ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, August 21, 2019

ವಾಲ್ಟರ್ ಹಿಲರಿ ಡಿಮೆಲ್ಲೊ- ಅಭಿವೃದ್ಧಿಯ ಹರಿಕಾರ


ವಾಲ್ಟರ್ ಹಿಲರಿ ಡಿಮೆಲ್ಲೊ ಸರ್ ಡಯಟ್ ಕೂಡಿಗೆಗೆ ಬಂದ ಮೊದಲ ವಾರದಲ್ಲಿ ಅವರ ಮಾತನ್ನು ಕೇಳಿಸಿಕೊಂಡಿದ್ದೆ. 'ನನ್ನ ಅಪ್ಪ ಕಲಿತ ಸಂಸ್ಥೆ' ಎಂದು ಅಭಿಮಾನದಿಂದ ಹೇಳಿಕೊಳ್ಳುವಾಗ ಅದರಲ್ಲಿ 'ಅದನ್ನು ಹೀಗೆ ಇಟ್ಟುಕೊಂಡಿದ್ದೀರಲ್ಲ' ಎನ್ನುವ ಕೊರಗೂ ಕಾಣಿಸುತ್ತಿತ್ತು.


ಆಮೇಲೆ ಅವರು DIETನ ಸ್ವರೂಪವನ್ನೇ ಬದಲಿಸಿಬಿಟ್ಟರು.  ಸುಣ್ಣ-ಬಣ್ಣ ಬಳಿದು ಬಾಹ್ಯ ರೂಪವನ್ನು ಚಂದಗಾಣಿಸುವಂತೆ ಮಾಡಿದ್ದಷ್ಟೇ ಅಲ್ಲ, ಅದಕ್ಕೂ ಮಿಗಿಲಾಗಿ DIETನ (ಮತ್ತು ಜಿಲ್ಲೆಯ) ಆಂತರಿಕ ಸ್ವರೂಪವನ್ನೇ ಬದಲಿಸಿಬಿಟ್ಟರು. ಸ್ವತಃ ತಾವೇ ಮೊದಲು ಕಚೇರಿಗೆ ಬರುವುದು, ಗಿಡಗಳಿಗೆ ನೀರುಹಾಕಿಸುವುದರಿಂದ ಅವರ ಕಚೇರಿಯ ಕೆಲಸಗಳು ಮೊದಲ್ಗೊಳ್ಳುತ್ತಿದ್ದವು. ಅವರ ಕೆಲಸಕ್ಕೆ ಹಗಲು-ರಾತ್ರಿಗಳ ಹಂಗಿರಲಿಲ್ಲ. 

ಅವರೊಬ್ಬ ಪಕ್ಕಾ ಡೆಮಾಕ್ರಟಿಕ್. ನಗುನಗುತ್ತಲೇ ಕೆಲಸವನ್ನು ಪೂರೈಸಿಕೊಳ್ಳುವವರು. ಪ್ರೇರಣಾದಾಯಕವಾಗಿ ಮತ್ತು ಖಡಕ್ಕಾಗಿ ಮಾತನಾಡಿ ಸೋಮಾರಿಗಳನ್ನೂ ಕೆಲಸ ಮಾಡುವಂತೆ ಮಾಡಬಲ್ಲವರು. ಕೆಲಸದ ವಿಷಯದಲ್ಲಿ ಅವರು ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ.

 DDPI(development ) ಮತ್ತು DIET ಪ್ರಾಂಶುಪಾಲರಾಗಿದ್ದ ಅವರನ್ನು ನೋಡಿ ಯಾರೂ ಭಯಪಡುತ್ತಿರುಲಿಲ್ಲ; ಬದಲಾಗಿ ಅವರ ಕರ್ತವ್ಯ ಪ್ರಜ್ಞೆ ಮತ್ತು ಅವರ ಮೇಲಿನ ಗೌರವ ಉಳಿದವರನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಪ್ರೇರೇಪಿಸುತ್ತಿತ್ತು.

ಅಪಘಾತವಾಗಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಇವರು ಮರುದಿನವೇ  ಕರ್ತವ್ಯಕ್ಕೆ ಹಾಜರಾಗಿದ್ದರು!
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅವರು ಶ್ರಮಿಸಿದ ಪರಿ ಅದ್ಭುತ. ಚುನಾವಣಾ ಸಂದರ್ಭದಲ್ಲಿಯೂ ಅವರ ಸೇವೆ ಅನನ್ಯ.

ಇವರ ನೇತೃತ್ವದಲ್ಲಿ ಎಷ್ಟೋ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಒಮ್ಮೆಯೂ ನಮ್ಮನ್ನು ಉಪವಾಸವಿರಿಸಿ ದಿನವಿಡೀ ಸಭೆ ಮಾಡಿದವರಲ್ಲ. ಅವರ ಖಚಿತ ನಿಲುವು, ನುಡಿದಂತೆ ನಡೆಯುವ ಬದುಕು ನಮ್ಮೆಲ್ಲರಿಗೂ ಸದಾ ಮಾದರಿ. 

ಈಗ ಅವರ ಅನುಪಸ್ಥಿತಿ ನಮ್ಮನ್ನು ತೀವ್ರವಾಗಿ  ಕಾಡುತ್ತಿದೆ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಗೆಯ ಶೈಕ್ಷಣಿಕ ಸಂಚಲನ ಮೂಡಿಸಿದ ವಾಲ್ಟರ್ ಹೆಚ್ ಡಿಮೆಲ್ಲೊ ಸರ್ ಈಗ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡು ತೆರಳಿದ್ದಾರೆ. 

ಶರಣು ಸರ್ ನಿಮ್ಮ ಕರ್ತವ್ಯ ಪ್ರಜ್ಞೆಗೆ, ಮಾನವೀಯತೆಗೆ, ಅಪಾರ ಉತ್ಸಾಹಕ್ಕೆ.

*

ಕಾಜೂರು ಸತೀಶ್ 

Tuesday, August 13, 2019

ನಾನೊಬ್ಬ ಮನುಷ್ಯ ಕಣ್ರೀ!

ಈ Whatsapp ಹುಟ್ಟಿಬಂದ ತಕ್ಷಣ ಅದನ್ನು ಒಳಗೆ ಸೇರಿಸಿಕೊಂಡಿದ್ದೆ. ಆದರೆ, ಯಾವಾಗಲಾದರೊಮ್ಮೆ ಅಂತರ್ಜಾಲದ ಸಂಪರ್ಕ ಸಿಕ್ಕಾಗ ಬರಬರನೆ ಸಾವಿರಾರು ಸಂದೇಶಗಳು ಒಮ್ಮೆಲೇ ಬಂದು ಮೊಬೈಲನ್ನು ನಿದ್ರಾವಸ್ಥೆಗೆ ದೂಡುತ್ತಿದ್ದವು.

ಆಮೇಲಾಮೇಲೆ ಅದೊಂದು ತಲೆನೋವಿನ ಸಂಗತಿಯಾಗಿ ಮೊಬೈಲೆಂಬೋ ಮನೆಯಿಂದ ಬಲವಂತವಾಗಿ ಆಚೆ ತಳ್ಳಿದ್ದೆ.

ಬದುಕು ಅಷ್ಟು ಸುಲಭವಲ್ಲ ನೋಡಿ-
ಯಾವುದು ಹಿಂಸಿಸುತ್ತದೋ, ಯಾವ ಕೆಲಸ ನಮಗೆ ಇಷ್ಟವಿಲ್ಲವೋ ಅಂತಹ ಕೆಲಸಗಳನ್ನೇ ಮಾಡಲಿಕ್ಕೆಂದು ಬದುಕಿರುವವರು ನಾವು( ಈ ಹೊಟ್ಟೆ ಅನ್ನೋದಿದೆಯಲ್ಲಾ, ಹಾಳಾದ್ದು!).

ಹಾಗಾಗಿ ದಿನದ ಸರಿಸುಮಾರು 18 ಗಂಟೆಗಳ ಕಾಲ ಅದರೊಳಗೆ 'ಬರ್ರೋ' ಸುರಿಯುವ ಪ್ರವಾಹದಲ್ಲಿ ತೇಲುತ್ತಾ ಮುಳುಗುತ್ತಾ ಸಾವಿನ ದವಡೆಯಿಂದ(ದವಡೆಗಿಂತ ಕೋರೆ ಸಮಂಜಸವೇನೊ!!) ಪಾರಾಗುತ್ತಿದ್ದೇನೆ.

ನನಗೂ ಆಟ ಆಡಬೇಕೆನಿಸುತ್ತದೆ, ಕಾಡು-ಮೇಡು ಅಲೆಯಬೇಕೆನಿಸುತ್ತದೆ, ಕತ್ತಿ-ಗುದ್ದಲಿ-ಹಾರೆ ಹಿಡಿದು ಒಂದಷ್ಟು ಕೆಲಸ ಮಾಡಬೇಕೆನಿಸುತ್ತದೆ.

Dear whatsapp, please ,believe me, I'm a human being!
*


ಕಾಜೂರು ಸತೀಶ್

Monday, August 12, 2019

ಕೇಶವ ಪೆರಾಜೆ ಮೇಷ್ಟ್ರು ಮತ್ತು ಅಳಿಯದ ನೆನಪುಗಳು

ಪುಟ್ಟ ದೇಹ,ನೀಟಾಗಿ ಶೇವ್ ಮಾಡಿದ ಮುಖ, ತೋಳಿಗೆ ಆತುಕೊಂಡಿರುವ ಮಗುವಿನಂಥ ಬ್ಯಾಗು, ತಾಂಬೂಲ ಜಗಿದು ಕೆಂಪಗಾದ ಬಾಯಿ, ದಕ್ಷಿಣ ಕನ್ನಡದ ಕಂಪುಳ್ಳ ಕನ್ನಡ... ಇವು ಕೇಶವ ಪೆರಾಜೆ ಮೇಷ್ಟ್ರ  ಬಾಹ್ಯ ಚಹರೆಗಳು.
*

ಆ ಮುಖವನ್ನು ಮೊದಲು ನೋಡಿದ್ದು ನಾನು ಒಂದನೇ ತರಗತಿಯಲ್ಲಿದ್ದಾಗ. ಅದೇ ಶಾಲೆಯಲ್ಲಿ ನನ್ನಣ್ಣ, ಅಕ್ಕನಿಗೆ ಅವರು ಕಲಿಸುತ್ತಿದ್ದುದರಿಂದ ಅವರ ಕುರಿತ ವರದಿಗಳು ನನಗೆ ಆಗಾಗ ಲಭಿಸುತ್ತಿದ್ದವು.

ಆ ಊರಿನಿಂದ ಮತ್ತೊಂದು ಊರಿಗೆ ನಾನು ಬಂದ ಮೇಲೆ, ಮತ್ತೆಂದೂ ಅವರ ದರ್ಶನವಾಗಿರಲಿಲ್ಲ. ಆಮೇಲೆ ಅವರ ದರ್ಶನವಾದದ್ದು 2006ರ ನವೆಂಬರ್ 29ಕ್ಕೆ. 
*


ನಾನು ಮಡಿಕೇರಿ ತಾಲೂಕಿನಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಮೇಷ್ಟ್ರಿಗೆ ನನ್ನ ಪರಿಚಯ ಹೇಳಿಕೊಂಡೆ. ಆಮೇಲೆ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ನಾವಿಬ್ಬರು ಭೇಟಿಯಾಗುತ್ತಿದ್ದೆವು. ಕೊಡಗಿನ ಈ ತಲೆಮಾರಿನ ಬರವಣಿಗೆ ಕ್ರಮದ ಬಗ್ಗೆ ಅವರಿಗೆ ತೀವ್ರ ಅಸಮಾಧಾನವಿತ್ತು.

*

ಒಮ್ಮೆ 'ಬಾ ಟೀ ಕುಡಿಯೋಣ' ಎಂದು ಮಡಿಕೇರಿಯ ಹೋಟೆಲೊಂದಕ್ಕೆ ಕರೆದುಕೊಂಡು ಹೋದರು. ಹಣ ಕೊಡಲು ಬಿಡಲಿಲ್ಲ. ನೋಟನ್ನು ತೋರಬೆರಳು ಮತ್ತು ಮಧ್ಯಬೆರಳಿನ ನಡುವೆ ಸಿಕ್ಕಿಸಿಕೊಂಡು ಕೊಟ್ಟರು. 'ಹೀಗೆ ಕೊಡೋದಾದ್ರೆ ದುಡ್ಡೇ ಬೇಡ...ಹೀಗೆ ಹಣಕೊಟ್ಟು ನಮ್ಮ ವ್ಯಾಪಾರಕ್ಕೆ ಕಲ್ಲುಹಾಕಬೇಡಿ' ಎಂದ ಆತ(ಆ ಅಹಂಕಾರಕ್ಕೋ ಏನೋ ಈಗ ಆ ಹೋಟೆಲ್ ಮುಚ್ಚಿದೆ!). ಮೇಷ್ಟ್ರು ಏನೂ ಹೇಳದೆ ಹೊರಗೆ ಬಂದ ಮೇಲೆ 'ಹಣ ಹೇಗೆ ಕೊಟ್ಟರೇನು ಅವನಿಗೆ ಬೇಕಾದ್ದು ಹಣ ತಾನೆ?' ಎನ್ನುತ್ತಾ ಆ ಹೋಟೆಲಿನವ ತೋರಿದ ದರ್ಪದ ನಿಜವಾದ ಕಾರಣವನ್ನು ಬಿಚ್ಚಿಟ್ಟರು.

*
ನಗರ ಸಭೆ ಚುನಾವಣೆ. ಅವರ ತಂಡದಲ್ಲಿ ನಾನೂ ಇದ್ದೆ. ಅಂದು ಭಾನುವಾರವಾದ್ದರಿಂದ ಹೋಟೆಲುಗಳು ಮುಚ್ಚಿದ್ದವು. ಇಡೀ ದಿನ ಉಪವಾಸವಿದ್ದು ಕೆಲಸ ಮಾಡಬೇಕಿತ್ತು. ಮೇಷ್ಟ್ರು ಮನೆಗೆ ಕರೆ ಮಾಡಿ ಅಲ್ಲಿದ್ದವರ ಊಟ-ಉಪಚಾರವನ್ನು ತಾವೇ ಮಾಡಿದ್ದರು.
*

 ತಮ್ಮ ಪುತ್ರ ಸುಧಾಮ ಸಂತ ಮೈಕಲರ ಶಾಲೆಯಲ್ಲಿದ್ದಾಗ ನನಗೆ ಪರಿಚಯಿಸಿದ್ದರು. ಮಡಿಕೇರಿಯಲ್ಲಿ ಸಿಕ್ಕಾಗಲೆಲ್ಲ ಮನೆಗೆ ಕರೆಯುತ್ತಿದ್ದರು. ಬಿಡುವಾದಾಗ ಬರುತ್ತೇನೆ ಎಂದು ಹೇಳುತ್ತಲೇ ವರುಷಗಳನ್ನು ನೂಕಿದೆ.
*

ಮಕ್ಕಳಿಗಾಗಿ ಒಂದೆರಡು ಪುಸ್ತಕಗಳನ್ನು ಬರೆಯುತ್ತಿದ್ದೇನೆ ಎಂದಿದ್ದರು. ಯಕ್ಷಗಾನದ ಕುರಿತು ಸ್ವಲ್ಪ ಬರೆದಿಟ್ಟಿದ್ದೇನೆ, ಅದನ್ನು ಪೂರ್ಣಗೊಳಿಸಬೇಕು ಎನ್ನುತ್ತಿದ್ದರು.
*
ನಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಒಂದು ವರ್ಷ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದ್ದರು. 'ಅಲ್ಲಿನ ಕರಾಳ ನೆನಪುಗಳನ್ನು ನಾನು ಮರೆಯುವುದಿಲ್ಲ' ಎನ್ನುತ್ತಿದ್ದರು. 'ಬೇಗ ಅಲ್ಲಿಂದ ತಪ್ಪಿಸಿಕೊಂಡು ಬಾ' ಎಂದು ನನಗೆ ಹೇಳುತ್ತಿದ್ದರು.
*

ಯಾವ ಸಾಹಿತ್ಯ ಕಾರ್ಯಕ್ರಮವಿರಲಿ ಅಲ್ಲಿ ಅವರ ಹಾಜರಾತಿ ಇರುತ್ತಿತ್ತು. ಅವರು ಸದಾ ಕಲೆ-ಸಾಹಿತ್ಯದ ಧ್ಯಾನದಲ್ಲೇ ಇರುತ್ತಿದ್ದರು.
*

'ಸುಧಾಮನಿಗೆ ಮದುವೆಯಾಯಿತು ಹೇಳಲು ಆಗಲಿಲ್ಲ'ಎಂದು ಆ ವೃತ್ತಾಂತವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು. ತಮ್ಮ ತಾಯಿ ತೀರಿಕೊಂಡಾಗ ಬಾಲ್ಯದ ದಾರುಣ ಜೀವನದ ಕುರಿತು ಕೆಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದರು. 
*

ನನ್ನ ಪುಸ್ತಕಗಳನ್ನು ಕೇಳುತ್ತಲೇ ಇದ್ದರು. ಬೈಸಿಕೊಳ್ಳುವುದು ಬೇಡ ಎಂದೇ ನಾನವರಿಗೆ ಕೊಟ್ಟಿರಲಿಲ್ಲ. ಒಮ್ಮೆಯೂ ತಮ್ಮ ಅನಾರೋಗ್ಯದ ಕುರಿತು ಅವರು ಮಾತನಾಡಿರಲಿಲ್ಲ. 'ಮಾಧವ ಹೇಗೆ ಇಂಗ್ಲೀಷ್ ಕಲಿತ ಅಂತ್ಲೇ ಗೊತ್ತಿಲ್ಲ' ಎಂದು  ತಮ್ಮ ಸಹೋದರ ಡಾ. ಮಾಧವ ಪೆರಾಜೆ(ಹಂಪಿ ವಿವಿ ಪ್ರಾಧ್ಯಾಪಕ ) ಅವರ ಬಗ್ಗೆ ಹೇಳುತ್ತಿದ್ದರು.
*

'ಒಮ್ಮೆ ನಾವೆಲ್ಲಾ ಸೇರಬೇಕು, ತುಂಬಾ ಮಾತನಾಡಬೇಕು' ಎನ್ನುತ್ತಿದ್ದರು. 'Facebookನಲ್ಲಿ ನೋಡುತ್ತೇನೆ, ನನಗೆ ಅಷ್ಟಾಗಿ ಗೊತ್ತಿಲ್ಲ, ಮಗ ಹೇಳಿಕೊಡುತ್ತಾನೆ'ಎನ್ನುವಾಗ ಮಗುತನವಿರುತ್ತಿತ್ತು ಅವರ ಮಾತಿನಲ್ಲಿ.
*
ಅವರು ಯಾರೊಂದಿಗೂ ಶತ್ರುತ್ವವನ್ನು ಕಾಯ್ದುಕೊಂಡಿರಲಿಲ್ಲ. ಯಾರಾದರೂ ಬೈದರೂ ಸುಮ್ಮನಿರುತ್ತಿದ್ದರು. ಆದರೆ ಅವರ ಒಳಗೆ ವ್ಯವಸ್ಥೆಯ ಕುರಿತ ಆಕ್ರೋಶಗಳು ತಣ್ಣಗೆ ಬೇಯುತ್ತಿದ್ದವು!
*
ಅವರಿಗೆ ತುಳುವಿನ ಬಗ್ಗೆ ಅಪಾರ ವ್ಯಾಮೋಹ. 'ಎಷ್ಟು ಕೆಟ್ಟದಾಗಿ ಈ ಜನ ತುಳು ಮಾತಾಡ್ತಾರೆ'ಎಂದು ಬೇಸರಿಸುತ್ತಿದ್ದರು. ಕಾರ್ಯಕ್ರಮಗಳಲ್ಲಿ 'ಈ ಒಂದು' ಎಂದು ಭಾಷಣಕಾರರು ಮತ್ತೆ ಮತ್ತೆ ಹೇಳುವಾಗ 'ಎಷ್ಟು ಅಸಹ್ಯ ಭಾಷೆ' ಎನ್ನುತ್ತಿದ್ದರು. ನಮ್ಮ ಮಾತು-ಕತೆಗಳೆಲ್ಲ ರಸ್ತೆಬದಿಯಲ್ಲಿಯೇ 'ನಡೆಯು'ತ್ತಿದ್ದವು! 

ನಾನು ಅಲ್ಲಿಂದ ವರ್ಗಾವಣೆಗೊಂಡು ಇಲ್ಲಿಗೆ  ಬಂದ ಮೇಲೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.
*
ಜನವರಿ 31. ಅಂದು ರೇಡಿಯೋ ಕೇಳಿ ದಂಗಾದೆ. ಮೇಷ್ಟ್ರು ತೀರಿಕೊಂಡ ಸುದ್ದಿ ನಂಬಲಾಗಲಿಲ್ಲ. ಈಗಲೂ ನಂಬಲಾಗುತ್ತಿಲ್ಲ.ಕುಳಿತಿದ್ದವರು ಎದ್ದು ನಡೆದುಹೋದ ಹಾಗೆ ಹೋಗಿಬಿಟ್ಟರು ಅವರು.
*

ಪೆರಾಜೆಗೆ ಹೋದಾಗ ಅವರ ಮನೆ ಹುಡುಕಿಕೊಂಡು ಹೋಗಿ ಸಿಗದೆ ಹಿಂತಿರುಗಿದ್ದೆ.
*
ಮೇಷ್ಟ್ರ ಜೊತೆಗಿನ ಒಡನಾಟದ ನೆನಪುಗಳು ಎಂದೂ ಅಳಿಯಲಾರವು.

*

ಕಾಜೂರು ಸತೀಶ್