ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, April 18, 2021

ದೇಹ ಮೀಮಾಂಸೆ


ಚರುಮದ ಒಳಗೆ ಕೊಬ್ಬು ತುಂಬಿ
ಮೈಯ್ಯು ತುಸು ಹೆಚ್ಚೇ ಗಾಳಿಯ ಜಾಗವನು ಅತಿಕ್ರಮಿಸಿಕೊಂಡಾಗ
ಪಟ ನೋಡಿದ ಹುಡುಗಿ ತಿರಸ್ಕರಿಸಿದ ಹಾಗೆ ಬದುಕು

ಚೆಲುವು ತುಂಬಿದ ಹುಡುಗಿ ಕಣ್ಣಿಗೆ ಬಿದ್ದಾಗ
ಹಾದಿಯಲಿದ್ದ ಗಂಡಸರು 'ಬೇಕು' ಎಂದರು, 'ಸುಂದರಿ' ಎಂದರು.
ಅವಳಿಗೆ ಸಂಧಿವಾತವಿತ್ತು, ನೋಯುತ್ತಿದ್ದಳು ನಡೆಯುವಾಗ.

ಮುಖದ ಕಲೆಗಳಲಿ ಬಣ್ಣಗಳು ತುಂಬಿ
ತುಟಿಯ ಕಪ್ಪು ಕೆಂಪಾಗಿ ಹರಡಿ
ಕ್ಯೂ ನಿಂತ ಸುಕ್ಕುಗಳ ಸಾಲು ಯಾರಿಗೂ ಕಾಣದು


ಸರದಿ ಬರುವ ಹೊತ್ತಿಗೆ ಬೆನ್ನುಹುರಿಗೆ ಉರಿ

ಉಬ್ಬುಗಳು ಬಂದಾಗ ನಿಧಾನ ಸಾಗಬೇಕು

ಬೇಡ ಸಪಾಟು ಬಣ್ಣಗಳು ಕಣ್ಣಿಗೆ 


ಕಣ್ಣು ಮಾಂಸದ ಮಾರುಕಟ್ಟೆ



ಕಾಜೂರು ಸತೀಶ್ 

Wednesday, April 7, 2021

ಅರ್ಜಿ



ಅರ್ಜಿ ಕೊಟ್ಟು ಸ್ವೀಕೃತಿ ಪಡೆದು..

ಒಂದು ಮಳೆಗಾಲ ಆಕಾಶದಿಂದ ಬಿದ್ದು ತಲೆಯೊಡೆದುಕೊಂಡು ಆಸ್ಪತ್ರೆ ಸೇರಿತ್ತು
ಬೇಸಿಗೆಯು ಬೆವರಿ ಬೆವರಿ ಮೈಸುಟ್ಟು ಕಪ್ಪಾಗಿ ಮೂರ್ಛೆ ಹೋಗಿತ್ತು
ಚಳಿಗಾಲಕ್ಕೆ ಮದುವೆಯಾಗಿ ಮೂರ್ನಾಲ್ಕು ಮಕ್ಕಳು - 'ಕಂಯ್ಯೋ..'

ಒಂದು ತಡರಾತ್ರಿ ನಿದ್ದೆ ಹತ್ತಿತ್ತು

ಭಯಾನಕ ಕನಸು!
ನಾನವರ ರಕ್ತ ಹೀರುತ್ತಿದ್ದೆ!
ರಕ್ತಕ್ಕೆ ಬೆವರ ನಾತ
ನೂರು ಸಾವಿರ ಮಂದಿ ಒಂದಾದ ರಕುತ
ಅಲ್ಲಲ್ಲಿ ಸೂರ್ಯಗುಳ್ಳೆ ಥಳಥಳ ತಳತಳ
ಸಾಸಿವೆಯಿದ್ದಿದ್ದರೆ ಚಿಟಿಚಿಟಿಚಿಟಿ
ಆಹಾ.. ಕರಿಬೇವು ಇದ್ದಿದ್ದರೆ..

ಅದರಲ್ಲಿದ್ದ ನನ್ನ ರಕುತವೂ ನಾಲಗೆಗೆ ತಾಗಲು..
ಎಚ್ಚರಗೊಂಡೆ

ಕತ್ತಲು ಕೆಂಪಾಗಿತ್ತು
ಮೂಡಣ ಸೂರ್ಯ!
*



ಕಾಜೂರು ಸತೀಶ್

Monday, April 5, 2021

ಆ ಮೇಷ್ಟ್ರು , ಮೌಲ್ಯ ಮತ್ತು ಭ್ರಷ್ಟಾಚಾರ

ಕನ್ನಡ ವಿಷಯವನ್ನು ಬೋಧಿಸುತ್ತಿದ್ದರು. ಸಹಜವಾಗಿ ಪುನರ್ ಆವರ್ತನೆಯಾಗುವ 'ಕ್ಯಾಸೆಟ್ ಸಂಪ್ರದಾಯ' ಇವರಲ್ಲೂ ಇತ್ತು. ಮೌಲ್ಯದ ಕುರಿತು ಅವರು ಕೆಲವೊಮ್ಮೆ ಮಾತನಾಡುತ್ತಿದ್ದರು. ವಿಕೃತ ಜೀವಿಗಳು ಆ ಸಂಸ್ಥೆಯಲ್ಲಿ ಇಂತಹ ಪವಿತ್ರ ಕೆಲಸಕ್ಕೆ ಬಂದದ್ದರಿಂದ, ಇವರು ನಮಗೆ ಆದರ್ಶ ವ್ಯಕ್ತಿಯಾಗಿಯೇ ಇದ್ದರು.

ಒಂದು ಕಾರ್ಯಕ್ರಮವನ್ನು ಸಂಘಟಿಸುವ ಜವಾಬ್ದಾರಿ ಅವರ ಹೆಗಲಿಗೇರಿದಾಗ, 'ಹಣ' ಅವರ ಕಣ್ಣಲ್ಲಿ ನಲಿದಾಡುತ್ತಿದ್ದದ್ದು ಕಾಣಿಸಿತು. ಆದರೆ, ಅದೇನೂ ನಮಗೆ ಆಗ ಮಹತ್ವದ ಸಂಗತಿಯಾಗಿರಲಿಲ್ಲ.
*
ಮೇಷ್ಟ್ರು(ಕಲಿಸುವ ಎಲ್ಲರಿಗೂ ಅನ್ವಯ) ಭ್ರಷ್ಟರಾಗುವುದು ಎಂದರೆ ಸಹಿಸಲು ಅಸಾಧ್ಯವಾದ ಸಂಗತಿ. ಯಾರೂ ಅದನ್ನು ಒಪ್ಪಲಾರರು;ಒಪ್ಪಬಾರದು.

ಇಂದು, ಅವರ ಕುರಿತ ಭ್ರಷ್ಟಾಚಾರದ ಯಶೋಗಾಥೆಯನ್ನು ಕೇಳಿಸಿಕೊಳ್ಳುತ್ತಿದ್ದೆ.
ಹಣದ ಹಸಿವು ಅವರನ್ನು ಯಾವ ಮಟ್ಟಕ್ಕೆ ಇಳಿಸಿದೆ ಎಂಬುದನ್ನು ನೆನಪಿಸಿಕೊಂಡಾಗ ನನ್ನೊಳಗಿನ ಖಿನ್ನತೆಯು ಎದ್ದು ನಿಲ್ಲಲು ಹವಣಿಸಿತು.(ಅದರ ಕತ್ತು ಹಿಸುಕಿದೆ)

RIP dear Sir!
*

ಕಾಜೂರು ಸತೀಶ್

Sunday, April 4, 2021

ತರುಣ ಕವಿಯ ಕಾವ್ಯಮೀಮಾಂಸೆ

20ನೇ ಶತಮಾನದ ಅಂತ್ಯದಲ್ಲಿ - 21ನೇ ಶತಮಾನದ ಆದಿಯಲ್ಲಿ ಜನಿಸಿದ ಯುವಕರ ಪೈಕಿ ನೆನಪಿನಲ್ಲಿ ಉಳಿಯುವ ಹಾಗೆ ಕವಿತೆ ಬರೆದದ್ದು/ಬರೆಯುತ್ತಿರುವವರು ನನ್ನ ಗಮನಕ್ಕೆ ಬಂದಿಲ್ಲ. ಹಾಗೆ ಬರೆದವರ  ಕೃತಿಗಳಲ್ಲಿರುವ ವ್ಯಾಕರಣ ದೋಷಗಳು ಓದುಗರನ್ನು ನುಂಗಿ ನೀರು ಕುಡಿಯುತ್ತವೆ. ಕವಿಗೋಷ್ಠಿಗಳಲ್ಲಿ ಅವರನ್ನು ನೋಡುವಾಗ ಎಲ್ಲಿಯಾದರೂ ಓಡಿಹೋಗಿ ಪ್ರಾಣರಕ್ಷಣೆ ಮಾಡಿಕೊಳ್ಳಬೇಕು ಎನಿಸುತ್ತದೆ.



ಆದರೆ, ಮಿತಿ ಎನ್ನುವುದು ಗುರುಗಣೇಶನಂಥವರ ರೂಪದಲ್ಲಿ ಇದ್ದೇ ಇರುತ್ತದೆ. 'ಇದುವರೆಗಿನ ಪ್ರಾಯ' ಎಂಬ ಕೃತಿ ಬಿಡುಗಡೆಯಾಗುವವರೆಗೆ ಆ ವ್ಯಕ್ತಿಯ, ಅವರಂತಹದೇ ಕವಿತೆಗಳ ಪರಿಚಯವಿರಲಿಲ್ಲ. ೨೩ರ ಪ್ರಾಯದ ಈ ಯುವಕ ಇಷ್ಟೆಲ್ಲಾ ಕಾವ್ಯ ಸಾಹಸಕ್ಕೆ ಇಳಿದು ಇದುವರೆಗಿನ ಹೆಚ್ಚು ಪ್ರಾಯದ ಕವಿಗಳೆನಿಸಿಕೊಂಡವರ ಕಣ್ಣು ತೆರೆಸಲು ಹೊರಟಿದ್ದಾರೆ.


ಇದುವರೆಗಿನ ಪ್ರಾಯವು ಕಾವ್ಯ ಶಿಸ್ತು ಮತ್ತು ಸೃಜನಶೀಲ ನೆಲೆಯಿಂದ ಹೆಚ್ಚು ಇಷ್ಟವಾದ ಕೃತಿ. 'ಕಾವ್ಯ ವೈಚಾರಿಕತೆ'ಯನ್ನು ಮುಗ್ಧತೆಯಿಂದ ಹೇಳಹೊರಡುವ ಅವರ ಕ್ರಮ ಆಹ್ಲಾದವನ್ನುಂಟುಮಾಡುವಂತಹದು.

ತಾಜಾತನ ಈ ಸಂಕಲನದ ಮುಖ್ಯ ಗುಣ. ನಿಸರ್ಗದ ಘಟಕಗಳನ್ನು ಕವಿತೆಯಾಗಿಸುತ್ತಾ ಚಂಗನೆ ಅವೇ ಘಟಕಗಳು personification ಆಗಿ ಜಿಗಿಯುವ ಮತ್ತು ಹೊಸ ಅರ್ಥವನ್ನು ಸೃಷ್ಟಿಸುವ ವಿಶಿಷ್ಟ ಶಕ್ತಿ ಕವಿತೆಗಳಲ್ಲಿವೆ.

ಸಂಜೆಹೊತ್ತಿನ ಹೊಳೆ
ನಿಧಾನ ನಿಧಾನವಾಗಿ ಹರಿಯುತ್ತದೆ

ಸ್ವಲ್ಪ ತಡವಾದರೆ
ಮಕ್ಕಳು ಕಿರುಚಿ ಅತ್ತು ಕಾದುಕಾದು
ನಿದ್ದೆಮಾಡಿ ಕೊನೆಗೆ
ಅವಳೂ ಬೈದು..

ಹೀಗೆ.
*


ಕವಿತೆಯನ್ನು ತೀವ್ರವಾಗಿ ಬಾಳುವವರಿಗೆ, ಈಗಾಗಲೇ ಇರುವ ಸವೆದ ದಾರಿಗಳನ್ನು ಬಿಟ್ಟು ಕವಿತೆಯ ನಡಿಗೆಯಲ್ಲಿ ಅನನ್ಯತೆಯನ್ನು ತರಲು ಬಯಸುವವರಿಗೆ, ಕವಿತೆಯ ಕುರಿತ ಜಿಜ್ಞಾಸೆಯು ತಮ್ಮದೇ ಕಾವ್ಯ ಮೀಮಾಂಸೆಯನ್ನು ಸೃಷ್ಟಿಸಬಯಸುತ್ತದೆ. ಆಗ ಹುಟ್ಟುವ ಕವಿತೆಗಳು ಕೊನೆಗೆ ಕಾವ್ಯಮೀಮಾಂಸೆಯನ್ನು ಮುಟ್ಟುತ್ತವೆ. ಗುರುಗಣೇಶರ ಅನೇಕ ಕವಿತೆಗಳಲ್ಲಿ ಈ ಬಗೆಯ ಜಿಜ್ಞಾಸೆಗಳಿವೆ:

ಕವಿ
ಅಂದರೆ
ಒಬ್ಬ ಮನುಷ್ಯ
*
ತೀವ್ರ ಸ್ಫೋಟ
ಜನ ಸಾಯಲಿಲ್ಲ
ಕವಿತೆ ಹುಟ್ಟಿತು
*
ಮೀನು ಈಜುವ ಮುನ್ನ
ನೀರು
ಎಲೆ ಚಿಗುರುವ ಮುನ್ನ
ಬೇರು
ಭಕ್ತ ಕೈಮುಗಿವ ಮುನ್ನ
ದೇವರು
ಬರೆಯುವ ಮುನ್ನ ಕವಿತೆ

ಇರುತ್ತದೆ
ಇರಬೇಕು
*
ಗುರುಗಣೇಶರ ಕವಿತೆಗಳಿಗೆ ಎ.ಕೆ.ರಾಮಾನುಜನ್ ಅವರ ಲಯ ಹಾಗೂ ಶಿಲ್ಪವಿದೆ. ಎಸ್. ದಿವಾಕರ್ ಅವರು ಸೃಷ್ಟಿಸುವ ಚಮತ್ಕಾರವಿದೆ. ಆದರೆ ಅವರು ಇದರ ಆಚೆಗೆ ತಮ್ಮದೇ ಆದ ಅಸ್ಮಿತೆಯನ್ನು ಸ್ಥಾಪಿಸಿದ್ದಾರೆ.


ನದಿ, ಬೆಟ್ಟ, ಆಕಾಶ, ಮಳೆ, ನಾಯಿ, ಬೆಕ್ಕು , ಮರ, ಬೀಜ, ಎಲೆ, ಅಮ್ಮ ಗಾಳಿ, ಮಣ್ಣು, ಹಕ್ಕಿ, ಮೀನು, ನೆಲ, ಇಂತಹ ಸಂಗತಿಗಳನ್ನು ಹೊಸ ದೃಷ್ಟಿಯಿಂದ ಕಾವ್ಯವನ್ನಾಗಿಸಿದ ಗುರುಗಣೇಶರ ಸಾಹಿತ್ಯಕ್ಕೆ ಒಳ್ಳೆಯ ಭವಿಷ್ಯವಿದೆ.
*


-ಕಾಜೂರು ಸತೀಶ್