ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, February 8, 2023

ಎಡ-ಬಲ

ನಿಲ್ದಾಣ ಬಂದಿತು. ಊಟ ಮಾಡಲು ಸಮಯ ಸಿಗಲಿಲ್ಲ. ನೀರು ಕುಡಿಯದೆ ಹೊಟ್ಟೆ ಸುಟ್ಟಿತ್ತು. ಪಕ್ಕದಲ್ಲಿದ್ದ ಹುಡುಗನಿಗೆ ಸೀಟು ಕಾಯ್ದಿರಿಸಲು ತಿಳಿಸಿ ಒಂದು ನೀರು ಬಾಟಲಿ ತರಲು ಬಸ್ಸು ಇಳಿದೆ.

ಹುಡುಗ ಹಿಂದಿನ ನಿಲ್ದಾಣದಲ್ಲಿ ಹತ್ತಿದ್ದ. ತನ್ನ ಗುಂಪಿಗೆ ಕೆಲವರು ಸೇರುತ್ತಿಲ್ಲವೆಂದೂ, ತನ್ನ ಹಾಗೆ ಅವರು ಚಿಂತಿಸುತ್ತಿಲ್ಲವೆಂದೂ ಫೋನಿನಲ್ಲಿ ಯಾರೊಂದಿಗೋ ಹೇಳುತ್ತಿದ್ದ: 'ನಿಮ್ಮ ಯೋಚನಾಕ್ರಮವೇ ಸರಿಯಿಲ್ಲ...'

ನೀರು ತಂದು ನಿಟ್ಟುಸಿರು ಚೆಲ್ಲಿದೆ. ಮುಚ್ಚಳ ತೆಗೆದೆ. ಅಷ್ಟರಲ್ಲಿ 'ನೀರು' ಎಂದ ಆ ಹುಡುಗ. ಕೊಟ್ಟೆ.

ಅವನು ಮಗುವಿನ ಹಾಗೆ ನೀರು ಕುಡಿದ. ಒಂದು ಹನಿ ಉಳಿಸಿದ್ದ. 'Sorry ಜಾಸ್ತಿ ಕುಡಿದುಬಿಟ್ಟೆ' ಎಂದ.

ಬಸ್ಸು ಹೊರಟಿತು. ಬಾಟಲಿಯಲ್ಲಿ ಉಳಿದ ಆ ಹನಿ ಕರುವಿನ ಹಾಗೆ ಚಂಗನೆ ಕುಣಿದು ಕುಪ್ಪಳಿಸುತ್ತಿತ್ತು.ಬೆರಗಿನಿಂದ ಅದನ್ನೇ ನೋಡಿದೆ.

*
ಕಾಜೂರು ಸತೀಶ್

Thursday, February 2, 2023

I will light a lamp

#Kannada poetry in English translation

#Kajooru Satish: “Belaka Hacchuttene”

#Translation: Kamalakar Kadave

“I will light a lamp”

I won’t speak of darkness
I will light a lamp

If there are no matches
I will strike stone upon stone
If there are no stones
I will use weapons

Weapons will always be there
I will light a lamp

I won’t speak about even light
I will light a lamp
And light a lamp I will.

ಬೆಳಕ ಹಚ್ಚುತ್ತೇನೆ

ಕತ್ತಲ ಕುರಿತು ಮಾತನಾಡುವುದಿಲ್ಲ.
ಬೆಳಕ ಹಚ್ಚುತ್ತೇನೆ.

ಕಡ್ಡಿಯಿಲ್ಲದಿದ್ದರೆ
ಕಲ್ಲುಗಳನೇ ತೀಡಿ
ಕಲ್ಲುಗಳೇ ಇಲ್ಲದಿದ್ದರೆ
ಆಯುಧಗಳನೇ ತೀಡಿ

ಆಯುಧಗಳು ಇದ್ದೇ ಇರುತ್ತವೆ
ಬೆಳಕ ಹಚ್ಚುತ್ತೇನೆ

ಬೆಳಕಿನ ಕುರಿತೂ ಮಾತನಾಡುವುದಿಲ್ಲ
ಬೆಳಕ ಹಚ್ಚುತ್ತೇನೆ
ಹಚ್ಚುತ್ತೇನೆ ಬೆಳಕ

*
ಕನ್ನಡ ಮೂಲ- ಕಾಜೂರು ಸತೀಶ್ 



ಇಂಗ್ಲಿಷ್ ಅನುವಾದ- ಕಮಲಾಕರ ಕಡವೆ

ಕಣ್ಣಲ್ಲಿಳಿದ ಮಳೆಹನಿಗಳ ಕುರಿತು ಡಾ. ಕಮಲಾಕರ ಕಡವೆ

ಓದಿದರೆ 'ಉಫ್ ' ಎಂಬ ಉದ್ಗಾರ ಹೊರಬೀಳಬೇಕು, ಅದು ಕವಿತೆ. ಅರೆನಿಮಿಷ ಮುಂದೆ ಓದುವುದು ಅಸಾಧ್ಯವಾಗುವ ಧ್ಯಾನದಲ್ಲಿ ಮುಳುಗಬೇಕು. ಅದು ಕವಿತೆ. ಗಾತ್ರ ಕುಗ್ಗಿ ಕುಗ್ಗಿ ಗೆರೆ ಹೊಡೆದಷ್ಟು ಕಿರಿದಾದ ಸಾಲು, ಚರಣ ಅರ್ಥದ ಕಿಡಿ ಹೊತ್ತಿಸಬೇಕು. ಅದು ಕವಿತೆ. ಹೀಗೆ ಒಮ್ಮೊಮ್ಮೆ ಅನಿಸುತ್ತದೆ. ಅಪರೂಪಕ್ಕೆ ಕವಿ ಇಂತಹ ಕವಿತೆಗಳನ್ನೇ ನಮ್ಮ ಮುಂದೆ ಇಡುತ್ತಾರೆ. ಅಂತಹ ಒಂದು ಸಂಕಲನ ನನ್ನ ಕೈಯಲ್ಲಿದೆ. ಅದು ಕಾಜೂರು ಸತೀಶ್ ಅವರ "ಕಣ್ಣಲ್ಲಿಳಿದ ಮಳೆಹನಿ". (ಸಂಗಾತ ಪುಸ್ತಕ, ರಾಜೂರ. ಪ್ರತಿಗಳಿಗೆ 9341757653).


ನನ್ನ ಮಿತ್ರರಾದ ಜಯಶ್ರೀನಿವಾಸ್ ರಾವ್ ಕಾವ್ಯದ ಕುರಿತಾದ ಕವನಗಳ ಬಗೆಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಅವರಿಂದಾಗಿ ನನಗೂ ಅಂತಹ ಕವನಗಳ ಬಗ್ಗೆ ವಿಶೇಷ ಕುತೂಹಲ. ಇಲ್ಲಿ ನೋಡಿದರೆ, ಕಾಜೂರು ಸತೀಶ್ ಅವರು ಅನೇಕ ಕವನಗಳಲ್ಲಿ ಕಾವ್ಯ, ಕಾವ್ಯರಚನೆಗಳ ಕುರಿತಾಗಿಯೇ ಕವಿತೆಗಳನ್ನು ಬರೆದಿದ್ದಾರೆ. ಅದೂ ತುಂಬಾ ನವಿರಾಗಿ, ತುಂಬಾ ಸೂಕ್ಷ್ಮವಾಗಿ, ತುಂಬಾ ಸಂವೇದನಾಶೀಲತೆಯಿಂದ. ಕವನವನ್ನು ಶೃಂಗಾರ ಎಂದೇನೂ ಅವರು ನೋಡುವುದಿಲ್ಲ, ಖಡ್ಗವೆಂತಲೂ ನೋಡುವುದಿಲ್ಲ. "ಕೊಲೆ" ಎಂಬ ಕವನದಲ್ಲಿ ಎದೆ ಸೀಳಲು ಬಂದವರಿಗೆ ಹೂ ಕೊಡುವ ಕವಿತೆಯ ಚಿತ್ರಣವಿದೆ. ಆಹಾ, ಅದ್ಭುತ ಕಲ್ಪನೆ. ಅಂದರೆ, ಇಲ್ಲಿ ಧ್ಯಾನಕ್ಕೆ ಒಳಗಾಗಿರುವುದು ಕವಿತೆ ಆಗಿದ್ದರೂ, ಅರ್ಥವಿಸ್ತಾರದಲ್ಲಿ ನಮಗೆ ಇದರ ಹಿಂದೆ ಒಂದು ಆರ್ದ್ರ ಮಾನವೀಯತೆಯೇ ಕಾಣುತ್ತದೆ.

 "ರೊಟ್ಟಿ" ಎಂಬ ಕವನದಲ್ಲಿ "ನನ್ನ ಹೊಟ್ಟೆಗಿಳಿವ ರೊಟ್ಟಿ/ ಅವಳ ಹೆಬ್ಬೆಟ್ಟು ಸಹಿಗಳ ಜೀರ್ಣಿಸಿ/ ಕವಿತೆಗಳ ಜನನ" ಎಂದಾಗಲೂ ನಮ್ಮ ಲಕ್ಷ ಹೋಗುವುದು ತಾಯಿಯ ಕುರಿತಾಗಿ ಕವಿ ಹೇಳುವ ಮಾತಿನೆಡೆಗೆ. ಅತ್ಯಂತ ಏಕಾಗ್ರತೆಯಿಂದ, ಹೇಳ ಬೇಕಿರುವ ಮಾತಿನಲ್ಲಿ ಅತ್ಯವಶ್ಯಕವಾದುದನ್ನು ಮಾತ್ರ ಉಳಿಸಿ, ಎಲ್ಲಿಯೂ ಕ್ಲಿಷ್ಟತೆಗೆ ಆಸ್ಪದ ಕೊಡದೆ, ಎಲ್ಲಿಯೂ ವಾಚಾಳಿ ಆಗದೇ, ಸಮರ್ಥ ಪ್ರತಿಮೆಗಳ ಮೂಲಕವೇ ಕಮ್ಯುನಿಕೇಟ್ ಮಾಡುತ್ತಾರೆ ಸತೀಶ್. ಬಿಗಿ ಬಂಧದ ಅವರ ಈ ಕವನಗಳಲ್ಲಿ ಅಳೆದು ಅಳೆದು ಇಟ್ಟಂತಿವೆ ಪದಗಳು. ಬಹುತೇಕ ಕವನಗಳಲ್ಲಿ ಇಟ್ಟ ಪದಗಳು ವ್ಯರ್ಥವಲ್ಲ. ಹಾಗೆಯೇ, ಕವಿತೆಗಳು ಸ್ಫುರಿಸುವ ಭಾವಗಳೂ ಕೂಡ ತೋರಿಕೆಯದಲ್ಲ. ಅವರ ನೇರ, ನಿಖರ, ನಿರ್ದಿಷ್ಟ ಶೈಲಿಯ ಹಾಗೆಯೇ ಭಾವಗಳೂ ಸುಸ್ಪಷ್ಟ ಮತ್ತು ಸೂಕ್ಷ್ಮ. ಅನೇಕ ಕವನಗಳಲ್ಲಿ ಮುನ್ನೆಲೆಗೆ ಬರುವ ರೂಪಕಗಳು ಸತ್ವಶಾಲಿಯಾಗಿವೆ, ತಟ್ಟನೆ ನಮ್ಮನ್ನು ಆವರಿಸಿ ಬಿಡುತ್ತವೆ. ಹಾಗೆಂದೇ ಇಲ್ಲಿನ ಕವನಗಳು ತುಂಬಾ ಸಂಕ್ಷಿಪ್ತ. ದನಿಯೂ ಮೃದು - ಚೀರಾಟ, ಕೂಗಾಟಗಳಿಲ್ಲ. ಚರ್ವಿತ ಚರ್ವಣ ದಾರಿ ತೊರೆದು ತನ್ನದೇ ಆದ ದಾರಿ ಹುಡುಕುವ ಕವಿಗೆ ದೊರೆಯುವ ಯಶಸ್ಸು ಕಾಜೂರು ಸತೀಶ್ ಅವರಿಗೆ ದೊರಕಿದೆ.
 ಸುಳ್ಳಾ, ನೀವೇ ನೋಡಿ:

"ಬುಡ್ಡಿ ದೀಪದ ಬುಡ"

ಹಚ್ಚಿಟ್ಟರೆ ಬುಡ್ಡಿ ದೀಪ
ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು

ಆಮೇಲೆ
ಬುಡ್ಡಿ ದೀಪದ ಬುಡದ ಕಪ್ಪುಗಂಬಳಿ
ಲಾಲಿ ಹಾಡುವುದು
ಸಾವನು ಲಾಲಿ ಹಾಡುವುದು

ಹಸಿದು ಸತ್ತವರಿಗೆಲ್ಲ ಹೀಗೇ
ಒಂದು ಹಣ್ಣು ಕಂಡಿರಬಹುದು
ಬೆಳಕ ಭ್ರಮೆಯಲ್ಲಿ.

*


  ✍️ಕಮಲಾಕರ ಕಡವೆ