ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, May 28, 2020

ಭಾರದ್ವಾಜರ 'ಕಳೆದುಕೊಂಡವರ'ಲ್ಲಿ ನನಗೆ ದಕ್ಕಿದ್ದು..

2006ರ ಮಡಿಕೇರಿ ದಸರಾ ಕವಿಗೋಷ್ಠಿಯಲ್ಲಿ  ಕಪ್ಪು-ಬಿಳುಪು ಮಿಶ್ರಿತ ಗಡ್ಡವನ್ನು ಕೆರೆದುಕೊಳ್ಳುತ್ತಾ 'ಮಗ್ಗಿ' ಎಂಬ ಚಂದದ ಕವಿತೆಯನ್ನು ಓದಿದ ವ್ಯಕ್ತಿಯ ಹೆಸರು ಆ ದೇಹಾಕಾರವನ್ನು ಕಾಣುವ ಮೊದಲೇ ಪತ್ರಿಕೆಯ ಮುಖೇನ ಪರಿಚಯವಾಗಿತ್ತು.

ಒಮ್ಮೆ ಈ ವ್ಯಕ್ತಿಯ ಜೊತೆ ಮಾತನಾಡಬೇಕೆಂದು ಹೋದರೆ ಅವರು ಮಾತ್ರ ತಮ್ಮ ಗಂಟಿಕ್ಕಿದ ಮುಖದಲ್ಲಿ 'ಅಪರಿಚಿತನಾದ ಈ ಹುಡುಗನ ಬಳಿ ನನ್ನ ಮಾತೇನು' ಎಂದುಕೊಂಡಂತೆ 'ಹಾಂ ಹೂಂ' ಹೇಳತೊಡಗಿದಾಗ 'ಇವರ ಜೊತೆ ಇನ್ನು ಮಾತಾಡುವುದು ಬೇಡ' ಎಂದುಕೊಂಡು ಅದನ್ನು ಪಾಲಿಸಿಕೊಂಡು ಬಂದಿದ್ದೆ. ಈಗ ನನ್ನೊಳಗಿಗೆ ಕೊಟ್ಟ ಆ ಮಾತನ್ನು ಮುರಿಯಬೇಕಾದ 'ಪ್ರಸಂಗ' ಎದುರಾಗಿದೆ. ವಿಚಿತ್ರವೆಂದರೆ ನನಗೆ ಆ ಕುರಿತ ಯಾವುದೇ ಪಾಪಪ್ರಜ್ಞೆಯಿಲ್ಲ. ಈಗ ಹೇಳಬೇಕಿರುವುದು ಇದೊಂದೇ-'Love you!'


*

‌ಭಾರದ್ವಾಜ ಕಣಿವೆ ಎಂಬ ಈ ಲೇಖಕರ 'ಕಳೆದುಕೊಂಡವರು' ಕಾದಂಬರಿಯನ್ನು 'ಇವರು ಕೊಡಗಿನವರು' ಎಂಬ ಅಭಿಮಾನದಿಂದ ಮತ್ತು ಇಲ್ಲಿನ ಅನೇಕಾನೇಕರ ಬಾಲಿಶ ಕೃತಿಯನ್ನು ಮನದಲ್ಲಿ ತಂದುಕೊಂಡು ಓದತೊಡಗಿದೆ. ಒಂದೆರಡು ಪುಟಗಳಲ್ಲೇ ನನ್ನ ಇಡಿಯ ಪೂರ್ವಗ್ರಹವು ಕುಸಿದಿತ್ತು.
‌ಕನ್ನಡೇತರ ಭಾಷಿಗನ ಕನ್ನಡದ ನಿರೂಪಣೆ ಭಿನ್ನವಾಗಿ (ಗೊಂದಲವಾಗಿಯೂ )ಕಾಡುತ್ತಾ ಕಾದಂಬರಿಕಾರರ ತಾರತಮ್ಯರಹಿತ ನಿಲುವು ಇಷ್ಟವಾಗುತ್ತಾ ಬೆಳೆಯಿತು. ಒಂದು Ideaವನ್ನು 'ಇದು ನನ್ನ ನಿಲುವು ನೀನಿದನ್ನು ಒಪ್ಪಿಕೊ' ಎಂಬಂತೆ ವಕಾಲತ್ತು ವಹಿಸದೆ ಪಾತ್ರಗಳನ್ನು ವಾಸ್ತವತೆಯ ರೆಕ್ಕೆ ಕಟ್ಟಿ ಹಾರಿಸಿದ್ದು ಅವರ ಕಾದಂಬರಿಯ ಒಟ್ಟು ಶಕ್ತಿ. ಪ್ರೀತಿ, ಕಾಮ, ದ್ವೇಷ, ಹಿಂಸೆ ಯಾವುದೂ ಇಲ್ಲಿ ಸಿನಿಮೀಯವಲ್ಲ.

‌ ಅಸ್ತಿತ್ವವಾದ ಮತ್ತು ಅಸಂಗತತೆಗಳು ಅನಿರುದ್ಧನಲ್ಲಿ ಬೆಳೆಬೆಳೆದಂತೆ ಅವನ ಒಳಗೆ ಮೂಡುವ ಕ್ರಾಂತಿಯ ಕಿಡಿಗಳು, ಪ್ರಗತಿಪರ ನಿಲುವುಗಳು, ಭ್ರಷ್ಟ ಆಲೋಚನೆಗಳು- ಹೀಗೆ ನಾಯಕ ಒಮ್ಮೊಮ್ಮೆ ಪ್ರತಿನಾಯಕನ ಮೈಪಡೆದು, ಮತ್ತೆ purgationಗೆ ಒಳಪಟ್ಟು ಬೆಳೆಯುವ ಕ್ರಮವನ್ನು ಮೆಚ್ಚಿಕೊಂಡೆ. ಹುಸಿ ಅಭಿವೃದ್ಧಿಯ ಸುತ್ತಮುತ್ತಲ ವಾಸ್ತವ ಚಿತ್ರಣ ಈ ಕಾದಂಬರಿಯ ಆತ್ಮ.
‌ಧರ್ಮ, ಜಾತಿ, ರಾಜಕಾರಣ, ಹಣ- ಇವು subaltern ನೆಲೆಗಳ ಮೇಲೆ ಹೇಗೆ ದಾಳಿಮಾಡುತ್ತವೆ , ಆ ಮೂಲಕ ಅದರ ಹೆಸರಲ್ಲಿ ಬೆಳೆಬೆಳೆಯುತ್ತಾ ಮತ್ತೊಂದು ಮಗ್ಗುಲಲ್ಲಿ ವಿನಾಶವನ್ನೂ ಹೊಂದುತ್ತವೆ ಎನ್ನುವ ಸೂಕ್ಷ್ಮ ಕಾದಂಬರಿಯಲ್ಲಿದೆ.
‌ಕೊಡಗಿನವನಾಗಿರುವ ನನಗೆ ಇಲ್ಲಿನ ಆದಿವಾಸಿಗಳು, ಅವರನ್ನು ಉದ್ಧಾರ ಮಾಡಲೆಂಬಂತೆ ಬರುವ so called NGOಗಳ ಮುಖವಾಡಗಳು ತಿಳಿದೇ ಇದೆ. ಕಾದಂಬರಿಕಾರರು ಇಲ್ಲಿ ಬಳಸಿದ ಸ್ಥಳನಾಮವು ಏನೇ ಇದ್ದರೂ ಅವನ್ನೆಲ್ಲ ನನ್ನ ಸುತ್ತಲಿನ ಊರುಗಳೆಂದೇ ಬದಲಾಯಿಸಿ ಓದಿಕೊಂಡಿದ್ದೇನೆ.
‌ಇಂತಹ materialistic fictionಗಳಿಗೆ ಕಲಾತ್ಮಕತೆಯ ಸ್ಪರ್ಶ ಬೇಕಿಲ್ಲ; ವರ್ಣನೆಯ ಅನಿವಾರ್ಯತೆಯೂ ಇಲ್ಲ. ಅಥವಾ ತೀರಾ ಗಾಂಭೀರ್ಯತೆಯ ಸೋಗೂ ಬೇಕಿಲ್ಲ. ಇವುಗಳ ನಡುವಣ ಸಮತೂಕದ ಅಭಿವ್ಯಕ್ತಿ ಭಾರದ್ವಾಜರದು.
‌ತುಂಬಾ ಹೇಳುವುದಿದೆ. ಕಾದಂಬರಿ ಇಷ್ಟವಾಯಿತೆಂದು ಹೇಳಿಕೊಳ್ಳಬೇಕೆಂಬ ಭರದಲ್ಲಿ ಇಷ್ಟನ್ನು ಹೇಳಿ ವಿರಮಿಸುತ್ತೇನೆ. ಅವರು ಹೆಚ್ಚು ಹೆಚ್ಚು ಬರೆಯುವಂತಾಗಲಿ.
*


ಕಾಜೂರು ಸತೀಶ್ 

Wednesday, May 27, 2020

ಮದುವೆ ಎಂಬ ಖಾಸಗಿ ವಿಚಾರವೂ ಮತ್ತು....

ನನ್ನ ಗೆಳತಿಯೊಬ್ಬರು ಮದುವೆಯಾದರು. ಮದುವೆಯ ಮಾರನೇ ದಿನ ನಮಗೆ ವಿಷಯ ತಿಳಿಯಿತು. ಹಲವರು ನನ್ನನ್ನು ಕೇಳಿದರು- 'ಹೌದಾ?'!


ಮದುವೆ ಎನ್ನುವುದು ತೀರಾ ಖಾಸಗಿ ವಿಷಯ. ಹಾಗಾಗಿ ಯಾರನ್ನೂ ಆಮಂತ್ರಿಸದೆ ಅವರು ಮದುವೆಯಾದದ್ದು ಸರಿಯಾದ ನಿರ್ಧಾರ. ಅದಕ್ಕಾಗಿ ದುಂದುವೆಚ್ಚ(ದುಂದುವೆಚ್ಚ ಯಾವತ್ತೂ ಖಾಸಗಿ ವಿಚಾರವಲ್ಲ) ಮಾಡುವುದು ತಪ್ಪಿತು. ಎಷ್ಟೋ ಪ್ರಮಾಣದಲ್ಲಿ ಕಸದ ಬುಟ್ಟಿಗೆ ಸೇರಬಹುದಾದ ಆಹಾರ ಉಳಿಯಿತು.

ಮದುವೆಯಂಥ ಸಮಾರಂಭಗಳು ಹಲವರನ್ನು ಒಂದೆಡೆ ಬೆಸೆಯುತ್ತದೆ ನಿಜ. ಆದರೆ ಅಲ್ಲಿನ ಮನುಷ್ಯ ವರ್ತನೆಗಳು ನೈಸರ್ಗಿಕವಾಗಿರುವುದಿಲ್ಲ. ದೈಹಿಕವಾಗಿಯೂ 'ಇರುವಂತೆ' ಇರುವುದಿಲ್ಲ! ಈ ಕೃತ್ರಿಮತೆ ನನ್ನಂಥವರಿಗೆ ಹುಚ್ಚು ಹಿಡಿಸುವ ಸಂಗತಿ.

ಅವರು- ನನ್ನ/ಅಕ್ಕನ/ಅಣ್ಣನ/ತಂಗಿಯ/ತಮ್ಮನ ಮದುವೆಗೆ ಇದನ್ನು /ಇಷ್ಟು ಕೊಟ್ಟಿದ್ದರು. ಅದಕ್ಕಿಂತ ಇಷ್ಟು ಹೆಚ್ಚು ಕೊಡಬೇಕು ಎಂಬ ಅತ್ಯಂತ ಹೇಯವಾದ ವಾಣಿಜ್ಯ ವ್ಯವಹಾರವೇ ಮದುವೆ.

ನಿಜ, ಅದು ಒಂದಷ್ಟು ಕಾರ್ಮಿಕರಿಗೆ ದುಡಿಯುವ, ಹೊಟ್ಟೆಹೊರೆಯುವ ಅವಕಾಶವನ್ನು ಕಲ್ಪಿಸುತ್ತದೆ. ಆದರೆ,  ಕೆಟ್ಟ ಪರಂಪರೆಯನ್ನು ಸೃಷ್ಟಿಸುತ್ತದೆ. ಎಷ್ಟೆಷ್ಟೋ ಕುಟುಂಬಗಳನ್ನು ವರದಕ್ಷಿಣೆ ಮತ್ತು ಆಡಂಬರದ ನೆಪದಲ್ಲಿ ಬೀದಿಗೆ ತಂದು ನಿಲ್ಲಿಸುತ್ತದೆ.

ಈ ಹುಚ್ಚುತನಗಳನ್ನು ದಾಟಿ ರಮ್ಯ ಮೂರ್ನಾಡು ಅವರು ಅಡಿಯಿಟ್ಟ ನಿಲುವು ನನಗೆ ತುಂಬಾ ಹಿಡಿಸಿತು. ಹಾಗಾಗಿ ಅವರನ್ನು ಅಭಿನಂದಿಸುತ್ತೇನೆ.

ಅವರ ಮುಂದಿನ ಜೀವನಕ್ರಮದಲ್ಲಿ ಸುಖವು ಅಂಟಿಕೊಂಡಿರಲಿ.
*
ಕಾಜೂರು ಸತೀಶ್

ಕಲೆ ಮತ್ತು ಅಶ್ಲೀಲತೆ

ಅಶ್ಲೀಲತೆ ಎನ್ನುವುದು ಏನಾದರೂ ಇರುತ್ತದೆಯೇ? ಯಾವುದು ನಿಸರ್ಗದಲ್ಲಿ ಚಾಲ್ತಿಯಲ್ಲಿರುತ್ತದೋ, ಅದನ್ನು ಅನುಕರಿಸುವ/ಬಹಿರಂಗಗೊಳಿಸುವ ಕ್ರಮವನ್ನು obscene ಎಂದು ಹೇಳಬೇಕೆನಿಸುವುದಿಲ್ಲ ನನಗೆ.

ಕಲೆಯನ್ನು ಆಸ್ವಾದಿಸಲು ಅರಿಯದ ಮಂದಿಯೊಳಗೆ ಈ ಅಶ್ಲೀಲತೆ ಉಳಿದುಕೊಂಡಿರುತ್ತದೆ. ಮನುಷ್ಯೇತರ ಜೀವಿಗಳ ನಡುವೆ ಅದಿಲ್ಲವೆಂದಾದಲ್ಲಿ ಅಶ್ಲೀಲತೆಯು ನಮ್ಮ ಗ್ರಹಿಕೆಯ ಕ್ರಮದ ಬಾಲಿಶತನ ಎಂದು ನನಗನ್ನಿಸುತ್ತದೆ.

ಅಶ್ಲೀಲತೆಯು ದೇಹ ಮತ್ತು ಕಾಮಗಳಿಗೆ ಸಂಬಂಧಿಸಿದ ಸಂಗತಿ ಅಲ್ಲ. ಯಾವುದರಿಂದ ಸಮಾಜಕ್ಕೆ ಅಪಾಯಕಾರಿಯಾದ ವರ್ತನೆಗಳು ಹುಟ್ಟಿಕೊಳ್ಳುತ್ತವೋ ಅದು ಅಶ್ಲೀಲ.ಅತ್ಯಾಚಾರ, ಜಾತಿವಾದ, ಧರ್ಮಾಂಧತೆ, ಭ್ರಷ್ಟಾಚಾರ, ಭಯೋತ್ಪಾದನೆ, ಲಂಚಗುಳಿತನಗಳು ನಮ್ಮೆದುರಿಗಿನ ನಿಜವಾದ ಅಶ್ಲೀಲತೆಗಳು. 

ಜಗತ್ತಿನ ಹಲವು ದೇಶ ಭಾಷೆಗಳ ಸಿನಿಮಾ ಲೋಕದ ಒಳಗಿಳಿದ ಮೇಲೆ, 'ಅಶ್ಲೀಲತೆಯನ್ನು ಕಲೆ ಎಂಬ ದಿವ್ಯ ಶಕ್ತಿಯು ಅಳಿಸಿಹಾಕುತ್ತದೆ' ಎಂಬ ಅರಿವು ನನ್ನೊಳಗೆ ಮೆತ್ತಿಕೊಂಡಿದೆ.
*


ಕಾಜೂರು ಸತೀಶ್ 

Tuesday, May 12, 2020

ನನ್ನ ಕಡೆಯ ಕವಿತೆ


ನನ್ನ ಕಡೆಯ ಕವಿತೆಗೆ
ಹಾಗೇ ಕಣ್ಣುಮುಚ್ಚಿ ಮಲಗುವುದೆಂದರೆ
ಬಿಳಿ ವಸ್ತ್ರ ಹೊದೆಯುವುದೆಂದರೆ
ಹೂವಿನ ಹಾರವೆಂದರೆ
ಅಗರಬತ್ತಿಯ ಪರಿಮಳವೆಂದರೆ
ಅಳುವೆಂದರೆ ಕಣ್ಣೀರೆಂದರೆ
ಮಡಿಕೆಯೆಂದರೆ ಚಟ್ಟವೆಂದರೆ
ಮಡಿಯೆಂದರೆ ಮಂತ್ರವೆಂದರೆ
ಪಟಾಕಿ ಸಿಡಿಮದ್ದುಗಳೆಂದರೆ
ಸುಡುವುದೆಂದರೆ ಹೂಳುವುದೆಂದರೆ
ಸುತರಾಂ ಇಷ್ಟವಿಲ್ಲ

ಒಂದು ಗಾಳಿಪಟ ಮಾಡಿ ತೇಲಿಬಿಡಿ ಅದನ್ನು
ಹೆಸರು ಅಳಿಸಿ ದಾರ ಕತ್ತರಿಸಿಬಿಡಿ
ಬದುಕಿದ್ದಾಗ ಸ್ವಾತಂತ್ರ್ಯವ ಬಯಸಿತ್ತು ಅದು

ನನ್ನ ಕಡೆಯ ಕವಿತೆಗೆ
ಬದುಕುವುದೆಂದರೆ ತುಂಬಾ ಇಷ್ಟ.
*


-ಕಾಜೂರು ಸತೀಶ್

Monday, May 4, 2020

ನೀ ಹೋದ ಬಳಿಕ



ನೀ ಹೋದ ಬಳಿಕ
ಮೌನ ನಿನ್ನ ಗೆರೆಕೊರೆದು ಒಡಲಾಗಿ
ನನ್ನ ಕಣ್ಣೊಳಗಿಳಿದು ನಿನ್ನ ದನಿ ಪಡೆದಿದೆ

ನಿನ್ನ ನಗು ಈ ತೊರೆಯ ಜೊತೆ ಹರಿಯುತಿದೆ
ಕಗ್ಗಲ್ಲುಗಳ ಭಯವಿಲ್ಲ ಅದಕೆ
ಕಡಲಿನ ಅಳುವೂ ತಿಳಿದಿಲ್ಲ

ನಿನ್ನ ಕನಸ್ಸಲ್ಲಿನ್ನು ಮಣ್ಣು ಹೊರುತ್ತಿರುವ ನಾನು
ಅದರ ಮೇಲೊಂದು ಗಿಡ, ಗಿಡದ ತುಂಬ ಹೂವರಾಶಿ
ನೀನು ಮಾಲೆಕಟ್ಟಿ ನನ್ನೆದೆಯ ಮೇಲಿರಿಸುವ ಕಪ್ಪು ಬಿಳುಪು ಚಿತ್ರ

ನಿನ್ನ ದಾರಿಯಿನ್ನು ನೀನೇ ಬೆಳೆದು ಕೈನೋಯಿಸಿಕೊಂಡ ಗುಲಾಬಿಯೆಡೆಗೆ
ಚುಚ್ಚಿಸಿಕೊಂಡಾಗಲೆಲ್ಲ ರೇಗುತ್ತೀಯ ಅಳುತ್ತೀಯ
ನನ್ನ ನೆನಪು ಅದರ ಬೇರಿಗೆ ನೀರೆರೆಯುತ್ತದೆ ಕಣ್ಣುಗಳಿಂದ

ನೀ ಹೋದ ಬಳಿಕ
ಮರೆತೇಹೋಗಿದ್ದ ನನ್ನನ್ನು ಪ್ರೀತಿಸತೊಡಗಿದ್ದೇನೆ
ನೀನಿತ್ತ ಪ್ರೀತಿಯನೆಲ್ಲ ಕೊಟ್ಟುಬಿಡುತ್ತಿದ್ದೇನೆ
*


-ಕಾಜೂರು ಸತೀಶ್