ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, June 30, 2021

ಎಲೆ



ಪುಟ್ಟ ಮಗು ಬಲೂನು ಊದುವುದ ನೋಡಿರಬೇಕು
ಅಂತೆ ಗಾಳಿಯನ್ನೂದುತ್ತಿತ್ತು ಎಲೆ
ಈ ಶೂನ್ಯ ಈ ಜೀವ ತುಂತುಂಬಿಕೊಂಡು ಒಡೆಯುವ ಹಾಗೆ

ಎಲೆ ಊದಿ ತುಂಬಿಸಿದ ಗಾಳಿಯಲ್ಲಿ
ತೊಟ್ಟು ಕಳಚಿಕೊಂಡು
ತನ್ನ ಸಾವನ್ನು ಅತ್ತಿಂದಿತ್ತ ಇತ್ತಿಂದತ್ತ ಹಾರಾಡಿ ಸುಖಿಸುತ್ತಿತ್ತು.

ಎಲೆ ಹಿಡಿವ ಆಟವಾಡುವ ಮಕ್ಕಳು
ಓಡೋಡಿ ಹಿಡಿದರು

ಪುಟ್ಟ ಹಸ್ತಗಳಲ್ಲಿ ಸಾವಿಗೆ ಪುಳಕ.
*


ಕಾಜೂರು ಸತೀಶ್

Thursday, June 17, 2021

ಸೋಮಾರಿಗಳ ಸುಖ ಮತ್ತು...

ಸೋಮಾರಿಗಳು ಜೀವನದಲ್ಲಿ ಇತರರಿಗಿಂತ ಸುಖಿಗಳಾಗಿರುತ್ತಾರೆ. ಅವರು ಹಾಗೆ ಇರುವುದರಿಂದ ಅವರಿಗೆ ಕೆಲಸಗಳನ್ನು ಹಂಚಲಾಗುವುದಿಲ್ಲ. ಅವರ ಕೆಲಸಗಳೆಲ್ಲ ಮೈಮುರಿದು ದುಡಿಯುವವರ ಹೆಗಲಿಗೆ ಬೀಳುತ್ತವೆ.

ಇದನ್ನೇ ಬಂಡವಾಳ ಮಾಡಿಕೊಳ್ಳುವ ಸೋಮಾರಿಗಳು ತಮ್ಮ ವೈಯಕ್ತಿಕ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಅಲ್ಲಿ ಮೈಮುರಿದು ದುಡಿಯುತ್ತಾರೆ. ಹಣ, ಆಸ್ತಿ, ಆರೋಗ್ಯ ಅವರ ಪರವಾಗಿರುತ್ತದೆ. ಅವರ ಕುಟುಂಬ ಸುಖದಿಂದ ಕೂಡಿರುತ್ತದೆ.


ಇತ್ತ, ಅವರ ಕೆಲಸಗಳನ್ನೂ ಹೆಗಲಲ್ಲಿರಿಸಿ ದುಡಿಯುವ ಪ್ರಾಮಾಣಿಕ ವರ್ಗ( ಇವರ ಸಂಖ್ಯೆ ಅತ್ಯಂತ ವಿರಳ)ಕ್ಕೆ ಬಹುಬೇಗ ಕಾಯಿಲೆಗಳು ಬಾಧಿಸುತ್ತವೆ. ಅವರಿಗೆ ಕುಟುಂಬದ ತಿರಸ್ಕಾರದ ಮಾತುಗಳು ವರವಾಗಿ ಲಭಿಸುತ್ತದೆ. ಹಣ, ಆಸ್ತಿಗಳ ಗೊಡವೆಗೆ ಹೋಗದ ಇವರು ಬೇಗ ಮಣ್ಣುಸೇರುತ್ತಾರೆ.
*
ಸೋಮಾರಿತನ ಎನ್ನುವುದು ಭ್ರಷ್ಟನೊಬ್ಬನ ಮೊದಲ ಆಯುಧ. ಒಬ್ಬನನ್ನು ಕೆಲಸದಿಂದ ಕೈಬಿಟ್ಟಿದ್ದಾರೆ ಎಂದರೆ ಅವನೊಬ್ಬ ಕೆಟ್ಟ ಮನುಷ್ಯ ಆಗಿರುತ್ತಾನೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಅವರ ಕುರಿತು ಯಾರಲ್ಲೂ ಒಳ್ಳೆಯ ಅಭಿಪ್ರಾಯಗಳಿರುವುದಿಲ್ಲ. 'ಭೂಮಿಗೆ ಭಾರ' ಎಂಬ ಪದಪುಂಜಕ್ಕೆ ಅನ್ವರ್ಥವಾಗಿರುವವರಿವರು.


ಎಲ್ಲರ ಭಾರಗಳನ್ನು ಹೊರುವ ಮತ್ತೊಂದು ಗುಂಪಿದೆಯಲ್ಲಾ- ಅದು ಹಲವರ ಮನಸ್ಸುಗಳಲ್ಲಿ ,ನೆನಪುಗಳಲ್ಲಿ ಉಳಿಯುತ್ತದೆ. ಹೀಗೆ ಕೆಲಕಾಲ ಬದುಕಿ ಸಾಯುವುದು, ಹಲವರ ಒಳಗೆ ಮತ್ತೆಮತ್ತೆ ಹುಟ್ಟುವುದು ಶ್ರೇಷ್ಠ ಬದುಕು.

ಬೆರಳೆಣಿಕೆಯ ಈ ಸಂತತಿ ಸಾವಿರವಾಗಬೇಕು.

*


ಕಾಜೂರು ಸತೀಶ್



Sunday, June 13, 2021

ಸರಳ ಮತ್ತು ಸ್ಪಷ್ಟ ಶೈಲಿಯ ತಾಜಾ ಕಾವ್ಯ

ಲೇಖಕರೊಬ್ಬರ ಮೊದಲ ಕವನ ಸಂಕಲನ ಎಂದರೆ ಒಂದು ಬಗೆಯ ಕುತೂಹಲವಿರುತ್ತದೆ. ಅದು ಉತ್ತಮ ಕೃತಿಯಾಗಿದ್ದರೆ ಪ್ರಾಮಾಣಿಕ ಓದುಗರು ಅದರ ಕುರಿತು ಅಭಿಪ್ರಾಯ ತಿಳಿಸುತ್ತಾರೆ. ಒಂದಷ್ಟು ಮಂದಿಗೆ ಅದು ತಲುಪಲು ಕಾರಣವಾಗುತ್ತದೆ.

ದುರಂತ ಎಂದರೆ, ಅದರ ಕುರಿತು ಮಾತನಾಡುವ, ಚರ್ಚಿಸುವ ಅದೇ ತಲೆಮಾರಿನ ಸಂಖ್ಯೆ (ಹಂಚಿಕೊಳ್ಳುವ ಹಲವು ಸಾಧ್ಯತೆಗಳಿದ್ದಾಗಿಯೂ )ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತಿದೆ. Utility ತತ್ತ್ವ ಅವರನ್ನು ಹಲವು ಬಗೆಯಲ್ಲಿ ಬಂಧಿಸಿರುತ್ತದೆ. 'ಹೀಗೆ ಮಾಡಿದರೆ ನನಗೇನು ಲಾಭ' ಎಂಬ ಸಂಗತಿ. ಈ ಸಂಕಲನದ ಕುರಿತು ಬರೆದರೆ/ಹೇಳಿದರೆ ನನ್ನ ಸಂಕಲನದ ಕುರಿತು ಅವರು ಬರೆಯಬಹುದೇ? ಅಥವಾ ನಮ್ಮ ಪರಿಚಯ ಗಾಢವಾಗಬಹುದೇ? ಇತ್ಯಾದಿ

ಇರಲಿ!
*

ಈಚೆಗೆ ಮೌಲ್ಯ ಸ್ವಾಮಿ ಮತ್ತು ಗುರುಗಣೇಶರ ಕವಿತೆಗಳನ್ನು ಓದಿದಾಗ ಮೊದಲ ಸಂಕಲನದಲ್ಲೇ ಅವು ತೋರಿದ ಪ್ರೌಢಿಮೆ ಗಮನ ಸೆಳೆಯಿತು. ಈ ಎರಡು ಸಂಕಲನಗಳು ಪರಸ್ಪರ ವಿರುದ್ಧ ಧ್ರುವಗಳಲ್ಲಿದ್ದರೂ, ಹೊಸತನ್ನು ಆಳವಾಗಿ ಗಂಭೀರವಾಗಿ ಶೋಧಿಸಿ ಹೇಳುತ್ತವೆ.

ಮತ್ತೊಂದು ಸಂಕಲನ 'ಗಾಯಗೊಂಡವರಿಗೆ'. ಗಣಿತ ಶಿಕ್ಷಕಿ ಮಂಜುಳಾ ಹಿರೇಮಠ ಅವರ ಚೊಚ್ಚಿಲ ಸಂಕಲನ. ಸರಳತೆಯಲ್ಲಿ ಸರಳ ಅಭಿವ್ಯಕ್ತಿಯ ಮೂಲಕ ಹೊಸ ಅರ್ಥಗಳ ಅಲೆಯನ್ನು ಎಬ್ಬಿಸುವ ಅಪರೂಪದ ಸಂಕಲನ. (ಎಷ್ಟು ಮತ್ತು ಹೇಗೆ ಹೇಳಬೇಕೆನ್ನುವುದನ್ನು ಅವರು ಗಣಿತದಿಂದ ಕಲಿತ ಹಾಗೆ ಬರೆದಿದ್ದಾರೆ!)


ಹಕ್ಕಿ ಗೂಡುಕಟ್ಟಿ ಮೊಟ್ಟೆಯಿಟ್ಟು ಕಾವು ಕೂತು 'ತನ್ನ ಮರಿಗಳನ್ನು /ಆಕಾಶಕ್ಕೆ ಅರ್ಪಿಸುವುದು' ಎಂಬ ವಿಶಿಷ್ಟ ದರ್ಶನ ಮಾಡಿಸುವ 'ಹಕ್ಕಿ ಆಕಾಶದ್ದು' ಎಂಬ ನಿಲುವು ಝೆನ್, ತಾವೊ ಮಾದರಿಗಳ ಹಾಗೆ ಚಿಂತನಶೀಲ. ಹಾಗೆಯೇ,

ಮಳೆಯನ್ನು
ಹಾಡುವುದು ಎಂದರೆ
ಕೊನೆ- ಮೊದಲಿರದ
ಒಂದು ಹರಿವನ್ನು
ನುಡಿಸುವುದು ಎಂದರ್ಥ

ಮಳೆಯನ್ನು
ನುಡಿಸುವುದು ಎಂದರೆ
ಕತ್ತರಿಸಿಹೋದ ಬೆರಳುಗಳಿಂದ
ಆಕಾಶದ ವೀಣೆಯನ್ನು
ನೇವರಿಸುವುದು ಎಂದರ್ಥ
(ಒಂದು ಮಳೆಯನ್ನು ಏನೆಲ್ಲಾ ಮಾಡಬಹುದು)
🦅

ಈಗ ನನಗರ್ಥವಾಗತೊಡಗಿದೆ
ನಿನ್ನನು ಮರೆಯುವುದೆಂದರೆ ಅದು ಸಾವೆಂದು
ನಾನು, ನೀನು ಮಾತ್ರವೆಂದು
(ವಿಲೀನ)

philosophical ಸಂಗತಿಗಳನ್ನು ಇಷ್ಟು ಸರಳವಾಗಿ ಹೀಗೂ ಹೇಳಬಹುದು!
*
ಹಕ್ಕಿ-ಆಕಾಶ, ನೀನು-ನಾನು, ನೀವು-ಆಕೆ.. ಹೀಗೆ ಸಂಬಂಧಗಳನ್ನು ನಿಸರ್ಗದ ಭಾವಪರವಾದ ಸಂಗತಿಗಳೊಡನೆ ಕಲ್ಪಿಸುತ್ತಾ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಧ್ವನಿಯಲ್ಲಿ ಹೇಳುವ ಕವಿತೆಗಳಿವು. ಈ ರೂಪಕಗಳು ಪರಸ್ಪರ ಪೂರಕವಾಗಿ ಸಂಬಂಧಗಳನ್ನು ಕಲ್ಪಿಸುತ್ತವೆ.

'ಅಹಲ್ಯೆ' ಕವಿತೆ ಹೀಗಿದೆ:

ಜೊತೆಯಲ್ಲಿ
ಬಾಳುವೆ ಮಾಡುತ್ತಿರುವವಳನ್ನು
ಹೂವೆಂದು
ಮೊದಮೊದಲು ಭಾವಿಸುವರು
ಬರುಬರುತ್ತಾ
ಅವಳನ್ನೊಂದು
ಕಲ್ಲನ್ನಾಗಿ ಗಣಿಸುವರು.

ಅಲ್ಲದಿದ್ದರೂ
ಅಸಡ್ಡೆಯ
ನಿಂದನೆಯ
ಅಸಂಖ್ಯ
ಅನುಭವಗಳ ಮೂಲಕ
ಹಾದು ಹೋಗುವಾಗ
ಯಾವುದೇ ಹೂವು
ಕಲ್ಲಾಗಿ ಬಿಡುವುದು

ಅಹಲ್ಯೆ-ಹೂವು-ಕಲ್ಲು ಎಷ್ಟು ಅದ್ಭುತವಾಗಿ ಅರ್ಥಗಳನ್ನು ಮಿಂಚಿಸುತ್ತಿವೆ.

'ಹೆಬ್ಬಂಡೆ ಮೌನ' ಕವನದಲ್ಲಿ ನೀನು ಮತ್ತು ನಾನು- ಇವುಗಳ ಪ್ರೇಮದ ಹಂಬಲವು-

'ನೀನು' ಆಗಮನಕ್ಕೆ ಕಾಯುವಾಗ- 'ನಾನು' ಕೋಗಿಲೆ
ನೋಟಕ್ಕೆ ಕಾಯುವಾಗ- ಪಾರಿವಾಳ
ಸ್ಪರ್ಶಕ್ಕೆ ಯತ್ನಿಸುವಾಗ- ಬೆಟ್ಟದ ನವಿಲು
ಒಲವಿಗೆ ಪರಿತಪಿಸುವಾಗ- ಅರಗಿಣಿ

ಆಗಿದ್ದಾಗ

ಇವಳ ನಿವೇದನೆಗೆ ಸಿಗುವುದು ಅವನ ಹೆಬ್ಬಂಡೆ ಮೌನ.

ಆ ಮೌನ ಕರಗಿಸಲು ಬರುವ
'ಇವಳ' ಕೋಗಿಲೆಗೆ- 'ಅವನ' ಮತಧರ್ಮಗಳ ಛೂ ಬಿಡುವಿಕೆ
ಪಾರಿವಾಳಕ್ಕೆ- ನೀತಿ ನಿಯತಿಗಳ ಛೂ ಬಿಡುವಿಕೆ
ನವಿಲಿಗೆ- ಹೀನ ಕುಲೀನಗಳ ಛೂ
ಅರಗಿಣಿಗೆ- ಹತಾಶೆ ಹೇಡಿತನಗಳ ಛೂ


ಮುಂದಿನದು suppression . ಅವನ ಹೆಬ್ಬಂಡೆ ಮೌನವು
ಕೋಗಿಲೆ -ಹಾಡಿಲ್ಲ-ಕೊರಳು ಬಿಗಿದಿದೆ
ಪಾರಿವಾಳ- ಹಾರುವುದಿಲ್ಲ- ರೆಕ್ಕೆ ಮುರಿದಿದೆ
ನವಿಲು- ಕುಣಿಯುವುದಿಲ್ಲ- ಗರಿ ತರಿದಿದೆ
ಅರಗಿಣಿ - ಉಲಿಯುವುದಿಲ್ಲ- ಧ್ವನಿ ಉಡುಗಿಸಿದೆ

ಕಡೆಯ ಭಾಗದ ಹೋಲಿಕೆಗಳು-

ಕಣ್ಣಿಗೆ ತಂಪಾಗದ ಕುಸುಮ - ನಿಹಾರಿಕೆ
ದಾಹ ತಣಿಸದ ನದಿ- ಸಾಗರದ ಉಪ್ಪು ನೊರೆ
ನೆರಳು ಕೊಡದ ಮರ- ಅಗ್ನಿಮುಖ
ಮಹಾತ್ಮ- ಹಾಡು

ಹೀಗೆ ಹೇಳುತ್ತಾ ಪ್ರೀತಿಯನ್ನು ಉರಿದು ತೀರುವ ಮೇಣದ ಬತ್ತಿ ಎಂದು 'ಅದು ಇರುವಷ್ಟು ಕಾಲ ಮಾತ್ರ ಬೆಳಕು' ಎಂಬ ನಿಲುವನ್ನು ತಾಳುತ್ತದೆ .

ಈ ದೀರ್ಘ ಕವಿತೆಯಲ್ಲಿ ಸ್ಪಷ್ಟತೆ ಇದೆ. ಪ್ರತಿಮೆ- ರೂಪಕಗಳ ಚಕ್ರಗತಿಯ ಚಲನೆಯಿದೆ. ಹೆಣ್ಣಿನ ಪ್ರೀತಿಯ ಎದುರಿಗಿರುವ ಗಂಡಿನ ಪ್ರೀತಿಯನ್ನು ಮುಖಾಮುಖಿಯಾಗಿಸಿ ಆರ್ಭಟಿಸದೆ ಸರಳವಾಗಿ ಹೇಳಲಾಗಿದೆ.
*



ಮನುಷ್ಯನ ಗುಣಗಳನ್ನು ನಿಸರ್ಗದ ಅಂಶಗಳೊಂದಿಗೆ ಹೋಲಿಸುವ , ಸಂಬಂಧ ಕಲ್ಪಿಸುವ ಈ ಕ್ರಮದಲ್ಲಿ ಅಸಂಗತತೆಯೂ ಇದೆ

'ವಿರಾಮ' ಕವಿತೆಯಲ್ಲಿ

ಸಮುದ್ರ - ನೋವು
ಬಾಂದಳ- ತಿರಸ್ಕಾರ
ಹಾದಿ- ವೇಷ
ಕವಿತೆ-ಸಾವು

ಹೀಗೆ.

ಒಬ್ಬಂಟಿಯಾಗಿ
ಈಜಬೇಕಿರುವ ಸಮುದ್ರಗಳಿವೆ
ಯಾರೂ ಜೊತೆಗಿಲ್ಲದೆ
ಯಾವ ಅವಲಂಬನೆಯೂ ಇಲ್ಲದೆ

ಕೆಲ ನೋವುಗಳು ಅಂತೆಯೇ
ಹಂಚಿಕೊಳ್ಳಲು ಆಗುವುದಿಲ್ಲ
ಅನುಭವಿಸಲೇಬೇಕು
(ವಿರಾಮ)
*
ಹಳ್ಳಿಯ ಸಾಮಾನ್ಯ ಮಹಿಳೆಯೊಬ್ಬಳು ಹೇಳಿಕೊಳ್ಳುತ್ತಿರುವ ಕವಿತೆಗಳಂತಿರುವ ಇವು ಮೊಬೈಲ್ ಫೋನುಗಳು ಕಾಲಿಡುವುದಕ್ಕೂ ಹಿಂದಿನ ಕಾಲದ ಮುಗ್ಧತೆಯನ್ನು ಉಳಿಸಿಕೊಂಡಿವೆ. ಕೇವಲ ಗಂಡಿನ ಕೊರತೆಗಳನ್ನು ಶೋಧಿಸುವ, ಆಕ್ರೋಶ ವ್ಯಕ್ತಪಡಿಸುವ ಮಾದರಿಯಲ್ಲ ಇವು.

ಕಿರುಗುಟ್ಟಿದ ತೊಟ್ಟಿಲ ಸದ್ದಿಗೆ
ಎಚ್ಚೆತ್ತು ಬರುವಷ್ಟರಲ್ಲಿ
ರಚ್ಚೆ ಹಿಡಿದ ಮಗಳ
ಹಗುರವಾಗಿ ಮೇಲೆತ್ತಿ
ರಮಿಸಿ, ಮುತ್ತಿಟ್ಟು
ಎದೆಗೆ ಹಾಕಿ
ಹಾಲೂಡಿಸುತ್ತಾ
ಬರೆದ ಸಾಲುಗಳು
ಹೆಂಗಸರು ಬರೆದ ಪದ್ಯಗಳು
ಯಾವಾಗಲೂ
ಅಕ್ಕರೆಯನು ಜಿನುಗಿಸುತ್ತವೆ. (ಹೆಂಗಸರ ಪದ್ಯ)

ಇನ್ನೇನು ಪೂರ್ಣ ವಾಚ್ಯವಾಗಿಬಿಡಬೇಕು ಎನ್ನುವಷ್ಟರಲ್ಲಿ ಕೊನೆಯ ಸಾಲು mutation ಗೆ ಒಳಗಾಗಿ ಕವಿತೆಯ ಅರ್ಥ ಮತ್ತು ಲಯವನ್ನು ಬೇರೆ ಕಡೆಗೆ ಕೊಂಡೊಯ್ಯುತ್ತದೆ.

ಅಡುಗೆ ಮನೆಯ ಪ್ರಯೋಗಗಳು ಇದುವರೆಗೆ ಯಾರೂ ಬಳಸದ ಪದಾರ್ಥಗಳನ್ನು ಮತ್ತು ವಿಧಾನಗಳನ್ನು ಒಳಗೊಂಡಿವೆ:

ಕನಸುಗಳೇನಾದರೂ
ಬಾಕಿ ಉಳಿದಿದ್ದರೆ ಅವನ್ನು
ಸಣ್ಣದಾಗಿ ಹೆಚ್ಚಿ
ಆ ಕಣ್ಣೀರಿನಲ್ಲಿ ಹಾಕಿರಿ.

ಕೊನೆಗೊಮ್ಮೆ ಹದಕ್ಕೆ ಬಂದಾಗ
ಸಿಡಿದು ಬೀಳುವ ಕೆಲವು
ಪ್ರತಿಭಟನೆಯ ಸ್ವರಗಳು ಕೇಳಿರಬಹುದು
ಪರವಾಗಿಲ್ಲ
ಸ್ವಲ್ಪ ಹೊತ್ತು ಮುಚ್ಚಿಟ್ಟಿರಿ
(ಹೊಸ ರುಚಿಯ ಅಡುಗೆಗೊಂದು ಟಿಪ್ಪಣಿ)

*
ಮಂಜುಳಾ ಹಿರೇಮಠ ಅವರು ಗಂಡು-ಹೆಣ್ಣಿನ ಸಂಬಂಧ, ದಾಂಪತ್ಯದ ಬದುಕು- ಇವನ್ನು matured ಆದ ಕೋನದಲ್ಲಿ ಅಳೆಯುತ್ತಾರೆ. ಅದರ ವೈರುಧ್ಯವನ್ನೂ ಹುಸಿತನವನ್ನೂ ತೆರೆದಿಡುತ್ತಾರೆ. ಆದರ್ಶವನ್ನೂ.

ನಿನ್ನ ಮಂದಿರವ
ನೀ ಬಿಟ್ಟು ಬಾ
ನನ್ನ ಗೋಪುರವ
ನಾ ಬಿಟ್ಟು ಬರುವೆ

ನಿನ್ನೊಳಗಿನ ಬೇಹುಗಾರಿಕೆಯ
ಬಿಟ್ಟು ಬಾ
ನನ್ನೊಳಗಿನ ಶಂಕೆಗಳ
ಬಿಟ್ಟು ಬರುವೆ

ನೀನು ನೀನಾಗಿಯೇ
ನಾನು ನಾನಾಗಿಯೇ
ನಾವೆಂಬ ಪ್ರೇಮಕ್ಕೆ
ಪ್ರತಿಮೆಯಾಗೋಣ
(ಪ್ರತಿಮೆಯಾಗೋಣ ಬಾ)
*

ಸ್ವಾತಂತ್ರ್ಯಕ್ಕಾಗಿನ ಹಂಬಲ , ಪಡೆಯುವ ಸ್ವಾತಂತ್ರ್ಯವನ್ನು ಪ್ರಕೃತಿಯ ಸಹಜ ಚೆಲುವಿಕೆಗಳ ಜೊತೆ ಅನುಭವಿಸಬೇಕೆಂಬ ವಾಂಛೆ ಹಲವು ಕವಿತೆಗಳಲ್ಲಿವೆ:

ನಾನು ಬರೆಯುವಾಗಲೆಲ್ಲಾ
ಒಬ್ಬಳು ವಸಂತದೊಡನೆ
ಮಾತನಾಡುವ ಹಾಗೆ
ಕಣ್ಣುಗಳನ್ನು ಅರಳಿಸಿ
ನಾಸಿಕವನ್ನು ಮೇಲೇರಿಸಿ
ನನಗೊತ್ತರಿಸಿ ಕೂರುತ್ತಾಳೆ
ಅವಳ ಪ್ರೇಮದ ಹೊತ್ತಗೆಯನ್ನು
ತೆರೆದಿಡುತ್ತಾಳೆ
(ನಾನು ಬರೆಯುವಾಗ)

ಆಗಾಗ
ಅವಳ ಕನಸಿನಲ್ಲೊಂದು ಕೊಕ್ಕರೆ
ಅಪ್ಪಣೆ ಇಲ್ಲದೆ ಪ್ರವೇಶಿಸುತ್ತದೆ 
ಅವಳ ದೇಹ ಆಗ
ಮರಿಮೀನುಗಳು ಓಡಾಡುವ 
ಕಿರುತೊರೆಯಾಗುತ್ತದೆ
ಆ ಕಿರುತೊರೆಯಿಂದ
ಕುಣಿದು ಕುಪ್ಪಳಿಸುವ ಮೀನುಗಳನ್ನು 
ತನ್ನ ಉದ್ದದ ಚೂಪು ಕೊಕ್ಕಿನಿಂದ
ಕೊಕ್ಕರೆ ಕುಟುಕಿ ಕುಟುಕಿ ತೆಗೆಯುತ್ತದೆ 
ಬಳಿಕ ಹಾರಿ ಮರೆಯಾಗುತ್ತದೆ.
(ಮತ್ತೊಬ್ಬಳು)
*

ಮಂಜುಳಾ ಹಿರೇಮಠ ಅವರ ಸ್ತ್ರೀವಾದದ ಮಾದರಿ ಹೀಗಿದೆ:

ಅವಳ ಕಾವ್ಯದಲ್ಲಿ 
ಬಾಹ್ಯ ಪ್ರಪಂಚ ಇಲ್ಲವೆಂದು 
ಸಾರ್ವತ್ರಿಕ ವಸ್ತುಗಳಿಲ್ಲವೆಂದು
ಹೊರಗೆ
ಜನಜಂಗುಳಿಯಿಂದೊಬ್ಬ
ಪುರುಷ ವಿಮರ್ಶಿಸುವಾಗ
ಹೊರಗಿನಿಂದ ಈ ಬಾಗಿಲಿಗೆ 
ಬೀಗ ಜಡಿದವರು ಯಾರೆಂದು
ಒಳಗೆ ಕವಿಯೊಬ್ಬಳು
ಬಾಗಿಲನ್ನು ತಟ್ಟುತ್ತಿರುತ್ತಾಳೆ

ಕಾವ್ಯದೆಡೆಗೆ ಕವಿಯೊಬ್ಬ
ನಡೆವ ದೂರವಲ್ಲ
ಕವಿಯೊಬ್ಬಳು ನಡೆವ ದೂರ!
(ಕವಿಯೊಬ್ಬಳು ನಡೆವ ದೂರ)
*

ಏಕಾಗ್ರತೆಯೇ ಇಲ್ಲದ ಈ ಕಾಲದಲ್ಲಿ ಹಳೆಯ ಏಕಾಗ್ರತೆಯನ್ನು ಸೋರಿಹೋಗದ ಹಾಗೆ ನೋಡಿಕೊಂಡು ಹೊಸ ನುಡಿಗಟ್ಟಿನ ಅಪರೂಪದ ಕವಿತೆಗಳನ್ನು ಕೊಟ್ಟಿರುವ ಮಂಜುಳಾ ಹಿರೇಮಠ ಅವರಿಗೆ ಅಭಿನಂದನೆಗಳು.
*


ಕಾಜೂರು ಸತೀಶ್ 





Wednesday, June 9, 2021

ಶೋಷಣೆ

ಯಾವುದು ತಳದಲ್ಲಿರುತ್ತದೋ ಅದು ಎಲ್ಲ ಭಾರಗಳನ್ನೂ ಹೊರಬೇಕಾಗುತ್ತದೆ( 'ಭಾರ' ಎನ್ನುವುದರ ಒಳಗೇ ನೇತ್ಯಾತ್ಮಕವಾದ ಧ್ವನಿ ಇದೆ). ಉದಾಹರಣೆಗೆ - ಪಾದ, ಅದಕ್ಕೂ ತಳದಲ್ಲಿರುವ ಚಪ್ಪಲಿಗಳು, ಇನ್ನೂ ಕೆಳಗಿರುವ ಭೂಮಿ. ಅವುಗಳ ಅಭೂತಪೂರ್ವ ಸೇವೆಯ ನಡುವೆಯೂ ಅವು ತುಳಿಸಿಕೊಳ್ಳುತ್ತವೆ; ನಿಷೇಧಕ್ಕೊಳಪಡುತ್ತವೆ(ಹಾಗೆಂದು ಅವು ಹೇಳಿಕೊಳ್ಳುವುದಿಲ್ಲ, ಸಹಿಸಿಕೊಳ್ಳುತ್ತವೆ!).

ಕತ್ತಿನ ಭಾರವನ್ನು ಹೆಗಲಿಗೆ ವರ್ಗಾಯಿಸಬಹುದು. ಹೆಗಲಿನ ಭಾರವನ್ನು ತೋಳು, ಎದೆ, ಹೊಟ್ಟೆಗೆ ವರ್ಗಾಯಿಸಬಹುದು. ಆದರೆ ಕಾಲುಗಳ ಭಾರವನ್ನು ಶರೀರದ ಹೊರಗಿರುವ ಚಪ್ಪಲಿಗಳಿಗೆ ಅಥವಾ ನೆಲಕ್ಕೆ ವರ್ಗಾಯಿಸಬೇಕು.
*
ನಮ್ಮೆದುರಿಗಿರುವ ವ್ಯಕ್ತಿ ಪಾಪದವನಂತೆ ಕಂಡರೆ ನಮ್ಮ ದನಿ ಏರುತ್ತದೆ. ಏನೂ ಮಾತನಾಡದಿದ್ದರೂ ಮಾನಸಿಕವಾಗಿ , ಸಂವೇಗಾತ್ಮಕವಾಗಿ ನಾವು ಅವನನ್ನು ಶೋಷಿಸಲು ತೊಡಗುತ್ತೇವೆ. ನಮ್ಮ ಒಳಗೇ ಆ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಒಬ್ಬ ಶೋಷಿತ ತನಗಿಂತ ಅಮಾಯಕನಾದ ಮತ್ತೊಬ್ಬನನ್ನು ಶೋಷಿಸುತ್ತಾನೆ. ಅದಕ್ಕೆ ಜಾತಿ, ಧರ್ಮ, ಲಿಂಗ/ಜೆಂಡರ್, ಅಧಿಕಾರ, ಅಂತಸ್ತು , ವರ್ಣ, ನಿಲುವು, ವೃತ್ತಿ... ಇವೆಲ್ಲ ಮಾನಕಗಳಾಗುತ್ತವೆ.

ಒಂದನ್ನು ಒಂದು ಕೊಂದು, ತಿಂದು ಬದುಕುವ ಸೃಷ್ಟಿಯ ನಿಯಮದಂತಲ್ಲ ಇದು.
*


ಕಾಜೂರು ಸತೀಶ್