ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, April 12, 2017

ಎದೆಯೊಳಗಿಳಿವ ಪಿಸುಮಾತುಗಳು

ಈಗಾಗಲೇ ಕಣ್ಣೆವೆಯಲ್ಲಿನ ಚಿತ್ರಗಳು ಎಂಬ ಲೇಖನಗಳ ಗುಚ್ಛವನ್ನು ಹೊರತಂದು ಸಾಹಿತ್ಯ ವಲಯಕ್ಕೆ ಪರಿಚಿತರಾಗಿರುವ ಕೊಡಗು ಜಿಲ್ಲೆಯ ಕುಶಾಲನಗರದ ಸುನೀತಾ ಲೋಕೇಶ್ , ತಮ್ಮ ಲೋಕದ ಗ್ರಹಿಕೆಗಳನ್ನು ‘ಕಾವ್ಯ'ದ ಬಾಯಿ ತೊಡಿಸಿ ಪಿಸುನುಡಿಯುತ್ತಿದ್ದಾರೆ .


ಮೌನ ಸಂವಾದ ನಮಗೇಕೆ?
ನಮಗಾಗಿ ಪಿಸುಮಾತುಗಳಿಲ್ಲವೇ?

(ಮಂದಸ್ಮಿತಳಾಗಿ ಬಾ) ಎಂದು ಗೆಳತಿಯನ್ನು ಕರೆಯುವ ಹಾಗೆ ತಮ್ಮೊಳಗೆ ಹರಿಯುತ್ತಿರುವ ಪಿಸುಮಾತುಗಳನ್ನು ನಮಗೂ ಕೇಳಿಸುತ್ತಿದ್ದಾರೆ . ಅದು ಹಿಮನದಿಯ ಪಿಸುಮಾತು ಗಳಂತೆ ಕೇಳಿಸುತ್ತಿವೆ. ಆ ಹಿಮನದಿಗೆ ಒಮ್ಮೊಮ್ಮೆ ಘನೀಭವಿಸಿದ ಹಿಮದ ಕತ್ತಿಯಂಚು ಪ್ರಾಪ್ತವಾದರೆ, ಮತ್ತೊಮ್ಮೆ ಸ್ವಲ್ಪ _ ಸ್ವಲ್ಪವೇ ಕರಗಿ ತೊಟ್ಟಿಕ್ಕುವ , ತಣ್ಣಗೆ ಹರಿಯುವ ಸಂಭ್ರಮ. ಅದು ಅವರಿಂದ ಹಿತಮಿತದ ಇಂಪಾದ ,ಜೀವಪರ ಆಸ್ಥೆಯುಳ್ಳ ನುಡಿಗಳನ್ನಾಡಿಸುತ್ತದೆ.

ಮಬ್ಬು ಮುಸುಕುವುದು ನಿಜ
ಮೊಣಕೈಯ ತಿವಿದುಬಿಡು


ಇಳಿ ಸಮಯದ ಇರುಳಿಗೆ
ಹೆದರಿಸುವ ಎಡರುಗಲ್ಲುಗಳಿಲ್ಲ
ಕೆಕ್ಕರಿಸುವ ನೋಟ ಇಲ್ಲವೇ ಇಲ್ಲ

(ಮಂದಸ್ಮಿತಳಾಗಿ ಬಾ)

ಎರಡು ದಶಕಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ, ಪ್ರಾಮಾಣಿಕ ಸೇವೆಗೆ ಹೆಸರಾಗಿರುವ ಸುನೀತಾ ಲೋಕೇಶ್ ಅವರು, ಅಷ್ಟೇ ಪ್ರಾಮಾಣಿಕತೆಯಿಂದ ಕವಿತೆಗಳೊಂದಿಗೂ ಬಾಳುತ್ತಿರುವವರು. ಇಷ್ಟಾಗಿಯೂ ಕವಿತೆಗಳಿಂದ ಏನೇನನ್ನೋ ಸಾಧಿಸಬೇಕೆಂಬ, ಖ್ಯಾತಿ ಪಡೆಯಬೇಕೆಂಬ ಹಂಬಲ ಅವರಿಗೆ ಇದ್ದಂತಿಲ್ಲ . ಅದೊಂದು ಬಿಡುಗಡೆ ಅಷ್ಟೆ. ಕವಿತೆಯನ್ನು ಹೆರುವಾಗಲೆಲ್ಲ ಅವರು ಬಾಲ್ಯಕ್ಕೆ ಹಿಂತಿರುಗುತ್ತಾರೆ. ಆ ಮಗುತನ ಅವರನ್ನು ಬರೆಸುತ್ತದೆ. ಇರುವ ಮತ್ತು ಆಗಿಹೋಗಿರುವ ಕಾಲಗಳ ಜಿಜ್ಞಾಸೆ ಅವರ ಬಹುತೇಕ ಕವಿತೆಗಳಲ್ಲಿ ಕಾಣಸಿಗುತ್ತವೆ:

ಈಗ
ನಾಲ್ಕು ಬಾಹುಗಳ ಗಾಜ
ಪಂಜರದೊಳಗಿನ ಕಾಲವಾದರೂ
ಈ ಬಂಧನದಲೊಂದು ಚಂದವಿದೆ

(ಬಂಧಿ).


ಸುನೀತಾ ಲೋಕೇಶ್ ಅವರ ಕಾವ್ಯದ ಕೇಂದ್ರವನ್ನು ಗುರುತಿಸಬೇಕಾದದ್ದು ಇಕೊ - ಫೆಮಿನಿಸಂ ನೆಲೆಗಳಿಂದ. ಹೆಣ್ತನ ಮತ್ತು ಅದರ ಪಡಿಯಚ್ಚಿನಂತಿರುವ ನಿಸರ್ಗವನ್ನು ಕವಿತೆಗಳಲ್ಲಿ ತುಂಬಿಡುವುದು ಎಲ್ಲ ಕಾಲಕ್ಕೂ ಒಂದು ಸಾಮಾಜಿಕ , ಸಾಂಸ್ಕೃತಿಕ ಹೊಣೆಗಾರಿಕೆಯೇ ಆಗಿಬಿಡುತ್ತದೆ. ಓರ್ವ ಮಹಿಳೆ ತನ್ನ ಸಂಕಟಗಳನ್ನು , ಸಂಭ್ರಮಗಳನ್ನು ಅಭಿವ್ಯಕ್ತಿಸುವಾಗ ಅದಕ್ಕೆ ಲೋಕಾಂತದ ಆಯಾಮಗಳು ಸಹಜವಾಗಿಯೇ ಪ್ರಾಪ್ತವಾಗುತ್ತವೆ. ಈ ಸಾಲುಗಳು ಅದನ್ನು ಸಾಕ್ಷೀಕರಿಸುತ್ತವೆ:

ಪ್ರಕೃತಿಯೊಳಗೆ ಲೀನವಾದ ಮನ
ಪ್ರಫುಲ್ಲತೆಯಲಿ ತೇಲಲಿ

(ಆ ಮುಂಜಾನೆ)

ಮನದೊಳಗೆ ನದಿಯೊಂದು ಹರಿಯುತಾ ಕೇಳುತಿದೆ
ಬೊಗಸೆ ನೀರಿನೊಡನೆ ಚೆಲ್ಲಾಟವೇಕೆ?

(ಸಂಜೆಯೊಡನೆ ಪ್ರೇಮವೇಕೆ?)

ಬದುಕನಾವರಿಸಿದ ಗಿಡಮರಗಳೆಲ್ಲವೂ
ಬಾಡುತ್ತಿವೆ ಕಣ್ಣೀರಿನಲ್ಲಿ ನೆನೆಸಿದರೂ

(ಪರಾಧೀನ ಕಾಲ)

ಬಹುತೇಕ ಕವಿತೆಗಳಲ್ಲಿ ವಿಷಾದದ ಎಳೆಗಳು ಮಿಳಿತಗೊಂಡಿದ್ದರೂ , ನಮ್ರವಾದ ಪ್ರಾರ್ಥನೆ ಮತ್ತು ಮಹತ್ತಾದ ಆಶಯವೊಂದು ಮೈಪಡೆದು ಅದು ಕವಿತೆಗಳನ್ನು ಮಾನವೀಯಗೊಳಿಸುತ್ತದೆ:

ಉರಿದು ಹೊತ್ತೊಯ್ಯಿರಿ
ಮನದ ಮಲಿನಗಳನೂ

(ಪುಟ್ಟ ಮಣ್ಣ ಹಣತೆಗಳೇ)

ನನ್ನ ಅಳುವಿಗೆ ತಡೆಗೋಡೆಯಾಗಿ
ಕಣ್ಣ ವಹಿಯೊಳಗಿರಲಿ
ಭದ್ರವಾಗಿ

(ಆ ಹನಿ)

ಚುಚ್ಚು ನುಡಿ ದಾಟಿಗೆ
ಕಾಳ ನರ್ತನ ಮಾಡದಿರಲಿ ನಾಲಗೆ ...
ದ್ವೇಷಾಗ್ನಿಯನ್ನು ಮೌನದಲಿ ನಂದಿಸು

(ಮೌನಿಯಾಗು ಮನವೆ).

ಮೌಲ್ಯಗಳ ಪಲ್ಲಟ ಇಲ್ಲಿನ ಸುಮಾರು ಕವಿತೆಗಳ ಸರಕು. ಬಂಧಿ ಕವಿತೆಯು ಹೆಣ್ಣಿನ ವ್ಯಕ್ತಿ ಸ್ವಾತಂತ್ರ್ಯವೆಂಬ ಹಿಮದ ಜಾರುವಿಕೆಯು ಭೂತಕ್ಕಿಂತ ವರ್ತಮಾನದಲ್ಲಿಯೇ ಸುಂದರವಾಗಿದೆ ಎಂದು ವ್ಯಂಗ್ಯಾತ್ಮಕವಾಗಿ ಒಪ್ಪಿಕೊಳ್ಳುತ್ತದೆ:

ಕೆಂಪು ಹರಳಿನೋಲೆ
ಎರಡೆಳೆಯ ದೊಡ್ಡ ಮಾಂಗಲ್ಯ
ಝರಿ ಬಾರ್ಡರಿನ ರೇಷ್ಮೆ ಸೀರೆ
ಕುಂಕುಮ ಹಣೆಗೇರಿ
ಗಣಕ ಯಂತ್ರದ ಕೈಚಳಕದಿ
ಬಯಕೆಗಳೆಲ್ಲವೂ ಈಡೇರಿದೆ


ಹಿಮನದಿಯ ಪಿಸುಮಾತುಗಳಲ್ಲಿ ಗಾಢವಾಗಿ ತಟ್ಟುವುದು ಸಂಜೆಯೊಡನೆ ಪ್ರೇಮವೇಕೆ?, ಪುಟ್ಟ ಮಣ್ಣ ಹಣತೆಗಳೇ, ಪ್ರಣಯ ಮಳೆ, ಪರಾಧೀನ ಕಾಲ, ಆ ಹನಿ, ಮನಸಿನ ಹೊಸ್ತಿಲಲೆ, ನನ್ನೂರಿನ ಬಸ್ಸು, ಒಣಮರದೊಡತಿ ಮುಂತಾದವು. ಇವೆಲ್ಲಾ _ ಕವಯಿತ್ರಿಗೆ ಕವಿತೆಯ ಕುರಿತು ಇರುವ ಆಳವಾದ ಅರಿವನ್ನು ಪ್ರತಿನಿಧಿಸುತ್ತವೆ. ಮೃದುವಾದ ಮಾತು , ಹದವಾದ ಭಾಷೆ, ಭಿನ್ನವಾದ ಇಮೇಜುಗಳು ಅವರ ಕಾವ್ಯಪ್ರಜ್ಞೆಯನ್ನು ಸಾರುತ್ತವೆ. ನನ್ನೂರಿನ ಬಸ್ಸು ಕವಿತೆಯ ಈ ಸಾಲುಗಳನ್ನೇ ಗಮನಿಸಿ :

ಬಸ್ಸು ದೂರ ಸಾಗಿದೆ
ಅದರ ಬಣ್ಣ ಮಾಸುತ್ತಿದೆಯೇ ?
ಮತ್ತೀಗ ಕಾಣುತ್ತಿರುವುದು ಮರವೊಂದೆ
ಕಹಿಸತ್ಯ ಬಚ್ಚಿಟ್ಟ ಮರ
ನಿದ್ದೆಗೆ ಜಾರಿದೆ




ಸುನೀತಾ ಇಲ್ಲಿ ಕಟ್ಟಿಕೊಡುವ ಹೆಣ್ಣಿನ ಜಗತ್ತು ಯಾತನಾಮಯವಾದದ್ದು. ಕೌಟುಂಬಿಕ ಹಿಂಸೆ , ಅತ್ಯಾಚಾರದ ಕರಾಳತೆಯನ್ನು ಕವಿತೆಗಳಲ್ಲಿ ತುಂಬುತ್ತಲೇ
ಗಾಳಿ ನೀರು ಇಹದಷ್ಟು ಅನಿವಾರ್ಯ / ಈ ನನ್ನ ಸಖಿಯರು ಎನ್ನುತ್ತಾರೆ . ಆದರೆ, ಜ್ಞಾನ ಪರಂಪರೆಯ ಮಹಿಳಾ ಕಾವ್ಯದ ನೆಲೆಗಳಿಗಿಂತ ಭಿನ್ನವಾಗಿ ತಮ್ಮ ಕಾವ್ಯದ ಅಸ್ಮಿತೆಯನ್ನು ಕಂಡುಕೊಳ್ಳುವ ಮಾದರಿಗಳು ಇಲ್ಲಿ ಕಾಣಿಸುವುದಿಲ್ಲ. ಸಮಾಜಮುಖಿ ನಿಲುವುಗಳು ಕಾವ್ಯದಲ್ಲಿ ಇಣುಕುವಾಗಲೆಲ್ಲ ಅವುಗಳಿಗೆ ಬಂಡಾಯದ ಲೇಪನವಿದ್ದರೂ, ತೆಳುಪದರದ ಕಾವ್ಯಾನುಭವವನ್ನು ಪಡೆಯುವ ಅಪಾಯವನ್ನೂ ಎದುರಿಸುತ್ತವೆ(ನನ್ನ ಸಖಿಯರು, ಅಶ್ರುತರ್ಪಣ , ಅಕ್ಷಯ ಪಾತ್ರೆ, ಪೌರುಷ, ಚಿಂತೆಯ ಗೆರೆಗಳ ಮೇಲೆ)


ಭಿನ್ನ ಅಭಿರುಚಿಯ ಕೊಡಗಿನಲ್ಲಿ ಸಾಹಿತ್ಯ ಕೃತಿಯೊಂದು ಬಿಡುಗಡೆಗೆ ಸಿದ್ಧವಾಗಿದೆಯೆಂದರೆ ಅದೊಂದು ವಿಶೇಷವಾದ ಸಂಗತಿ; ಸಂಭ್ರಮ. ಅದರಲ್ಲೂ ಮಹಿಳಾ ಕಾವ್ಯದ ಧಾರೆ ಇಲ್ಲಿ ಭಿನ್ನವಾಗಿ ಹರಿಯುತ್ತಿರುವುದು ಸಂತೋಷದ ವಿಚಾರ. ಸುನೀತಾ ಅವರ ಈ ಕೃತಿ ಹೊರಬರುತ್ತಿರುವುದು ನಮಗೆಲ್ಲಾ ಸಂಭ್ರಮಿಸುವ ಸಂಗತಿಯೇ ಸರಿ.

ತಮ್ಮ ಮಿತಿಗಳನ್ನು ಮೀರುವ, ನಿರ್ವಹಿಸುವ ಸಾಮರ್ಥ್ಯ ಸುನೀತಾ ಲೋಕೇಶ್ ಅವರ ಕವಿತೆಗಳಿಗೆ ಇದ್ದೇ ಇದೆ . ಅದು _ ಮಾತಿನ ಮಿತವ್ಯಯದಿಂದ, ಪ್ರತೀಕಗಳಿಂದ ಗಟ್ಟಿಗೊಂಡು, ಆಶಯದಲ್ಲಿ ಸಾಧಿಸಿದ ಪ್ರಬುದ್ಧತೆಯನ್ನು ಅಭಿವ್ಯಕ್ತಿಯಲ್ಲೂ ಸಾಧಿಸಿದಾಗ ಹೊಸನೆಲೆಗಳನ್ನು ಮುಟ್ಟುತ್ತದೆ. ಅವರ ಕಾವ್ಯ ಜೀವನವು ಸದಾ ಬೆಳಗುತ್ತಿರಲೆಂದು ಅತ್ಯಂತ ಕಿರಿಯವನಾಗಿ ಪ್ರೀತಿಯಿಂದ ಆಶಿಸುತ್ತೇನೆ.
*

ಕಾಜೂರು ಸತೀಶ್
sathishkajooru@gmail.com