ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, August 15, 2018

ಒಂಟಿತನ ಮತ್ತು ಸೃಜನಶೀಲತೆಯ ಸಾವು

ಮೊನ್ನೆ ಹೀಗೇ ದಿನವಿಡೀ ಕಚೇರಿಯಲ್ಲಿ ಕುಳಿತು ಲೆಕ್ಕಾಚಾರಗಳ ಜೊತೆ ಗಂಟುಮುಖ ಮಾಡಿಕೊಂಡು ಕುಳಿತಿದ್ದೆ. ತಾಲೂಕು ಕೇಂದ್ರ; ಸಂತೆಯ ದಿನ; ಎಷ್ಟೊಂದು ಜನರು! ನನಗೋ- ವಿಪರೀತ ಒಂಟಿತನ. ಹತ್ತನ್ನೊಂದು ವರ್ಷ ಒಬ್ಬನೇ ಇದ್ದರೂ ಕಾಡದ ಒಂಟಿತನವದು.

ಹಾಗೆ ನೋಡಿದರೆ, ಕಳೆದ ಹನ್ನೊಂದು ವರ್ಷ ನನ್ನನ್ನೆಂದೂ ಒಂಟಿತನ ಕಾಡಿಸಲಿಲ್ಲ. ದಿನಗಳು ಯಾಕಿಷ್ಟು ಬೇಗ ಸರಿದು ಹೋಗುತ್ತಿವೆ ಎಂದು ವ್ಯಥೆಪಡುತ್ತಿದ್ದೆ! ನನ್ನೊಳಗೆ ನೂರಾರು ಮಂದಿ ಇರುತ್ತಿದ್ದರು. ಒಬ್ಬ ಸೃಜನಶೀಲವಾಗಿ ಬಡವಾದರೆ ಮತ್ತೊಬ್ಬ ಜೀವಂತವಾಗುತ್ತಿದ್ದ. ಒಂದು ಕೂಡುಕುಟುಂಬವದು! ಅವರೆಲ್ಲರೂ ಬಡಕಲಾದಾಗ ಹೊರಗಿನ ಗೆಳೆಯರ ಜೊತೆ ಪೆದ್ದುಪೆದ್ದಾಗಿ ಎಸ್ಸೆಮ್ಮೆಸ್ಸುಗಳಲ್ಲಿ ಬದುಕಿಕೊಳ್ಳುತ್ತಿದ್ದೆ. 

ಮೊನ್ನೆ ಕಾಡಿದ ಏಕಾಂತ ನನ್ನನ್ನು ದಿಗಿಲಿಗೆ ಹಚ್ಚಿದೆ. ಅದು ನನ್ನ ಸೃಜನಶೀಲತೆಯ ಸೋಲು;ಸಾವು!  ಅಂಕಿ-ಸಂಖ್ಯೆಯ ಬದುಕು, ಮುಖವಾಡ ಧರಿಸಿದ ಲೋಕ ಒಳಗನ್ನು ಆಕ್ರಮಿಸಿಬಿಡುತ್ತದೆ. ನಿಜಕ್ಕೂ ಮನುಷ್ಯ ಒಂಟಿಯಾಗುವುದು ಆಗ. ಅದು ಸಂತೆಯಲ್ಲಾದರೂ ಸರಿ!
*

-ಕಾಜೂರು ಸತೀಶ್ 

Tuesday, August 14, 2018

ಕೋರಿಕೆ

ಕಳೆದುಹೋದ ನನ್ನ ಪರ್ಸಿನಲ್ಲಿ
'ನಾನು' ಎಂದರೆ ನನ್ನ ಹೆಸರು
ಅದ ಹೊತ್ತ ಗುರುತಿನ ಚೀಟಿ

ಬೇರೆ ದೇಶಗಳ
ಬಗೆಬಗೆಯ ಕರೆನ್ಸಿ ನೋಟುಗಳು

ಮದುವೆಯಾಗಿ ಹೋದ
ನನ್ನ ಪ್ರೇಯಸಿಯರ ಬಣ್ಣದ ಭಾವಚಿತ್ರ

ಏನೇನೋ ತುಂಬಿಕೊಂಡು
ಉಬ್ಬಿಕೊಂಡ ವಿಸಿಟಿಂಗ್ ಕಾರ್ಡು

ಮಾವೋತ್ಸೆ ತುಂಗನ ಚಿತ್ರವಿರುವ
ಎರಡು ರೂ. ಅಂಚೆಚೀಟಿ

ಮಾವಿನ ಮರಕ್ಕೆ ನೇಣುಬಿಗಿದು ಸತ್ತ
ಸಹೋದರಿಯ ಕಿವಿಯೋಲೆ

ಅಸ್ತಮಾದ ಮಾತ್ರೆ
ರಕ್ತಪರೀಕ್ಷೆಯ ನೆಗೆಟಿವ್ ರಿಪೋರ್ಟ್

ಇವಿಷ್ಟೇ ಆಗಿದ್ದಿದ್ದರೆ
ತೊಡೆಗಳ ನಡುವೆ ಕೈಯಿಟ್ಟು ಗೊರಕೆ ಹೊಡೆಯುತ್ತಿದ್ದೆ

ಆದರೆ
ಪ್ರಿಯ ಸಹೋದರಾ
ಕಪ್ಪು ಶಾಯಿಯ ನನ್ನ ಕೆಂಪು ಕವಿತೆಯನ್ನು
ದಯವಿಟ್ಟು ಓದಿ ಹಿಂತಿರುಗಿಸಿಬಿಡು.
*
ಮಲಯಾಳಂ ಮೂಲ- ಪ್ರಮೋದ್ ಕೆ.ಎಂ


ಕನ್ನಡಕ್ಕೆ - ಕಾಜೂರು ಸತೀಶ್


ಪರಿಚಯ : ಪ್ರಮೋದ್ ಕೆ.ಎಂ. (1982)

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕಡೂರು ಇವರ ಹುಟ್ಟೂರು. ರಸಾಯನಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್(ದಕ್ಷಿಣ ಕೊರಿಯಾ) ಪಡೆದಿರುವ ಇವರು ಈಗ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಪ್ರಮಾದಂ’ ಬ್ಲಾಗ್ ಬರವಣಿಗೆಯ ಮೂಲಕ ಹೊಸ ಬಗೆಯ ಕವಿತೆಗಳಿಗೆ ಚಾಲನೆ ನೀಡಿ ಮನೆಮಾತಾದ ಪ್ರಮೋದ್ ಅವರ ಮೊದಲ ಕವನ ಸಂಕಲನ ‘ಅಡಿಯಂದಿರಾವಸ್ಥ ನಷ್ಟಪ್ಪೆಡುತ್ತಿಯ ಆರು ವರ್ಷಂಗಳ್’(2009). ಈ ಸಂಕಲನವು ವಿ.ಟಿ. ಕುಮಾರನ್ ಮಾಸ್ಟರ್ ಸ್ಮಾರಕ ಪ್ರಶಸ್ತಿ, ನವಮಲಯಾಳಿ ಯುವ ಪ್ರಶಸ್ತಿ ಮತ್ತಿತರ ಗೌರವಗಳನ್ನು ಪಡೆದಿದೆ.

Monday, August 13, 2018

ಅನಿಸುತಿದೆ

ಅಮ್ಮನಮ್ಮ ‘ಅಮ್ಮಮ್ಮ’ ಹೋಗೇಬಿಟ್ಳು .

ಎಷ್ಟೋ ಕಾಲ ಅಪ್ಕೊಂಡಿದ್ರೂನೂ
ಇನ್ನೂ ಸ್ವಲ್ಪ ಹೊತ್ತು ಜೊತೆಗಿರ್ಬೇಕಿತ್ತು ಅನ್ನಿಸ್ತಿದೆ
ದೂರ ಪ್ರಯಾಣಕ್ಕೆ ಅಂತ ನಾನು ಹೊರಟು ನಿಂತಾಗ್ಲೆಲ್ಲ
ಅವಳ ಕಣ್ಣಿಂದ ತಪ್ಪಿಸಿಕೊಳ್ಳದೇ ಉಳಿದುಬಿಡುವ
ದುಂಡುಹನಿಗಳ ಹಾಗೆ .

ಎಷ್ಟೋ ಕಾಲ ಮಾತಾಡಿದ್ರೂನೂ
ಇನ್ನೂ ಸ್ವಲ್ಪ ಹೊತ್ತು ಮಾತಾಡ್ಬೇಕಿತ್ತು ಅನ್ನಿಸ್ತಿದೆ
ಮನೆ, ಅಂಗಳ, ಸುತ್ತಮುತ್ತೆಲ್ಲ ಗುಡಿಸಿಯಾದ್ಮೇಲೆ
ಗುಡಿಸಿದ್ದಲ್ಲೇ ಮತ್ತೆ ಮತ್ತೆ ಗುಡಿಸ್ಕೊಂಡು ಬರೋ ಹಾಗೆ .

ಎಷ್ಟೋ ಸಲ ಮುತ್ತು ಕೊಟ್ಟಿದ್ರೂನೂ
ಮತ್ತೊಂದ್ಸಲ ಸಿಹಿಮುತ್ತು ಕೊಡ್ಬೇಕಿತ್ತೂಂತ ಅನ್ನಿಸ್ತಿದೆ
‘ಸಾಕೂ .. ಸಾಕೂ ...’ ಅಂದ್ರೂ ಅಮ್ಮಮ್ಮ ಬಡಿಸಿಕೊಡೋ
ಒಂದು ಚಮಚ ಸಿಹಿಸಿಹಿ ಪಾಯಸದ ಹಾಗೆ .

ಇನ್ನೂ ಸ್ವಲ್ಪ ಹೊತ್ತು ಜೊತೆಗಿದ್ಕೊಂಡು
ಅಮ್ಮಮ್ಮನ ನೆನಪುಗಳ್ನೆಲ್ಲ ಹೀರಬಹುದಿತ್ತೂಂತ ಅನ್ನಿಸ್ತಿದೆ
ಎಷ್ಟೋ ಹೊತ್ತು ನೀರಲ್ಲಿ ನೆನೆಸಿಟ್ಟಾಗ ಮಾತ್ರ
ಕತ್ತರಿಸ್ಲಿಕ್ಕೆ ಸಾಧ್ಯವಾಗೋ ಅವಳ ಉಗುರುಗಳ ಹಾಗೆ .

ಕೈಬೆರಳಿಟ್ಟು ಪಿಚಕ್ಕಂತ ಅವಳು ಉಗುಳೋ ಶೈಲಿ
‘ಜಟ್ಟ್ ಜಟ್ಟ್ ’ ಅಂತ ಅಡಿಕೆ ಜಜ್ಜೋ ಕಲ್ಲು
ನಿಂತೇ ನಿಂತ ಒನಕೆಗಳ ಹಾಗೆ
ಅಮ್ಮಮ್ಮನಿಲ್ಲ ದ ಮನೆಯಲ್ಲಿ
ಉಳಿದವ್ರ್ಯಾರೂ ಬಳಸದ ಮಾತು ,
ಬೈಗುಳ, ತುಂಟತನ ...
ಎಲ್ಲಾನೂ ಮತ್ತೆ ಕೇಳ್ಬೇಕೂಂತ ಅನ್ನಿಸ್ತಿದೆ
ಮತ್ತೆ ಮತ್ತೆ ನೋಡ್ಬೇಕು ಅಂತ್ಲೂ .

ಅಮ್ಮಮ್ಮನ ಕುರಿತು ಎಷ್ಟು ಬರ್ದಿದ್ರೂನೂ
ಮತ್ತೊಂದು ಕವಿತೆನಾದ್ರೂ ಬರೀಬಹುದಿತ್ತು ಅನ್ನಿಸ್ತಿದೆ
ತೀರಿಹೋದವ್ರ ಬಗ್ಗೆ ಅವ್ಳು ಹೇಳ್ತಿದ್ದ ಕತೆಗಳ ಹಾಗೆ .
*

ಮಲಯಾಳಂ ಮೂಲ - ಪ್ರಮೋದ್ ಕೆ.ಎಂ


ಕನ್ನಡಕ್ಕೆ - ಕಾಜೂರು ಸತೀಶ್

Thursday, August 2, 2018

ಅಂತರ್ಜಾಲ ಬಳಕೆ: ಓದು ಮತ್ತು ಬರಹದ ಸಾಧ್ಯತೆಗಳು

ಈಚೆಗೆ ನಡೆದ ಸಾಹಿತ್ಯ ಸಂವಾದವೊಂದರಲ್ಲಿ ‘ನಮಗೇಕೆ ಇಂದು ನಮ್ಮ ಪೂರ್ವಿಕರಂತೆ ಮಹಾಕಾವ್ಯಗಳನ್ನೂ, ದಟ್ಟ ಜೀವನಾನುಭವವುಳ್ಳ ಕಾದಂಬರಿಗಳನ್ನೂ ಬರೆಯಲಾಗುತ್ತಿಲ್ಲ?’ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ‘ಇಂದಿನ ಒತ್ತಡದ ಸನ್ನಿವೇಶದಲ್ಲಿ ನಾವು ಬರೆಯುತ್ತಿರುವುದೇ ಮಹತ್ಕಾರ್ಯ. ನಮಗೆ ಆಗಿನ ಸಮಚಿತ್ತತೆ ಇಲ್ಲ, ಅಂತಹ ಸ್ಥಿತಿಯ ನಿರ್ಮಾಣವೂ ಇಂದು ಅಸಾಧ್ಯ’, ತಣ್ಣಗೆ ಉತ್ತರಿಸಿದ್ದರು ತರುಣ ಪೀಳಿಗೆಯ ಲೇಖಕರು.

ಇಂದು ಅಂತರ್ಜಾಲ ಸರ್ವವ್ಯಾಪಿಯಾಗಿ ಅಭಿವ್ಯಕ್ತಿಯ ಸಾಧ್ಯತೆಗಳು ವ್ಯಾಪಕವಾಗಿವೆ. ನಮ್ಮ ಅಭಿವ್ಯಕ್ತಿಗೆ ದೊಂದು ಒಳ್ಳೆಯ ಮಾಧ್ಯಮ. ಆದರೆ, ಪ್ರತಿಯೊಬ್ಬರೂ ಸ್ವಘೋಷಿತ ಕವಿಗಳಾಗುವ/ ವರದಿಗಾರರಾಗುವ ಅವಕಾಶವನ್ನು ಅದು ಕಲ್ಪಿಸಿದೆ. ಒಂದು ಕವಿತೆ/ವರದಿಯ ‘ಹೆರಿಗೆ’ ನಡೆಯುತ್ತಿರುವಾಗಲೇ ನಡುನಡುವೆ ನುಸುಳುವ ನೋಟಿಫಿಕೇಷನ್‍ಗಳು ಈ ಕಾರ್ಯವು ಸುಸೂತ್ರವಾಗಿ ನಡೆಯುವುದನ್ನು ತಡೆಯುತ್ತದೆ. ಇಂತಹ ಧಾವಂತದ, ಧ್ಯಾನ ತಪ್ಪಿದ ಅಭಿವ್ಯಕ್ತಿ ಕ್ರಮ ಮತ್ತು ಅವುಗಳ ಸ್ವೀಕರಣದ ನಡುವೆ ನಾವಿದ್ದೇವೆ.

‘ಓದು’ ಮತ್ತು ‘ಬರಹ’ ತಾಳ್ಮೆಯನ್ನು ಬೇಡುವ ಪ್ರಕ್ರಿಯೆ. ಅದೊಂದು ಧ್ಯಾನ. ಏಕೆಂದರೆ ಧ್ಯಾನಸ್ಥವಾಗಿ ಹುಟ್ಟುವ ಬರಹಕ್ಕೆ ಇಳಿಯುವುದಕ್ಕೂ ಓದುಗನಿಗೆ ಧ್ಯಾನಸ್ಥ ಮನಸ್ಥಿತಿ ಬೇಕಾಗುತ್ತದೆ. ಬರಹಗಾರರ ಮನೋವಲಯದೊಳಕ್ಕೆ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ. ಅಂಥದ್ದರಲ್ಲಿ ಆನ್‍ಲೈನ್‍ನಲ್ಲಿದ್ದುಕೊಂಡೇ ಓದುತ್ತಿದ್ದೇವೆ ಮತ್ತು ಬರೆಯುತ್ತಿದ್ದೇವೆ ಎಂಬ ತರುಣ ಪೀಳಿಗೆಯ ಮಾತೇ ವಿಚಿತ್ರವೆನಿಸುತ್ತದೆ. ಈ ಹೊತ್ತಿನಲ್ಲೂ ತರುಣರು ಓದು ಮತ್ತು ಬರಹಕ್ಕೆ ಚಾಚಿಕೊಳ್ಳುತ್ತಿದ್ದಾರಲ್ಲಾ ಎಂಬುದು ಖುಷಿ ಕೊಡುವ ಸಂಗತಿಯಾದರೂ, ಸದ್ಯ ಅವು ಯಾವ ನೆಲೆಯಲ್ಲಿ ಏರ್ಪಡುತ್ತಿವೆ ಎನ್ನುವುದೂ ಇದರಿಂದ ಸ್ಪಷ್ಟವಾಗುತ್ತಿದೆ.

ಬೆಳಿಗ್ಗೆ ಎದ್ದಾಕ್ಷಣ ನಾವು ಅಂತರ್ಜಾಲ ಪತ್ರಿಕೆಗಳ ಮೊರೆಹೋಗುತ್ತೇವೆ. ಅದು ಕೇವಲ ಮುಖ್ಯಾಂಶಗಳ ಓದಿಗಷ್ಟೇ ಸೀಮಿತವಾಗಿರುತ್ತದೆ. ಗಂಭೀರವಾದ ಲೇಖನಗಳನ್ನು ಅನುಭವಿಸಲು ಒಂದೋ ಆಫ್‍ಲೈನಿನಲ್ಲಿ ಅಥವಾ ಪತ್ರಿಕೆಯನ್ನೇ ಕೊಂಡು ಓದಬೇಕಾಗುತ್ತದೆ. ಎಷ್ಟೆಷ್ಟೋ ಮಹತ್ವದ ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿರುವುದು ಒಳ್ಳೆಯ ಬೆಳವಣಿಗೆಯಾದರೂ, ಪುಸ್ತಕವನ್ನು ಕೈಗೆತ್ತಿಕೊಂಡು ಓದುವಾಗಿನ ಸುಖ, ರಸಾಸ್ವಾದ ಅಲ್ಲಿ ಸಾಧ್ಯವಾಗುವುದಿಲ್ಲ.

ಸಾಹಿತ್ಯ ಕೃತಿಗಳ ಪ್ರಕಟಣೆ ಮತ್ತು ಓದು ಇವತ್ತು ವಿಚಿತ್ರ ಸ್ಥಿತಿಯನ್ನು ತಲುಪಿಬಿಟ್ಟಿದೆ. ಬರೆಯುವವರೆಲ್ಲರೂ ಪುಸ್ತಕ ಪ್ರಕಟಣೆಯತ್ತ ಹೊರಳುತ್ತಿದ್ದಾರೆ. ಅದನ್ನು ಓದುವವರಾದರೂ ಯಾರು? ‘ನಾನೂ ಬರೆಯುತ್ತೇನೆ ನೀನೂ ಬರೆಯುತ್ತೀಯ ನಾವಿಬ್ಬರೂ ಓದಿಕೊಳ್ಳೋಣ’ ಎಂದು ಪರಸ್ಪರ ಹಂಚಿಕೊಂಡು ಓದಿಕೊಳ್ಳುವಲ್ಲಿಗೇ ಇದು ನಿಂತುಬಿಡುತ್ತಿದೆಯೋ ಏನೋ. ಅದರಲ್ಲೂ ಸುಲಭಕ್ಕೆ ಸಿಗುವ ಪ್ರಕಾರ ಕಾವ್ಯ. ಹೀಗಾಗಿಯೇ ಕವಿತೆಗಳನ್ನು ಪ್ರಕಟಿಸಲು ಪ್ರಕಾಶಕರು ಹಿಂದೇಟು ಹಾಕುತ್ತಿರುವುದು.

ಅಂತರ್ಜಾಲವು ಅನೇಕ ಗುಂಪುಗಳಲ್ಲಿ ಜನರನ್ನು ಸಂಘಟಿಸುತ್ತಿದೆ(ಒಡೆಯತ್ತಲೂ ಇದೆ!). ಆ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಅಂತರ್ಜಾಲವು ನಮ್ಮ ನಮ್ಮ ಮನೆಭಾಷೆಗಳಲ್ಲಿ ಸಾಹಿತ್ಯವನ್ನು ಬರೆಯುವ ಮತ್ತು ಓದುವ ಅವಕಾಶವನ್ನು ಹೆಚ್ಚು ಹೆಚ್ಚು ಕರುಣಿಸಿದೆ. ಮೊಬೈಲ್ ಫೋನ್ ಈ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಡುತ್ತಿದೆ. ಪುಸ್ತಕ ಪರಾಮರ್ಶೆಗೂ ಇರುವ ದಾರಿಗಳನ್ನು ಅತ್ಯಂತ ಸುಲಭವಾಗಿಸಿದೆ. ಗ್ರಂಥಾಲಯಕ್ಕೆ ಭೇಟಿ ಕೊಡುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಗ್ರಂಥಾಲಯವೂ ‘ಡಿಜಟಲೀಕರಣ’ಕ್ಕೊಳಪಡುವ ಹಂತದಲ್ಲಿದೆ.

ಸಾಹಿತ್ಯಿಕ ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ‘ಲೈಕು’ಗಳು ಭ್ರಮೆಗಳನ್ನು ಬಿತ್ತುತ್ತಿವೆ. ಅದು ಕಳಪೆ ಸಾಹಿತ್ಯದ ಹುಟ್ಟಿಗೂ ಕಾರಣವಾಗುತ್ತಿದೆ. ‘ಬ್ಲಾಗ್’ ಬರವಣಿಗೆಯ ಕಾಲದಲ್ಲಿ ಸಾಹಿತ್ಯದ ಗಂಭೀರ ಓದು ಮತ್ತು ಬರವಣಿಗೆ ಸಾಧ್ಯವಾಗಿತ್ತು. ಕ್ರಮೇಣ ಈ ವ್ಯವಧಾನ ಕಡಿಮೆಯಾಗಿ ಫೇಸ್ಬುಕ್, ವಾಟ್ಸಾಪ್‍ಗಳಂಥ ಜಾಲತಾಣಗಳ ಕಡೆಗೆ ಆಸಕ್ತಿ ಹೊರಳಿತು. ಸದ್ಯದ ಮಟ್ಟಿಗೆ ಅದು ‘ಓದುವಿಕೆ’ಯಿಂದ ‘ನೋಡುವಿಕೆ’ಯ ಕಡೆಗೆ ಜಿಗಿಯುತ್ತಿದೆ. ಚಿತ್ರ ಮತ್ತು ವೀಡಿಯೋ ಕ್ಲಿಪ್‍ಗಳೇ ಅಕ್ಷರಗಳ ಕತ್ತು ಹಿಸುಕಿ ಮೇಲ್ಪಂಕ್ತಿಗೆ ಬರಲಾರಂಭಿಸಿವೆ.

ನಾವೆಲ್ಲಾ ಅಂತರ್ಜಾಲಕ್ಕೆ ದಾಸರಾಗಿಬಿಟ್ಟಿದ್ದೇವೆ. ದಿನಕ್ಕೆ ಒಂದೆರಡು ಗಂಟೆಗಳ ಏಕಾಂತವಾದರೂ ನಮಗೆ ಅಗತ್ಯವಾಗಿದೆ. ಅಂತಹ ಸ್ಥಿತಿಯಲ್ಲಿಯೇ ನಾವು ಓದು, ಬರಹ ಮುಂತಾದ ಸೃಜನಶೀಲ ಚಟುವಟಿಕೆಗಳಿಗೆ ಒಡ್ಡಿಕೊಳ್ಳಬೇಕಿದೆ. ಆ ಮೂಲಕ ನಮ್ಮತನವನ್ನು ಕಂಡುಕೊಳ್ಳಬೇಕಿದೆ.
*

ಕಾಜೂರು ಸತೀಶ್