ಕೃಪೆ- ಕೆಂಡಸಂಪಿಗೆ
ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.
ಕವಿ ಕಾಜೂರು ಸತೀಶ್ ರವರ “ಕಣ್ಣಲ್ಲಿಳಿದ ಮಳೆಹನಿ” ಕವನ ಸಂಕಲನದ ಕುರಿತು ಡಾ. ಸಿ.ಬಿ. ಐನಳ್ಳಿ ಬರಹ
ಒಂದು ವಿಶಿಷ್ಟವಾದ ವಸ್ತು ವಿಷಯ ಸಂವೇದನಾಕ್ರಮ ಮತ್ತು ಅಭಿವ್ಯಕ್ತಿಯನ್ನು ಈ ಸಂಕಲನದ ಕವಿತೆಗಳು ಪರಿಚಯಿಸುವಂತಿವೆ. ಆಧುನಿಕತೆಯ ಸಹವಾಸದಲ್ಲಿ ನಿಸರ್ಗದ ಸಾಂಗತ್ಯ ಮತ್ತು ಅದರ ಸೃಷ್ಟಿಶೀಲತೆ ಒಡಮೂಡಿಸುವ ಜೀವಧ್ವನಿಯನ್ನು ಅಕ್ಷರಶಃ ಕಳೆದುಕೊಂಡಿರುವ ಇಂದಿನ ಸ್ಥಿತಿಯ ಬಗೆಗಿನ ಆತಂಕ ಮತ್ತು ಅದರಿಂದ ಬಿಡುಗಡೆಗೊಳ್ಳುವ ಹಂಬಲ ಇಲ್ಲಿಯ ಬಹುತೇಕ ಕವಿತೆಗಳಲ್ಲಿ ತುಡಿಯುತ್ತದೆ. ನಿಸರ್ಗವನ್ನು ತನ್ನ ಸ್ವತ್ತಾಗಿ ವಶಪಡಿಸಿಕೊಳ್ಳಲು ಹವಣಿಸುವ ಮಾನವನ ಸಣ್ಣತನದ ವಿಡಂಬನೆ (ಮರ ಯಾರದು?, ಕಾಡುಗವಿತೆ) ಇಲ್ಲಿಯ ಕವಿತೆಗಳಲ್ಲಿದೆ. ನಿಸರ್ಗದ ನಾಶದ ಕುರಿತ (ಎಲ್ಲಿ, ನಡುರಾತ್ರಿ…, ಕಾಡುಗಳಿದ್ದವು ಕವಿತೆಗಳಲ್ಲಿ) ಗಾಢ ವಿಷಾದವಿದೆ. ಅಮೆರಿಕದ ಕವಿ ರಾಬರ್ಟ ಫ್ರಾಸ್ಟ್ ನ ಕವನಗಳಲ್ಲಾಗುವಂತೆ ನಿಸರ್ಗದಲ್ಲಿ ವ್ಯಕ್ತಿ ಕಾಣುವ ಸಾಮಾನ್ಯ ಚಿಕ್ಕಪುಟ್ಟ ದೃಶ್ಯಗಳು ಬದುಕಿನ ಮೀಮಾಂಸೆಯ ಕುರಿತ ಆಳವಾದ ಜಿಜ್ಞಾಸೆಗೆ ತೊಡಗಿಸುತ್ತವೆ. ಫ್ರಾಸ್ಟ್ ನನ್ನು ನೆನಪಿಸುವ ಇನ್ನೊಂದು ಮುಖ್ಯ ಗುಣವೆಂದರೆ ಈ ಕವನಗಳಿಗಿರುವ ಮುಕ್ತಅಂತ್ಯವುಳ್ಳ ಅರ್ಥ ಸಾಧ್ಯತೆಗಳು.
ದೈನಂದಿನ ಬದುಕಿನ ಸರಳ ಸಾಮಾನ್ಯ ವಸ್ತು ಮತ್ತು ಘಟನೆಗಳಲ್ಲಿ ಕವಿ ಕಾಣುವ ಆಳವಾದ ಕಾಣ್ಕೆ(ಏಕ, ಕಾವ್ಯಮೀಮಾಂಸೆ) ಎಪಿಫ್ಯಾನಿಕ್ ಎನಿಸುವಂಥ ಅಚ್ಚರಿಯನ್ನು ಮೂಡಿಸುತ್ತದೆ. ಬಯಲಿಗೆ ಅರ್ಥಗಳನ್ನು ಹಚ್ಚುವ (ಗಾಳಿ) ಮತ್ತು ಎಲ್ಲಾ ಅರ್ಥಗಳಲ್ಲಿ ಬಯಲನ್ನು ಕಾಣುವ (ನನ್ನೊಳಗೆ….) ಸಮಚಿತ್ತತೆ ಕವಿಗಿದೆ ಎನಿಸುತ್ತದೆ. ‘ಝರಿ ಮಾತನಾಡುವುದು ಬಿಟ್ಟರೆ/ ಮೌನ ಬಡಕಲಾಗಿ ಹುಟ್ಟಿ/ ಕವಿತೆ ಮುಖವಾಡವಾಗುವುದು ಲೋಕಕ್ಕೆ’ ಎಂಬುದು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಎಚ್ಚರ. ನಿಸರ್ಗದ ಪ್ರತಿ ನಡೆಯ ಬಗೆಗಿನ ಬೆರಗುಗಣ್ಣು ಕವನಗಳಲ್ಲಿ ತೆರೆದೇ ಇದೆ. ಕೆಲವು ಕವನಗಳಲ್ಲಿ (ನನ್ನ ಶವಸಂಸ್ಕಾರದ ದಿನ, ಸಾಯ್ವ ಸುಖ, ಏಕ, ಇತ್ಯಾದಿ) ಸಾವು ನಿಸರ್ಗ ಸಹಜವಾದ ಪ್ರಕ್ರಿಯೆಯ ಭಾಗವೆಂಬಂತೆ ಸಂಭ್ರಮಿಸಲ್ಪಡುತ್ತದೆ ; ಆದರೂ, ವ್ಯಕ್ತಿಯ ವೈಯಕ್ತಿಕ ಬದುಕಿನ ಹೆಪ್ಪುಗಟ್ಟಿದ ವಿಷಾದ ಈ ಚಿತ್ರಣಗಳ ಮೂಲಕ ಬಿಡುಗಡೆಯನ್ನು ಬಯಸುತ್ತಿರುವಂತೆಯೂ ಕಾಣುತ್ತದೆ. ಮಾನವ, ಪ್ರಕೃತಿ, ಅನ್ಯಜೀವಿಗಳು, ಪ್ರಕೃತಿಯ ಭಾಗವಾದ ವಸ್ತುಗಳು ಎಲ್ಲವೂ ಅಂತರಾವಲಂಬನೆ ಮತ್ತು ಸಹಕಾರದಲ್ಲಿ ಬಾಳಬೇಕಿರುವ ಅಗತ್ಯತೆಯನ್ನು ಮಾನವೋತ್ತರವಾದದ (ಪೋಸ್ಟ್ ಹ್ಯುಮ್ಯಾನಿಜಂ) ಒಂದು ಕವಲು ಪ್ರತಿಪಾದಿಸುತ್ತಾ ಮಾನವಕೇಂದ್ರಿತ ಜಗತ್ತಿನ ಪರಿಕಲ್ಪನೆಯನ್ನು ನಿರಾಕರಿಸಿರುವುದು ತಿಳಿದಿದೆದೆಯಷ್ಟೆ. ಈ ಸಂಕಲನದ ಕವಿತೆಗಳಲ್ಲಿ ವ್ಯಕ್ತವಾಗುವ ಮುಖ್ಯ ಕಾಳಜಿಗಳು ಎಲ್ಲೋ ಒಂದು ಕಡೆ ಈ ದೃಷ್ಟಿಕೋನದ ವಿನ್ಯಾಸಕ್ಕೆ ಹೊಂದಿಕೊಳ್ಳುವಂತಿವೆಯೇನೋ ಎನಿಸುತ್ತದೆ. ಆದರೆ, ಇದು ಈ ಕವಿತೆಗಳನ್ನು ನೋಡಬಹುದಾದ ನೋಟಕ್ರಮಗಳಲ್ಲಿ ಒಂದು ಎನ್ನಬಹುದಷ್ಟೆ.
ಈ ಸಂಕಲನ ಕಾವ್ಯದ ಹುಟ್ಟು ಉದ್ದೇಶ ಮತ್ತು ಬಾಳಿಕೆಯ ಕುರಿತ ಜಿಜ್ಞಾಸೆಯೂ ಆಗಿದೆ. ಕಾವ್ಯಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವೆ ಭೇದವೆಣಿಸದೆ ಸಾಹಿತಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಶುದ್ಧತೆ ಮತ್ತು ಶ್ರೇಷ್ಠತೆಯ ವ್ಯಸನವನ್ನೂ, ಈ ವ್ಯಸನದಿಂದ ಹುಟ್ಟಿದ ಕ್ರೌರ್ಯ ಮತ್ತು ಹಿಂಸೆಯನ್ನು (ಮ್ಯಾನ್ ಹೋಲಿನಲ್ಲಿ ಸತ್ತಕವಿತೆ) ಸೂಕ್ಷ್ಮವಾಗಿ ವಿಡಂಬಿಸುತ್ತದೆ. ಕಾವ್ಯಮೀಮಾಂಸೆಯ ಹೆಸರಲ್ಲಿ ಹೇರಲಾದ ರೂಪ-ವಿರೂಪಗಳ ಮಡಿ-ಮೈಲಿಗೆಯ ಹೇರಿಕೆಯ ಮೌಲ್ಯಗಳ ಮೀರುವಿಕೆಯೂ ಇಲ್ಲಿ (ಕಾವ್ಯಮೀಮಾಂಸೆ) ಕಾಣುತ್ತದೆ. ನಿಸರ್ಗ, ಮಾನವನ ಬದುಕು ಮತ್ತು ಕಾವ್ಯಗಳ ನಡುವೆ ಬೆಸೆದುಕೊಂಡಿರುವ ಅಂತರಸಂಬಂಧಗಳ ಬಗ್ಗೆ ಕವಿಗೆ ಗಾಢವಾದ ನಂಬಿಕೆಯಿರುವುದು ಇಲ್ಲಿಯ (ಎಷ್ಟುಸುಖಿ ನೀನು…) ಕವನಗಳಲ್ಲಿ ತಿಳಿಯುತ್ತದೆ. ಕವಿಗೆ ಪೆನ್ನು ಬೆಳಕು ಹಚ್ಚಬೇಕಾದ ಸಾಧನವಷ್ಟೇ ಅಲ್ಲ, ಹುಟ್ಟುವ ತವಕದಲ್ಲಿರುವ ಕವಿತೆಯ ಕತ್ತು ಹಿಸುಕುವ ಆಯುಧವೂ ಹೌದು. ಎದೆಯಲ್ಲಿ ಮೂಡಿದ ಸಂವೇದನೆಗಳೆಲ್ಲವನ್ನೂ ವ್ಯಕ್ತಪಡಿಸಲಾಗದ ಕವಿತೆ ‘ಬಂಧಿ’ಯಾಗಿರುವುದರ ತೊಳಲಾಟ ಒಂದೆಡೆಯಾದರೆ, ಇನ್ನೊಂದೆಡೆ ಕವಿತೆ ಎಂಬುದು ಸದಾ ಆಗುವಿಕೆಯ(ಕವಿತೆ ಹುಟ್ಟುವುದರಲ್ಲಿತ್ತು) ಪ್ರಕ್ರಿಯೆಯಲ್ಲಿರುವ ಅರಿವಿನ ಒರತೆ ಎಂಬ ನಿಲುವು ‘ಕೇಳಿರದ ಹಾಡುಗಳೇ ಹೆಚ್ಚು ಮಧುರ’ ಎಂಬ ಕೀಟ್ಸ್ ಕವಿಯ ಸಾಲನ್ನು ನೆನಪಿಸುತ್ತವೆ. ಈ ಕವಿತೆಗಳ ಅವಲೋಕನ ಕವಿತೆಯೆಂಬುದು ಕವಿಗೆ ನಿರಂತರವಾದ ಬದುಕಿನ ಜಿಜ್ಞಾಸೆ ಅಥವಾ ಶೋಧವಾಗಿದೆ ಎಂಬುದನ್ನು ಹೇಳುತ್ತದೆ (‘ಬೆಳಕ ಹಚ್ಚುತ್ತೇನೆ’ ಮತ್ತು ‘ಕವಿತೆ ಹುಟ್ಟುವುದರಲ್ಲಿತ್ತು’). ಇವು ಒಂದು ಸಲಕ್ಕೆ ಓದಿ ಮುಗಿಸುವ ಕವನಗಳಾಗಿರದೇ ಒಂದು ಮಟ್ಟಿನ ಧ್ಯಾನವನ್ನು ಬೇಡುತ್ತವೆ. ಇಲ್ಲಿಯ ಮೌನ ಮಾತನಾಡುತ್ತದೆ.
ಸಾವು ನಿಸರ್ಗ ಸಹಜವಾದ ಪ್ರಕ್ರಿಯೆಯ ಭಾಗವೆಂಬಂತೆ ಸಂಭ್ರಮಿಸಲ್ಪಡುತ್ತದೆ; ಆದರೂ, ವ್ಯಕ್ತಿಯ ವೈಯಕ್ತಿಕ ಬದುಕಿನ ಹೆಪ್ಪುಗಟ್ಟಿದ ವಿಷಾದ ಈ ಚಿತ್ರಣಗಳ ಮೂಲಕ ಬಿಡುಗಡೆಯನ್ನು ಬಯಸುತ್ತಿರುವಂತೆಯೂ ಕಾಣುತ್ತದೆ.
ಕೈಗೂಡದ ಪ್ರೇಮದ ನೋವು ಎದೆಯ ದನಿಯಾಗಿ (ಎದೆಯ ದನಿಯಿದು) ಇಲ್ಲಿ ಹಾಡಿಕೊಳ್ಳುತ್ತದೆ. ಭಗ್ನಗೊಳ್ಳುತ್ತಿರುವ ಪ್ರೇಮದ ಗಾಢ ವಿಷಾದವನ್ನು ಅದರ ಸುಡುವ ಮೌನದ ಸಮೇತ ಬರಹಕ್ಕೆ(ಬರೆಯಲಾರೆ) ಕವಿ ದಾಟಿಸಬಲ್ಲರು. ಎಲ್ಲೆಡೆ ಮಾನವಸಹಜ ಪ್ರೀತಿಯ ಬೇರುಗಳೇ ಮುರುಟುವಂತಾಗಿ, ಮೌಲ್ಯಗಳಿಗೆ ಗೆದ್ದಲು ಹಿಡಿಯುತ್ತಿರುವಾಗ ಹುಟ್ಟುವ ಹತಾಶೆ ಇಲ್ಲಿಯ (ಕೊಲೆ) ಕವನದಲ್ಲಿ ಕಾಣುತ್ತದೆ. ವರ್ತಮಾನದ ಸಾಂಸ್ಕೃತಿಕ ರಾಜಕಾರಣದ ವಿದ್ಯಮಾನಗಳು ಹುಟ್ಟಿಸಿದ ಜಿಗುಪ್ಸೆಯಿಂದ ವಿಮುಖವಾಗುವ ಪ್ರಯತ್ನವೆಂಬಂತೆ ಈ ಕವಿತೆಗಳು ಮೇಲ್ನೋಟಕ್ಕೆ ಕಂಡರೂ, ಅಂಥ ವಿದ್ಯಮಾನಗಳಿಗೆ ಅತ್ಯಂತ ಸೂಕ್ಷ್ಮ ಮತ್ತು ಪ್ರಬುದ್ಧವಾದ ಪ್ರತಿಭಟನೆಯನ್ನು ಅವು ದಾಖಲಿಸುತ್ತವೆ. ‘ಎಲ್ಲ ಹೃದಯಗಳ ಬಣ್ಣ ನನ್ನ ಮನೆಗೆ….. ಕರುಳ ಚಾಪೆ ಹಾಸುವೆ/ ಕೂತು ಸುಧಾರಿಸಿಕೊಳ್ಳಿ….. ಬೇಕಿದ್ದರೆ / ಮೆದುಳು ಹೃದಯ ರಕ್ತದ ಕೋಣೆಗಳ ಬಗ್ಗೆ /ಚರ್ಚೆ ನಡೆಸಿರಿ’ (ನನ್ನೊಳಗೆ ಇಳಿಯುವಾಗ) – ಈ ಸಾಲುಗಳು ಸೂಕ್ಷ್ಮ ಪ್ರತಿಭಟನೆಯ ಜೊತೆಗೆ, ಬೇಡದ ವಿಷಯಗಳ ಬಗೆಗಿನ ಮೌನವನ್ನೂ ಬಿತ್ತುತ್ತಿವೆ.
ಆಧುನಿಕೋತ್ತರ ಬದುಕಿನ ಅರ್ಥಹೀನತೆ ಸತ್ವಹೀನತೆಯ ವಿಡಂಬನೆ, ಅದರಿಂದ ಬಿಡುಗಡೆಯ ಬಯಕೆ (ಮರೆತುಬಿಟ್ಟೆ, ಒಂದಾದರೂ… ) ಇಲ್ಲಿದೆ. ಸತ್ಯ-ಮಿಥ್ಯಗಳ ನಡುವಿನ ಗೆರೆ ಅಳಿಸಿಕೊಂಡ ಬದುಕಿನ ಪೊಳ್ಳುತನದ ರೂಪಕಗಳೂ (ಪರದೆ) ಕಾಣುತ್ತವೆ. ‘ಹಚ್ಚಿಟ್ಟರೆ ಬುಡ್ಡಿ ದೀಪ / ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು,…. ಹಸಿದು ಸತ್ತವರಿಗೆ ಹೀಗೇ / ಒಂದು ಹಣ್ಣು ಕಂಡಿರಬಹುದು /ಬೆಳಕ ಭ್ರಮೆಯಲ್ಲಿ’ (ಬುಡ್ಡಿ ದೀಪದ ಬುಡ)- ಇವು ವರ್ತಮಾನದ ಅಭಿವೃದ್ಧಿ ಮಾದರಿಯ ಲೇವಡಿಯೂ ಆಗಬಹುದಾದ ಸಾಲುಗಳು. ಮುಖವಾಡಗಳಲಿ ನಡೆವ ಲೂಟಿ ಮತ್ತು ಸಣ್ಣಪುಟ್ಟ ಬೂಟಿಯ (ಕ್ಷಮಿಸು) ಲೇವಡಿಯೂ ಇದೆ. ಬೆವರ ಬದುಕಿನ ಬವಣೆಯ ಸಾಂಗತ್ಯ(ಹೋಟೆಲ್), ನಿರ್ಲಕ್ಷಕ್ಕೊಳಗಾದ ಹೆಣ್ಣಿನ ಚಿತ್ರಣಗಳೂ (ಅಮ್ಮನ ಸೀರೆ) ಪ್ರತಿಮಾತ್ಮಕವಾಗಿ ಕಾಣುತ್ತವೆ.
ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.
ಕವಿಯ ಅನುಭವ ಜಗತ್ತು ವಿಸ್ತಾರಗೊಳ್ಳಬೇಕಾದ ಅಗತ್ಯತೆಯನ್ನು ಹೇಳುತ್ತಾ, ಕನ್ನಡ ಸಾಹಿತ್ಯದಲ್ಲಿ ಸತೀಶರ ಕಾವ್ಯದ ಪಯಣದ ಸಾಧ್ಯತೆಗಳನ್ನು ಮುನ್ನುಡಿಯಲ್ಲಿ ಎಂ.ಡಿ.ಒಕ್ಕುಂದರವರು ಸರಿಯಾಗಿಯೇ ಗುರ್ತಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳು ಮೊಳಕೆಯೊಡೆಯಲು ಬೇಕಾದ ಸಾಂಸ್ಕೃತಿಕ ಪರಿಸರವನ್ನು ಕಟ್ಟಲು ನಿರಂತರ ಶ್ರಮ ವಹಿಸುತ್ತಿರುವ ಸಂಗಾತ ಪುಸ್ತಕ ಪ್ರಕಾಶನ ಈ ಕೃತಿಗೆ 2021ರ ಡಿಸೆಂಬರ್ ನಲ್ಲಿ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ನೀಡಿ ಗೌರವಿಸಿದೆ. ಈ ಗೌರವಕ್ಕೆ ಪಾತ್ರರಾದ ಕವಿ ಸತೀಶರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅಭಿನಂದನೆಗಳು.
(ಕೃತಿ: ಕಣ್ಣಲ್ಲಿಳಿದ ಮಳೆಹನಿ (ಕವನ ಸಂಕಲನ), ಲೇಖಕರು : ಕಾಜೂರು ಸತೀಶ್, ಪ್ರಕಾಶನ : ಸಂಗಾತ ಪುಸ್ತಕ, ಧಾರವಾಡ, ಬೆಲೆ: 80/-)
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
No comments:
Post a Comment