ಹೆಂಡತಿ ತೀರಿಕೊಂಡ ದಿನ
ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು
'ಯಾವಾಗ ಬರ್ತೀಯ?'
'ಬೆಳಿಗ್ಗೆ'- ಅವನೆಂದ.
ಮುಖ ತೊಳೆದು
ಇಸ್ತ್ರಿ ಮಾಡಿದ ಬಟ್ಟೆ ಹಾಕ್ಬೇಡ
ಶೇವ್ ಮಾಡ್ಬೇಡ
ಮನೆಯ ಹಿಂದೆ ಬ್ಲ್ಯಾಕ್ ಟೀ ಮಾಡ್ತಿರ್ತಾರೆ
ಒಂದ್ಕಪ್ಪು ಕುಡಿದ್ಬಿಡು
ತೀರ್ಕೊಂಡವಳು ಬರ್ತಾಳಾ ಅಂತ
ಅಂಗಳದಲ್ಲಿ ಕಾಯ್ಕೊಂಡಿರು-
ನೆನಪಿಸಿದಳು ಅವಳು.
ನಂಗೆ ಕರಿಕಾಫಿ ಇಷ್ಟವಿಲ್ಲ
ಸಾವಿನ ಮನೆಯಲ್ಲಿ
ಹಾಲು ಯಾಕೆ ಬಳಸ್ಬಾರ್ದು- ಕುಪಿತನಾದ
ಇವತ್ತೊಂದಿನ ತಡಿ- ಅವಳೆಂದಳು
ಸುಮ್ಮನಾದ.
ಬೇಜಾರಾ? ಕೇಳಿದಳು
ಗೊತ್ತಿಲ್ಲ ಎಂದ
ಇವತ್ತು ಅಳೋದೇ ಇರ್ಬೇಡ
ಜನ ನೋಡ್ತಿರ್ತಾರೆ- ಅವಳೆಂದಳು
ಅಳು ಬರದೆ ಹೇಗೆ ಅಳೋದು- ಅವನೆಂದ
ಹಳೆಯದೇನಾದ್ರೂ ನೆನಪಿಸ್ಕೊ
ಸುಡುಬೇಸಿಗೆಯ ಬಾವಿಯ ಹಾಗೆ
ಮಾತಲ್ಲಿ ನೋಟದಲ್ಲಿ
ಆಳದ ಪ್ರೀತಿಯನ್ನೆಲ್ಲ ಹೊರತೆಗೆದು
ಬತ್ತುವ ಮೊದಲಿನ ಕಾಲದ ಏನನ್ನಾದರೂ ನೆನಪಿಸ್ಕೊ
ಏನೂ ನೆನಪಾಗಲಿಲ್ಲ
ನೀರಲ್ಲದ್ದಿದ ಬಣ್ಣಗಳಂತೆ
ಬೆರೆತುಹೋದವು ಒಂದರೊಳಗೊಂದು
ಏನಾದ್ರೂ ಸಿಕ್ಕೇ ಸಿಗುತ್ತೆ ಯೋಚಿಸ್ತಿರು-
ಅವಳ ಸಲಹೆ
ಮದುವೆ ಸೀರೆ
ಕಡುಹಸಿರು ಬಣ್ಣದ್ದೇ ಬೇಕೆಂದೂ
ಕುಪ್ಪಸದಲ್ಲಿ ನಕ್ಷತ್ರಾಕಾರದ
ಸ್ವರ್ಣವರ್ಣದ ಚುಕ್ಕಿಗಳಿರಬೇಕೆಂದೂ
ಬರೆದ ಪತ್ರಗಳ ಭೂತಕಾಲದೊಳಗಿಣುಕಿ ನೆನೆದ
ಚಿಂತಿಸಿದ
ಕಡುಹಸಿರಿನ ಬದಲಿಗೆ
ಕಡುಗೆಂಪು ಸೀರೆಯ ಕೊಟ್ಟ
ನಕ್ಷತ್ರಗಳ ಬದಲು ಖಾಲಿ ಕುಪ್ಪಸ
ಅವಳ ನೋಯಿಸಿದೆನೆಂದು ಯೋಚಿಸಿದ
ಇನ್ನು ಅದೆಲ್ಲಾ ಅಸಾಧ್ಯವೆಂದು ನೆನೆದು
ನಿಜಕ್ಕೂ ದುಃಖಿಸಿದ.
ಯೋಚಿಸುತ್ತಲೇ ಇದ್ದ
ಅವಳಿಗೆ ನೀಡಲಾಗದ್ದು
ಅವಳಿಂದ ಪಡೆಯಲಾಗದ್ದು..
ಲೆಕ್ಕವಿಲ್ಲ.
ತಪ್ಪಿತಸ್ಥನ ಭಾವ ಮೂಡಿ
ಕಣ್ಣು ತುಂಬಿ ಕೆಂಪಗಾಗುತ್ತದೆಂದು
ನೆನಪಿಸಿದಳು ಫೋನಿನಲ್ಲಿ.
ನಾನೂ ಬರುತ್ತಿರುವೆ
ಅವಳನ್ನು ಮೊದಲು ಮತ್ತು ಕಡೆಯ ಬಾರಿ ನೋಡಲು
ನೀನು- ತೀರಿಕೊಂಡ ಅವಳ ಬಳಿ
ದುಃಖಿತನಾಗಿರುವುದ ನೋಡಿ
ನನ್ನ ಕಣ್ಣುಗಳು ತುಂಬುತ್ತವೆ
ಕಪ್ಪು ಗೆರೆಗಳುಳ್ಳ ಸೀರೆಯ ಸೆರಗ ತುದಿಯಲ್ಲಿ
ಬಾಯ್ಮುಚ್ಚಿ ಅಳು ನಿಲ್ಲಿಸುತ್ತೇನೆ
ಅವಳ ಮೇಲಿನ ಪ್ರೀತಿಯಿಂದಲ್ಲ
ಅವಳ ನೆನೆನೆನೆದು ಅಳುವ ನಿನ್ನ ಕಂಡು-
ಅವಳೆಂದಳು ಫೋನಿನಲ್ಲಿ.
*
ಮಲಯಾಳಂ ಮೂಲ- ಜಿಸಾ ಜೋಸ್
ಕನ್ನಡಕ್ಕೆ- ಕಾಜೂರು ಸತೀಶ್
No comments:
Post a Comment