ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, May 20, 2026

ಯುವ ಲೇಖಕ

ಯುವ ಲೇಖಕ ವರ್ಷಕ್ಕೊದರಂತೆ ಹೆರಲು ತೊಡಗಿದ. ಅವನ್ನು ದೂರ್ವಾಸ ಮುನಿಗಳ ಮುಂದೆ ಹೋಗಿ ತೋರಿಸುವ ಮುನ್ನ ಅವರನ್ನು ಚೆನ್ನಾಗಿ ಅಟ್ಟಕ್ಕೇರಿಸುತ್ತಿದ್ದ. ಆಗ ಮುನಿಗಳಿಂದ ಅದ್ಭುತ ಎಂಬ ಮುದ್ರೆ ಸಿಗುತ್ತಿತ್ತು.

ಮೊದಲ ವರ್ಷ ಇಲಿಮರಿ, ಆಮೇಲೆ ಕ್ರಮವಾಗಿ ಹೆಗ್ಗಣ, ಬೆಕ್ಕು, ಹಂದಿಮರಿಯನ್ನು ಹೆತ್ತಿದ್ದ. ಅದಕ್ಕೆ ಮನುಷ್ಯರ ಬಟ್ಟೆ, ಮುಖವಾಡ ತೊಡಿಸುತ್ತಿದ್ದುದರಿಂದ ಜನರಿಗೆ ತಿಳಿಯುತ್ತಿರಲಿಲ್ಲ.

ತಿಮ್ಮ ಯೋಚಿಸಿದ : "ಮುಂದಿನ ವರ್ಷ ಕೋತಿ ಮರಿಯನ್ನು ಹೆತ್ತ ಮೇಲೆ 'ಹಿರಿಯ ಸಾಹಿತಿ' ಎಂಬ ಪಟ್ಟ ಸಿಗುತ್ತದೆ. ಮುಂದೆ ಚುನಾವಣೆಗೂ ನಿಲ್ಲಬಹುದು."
*
✍️ ಕಾಜೂರು ಸತೀಶ್ 

Tuesday, May 5, 2026

ಭ್ರಷ್ಟಾಚಾರ

"ಈ ದೇಶದಲ್ಲಿ ತುಂಬಾ ಭ್ರಷ್ಟಾಚಾರ"ಎಂದ ತಿಮ್ಮನನ್ನು ಬಂಧಿಸಲಾಯಿತು.

ಅವನ ಕುಟುಂಬದವರು ಹಲವರಿಗೆ ಲಂಚ ಕೊಟ್ಟು ಅವನನ್ನು ಬಿಡಿಸಿಕೊಂಡು ಬಂದರು.
*
✍️ ಕಾಜೂರು ಸತೀಶ್
ಗೆಳೆಯ ತೀರಿಕೊಂಡಿದ್ದ. 

ಸಾವಿನ ದರ್ಶನಕ್ಕೂ ಮುನ್ನ ತಿಮ್ಮ ಇಸ್ತ್ರಿ ಮಾಡುತ್ತಿದ್ದ.

ತನ್ನನ್ನೇ ಕೇಳಿಕೊಂಡ :
 "ಗೆಳೆಯ ತೀರಿಕೊಂಡರೂ ನೀನು ಇಸ್ತ್ರಿ ಮಾಡುತ್ತಿದ್ದೀಯಲ್ಲಾ ತಿಮ್ಮ?"

"ಜನ ನನ್ನನ್ನು ಗಮನಿಸಲ್ವಾ " ತಿಮ್ಮ ಹೇಳಿದ.

"ಮತ್ತೆ ಈ ಡ್ರೆಸ್ ಮ್ಯಾಚಿಂಗ್? "

"ಜನ ನೋಡಲ್ವಾ?"
*
ತುಸುಹೊತ್ತು ಕಳೆದ ಮೇಲೆ ಯೋಚಿಸುತ್ತಾ ಕುಳಿತ ತಿಮ್ಮನಿಗೆ ಏನೋ ಕೊರತೆ ಇರುವಂತೆ ಅನಿಸಿ ಸಾವಿಗೆ ತೆರಳದೆ ಅಲ್ಲೇ ಇದ್ದುಕೊಂಡು ಗೆಳೆಯನನ್ನು ನೆನೆದು ಕಣ್ಣೀರಾದ. 

"ಅಲ್ಲಿ ಹೋಗಿದ್ದಿದ್ದರೆ ಆತ್ಮವಂಚನೆ ಆಗುತ್ತಿತ್ತು" ಹೇಳಿಕೊಂಡ ತನ್ನಲ್ಲೇ .
*
✍️ ಕಾಜೂರು ಸತೀಶ್ 

Friday, May 1, 2026

ಆಟ

ಊರಲ್ಲಿ ನೂರಾರು ಮಕ್ಕಳ ಗುಂಪುಗಳಿದ್ದವು. ಅವರೆಲ್ಲರೂ ಗುಂಪುಗುಂಪಾಗಿ ಆಟವಾಡುತ್ತಿದ್ದರು.

ಒಮ್ಮೆ ಮೂರು ಗುಂಪುಗಳು "ನಾವೊಂದು ಆಟ ಆಡೋಣವೇ?" ಎಂದವು. ಹಲವು ಗುಂಪುಗಳು ಈ ಹಿಂದೆ ಇದೇ ಆಟವಾಡಿ ಇದು 'ಅಪಾಯಕಾರಿ' ಎಂಬ ನಿರ್ಣಯಕ್ಕೆ ಬಂದಿದ್ದವು.

ತಿಳಿದೂ ತಿಳಿದೂ ಈ ಮೂರು ಗುಂಪುಗಳು ಆಟಕ್ಕಿಳಿದವು. ತಮಗೆ ಸಾಧ್ಯವಾದಷ್ಟು ಕಲ್ಲುಗಳನ್ನು ಅವು ಸಂಗ್ರಹಿಸಿಟ್ಟುಕೊಂಡಿದ್ದವು. ಆಟ ಆರಂಭವಾದೊಡನೆ ಎರಡು ತಂಡಗಳು ಒಟ್ಟುಗೂಡಿ ಒಂದು ತಂಡದ ಮೇಲೆ ಕಲ್ಲುಗಳನ್ನು ಎಸೆಯಲಾರಂಭಿಸಿದವು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನೇ ಇವೆರಡೂ ತಮ್ಮಲ್ಲಿ ಶೇಖರಿಸಿಟ್ಟುಕೊಂಡಿದ್ದವು. ಆನೆಗಳ ಸಹಾಯದಿಂದ ಅವನ್ನು ಎಸೆಯುತ್ತಿದ್ದವು.

ಹಿರಿಯರು ಈ ಆಟವನ್ನು ಮಕ್ಕಳಿಗೆ ಕಲಿಸಿದ್ದರು. ದೂರದಿಂದಲೇ ಇದನ್ನು ನಿಯಂತ್ರಿಸುತ್ತಿದ್ದರು. ಮಕ್ಕಳು ಸಾಯುವುದನ್ನು ತಮ್ಮ ಸಾಧನೆ ಎಂಬಂತೆ ನೋಡುತ್ತಿದ್ದರು.
*
✍️ಕಾಜೂರು ಸತೀಶ್ 

Tuesday, April 28, 2026

ಕಥೆ

ದಿನಕ್ಕೊಂದು ಕಥೆ ಹೇಳುತ್ತಿದ್ದ ತಿಮ್ಮ. ಕೇಳಿಸಿಕೊಳ್ಳಲೆಂದೇ ನಿಮ್ಮಿ ಕಾಯುತ್ತಿದ್ದಳು.

ಅದಕ್ಕಾಗಿ ಕಂಡು ಕೇಳಿದ್ದನ್ನೆಲ್ಲ ಕಥೆ ಮಾಡಿಕೊಂಡು ಹುಮ್ಮಸ್ಸಿನಿಂದ ಸಿದ್ಧವಾಗುತ್ತಿದ್ದ . ಅಷ್ಟೇ ಕುತೂಹಲ ನಿಮ್ಮಿಗೆ. ಇವನ ಕರೆಗಾಗಿಯೇ ದೂರದೂರಿನಲ್ಲಿ ಕಾಯುತ್ತಿದ್ದಳು.

ಒಂದು ದಿನ ತುಸು ಹೆಚ್ಚೇ ಕಥೆಗಳನ್ನು ಹೊತ್ತು ತಂದಿದ್ದ. ಕರೆಮಾಡಿದ.

"ನನಗಿನ್ನು ನಿನ್ನ ಕಥೆಗಳು ಬೇಡ" ಎಂದಳು.

"ಯಾಕೆ" ಎಂದ ದಿಗ್ಭ್ರಾಂತನಾಗಿ .

" ನೀನು ಹೀಗೆ ಕಥೆಗಳನ್ನು ಹೇಳುತ್ತಿದ್ದರೆ ಅದಕ್ಕಾಗಿ ಕಾದೂ ಕಾದೂ ನನ್ನ ಮನಸ್ಸೂ ಕಥೆಯಾಗುತ್ತದೆ. ನಾವೂ ಕಥೆಯಾಗುತ್ತೇವೆ.  ನಮಗೆ ನಮ್ಮದೇ ಆದ ಬದುಕು ಬೇಡವೇ?ಸ್ವಾತಂತ್ರ್ಯ ಬೇಡವೇ? " ಎಂದಳು.

ತಿಮ್ಮ ಕಥೆಯಾದ.
ನಿಮ್ಮಿಯೂ ಕಥೆಯಾದಳು.

*
✍️ ಕಾಜೂರು ಸತೀಶ್

ಆಸ್ಪತ್ರೆ

ತಿಮ್ಮನನ್ನು ಗ್ರಾಮ ಸಮಿತಿಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು.

ಮೊದಲ ಸಭೆಯಲ್ಲಿ ಗ್ರಾಮದಲ್ಲೊಂದು ದೇವಸ್ಥಾನ ಕಟ್ಟುವ ಪ್ರಸ್ತಾವ ಬಂತು. 'ಅದರ ಬದಲಿಗೆ ಒಂದು ಆಸ್ಪತ್ರೆ ಕಟ್ಟಿಸೋಣ' ಎಂದ ತಿಮ್ಮ. ಆದರೆ ಅದಕ್ಕೆ ಯಾರೂ ಒಪ್ಪಲಿಲ್ಲ. ತಿಮ್ಮ ಪಟ್ಟುಬಿಡದೆ ಕುಳಿತಿದ್ದರಿಂದ ಊರಿನ ಜನಗಳ ಅಭಿಪ್ರಾಯ ಪಡೆಯಲಾಯಿತು.

ಎಲ್ಲರೂ ದೇವಾಲಯ ನಿರ್ಮಾಣವೇ ಸರಿ ಎಂದರು.

ತಿಮ್ಮನಿಗೆ ಮುಖಭಂಗವಾಯಿತು. ಬೇಸರದಿಂದ ಇದ್ದ. ಬಿಸಿಲ ಕಾವಿಗೆ ತಲೆತಿರುಗಿ ಬಿದ್ದ. ದೂರದ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ತೀರಿಹೋಗಿದ್ದ.

'ದೇವಾಲಯ ಬೇಡ ಎಂದಿದ್ದಕ್ಕೆ ಈ ಸಾವು' ಜನ ಹೇಳಿದರು.

ಮನೆಮಂದಿ ಮಾತ್ರ 'ಊರಲ್ಲೊಂದು ಆಸ್ಪತ್ರೆ ಇದ್ದಿದ್ದರೆ ತಿಮ್ಮ ಬದುಕುಳಿಯುತ್ತಿದ್ದ' ಎಂದು ಕಣ್ಣೀರಿಟ್ಟರು.
*
✍️ ಕಾಜೂರು ಸತೀಶ್

Monday, April 27, 2026

ಚಿಗುರೇ...

ಚಿಗುರೇ....
ಏನು ನುಡಿಯಿತು ಬೇರು?
ಏನು ನುಡಿಯಿತು ನೀರು?

ಚಿಗುರೇ....
ಏನು ಹೇಳಿತು ಮಣ್ಣು?
ತೆರೆಯುವಾಗ ಕಣ್ಣು?

ಚಿಗುರೇ....
ಯಾರು ಬರೆದರು ನಿನ್ನ?
ಸುರಿದು ನಿನ್ನಲಿ ಬಣ್ಣ?

ಚಿಗುರೇ...
ಏನು ಹೇಳಿತು ಎಲೆ?
ಮೇಲೇರಿದ ಮೇಲೆ?

ಚಿಗುರೇ...
ಏನು ಹೇಳಿತು ಬಾನು?
ಬಾ ಎಂದಿತೇನು?

ಚಿಗುರೇ...
ಮಣ್ಣು ಕರೆವುದು ನಿನ್ನ
ಎಲೆಯ ಹಾದಿಗೆ ನಿನ್ನ

*
✍️ ಕಾಜೂರು ಸತೀಶ್ 




ಹರಿವ ನದಿಯ ಒಂದು ಕಲ್ಲು

ಹರಿವ ನದಿಯ ಒಂದು ಕಲ್ಲು
ನೆನಪ ಲೆಕ್ಕವಿಡುವುದೇ?
ಕೋಟಿ ಬಂಡೆಗಳ ನಡುವೆ
ಮಾತಿಗೆ ಸಿಗುವುದೇ?

ಹರಿವ ನದಿಗೆ ಒಂದು ಕಲ್ಲು
ಯಾಕೆ ಬಂದು ಸಿಗುವುದು
ನೋವನ್ನು ನಲಿವನ್ನು
ಯಾಕೆ ಮಾತಲಿಡುವುದು?

ನೆರೆಯ ಊರಿನ ಕಥೆಯ
ನೆರೆ ಬಂದ ಕಡು ವ್ಯಥೆಯ
ಕಡಲ ದಾರಿಗೆ ಇಳಿವ
ಪದ ನುಡಿವುದೇ ನದಿಯು ಪದ ನುಡಿವುದೇ ?

ಜುಳು ಜುಳು ಜುಳು ಮಾತಲ್ಲಿ ಮನದ ಕಸ ಅಡಿಗಿರಿಸಿ
ಗಗನದ ನೀಲಿಯಲಿ ಸೂರ್ಯನ ನೆನೆ ನೆನೆಸಿ
ಹಕ್ಕಿಯ ನೆರಳನ್ನು ನೀರೊಳಗೆ ಹಾರಿಸಿ
ಪದ ನುಡಿವುದೇ ನದಿಯು ಪದ ನುಡಿವುದೇ?

ಯಾಕೆ ಆ ಕಲ್ಲು ಮಾತಿಗೆ ಸಿಗುವುದು?
ಯಾಕೆ ಆ ಕಲ್ಲು ಮೌನಕ್ಕೆ ಸಿಗುವುದು?
ಯಾಕೆ ಆ ಕಲ್ಲು ಕಾಳಜಿಗೆ ಸಿಗುವುದು?
ಯಾಕೆ ಆ ಕಲ್ಲು ಪ್ರೀತಿಗೆ ಸಿಗುವುದು?
*
✍️ ಕಾಜೂರು ಸತೀಶ್









ಸಂಜೆ

ಇಳಿ ಸಂಜೆ.

ಹಕ್ಕಿ, ಮನುಷ್ಯ, ದನ, ಸೂರ್ಯ ಎಲ್ಲವೂ ಮನೆಯ ಕಡೆಗೆ ಜಾರುತ್ತಿದ್ದವು.

ನದಿ ಮಾತ್ರ ಹರಿಯುತ್ತಿತ್ತು- ಟೆಂಟು ಕಟ್ಟಿ ಬದುಕುವ ಮನುಷ್ಯರ ಹಾಗೆ.
*
✍️ ಕಾಜೂರು ಸತೀಶ್

Thursday, April 23, 2026

ದಂಡ

ತಿಮ್ಮನ ಹೆಲ್ಮೆಟ್ ಕಳುವಾಯಿತು. ದಾರಿಯಲ್ಲಿ ಪೊಲೀಸ್ ಹಿಡಿದು ದಂಡ ವಿಧಿಸಿದರು.

 
ತಿಮ್ಮ ಯೋಚಿಸಿದ. ನನಗೆ ಹೆಲ್ಮೆಟ್ ಮತ್ತು ಹಣ ಎರಡೂ ಹೋದವು. ಕದ್ದವನಿಗೆ ಹೆಲ್ಮೆಟ್ ಸಿಕ್ಕಿತು, ಕಟ್ಟಬೇಕಾದ ಹಣವೂ ಉಳಿಯಿತು.

" ಕಾಮನ್ ಸೆನ್ಸ್ ಬೇಕು ರೀ.. ಹೆಲ್ಮೆಟ್ ಹಾಕ್ಬೇಕು ಅಂತ ಗೊತ್ತಾಗಲ್ವಾ " ಉಚಿತ ಸಲಹೆ ಮಾತ್ರ ತಿಮ್ಮನ ಪಾಲಾಯಿತು.
*
✍️ಕಾಜೂರು ಸತೀಶ್ 

Monday, March 23, 2026

ಶಿಫಾರಸ್ಸು

"ಸರ್, ನೀವು ಮನಸ್ಸು ಮಾಡಿದ್ರೆ ನನ್ನ ಪುಸ್ತಕವನ್ನು ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಬಹುದು"

"ಸತೀಶ್, ಹೀಗೆ ಹೇಳಿದ್ರು. ಪ್ರಶಸ್ತಿಗಳನ್ನು ಕೇಳಿ ಪಡೆಯುವಷ್ಟರ ಮಟ್ಟಿಗೆ ಜನ ಬೆಳೆದಿದ್ದಾರೆ!"

ನನಗೆ ಆತ್ಮೀಯರಾಗಿರುವ ವ್ಯಕ್ತಿಯ ಕುರಿತು ಅವರು ಮಾತನಾಡುತ್ತಿದ್ದರು!
*
✍️ ಕಾಜೂರು ಸತೀಶ್

Monday, March 9, 2026

ದುಃಖ

ಅದೊಂದು ದೈತ್ಯ ಸಂಪಿಗೆ ಮರ. ತನ್ನ ಪರಿಮಳದಿಂದಲೂ ಗಾತ್ರದಿಂದಲೂ ಜನಜನಿತವಾಗಿತ್ತು.

ಒಂದು ದಿನ ಅದು ಮುರಿದು ಬಿತ್ತು.

ನೋಡಿದ ಜನ " ಇಷ್ಟು ದಿನ ಇದರ ಒಳಗೆ ಇಷ್ಟು ದೊಡ್ಡ ಟೊಳ್ಳು ಇದೆಯೆಂದು ಅಂದುಕೊಂಡಿರಲಿಲ್ಲ " ಎಂದರು.

ತಿಮ್ಮ ಯೋಚಿಸಿದ - "ಮರ ಹೇಳಿಕೊಳ್ಳುವುದಿಲ್ಲ. ಮನುಷ್ಯರು ಹೇಳಿಕೊಳ್ಳುತ್ತಾರೆ "
*
✍️ಕಾಜೂರು ಸತೀಶ್

Friday, January 30, 2026

ಸಂಬಳ

"ಅವರಿಗೆ ತಿಂಗಳಿಗೆ ಮೂರು ಲಕ್ಷ ಸಂಬಳ ಅಂತೆ" ಗುಂಡ ಹೇಳಿದ.

ತಿಮ್ಮ ಕೇಳಿದ " ತಿಂಗಳಿಗೆ ಆಸ್ಪತ್ರೆಯ ಖರ್ಚು? "

*

✍️ಕಾಜೂರು ಸತೀಶ್