ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ಅಪ್ಪ. Show all posts
Showing posts with label ಅಪ್ಪ. Show all posts

Monday, October 17, 2016

ಅಪ್ಪ ತೀರಿದ ಬಳಿಕ

ತೀರಿದ ಬಳಿಕ ಅಪ್ಪ ಮಗುವಾಗಿ ಮಲಗಿದ್ದಾನೆ ಇಲ್ಲಿ-ನನ್ನ ಹೃದಯದಲ್ಲಿ

ಅವನ ಸುಡಲು ಮಲಗಿಸಿದ ಸೌದೆಯಲ್ಲಿ ನಾನು ಬೆಂದು ಬೂದಿಯಾಗಿದ್ದೇನೆ
ಅಪ್ಪ ಮಗುವಾಗಿ ಮಲಗಿದ್ದಾನೆ ಇಲ್ಲಿ- ನನ್ನ ಹೃದಯದಲ್ಲಿ.

ಅಗ್ನಿಸ್ಪರ್ಶಗೈಯ್ದ ನನ್ನ ಕೈಗಳು ಬೂದಿಯೊಳಗಿಂದಲೂ ಬೇಯುತಿವೆ
ಆರುವ ಮೊದಲೇ ಗೋರಿ ಕಟ್ಟಬೇಕು ಇನ್ನು ನನ್ನ ಚಿತಾಭಸ್ಮದ ಮೇಲೆ.

ಎದ್ದು ಕೂರುತ್ತಾನೆ ಅಪ್ಪ ನನಗೆ ನೆನಪಾದಾಗಲೆಲ್ಲ
ದುಃಖವಿಲ್ಲದ ಜೋಗುಳವ ಹಾಡಲು ಕಲಿಯಬೇಕು ಇನ್ನು.


ಅವನು ತೀರಿದ ಮೇಲೆ 'ಅಪ್ಪ' ಎಂಬ ಶಬುದ ಅನಾಥ
ಅಕ್ಕ ಅಣ್ಣ ನಾನು ಅದರ ಬೆನ್ನುಬಿದ್ದಿದ್ದೇವೆ ಬೊಗಸೆಯೊಡ್ಡುತ್ತಾ.

ತೀರಿದ ಮೇಲೆ ಅಪ್ಪ ಮಗುವಾಗಿ ಹುಟ್ಟಿದ್ದಾನೆ
ಅವನು ತೀರಿದ ಮೇಲೆ ನಾನು ಅಪ್ಪನಾಗಿ ತೀರಿಹೋಗಿದ್ದೇನೆ.

ಚರಿತ್ರೆಯಾಗಲಿಲ್ಲ ಅಪ್ಪ
ಮಗುವಾದ
ನನ್ನ ಮಗುವಾದ.
*
ಕಾಜೂರು ಸತೀಶ್

Sunday, October 16, 2016

ಸಾವು ಹೃದಯವನ್ನು ಪ್ರೀತಿಸುತ್ತದೆ

ಅಪ್ಪ ತೀರಿಕೊಂಡ ಮೇಲೆ ಒಂದು ವಿಷಯವನ್ನು ತಿಳಿಸಲೇಬೇಕು:


ಬೀಡಿ-ಸಿಗರೇಟು ಸೇದದ, ಹೆಂಡ ಮುಟ್ಟದ, ಪಾನ್ ಮಸಾಲ- ಹೊಗೆಸೊಪ್ಪು ಜಗಿಯದ, ಕೊಬ್ಬಿನಂಶವಿರುವ ಆಹಾರ ವಸ್ತುಗಳಿಂದ ದೂರವಿರುವ, ಹೋಟೆಲಿನಲ್ಲಿ ಟೀ-ಕಾಫಿ ಕುಡಿಯುವುದಾಗಲೀ, ಊಟ ಮಾಡುವುದಾಗಲೀ ಮಾಡದ, ನಿತ್ಯ ವಾಕಿಂಗ್ ಮಾಡುವ, ವಿಪರೀತ ಕೆಲಸ ಮಾಡುವ, ಶಿಸ್ತಿನಿಂದ ಬದುಕುವ, ಒಂದು ರೂಪಾಯಿ ಹೆಚ್ಚಿಗೆ ಸಿಕ್ಕರೂ ಅದನ್ನು ವ್ಯಕ್ತಿ/ಅಂಗಡಿಗಳಿಗೆ ಹಿಂತಿರುಗಿಸುವ(ಕಡಿಮೆ ಇದ್ದರೆ ಕೇಳಿ ಪಡೆದುಕೊಳ್ಳುವ), ತಮ್ಮ ಪಾಡಿಗೆ ತಾವು ಬದುಕುವಂತಹ ಜನರ ಹೃದಯವನ್ನು ಸಾವು ತುಂಬಾ ತುಂಬಾ ಪ್ರೀತಿಸುತ್ತದೆ!

Saturday, September 17, 2016

ಅಪ್ಪ ಹೋದರು

ಅಪ್ಪ ಹೋದರು
ಮರಳಿ ಬರಬೇಕಾದ ಹಾದಿಯಲ್ಲಿ
ಮುಗಿಯದ ಕರ್ಫ್ಯೂ.
*

ಅಪ್ಪ ಹೋದರು
ಇನ್ನಾವ ಮೀಸೆ-ಗಡ್ಡಗಳು ಚುಚ್ಚಲು ಬರುತ್ತವೆ
ನನ್ನ ಕೆನ್ನೆಯ ಮೇಲೆಲ್ಲ?
*

ಅಪ್ಪ ಹೋದರು
ಯಾರೋ ಈಗ ನನ್ನ ಹೆಗಲ ಮೇಲೆ ಕುಳಿತಿದ್ದಾರೆ
ಅಪ್ಪನಿಗಿಂತಲೂ ತೂಕ!
*


ಅಪ್ಪ ಹೋದರು
ನನ್ನ ಹೃದಯವೀಗ ನಿರುದ್ಯೋಗಿ.
ತಾತ್ಕಾಲಿಕವಾಗಿ ಕರವಸ್ತ್ರದ ಕೆಲಸ ಕೊಟ್ಟಿದ್ದೇನೆ!
*

ಅಪ್ಪ ಹೋದರು
ಊರ ಮುದಿಕೈಗಳು ಕಿತ್ತೆಸೆದ ಬಳೆಯ ತೊಡಲು, ಬೊಟ್ಟು ಇಡಲು ಹೇಳಿದೆ ಅಮ್ಮನಿಗೆ.
ಎದ್ದು ಬರುವಂತಿರುವ ಅಪ್ಪನ ಫೊಟೊ ಕೊಡ ಅದನ್ನೇ ಹೇಳುವಂತಿದೆ
*

ಅಪ್ಪ ಹೋದರು
ಈ ನಾಯಿಗೇಕೆ ವಾಸನೆ ಸಿಗಲಿಲ್ಲ
ಸಿಕ್ಕಿದ್ದಿದ್ದರೆ ಅದು ಈಗ ಇಲ್ಲಿರುತ್ತಿರಲಿಲ್ಲ.
*

ಅಪ್ಪ ಹೋದರು
ಅದೆಂಥಾ ಮರೆವೋ ಏನೋ ಅವರಿಗೆ-
ನನ್ನ ಮೊಬೈಲ್ ಸಂಖ್ಯೆಯನ್ನೂ ಮರೆಯುವಷ್ಟು!
*

ಕಾಜೂರು ಸತೀಶ್

Friday, September 16, 2016

ಅಪ್ಪ


ನಾ ಬರುವ ದಾರಿ ಕಾಯುತ್ತಿದ್ದ ಅಪ್ಪ
ಈಗ ಈ ದಾರಿಗಳ ಅನಾಥವಾಗಿಸಿದ
ಈ ಕೋಣೆಗಳ ಮಾತು ಕಸಿದ
ಹಲವು ಬಟ್ಟೆಗಳ ಬಿಟ್ಟುಹೋದ
ನನ್ನ ಕಣ್ಣೀರ ಬಸಿದ
ಕನ್ನಡಕ ಕಳಚಿಟ್ಟ
ನನ್ನೆದೆಯೊಳಗೆ ಸಾಗರಗಳ ಸುರಿದುಹೋದ...
~

ಸಾವು ಕಡೆಗೂ ಅವನ 'ಹೃದಯ'ದ ಜೊತೆಗೇ ಆಟವಾಡಿತು
'ಆ ನೇರಳೆ ಮರದ ಮೇಲಿದೆ' ಎಂದು ಸುಳ್ಳು ಹೇಳಲಿಲ್ಲ ಸಾವಿನ ಬಳಿ
ಹೀಗೆ ಇದ್ದಕ್ಕಿದ್ದಂತೆ ಹೊರಟೇಬಿಟ್ಟರು ಅಪ್ಪ
ಹೋಗುವಾಗ ನನಗೆ ಸಾಯುವುದನ್ನೂ ಕಲಿಸಿ ಹೋದರು.
~

ಬೇಡ ಬೇಡವೆಂದರೂ ಮಣ್ಣಿನ ಜೊತೆಗೇ ಆಟವಾಡುತ್ತಿದ್ದ ಅಪ್ಪ
ಕಡೆಗೂ ನನ್ನ ಮಾತು ಕೇಳಲಿಲ್ಲ
ಹಠಾತ್ತಾಗಿ ಕೈ ಹಿಡಿದೆಳೆದ ಮಣ್ಣು
ನನ್ನ ಮುದ್ದಿಸಲು ಅವನ ಮತ್ತೆ ಬಿಡಲಿಲ್ಲ ಇತ್ತ...
~

ಎಷ್ಟು ರಾತ್ರಿ ಕಾದಿದ್ದೆ ಅಪ್ಪನ ಬರುವಿಕೆಗಾಗಿ!
ಕತ್ತಲಿಗೆ, ಬೆವರಿಗೆ ಕರುಣೆಯಿಲ್ಲ ಎಂದು ತಿಳಿದಿದ್ದು ಆಗಲೇ
ಬೆವರು, ಮಣ್ಣು, ಮಳೆಯಲ್ಲಿ ತೋಯ್ದ ಪುಸ್ತಕ-ಪತ್ರಿಕೆಗಳು
ದುಃಖವಿಲ್ಲದೆ ಓದಿಸಿಕೊಂಡಿದ್ದವು ಆವಾಗಲೆಲ್ಲ
*

ಕಾಜೂರು ಸತೀಶ್

Monday, August 29, 2016

ಅಪ್ಪ



ಅಪ್ಪತೀರಿಕೊಂಡರು.
ನನ್ನೆದೆಯೊಳಗೆ
ಅಪ್ಪನೆಂಬೊ ಮಗು ಬೆಳೆಯುತಿದೆ
ನಾನೀಗ ಅಪ್ಪನ ಅಪ್ಪ.
*

ಸಂತೆಯಲ್ಲಿ ನಾವಿಬ್ಬರು ನಡೆದುಹೋಗುತ್ತಿದ್ದೆವು
ನನ್ನ ಕಿರುಬೆರಳ ಹಿಡಿದುಕೊಂಡ ಅಪ್ಪನ ಕೈ ಜಾರಿತು
ಎಲ್ಲೂ ಹೋಗಿಲ್ಲ ಬಿಡಿ
ಹುಡುಕಿ ತರುವೆ ಈ ಜನಜಂಗುಳಿಯಿಂದ ಅಪ್ಪನನ್ನು
*

ನನ್ನ ಕಣ್ಣೊಳಗೊಂದು ಸಮುದ್ರವಿದೆಯೆಂದುಕೊಂಡಿದ್ದೆ
ಅಪ್ಪ ಹೋದ ಮರುದಿನವೇ
ಹನಿ ನೀರಿಗೂ ಬರ ಬಂದಿದೆ
ದೋಣಿ ನಿಂತುಹೋಗಿದೆ
ಅಮ್ಮ ಬಾಯಾರಿದ್ದಾಳೆ.
*
ಒಂದು ಕ್ಷಣ
ಒಂದೇ ಒಂದು ಕ್ಷಣ
ಅಪ್ಪನಿಗೆ ಜೀವ ಬಂದಿದ್ದರೆ
ನಾನು ಅಳುತ್ತಿರಲಿಲ್ಲ
ಅಪ್ಪ ನನ್ನ ನೆನೆದು ಅಳುವುದನ್ನೇ ನೋಡುತ್ತಿದ್ದೆ.
*

ಅಪ್ಪ ಎಷ್ಟು ಶ್ರಮಜೀವಿ
ಇನ್ನೀಗ ಕಡಲೂ ಕೂಡ ಅನಾಥ
*

ಮಧ್ಯರಾತ್ರಿಯಲ್ಲಿ ಮನೆಗೆ ಬಂದೆ
ಅಪ್ಪ ಮಲಗಿದ್ದರು
ನಿದ್ರಿಸುತ್ತಿದ್ದರು
ಎಚ್ಚರಿಸಲು ಮನಸು ಬರಲಿಲ್ಲ.
*
ಹೊರಟುಹೋಗಿ ವಾರವಾಯಿತು
ಅಪ್ಪನಿಗೆ ನನ್ನ ಮೊಬೈಲ್ ಸಂಖ್ಯೆ ಮರೆತುಹೋಗಿದೆ
*