮಾನದ ಅಭಿವೃದ್ಧಿ ಮಾದರಿಯ ಲೇವಡಿಯೂ ಆಗಬಹುದಾದ ಸಾಲುಗಳು. ಮುಖವಾಡಗಳಲಿ ನಡೆವ ಲೂಟಿ ಮತ್ತು ಸಣ್ಣಪುಟ್ಟ ಬೂಟಿಯ (ಕ್ಷಮಿಸು) ಲೇವಡಿಯೂ ಇದೆ. ಬೆವರ ಬದುಕಿನ ಬವಣೆಯ ಸಾಂಗತ್ಯ(ಹೋಟೆಲ್), ನಿರ್ಲಕ್ಷಕ್ಕೊಳಗಾದ ಹೆಣ್ಣಿನ ಚಿತ್ರಣಗಳೂ (ಅಮ್ಮನ ಸೀರೆ) ಪ್ರತಿಮಾತ್ಮಕವಾಗಿ ಕಾಣುತ್ತವೆ.

ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.



ಕವಿಯ ಅನುಭವ ಜಗತ್ತು ವಿಸ್ತಾರಗೊಳ್ಳಬೇಕಾದ ಅಗತ್ಯತೆಯನ್ನು ಹೇಳುತ್ತಾ, ಕನ್ನಡ ಸಾಹಿತ್ಯದಲ್ಲಿ ಸತೀಶರ ಕಾವ್ಯದ ಪಯಣದ ಸಾಧ್ಯತೆಗಳನ್ನು ಮುನ್ನುಡಿಯಲ್ಲಿ ಎಂ.ಡಿ.ಒಕ್ಕುಂದರವರು ಸರಿಯಾಗಿಯೇ ಗುರ್ತಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳು ಮೊಳಕೆಯೊಡೆಯಲು ಬೇಕಾದ ಸಾಂಸ್ಕೃತಿಕ ಪರಿಸರವನ್ನು ಕಟ್ಟಲು ನಿರಂತರ ಶ್ರಮ ವಹಿಸುತ್ತಿರುವ ಸಂಗಾತ ಪುಸ್ತಕ ಪ್ರಕಾಶನ ಈ ಕೃತಿಗೆ 2021ರ ಡಿಸೆಂಬರ್ ನಲ್ಲಿ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ನೀಡಿ ಗೌರವಿಸಿದೆ. ಈ ಗೌರವಕ್ಕೆ ಪಾತ್ರರಾದ ಕವಿ ಸತೀಶರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅಭಿನಂದನೆಗಳು.

(ಕೃತಿ: ಕಣ್ಣಲ್ಲಿಳಿದ ಮಳೆಹನಿ (ಕವನ ಸಂಕಲನ), ಲೇಖಕರು : ಕಾಜೂರು ಸತೀಶ್, ಪ್ರಕಾಶನ : ಸಂಗಾತ ಪುಸ್ತಕ, ಧಾರವಾಡ, ಬೆಲೆ: 80/-)

                        ಡಾ. ಸಿ.ಬಿ.ಐನಳ್ಳಿ


ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


Saturday, January 29, 2022

'ಕಣ್ಣಲ್ಲಿಳಿದ ಮಳೆಹನಿ' ಕುರಿತು ಮಣಜೂರುಶಿವಕುಮಾರ್

ಪ್ರೀತಿಯ ಸತೀಶ್ ಕಾಜೂರು ಸರ್ ರವರಿಗೆ,

ನಿಮ್ಮ ಹೊಸ ಕವನ ಸಂಕಲನ ಕಣ್ಣಲ್ಲಿಳಿದ ಮಳೆಹನಿ ಪುಸ್ತಕ ಓದಿದೆ. ನನಗನ್ನಿಸಿದ ನಾಲ್ಕು ಸಾಲುಗಳು.

ಒಕ್ಕುಂದ ಸರ್ ಬರೆದಿರುವ ಹಾಗೆ ನಿಮ್ಮ ಸಾಲುಗಳಲ್ಲಿ ಭಾವವೇಶವಿಲ್ಲ, ಆದರೆ ಅನುಕ್ರೋಶವಿದೆ. ವ್ಯಕ್ತವಾಗಿರುವ ಪ್ರಕೃತಿ ಮೇಲಿನ ಪ್ರೀತಿ, ವಿಕೃತಿ ಮೇಲಿನ ಸಿಟ್ಟು ಎರಡು ಸೊಗಸು. ಪರಿಸರದ ಮತ್ತು ಕಂಡ ಅತಿ ಸೂಕ್ಷ್ಮ ಸಂಗತಿಗಳ ದೊಡ್ಡ ಆಲೋಚನಾ ಅಭಿವ್ಯಕ್ತಿ. ಸೂಕ್ಷ್ಮ ಸಂವೇದನೆಗಳು ಮೊದಲ ಪುಟದಿಂದ ಕೊನೆಯ ಪುಟದ ತನಕವೂ ಅನುಸಂಧಾನವಾಗಿವೆ.

ನಿಮ್ಮ ಕವಿತೆಗಳ ಹೊಸ ಆಲೋಚನೆ ಒಂದು ಕಾವ್ಯಸೃಷ್ಟಿಯ ಹೊಸ ಸಾಧ್ಯತೆ. ಅದ್ಭುತ ಕವಿತೆಗಳ ಹೂರಣ. ಆಗಾಗ ಮತ್ತೆ ಮತ್ತೆ ಪುಟಗಳನ್ನು ತೆರೆದು ನಾನೊಬ್ಬನೇ, ನನ್ನವರ ಮುಂದೆ ಓದಲು ಹಾತೊರೆಯುವಂತೆ ಮಾಡುವ ಶಕ್ತಿ ನಿಮ್ಮ ಕವಿತೆಗಳಿಗಿದೆ.

ಹೊಸತು ಆಲೋಚಿಸುವ, ಹೊಸತು ಸೃಷ್ಟಿಸುವ, ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ನಿಮ್ಮ ಗುಣ ನಿರಂತರವಾಗಿರಲಿ.
ಶುಭಾಶಯಗಳು
*


ಶಿವಕುಮಾರ್ ಮಣಜೂರು

Friday, December 24, 2021

'ಕಣ್ಣಲ್ಲಿಳಿದ ಮಳೆಹನಿ'ಯ ಕುರಿತು ದಾದಾಪೀರ್ ಜೈಮನ್



ಕಾಜೂರು ಸತೀಶ್ ಅವರ 'ಕಣ್ಣಲ್ಲಿಳಿದ ಮಳೆಹನಿ' ಕವನಸಂಕಲನ ಓದಿದೆ. ಸಹಜತೆಯನ್ನೇ ಜೀವವಾಗಿಸಿಕೊಂಡ ನಿರಾಭರಣ ಸೌಂದರ್ಯವಿದೆ ಈ ಕವಿತೆಗಳಲ್ಲಿ. 'ಒಂದೇ ಒಂದು ಸಾಲು, ಪದ, ಅಕ್ಷರ, ಉಪಮೆ, ರೂಪಕ, ಪ್ರತಿಮೆಗಳನ್ನು ಅನಗತ್ಯವಾಗಿ ಬಳಸಲಾರೆ ಎಂಬ ಹಠ ತೊಟ್ಟಂತಿದೆ.' ಎಂಬ ತೀರ್ಪುಗಾರರ ಅಭಿಪ್ರಾಯಕ್ಕೆ ಮುದ್ರೆಯೊತ್ತುವ ಹಾಗೆ ಇಲ್ಲಿನ ಎಲ್ಲಾ ಕವಿತೆಗಳಿವೆ.

ಒಂದು ಆತ್ಯಂತಿಕ ವಿಷಾದವನ್ನು ದಾಟಿಸುವಾಗಲೂ ಕವಿ ತುಂಬಾ ಸಂಯಮದಿಂದ ದಾಟಿಸುತ್ತಾರೆ. ಈ ಸಂಕಲನದಲ್ಲಿ ಕವಿತೆಯ ಕುರಿತಾದ ಹಲವು ಕವಿತೆಗಳಿವೆ. ಕವಿತೆಯೆಂದರೇನು ಎಂಬ ಶೋಧದ ಜೊತೆಗೆ 'ಸಾವು' ಈ ಕವಿಯನ್ನು ತೀವ್ರವಾಗಿ ಕಾಡಿದೆ. ನೆರಳಂತೆ ಸುಳಿಯುವ ಇವೆರಡನ್ನೂ ಒಂದು ದಿವ್ಯಮೌನದ ಏಕಾಂತದಲ್ಲಿ ಎದುರುಗೊಂಡು ಬರೆದ ಹಾಗಿವೆ. ಅದರ ತೀವ್ರತೆ ಪುಸ್ತಕ ಓದಿ ಮುಗಿಸಿದ ಮೇಲೂ ನಮ್ಮೊಳಗೆ ಕುಳಿತುಬಿಡುವಷ್ಟು ಶಕ್ತವಾಗಿವೆ ಎನಿಸಿದೆ. ಅಂತೆಯೇ ಬದುಕಿನ ಹಾಗೂ ಸಮಾಜದ ದಂದುಗಗಳನ್ನು ಹೇಳುವಾಗ ಕವಿ ವಾಚಾಳಿಯಾಗದೆ ತಣ್ಣಗೆ ಸಾತ್ವಿಕ ಪ್ರತಿರೋಧದ ದನಿಯಾಗಿಯೆ ಹೇಳುತ್ತಾರೆ.

ಕವಿತೆಗಳು ಇಷ್ಟವಾದವು.



- ದಾದಾಪೀರ್ ಜೈಮನ್

Sunday, December 19, 2021

ಕಣ್ಣಲ್ಲಿಳಿದ ಮಳೆಹನಿಯ ಕುರಿತು ಶಿವಾನಂದ ಉಳ್ಳಿಗೇರಿ

ನಿಮ್ಮ ಕವನ ಸಂಕಲನ ಕಣ್ಣಲ್ಲಿಳಿದ ಮಳೆಹನಿ ಓದಿದೆ.
ತುಂಬಾ ಒಳ್ಳೆಯ ಕವಿತೆಗಳನ್ನು ಬರೆದಿರುವಿರಿ ಮೊದಲಿಗೆ ತಮಗೆ ಅಭಿನಂದನೆಗಳು.

ತುಂಬಾ ಸೊಗಸಾದ ಆಕರ್ಷಕ ಮುಖಪುಟ ಹಾಗೂ ಶೀರ್ಷಿಕೆ.

ಪುಟ ತೆರೆದು ಒಂದೊಂದೆ ಕವಿತೆಗಳನ್ನು ಓದಲಾರಂಭಿಸಿದರೆ ನಿರಂತರವಾಗಿ ಓದಿಸಿಕೊಂಡು ಹೋಗುವ ಉತ್ತಮ, ಅರ್ಥಪೂರ್ಣ ವಿಶಿಷ್ಟವಾದ ಕವಿತೆಗಳು.
ಕವಿತೆಯ ವಿಷಯ, ಕಾವ್ಯ ಶೈಲಿ, ಭಾಷೆ ಎಲ್ಲವೂ ತುಂಬಾ ಚೆನ್ನಾಗಿದೆ. ಎಲ್ಲ ಕವಿತೆಗಳನ್ನು ಓದಿ ಖುಷಿಯಾಯ್ತು.

ನಿಮ್ಮಿಂದ ಇನ್ನಷ್ಟು ಕವನ ಸಂಕಲನಗಳು ಮೂಡಿ ಬರಲಿ
ಶುಭವಾಗಲಿ ತಮಗೆ
💐💐💐💐💐
*

ಶಿವಾನಂದ ಉಳ್ಳಿಗೇರಿ

ಕವಿ, ಶಿಕ್ಷಕ
ಬೈಲಹೊಂಗಲ, ಬೆಳಗಾವಿ.

ಕಣ್ಣಲ್ಲಿಳಿದ ಮಳೆಹನಿಯ ಕುರಿತು ಡಾ.ಎಂ.ಡಿ.ಒಕ್ಕುಂದ




ಕಾಡು ಹಾಗೂ ಪ್ರಕೃತಿ (ನಾಶದ ವಿಷಾದ), ಕವಿತೆ ಮತ್ತು ಸಾವು ಇವರ ಸೃಜನಶೀಲತೆಯ ಕೇಂದ್ರ ಕಾಳಜಿಯಾಗಿವೆ. ಇವುಗಳೊಂದಿಗೆ ವರ್ತಮಾನದ ತಲ್ಲಣಗಳು, ಬದುಕನ್ನು ಕುರಿತಾದ ತಾತ್ವಿಕ ಜಿಜ್ಞಾಸೆಗಳೂ ಸೇರಿಕೊಂಡಿವೆ. ಇವು ಒಂದರೊಳಗೊಂದು ಬೆಸೆದೂ ಹೋಗಿವೆ. ಕನ್ನಡ ಕಾವ್ಯಕ್ಕೆ ಇವು ಹೊಸ ಸಂಗತಿಗಳೇನಲ್ಲ. ಆದರೆ ಇಲ್ಲಿಯ ಎಲ್ಲ ಕವಿತೆಗಳೂ ತಮ್ಮ ಸಂವೇದನಾಕ್ರಮ, ಪ್ರತಿಮಾವಿಧಾನ ಹಾಗೂ ಭಾಷಿಕ ಬಳಕೆಯ ಭಿನ್ನತೆ, ಸ್ವಂತಿಕೆ ಹಾಗೂ ತಾಜಾತನಗಳಿಂದ ಈ ಕೇಂದ್ರಗಳಿಗೆ ಹೊಸ ರೂಪಧಾರಣೆ ನೀಡಿವೆ. ಆಕರ್ಷಣೆಯನ್ನು ಸೃಷ್ಟಿಸಿವೆ. ಕಾಡನ್ನು ಕೇಂದ್ರದಲ್ಲಿರಿಸಿಕೊಂಡ ಕವಿತೆಗಳಂತೂ ಕನ್ನಡ ಕಾವ್ಯಕ್ಕೆ ಹೊಸದಾದ ಗ್ರಹಿಕೆಗಳನ್ನು, ಹೊಚ್ಚಹೊಸ ಪ್ರತಿಮೆಗಳನ್ನು ಹಾಗೂ ಭಾಷಿಕ ಆಯಾಮಗಳನ್ನು ಸೇರಿಸುವಷ್ಟು ಶಕ್ತಿಶಾಲಿಯಾಗಿವೆ. ಸಾವನ್ನು ಕುರಿತ ಕವಿತೆಗಳು ಭಯ ತಲ್ಲಣ ಆಘಾತ ನಿರಾಸೆಗಳಿಗಿಂತ ಪ್ರಬುದ್ಧವಾಗಿ ಸಾವನ್ನು ಕುರಿತಂತೆ ತಾತ್ವಿಕ ಜಿಜ್ಞಾಸೆಗೆ ತೊಡಗುತ್ತವೆ. ‘ಕವಿತೆ’ ಕೇಂದ್ರಿತ ಕವಿತೆಗಳು ಸೃಜನಶೀಲತೆಯ ಎಚ್ಚರದ ದಾರಿಗಳನ್ನು ಶೋಧಿಸುತ್ತವೆ.

ಅತಿಭಾವುಕತೆ, ಭಾವಾವೇಶ, ವಾಗಾಡಂಬರ, ಉಪಮೆ ರೂಪಕ ಪ್ರತಿಮೆಗಳನ್ನು ಕಟ್ಟುವ ತಿಣುಕಾಟಗಳು ವಿಜೃಂಭಿಸುವುದಿಲ್ಲ. ಒಂದು ಸಾಲು, ಒಂದು ಪದ, ಒಂದು ಅಕ್ಷರ, ಒಂದೇ ಒಂದು ಉಪಮೆ ರೂಪಕ ಪ್ರತಿಮೆಗಳನ್ನು ಅನಗತ್ಯವಾಗಿ ಬಳಸಲಾರೆ ಎಂಬ ಹಠ ತೊಟ್ಟಂತಿದೆ. ಇದು ಹೊಸತಲೆಮಾರಿಗೆ ಅಪರೂಪದ ಗುಣ.
*


- ಎಂ.ಡಿ.ಒಕ್ಕುಂದ

------------------------------------
ಕಣ್ಣಲ್ಲಿಳಿದ ಮಳೆಹನಿ
ಲೇ : ಕಾಜೂರು ಸತೀಶ್
ಬೆಲೆ : 80 ರೂ.

ಸಂಗಾತ ಪುಸ್ತಕ
8431113501