ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, July 19, 2025

ಒಂದು ಗಸಗಸೆ ಮರದ ಸುತ್ತ...

ಹರಗ ಶಾಲೆಗೆ ಹೋಗಿದ್ದಾಗ ಫ್ಲವರ್ ಪೆಕರ್ ಹಕ್ಕಿಗಳನ್ನು ಗಸಗಸೆ ಮರದಲ್ಲಿ ಗಮನಿಸಿದ್ದೆ. ನನ್ನ ಮನೆಯ ಸುತ್ತ ಇವು ತೀರಾ ಅಪರೂಪ. ಮರದಲ್ಲಿ ಪರೋಪ ಸಸ್ಯವಾಗಿ ಬೆಳೆದುಕೊಳ್ಳುವ ಬಂದಣಿಕೆ/ಬದನಿಕೆ ಹೂವನ್ನು ಹುಡುಕಿಕೊಂಡು ಬರುವ ಫ್ಲವರ್ ಪೆಕರನ್ನು ಗಮನಿಸಿದ್ದೆ. ಆ ಬಂದಣಿಕೆಯು ಮೂಲ ಮರವನ್ನೇ ಸಾಯಿಸಿದ ಮೇಲೆ ಈ ಹಕ್ಕಿಯ ಅನುಪಸ್ಥಿತಿ ನನ್ನನ್ನು ಕಾಡುತ್ತಿತ್ತು.






ವಿಚಿತ್ರವೆಂದರೆ ಈ ಹಕ್ಕಿಗೂ ಕನ್ನಡದಲ್ಲಿ ಬದನಿಕೆ ಹಕ್ಕಿ ಎಂದೇ ನಾಮಕರಣ ಮಾಡಿದ್ದಾರೆ!


*

ಅರಣ್ಯ ಇಲಾಖೆಯ ವತಿಯಿಂದ ದಿನಾಂಕ 29-12-2022ರಂದು ಸೋಮವಾರಪೇಟೆ ತಾಲೂಕಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದ ಹೊಣೆಯನ್ನು ಹೆಗಲಲ್ಲಿಟ್ಟುಕೊಂಡಿದ್ದವರು ವಲಯ ಅರಣ್ಯಾಧಿಕಾರಿ ಗಾನಶ್ರೀ ಮೇಡಂ.


ಕಾರ್ಯಕ್ರಮ ಮುಗಿದು ವರ್ಷ ಕಳೆದ ಮೇಲೆ ಈ ಗಿಡವನ್ನು ಅವರ ಬಳಿಯೇ ಕೇಳುವುದೊಳಿತು ಎಂದು 'ಕೇಳಿದೆ'. ಅವರು ಸಸ್ಯಕ್ಷೇತ್ರದಲ್ಲಿ ಪಡೆದುಕೊಳ್ಳಿ ಎಂದರು. 30-08-2023ರಂದು ಐದು ಗಿಡಗಳನ್ನು ಪಡೆದು ಅದರಲ್ಲಿ ಮೂರನ್ನು ಬೆಟ್ಟದಳ್ಳಿ ಶಾಲೆಯಲ್ಲೂ ಎರಡನ್ನು ಮನೆಯಲ್ಲೂ ನೆಟ್ಟೆ. ಅಧಿಕ ಮಳೆಬೀಳುವ ತಾಣ ಬೆಟ್ಟದಳ್ಳಿ. ನಾನು ದಸರಾ ರಜೆಮುಗಿಸಿ ತೆರಳಿದಾಗ ಅವು ಬುಡಕೊಳೆತು ಕಪ್ಪಾಗಿ ಅಂತ್ಯಕಂಡಿದ್ದವು!


ಆದರೆ ಮನೆಯಂಗಳದಲ್ಲಿ ನೆಟ್ಟಿದ್ದ ಎರಡು ಗಿಡಗಳಲ್ಲಿ ಕಾಯಿಗಳು ಹುಟ್ಟಿ ಅದನ್ನು ಹುಡುಕಿಕೊಂಡು ಬರುವ ಬದನಿಕೆ ಹಕ್ಕಿಯನ್ನೂ, ಅದರ ಹಸಿವನ್ನು ಹಿಂಗಿಸುತ್ತಿರುವ ಆ ಮರದ ತಾಯ್ತನವನ್ನೂ, ಅದು ಜೀವಪಡೆಯಲು ಕಾರಣಕರ್ತರಾದ ಸಸ್ಯಕ್ಷೇತ್ರದ ಆ ಅನಾಮಿಕ ಮನುಷ್ಯನನ್ನೂ, ಅದನ್ನು ನನಗೆ ಕರುಣಿಸಿದ ಗಾನಶ್ರೀ ಮೇಡಂ ಅವರನ್ನೂ, ಈ ಮಣ್ಣನ್ನೂ, ಹಸಿರೆಂಬೋ ವಿಸ್ಮಯವನ್ನೂ ಒಟ್ಟೊಟ್ಟಿಗೆ ಸ್ಮೃತಿಯ ಬುಟ್ಟಿಯೊಳಗಿಟ್ಟು ಕಾಪಿಟ್ಟುಕೊಳ್ಳುವಂತೆ ಮಾಡಿದೆ.


ಎಲ್ಲಿಯೋ ಇರುವ ಆ ಹಕ್ಕಿಗೆ ಇಲ್ಲಿ ಈ ಗಿಡ ಇದೆಯೆಂದು ಯಾರು ಹೇಳಿಕೊಟ್ಟರೋ ನಾನರಿಯೆ.
*
✍️ಕಾಜೂರು ಸತೀಶ್

Saturday, July 5, 2025

ಆಕಾಶವಾಣಿಯ ಮೇಷ್ಟ್ರು



ಪ್ರತಿಭಾವಂತರನ್ನು ಕಂಡಾಗಲೆಲ್ಲ ಅವರ ಕಡಲಿನಂತಹ ಸಾಮರ್ಥ್ಯವನ್ನು ಈ ವ್ಯವಸ್ಥೆಯು ನದಿಗೋ ಕೆರೆಗೋ ಮಿತಿಗೊಳಿಸಿರುವುದನ್ನು ನೋಡಿ ನೊಂದಿದ್ದೇನೆ. ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾಗಿದ್ದ ಸುಬ್ರಾಯ ಸಂಪಾಜೆಯವರ ಮಾತುಗಳನ್ನು ಆಲಿಸಿದಾಗಲೆಲ್ಲ ನನಗೆ ಹಾಗೆ ಅನ್ನಿಸುತ್ತಿತ್ತು. ಭಾಷೆ, ಸಾಹಿತ್ಯ, ಪುರಾಣ, ಜನಪದ, ಭಾಷಾಶಾಸ್ತ್ರ, ಯಕ್ಷಗಾನ, ಗಮಕ( ಇವೆಲ್ಲಾ ಒಂದಕ್ಕೊಂದು ಪೂರಕವಾಗಿಯೂ, ಒಂದರೊಳಗೊಂದು ಬೆರೆತವೂ ಆಗಿರುವ ಸಂಗತಿಗಳಾದರೂ..) ತುಳು,ಅರೆಭಾಷೆ, ಸಂಸ್ಕೃತ... ಹೀಗೆ ಹಲವು ಜ್ಞಾನಶಿಸ್ತುಗಳನ್ನು ಸಂಪಾದಿಸಿರುವ ಸಂಪಾಜೆಯವರದು ಬಹುಮುಖ ಪ್ರತಿಭೆ.



ಅವರ ಆಳ ಅಧ್ಯಯನವು ಕೊಟ್ಟ ಜ್ಞಾನ,ತಿಳಿವಳಿಕೆಗಳನ್ನೂ, ಕಲಾರಂಗದ ಆಸಕ್ತಿ ಮತ್ತು ಅನುಭವಗಳನ್ನೂ ತಮ್ಮ ವೃತ್ತಿಯಲ್ಲಿ ತಂದು ಲಕ್ಷಾಂತರ ಅಭಿಮಾನಿಗಳನ್ನು ಪಡೆದವರು. ಶಿಸ್ತು ಮತ್ತು ಸೇವಾ ಬದ್ಧತೆಗೆ ಮತ್ತೊಂದು ಹೆಸರೇ ಸುಬ್ರಾಯ ಸಂಪಾಜೆ.



 ಆಕಾಶವಾಣಿ ಮಡಿಕೇರಿಯನ್ನು ಕಟ್ಟಿ ಬೆಳೆಸಿದ ಸುಬ್ರಾಯ ಸಂಪಾಜೆಯವರು ಈಗ ನಿವೃತ್ತಿ ಹೊಂದಿದ್ದಾರೆ. ಶಾರದಾ ನಂಜಪ್ಪ ಅವರು ನಿವೃತ್ತರಾಗಿ ವರ್ಷ ಕಳೆದ ಹೊತ್ತಲ್ಲಿ ಇವರೂ ನಿವೃತ್ತರಾಗಿದ್ದಾರೆ. ಆಕಾಶವಾಣಿಯ ಅಸಂಖ್ಯ ಕೇಳುಗರ ಪಾಲಿಗೆ ಇದು ತುಂಬಲಾರದ ನಷ್ಟ.
*
✍️ಕಾಜೂರು ಸತೀಶ್