ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Thursday, January 6, 2022
ಗಾಯದ ಹೂವುಗಳ ನೋಯದ ನಗು- ಚಾಂದ್ ಕವಿಚಂದ್ರ
Friday, November 13, 2020
ಗಾಯದ ಹೂವುಗಳು ಕೃತಿಯ ಕುರಿತು ಕಾವ್ಯ ಎಸ್ ಅವರ ಅನಿಸಿಕೆ
Wednesday, July 22, 2020
'ಗಾಯದ ಹೂವುಗಳು' ಕುರಿತು ರಾಜೇಂದ್ರ ಪ್ರಸಾದ್
Friday, February 15, 2019
ಕಡಲಾಚೆಯ ಹುಡುಗಿಗೆ ಕವಿತೆಯ ಕುರಿತು
ಅಬ್ಬಾ! ಇದಪ್ಪಾ ಕವಿತೆ ಎಂದರೆ! ಅಂಗ ಮೀರಿದ ಪ್ರೀತಿಯ ಸಂಗ ಬಯಸುವ ಪ್ರೇಮಿಯ ಅದಮ್ಯ ಬಯಕೆ, ತನ್ನ ಪ್ರೇಯಸಿಯನ್ನು ಕೂಡುವ ಸಲುವಾಗಿನ ಹಂಬಲ ಕೇವಲ ಭೌತಿಕ ವಾಂಛೆಯದಲ್ಲ.ಅದು ಪ್ರೇಮಿಗಳನ್ನು ಅಗಲಿಸಿದ ಗಡಿಗಳನ್ನು ; ಭೌಗೋಳಿಕ ಎಲ್ಲೆಗಳನ್ನು ಮೀರಿದ ಒಂದು ವಿಶ್ವಾತ್ಮಕ ಭಾವ ಸಮ್ಮಿಲನದ್ದು. ಭಾವ ಸಮಾಗಮದ್ದು. ಸೀಮಾತೀತವಾದ ಈ ಅಸೀಮ ಪ್ರೇಮಿಯ ; ಅಸೀಮ ಪ್ರೇಮದ ಒಲುಮೆ ,ಆ ತಾರೆ ,ನೀಹಾರಿಕೆ,ಚಂದಿರನ ಅಂಶಗಳಲ್ಲಿ ಬೆಳೆದು ಬೆಳಕಿನ ರೂಪಕಗಳಾಗಿ ಬೆಳೆವ ಈ ನಲ್ಲನ ನಿವೇದನೆ ಇದೆಯಲ್ಲಾ? ಅದು ಕೇಳಿಯೂ ಕಲ್ಲಾದ, ಓದಿಯೂ ಜಡವಾದ ಮನಸುಗಳ ಮರುಭೂಮಿಯಿಂದಲೂ ಒಲುಮೆಯ ಓಯಸಿಸ್ಸಿನ ಝರಿಯನ್ನು ಒಸರುವಂತೆ ಮಾಡುತ್ತದೆ. ನಾನಾದರೂ ಕಡಲ ಆ ತೀರದ ಪ್ರೆಯಸಿಯಾಗಬಾರದಿತ್ತೆ ? ಎಂದು ಮನಸು ಹಂಬಲಿಸುವಂತೆ ಮಾಡುತ್ತದೆ ಈ ಕವಿತೆ.
ಅಭಿನಂದನೆ ನನ್ನ ಪ್ರೀತಿಯ ಹಾಗೂ ಕನ್ನಡದ ಭರವಸೆಯ ಕವಿ ಕಾಜೂರು ಸತೀಶ್ ಅವರೇ.
*
ಪ್ರೊ. ಟಿ.ಯಲ್ಲಪ್ಪ
Sunday, November 4, 2018
ಗಾಯದ ಹೂವುಗಳು ಕುರಿತು ಡಾ. ಮಹಾಂತೇಶ ಪಾಟೀಲ
ಕೊಡಗಿನ ಕಾವೇರಿ ನದಿ, ಈ ಸಂಕಲನದಲ್ಲಿ ನೇರವಾಗಿ ಕಾಣಿಸಿಕೊಳ್ಳದಿದ್ದರೂ, ಆ ನದಿಯ ಲವಣಗಳನ್ನುಂಡು ಗಾಯದ ಹೂಗಳ ಪರಿಮಳ ಓದುಗನ ಮನಸ್ಸನ್ನು ಆವರಿಸುತ್ತದೆ.
*ಚಪ್ಪಲಿಗಳು, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ಬೇಲಿ, ನಿನ್ನ ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಗಾಯದ ಹೂವುಗಳು, ಯಾರದಿದು?, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ- ಕವಿತೆಗಳು 'ಇಜಮ್' ಗಳ ಅಹಮ್ಮಿಕೆಯನ್ನು ಮೀರಿ, ಬದುಕನ್ನು ಎದುರುಗೊಳ್ಳುತ್ತವೆ.
'ಓದುವ ದೇವದಾಸರಿಗೆ, ರಿಂಗಣಿಸುವ ಕವಿತೆಯೊಂದು ಹೊಸ ಗೆಳತಿಯಂತೆ ತೋರಿದ್ದು' - ಕಾಜೂರ ಸತೀಶ್ ರ ' ಗಾಯದ ಹೂವುಗಳು' ಕವನ ಸಂಕಲನ. ನನ್ನ ಗಾಯಗಳನ್ನು ಮುಟ್ಟಿ ನೆನಪಿಸಿಕೊಳ್ಳಲು ಇಲ್ಲಿನ ಕವಿತೆಗಳು ಕಾರಣವಾದುದರಿಂದ, ಈ ಹೂಗಳಿಗೆ, ಈ ಕವಿಗೆ ಆಭಾರಿಯಾಗಿರುವೆ.
*
ಡಾ. ಮಹಾಂತೇಶ ಪಾಟೀಲ
Friday, September 29, 2017
Friday, August 18, 2017
ಗಾಯದ ಹೂವುಗಳು: ಮಾನವತ್ವದ ಕವಿತೆಗಳು
ಲೇ: ಕಾಜೂರು ಸತೀಶ್
ಪುಟ:120, ಬೆಲೆ:75/-
ಪ್ರಕಾಶನ: ಫಲ್ಗುಣಿ ಪುಸ್ತಕ ಬೆಂಗಳೂರು
ಕಾಜೂರು ಸತೀಶ್ ನಮ್ಮ ನಡುವೆ ಹೊಸ ಭರವಸೆ ಮೂಡಿಸಿರುವ ಸೂಕ್ಷ್ಮ ಸಂವೇದನಾಶೀಲ ಕವಿ ಮತ್ತು ಅನುವಾದಕ. ಮೂಲತಃ ಪರಿಸರ ಪ್ರೇಮಿಯಾದ ಇವರ ಕಾವ್ಯದಲ್ಲಿ ನೆಲಮೂಲದ ತುಡಿತವನ್ನು, ಜೀವಪರಿಸರದ ಅಭೀಪ್ಸೆಯನ್ನು, ಸಾಮಾಜಿಕ ಸಮಾನತೆಯನ್ನು ನಿಚ್ಚಳವಾಗಿ ಕಾಣಬಹುದು. ಮೆಲುಮಾತಿನಲ್ಲಿಯೇ ತನ್ನ ಬೆಂಕಿ ಒಡಲನ್ನು ತೆರೆದಿಡಬಲ್ಲ ಕಾಜೂರು ಸತೀಶ್ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಇವರ ಮನಸ್ಸು ತುಡಿಯುವುದು ಪ್ರೀತಿ ಮತ್ತು ಸ್ನೇಹದ ಪಾತಳಿಯಲ್ಲಿ.
ಪ್ರಸ್ತುತ ಗಾಯದ ಹೂವುಗಳು ಕಾಜೂರು ಸತೀಶ್ ಅವರ ಪ್ರಥಮ ಕವನಸಂಕಲನ. ಇದು 2015ರ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಕೃತಿ. ಈ ಕವನಸಂಕಲನದಲ್ಲಿ ಒಟ್ಟು ಐವತ್ತಮೂರು ಕವಿತೆಗಳಿವೆ. ಸಾಹಿತ್ಯದ ಯಾವ ಚಳವಳಿಗಳ ಹಣೆಪಟ್ಟಿ ಹಚ್ಚಿಕೊಳ್ಳದೆ ಬದುಕಿನಂಗಳದಲ್ಲಿ ನಿಂತು ನಡೆಯುವುದನ್ನೆಲ್ಲಾ ಕಂಡುಂಡು ಚಿತ್ರಿಸಿರುವುದನ್ನು ಇಲ್ಲಿ ಕಾಣುತ್ತೇವೆ. ಈ ಸಂಕಲನದ ಎಲ್ಲಾ ಕವಿತೆಗಳು ವಾಸ್ತವಿಕತೆಯ, ವಸ್ತುಸ್ಥಿತಿಯ, ವರ್ತಮಾನದ ಅನುಭವದಾಳದಿಂದ ಹೊರಹೊಮ್ಮಿವೆ. ಬದುಕಿನ ವಿಷಮತೆ, ಮೋಸ, ವಂಚನೆ, ನೋವು-ನಲಿವು, ಉಪದೇಶ, ಪ್ರೀತಿ, ಪ್ರೇಮ, ಹತಾಶೆ -ಹೀಗೆ ಬದುಕಿನಲ್ಲಿ ಕಂಡು ಕೇಳಿದ ವಿವಿಧ ರೀತಿಯ ಅನುಭವಗಳೇ ಇಲ್ಲಿಯ ಕವಿತೆಗಳ ವಸ್ತು. ಕಾಜೂರು ಸತೀಶ್ ಅವರದು ಆರ್ಭಟಿಸುವ ಕಾವ್ಯವಲ್ಲ. ಮೆಲುದನಿಯಲ್ಲಿಯೇ ಆಪ್ತವಾಗಿ ಮಾತನಾಡಿಸಲು ಹವಣಿಸುವ ಕಾವ್ಯ. ಕಾಜೂರು ಪ್ರಯತ್ನಪೂರ್ವಕವಾಗಿ ಕಾವ್ಯ ಹೊಸೆಯುವುದಿಲ್ಲ. ನಿಸ್ಸಂಶಯವಾಗಿ ಅವರದ್ದು ಭಾವಕ್ಕೆ ಮೂಡಿದ ಭಾಷೆ. ಅವರ ಕವಿತೆಗಳ ಒಡಲಿನಲ್ಲಿರುವ ತಣ್ಣನೆಯ ಬೆಂಕಿ ಓದುಗರನ್ನು ತಕ್ಷಣವೇ ತಟ್ಟುತ್ತದೆ. ಕಾಜೂರು ಅವರ ಕಾವ್ಯಗುಣ ವರ್ತಮಾನದ ದುಃಸ್ಥಿತಿಯ ಕುರಿತು ಭೀತಗೊಂಡಿದೆ. ಕಾವ್ಯಾಲಂಕಾರ ಅರ್ಥಾಲಂಕಾರವನ್ನು ಮೀರಿಸುವ ಭಾವಾಲಂಕಾರ ಪ್ರತಿಯೊಂದು ಕವಿತೆಯಲ್ಲಿಯೂ ಸ್ಪಂದಿಸುತ್ತದೆ. ಸಮಾನತೆಯ, ಆರೋಗ್ಯಪೂರ್ಣ, ಮಾನವೀಯ ಸಮಾಜವೊಂದು ರೂಪುಗೊಳ್ಳಬೇಕೆಂಬ ಹಂಬಲ ಸತೀಶ್‍ರ ಕಾವ್ಯಭೂಮಿಕೆಯನ್ನು ರೂಪಿಸಿದೆ. ಈ ಸಂಕಲನದ ಪ್ರತಿಯೊಂದು ಕವಿತೆಗಳಲ್ಲಿಯೂ ಅವರ ಈ ದನಿಯನ್ನು ಓದುಗರು ಕೇಳಿಸಿಕೊಳ್ಳಬಹುದು. ಇಲ್ಲಿನ ಕವಿತೆಗಳ ಸ್ಥಾಯಿಭಾವ ದಟ್ಟವಾದ ವಿಷಾದ ಮತ್ತು ಮಡುಗಟ್ಟಿದ ನೋವಿನ ಜಿನುಗುವಿಕೆ ಆಗಿದೆ.
ನನ್ನ ನಿನ್ನ ನಡುವೆ ಕಡಲಿಲ್ಲ
ಈ ಹೂವುಗಳನ್ನು ಮುಟ್ಟಲು
ಸುಟ್ಟುಹೋಗುತ್ತೇನೋ ಎಂಬ
ಭಯವಿದೆ ನನಗೆ
(ಕಡಲಾಚೆಯ ಹುಡುಗಿಗೆ)
ಎಂದು ಆತ್ಮಶೋಧ ಮಾಡಿಕೊಳ್ಳುತ್ತ ಕಾಜೂರು ಸತೀಶ್ ತಾನು ಪ್ರೀತಿಸಿದ ಹುಡುಗಿಯಿಂದ ತಿರಸ್ಕೃತನಾದ ನೋವು ಎದೆಯಲ್ಲಿ ಉಳಿದಿದೆ. ಆ ಪ್ರೇಮದ ಬಗೆಯನ್ನು ಅರಿಯುವ ಕ್ರಮ, ತನ್ನ ಪ್ರಿಯತಮೆಗೆ ಮನವರಿಕೆ ಮಾಡುವ ಕ್ರಮವಾಗಿ ಅನೇಕ ಕಡೆ ಕಾಣುತ್ತದೆ. ತನ್ನೆಲ್ಲ ವಿಹ್ವಲತೆ, ಸ್ವಪ್ನಗುಣ, ಜೀಕುಗಳಿಂದ ಈ ಕವಿತೆ ಆತ್ಮಶೋಧನೆಗೆ ಪ್ರೇರೇಪಿಸುತ್ತದೆ. ನೋಡಿದ್ದು, ಅನುಭವಿಸಿದ್ದು ಏನೋ ಇದೆಯಾದರೂ, ಕವಿಗೆ ಯಾವುದನ್ನು ಮುಟ್ಟಿ ಮಿಡಿಸುವ ಮನಸ್ಸಿಲ್ಲವಾದರೂ ಎಲ್ಲವನ್ನು ಹೇಳಿ ಮುಗಿಸಿಬಿಡಬೇಕೆಂಬ ನಿರ್ಧಾರವಿದೆ.
ಈ ರಾತ್ರಿಗಳಲ್ಲಿ ನಿದ್ರಿಸಲಾರೆ
ಹೃದಯ ರಿಂಗಣಿಸುತ್ತಲೇ ಇದೆ
ವ್ಯಾಪ್ತಿ ಪ್ರದೇಶಗಳಾಚೆಗೂ ಕೂಡ
ಉಗಾಂಡದ ಹುಡುಗ ಮುಲುಗುಡುತಿರಬಹುದು
ಅಮೀನನ ಉದ್ದ ಕೋರೆಗಳ ನಡುವೆ
ನಿದ್ದೆಹೋಗಿರಬಹುದು ನನ್ನೂರ ಹಸಿದ ಜನ ಹಸುಳೆಯಂತೆ
( ಈ ರಾತ್ರಿಗಳಲ್ಲಿ ನಿದ್ರಿಸಲಾರೆ)
ಜಗತ್ತು ಈಗ ಗಂಡಾಂತರದಲ್ಲಿದೆ. ಈ ಕವಿತೆಯ ಸಾಲುಗಳಲ್ಲಿರುವ ಸತ್ಯ, ವ್ಯಂಗ್ಯ ಸಾರ್ಥಕವಾಗಿದೆ. ಕವಿ ಸತೀಶ್ ಸಾಮಾಜಿಕವಾಗಿ ಎಷ್ಟು ಅಶಾಂತವಾಗಿದ್ದಾರೆ, ಅಸಹಾಯಕವಾಗಿದ್ದಾರೆ ಎಂಬುದನ್ನು ಈ ಕವಿತೆಯ ಸಾಲುಗಳಲ್ಲಿ ಸಹಜವಾಗಿ ಕಾಣಬಹುದು. ಇಂತಹ ವಾಸ್ತವ ಬದುಕಿನ ಬಗೆಗೆ ಕಾಳಜಿಯ ಸಾಲುಗಳು ಇಲ್ಲಿವೆ. ಹೀಗೆ ಕವಿಯ ವಿಚಾರ ಮಾರ್ಮಿಕವಾಗಿದೆ. ಜೀವನ ಮೌಲ್ಯಗಳ ಬಗೆಗೆ ಚಿಂತಿಸುವ ಕವಿ ಪ್ರಚಲಿತ ಸಮಸ್ಯೆಗಳ ಕುರಿತು ತಮ್ಮ ವಿಚಾರವನ್ನು ಹರಿಸಿದ್ದು ಸಮಂಜಸವಾಗಿದೆ.
ಸಾಕಿದ ಕಂತ್ರಿನಾಯಿ ಸಾವು ಸುಳಿವ ಹೊತ್ತಲ್ಲಿ
ಮನೆಬಿಟ್ಟು ದೂರ ಹೋದಂತೆ
ಜೋರುಮಳೆಯಲ್ಲಿ ನದಿಯೊಳಗಿನ ಮೀನು ಸತ್ತಂತೆ
ನೀನು ಸತ್ತ ಹೊತ್ತಲ್ಲಿ ನನಗೆ ಸಾವು ಬರಲಿ
(ನಾವಿಬ್ಬರು ತೀರಿಕೊಂಡ ಮೇಲೆ)
ಪ್ರೀತಿ-ಪ್ರೇಮದ ಪವಿತ್ರ ಆವಿಷ್ಕಾರವನ್ನು ಕವಿ ಮನೋಜ್ಞವಾಗಿ ಈ ಕವಿತೆಯಲ್ಲಿ ಚಿತ್ರಿಸಿದ್ದಾರೆ. ಪ್ರೇಮಿಗಳಿಬ್ಬರ ಬದುಕನ್ನು ಅದರೆಲ್ಲ ಸಮಗ್ರತೆಯೊಳಗೆ ತೆರೆದಿಡುವ ಈ ಕವಿತೆ ಹಲವು ಬಗೆಯ ಧ್ವನಿಸಾಮರ್ಥ್ಯವನ್ನು, ಅರ್ಥಛಾಯೆಯನ್ನು ಬಿಟ್ಟುಕೊಡುತ್ತದೆ. ಜೀವನದ ಮಿತಿಯನ್ನು ಕುರಿತಂತಹ ಹೆಚ್ಚು ಗಾಢವಾದ ಚಿಂತನೆ ಈ ಕವಿತೆಯಲ್ಲಿ ಅರಳಿದೆ. ಮನುಷ್ಯನ ಜೀವನ ಸುಖ-ದುಃಖಗಳ ಸಂಗಮ ತತ್ವದಿಂದ ಕೂಡಿರುವಂತಹದ್ದು. ಬದುಕು ಯಾತನೆ, ನೋವು, ಸೂತಕ, ಮೌನ ಮರ್ಮಗಳ ಜಾತ್ರೆ; ಈಗ ಹೊರಟಿದೆ ಹಾದಿ ಎದೆಯ ಮೇಲೆ ಬಿಳಿ ಹೆಣಮೋಡದ ಯಾತ್ರೆ.
ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ
ಬೆಕ್ಕಿನ ಬೆಚ್ಚನೆಯ ಗುರುಗುರು ಲಾಲಿಹಾಡಿಗೆ
ಉರಿಯುತ್ತಾ ನಿದ್ದೆಹೋಗುತ್ತದೆ ಒಲೆ
(ಒಲೆ ಮತ್ತು ಅವ್ವ)
ಶ್ರಮಜೀವಿ ತಾಯಿಯನ್ನು ಕೇಂದ್ರವಾಗಿಟ್ಟುಕೊಂಡು ಅವಳೊಂದಿಗಿನ ಅನುಭವಕ್ಕೆ ಉತ್ಕಟವಾಗಿ ಪ್ರತಿಕ್ರಿಯೆ ನೀಡುತ್ತಾ, ಬದುಕಿನ ಇತರ ಸಂಗತಿಗಳ ಬಗ್ಗೆ ಬೆಳಕು ಬೀರುವ ಕಾವ್ಯದ ಕೌಶಲ್ಯವನ್ನು ಕಾಜೂರು ಸತೀಶ್‍ರು ಈ ಕವಿತೆಯಲ್ಲಿ ಸಾಧಿಸಿದ್ದಾರೆ. ಅವರು ತಾಯಿಯ ಮೂಲಕ ಕಾಣಿಸುವುದು, ಮತ್ತೆ ಮತ್ತೆ ಧ್ಯಾನಿಸುವುದು ಬದುಕಿನ ಬಹು ಮುಖ್ಯ ಮೂಲಭೂತ ಪ್ರಶ್ನೆಗಳನ್ನೇ; ಮನುಷ್ಯಪ್ರೀತಿ, ವ್ಯಾಮೋಹ, ತ್ಯಾಗ, ಚಡಪಡಿಕೆಗಳು ಈ ಕವಿತೆಯಲ್ಲಿ ಪರಿಣಾಮಕಾರಿಯಾಗಿ ರೂಪು ಪಡೆದಿವೆ.
ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ
ಒಸರುವ ಅಷ್ಟೂ ರಕ್ತವೂ ಹೂವಿಗೆ ಅಂದ ನೀಡಬೇಕು
ಸುಡಬಾರದು ಪಾದಗಳ ತೊಟ್ಟಿಕ್ಕುವ ಕೆಂಪುಹನಿಗಳು ಬೀದಿಬೀದಿಗಳಲ್ಲಿ
ಜಗದ ಅವ್ವಂದಿರು ಸುಡುವ ರೊಟ್ಟಿಯ ಎಸಳುಗಳಾಗಿ ಹಾರಿ ಹೂವಾಗಬೇಕು
(ಗಾಯದ ಹೂವುಗಳು)
ಹೀಗೆ ಸರಳ ಮಾತುಗಳಲ್ಲಿ ಬಿಚ್ಚಿಕೊಳ್ಳುವ ಈ ಕವಿತೆ ದುಃಖದ ಗಂಭೀರತೆಯನ್ನು ನಿಶ್ಯಬ್ದದಲ್ಲಿ ಹಿಡಿದುಕೊಡುತ್ತದೆ. ಈ ಜಗತ್ತಿನಲ್ಲಿ ಅಳಲುಗಳ ಹೊಳೆ ಹರಿಯುತ್ತಲೇ ಇದೆ; ಅದು ಮುಗಿಯುವ ಹಾಗೆ ಕಾಣುವುದಿಲ್ಲವೆಂಬ ವಿಷಾದ ಕವಿತೆಯದು. ಇಡೀ ಕವಿತೆ ಕಥನ ರೂಪದಲ್ಲಿ ರಚನೆಯಾಗಿದ್ದು ಹೃಸ್ವತೆಯಲ್ಲಿ ಅಪಾರತೆಯನ್ನು ತುಂಬಿಕೊಂಡಿದೆ. ಈ ಕವಿತೆಯ ಪರಿಣಾಮಶೀಲತೆಗೆ ಬಹುಮುಖ್ಯ ಕಾರಣ ಅದು ಬಿಡಿಸಿಡುವ ಸರಳ, ನೇರ, ಶಕ್ತ ಅಭಿವ್ಯಕ್ತಿ ಕ್ರಮ. ಅಲ್ಲದೆ ಅದು ಆತ್ಮೀಯವಾದ ಸಾಮಾಜಿಕ,ಸಾರ್ವತ್ರಿಕ ಚಿತ್ರಗಳ ಮುಖಾಂತರ ಜಿನುಗುವ ದುಃಖ ಮತ್ತು ವಿಷಾದ.
ಕಾರು ಸರಿಯದ ಕಾಡ ನಡುದಾರಿಯಲ್ಲಿ
ಹೂತುಬಿಡಿ ನನ್ನ
ಜೊತೆಗೆ ನನ್ನ ಹೆಸರು-ಭಾವಚಿತ್ರಗಳನ್ನು
ಬಿರಬಿರನೆ ಸರಿವ ನನ್ನವರ ಬರಿಗಾಲ ಚುಂಬನಕೆ
ಒಳಗೊಳಗೆ ಬಿರಿದು ಪುಳಕಗೊಳ್ಳುವೆನು
(ಉಯಿಲು)
ಇಂತಹ ಪಂಕ್ತಿಗಳು ಅಲ್ಲಲ್ಲಿ ಮಿನುಗುತ್ತವೆ. ಕವಿಯ ಅಂತರಂಗದಲ್ಲಿ ಮೂಡಿರುವ ಈ ಸಂಚಾರಿ ಭಾವ ಸಂಪೂರ್ಣವಾಗಿ ಹೃದಯತಾಪವಾಗಿದೆ. ಕಾಲದ ವಾಸ್ತವ ರೂಪಗಳ ಕುರಿತು ಗಾಢವಾದ ಅರಿವಿದ್ದು, ತನ್ನ ಸಮಚಿತ್ತ ಕಳೆದುಕೊಳ್ಳದ ಅನುಭವ ವಿನ್ಯಾಸದ ಈ ಕ್ರಮ ಮೆಚ್ಚುವಂತಹದ್ದು. ನಿಸರ್ಗ-ಮನುಷ್ಯ ಇವರ ನಡುವಿನ ಸಂಬಂಧ ಜಟಿಲವಾದದ್ದು. ಇಡೀ ಕವಿತೆಯನ್ನು ಓದುವಾಗ ಬಲಗೊಳ್ಳುತ್ತಾ ಹೋಗುವುದು ‘ನಾಯಕ’ನ ಪರದಾಟ ಮತ್ತು ನಿಸ್ಸಹಾಯಕತೆಗಳ ಭಾವನೆ.
ಕಾಜೂರು ಸತೀಶ್‍ರ ಕವಿತೆಗಳಲ್ಲಿ ಚೆಲುವಿದೆ; ಒಲವಿದೆ, ಉತ್ಸಾಹವಿದೆ, ಜೀವನದ ಗೆಲುವಿದೆ. ಆದರೆ ಆ ನಲಿವಿನ ಹಿಂದೆ ದುಃಖ ಮತ್ತು ವಿಷಾದಗಳ ತಳುಕು ಹಾಕಿಕೊಂಡಿವೆ. ಅವರ ಕಾವ್ಯದಲ್ಲಿ ಒಳಿತನ್ನು ನೋಡುವ ಕಣ್ಣಿಗೆ ಸಾವಿರದ ಮುಖ ದರ್ಶನವಾಗುತ್ತದೆ. ಸಾವು ಇಲ್ಲಿನ ಹಲವು ಕವಿತೆಗಳ ಶ್ರುತಿಯಾಗಿದೆ. ಇದು ನೋವು, ಸಂಕಟ,ತಳಮಳ, ಆತಂಕ, ಭಯ, ದಿಗ್ಭ್ರಮೆ, ವ್ಯರ್ಥತೆಗಳನ್ನು ಹೊಮ್ಮಿಸುವ ನೆಲೆಯಲ್ಲಿ ಆಕಾರ ಪಡೆದಿದೆ. ಜೀವಸಂಬಂಧಗಳ ಅನೂಹ್ಯ ನೆಲೆಗಳನ್ನು ಮೀಟುವಂತೆ ಈ ಕವಿತೆಗಳು ಬೆಳೆದಿರುವುದು ಪ್ರಮುಖವಾಗಿದೆ. ತಮ್ಮ ತೀವ್ರ ಕಂಪನದ ಕವಿತೆಯ ಸಾಲುಗಳಲ್ಲಿ ಶಕ್ತ ರೂಪಕಗಳನ್ನು ಸೃಷ್ಟಿಸಬಲ್ಲ ಕವಿ ಕಾಜೂರು ಸತೀಶ್ ಅಬ್ಬರಗಳಿಂದ ಹೊರತಾದ ಕವಿತೆಗಳನ್ನು ಈ ಸಂಕಲನದಲ್ಲಿ ಕೊಟ್ಟಿದ್ದಾರೆ. ಆದರೆ ಅವರ ಕೆಲವು ಕವಿತೆಗಳ ಸಂಯೋಜನೆಯ ನೆಲೆಯಲ್ಲಿ ಕಲಾತ್ಮಕತೆ ಕಡಿಮೆಯಾಗಿರುವುದರಿಂದ ಹಲವು ಕಡೆಗೆ ಇಲ್ಲಿಯ ಕವಿತೆಗಳು ಸೋಲುತ್ತವೆ.
ಕಾಜೂರು ಸತೀಶ್‍ರ ಈ ಸಂಕಲನದ ‘ಚಪ್ಪಲಿಗಳು’, ‘ಮರಣದ ಹಾಡು’, ‘ಮೈಲಿಗೆ’, ‘ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ’, ‘ನೆಲವಿಲ್ಲದವನ ಉಯಿಲು’, ‘ಕಾಡು ಕವಿತೆ’, ‘ಕಡಲಾಚೆಯ ಹುಡುಗಿಗೆ’, ‘ಈ ರಾತ್ರಿಗಳಲ್ಲಿ ನಿದ್ರಿಸಲಾರೆ’, ‘ಗಾಯದ ಹೂವುಗಳು’-ಮುಂತಾದ ಕವಿತೆಗಳು ಒಳ್ಳೆಯ ಕಾವ್ಯಾನುಭವ ನೀಡಿ ಓದುಗರ ಮನವನ್ನು ಕಲಕುತ್ತವೆ. ವಿಷಾದ, ದುಃಸ್ವಪ್ನಗಳನ್ನು ಈ ಕವಿತೆಗಳು ಅಭಿವ್ಯಕ್ತಿಸಿವೆ. ಕಾಜೂರು ವರ್ತಮಾನದ ವಿಷಾದದ ದನಿಯನ್ನು ದಾಖಲಿಸಿದ್ದಾರೆ. ಇಲ್ಲಿನ ಅನೇಕ ಕವಿತೆಗಳು ಆಧುನಿಕ ಜಗತ್ತಿನ ಬದುಕನ್ನು ಸಮರ್ಥವಾಗಿ ದರ್ಶಿಸುತ್ತವೆ. ಕಾಜೂರು ಸತೀಶ್ ಅನೇಕ ಕಡೆ ಹೊಸದೆನ್ನಿಸುವ ವಿಭಿನ್ನ ಪ್ರತಿಮೆ-ರೂಪಕಗಳನ್ನು ಈ ಸಂಕಲನದಲ್ಲಿ ಸಮರ್ಥವಾಗಿ ಬಳಸಿದ್ದಾರೆ. ಇದು ಸಾಮಾಜಿಕ ಕಾಳಜಿ ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಭಾವನೆಗಳನ್ನೊಳಗೊಂಡ ಕೃತಿ. ಈ ಸಂಕಲನದ ಕವಿತೆಗಳಲ್ಲಿ ಸಮಾನತೆ, ಭರವಸೆ, ಮಾನವತೆಗಳಿಗೆ ಪ್ರಾಧಾನ್ಯತೆ ಮತ್ತು ವೈಚಾರಿಕತೆಗೂ ಸ್ಥಾನ ದೊರಕಿದೆ. ಆದ್ದರಿಂದ ಇಲ್ಲಿಯ ಕವಿತೆಗಳು ಓದುಗರನ್ನು ಯೋಚನಾಮಗ್ನರನ್ನಾಗಿಸುತ್ತವೆ. ಸಂಕಲನದ ಹಲವಾರು ಕವಿತೆಗಳು ಒಂದೇ ಓದಿಗೆ ತನ್ನೆಡೆಗೆ ಸೆಳೆಯಬಲ್ಲ ಶಕ್ತಿ ಪಡೆದಿವೆ. ಪ್ರತಿಯೊಂದು ಕವಿತೆಗಳಿಗೂ ಸೂಕ್ತವಾದ ಚಿತ್ರಗಳನ್ನು ರಚಿಸಿರುವುದು ಈ ಕವನಸಂಕಲನದ ಪ್ರಮುಖ ಆಕರ್ಷಣೆಯಾಗಿದೆ.
*
ಸಿ.ಎಸ್.ಭೀಮರಾಯ
ಆಂಗ್ಲ ಉಪನ್ಯಾಸಕರು
ಅ/ಔ. ಸಿದ್ದಣ್ಣ ಬಿ. ಪೂಜಾರಿ
‘ಅಪೂರ್ವ ನಿವಾಸ’,
ಯಮುನಾ ನಗರ, ಕುಸನೂರ ರಸ್ತೆ,
ಕಲಬುರಗಿ-585105
ಮೊ. ನಂ-9008438993/9741523806
E-mail:csbhimaraya123@gmail.com
Wednesday, July 26, 2017
ಕಾಜೂರು ಸತೀಶರ ಕಾವ್ಯ: ಮಣ್ಣಿನಪ್ಸರೆಯರ ಸಖ್ಯವೂ, ಕೆಂಡದಲ್ಲಿ ಸುಟ್ಟ ಮೀನೂ
ಇಷ್ಟೆಲ್ಲಾ ಪೂರ್ವ ಪೀಠಿಕೆ ಕಾಜೂರು ಸತೀಶರ ಕವಿತೆಗಳ ಕುರಿತ ನನ್ನ ಅಭಿಪ್ರಾಯಕ್ಕೆ ಪೂರಕವಾಗಿ ಹೇಳಬೇಕಿತ್ತು. ಸತೀಶರ ಎಷ್ಟೆಲ್ಲಾ ನಿರೂಪಗಳ ಸ್ವರಗಳನ್ನು ಕಾಣಿಸಿದ್ದಾರೆ ಅಂದ್ರೆ ಅದು ಕಾವ್ಯದ ಸಹಜತೆಗೆ ಮುಕ್ಕಾಗದ ಹಾಗೆ. ಮತ್ತದು ಕಾವ್ಯದ ಒಟ್ಟು ಬಂಧದಲ್ಲಿ ಹೊಸೆದುಕೊಂಡ ಪರಿಯು ಮತ್ತೆ ಮತ್ತೆ ಓದಿಕೊಳ್ಳಲೂ ಒಂದು ಕಾರಣ. ಕವಿತೆಗೆ ಮೊದಲಿನಿಂದ ಹೋಗುವುದಾದರೆ- ಒಂದು ಸಾಲಿದೆ ಅರ್ಪಣೆಯದು ನನ್ನನ್ನೇ ಉಸಿರಾಡಿಕೊಳ್ಳುತ್ತಿರುವ ಅಂತ. ಇಲ್ಲಿಯ ಎಷ್ಟೋ ಕವಿತೆಗಳು ಉಸಿರಿನಷ್ಟು ಸಹಜವಾಗಿಯೂ, ವಿಮರ್ಶಾ ಲೋಕ ಬೇಡುವ ಬೌದ್ಧಿಕ ಪರಿಶ್ರಮ, ಹುಡುಕಾಟವೂ ಎಲ್ಲ ಕವಿತೆಗಳಲ್ಲಿದೆ.ಇಲ್ಲಿ ಬೌದ್ಧಿಕ ಪರಿಶ್ರಮವು ಅನೇಕ ಜ್ಞಾನಶಾಖೆಗಳ ಆಳದಲಿ ಕುಡಿಯೊಡೆದ ಭಾವತೀವ್ರತೆ ಅನ್ನುವ ಅರ್ಥದಲ್ಲಿ ನೋಡುವುದಾದರೆ
ತನುವ ಶುದ್ಧಿಗೊಳಿಸಿದ
ಬಚ್ಚಲ ಮನೆಯ ನೀರು
ಹಿತ್ತಲ ಬಸಳೆ ಬಳ್ಳಿಗೆ ಹಾಲುಣಿಸುವುದು
ಕೊಳೆತ ಮಾವಿನ ಹಣ್ಣಿನ ಒಳಗೆ
ಮೊಳಕೆಯೊಡೆದಿದೆ ಗೊರಟೆ
ಸಿಪ್ಪೆ ಸೀಳದೆ ಒಳಗೆ ನುಸುಳಿದ ಹುಳುಗಳಿಂದ
ಕಚಗುಳಿ ಅದಕೆ
ಮಣ್ಣಲ್ಲಿ ಅಂಬೆಗಾಲಿಡುವ ತವಕ
( ಮೈಲಿಗೆ -30)
ನನ್ನ ಮರಣದ ನಂತರ
ಏಕವಾಗುವ , ಅಭೇದವಾಗುವ
ನನ್ನೊಲುಮೆಯ ಬ್ಯಾಕ್ಟೀರಿಯಾಗಳದು
ಅಹರ್ನಿಶಿ ನೃತ್ಯ
(ಉಯಿಲು -96)
ಅಮೀಬಾದ ತಾಯೇ
ಬುದ್ಧ ನ್ಯೂಟನ್ನರ ಗುರುವೇ
ಮಣ್ಣಿನಬ್ಬೆಯ ಅಬ್ಬೆಯೇ
ನಿನಗೆ ಶರಣು
(ಮರ -92)
ಹೀಗೆ ಸಂಕಲನದ ತುಂಬ ತುಂಬಿ ಹೋಗಿರುವ ಸಾಲುಗಳು ತಾಳ್ಮೆಯ ಓದಿಗೆ ದಕ್ಕಿಬಿಡುತ್ತವೆ. ಕೆಲವು ಕವಿತೆಗಳನ್ನು ಸ್ಪರ್ಶಿಸಿಯೇ ಓದಬೇಕಾಗುತ್ತದೆ. ಇಲ್ಲಿ ಸ್ಪರ್ಶ ಅಪಾರ ತಾಳ್ಮೆಯನ್ನು ಕೆಲವು ಸಿದ್ಧತೆಗಳನ್ನು ಬೇಡುತ್ತದೆ. ಅಡಿಗರ ಕಾವ್ಯದಲ್ಲಿ ಸಿಗುವ ಹಲವು ಹೊಳಹುಗಳು ಸಿಗುವುದು, ಬೇಂದ್ರೆ ಅಜ್ಜನ ಹಲವು ಕವಿತೆಗಳಲ್ಲಿ 'ನೃತ್ಯ ಯಜ್ಞ' ಉತ್ತಮ ಉದಾಹರಣೆ. 'ಒಡೆದ ಮಣಿಗಳಿಲ್ಲಿ ಒಂದುಗೂಡುವವಿಲ್ಲಿ' ಅಂತಾ ಹೇಳ್ತಾರಲ್ಲ ಎಸ್ ಮಂಜುನಾಥ್ ಹಾಗೆ.
*
ಇಲ್ಲಿ ಕವಿಗೆ ಎಲ್ಲವೂ ಮುಖ್ಯ ಅಂತ್ಲೆ ಅನಿಸಿದೆ. ಅಮುಖ್ಯ ಅಂತಾ ಅನಿಸುವುದೆ ಸಿಗಲ್ವೇನೊ ಅನ್ನೊ ಹಾಗೆ. ಇಲ್ಲಿ ನೆಡೆಯುವುದೆಲ್ಲ ಒಂದಕ್ಕೆ ಒಂದು ಹೊಸೆದುಕೊಂಡು ಹುಟ್ಟಿವೆ. ಪೂರಕತತ್ವ ಅನ್ನೊ ಮಾತನ್ನು ಇಲ್ಲಿ ಲಗತಿಸುವುದಾದ್ರೆ.
ಮೊಲದ ಮಲದ ಹರಳು ಕಣಗಳನ್ನು
ಎಲ್ಲೋ ಕಂಡುಹಿಡಿದ ದೇವಕಣದಂತೆ
ಪ್ರೀತಿಸಿ ಪರೀಕ್ಷಿಸುತ್ತೇನೆ
(ಕಾಡು ಕವಿತೆ - 44)
ನನ್ನೂರಿಂದಂಟಿದ ಜಿಗಣೆಯೊಂದು
ಹೆದ್ದಾರಿಯಲ್ಲೆಲ್ಲೋ ಕಳಚಿಬಿದ್ದಿದೆ
ಅಂಟಲಾರದು ಬೂಟುಕಾಲು, ಕೀಲಿಮಣೆಗಳಿಗೆ
ಕಡೆಯ ಉಸಿರೇ ಕೊಂಚ ನಿಲ್ಲು
ನನ್ನ ಕುದಿವ ನೆತ್ತರನೋಮ್ಮೆ ಅದಕ್ಕುಣಿಸುವೆ
(ಈ ರಾತ್ರಿಗಳಲ್ಲಿ ನಿದ್ರಿಸಲಾರೆ - 54 )
ಹೀಗೆ ಕವಿತೆಯ ತುಂಬಿಹೋದ ಸಾಲುಗಳು ಸುಸೂಕ್ಷ್ಮ ಪದಗಳಿವೆ. ಇಲ್ಲಿ ಬಳೆಸಿದಂತೆಲ್ಲ ಹೊಸ ಹೊಳಪನ್ನೇ ಹೊತ್ತು ತರುತ್ತವೆ. ಎಷ್ಟು ಹೇಳಿದರು ಕವಿಗೆ ಸಮಾದಾನವೇ ಇಲ್ಲ. ಮಣ್ಣಿನೊಂದಿಗೆ ಕಟ್ಟಿದ ಈಡಿಮ್ ಇದೆಯಲ್ಲ ಇಲ್ಲಿ ಅದು ಈ ಕವಿಯ ಮುಖ್ಯ ಕಾವ್ಯ ಸೆಲೆಯ ಜ್ಞಾನಧಾರೆಗಳಲ್ಲಿ ಒಂದು ಅನಿಸಿದೆ. ಒಂದು ಸಾಲು ನೋಡಿ:
ಉದ್ದುದ್ದ ಬೇರಿನ ಬೆರಳ ಚಾಚಿ
ಮಣ್ಣಿನಪ್ಸರೆಯ ಬಾಚಿ ತಬ್ಬಿಕೊಳ್ಳಬೇಕೆಂದು (ಬೋನ್ಸಾಯ್ ಸ್ವಗತ -61)
ಮಣ್ಣಾಗಿಹೋದ ನಾನು
ಸಿಕ್ಕಿಸಿಕ್ಕ ಕಾಡುಹೂಗಳೊಂದಿಗೆ ಕೂಡಿ
ಸುಂದರ ಹೆಂಗಳೆಯರ ಹೆರಳಲ್ಲಿ
ಹಾಯಾಗಿ ನಿದ್ರಿಸುತ್ತೇನೆ
(ನಾವಿಬ್ಬರು ತೀರಿಕೊಂಡ ಮೇಲೆ -56)
*
ನೋವನ್ನೂ ,ವಿಷಾದವನ್ನೂ ಓದುಗನಿಗೆ ದಾಟಿಸಿಬಿಡುವುದು, ಮತ್ತೆ ಮತ್ತೆ ಓದುವಂತೆ ಕಾಡುವ ಕವಿತೆ ಬರೆಯುವುದು ಬಲು ಸವಾಲಿನದು. ಇಲ್ಲಿ ಭಾಷೆ, ರೂಪಕ, ಇಮೇಜ್ಗಳು ಎಷ್ಟು ಮುಖ್ಯವೂ ಅಷ್ಟೆ ಪದದ ಮಿತ ಬಳಕೆ ಭಾವತೀವ್ರತೆಯೂ ಅಷ್ಟೇ ಮುಖ್ಯ ಅನ್ಸಿದೆ ನನಗೆ. ನನ್ನ ಓರಿಗೆ ಎಷ್ಟೋ ಗೆಳೆಯರು ಶಬ್ದಗಳಿಂದ ಕವಿತೆಯನ್ನು ಮುಚ್ಚಿಟ್ಟಿದ್ದಿದೆ. ಅಪವಾದವೆಂಬಂತೆ ಬರೆಯುವ ಅನೇಕರಿದ್ದಾರೆ. ಇವರು ನೋವನ್ನು, ವಿಷಾದವನ್ನೂ ಎಷ್ಟೊಂದು ಅಬ್ಜರ್ವಡಾಗಿ ಕಾಣ್ಸಿದಾರೆ ಅನ್ನೋದೆ ನನಗೆ ಸೋಜಿಗ. ನನ್ನ ಓದಿನ ಮಿತಿಗೆ ಸದ್ಯಕ್ಕೆ ಕಂಡ ದೊಡ್ಡಕಲ್ಲಹಳ್ಳಿಯ ಒಂದು ಕವಿತೆ ಹೀಗಿದೆ.
ಎಲೆ ಉದುರುವಷ್ಟು ಹಗುರವಾಗಿ
ಇಬ್ವನಿ ಕರಗುವಷ್ಟು ಹಿತವಾಗಿ
ಬಿಡಿಸಿಕೋ ತಂದೆ
ನಿನ್ನ ಬನದ ಕುಸುಮಗಳನು
ನಡೆವ ಹಾದಿಯ ತುಂಬ ಬಿದ್ದ ನೋವಿನ ಮುಳ್ಳ ಹೆಕ್ಕಿ ತೆಗೆದೆವು ಕತ್ತಲಲಿ
ಆಸರೆಗೆ ಒರಗಿ ನಿಂತಾಗ ಮರವೊಂದು ನಮ್ಮಿಬ್ಬರನು ಒದ್ದೆಯಾಗಿಸಿತು
ಇದು ಹೊಸ್ಮನೆಯ ಗಜಲ್.
ನೋಡಲಾಗದು ಗೆಳತಿ
ಹೂಮನೆಯ ಮಂದಿಯ
ನಗೆಮಾಸಿದ ಮುಖ
ನೀನೇನೆ ಅನ್ನು
ನಾಲ್ದೆಸೆಯ ಬೀಸುಗಾಳಿಗೆ
ಮುಂದಣ ಜಗಲಿ ಹೇಳಿಮಾಡಿಸಿದ್ದಲ್ಲ
-ಕಾವ್ಯಶ್ರೀ ಮನ್ಮನೆಯವರದು.
ಇನ್ನೂ ಒಂದು ನೋಡೋಣ:
ನನಗೆ ಗೊತ್ತು
ಆ ಎಂದಾದರೊಂದು ದಿನ
ಈ ಅತೃಪ್ತ ಲೋಕ ಕೆಂಪಾಗಲಿದೆ
ಮೇಲೆ ಹಾರುವ ಮೋಡಗಳೂ
ನೆತ್ತರಲಿ ಅದ್ದಿದ ಹತ್ತಿ ಹಿಂಜುಗಳಂತೆ
ಉದುರಲಿವೆ ಜಗದ ತುಂಬ
ಈ ಸಾಲು ಬಸವರಾಜ್ ಹೃತ್ಸಾಕ್ಷಿಯದು.
ಸತೀಶರ ಕವಿತೆ ಕೇಳಿ:
ನಾನು ಸತ್ತ ಮೇಲೆ
ಅಳುವವರ ಕಂಬನಿಗಳ ಸಂಗ್ರಹಿಸಿ
ಚಿಮುಕಿಸಿಬಿಡಿ ಮಣ್ಣತುಂಬ
ಹೂವು ಬಿರಿಯಲಿ ಕಾಡ ಕಂಗಳಲಿ
ಲವಣಗಳ ಕುಡಿಕುಡಿದು
ಕಂಬನಿಗಳು ಉದುರುವುದಿದ್ದರೆ
ಎಣಿಸಿ, ಗುರುತುಮಾಡಿ
ಬಿದ್ದಲ್ಲೆಲ್ಲಾ ಪೈರು ನೆಡಬೇಕು
ದೇಹ ಹೊತ್ತರೆ
ಹೊಟ್ಟೆಯೊಳಗಿನ ಮಲವನ್ನೂ ಹೊತ್ತಂತೆ
ಆ ಭಂಗಿಯ ಹಿಂಸೆ ಬೇಡ
ದರದರ ಎಳೆದೊಯ್ಯಬೇಕು
ಮೃತಕೋಶಗಳು ಒಡೆದು
ಚರಿತ್ರೆಯಿಂದ ಬಿಡುಗಡೆಗೊಳ್ಳಲಿ
ಮರೆತುಬಿಡಿ ನನ್ನ
ನಿತ್ಯದ ನಿಮ್ಮ ವಿಸರ್ಜನೆಯ ಹಾಗೆ
(ನೆಲವಿಲ್ಲದವನ ಉಯಿಲು -38 ಉಯಿಲು -96)
ದೀಪ ಆರಿಸಿ ಬೂದಿಯ ಹಾಸಿ ಮಲಗಿದರೂ
ಸುಡುವ ಕೆಂಡ ಒಳಗೆ..
ಅವ್ವನ ಉಸಿರು ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ..
ಹೊಗೆಯಿರದ ಮಹಾನಗರದ ಒಲೆಗಳಲ್ಲಿ
ಸುಟ್ಟ ಸಂಬಂಧಕ್ಕೆ ಸಾಕ್ಷಿಯಾಗಿ
ಬೂದಿ ಕೂಡ ಉಳಿಯುವುದಿಲ್ಲ
ಹೊತ್ತಿಕೊಂಡಿರಲಿ ಒಲೆ
ಅನ್ನ ಬೇಯುವವರೆಗೂ (ಒಲೆ ಮತ್ತು ಅವ್ವ - 58)
ಹೀಗೆ ನೋವುಗಳನ್ನಾ ಅಟ್ಯಾಕ ಮಾಡೋದು ತೀರ ದುರ್ಲಬದ ಕೆಲಸ. ಕವಿತೆ ಆಳದಲ್ಲಿ ಕೆಣಕುವಿಕೆಯ ಈ ಪರಿ ಬರಹ ಉರ್ದು ಕಾವ್ಯಗಳಲ್ಲಿ ಹೆಚ್ಚು ಅಂತಾ ಕೇಳಿದ್ದಿದೆ. ಭಕ್ತಿಯನ್ನು ಒಲುಮೆಯನ್ನಾಗಿಸಿ ದೈವ ಸಂಬಂಧವಾಗಿಸುವ ವಿರಹವೂ ದೇಹಾತೀತವಾಗಿ ಬೆಸೆಯುವುದಿದೆ. ಕವಿತೆ ಭಾಷಾಲಯಕ್ಕೆ ಜೊಳ್ಳೂ ಅನಿಸಿದೆ ತೀರ ಬಿಗುವೂ ಅನಿಸದ ಹುಟ್ಟುವ ರಚನೆಗಳನ್ನು ಸತೀಶರ ಕವಿತೆಗಳಲ್ಲಿ ಕಾಣಬಹುದು. ಹಾಗೆ ಶಬ್ದಗಳ ಹೊರಮೈಗೆ ಮಾರುಹೋಗದ ರಚನೆಗಳೂ ಇಲ್ಲಿವೆ. "ಹಾಗೆ ನೋಡಿದರೆ ಶಬ್ದಗಳ ಹೊರಮೈಗೆ ಮಾರು ಹೋಗುವುದೇ ಕಾವ್ಯ" ಅಂತಾ ಪ್ರವೀಣ ಹೇಳಿದ ನೆನಪು. ಅವನ ಮಾತನ್ನು ಒಪ್ತಾನೆ ಇಲ್ಲಿ ಒಂದನ್ನ ಕೇಳುವುದಾದ್ರೆ,
ನಿಜಕ್ಕೂ ಬೇಕಿರಲಿಲ್ಲ
ಇದೊಂದಾದರೂ ಇರಲಿ
ಅಕ್ಷರ ಕಲಿತ ಸಾಕ್ಷಿಗೆ
ಗೋರಿಯಂತೆ ( ನೆಲವಿಲ್ಲದವನ ಉಯಿಲು- 38)
ಉಯಿಲು, ಮರ, ಗಾಯದ ಹೂವುಗಳು ಸಾರ್ಥಕ ಕವಿತೆಗಳು ಅನಿಸಿವೆ. ಇವೆ ಯಾಕೆ ಸಾರ್ಥಕ ಕವಿತೆಗಳು ಅನಿಸಿವೆ ಎಂಬ ಪ್ರಶ್ನೆಗೆ ಮತ್ತೆ ನನ್ನನ್ನೇ ನಾನು ನೋಡಿಕೊಳ್ಳಬೇಕಾಗುತ್ತೆ ಅಥವಾ ಕಾವ್ಯಮಿಮಾಂಸೆಯಲ್ಲಿ ಉದಾಹರಣೆಗಳನ್ನೇ ಕೊಡೋಣಾಂದ್ರೆ ಅದು ನನಗೆ ಅರ್ಥವೇ ಆಗಿಲ್ಲ ಅಂತ್ಲೆ ಹೇಳಬೇಕಾಗುತ್ತೆ. ಆದ್ರೆ ಹೀಗೆ ನಾನು ಹೇಳಿದ್ದರಲ್ಲಿಯದನ್ನೇ ಹೇಳಿಬಿಡ್ತಿನಿ. ಇಲ್ಲಿ ಅಭೇದವಾಗುವ ಸಾಲುಗಳಿಲ್ಲ ಅಂದ್ರೆ ತಾನು ಏನು ಹೇಳಬೇಕು ಅಂತಿದ್ದಾನೊ ಆ ಕಡೆಗೇ ಕವಿಯ ಲಕ್ಷವಿದೆ ಇಲ್ಲಿ. ಇನ್ನೊಂದು ಮಾತು ಅಂದ್ರೆ ಉಯಿಲು ರಚನೆಯಲ್ಲಿ ಸ್ವಲ್ಪ ವಾಲಿದರೂ ಒಟ್ಟು ಕಾವ್ಯ ನೋಡುವಲ್ಲಿ, ಮಿತಪದಗಳಲ್ಲಿ ಹಿಡಿದಿಡುವ ಗುಣ, ರೂಪಕದೊಂದಿಗೆ ಹೊಸೆದ ಕಲ್ಪನಾ ಪ್ರತಿಭೆ ಎನ್ನುವುದಾದಲ್ಲಿ ಈ ಕವಿತೆ ಅಷ್ಟರ ಮಟ್ಟಿಗೆ ದಕ್ಕಿದೆ. ಮರ, ಗಾಯದ ಹೂವುಗಳು ಪೂರ್ಣತೆಯನ್ನು ನಿಲುಕಿಸಿವೆ. ಬಹುಕಾಲ ಕಾಡುತ್ತವೆ ಡಿಸ್ಟರ್ಬ್ ಅನ್ನುವ ಅರ್ಥದಲ್ಲಿ. ಇಲ್ಲಿ ಮತ್ತೆ ಮತ್ತೆ ಬರುವ ಜಿಗಣೆ, ಹಿಕ್ಕೆ, ಸಾವು, ಹುಳು-ಹುಪ್ಪಟೆ, ಇತಿಹಾಸಗಳೆಲ್ಲೂ ಎಷ್ಟೊಂದಿವೆ ಇಲ್ಲಿ. ನಾವು ಕೇಳದ ಲೋಕದಿಂದಲೇ ಹೊಸ ರೂಪಕವೂ ಆಗಿ ಇಮ್ಯಾಜಿನ್ಗೂ ಸಿಗದ ರೀತಿಯಲ್ಲಿ ಬರುತ್ತಿರುವುದು ಬರವಸೆ ಹುಟ್ಟಿಸುತ್ತದೆ. ಹಾಗೆ ರೂಪಕವೇ ಕವಿತೆಯನ್ನು ತಾಳಿಸಲಾರದು ಎಂಬುದೂ ಸಹ. ಹೀಗೆ ಹೇಳಿದ ಕಾರಣಕ್ಕೆ ಸತೀಶರು ತಮ್ಮ ಕವಿತೆಗಳಲ್ಲಿ ತರುವ ನವೀನ ರೂಪಕಗಳು ಸೋತಿಲ್ಲ. ಒಂದು ಅಂತರದಲ್ಲಿಯೇ ಹುಟ್ಟುವ ಹಾಗೇ ಪೂರಕವೂ ಆಗವ ಗುಣದಿಂದ ನನಗೆ ಹಿಡಿಸಿವೆ. ಕಿ ರಂ, ಎನ್ಕೆಯವರನ್ನು ರೂಪಕಗಳ ಚಕ್ರವರ್ತಿ ಅಂದಾಗ ನಾನು ಅವರ ಕವಿತೆಗಳನ್ನು ಓದಿದ್ದು ಅಲ್ಲಿಯ ರೂಪಕಗಳಂತು ದಂಗುಬಡಿಸುತ್ತವೆ. ಭಾಷೆಯ ಹೊಸ ವಿನ್ಯಾಸಗಳು ಕವಿತೆಗಳಲ್ಲಿವೆ ಒಂದೇ ಲಯಕ್ಕೆ ಮತ್ತೆ ಮತ್ತೆ ಹೋಗದೆ ಹೊಸದನ್ನೇ ತರುತ್ತಾರೆ. ಹೊಸದೊಂದು ತಾತ್ವಿಕತೆಯನ್ನೇ ಕಟ್ಟಿಕೊಡುವ( ಹೀಗೆ ಅನ್ನಬೇಕೆ) ಒಂದು ಕವಿತೆಯಾಗಿ ‘ಎಡ ಮತ್ತು ಬಲ’ ಕಂಡಿದೆ:
ದೊಡ್ಡವನಾದ್ಮೇಲೆ
ಎಡಕ್ಕೂ ಬೇಡ ಬಲಕ್ಕೂ ಬೇಡ
ನೀನೇ ಒಂದು ವಾಹ್ನ ಕೊಂಡು
ಮಧ್ಯದಲ್ಲೇ ಹೋಗು
ಎಡ ಬಲದಲ್ಲಿ ಚಲ್ಲಿದ ರಕ್ತ
ಸ್ವಲ್ಪ ಉಬ್ಬಿಕೊಂಡಿರೋ ಅಲ್ಲಿ
ನಿಲ್ಲೋದಿಲ್ಲ ಮಗಾ
ನಿಲ್ಲೋದೇ ಇಲ್ಲ (ಎಡ ಮತ್ತು ಬಲ -89)
*
ನನಗೆ ಇಷ್ಟವಾದ ಕವಿತೆಗಳಿವು: ಮೈಲಿಗೆ, ಕೇಳಿಸಿಕೊಳ್ಳಿ, ಒಂಟಿ, ನಾವಿಬ್ಬರು ತೀರಿಕೊಂಡಮೇಲೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ಒಲೆ ಮತ್ತು ಅವ್ವ, ನೀನು ನನ್ನ ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯಿ ಸ್ವಗತ, ಸಲಾಮು, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಅಪ್ಪ ಮತ್ತವನ ಹತ್ಯಾರಗಳು, ಆಲ್ಬಮ್, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ಎಡ ಮತ್ತು ಬಲ.
ಸತೀಶರ ಕವಿತೆಗಳ ಬಗ್ಗೆ ಇಷ್ಟನ್ನು ಹೇಳಿದ ಮೇಲೆ ಇಲ್ಲಿರುವ ಅಥವಾ ನನಗೆ ಹಾಗೆ ತೋರುವ ದೋಷಗಳನ್ನು ( ಹೀಗೆ ಅನ್ನಬೇಕೊ- ಬೇಡ್ವೊ ಅಂತಾ ಸುಬ್ಬು, ಪ್ರವೀಣ ನನ್ನ ಜೊತೆ ಜಗಳವಾಡಿದ್ದು ನೆನಪಾಗ್ತಿದೆ. ಇರಲಿ) ಹೇಳದಿದ್ದಲ್ಲಿ ಅಪಚಾರವಾದೀತು ಅಂತಾ ಅನ್ಸಿದೆ. ಇಲ್ಲಿ ಅನೇಕ ಕವಿತೆಗಳು ನಡು ನಡುವೆ ಮಾತಿಗಿಳಿಯುತ್ತವೆ. (ಚಪ್ಪಲಿಗಳು, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ಕಡಲಾಚೆಯ ಹುಡುಗಿಗೆ...) ತನ್ನನ್ನು ತಾನು ಸ್ಪಷ್ಟಪಡಿಸಿಕೊಳ್ಳುವಂತೆ ತೋರುವ ಕೆಲ ರಚನೆಗಳಲ್ಲೇ ಮಾತುಗಳು ತೂರುತ್ತವಾದರೂ ಕೆಲ ಕಡೆ ಕತ್ತರಿಸಿಟ್ಟಂತೆ ತೋರುವ ಸಾಲುಗಳು ಏನು ಹೇಳಲು ಹೊರಟಿವೆ ಅನ್ನುವುದೆ ಸ್ಪಷ್ಟವಾಗುವುದಿಲ್ಲ. ಈ ಎರಡು ಒಂದೇ ಮಗ್ಗುಲಲ್ಲಿರುವುದರಿಂದ ಕವಿಗೆ ಈ ಮಿತಿಗಳನ್ನು ಮೀರುವುದೇನು ಕಷ್ಟದ್ದಲ್ಲ. ನಾಡಿಗರು ಹೇಳುವುದನ್ನು ನೆನಪಿಸುವುದಾದ್ರೆ 'ಸಾವಯವ ಬಂಧವು ಅವರು ತಲುಪಬೇಕಾದ ಗಮ್ಯದೆಡೆಗೇ ದುಡಿಯಬೇಕು'. ಇಲ್ಲಿ ಬಳಸಿರುವ ಕೆಲ ಪರಭಾಷೆಯ ಪದಗಳು ಕವಿತೆ ಜೊತೆ ಬಾಗಿಕೊಂಡಿಲ್ಲ ಅನ್ನಿಸ್ತು.
ನಾನು ಕಟ್ಟಿಕೊಂಡ ಅರ್ಥಲೋಕದ ಟಿಪ್ಪಣೆಗಳಿವು. ನನ್ನ ಓದಿನ ಮಿತಿ ಈ ಕವಿತೆಗಳನ್ನು ಗ್ರಹಿಸಲು, ಆಳದಲ್ಲಿ ಸ್ಪರ್ಶಿಸಲು ಆಗದೆ ಹೋಗಿರಬಹುದು. ಹಾಗೆ ಕೆಲ ಕವಿತೆಗಳು ನನಗೆ ದಕ್ಕದೆಯೂ ಹೋಗಿರಬಹುದು. ಹೀಗೆ ಒಪ್ಪಿಕೊಂಡಿರುವುದು ನಾನು ಹೇಳಿದ ಅಭಿಪ್ರಾಯಗಳಿಂದ ನುಣಿಚಿಕೊಳ್ಳುವುದಕ್ಕಲ್ಲ ನಾನು ಹೇಳಿದ ಮಾತುಗಳಿಗೆ ಬದ್ಧವಾಗಿಯೂ ಈ ಮಾತು ಸೇರಿಸಿದ್ದೇನೆ. ಓ ಎಲ್ ನಾಗಭೂಷಣ ಸ್ವಾಮಿಯವರ ಈ ಮಾತುಗಳು ನಾನು ಹೇಳಬೇಕಿದ್ದಿದ್ದಕ್ಕಿಂತ ಸ್ಪಷ್ಟವಾದ ರೂಪದಲ್ಲಿವೆ ಕೇಳಿ."ಕವಿತೆಯನ್ನು ಕುರಿತು ಚರ್ಚಿಸುವುದೆಂದರೆ ನಾವು ಅನುಭವ ಪಡೆದ ರೀತಿಯನ್ನು ಚರ್ಚಿಸುವುದೇ. ಹಾಗೆ ಹೊಸ ನೋಟವನ್ನು, ಅರ್ಥದ ಹೊಸ ಸಾಧ್ಯತೆಗಳನ್ನು ಒಳಗೊಂಡಿರುವ, ತೋರುವ ಕವಿತೆಯೇ ನಿಜವಾದ ಕವಿತೆಯಾಗಿರುತ್ತದೆ. ಆದರೆ ಕೇವಲ ಅರ್ಥ ಪ್ರತಿಪಾದನೆಯ ಉದ್ದೇಶದಿಂದ ಬರೆದ ಕವಿತೆಗಳು ಸಾಮಾನ್ಯವಾಗಿ ಅಲ್ಪಾಯುಗಳಾಗಿರುತ್ತವೆ. ಬುದ್ಧಿ ವಿಲಾಸಕ್ಕೆ, ತರ್ಕಕ್ಕೆ ಅತಿಹೆಚ್ಚಿನ ಮನ್ನಣೆಯನ್ನು ನೀಡದೆ ಭಾಷೆಯ ಮೂಲಕ ಭಾವಸೂಚನೆಗಳನ್ನು ಒಳಗೊಂಡಿರುವ ಕವಿತೆ ಹೆಚ್ಚು ತಾಳುತ್ತದೆ. ಭಾವ ಪ್ರಾಮಾಣಿಕತೆ ಉತ್ತಮ ಕವಿತೆಯ ಮುಖ್ಯ ಲಕ್ಷಣ. ಆದರೆ ಅದೊಂದೇ ಉತ್ತಮ ಕವಿತೆಯ ಸೃಷ್ಟಿಗೆ ಕಾರಣವಾಗಲಾರದು. ಸೂಕ್ತ ಮತ್ತು ಸಮರ್ಥ ಭಾಷಿಕ ರೂಪ ಮತ್ತು ಲಯವೈವಿಧ್ಯತೆಯ ಸಾಧನೆ ಉತ್ತಮ ಕವಿತೆಯ ಇನ್ನೆರಡು ಲಕ್ಷಣಗಳು. ಕಲಾತ್ಮಕತೆಯ ಲಕ್ಷಣಗಳು ಕಾಲಕಾಲಕ್ಕೆ ಬದಲಾಗಬಹುದು....ಅರ್ಧ ಹೇಗೆ ನಮ್ಮ ಗ್ರಹಿಕೆಯ ಸಾಮರ್ಥ್ಯದ ಮಿತಿಗೆ ಅನುಗುಣವಾಗಿ ನಮಗೆ ದಕ್ಕುವುದೋ ಹಾಗೆಯೇ ಕವಿತೆಯೊಂದರ ಅರ್ಥವೂ ನಮ್ಮ ಗ್ರಹಿಕೆಯ ಮಿತಿಗೆ ಒಳಪಟ್ಟಿದೆ. ಆದ್ದರಿಂದಲೇ ಕವಿತೆಯೊಂದರ ಅರ್ಥವನ್ನು ವಿವರಿಸಿ ಮುಗಿಸಲು ಸಾಧ್ಯವಿಲ್ಲ. ಒಂದೊಂದು ಓದಿನ ಸಂದರ್ಭದಲ್ಲೂ ಕವಿತೆ ಮತ್ತೆ ಜೀವತಾಳುತ್ತದೆ. ಓದುವ ಕ್ರಿಯೆಯಲ್ಲಿ ಕವಿತೆ ಜೀವತಾಳುವುದರಿಂದಲೇ ಒಂದೊಂದು ಕವಿತೆಯೂ ಒಂದೊಂದು 'ಕೃತಿ' ಓದುಗರು ತಮ್ಮ 'ಇಷ್ಟ' ಮತ್ತು 'ಸಾಮರ್ಥ್ಯ'ಕ್ಕೆ ಅನುಸಾರವಾಗಿ ನಿರ್ಮಿಸಿಕೊಳ್ಳುವ 'ಕೃತಿ'. ಆದ್ದರಿಂದಲೇ ಕವಿತೆಯನ್ನು ಕುರಿತು ಮಾಡುವ ಯಾವುದೇ ವ್ಯಾಖ್ಯಾನವೂ ಕವಿತೆಯಿಂದ ಓದುಗರು ಪಡೆವ ಅನುಭವಕ್ಕೆ ಪರ್ಯಾಯವಾಗಲಾರದು. ವ್ಯಾಖ್ಯಾನವೂ ಇನ್ನೊಂದು ಕೃತಿ ಅಷ್ಟೆ." ಇಷ್ಟು ಸಾಕು ಮುಂದೆ ಈ ಕವಿತೆಗಳ ಕುರಿತು ಮಾತು ಬಂದಾಗ ಖಂಡಿತಾ ಮಾತನಾಡೋಣ. ಕವಿಯ ಸಾಲುಗಳಿಂದಲೇ ಮಾತು ಮುಗಿಸುವುದಾದರೆ.
ಸುಡುವ ಬೀದಿ ಬೀದಿಗಳಲ್ಲಿ
ಪಾದಗಳ ಊರಿ ನಡೆದುಹೋಗುತ್ತೇನೆ
ಊರಿದ
ಒಂದು ಪಾದದಡಿಯ
ನೆಲ ಯಾರದು?
ಗಾಳಿಯಲ್ಲಿರುವ
ಇನ್ನೊಂದು ಪಾದದ ಬಗ್ಗೆ
ನನಗೆ ಭಯವಿಲ್ಲ
ಅಲ್ಲಿ ಯಾರೂ
ಬೇಲಿ ಹಾಕುವುದನು ಕಲಿತಿಲ್ಲ (ಯಾರದಿದು? - 81)
*
ಎಚ್ ಎಸ್ ರಾಮನಗೌಡ,
ಕೊಂಡಿಕೊಪ್ಪ
ಕಾಜೂರು ಸತೀಶ್
ಗಾಯದ ಹೂಗಳು
ಫಲ್ಗುಣಿ ಪ್ರಕಾಶನ
₹- 75
2015
Friday, June 23, 2017
ಗಾಯದ ಹೂವುಗಳ ಕುರಿತು ಸಂಗೀತಾ ರವಿರಾಜ್
**ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲಬುಡದಲ್ಲಿ
ಏನು?
ಕೇಳಿಸುತ್ತಿಲ್ಲವೇ?
ದನಿ ಎತ್ತರಿಸಿ ಹೇಳುತ್ತಿದ್ದೇನೆ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ
*
ಪ್ರಭೂ
ನಾನು ಸಾಯುವಾಗಲೂ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರೂ ಬದುಕಿಸು
ನನ್ನ ಕಾಲಬುಡದಲ್ಲಿ
ಬದುಕನ್ನು ನೋಡುವ ಕ್ರಮವೇ ಇಲ್ಲಿನ ಕವನಗಳ ಧಾಟಿ. ಹಾಗಾಗಿ ಪ್ರಾಮಾಣಿಕ ವಿಷಯಗಳ ಅಭಿವ್ಯಕ್ತಿಯೇ ಇಲ್ಲಿರುವ ಕವಿತೆಗಳ ಜೀವಾಳ. ಬಡತನದ ಬವಣೆಯನ್ನು ಅಪ್ರಾಮಾಣಿಕತೆಯನ್ನು, ಹುಸಿ ಪ್ರೀತಿಯನ್ನು, ನಂಬಿಕೆದ್ರೋಹವನ್ನು, ಭ್ರಷ್ಟತೆಯನ್ನು ದಿಕ್ಕರಿಸುವ ಎದೆಗಾರಿಕೆ ಕವಿಯ ನಿರ್ದಿಷ್ಟ ಮನೋಬಲದ ಕುರುಹಾಗಿದೆ.
ಹಸಿದ ಹುಡುಗ
ಪರೀಕ್ಷೆಯಲ್ಲಿ
ಅರಮನೆಯ ವೈಭೋಗವನ್ನು
ವಿವರಿಸುತ್ತಿದ್ದಾನೆ.
ಅವನ ದು:ಖ
ನಡುನಡುವೆ ನುಸುಳಿ
ಉತ್ತರ ನಿರಾಭರಣವಾಗುತ್ತಿದೆ..
ಅನುಭವಗಳೊಂದಿಗೆ ಉತ್ತಮ ಮುಂದಾಲೋಚನೆಗಳು ಸಮೀಕರಿಸಿದರೆ ಹುಟ್ಟುವಂತಹ ಅನನ್ಯ ಚಿಂತನೆ ಇವರ ಬರಹದಲ್ಲಿದೆ. ಬದುಕಿನ ಏರಿಳಿತದ ಹಾದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಕವಿತೆಗಳನ್ನೆಲ್ಲಾ ಆಗಲೇ ಆಯ್ದಿರಿಸಿ, ಕಾಯ್ದಿರಿಸಿಕೊಂಡಿದ್ದಾರೆ.
ಜೀವ ಚಡಪಡಿಸುವ ಹೊತ್ತಲ್ಲಿ ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು
ಹೊರಬರುವ ಹೊತ್ತಲ್ಲಿ
ಜೇಬಿನ ತುತ್ತತುದಿಯ ದಾರಕ್ಕೆ ಪದ್ಯಗಳು ಜೋತುಬಿದ್ದಿದ್ದವು
ಅದರ ಬಲದಲ್ಲಿ ನಾನೀಗಲೂ ಬದುಕಿಕೊಂಡಿದ್ದೇನೆ
ಎಂಬುದಾಗಿ ಹೇಳುವ ಕವಿಯಲ್ಲಿ ಜೀವನದ ಬಗ್ಗೆ ಅದಮ್ಯ ಆಶಾವಾದವಿದೆ. ಇಂತಹ ಭರವಸೆಯ ಹಾದಿಯೇ ಇವರ ಜೀವನದ ಕವಿತಾ ಹಾದಿ.
ಕಾಲದ ಸರಹದ್ದು ಎಲ್ಲೆ ಮೀರಿ ಬೆಳೆದದ್ದನ್ನು ಕವಿ ಚಿತ್ರಿಸಿದ ಪರಿ ತುಂಬಾ ಪರಿಣಾಮಕಾರಿಯಾಗಿದೆ. ತಮ್ಮ ತಂದೆ ತಾಯಿ ಹಿರಿಯರ ಜೀವಿತವೆ ಕಣ್ಣ ಮುಂದಿನ ಸಾಲುಗಳಾಗಿ ಪಡಿಮೂಡಿವೆ. ಬವಣೆಗಳು ಬವಣೆಗಳಾಗಿ ಉಳಿಯದೆ ಶಿಲ್ಪಿಯ ಉಳಿಯ ಪೆಟ್ಟಿನ ತೆರೆದಿ ರೂಪುಗೊಂಡ ಜೀವದ ತುಡಿತವೆ ಧ್ವನಿಗಳಾಗಿ ವಿರಚಿತಗೊಂಡಿವೆ. ಒಂದು ಹೃದ್ಯವಾದ ರೂಪದಲ್ಲಿ ಕವಿತೆಯಾಗಿ ರೂಪ ತಳೆದಿದೆ.
ನಿದ್ರಿಸಿದರೂ ಹೊಗೆಯಾಡುತ್ತದೆ
ಗತದ ಹಾಳೆ ತಾಗಿದೊಡನೆ
ಒಂದೇ ಉಸಿರಿಗೆ ಓದಿ ಮುಗಿಸುತ್ತದೆ
ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ..
ಗಾಯದ ಹೂವುಗಳಲ್ಲಿ ಮುಖ್ಯವಾಗಿ ತೋರುವ ಗುಣ ಕಾಳಜಿ. ಕವಿಯಾದವನು ಸಮಾಜದ ಮುಖ್ಯವಾಹಿನಿಯಲ್ಲಿ ತ್ವರಿತವಾಗಿ ಮಾಡಬೇಕಾದ ಕೆಲಸವೆಂದರೆ ಇದು.
ಸಮಾಜದಲ್ಲಿ ಶೋಷಿತರ ಪರವಾದ ಸ್ವರವಾಗಬೇಕು. ಬಂಡಾಯ ಧೋರಣೆ ಸ್ವರೂಪದಲ್ಲಿರುವ ಇಲ್ಲಿರುವ ಕವಿತೆಗಳು ಕೂಲಿ ಸಿಗದ ಕಾರ್ಮಿಕರ ಬಗ್ಗೆ, ಸುಡುವ ಬೀದಿಯಲ್ಲಿ ನಡೆವ ಪಾದದ ಕುರಿತು, ಅರ್ಜಿ ನೀಡಿ ಅಲೆದಾಡುವ ಸಾಮಾನ್ಯ ಜನರ ಕುರಿತು, ಹಸಿದ ಹೊಟ್ಟೆಯ ಸಂಕಟದ ಬಗ್ಗೆ ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ನಾನು ಎಲ್ಲರಂತೆ ಸಾಮಾನ್ಯ ಮನುಷ್ಯ ಎಂಬುದಾಗಿ ಹೇಳುವ, ಎಲ್ಲರನ್ನು ನನ್ನ ಜನರೇ ಎಂಬುದಾಗಿ ಸಂಭೋದಿಸುವ ಇವರ ವಿನಯವಂತಿಕೆಯೇ ಕವಿತೆಯ ಜೀವದ್ರವ್ಯ. ಕ್ರಾಂತಿ, ಅಶಾಂತಿ, ಅಸಹಿಷ್ಣುತೆಗಳನ್ನು ಸಹಿಸದ ಧ್ಯೇಯ ಹೊಂದಿರುವ ಕವಿತೆಗಳು ನಮಗಿಲ್ಲಿ ಗೋಚರಿಸುತ್ತವೆ. ಇದರಿಂದಾಗಿ ಕವಿತೆಯ ಒಳಹೊರಗನ್ನು ಆಸ್ವಾದಿಸುವ ನಮ್ಮ ಸಂಯಮ ಇಮ್ಮಡಿಗೊಳ್ಳುತ್ತದೆ.
ಉಣಿಸುವವರ ವಿಷದ ಹಲ್ಲು ಕಿತ್ತರೆ
ಹಾಲೂ ಕುಡಿಯಬಲ್ಲದು
ಹಣ್ಣೂ ತಿನ್ನಬಲ್ಲದು
ಎಲ್ಲಾದರೂ ದೂರ ಸರಿ
ಮೈಯೆಲ್ಲಾ ಕಿವಿಯಾದ ಹಾವೇ
ಚಪ್ಪಲಿಗಳಿಗಾದರೋ ದನಿಯಿದೆ
ಬರಿಯ ಪಾದಗಳ ಚಲನೆಯ ಗ್ರಹಿಸು
ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರೂ ಎತ್ತು
ಕಳಚು ಸುತ್ತಲಿನ ಪೊರೆ
ಚರಿತ್ರೆಯ ಸಾಲ ತೀರಿಸಬೇಕು
ಆ ಕ್ಷಣದ ಸತ್ಯವನ್ನು ಕವಿತೆಯಲ್ಲಿ ಹಿಡಿದಿಟ್ಟರೂ ಅದು ಭವಿಷ್ಯದ ಅದ್ಭುತ ಸತ್ಯವಾಗಬಹುದು ಎಂಬುದನ್ನು ನಮ್ಮರಿವಿಗೆ ತಂದಿದೆ. ಇದರಿಂದ ಕವಿತೆಯ ಬಲ ಇನ್ನೂ ಹಿಗ್ಗಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇಲ್ಲಿರುವ ಕವಿತೆಗಳು ಎಂದೆಂದಿಗೂ ತನ್ನ ತಾಜಾತನವನ್ನು ಕಾಯ್ದಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಬೂಟಾಟಿಕೆಯ ಬದುಕನ್ನು, ಬಹುಪರಾಕ್ ಹೇಳುವ ಹೊಗಳುಭಟರ ತೆವಲನ್ನು, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರನ್ನು ನಕಾರಾತ್ಮಕವಾಗಿ ಗುರುತಿಸಿದ ಗುರುತರ ಹೊಣೆಗಾರಿಕೆಯನ್ನು ಇಲ್ಲಿನ ಕವಿತೆಗಳು ಹೊತ್ತಿವೆ. ಎಲ್ಲೋ ಒಂದು ಕಡೆ ಈ ಗುರುತಿಸುವಿಕೆ ಸರ್ವರಿಗೂ ಒಳಿತನ್ನು ಉಂಟುಮಾಡಬಲ್ಲುದು ಎಂಬ ಆಶಾವಾದವನ್ನು ಲೇಖಕರು ಹೊಂದಿದ್ದಾರೆ.
ಸಾವಿರಾರು ಬಿಳಿಕೂದಲುಗಳ ಒಡೆಯರೇ
ಒಳಗಿನ ಜೀವದ್ರವ್ಯ ಒಣಗಲು ಬಿಟ್ಟ
ನನ್ನ ಬರಿಮೈಯನ್ನೆ ನೋಡಿ
ಇನ್ಯಾವ ರೂಪಕಗಳು ಬೇಕು ನಿಮಗೆ?
ಹಠಾತ್ತನೆ ಕುಸಿದ ಭಾವವು ಅಲ್ಲೆಲ್ಲೋ ಕವಿತೆಗಳಲ್ಲಿ ಇಣುಕಿದಂತೆ ಭಾಸವಾದರೂ ಅದು ಭಾವಪರವಶತೆ ಎಂದೆನಿಸಿಬಿಡುತ್ತದೆ! ಒಂದು ವಿಷಯದ ಮೇಲೆ ಅತೀ ತೀವ್ರವಾಗಿ ಒಳಗೊಳ್ಳಲು ಎಲ್ಲರಿಂದ ಸಾಧ್ಯವಾಗದ ಮಾತು .ಇಲ್ಲಿ ಕವಿಗೆ ತನ್ನ ಒಡಲ ಅಳಲನ್ನು ತೋಡಿಕೊಳ್ಳಲು ಕವಿತೆಯಿದ್ದರೆ ಮಾತ್ರ ಸಾಕು ಅಥವಾ ಸಾಕೇ? ಎಂಬ ಭಯಮಿಶ್ರಿತ ಪ್ರಶ್ನೆ ಅರೆಕ್ಷಣ ಕಾಡಿಬಿಡುತ್ತದೆ. ಅದರಾಚೆಗೆ ತಲೆಯಾನಿಸಿ ಮಲಗಲು ಇನ್ನೇನರದ್ದೋ ಇರುವ ಕೊರತೆಯನ್ನು ಕವಿತೆಯೆ ಅವರಿಗೆ ತುಂಬಿ ಬಿಡುತ್ತದೆ. ಈ ಅಜ್ಞಾನಿಯ ದಿನಚರಿ**ಯಲ್ಲಿ ಜ್ಞಾನದ ಹೂವು ಅನವರತ ಅರಳುತ್ತಿದೆ. ಆ ಹೂವಿಗೆ ಗಾಯದ ಹಂಗಿಲ್ಲ. ಗಾಯ ಮಾಗುವುದೆಂತು ಎಂದು ಕಾಯುವ ಹಪಾಹಪಿಯೂ ಇಲ್ಲ. ಕವಿ ಕಾಜೂರು ಸತೀಶ್‍ರವರ ಕವಿ ಬದುಕು ಸುಂದರ ಹೂವಾಗಿ ಅರಳಿ ನಿಲ್ಲುವ ಎಲ್ಲಾ ನಿಖರತೆಯೂ ಸ್ಪಷ್ಟವಾಗಿ ಗೋಚರಿಸುತ್ತದೆ.
*
ಸಂಗೀತ ರವಿರಾಜ್
ವಿಳಾಸ :
ಸಂಗೀತ ರವಿರಾಜ್
ಬಾಲಂಬಿ ಅಂಚೆ
ಚೆಂಬು ಗ್ರಾಮ
ಮಡಿಕೇರಿ ತಾಲೂಕು
ಕೊಡಗು ಜಿಲ್ಲೆ -574234
ಚಲನವಾಣಿ : 7259135346
Saturday, June 3, 2017
ಗಾಯದ ಹೂವುಗಳು ಮತ್ತು ಕಡಲ ಕರೆ ಕುರಿತು ಡಾ. ಪಾರ್ವತಿ
ನೀವು ಪ್ರೀತಿಯಿಂದ ಕಳುಹಿಸಿ ಕೊಟ್ಟ ನಿಮ್ಮ ಕವಿತಾ ಸಂಕಲನ ಗಾಯದ ಹೂವುಗಳು ಓದಿದೆ. ಅಬ್ಬ! ಅದೆಷ್ಟು ಮನಕದಡುವಂತೆ ನಿಮ್ಮ ಅಂತರಂಗದ ತುಡಿತಗಳಿಗೆ ಅಭಿವ್ಯಕ್ತಿ ನೀಡಿದ್ದೀರಿ! ನೀವು ಅಲ್ಲಿ ಜೋಡಿಸಿಟ್ಟ ಪ್ರತಿಯೊಂದು ಗುಲಾಬಿಯನ್ನು ಪಡೆಯಬೇಕಿದ್ದರೂ ನಾವು ಮುಳ್ಳುಗಳಿಂದ ಚುಚ್ಚಿಸಿಕೊಳ್ಳಬೇಕೇನೋ ಅನ್ನುವ ಹಾಗೆ. ಓದುತ್ತಿದ್ದಂತೆ ನನಗೆ ಷೆಲ್ಲಿಯ ಮಾತುಗಳು ನಿಮ್ಮ ಕವಿತೆಗಳ ಸಂದರ್ಭದಲ್ಲಿ ತುಂಬ ಅರ್ಥಪೂರ್ಣ ಅನ್ನಿಸಿತು: ಅವರ್ ಸ್ವೀಟೆಸ್ಟ್ ಸಾಂಗ್ಸ್ ಆರ್ ದೋಸ್ ದ್ಯಾಟ್ ಟೆಲ್ ಅಸ್ ಆಫ್ ಸ್ಯಾಡೆಸ್ಟ್ ಥಾಟ್ಸ್ ಅಂತ. ಕೌಟುಂಬಿಕ ಬದುಕಿನಲ್ಲಿ ಎದುರಿಸಿದ ಕರುಳಿರಿಯುವ ಬಡತನದ ನೋವು, ಪರಿಸರ ನಾಶ ಮತ್ತು ಸುತ್ತಲಿನ ಭೂಮಿ ಬೋಳಾಗುತ್ತಿರುವ ಬಗೆಗಿನ ಕಾಳಜಿ, ನಿಸರ್ಗ ಪ್ರೇಮ, ಗಂಡು ಹೆಣ್ಣಿನ ನಡುವಣ ಅರ್ಥಪೂರ್ಣ ಸಂಬಂಧ, ಗ್ರಾಮೀಣ ಬದುಕಿನ ಸಹಜತೆಯ ವಿರುದ್ಧ ನಿಲ್ಲುವ ನಾಗರಿಕತೆಯ ಕೃತಕತೆ, ಏನುಂಟು-ಏನಿಲ್ಲ ನಿಮ್ಮ ಕವಿತೆಗಳಲ್ಲಿ! ನಿಜವಾಗಿಯೂ ಅವು ಕೆಂಡದಲ್ಲಿ ಸುಟ್ಟ ಹಸಿಮೀನುಗಳೇ ಹೌದು.
ಎಷ್ಟೋ ಕವಿತೆಗಳ ಸಾಲುಗಳು ಅರ್ಥವಾಗುವುದಿಲ್ಲ.ಅರ್ಥಗಳನ್ನು ಸಾಲುಗಳ ನಡುವೆ ಆಳದಲ್ಲೆಲ್ಲೋ ಹುಗಿದಿಟ್ಟಿದ್ದೀರಿ. ರೂಪಕಗಳು, ಪ್ರತಿಮೆ ಸಂಕೇತಗಳು ಎಲ್ಲದರಲ್ಲೂ ನಿಮ್ಮದೇ ವಿಶಿಷ್ಟ ಛಾಪು. ಪ್ರೇಮ ಕವಿತೆಗಳಲ್ಲಿ ಒಂದೆರಡು ಕಡೆ ಇಂಗ್ಲಿಷ್ ಕವಿ ಜಾನ್ ಡನ್ ಶೈಲಿಯನ್ನು ಕಂಡೆ. ಬಿಡಿ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿದರೂ ಒಟ್ಟು ಕವಿತೆಗಳ ಓದು ನೀಡುವ ಕಾವ್ಯಾನುಭೂತಿ ಮಾತ್ರ ಮೈ ಝುಮ್ಮೆನ್ನಿಸುವಂಥದ್ದು. ಯಾವುದೋ ಲೋಕಕ್ಕೆ ಕರೆದೊಯ್ಯುವಂಥದ್ದು. ದುಃಖವು ನಿಮ್ಮ ಕವಿತೆಗಳ ಸ್ಥಾಯೀಭಾವ ಅನ್ನಿಸುತ್ತದೆ. ಕೊಡಗಿನ ಮಂಜು ಮುಸುಕಿದ ಅಥವಾ ಮೋಡ ತುಂಬಿದ ವಾತಾವರಣದಲ್ಲಿ ಕೊಂಡು ಹೋಗಿ ಬಿಟ್ಟಂತೆ. ಈ ಅನುಭೂತಿಯನ್ನು ಓದುಗ ಅನುಭವಿಸಲು ಮಾತ್ರ ಸಾಧ್ಯ. ಅದು ವಿವರಣೆಗೆ ನಿಲುಕುವಂಥದ್ದಲ್ಲ. ಪ್ರಾಯಶಃ ಅದರ ಅಗತ್ಯವೂ ಇಲ್ಲ ಅಲ್ಲವೆ?
ನೀವು ಮಲೆಯಾಳದಿಂದ ಅನುವಾದಿಸಿದ ಕಡಲ ಕರೆ ಸಂಕಲನಕ್ಕೆ ನೀವು ಆಯ್ಕೆ ಮಾಡಿಕೊಂಡ ಕವನಗಳೂ ನಿಮ್ಮ ಅಭಿರುಚಿಯನ್ನ ಸಾರಿ ಹೇಳುತ್ತವೆ. ನಿಮ್ಮದೇ ಕವಿತೆಗಳಗಿಂತ ಅವು ಬಹಳ ಭಿನ್ನವಾಗೇನೂ ಇಲ್ಲ. ಓರ್ವ ಅನುವಾದಕರಾಗಿಯೂ ನೀವು ನಿಮ್ಮ ಸೃಜನಶೀಲತೆಯನ್ನು ಮೆರೆದಿದ್ದೀರಿ.ಅಲ್ಲದೆ ಅಷ್ಟೆಲ್ಲ ಮಂದಿ ಕವಿಗಳ ನೂರಾರು ಕವಿತೆಗಳನ್ನು ಓದಿ ಆಯ್ಕೆ ಮಾಡಿ ಅವರನ್ನೆಲ್ಲ ಸಂಪರ್ಕಿಸಿ ಅನುವಾದವನ್ನು ಪ್ರಕಟಿಸುವುದೆಂದರೆ ಹರಸಾಹಸವೇ ಸರಿ. ಡಾ ಅಶೋಕ ಕುಮಾರ್ ಹೇಳಿರುವಂತೆ ನಿಮ್ಮ ಮಾತುಗಳಲ್ಲಿ ನೀವು ಮಾಡಿರುವ ಉಪಕಾರ ಸ್ಮರಣೆ ನಿಮ್ಮ ಅಮಿತ ಸೌಜನ್ಯದ ಪ್ರತೀಕ. ನೀವು ಕವಿತೆಗಳಿಗೆ ಬಳಸುವ ಪದಗಳ ಲಾಲಿತ್ಯ, ನಿಮ್ಮ ಶೈಲಿಯ ಸೌಂದರ್ಯ, ನಿಮ್ಮ ಧ್ವನಿಯ ಗಾಂಭೀರ್ಯ, ಕವಿತೆಗಳಲ್ಲಿ ಕಾಣಿಸುವ ನಿಮ್ಮೊಳಗಿನ ಸೂಕ್ಷ್ಮ ಸಂವೇದನೆಗಳು- ಎಲ್ಲವೂ ಮುಂದೆ ನೀವೊಬ್ಬ ಅತ್ಯುತ್ತಮ ಕವಿಯಾಗಿ ಎತ್ತರಕ್ಕೆ ಏರುತ್ತೀರಿ ಎಂಬುದನ್ನು ಸೂಚಿಸುತ್ತವೆ. ಸತೀಶ್, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
*
02.06.2017 ಡಾ. ಪಾರ್ವತಿ ಜಿ. ಐತಾಳ್, ಕುಂದಾಪುರ
Saturday, May 27, 2017
'ಗಾಯದ ಹೂವುಗಳು' ಕುರಿತು ಸ್ವಾಮಿ ಪೊನ್ನಾಚಿ
ನನ್ನ ಕಾಲ ಬುಡದಲ್ಲಿ...
ಪ್ರಭೂ,
ನಾನು ಸಾಯುವಾಗಲೂ ಕೂಡ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರೂ ಬದುಕಿಸು
ನನ್ನ ಕಾಲ ಬುಡದಲ್ಲಿ
ಎಂಥಾ ಸಾಮ್ಯತೆ..ಪಕ್ಕದಲ್ಲಿ ಕೂತಿರುವ ಮಂದಿ ನರಳುತ್ತಿದ್ದರೂ ಗಮನಿಸಲಾಗದಷ್ಟು ಗಡಿಬಿಡಿತದಲ್ಲಿರುವ ಈ ಸಂತೆಯಲಿ ಒಂದು ಜೀವವನ್ನಾದರೂ ನನಗಾಗಿ ಕೊಡು ಎಂದು ಕೇಳುವ ಕವಿ ಈ ಜಗತ್ತಿನ ಹೃದಯ ಹೀನತೆಯನ್ನು ಹೀಗೂ ಬೆತ್ತಲು ಮಾಡುತ್ತಾರೆ .
ಖಾಲಿ ಎಂದೊಡನೆ
ಅವಮಾನಿತನಿಗೆ ಬಾಂಬಿಡುವ ಕನಸು
ಬೀದಿನಾಯಿಗೆ ಕಾಲೆತ್ತುವ ಕನಸು
ಹೌದು.. ಇಲ್ಲಿ "ಖಾಲಿ "ಎಂದರೆ ಬರೀ ಖಾಲಿಯಷ್ಟೇ ಅಲ್ಲ.!ಕಳೆದುಕೊಂಡಿದ್ದನ್ನು ತಿರುಗಿ ಪಡೆಯುವ ;ಮತ್ತೆ ಮತ್ತೆ ಹುಡುಕುವ ;ತನ್ನ ಎದೆಯಲ್ಲಡಗಿರುವ ಕರಾಳ ಮುಖವನ್ನು ಅಥವಾ ನಿಜಮುಖವನ್ನು ಬರಿಗನ್ನಡಿಯಲ್ಲಿ ನೋಡಿಕೊಳ್ಳುವ ಮತ್ತು ಖಾಲಿ ಎಂದಾಕ್ಷಣ ಮನುಷ್ಯ ಮನುಷ್ಯನಾಗಿ ಇರುವ ದಮ್ಯ ಸುಖ....ಖಾಲಿ ಇರುವ ಒಂಟಿ ಹೆಣ್ಣನ್ನೂ ಬುಟ್ಟಿಗೆ ಹಾಕಿಕೊಳ್ಳುವ ತವಕದಲ್ಲಿರುವ ನಮಗೆ..
ಒಳಗೆ ಸೇರಿಕೊಂಡ ಇರುವೆ/
ಜಿರಳೆ, ಹಲ್ಲಿಯ ಸುದ್ದಿ /ಊರು ಸುತ್ತುವ ಗಾಳಿಗೂ ತಿಳಿಯದಂತೆ
"ಖಾಲಿ"ತನದೊಳಗಡಗಿರುವ ದುಃಖ ದುಮ್ಮಾನ ನೋವು ನಲಿವುಗಳು ನಮಗೆ ತಿಳಿಯುವುದಿಲ್ಲ. ಖಾಲಿ ಎಂದರೆ ಖಾಲಿಯಷ್ಟೇ ಅಲ್ಲ. ಅದರೊಳಗೆ ಅನಂತ ಸತ್ಯವಿದೆ ...
'ಚಪ್ಪಲಿಗಳು' ಕವಿತೆಯಲ್ಲಿ ಜಾತಿ, ಧರ್ಮ,ಕೊಲೆ, ಮೋಸ ,ವಂಚನೆ,ಮೌಢ್ಯತೆ, ಕೆಲಸಕ್ಕೆ ಬರದ ಒಣ ಸಿದ್ಧಾಂತ ಚಪ್ಪಲಿ ಸವೆದು ಬಾಳುದ್ದಕ್ಕೂ ಕೂಡ ಹೋಲಿಸಲಾಗದ ಅಸಹಾಯಕತೆಯಲ್ಲಿ ಕೊನೆಗೆ
ನಮ್ಮ ತಿನ್ನುವ ಹಸಿದ ನರಪೇತಲ ನಾಯಿಗಳೇ ನಿಮಗೆ ಶರಣು
ಎನ್ನುವ ಮೂಲಕ ಚಪ್ಪಲಿಯ ಧನ್ಯತೆ ಕುರಿತು ಹೇಳುತ್ತಾರೆ.
ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರೂ ಎತ್ತು
ಕಳಚು ಸುತ್ತಲಿನ ಪೊರೆ
ಕಡಲಿನ ಆಚೆಬದಿಯಲ್ಲಿ
ನಿನ್ನದೊಂದು ತೊಟ್ಟು ರಕ್ತ
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ
ಚೆಲ್ಲಿಬಿಡೋಣ
ಸುತ್ತಲಿನ ಶಾರ್ಕುಗಳು
ಏನು ಮಾಡುತ್ತವೆಂದು ಕಾದು ಕೂರೋಣ
ನನ್ನ ಹೊರಮೈಯ ಮಾಂಸವನ್ನು
ಹಿಂಡಿ ಒಣಗಿಸಿಡುತ್ತೇನೆ
ಕಾಮವಿಲ್ಲದ ಅದನ್ನ ನೀನು ಪ್ರೀತಿಯಿಂದ ಅಪ್ಪಿಕೊಳ್ಳಬಹುದು
ಈ ಸಾಲುಗಳಿಗೆ ಯಾವ ಮಾತುಗಳೂ ಬೇಡವೆನಿಸಿ ಸುಮ್ಮನೆ ಓದಬೇಕೆನಿಸುತ್ತದೆ.
ಆಸ್ಪತ್ರೆಯ ತುಂಬ ತುಂಬಿ ಹೋಗಿರುವ
ಪ್ಯಾರಾಸೆಟಮೆಲ್ ಗಳು
ಜ್ವರದಿಂದ ಬಳಲುತ್ತಿವೆ ಹೊಟ್ಟೆಗಳಲ್ಲಿ
ನಿಜ...ಸದಾ ಒಂದಿಲ್ಲೊಂದು ಪ್ಯಾರಸಿಟಮೋಲ್ ಗಳನ್ನು ಮನಸಿಗೆ ಹೊಟ್ಟೆಗೆ ಹಾಕಿಕೊಳ್ಳುವ ನಾವು ಯಾವಾಗಲೂ ರೋಗಗ್ರಸ್ಥರೆ....ಅತ್ತ ಜೀರ್ಣವಾಗದೇ ಇತ್ತ ನೋವು ವಾಸಿ ಮಾಡದೆ ಸದಾ "ಮದ್ದೀಡಿ"ನಂತೆ ಹೊಟ್ಟೆಯೊಳಗೆ ಇದ್ದು ನರಳಿಸಿ ಹಿಂಡಿ ಹಿಪ್ಪೆ ಮಾಡಿ ನಮ್ಮತನವನ್ನ ಸಾಯಿಸಿ ಬರೀ ದೇಹವನ್ನಷ್ಟೇ ಉಳಿಸುತ್ತದೆ.(ನೆನಪಿರಲಿ ಖಾಯಿಲೆ ಎಂಬುದು ಬರೀ ದೇಹಕ್ಕಷ್ಟೇ ಅಲ್ಲ) ಈ ಜಗತ್ತನ್ನು ಒಂದು ಆಸ್ಪತ್ರೆ ಅಂದುಕೊಂಡರೆ ಸಾಕು ನಮ್ಮ ಖಾಯಿಲೆ ಏನೆಂಬುದು ನಮಗೆ ಥಟ್ಟನೆ ಅರ್ಥವಾಗಿಬಿಡುತ್ತದೆ.ಅಷ್ಟರ ಮಟ್ಟಿಗೆ ಕಾಜೂರರು ಕವಿತೆಯ ಸೂಜಿ ಚುಚ್ಚಿಬಿಟ್ಟಿದ್ದಾರೆ ಎದೆಯಲ್ಲಿ.........!ಹೀಗೆ ಬುಟ್ಟಿತುಂಬ ಘಮಘಮಿಸುವ ಹೂಗಳನ್ನು ತುಂಬಿಕೊಂಡು ಹೊರಡುವ ಕವಿಯ ಕೈಯಲ್ಲಿರುವ ಹೂಗಳನ್ನೇ ನೋಡುವ ನಮಗೆ ಹೂವಿಗಾದ ಗಾಯವನ್ನು ನೋಡುವ ಒಳಗಣ್ಣಿದ್ದರೆ ಕಾಜೂರರ ಕವಿತೆ ನಿಜಕ್ಕೂ ಕಾಡಿಸುತ್ತದೆ...
*
ಸ್ವಾಮಿ ಪೊನ್ನಾಚಿ
Friday, October 14, 2016
ಸೈಫ್ ಜಾನ್ಸೆ ಕೊಟ್ಟೂರರು ಕಂಡ 'ಗಾಯದ ಹೂವುಗಳು'
ಕವಿತೆಯೆಂದರೇನೆಂದೇ ತಿಳಿಯದ, ನನ್ನನ್ನೇ ಉಸಿರಾಡುತ್ತಿರುವ ಅಪ್ಪ-ಅಮ್ಮನಿಗೆ ಎಂದಾರಂಭಿಸುವ ಕವಿ ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ ಕವಿತೆಯ ತೆಕ್ಕೆಯೊಳಗೆ ಬಿದ್ದೆ.
ಖಿನ್ನತೆಯ ಶಿಖರದಲ್ಲಿದ್ದಾಗಲೂ ಒಂದು ಹೂವನ್ನೇ ಧ್ಯಾನಿಸುತ್ತಾ ಕೂರುವವನು ನಾನು. ಇಷ್ಟಾದರೂ ಬದುಕಿಕೊಳ್ಳಲು ಹಡೆದ ಕವಿತೆಗಳು ಎದೆಯ ಟನ್ನುಗಟ್ಟಲೆಯ ಭಾರವನ್ನು ಕೊಂಚ ಇಳಿಸಿವೆ ಎನ್ನುವಂತಹ ಆಳದ ಮಾತುಗಳಿಂದ ತನ್ನ ಕವಿತೆಯ ಆಶಯಗಳನ್ನು ಕಟ್ಟಿಕೊಡುತ್ತಾರೆ.
ಸುಡುವ ತಣ್ಣನೆಯ ಹೂ ಹುಡುಕುತ್ತಾ ಎಂಬ ಶೀರ್ಷಿಕೆಯ ಅಡಿಯ ಮುನ್ನುಡಿಯಲ್ಲಿ ವಾಸುದೇವ್ ನಾಡಿಗ್ ಅವರು ಇಡೀ ಕವಿತಾ ಸಂಕಲನದ ಹಂದರವನ್ನು ಚಿಕಿತ್ಸಕ ಕಾಳಜಿಯಿಂದ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲಿ ಉದಾಹರಣೆಗಳಿಗಿಂತಲೂ ಹೆಚ್ಚು ಸ್ವಯಂ ಓದಿ ಅನುಭವಿಸುವ ತಾಜಾತನ ಆಪ್ತವಾಗಬಲ್ಲದು. ಪ್ರವೀಣ್ ಕುಮಾರ ದೈವಜ್ಞಾಚಾರ್ಯರವರು ಟಂಕಿಸಿರುವ ಬೆನ್ನುಡಿ ಬರಹದ ದಿಟ್ಟತೆ ಸಾರುವಂತೆ ಇವು ಯಾರು ಬೇಕಾದರೂ ಮುಡಿಯಬಹುದಾದ ಹೂಗಳು. ಸತೀಶ್ ಬದುಕು ಮತ್ತು ಕವಿತೆಯನ್ನು ಒಟ್ಟೊಟಿಗೆ ಸಮೀಕರಿಸುವ ಭರವಸೆಯ ಕವಿ. ಅವರ ಗಾಯದ ಹೂಗಳು ನಮ್ಮೊಲ್ಲೊಂದು ಆತ್ಮದೀಪ ಸ್ಫುರಿಸಬಲ್ಲದೆಂಬ ಭಾವ ಈ ಹೊತ್ತು ದಟ್ಟವಾಗಿದೆ ಎನ್ನುವ ಸಾಲುಗಳು ಸಂಕಲನದ ಪ್ರಾಣಕ್ಕೆ ದೀವಟಿಗೆ ಹಿಡಿಯಬಲ್ಲ ಕೈಯಾಸರೆಯಂತೆ ಕಾಣುತ್ತಿವೆ.
ಚುಟುಕೂ ಅಲ್ಲದೆ ನೀಳ್ಗವಿತೆಯೂ ಅಲ್ಲದ ನಡುಗಾತ್ರದ ಪರಿಮಿತಿಯಲ್ಲಿ ತನ್ನ ಪದ್ಯಗಳನ್ನು ಅಚ್ಚುಕಟ್ಟುತನದಿಂದ ನಿರ್ವಹಿಸುತ್ತಿರುವ ಕವಿ ಪದ್ಯ ಓದುವ ಕಾಲದ ದರ್ದುಗಳನ್ನು ಪ್ರಜ್ಞಾಪೂರಕವಾಗಿ ಮುಖಾಮುಖಿಯಾದಂತಿದೆ.
ಕವಿ, ಕವಿತೆ ಮತ್ತು ಚರಿತ್ರೆ ಎನ್ನುವ ಪದಗಳನ್ನು ಬಹುತೇಕ ಕವಿತೆಗಳಲ್ಲಿ ಮರು ಮಾತಿಗೆ ಕರೆಯುತ್ತಾರೆ. ಆ ಮಾತುಕತೆಯಲ್ಲೊಂದು ಸನಿಹವಿದೆ, ಗುದ್ದಾಟವಿದೆ, ಅನುಭವವಿದೆ, ಅನುಸಂಧಾನವಿದೆ. ಕವಿತೆ ಬರೀ ಕವಿತೆಗಾಗಿ ಅನ್ನಿಸದೇ ಬದುಕಿನ ಒಟ್ಟು ಅಭಿವ್ಯಕ್ತಿ ಎನಿಸಿದೆ.
ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ ಎನ್ನುವ ಸಾಲು ಸಾಕು ಉಳಿದದ್ದು ನೆಪವಾಗಿಬಿಡಬಹುದು.ಇನ್ನು ಕವಿಗೆ ಚರಿತ್ರೆಯೆಂದರೆ ಓದಿಕೊಳ್ಳುವ ಒಣ ಪ್ರಕ್ರಿಯೆಯೆನಿಸದೆ ಜೀವನದ ಪರಸ್ಪರ ಎದುರುಗೊಳ್ಳುವ ಸಂವಾದವಾಗಿಯೂ ಆಗಿಂದಾಗ್ಗೆ ನವೀಕರಿಸುವ ಇಂಧನದ ಒರತೆಯಂತೆಯೂ ಕಾಣಿಸಿದೆ. ಮುರಿದು ಕಟ್ಟುಕಟ್ಟುವ ಚಲನಶೀಲ ಕಾರ್ಯಗತಿಯೂ ಅನ್ನಿಸಿದೆ. ಆ ಕಾರಣಕ್ಕಾಗಿಯೇ ಇತಿಹಾಸದ ಕೊಂಡಿ ಕವಿತೆಗಳಲ್ಲಿ ಪ್ರತಿಧ್ವನಿಸಿದೆ.

ತನ್ನ ಸುತ್ತಲಿನ ತೆಕ್ಕೆಯಲ್ಲಿ ಹಾಯುವ ಕಾಡು ಬೀಜ ಮರ ಹೂವು ಹಣ್ಣು ಜಿಂಕೆ ಮೊಲ ಹಾವು ಹಕ್ಕಿ ಗೊಬ್ಬರಗಳಂಥಹ ನಿಸರ್ಗವಾದಿ ಪರಿಕರಗಳೇ ಕವಿತೆಯ ಮೂಲ ದ್ರವ್ಯವಾಗಿದ್ದಾಗಲೂ ಕವಿಯ ಧ್ಯಾನಕ್ರೇಂದ ಗಟ್ಟಿಯಾಗಿ ಮಾತನಾಡುತ್ತಿರುವುದು ಕಡೆಗಣಿಸಲ್ಪಟ್ಟ ಧ್ವನಿ ಮತ್ತು ಜಾಗತೀಕರಣದ ಸಿಡಿಲ ಸ್ಫೋಟಕ್ಕೆ ಕರಕಲಾದ ಮಿಣುಕು ನಕ್ಷತ್ರಗಳ ಬದುಕಿನ ಹಕ್ಕಿನ ಪ್ರಶ್ನೆಯನ್ನು ಕವಿಯ ತಾಕಲಾಟಗಳು ತಾರ್ಕಿಕ ಅಂತ್ಯಕ್ಕೆ ದಾಟಿಸುವ ಪ್ರಯತ್ನದಂತೆ ಕಾಣಿಸುತ್ತವೆ.
ಇಲ್ಲಿನ ಕವಿತೆಗಳಲ್ಲಿ ನಳನಳಿಸುವ ಜೀವಂತಿಕೆ ಇದೆ. ಶಬ್ದಗಳಿಗೆ ಸಂವೇದನೆಯಿದೆ. ಕಟ್ಟ ಕಡೆಯ ಕ್ಷಣಗಳಲ್ಲಿಯೂ ಬದುಕಿತೋರಿಸುವ ತ್ರಿವಿಕ್ರಮ ಛಲವಿದೆ. ಜಗತ್ತಿನ ಸಮಸ್ತವನ್ನು ಅಪ್ಪಿಕೊಳ್ಳುವ ಜೀವಪರತೆ ಇದೆ. ತುಳಿಯಲ್ಪಟ್ಟ ದನಿಗಳಿಗೆ ಪ್ರಾಣಮಿತ್ರನಂತೆ ಮಿಡಿಯುವ ಕವಿ ಗಹನವಾದ ನೋವನ್ನೂ ಕುಲುಮೆಯಲ್ಲಿ ಕಾಯಿಸಿ ಬಡಿದು ತಿದ್ದಿ ತೀಡಿ ದಾಟಿಸುವ ನುರಿತ ಲೋಹಗಾರನಂತೆ. ಇಲ್ಲಿ ಉರಿಗಟ್ಟುವ ಪ್ರತಿ ನೋವು ಹೆಪ್ಪುಗಟ್ಟಿದ ತಣ್ಣನೆಯ ರೂಪಾಂತರಗಳಲ್ಲಿ ಲೋಕದ ದೇಹ ಮತ್ತು ಮೆದುಳುಗಳೊಳಗೆ ದಾಟಿ ಆವರಿಸುವ ಕ್ರಮ ಕವಿಯ ಗಟ್ಟಿತನಕ್ಕೆ ಪುರಾವೆ ಒದಗಿಸುತ್ತಿವೆ.
ಕವಿ ತನ್ನ ಸುತ್ತಲೂ ತಾನೇ ಗರೆ ಎಳೆದುಕೊಂಡ ಗಮ್ಯಕೇಂದ್ರವನ್ನು ಒಡೆದು ಹೊರಬರಬೇಕಿದೆ. ತಪ್ಪಿಹೋದ ಅನುಭವದ ಕಡೆಗೂ ನೋಟ ಹಾಯಿಸಬೇಕಿದೆ. ಕಳಚಿಕೊಂಡ ನೆಲೆಗಳನ್ನು ಮರು ವಿಮರ್ಶಿಸಬೇಕಿದೆ;ಕಟ್ಟಿ ಬದುಕಿಸಬೇಕಿದೆ. ನೆಲಕ್ಕೆ ಪಿಡುಗಿನಂತೆ ಕಾಡುತ್ತಿರುವ ಕೋಮುವಾದ, ಲಂಪಟ, ದುರಾಸೆಯಿಂದ ಹುಟ್ಟುವ ವ್ಯಕ್ತಿಕೇಂದ್ರಿತ ಬದುಕಿನ ಅಧ್ವಾನಗಳು,ಮಹಿಳಾ ಅಸಮಾನತೆ, ನಗರಗಳು ಹಡೆದ ಅನಾಮಿಕ ಸರಪಳಿಗಳ ಕಡೆಗೊ ಕಾಜೂರರ ಕಾವ್ಯ ಹೊರಳುವ ಕಾಲವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ.
ಬದುಕಿನ ರಾಚುವ ರೌದ್ರವ ದಾರುಣತೆಯನ್ನು ಹೇಳುವ ಮಾರ್ಗಕ್ಕೂ ಸತೀಶ್ ರವರ ಕಾವ್ಯ ಝರಿಗೆ ಜಾಗವಿರಲಿ.
ವಿಮರ್ಶಕರ ಕಸರತ್ತಿನಾಚೆಗೂ
ಬೆನ್ನುಡಿಯ ಬೆಂಬಲದಾಚೆಗೂ
ಪರಿಚಯಕರ ಸಂಕಟಗಳಾಚೆಗೂ
ಓದುಗರ ಹಪಾಹಪಿಗಳಾಚೆಗೂ
ಈ ಕೃತಿ ಓದಿನ ಖುಷಿ ಅನುಭವಿಸಲು ರವಷ್ಟನ್ನು ಖಂಡಿತಾ ಉಳಿಸಿಕೊಟ್ಟಿದೆ. ಅದಕ್ಕಾಗಿ ಕಾಜೂರು ಸತೀಶ್ ಅಭಿನಂದನಾರ್ಹರು.
*

ಸೈಫ್ ಜಾನ್ಸೆ, ಕೊಟ್ಟೂರು
Sunday, July 24, 2016
ಮಾತು, ಮೌನ ಮತ್ತು ಕವಿತೆ
ಕಾಜೂರು ಸತೀಶ ಅವರು ಈಚೆಗೆ ತಮ್ಮ ಮೊದಲ ಕವನ ಸಂಕಲನ ‘ಗಾಯದ ಹೂವುಗಳು’ ಎಂಬುದನ್ನು ಪ್ರಕಟಿಸಿದ್ದಾರೆ. ಎಲ್ಲ ಕವಿತೆಗಳನ್ನು ಓದುವಾಗ ಕವಿತೆಯ ಮೇಲೆ ಅವರಿಗಿರುವ ಬದ್ಧತೆಯನ್ನು ತೋರಿಸುತ್ತದೆ. ಇಲ್ಲಿನ ಬಹುತೇಕ ಪದ್ಯಗಳು ಕವಿತೆಯ ಅಂತರಂಗದ ಜತೆಗೆ ನಡೆಸುವ ಸಂವಾದವೇ ಆಗಿದೆ. ಮಾಮೂಲಿಯಂತೆ ಸತೀಶ್ ಅವರು ಪ್ರೇಮದ ಬೆನ್ನಿಗೆ ಬಿದ್ದು ಪದಗಳನ್ನು ವ್ಯರ್ಥಮಾಡಿಲ್ಲ. ಇರುವ ಪ್ರೇಮವಾದರೂ ಪದ್ಯವನ್ನು ಕಟ್ಟುವ ಇರಾದೆಯಲ್ಲಿ; ತನಗೆ ಕಂಡ ಸಮಾಜವನ್ನು ಅನಾವರಣಗೊಳಿಸುವಲ್ಲಿ ಇದೆ ಅನಿಸುತ್ತದೆ.ಮೊದಲ ಸಂಕಲನದಲ್ಲಿ ಅವರು ದೊಡ್ಡ ಬಗೆಯ ತಾತ್ವಿಕ ಸಿದ್ದಾಂತಗಳ ಕಡೆ ತಮ್ಮನ್ನು ಒಪ್ಪಿಸಿಕೊಳ್ಳುವುದಿಲ್ಲ. ಬದಲಿಗೆ ‘ಅನುಭವ ಹೆಪ್ಪುಗಟ್ಟುವ ತನಕ ಕವಿತೆಗೆ ಕೈಹಾಕಬೇಡ’ ಎಂಬ ಕೆ.ಎಸ್.ನ ಅವರ ನುಡಿಗಳನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಇದರ ಪ್ರಾಮಾಣಿಕತೆಯ ಹಿಂದೆ ಕಾವ್ಯಮೀಮಾಂಸೆಯ ಹುಡುಕಾಟವೂ ಇದೆ.
ಕಾಜೂರು ಅವರು ಅಭಿವ್ಯಕ್ತಿಸುವ ಗಾಯದ ಹೂವುಗಳು ಯಾವ ಬಗೆಯವು? ಗಾಯಗೊಂಡಿರುವುದು ಹೂವುಗಳೊ ಅಥವಾ ರೂಪಕಗಳೊ?. ಸತೀಶ್ ಗೆ ರೂಪಕಗಳನ್ನು ನಿರ್ಮಿಸಿ ಪದ್ಯ ಕಟ್ಟುವುದುಕ್ಕಿಂತ ಕವಿತೆಯಲ್ಲಿ ಚಿತ್ರಗಳನ್ನು ತರುವುದರಲ್ಲಿ ಹೆಚ್ಚು ಆಸಕ್ತಿ ಇದೆ ಎಂದು ಕಾಣುತ್ತದೆ. ಈ ಬಗೆಯ ಚಿತ್ರಗಳು ಹೆಚ್ಚು ‘ಹೇಳುವ’ ಧಾಟಿಯಲ್ಲಿ ಕಾಣುತ್ತವೆ. ಆದರೆ ಅವುಗಳಿಗೆ ಗಂಭೀರವಾದ ಪದಗಳನ್ನು ತುಂಬುವ ಶಕ್ತಿ ಸತೀಶ್ ಅವರಿಗೆ ಖಂಡಿತ ಇದೆ.
ಕುವೆಂಪು ಅವರು ಗೊಬ್ಬರವನ್ನು ವಸ್ತುವನ್ನಾಗಿ ಮಾಡಿಕೊಂಡು ಪದ್ಯಬರೆದದ್ದು ತಿಳಿದೇ ಇದೆ. ಸತೀಶ್ ಮಲವನ್ನು ಕೆಲವುಪದ್ಯಗಳಲ್ಲಿ ಬಳಸುತ್ತಾರೆ. ಇದು ಖಂಡಿತ ಪದ್ಯಕ್ಕಿರುವ ಮಡಿವಂತಿಕೆಯನ್ನು ಬಿಡಿಸುವುದೇ ಆಗಿದೆ. ಒಂದು ಕಡೆ ಅವರು ‘ಮಲದ ಮೇಲೆದ್ದಿದೆ ಹಲಸಿನ ಸಸಿ’ಎಂದು ಬರೆಯುತ್ತಾರೆ. ಪಂಚಭೂತಗಳಿಗೆ ಮೈಲಿಗೆ ಅಂಟಿಸಿರುವ ಮನುಷ್ಯ ತಾನೋಬ್ಬ ಕೊಳಕು ಎಂದು ಮರೆತಿದ್ದಾನೆ. ಆದರೆ ನಿಸರ್ಗಕ್ಕೆ ಆ ಬಗೆಯ ಮೈಲಿಗೆಗಳು ಇಲ್ಲ.ಮನುಷ್ಯನ ಕೊಳಕನ್ನು ಹೀರಿಕೊಂಡೇ ಹಲಸಿನ ಹಣ್ಣನ್ನು ನೀಡಬಲ್ಲದು. ಹಸಿದ ಲೋಕವನ್ನು ಇಲ್ಲಿನ ಅನೇಕ ಸಾಲುಗಳು ಮಾತನಾಡಿವೆ. ಅವು ಬೇಗ ಸಿಟ್ಟನ್ನು ತೀರಿಸಿಕೊಳ್ಳವ ಮಾತುಗಳಲ್ಲ. ಕವಿತೆಯ ಅಂತರಂಗ, ಪರಂಪರೆಯ ಅಂತರಂಗ ಹಾಗೂ ಬದುಕಿನ ಮುಖಾಮುಖಿ ಇವುಗಳ ಮೂಲಕವೇ ಬರುತ್ತವೆ.
‘ಒಲೆ ಮತ್ತು ಅವ್ವ’ ಇದರ ಒಳ್ಳಯ ಪದ್ಯಗಳಲ್ಲಿ ಒಂದು. ಪದ್ಯ ಅನುಭವವನ್ನು ಹೆಪ್ಪುಗಟ್ಟಿಸಿಕೊಂಡು ಅಚ್ಚುಕಟ್ಟಾಗಿ ನಿಂತಿದೆ. ಇಲ್ಲಿ ಒಲೆ ಮತ್ತು ಅವ್ವ ಅದ್ವೈತ.ಬದುಕು ಮತ್ತು ಪದಗಳು ಇಲ್ಲಿ ಏಕವಾಗಿವೆ. ‘ಹಾವು’ಎಂಬ ಕವಿತೆ ಮನುಷ್ಯನ ವೈರುದ್ಯಗಳನ್ನು ಅನಾವರಣ ಮಾಡುತ್ತದೆ. ಧ್ವನಿಯನ್ನು ಚನ್ನಾಗಿ ಬಳಸಿಕೊಂಡಿದ್ದಾರೆ. ಇಲ್ಲಿನ ಹಾವು ಪಾರಂಪರಿಕ ಸಂಕೇತವಲ್ಲ. ಮುಗ್ಧತೆ ಮತ್ತು ಕ್ರೌರ್ಯಗಳ ಮುಖಾಮುಖಿ ಇದೆ. ‘ಉಣಿಸುವವರ ವಿಷದ ಹಲ್ಲು ಕಿತ್ತರೆ/ ಹಾಲೂ ಕುಡಿಯಬಲ್ಲದು / ಹಣ್ಣು ತಿನ್ನಬಲ್ಲದು.ಎಂಬ ಮಾತುಗಳು ಇವನ್ನೇ ಹೇಳುತ್ತವಲ್ಲವೇ?.ಕಾಜೂರು ಕವಿತೆಯನ್ನು ಬರೆಯುವಾಗ ಪರಂಪರೆಯ ಹೆಸರುಗಳನ್ನು ಪ್ರಸ್ತಾಪ ಮಾಡದೇ ಅದರೊಂದಿಗೆ ಸಂವಾದ ನಡೆಸುತ್ತಾರೆ. ಹಿಂದಿನದನ್ನು ಅರಿಗಿಸಿಕೊಳ್ಳದೇ, ಇಂದಿನ ಜಗತ್ತನ್ನು ನೋಡಲಾರೆವು ಎಂಬ ಅರಿವು ಅವರ ಅನೇಕ ಕವಿತೆಗಳಲ್ಲಿ ವ್ಯಕ್ತಗೊಂಡಿದೆ.
‘ಅಸ್ವಸ್ಥ ಕವಿತೆಗಳು’ ಎಂಬ ಪದ್ಯದಲ್ಲಿ ‘ಇದುವರೆಗೆ ಬರೆಸಿಕೊಂಡ ನನ್ನ ಕವಿತೆಗಳೆಲ್ಲವೂ/ ವೈದ್ಯನಿಗೆ ಕೊಡಲು ಕಾಸಿಲ್ಲದೆ/ ನರಳುತ್ತಲೇ ಇವೆ ಹಸಿನೆಲದ ಮೇಲೆ’. ಎಂದು ಬರೆಯುತ್ತಾರೆ. ಮೊದಲ ಸಂಕಲದಲ್ಲಿ ಈ ಬಗೆಯ ಅತೃಪ್ತಿ ಕಾಡುವುದು ಸಹಜವೇ. ಅವರ ಅನೇಕ ಪದ್ಯಗಳು ಸಾದಾ ಪ್ರತಿಮೆಗಳನ್ನು ಅನಾವರಣ ಗೊಳಿಸುತ್ತವೆ. ಮಾತು ಮತ್ತು ಅದನ್ನು ಬಳಸಿಕೊಂಡು ಹೇಳುವ ಧಾಟಿ ಗಟ್ಟಿ ಕವಿತೆಯಾಗುವುದು ಕಷ್ಟ. ಇದು ಕಾಜೂರು ಅವರಿಗೂ ಗೊತ್ತು. ಕವಿತೆಯನ್ನು ಗಂಭೀರವಾಗಿ ಅಭ್ಯಾಸ ಮಾಡುವ ಕಾಜೂರು ಮುಂದಿನ ಪದ್ಯಗಳಲ್ಲಿ ಮಾಗಬಲ್ಲರು. ಅವರ ಮಾತಿನಲ್ಲೇ ಹೇಳುವುದಾದರೆ,
‘ ದೊಡ್ಡವನಾದ್ಮೇಲೆ
ಎಡಕ್ಕೂ ಬೇಡ ಬಲಕ್ಕೂ ಬೇಡ
ನೀನೇ ಒಂದು ವಾಹ್ನ ಕೊಂಡು
ಮಧ್ಯದಲ್ಲೇ ಹೋಗು.’
ಈ ವಾಹನ ಅವರ ಕವಿತೆಯ ದಾರಿಯಾಗಬಹುದೆ?.
ಬೆಲೆ:
ಎಪ್ಪತ್ತೈದು ರೂಪಾಯಿಗಳು
ಪ್ರಕಾಶಕರು:
ಫಲ್ಗುಣಿ ಪುಸ್ತಕ, ನಂಬರ್ ೧೩/೧, ಒಂದನೇ ದೇವಸ್ಥಾನ ಬೀದಿ, ೯ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-೩
ದೂರವಾಣಿ: ೯೯೦೦೦೦೦೯೨೧
ಸುರೇಶ್ ನಾಗಲಮಡಿಕೆ

ಇತ್ತೀಚಿನ ಬರಹಗಾರರಲ್ಲಿ ಸುರೇಶ್ ರವರ ಹೆಸರು ಮುಖ್ಯವಾದುದು. ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಜನಪದ ಲೋಕದೃಷ್ಟಿಯ ಮುಖೇನ ಕನ್ನಡ ಸಾಹಿತ್ಯ, ಇವು ಅವರ ಪ್ರಕಟಿತ ಕೃತಿಗಳು ಕಾಣ್ಕೆ ಮತ್ತು ಕಣ್ಕಟ್ಟು ಅವರ ಹೊಸ ವಿಮರ್ಶಾ ಸಂಕಲನ
Monday, February 1, 2016
ಪ್ರಜಾವಾಣಿ ವಿಮರ್ಶೆ - ಗಾಯದ ಹೂವುಗಳು
ನಿದ್ದೆಯಿರದ ರಾತ್ರಿಗಳನ್ನು
ನಿದ್ರಿಸಲು ಬಿಡುವೆ
ಬೆಳಕು ಮೊಳೆತ ಮೇಲೆ
ನಾನೂ ನಿದ್ದೆಹೋಗುವೆ
(ಈ ರಾತ್ರಿಗಳಲ್ಲಿ ನಿದ್ರಿಸಲಾರೆ/55)
ಬದುಕಿನ ಸಹಜಸ್ಪಂದನೆಗಳನ್ನು ಹಿಡಿಯುವ ಕವಿ ಕಾಜೂರು ಸತೀಶ್. ಹೊಸತಲೆಮಾರಿನ ಹೊಸದನಿಯ ಹುಡುಕಾಟದಲ್ಲಿರುವ ಕವಿಯಾಗಿರುವ ಸತೀಶ್‌ರ ಮೊದಲ ಸಂಕಲನ ಇದು. ಬಿಡಿಬಿಡಿ ಚಿತ್ರಗಳಲ್ಲಿ ಕಾವ್ಯದ ಅನುಭವ ತಾಕುವಂತಹ ಕವಿತೆಗಳನ್ನು, ತಮ್ಮ ಪ್ರಾಮಾಣಿಕ ಅನಿಸಿಕೆಗಳ ಮಂಡನೆಗಳನ್ನು ಇಲ್ಲಿ ಅವರು ಕೊಟ್ಟಿದ್ದಾರೆ. ಬದುಕಿನ ದ್ವಂದ್ವಗಳು ಅವರ ಕವಿತೆಗಳ ವಸ್ತು. ‘ಗಾಯದ ಹೂವುಗಳು’ ಎಂಬ ರೂಪಕವೇ ಅವರ ಕಾವ್ಯದ ಶಕ್ತ ರೂಪವಾಗಿದೆ. ಅದು ಅವರ ಕವಿತೆಗಳಲ್ಲಿ ಬೇರೆಬೇರೆ ರೀತಿಗಳಲ್ಲಿ ಕಾಣಿಸಿಕೊಂಡಿದೆ.
ಹೊಸಸವಾಲುಗಳನ್ನು ಎದುರಿಸಿ, ವಿಶಿಷ್ಟ ವಸ್ತುಗಳನ್ನು ಹುಡುಕಿ ಬರೆಯುವ ಕವಿ ಇವರಲ್ಲ. ಅವರ ಕವಿತೆಗಳೆಲ್ಲ ದೈನಿಕದ ಹಲಬಗೆಯ ಚಿತ್ರ, ಅನುಭಗಳಾಗಿವೆ. ತಮ್ಮ ಅನುಭವವನ್ನು ತಮ್ಮದೇ ವಿಶಿಷ್ಟ ನೋಟದ ಮೂಲಕ ಎಲ್ಲರಿಗೂ ಕಾಣಿಸಬೇಕೆಂಬ ಹಂಬಲ ಅವರದು. ಅದಕ್ಕಾಗಿ ಅವರು ನಿತ್ಯ ನಾವು ಕಾಣುವ ಚಿತ್ರಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ.

‘ಕೆಂಡದಲ್ಲಿ ಸುಟ್ಟ ಹಸಿಮೀನು/ ನನ್ನ ಕವಿತೆ. (ಹಸಿಮೀನು ಮತ್ತು ನನ್ನ ಕವಿತೆ/88) ಎನ್ನುವ ಕವಿ ಎಣ್ಣೆಹಾಕಿ, ಮಸಾಲೆ ಸೇರಿಸಿ ಎಲ್ಲರಂತೆ ಮೀನು ಹುರಿದು ತಿನ್ನುವ ಬದಲು ‘ನಾನು ಒಲೆಯ ಕೆಂಡದಲ್ಲಿ/ ಉಪ್ಪು ಸವರಿ/ ಸುಟ್ಟು ತಿನ್ನುತ್ತೇನೆ’ ಎನ್ನುತ್ತಾರೆ. ಇಂತಹ ಸರಳ ಮನೋಧರ್ಮ, ಬದುಕನ್ನು ಸಹಜವಾಗಿ ನೋಡುವ ರೀತಿಯೇ ಇಲ್ಲಿನ ಕವಿತೆಗಳನ್ನು ರೂಪಿಸಿದೆ.
‘ವ್ಯಾಲಿಡಿಟಿ ಮುಗಿದ ನಿನ್ನ/ ಮೊಬೈಲ್ ಸಂಖ್ಯೆಯನ್ನು/ ರೀಚಾರ್ಜ್ ಮಾಡಲು ಹೊರಟಿದ್ದೇನೆ/ ...ಬೆಳಕಾಗುವ ವರೆಗೂ/ ಕರೆಮಾಡಿ ಕೇಳುತ್ತಲೇ ಇರುತ್ತೇನೆ’ (ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು/51) ಎಂಬ ಈ ಕಾಲದ ಭಾಷೆ, ರೂಪಕಗಳೂ ಈ ಸಂಕಲನದಲ್ಲಿವೆ. ತಮ್ಮ ಅನುಭವನ್ನು ಇನ್ನಷ್ಟು ಸಂಗ್ರಹವಾಗಿ, ಖಚಿತವಾದ ನುಡಿಗಟ್ಟು, ರೂಪಕಗಳಲ್ಲಿ ಚಿತ್ರಿಸುವ ಶಕ್ತಿ ಬಂದಾಗ ಸತೀಶ್ ಮಹತ್ವದ ಕವಿತೆಗಳನ್ನು ಕೊಡಬಲ್ಲರು.
*
ಸಂದೀಪ ನಾಯಕ
Monday, January 18, 2016
'ಗಾಯದ ಹೂವುಗಳು' ಕುರಿತು ಸುನೀತಾ ಲೋಕೇಶ್ ಅವರ ನುಡಿಗಳು
ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲ ಕಷ್ಟದ ಕೆಲಸ
ಕಾಜೂರು ಸತೀಶ್ ಅವರ ಒಂಟಿ ಕವನದ ಸಾಲುಗಳೊಂದಿಗೆ ಗಾಯದ ಹೂವುಗಳ ಅನಿಸಿಕೆಯನ್ನು ನನ್ನ ಅರಿವಿಗೆ ನಿಲುಕಿದಂತೆ ತುಸು ತಲ್ಲಣದಿಂದಲೇ ಮುಂದಿಡುತ್ತೇನೆ.
ಕಾಜೂರು ಕೊಡಗಿನ ಬರಹಗಾರರಲ್ಲಿ ಮುಂಚೂಣಿಯಲ್ಲಿರುವುದನ್ನು -ಕಡೆಂಗೋಡ್ಲು- ಪುರಸ್ಕೃತ ಗಾಯದ ಹೂವುಗಳು ಪರಿಮಳಿಸಿವೆ.
ಈ ಲೋಕ ಕಲುಷಿತಗೊಂಡಿರುವುದನ್ನು ತುಂಬಾ ಸೂಕ್ಷ್ಮವಾಗಿ ವೀಕ್ಷಿಸುತ್ತಾ ಆತಂಕದಿಂದ ಕವಿತೆಗಳ ಗರ್ಭದಲ್ಲಿರಿಸಿ, ಸುಖಪ್ರಸವದಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ಸದಾ ಏಕಾಂಗಿಯಾಗಿ ಕ್ರಿಯಾಶೀಲರಾಗಿ ಇರಬಯಸುವ ಇವರ ತುಡಿತ ಕವಿತೆಯ ಸಾಲುಗಳಲ್ಲಿ ಮಿಡಿತಗೊಂಡಿವೆ. ಮನುಷ್ಯನ ಕಿರಾತಕ ಮನಸ್ಸುಗಳನ್ನು ಖಾಲಿ ಡಬ್ಬಕ್ಕೆ ಹೋಲಿಸಿ ಮೊಳೆತ ಭಾವ ತೀವ್ರತೆಯನ್ನು ಕವಿತೆಯಲ್ಲಿ ಬಿಂಬಿಸುವಾಗ, ಮೌನ ಪ್ರತಿಭಟನೆಯ ಕಾವು ವೇದ್ಯವಾಗುತ್ತದೆ.
ಈ ಕಾಲಘಟ್ಟದ ಮನುಷ್ಯ ಮನಸ್ಸುಗಳನ್ನು ಮಾತ್ರವಲ್ಲ, ಸುತ್ತಲಿನ ಚರಾಚರಗಳನ್ನೂ, ಎಲ್ಲರ ತಾತ್ಸಾರಕ್ಕೊಳಗಾಗುವ ವಸ್ತುಗಳನ್ನು ಗಮನಿಸುತ್ತಾ ವ್ಯವಸ್ಥೆಯ ಹುದುಲಲ್ಲಿ ಸಿಕ್ಕಿಕೊಂಡು ವ್ಯಸನಿಯಾಗಿರುವುದನ್ನು ಕವಿತೆಗಳ ಮೂಲಕ ಮುಲಾಜಿಲ್ಲದೆ ಕಕ್ಕಿದ್ದಾರೆ.
ಗಾಯದ ಹೂವುಗಳು ಹೆಸರೇ ಸೂಚಿಸುವಂತೆ ಕವಿಮನಸ್ಸು ಬದುಕಿನ ದುರವಸ್ಥೆಗಳನ್ನು ನೋಡಿ ರೊಚ್ಚಿನಿಂದ ಬುಸುಗುಟ್ಟಿದೆ. ಆವೇಶದಿಂದ ಶೋಷಕ ಶಕ್ತಿಗಳೆಡೆ ದೃಷ್ಟಿ ಹರಿಸುವಂತೆ ಓದುಗ ಮನಸ್ಸಿಗೆ ವೇದ್ಯವಾಗಿದೆ. ಅಲ್ಲದೆ ಚಿತ್ತವನ್ನು ಕಲಕುತ್ತಾ
ಭಯಾಶ್ಚರ್ಯ, ಸ್ತುತಿಯಿಂದಾವೃತವಾಗಿದೆ.
ಹೀಗೂ ಬರೆಯಲು ಸಾಧ್ಯ ಎಂಬುದನ್ನು ಸಾಕ್ಷೀಕರಿಸಿದ ಕಾಜೂರರು ಭವಿಷ್ಯದಲ್ಲಿ ಖಂಡಿತಾ ಈ ನಾಡು ಗುರುತಿಸುವ ಕವಿಯಾಗುವರು ಎಂಬುದನ್ನು ಅವರ ಕವಿತೆಗಳ 'ಪಡೆ'ಯೇ ಘೋಷಿಸಿವೆ.
ಮೂಳೆ, ಮಾಂಸ, ರಕ್ತದ ತಕರಾರುಗಳು ನನಗೆ ಅರ್ಥವಾಗದೆ ದಿಗಿಲುಗೊಳಿಸಿ ತಲ್ಲಣಕ್ಕೊಳಗಾಗಿರುವುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಮುಂದಿನ ಕವಿತೆಗಳ ತುಂಬೆಲ್ಲಾ ಭಾವ ಸೌಂದರ್ಯದಲ್ಲಿ ನವರಸಗಳು ಮೇಳೈಸುವ ಪರಿಸರ ಒದಗಿ ಬರಲಿ ಎಂದು ಆಶಿಸುತ್ತಾನೆ. ಮೃದುಮನದ ಕೊಡಗಿನ ಕವಿಸಹೋದರನಿಗೆ ಮಡಿಲು ತುಂಬಾ ಯಶಸ್ಸು ಅಕ್ಷಯಪಾತ್ರೆಯಾಗಲಿ. ಇದು ಈ ಅಕ್ಕನ ನಿರೀಕ್ಷೆ.
**

-ಸುನೀತಾ ಲೋಕೇಶ್
Friday, January 15, 2016
ಇನ್ನಾವ ರೂಪಕಗಳು ಬೇಕು ನಿಮಗೆ?!
ತಮ್ಮ ಚೊಚ್ಚಲ ಕೃತಿಗೆ 2015ರ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದಿರುವ ಪ್ರತಿಭಾವಂತ ಕವಿ ಕಾಜೂರು ಸತೀಶ್ ಅವರ ಕವನ ಸಂಕಲನ ಗಾಯದ ಹೂವುಗಳು. ಭಿನ್ನ ಅರ್ಥಗಳನ್ನು ಹುಟ್ಟಿಸುವ ಗಾಯದ ಹೂವುಗಳು ಎಂಬ ಶೀರ್ಷಿಕೆಯೇ ವಿಶಿಷ್ಟವಾಗಿದೆ.
ಮೊಸರಿನೊಳಗವಿತ ನವನೀತದಂತೆ ಗಾಯದ ಹೂವುಗಳಲ್ಲಿರುವ ಕವಿತೆಗಳ ಆಂತರ್ಯವನ್ನು ಕಡೆದು ಕಡೆದು ನಾವು ಪಡೆದುಕೊಳ್ಳಬೇಕು. ಇಲ್ಲಿರುವ ಕವಿತೆಗಳನ್ನು ಓದುತ್ತಿದ್ದರೆ ಇದು ಯುವ ಕವಿಯೋರ್ವರ ಕವಿತೆಗಳೆಂದು ಖಂಡಿತ ನಮಗನಿಸುವುದಿಲ್ಲ. ಏಕೆಂದರೆ ಅಂತಹ ಆಳವಾದ ಜೀವನಾನುಭವವಿದೆ:
"ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲಬುಡದಲ್ಲಿ
ಏನು?
ಕೇಳಿಸುತ್ತಿಲ್ಲವೇ?
ದನಿ ಎತ್ತರಿಸಿ ಹೇಳುತ್ತಿದ್ದೇನೆ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ
*
ಪ್ರಭೂ
ನಾನು ಸಾಯುವಾಗಲೂ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರು ಬದುಕಿಸು
ನನ್ನ ಕಾಲಬುಡದಲ್ಲಿ".
ಬದುಕನ್ನು ನೋಡುವ ಕ್ರಮವೇ ಇಲ್ಲಿನ ಕವನಗಳ ಧಾಟಿ. ಪ್ರಾಮಾಣಿಕ ವಿಷಯಗಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ಜೀವಾಳ. ಬಡತನದ ಬವಣೆ, ಅಪ್ರಾಮಾಣಿಕತೆ, ಹುಸಿ ಪ್ರೀತಿ, ನಂಬಿಕೆ ದ್ರೋಹ, ಭ್ರಷ್ಟತೆಯನ್ನು ದಿಕ್ಕರಿಸುವ ಎದೆಗಾರಿಕೆ ಕವಿತೆಗಳಲ್ಲಿವೆ.
"ಹಸಿದ ಹುಡುಗ
ಪರೀಕ್ಷೆಯಲ್ಲಿ
ಅರಮನೆಯ ವೈಭೋಗವನ್ನು
ವಿವರಿಸುತ್ತಿದ್ದಾನೆ.
ಅವನ ದು:ಖ
ನಡುನಡುವೆ ನುಸುಳಿ
ಉತ್ತರ ನಿರಾಭರಣವಾಗುತ್ತಿದೆ"
ಅನನ್ಯ ಚಿಂತನೆ ಇವರ ಬರಹದಲ್ಲಿದೆ. ಬದುಕಿನ ಏರಿಳಿತದ ಹಾದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಕವಿತೆಗಳನ್ನೆಲ್ಲಾ ಆಗಲೇ ಆಯ್ದು, ಕಾಯ್ದಿರಿಸಿಕೊಂಡಿದ್ದಾರೆ!
"ಜೀವ ಚಡಪಡಿಸುವ ಹೊತ್ತಲ್ಲಿ ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು.
ಹೊರಬರುವ ಹೊತ್ತಲ್ಲಿ ಜೇಬಿನ ತುತ್ತತುದಿಯ ದಾರಕ್ಕೆ
ಪದ್ಯಗಳು ಜೋತುಬಿದ್ದಿದ್ದವು
ಅದರ ಬಲದಲ್ಲಿ ನಾನೀಗಲೂ ಬದುಕಿಕೊಂಡಿದ್ದೇನೆ"
ಎನ್ನುವ ಕವಿಗೆ ಜೀವನದ ಬಗ್ಗೆ ಅದಮ್ಯಆಶಾವಾದವಿದೆ. ಇಂತಹ ಭರವಸೆ ಇವರ ಕವಿತೆಯ ತಳಹದಿ.
ಕಾಲದ ಸರಹದ್ದು ಎಲ್ಲೆ ಮೀರಿ ಬೆಳೆದದ್ದನ್ನು ಕವಿ ಚಿತ್ರಿಸಿದ ಪರಿ ತುಂಬಾ ಪರಿಣಾಮಕಾರಿಯಾಗಿದೆ. ತಮ್ಮ ತಂದೆ ತಾಯಿ ಹಿರಿಯರ ಜೀವಿತವೆ ಕಣ್ಣ ಮುಂದಿನ ಸಾಲುಗಳಾಗಿ ಪಡಿಮೂಡಿವೆ.
"ನಿದ್ರಿಸಿದರೂ ಹೊಗೆಯಾಡುತ್ತದೆ
ಗತದ ಹಾಳೆ ತಾಗಿದೊಡನೆ
ಒಂದೇ ಉಸಿರಿಗೆ ಓದಿ ಮುಗಿಸುತ್ತದೆ...
ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ..."
ಗಾಯದ ಹೂವುಗಳಲ್ಲಿ ಮುಖ್ಯವಾಗಿ ತೋರುವ ಗುಣ ಶೋಷಿತರ ಪರವಾದ ಸ್ವರ. ಕೂಲಿ ಸಿಗದ ಕಾರ್ಮಿಕರ ಬಗ್ಗೆ, ಸುಡುವ ಬೀದಿಯಲ್ಲಿ ನಡೆವ ಪಾದದ ಕುರಿತು, ಅರ್ಜಿ ನೀಡಿ ಅಲೆದಾಡುವ ಸಾಮಾನ್ಯ ಜನರ ಕುರಿತು, ಹಸಿದ ಹೊಟ್ಟೆಯ ಸಂಕಟದ ಬಗ್ಗೆ ಮನಮುಟ್ಟುವ ಕವಿತೆಗಳಿವೆ.
"ಉಣಿಸುವವರ ವಿಷದ ಹಲ್ಲು ಕಿತ್ತರೆ
ಹಾಲೂ ಕುಡಿಯಬಲ್ಲುದು
ಹಣ್ಣೂ ತಿನ್ನಬಲ್ಲುದು..."
"ಎಲ್ಲಾದರುದೂರ ಸರಿ
ಮೈಯೆಲ್ಲಾ ಕಿವಿಯಾದ ಹಾವೆ
ಚಪ್ಪಲಿಗಳಿಗಾದರೋ ದನಿಯಿದೆ
ಬರಿಯ ಪಾದಗಳ ಚಲನೆಯ ಗ್ರಹಿಸು
ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರು ಎತ್ತು
ಕಳಚು ಸುತ್ತಲಿನ ಪೊರೆ
ಚರಿತ್ರೆಯ ಸಾಲ ತೀರಿಸಬೇಕು."
ಆ ಕ್ಷಣದ ಸತ್ಯವನ್ನು ಕವಿತೆಯಲ್ಲಿ ಹಿಡಿದಿಟ್ಟರೂ ಅದು ಭವಿಷ್ಯಕ್ಕೆ ತೋರುಬೆರಳಾಗಿದೆ. ಇದರಿಂದ ಕವಿತೆಯ ಬಲ ಇನ್ನೂ ಹಿಗ್ಗಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇಲ್ಲಿರುವ ಕವಿತೆಗಳು ಎಂದೆಂದಿಗೂ ತನ್ನ ತಾಜಾತನವನ್ನು ಕಾಯ್ದುಕೊಳ್ಳು
ವುದರಲ್ಲಿ ಯಾವುದೇ ಸಂಶಯವಿಲ್ಲ.
"ಸಾವಿರಾರು ಬಿಳಿ ಕೂದಲುಗಳ ಒಡೆಯರೇ
ಒಳಗಿನ ಜೀವದ್ರವ್ಯ ಒಣಗಲು ಬಿಟ್ಟ
ನನ್ನ ಬರಿಮೈಯನ್ನೆ ನೋಡಿ
ಇನ್ಯಾವ ರೂಪಕಗಳು ಬೇಕು ನಿಮಗೆ?"
ಈ ಅಜ್ಞಾನಿಯ ದಿನಚರಿಯಲ್ಲಿ ಜ್ಞಾನದ ಹೂವು ಅನವರತ ಅರಳುತ್ತಿದೆ.ಆ ಹೂವಿಗೆ ಗಾಯದ ಹಂಗಿಲ್ಲ. ಗಾಯ ಮಾಗುವುದೆಂತು ಎಂದು ಕಾಯುವ ಹಪಾಹಪಿಯೂ ಇಲ್ಲ. ಕವಿ ಕಾಜೂರು ಸತೀಶ್ ರವರ ಕಾವ್ಯ ಹಾದಿಯಲ್ಲಿ ಸುಂದರ ಹೂವುಗಳು ಅರಳಿ ನಿಲ್ಲುವ ಎಲ್ಲಾ ಸೂಚನೆಯೂ ಸಂಕಲನದಲ್ಲಿದೆ.
*

ಸಂಗೀತಾ ರವಿರಾಜ್
-
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
-
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...




