ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್ಲಿ ನಾನು ಸಹ- ಸಂಚಾಲಕನಾಗಿದ್ದೆ. ಕಡಿಮೆ ಮಾತನಾಡುವ, ಶಿಸ್ತಿನ ವ್ಯಕ್ತಿ. ವಕೀಲ ಮತ್ತು ನೋಟರಿಯವರಾಗಿ, ಕ್ರೀಡಾಪಟುವಾಗಿ, ಅಂಕಣಕಾರರಾಗಿ, ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಸಂಘಟಕರಾಗಿ, ಕೃಷಿಕರಾಗಿ ತಮ್ಮನ್ನು ವಿಸ್ತರಿಸಿಕೊಂಡವರು ಬಾಳೆಯಡ ಕಿಶನ್ ಪೂವಯ್ಯ.
'ರಾಜಕೀಯ ಮತ್ತು ಪ್ರಕೃತಿ' ಕೃತಿಯಲ್ಲಿ ೨೭ ಲೇಖನಗಳಿವೆ. ಈ ಲೇಖನಗಳಿಗೆ 'ಕೊಡಗು' ಎಂಬ ಭೌಗೋಳಿಕ ಮತ್ತು ಸಾಂಸ್ಕೃತಿಕ ಆವರಣವಿದೆ. ಮಡಿಕೇರಿ ದಸರಾ, ಕಾವೇರಿ, ಕೊಡಗಿನ ರಾಜಕಾರಣ, ಕೊಡಗಿನ ಪ್ರವಾಸೋದ್ಯಮ, ಪ್ರಕೃತಿ ವಿನಾಶ- ಇವುಗಳನ್ನು ಕೊಡಗಿನ ನೆಲೆಯಲ್ಲಿ ವಿಶ್ಲೇಷಿಸಿದರೆ, ಜಾತಿ ರಾಜಕಾರಣ , ಪಕ್ಷಾಂತರ, ಮೌಲ್ಯಾಧಾರಿತ ರಾಜಕೀಯ , ಬೇಟೆ ಮತ್ತು ಕಾನೂನು ಮುಂತಾದವುಗಳನ್ನು ದೇಶಾತೀತವಾಗಿ ಹಿಡಿದಿಡುತ್ತಾರೆ.
ಈ ಲೇಖನಗಳೆಲ್ಲಾ ಹುಟ್ಟಿರುವುದು ಸಮ-ಸಖೀ-ಸಮಾಜದ ನಿರೀಕ್ಷೆಯಲ್ಲಿ. ಅದಕ್ಕಿರುವ ಅಡ್ಡಿಗಳಲ್ಲಿ ಮುಖ್ಯವಾದದ್ದು 'ರಾಜಕೀಯ'( ರಾಜಕೀಯ ಎಂದರೆ ಅಧಿಕಾರದ/ಪಕ್ಷಗಳ/ ಚುನಾವಣೆಗೆ ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ; ಎಲ್ಲ ರಂಗಗಳಲ್ಲಿ ಸ್ವಾರ್ಥಪರ ಅಭಿವೃದ್ಧಿಗಾಗಿ ಮನುಷ್ಯ ತೋರುವ ಅಧಿಕಾರದ ದುರ್ಬಳಕೆಯೂ, ಕಪಟತನವೂ ರಾಜಕೀಯವೇ ಆಗುತ್ತದೆ). ಮತ್ತೊಂದು- ಪ್ರಕೃತಿ ಮತ್ತು ಸಂಸ್ಕೃತಿಯ ನಾಶ. ಮಡಿಕೇರಿ ದಸರಾ ಆಚರಣೆಯ ಮೇಲೆ ರಾಜಕೀಯ ಪ್ರವೇಶ, ಕಾವೇರಿ(ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮದಲ್ಲಿ) ಮತ್ತು ಎರಡು ಜನಾಂಗಗಳ ಸ್ವಪ್ರತಿಷ್ಠೆ, ಕೊಡಗಿನ ಪರಿಸರದ ಮೇಲೆ ಪ್ರವಾಸೋದ್ಯಮದ ಪರಿಣಾಮ - ಈ ಬಗೆಯ ಪ್ರಧಾನ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವುದು ಅವರಿಗಿರುವ ಪ್ರಗತಿಪರ ಚಿಂತನೆಗಳ ಬಲದಿಂದಲೇ; ಉತ್ತಮ ಪರಿಣಾಮದ ಹಂಬಲದಿಂದಲೇ. ಪ್ರತಿಕ್ರಿಯೆಯ ರೂಪದಲ್ಲಿಯೂ ಕೆಲವು ಲೇಖನಗಳು ಕಾಣಿಸುತ್ತವೆ.
ಕಿಶನ್ ಪೂವಯ್ಯ ಅವರ ಚಿಂತನೆಗಳು ಮತ್ತಷ್ಟೂ ಎಲ್ಲರನ್ನೂ ತಲುಪಲಿ ಎಂಬ ಆಶಯ ನನ್ನದು.
*
ಕಾಜೂರು ಸತೀಶ್
No comments:
Post a Comment