ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, March 31, 2021

ಖಡ್ಗದ ಹೂವು



ಯಾರೋ ಅಡಗಿಸಿಟ್ಟ
ಈ ಖಡ್ಗವ ಹಾಗೇ ಹಿಡಿದು ನಿಲ್ಲು
ಅದರ ಹೊಕ್ಕುಳ ಹೊಳಪಲ್ಲಿ
ಮುಖ ನೋಡಿಕೊಳ್ಳಬೇಕಿದೆ

ಸ್ವಲ್ಪ ಓರೆ
ಅದರ ಚೂಪು ತುದಿಯನ್ನಿತ್ತ ತಾ
ಹುಬ್ಬು ಕಣ್ರೆಪ್ಪೆಗಳ ತೀಡಿ
ಬಿಲ್ಲೊಂದ ಕಟ್ಟಬೇಕು ಸ್ವಯಂವರಕ್ಕೆ

ನೋಡು
ಕೋಗಿಲೆಯ ಹಾಡು
ದಾಟುತಿದೆ ಅದರ ಮೈಮುಟ್ಟಿಕೊಂಡೇ
ಹರಿತದಂಚಿನ ತುಟಿಯಲ್ಲಿ
ಗಾಯಗೊಳ್ಳದ ಇರುವೆಯ ನಡಿಗೆ

ಮುಖಕ್ಕೆ ಸವರು
ಯೌವ್ವನದ ಮೊಡವೆಯ ಮೋಡ ತಾಗಲು
ಕರಗಿ ನಿನ್ನ ಖಡ್ಗವ ಮೀಯಿಸಿ
ಕೆಂಪು ಹೂವಾಗಿಸುವುದು

ಕೊಡು ಈಗ
ಖಡ್ಗದ ಹೂವ
ನಿನಗೆ
ಮು
ಡಿ
ಸಿ
ಬಿ
ಡು
ವೆ.
*




ಕಾಜೂರು ಸತೀಶ್ 

ಮರೆತುಬಿಟ್ಟೆ


ಕಿಟಕಿ ಮುಚ್ಚಿ
ಬಾಗಿಲು ಹಾಕಿ
ಹೊರಟುಬಂದೆ.

ದೀಪ ಹಚ್ಚಲು
ಗೋಡೆಯನ್ನೇ ದಿಟ್ಟಿಸಲು
ನೆಲ_ಕಣ್ಣುಗಳನ್ನು ಒರೆಸಲು
ಕರವಸ್ತ್ರ ಒಗೆಯಲು
ಒಲೆ ಹಚ್ಚಲು
ಅಡುಗೆ ಮಾಡಿ ತಿನ್ನಲು
ನೆರೆಮನೆಯ ಹಿಂಸೆ ಸಹಿಸಲು
ಮನೆಯ ಯಜಮಾನನ ಅನುಮಾನಗಳ ಪರಿಹರಿಸಲು
ಬಾಗಿಲು ಬಡಿಯುವವರಿಗೆ ನಾನಿಲ್ಲವೆನ್ನಲು
ದಿನಚರಿ ಬರೆಯಲು
ಚಿತ್ರ ಬಿಡಿಸಲು
ಫೊಟೊ ಕ್ಲಿಕ್ಕಿಸಲು
ಹಾಡು ಗುನುಗುನಿಸಲು
ಮುಸುಕು ಹೊದ್ದು ಮಲಗಲು...

ಛೆ! ಮರೆತುಬಿಟ್ಟೆ ಹೇಳಿಕೊಡಲು
ಕೋಣೆಯೊಳಗೇ ಬಂಧಿಯಾದ ನನ್ನ ನಿಶ್ವಾಸಕ್ಕೆ!
*


-ಕಾಜೂರು ಸತೀಶ್

ಕಾವ್ಯಮೀಮಾಂಸೆ

ಈ ಘನಮೌನವನು ಕವಿತೆಗಾಗಿ ಧಾರೆಯೆರೆದೆ:
'ನೀನು ಹೂವು ನಾನದರ ಪರಿಮಳ
ನೀನೊಂದು ನವಿಲು ನಾನದರ ಬಣ್ಣ..'

ಗೋಡೆಯಲಿ ಕುಳಿತ ಹಲ್ಲಿ ಲೊಚಗುಟ್ಟಿತು

ಮೌನ ತ್ಶು ತ್ಶು ಎನುತ ಹಿಡಿತ ತಪ್ಪಿ ದೊಪ್ಪನೆ ಕುಸಿಯಿತು ನೆಲಕೆ

ಈಗ ನಾನೊಂದು ಪೂರ್ಣವಿರಾಮ
*


ಕಾಜೂರು ಸತೀಶ್ 

ಬಾ



ನನ್ನ ಮಾತು
ನಮ್ಮಿಬ್ಬರ ನಡುವಿನ ಅವರಿಂದಾಗಿ
ನನ್ನ ತುಟಿಯ ದಿವ್ಯ ಮೌನಕ್ಕೆ ಸಿಕ್ಕು
ಹೂತುಹೋಗಿದೆ
ಬಾ ತುಟಿಯೊತ್ತಿ ಎತ್ತಿಬಿಡು
ಮಾಗಿಯ ನಮ್ಮ ಬಿರಿದ ತುಟಿಗಳಿಂದ ಒಸರುವ ರಕುತದಿಂದಾದರೂ
ನಮ್ಮಿಬ್ಬರ ಮಾತುಗಳು ಬಟವಾಡೆಯಾಗಲಿ.

ನನ್ನ ಅಂಗೈಯ ಗೆರೆಗಳು
ನಿನ್ನತ್ತ ಹಳಿಗಳ ನಿರ್ಮಿಸಿವೆ
ಅವರು ಕೊಟ್ಟ ಸಲಾಕೆಯ ಬಿಗಿಹಿಡಿತಕ್ಕೆ
ಹಳಿಗಳು ಸವೆದುಹೋಗಿವೆ
ಜೋರುಮಳೆ ನಮ್ಮಿಬ್ಬರ ನಡುವೆ
ಬಾ ಬೇಗ
ರೈಲು ಹೊರಡುವ ಹೊತ್ತಾಗಿದೆ.

ನನ್ನ ಎದೆಯ ದಾರಿಗಳು
ಬೃಹತ್ ವಾಹನಗಳು ಸಂಚರಿಸಿ ದುರಸ್ತಿಯಲ್ಲಿವೆ
ನಮ್ಮಿಬ್ಬರ ನಡುವಿನ ಅವರು
ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ
ನಿನ್ನ ಕೆಂಬಟ್ಟೆಯ ತುಂಡೊಂದನ್ನು
ಬಾವುಟದಂತೆ ನೇತುಹಾಕಲಾಗಿದೆ ಅಲ್ಲಿ
ಟಾರು ಕುದಿಯುವ ಮುನ್ನವೇ
ಆ ಕೆಂಪು ಧ್ವಜವನ್ನಿಳಿಸಿ ಬಾ
ಎದೆಯೊಳಗಿನ ಮಗು ಮಲಗಲು ಹೊತ್ತಾಗಿದೆ
ಅಪ್ಪಿ ಹಾಲುಣಿಸಿಬಿಡು ಬೇಗ.

ವಸಂತ ಬಂದಿದೆ
ನಮ್ಮಿಬ್ಬರ ನಡುವಿನ ಅವರಿಗೆ
ಬಾ
ಗೂಡು ಕಟ್ಟಿಕೊಡೋಣ
ಕಾವು ಕೊಟ್ಟುಬಿಡೋಣ
ಬಿರಿದು ಕುಹೂ ಕುಹೂ ಹಾಡಿಕೊಳ್ಳಲಿ

ಇನ್ನು ಅಟ್ಟಾಡಿಸುವುದು ಬೇಡ
ಕಪ್ಪು ಸಾಕು ನಮಗೆ
ಕಪ್ಪು
ಸಾಕು.
*






ಕಾಜೂರು ಸತೀಶ್ 

Monday, March 29, 2021

ನಮ್ಮಿಸ್ಕೂಲ್ನ ಪುಟ್ಟ



ರಸ್ತೆಯಲ್ಲಿ ಓಡೋಡ್ಬಂದ
ನಮ್ಮಿಸ್ಕೂಲ್ನ ಪುಟ್ಟ;
ಎಲೆ,ಹೂವು,ಹಣ್ಣನ್ನೆಲ್ಲ
ಕಿತ್ತು ಬ್ಯಾಗಲ್ಲಿಟ್ಟ.

'ಬಾಯೊಳಗೇನೋ?' ಎಂದರೆ ಟೀಚರ್
'ಹಲ್ನೋವು ಟೀಚರ್' ಎಂದ್ಬಿಟ್ಟ;
'ಸರಿ ಮತ್ತೆ ತೋರ್ಸು' ಅಂದ್ರೆ
ನೆಲ್ಲಿಕಾಯಿ ಉಗಿದ್ಬಿಟ್ಟ.

'ನೋಟ್ಸ್ ಎಲ್ಲೋ?' ಎಂದರೆ ಟೀಚರ್
ಎಲೆಗಳ ಕಟ್ಟನು ತೋರ್ಸ್ಬಿಟ್ಟ;
'ಸರಿ ಮತ್ತೆ ಬರಿ' ಅಂದ್ರೆ
ಮುಳ್ಳಲಿ ಚೆನ್ನಾಗಿ ಬರ್ದ್ಬಿಟ್ಟ.

'ಬಣ್ಣ ಎಲ್ಲೋ?' ಎಂದರೆ ಟೀಚರ್
ಹೂಗಳ ರಾಶಿಯ ತೆಗೆದಿಟ್ಟ;
'ಸರಿ ಮತ್ತೆ ಹಚ್ಚು' ಅಂದ್ರೆ
ಹೂವನೆ ತೀಡುತ ಹಚ್ಬಿಟ್ಟ.

ರಸ್ತೆಯಲ್ಲಿ ಓಡೋಡ್ಬಂದ
ನಮ್ಮಿಸ್ಕೂಲ್ನ ಪುಟ್ಟ;
ಕಲಿತದ್ನೆಲ್ಲ ತಲೇಲಿಟ್ಟು
ಮನೆ ಕಡೆ ಹೊರಟ.

**

-ಕಾಜೂರು ಸತೀಶ್

ನೀರು ಕಾಗೆ



ನೀರು ಕಾಗೆ ಊರ ನದಿಯ ನೀರಿನಲ್ಲಿ ಸ್ನಾನ ಮಾಡಿ
ಬಂಡೆ ಮೇಲೆ ಹಿಕ್ಕೆ ಹಾಕಿ ಚಿತ್ರವನ್ನು ಬಿಡಿಸುತ್ತೆ.

ಮೈಯೆಲ್ಲ ಇದ್ದಿಲ ಕಪ್ಪು ಹಿಕ್ಕೆ ಮಾತ್ರ ಬೆಳ್ಳಂಬಿಳಿ
ಕಲ್ಲಮೇಲೆ ಚೆಲ್ಲಿಬಿಟ್ಟರೆ ಕೊಕ್ಕರೆಯೇ ನಿಂತಂತೆ. ||ನೀರು ಕಾಗೆ||

ಸೂರ್ಯ ಸಂಜೆ ಬಣ್ಣ ಹಚ್ಚಿ ಅಲಂಕಾರ ಮಾಡುವಾಗ
ಹಾರಿ ಅದರ ಕೆಂಪು ಕಣ್ಣಿಗೆ ಕಾಡಿಗೆ ಹಚ್ಚುತ್ತೆ.||ನೀರು ಕಾಗೆ||

ಮುಸ್ಸಂಜೇಲಿ ಸ್ನಾನ ಮಾಡಿ ಅತ್ತಿಮರವ ಹತ್ತಿ ಕುಳಿತು
ಮೈಯ ಕಪ್ಪುಹರಡಿ ಹರಡಿ ಕತ್ತಲ ತರ್ಸುತ್ತೆ.||ನೀರು ಕಾಗೆ||

**


-ಕಾಜೂರು ಸತೀಶ್

ತುಂಟಾ ತುಂಟಿ


‘ತುಂಟಾ ತುಂಟಾ ಎಲ್ಬಿಟ್ಟೆ
ಕೊಟ್ಟೆ ತುಂಬಾ ಮೊಟ್ಟೆ?’
‘ಎಲ್ಲಾ ಮೊಟ್ಟೆ ತಿಂದ್ಬಿಟ್ಟೆ
ನೋಡು ಡೊಳ್ಳು ಹೊಟ್ಟೆ’.

‘ತುಂಟಿ ತುಂಟಿ ಎಲ್ಬಿಟ್ಟೆ
ಕೊಟ್ಟೆ ತುಂಬಾ ಬಟ್ಟೆ?’
‘ಎಲ್ಲಾ ತೊಟ್ಟು ಬಂದ್ಬಿಟ್ಟೆ
ನೋಡು ಎಷ್ಟು ಪಟ್ಟೆ’.

‘ತುಂಟಾ ತುಂಟಾ ಎಲ್ಲಿಟ್ಟೆ
ಲೊಟ್ಟೆ ಹೊಡ್ಕೊಂಡ್ ತಟ್ಟೆ?’
‘ಎಲ್ಲಾ ಕಟ್ಟೇಲಿಟ್ಬಿಟ್ಟೆ
ನಿಂಗೆ ಬರೀ ಸಿಟ್ಟೇ’.

‘ತುಂಟಿ ತುಂಟಿ ಎಲ್ಲಿಟ್ಟೆ
ಕರುವಿನ ಕೊರಳ ಗಂಟೆ?’
‘ರಾಗಿ ಮೂಟೆ ಮೇಲಿಟ್ಟೆ
ಕೀಟ್ಲೆ ಬಿಟ್ಟೇ ಬಿಟ್ಟೆ’.
*


ಕಾಜೂರು ಸತೀಶ್

ಬಸ್ಸು



ಬಸ್ಸು ಕೂಡ ನಮ್ಮೂರಿಗೆ ಬರುತ್ತೆ
ಉಸ್ಸಪ್ಪಾ ಅಂತ ಉಸ್ರು ಬಿಡುತ್ತೆ

ಆಚೆಗೊಂದ್ಸಲ ಈಚೆಗೊಂದ್ಸಲ ವಾಲುತ್ತೆ
ಮರ ಬಳ್ಳಿ ಹಾವನ್ನೆಲ್ಲ ಮುಟ್ಟುತ್ತೆ

ಜಿಗಣೆ ಕೂಡ ಟಿಕೇಟ್ ಇಲ್ದೆ ಬರುತ್ತೆ
ಹೊಟ್ಟೆ ತುಂಬಾ ರಕ್ತ ಕುಡ್ಕೊಂಡ್ ಹೋಗುತ್ತೆ

ಎದ್ರಿಗೆ ಬಂದ್ರೆ ಕಣ್ಕಣ್ ಹೊಡ್ಕೊಂಡ್ಹೋಗುತ್ತೆ
ಆದ್ರೂ ದೂರ ದೂರಾನೇ ಇರುತ್ತೆ

ಲಾಲಿ ಲಾಲಿ ಜೋಕಾಲಿ ಆಡ್ಸುತ್ತೆ
ಅಜ್ಜಂಗೂ ಕೂಡ ನಿದ್ದೆ ಬರ್ಸುತ್ತೆ

ಕೈ ತೋರ್ಸಿದ್ರೆ ನಾಚ್ಕೊಂಡು ನಿಲ್ಲುತ್ತೆ
‘ರೈಟ್ ರೈಟ್’ ಅಂದ್ರೆ ಮತ್ತೆ ಹೋಗುತ್ತೆ

ಬಸ್ಸು ಕೂಡ ನಮ್ಮೂರಿಗೆ ಬರುತ್ತೆ
ಜಾಸ್ತಿ ತಿಂದ ಹಾಗೆ ‘ಡರ್ಡರ್ರ್’ ಬಿಡುತ್ತೆ.
*


ಕಾಜೂರು ಸತೀಶ್ 

ಚುರುಗುಟ್ಟುವ ಚೂರು ಚೂರು ಚಿತ್ರಗಳು



ಹಳಿ ಸಿದ್ಧಪಡಿಸಿಕೊಳ್ಳುತ್ತದೆ ಕರುಳು
ಹೊತ್ತಿ ಉಗಿ ಕಾರಿಕೊಳ್ಳುತ್ತದೆ ಜಠರ
ತಪ್ಪಲೆ ತುಂಬ ಥಳಥಳ ಬೇಯುತ್ತದೆ ಹಸಿವು
ಅಣಿಯಾಗುತ್ತದೆ ಕೂಗಿಕೊಳ್ಳಲು ‘ಚುಕುಬುಕು’
ಉಂಡರೆ ಗಂಟಲವರೆಗೆ ಬಂದು ‘ವ್ಯಾ ವ್ಯಾ’ ವಾಂತಿ
ಲೊಚಲೊಚ ನೆಕ್ಕಲು ಬರುವ ಗುತ್ತಿನಾಯಿಗೂ ಸಾಲುವಷ್ಟು.

ವಿಶ್ರಮಿಸಿಕೊಳುವಾಗ  ನಡುನೆತ್ತಿಯಲಿ ಸೂರ್ಯ
 ಆಕಾಶಕಾಯವಾಗಿದ್ದೆ ನಾನು
ಗಿರಗಿರ ಸುತ್ತುತ್ತಿದ್ದೆ ಅದರ ಸುತ್ತ ಭೂಮಿಯ ಸುತ್ತ
ತಿರುತಿರುಗಿ ದೊಪ್ಪೆಂದರೆ ಭೂಮಿ ಕೈಬಿಡುವಳೇ?

ಅವಮಾನದ ಹೂವು ಬಿರಿಯುತ್ತದೆ ನಡುಬೀದಿಯಲ್ಲೇ
ಮತ್ತದಕ್ಕೆ ಕೆಂಪು ಬಣ್ಣ ನೀರು ಕೂಡ ಬೇಡ
ಬಿಸಿಲ ಹೂವು ಒಮ್ಮೊಮ್ಮೆ ಸೂರ್ಯನ ಕಣ್ಣುಸುಟ್ಟು
ಪಟಪಟ ನೀರು ಸುರಿಸುತ್ತದೆ ಭೂಮಿಗೆ
ಸೂರ್ಯನಿಗೂ ತಿಳಿದಿಲ್ಲ ನಮ್ಮ ನಾಲಗೆ ತೇವಗೊಳುವ ರಹಸ್ಯ
ಇನ್ನೂ ಬಯಲಾಗಿಲ್ಲ ನಮ್ಮ ಸೂರು ಸೋರುವ ರಹಸ್ಯ.

ಸುಡುಬಿಸಿಲಿನಲಿ ಮಳೆಮೋಡ ನಾವು 
ಮರುಭೂಮಿಯಾಗುವುದಿಲ್ಲ ನಮ್ಮ ಪಾದದಡಿಯು
ನಮ್ಮ ಮೈಯ್ಯ ಉಪ್ಪು ಹೇರುವುದಿಲ್ಲ ಯಾವ ಏರೊತ್ತಡವನ್ನೂ
ನಾವು ಮಳೆಯಾದಾಗ ಹೃದಯ ಗುಡುಗಿ ಕಣ್ಣು ಮಿಂಚಿ
ನಾವೇ ಆಗಿರುತ್ತೇವೆ ಸಿಡಿಲಲ್ಲಿ ಸುಟ್ಟು ಕರಕಲಾದವರೆಲ್ಲ.

ಬಟಾಬಯಲಾದಾಗ ದಹಿಸಿಕೊಳ್ಳುತ್ತದೆ ತನ್ನನ್ನೇ ತಾನು ಜಠರ
ಓಡುತ್ತದೆ ರೈಲು ಮಲದ ಪರಿವೆಯಿಲ್ಲದೆ ಕರುಳ ಹಳಿಚಾಚಿ ಹೊಗೆಕಾರಿಕೊಂಡು
ತಪ್ಪಲೆ ತುಂಬ ಬೆಂದ ಹಸಿವು ಕಾರಿಕೊಳ್ಳುತ್ತಿದೆ ಕಾರಿಕೊಳ್ಳುತ್ತದೆ ಕಾರಿಕೊಳ್ಳಲಿದೆ.
*


ಕಾಜೂರು ಸತೀಶ್ 

ಆ ಅವನು, ಈ ಇವಳು ಮತ್ತು ಇವರು


ಆ ಅವನು
ಈ ಇವಳು
ಕೈ ತೋರಿದರೆ
ವಾಹನಗಳೂ ನಿಲ್ಲದೆ ಮುಂದೋಡುತ್ತಿದ್ದವು.

ಆ ಅವನು
ಈ ಇವಳು
ಚಂದ ಚಂದದ
ಬಟ್ಟೆ ತೊಡಲು ಕಲಿತರು.

ಆ ಅವನು
ಈ ಇವಳು
ಆ ಸಭೆಗಳಲ್ಲಿ 
ಪ್ರಾರ್ಥನೆ ಮಾಡುವುದ ಕಲಿತರು.

ಆ ಅವನು
ಈ ಇವಳು
ಪ್ರಾರ್ಥನೆ ಮಾಡುತ್ತಾ
ಕೈಮುಗಿಯುವುದ ಕಲಿತರು.

ಕೈಮುಗಿಯುತ್ತಲೇ ನಡೆದರು 
ಪರ್ಸಿಗೆ ಕೈಹಾಕಿ
ಪರಪರ ಎಣಿಸಿ ಕೊಟ್ಟರು
ಇವರು ಬಿದ್ದೇ ಹೋದರು.

ಅವರೀಗ ನಾಲಗೆಯಲ್ಲೇ ನಡೆವರು
ಕಾಲಿನಲ್ಲೇ ನುಡಿವರು
ಕೆಂಪಿನಲ್ಲೇ ಮೀಯ್ವರು
ಎದೆಯ ಮೇಲೇ ಕುಣಿವರು.

ಅವರ ಬಿಳಿ ಪಾದಗಳಲ್ಲೀಗ
ಇವರ ಕಪ್ಪು ತುಟಿಗಳು
ಇವರ ಹಣೆಯ ಖಾಲಿ ಸೈಟಿನಲ್ಲೀಗ
ಅವರ ಬೂಟುಗಾಲಿನ ಮನೆ

ಆ ಅವನು
ಈ ಇವಳು
ಕವಿತೆಗೂ ಕೈಮುಗಿಯುತ್ತಿದ್ದಾರೆ
ಪರ್ಸು ತೆಗೆದು ಎಣಿಸುತ್ತಿದ್ದಾರೆ ಪರಪರ.
*


ಕಾಜೂರು ಸತೀಶ್

Saturday, March 27, 2021

ಜೀವ ಹಿಂಡುವ ತೇಗದ ಕಾಡುಗಳು

'ಬೆಲೆಬಾಳುವ ಮರಗಳು'- ಹೀಗೆಂದುಕೊಂಡು ಕಾಡಿನ ಒಡಲ ತುಂಬಾ ತೇಗವನ್ನು ಬೆಳೆಯಲಾಗಿದೆ. ಆದರೆ, ಎಲ್ಲಿ ತೇಗದ ಕಾಡುಗಳಿರುತ್ತವೆಯೋ -

*ಅದರ ಸಮೀಪದ ಊರು ಬರಗಾಲದ ಮುನ್ನುಡಿಯನ್ನು ಬರೆಸಿಕೊಳ್ಳುತ್ತಿರುತ್ತದೆ.

*ಅಲ್ಲಿ ತಿನ್ನಲು ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಪ್ರಾಣಿಗಳು ರೈತರ, ಕಾರ್ಮಿಕರ ಬದುಕನ್ನು ತಿಂದು ಬದುಕುತ್ತವೆ.




[ಎಲ್ಲಿಯವರೆಗೆ ಕಾಡನ್ನು ಅದರ ಪಾಡಿಗೆ ಬದುಕಲು ಬಿಡುವುದಿಲ್ಲವೋ, ಅಲ್ಲಿಯವರೆಗೆ ಬರಗಾಲದ ಪದಗಳಿಗೆ ಬರಬರುವುದಿಲ್ಲ, ಮಾನವ-ವನ್ಯಮೃಗಗಳ ಸಂಘರ್ಷ ತಪ್ಪುವುದಿಲ್ಲ, ನಗರಗಳಲ್ಲಿ ನಿರ್ಮಿಸಲಾಗುವ ಮ್ಯೂಸಿಯಂಗಳಲ್ಲಿ 'ಅಳಿವಿನಂಚಿನಲ್ಲಿರುವ ಪ್ರಾಣಿಗಳು' ಎಂಬ ಫಲಕವನ್ನು ಅಳವಡಿಸುವ ಕಾರ್ಯವು ನಿಲ್ಲುವುದಿಲ್ಲ.]
*




-ಕಾಜೂರು ಸತೀಶ್

Tuesday, March 16, 2021

ತಲೆಮಾರು

ಹೊಸದಾಗಿ ಬರೆಯಲು ಆರಂಭಿಸಿದ ಯುವಕನೊಬ್ಬ ಹಿರಿಯ ಕವಿ 'ಶಾಂತಸಮುದ್ರ'ರನ್ನು ಭೇಟಿಯಾಗಲು ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿದನು.

ಶಾಂತಸಮುದ್ರರು ಪುಸ್ತಕವನ್ನು ಓದುತ್ತಿದ್ದರು. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ತಾನೊಬ್ಬ ಕತೆಗಾರ ಮತ್ತು ಕವಿ ಎಂದು ತನ್ನ ಪರಿಚಯವನ್ನು  ಯುವಕನು ಹೇಳಿಕೊಂಡನು . ತನ್ನ ಬರೆಹಗಳನ್ನು ನಾಡಿನ ಪ್ರಖ್ಯಾತ ಕತೆಗಾರರಾದ ಸೆಬಾಸ್ಟಿಯನ್ ಅವರು ಬಹುವಾಗಿ ಮೆಚ್ಚಿ ಜನಪ್ರಿಯ  'ಪ್ರಜಾಮಾತು' ಪತ್ರಿಕೆಯ ಉಪಸಂಪಾದಕರಾದ ಸಂದೀಪ ಅವರಿಗೆ ಪ್ರಕಟಿಸಲು ತಿಳಿಸಿದ್ದರಿಂದ ಆ ಪತ್ರಿಕೆಯಲ್ಲಿ ಎರಡು ಕತೆಗಳು ಪ್ರಕಟಗೊಂಡಿವೆ ಎಂದು ಹೇಳಿದನು.

ತಾನು ಬರೆಯುವ ಕತೆಗಳ ಪಾತ್ರಗಳ ಬಗ್ಗೆ ಹೇಳಿಕೊಂಡನು. ತನ್ನ ಊರು, ಮನೆ,ಕುಟುಂಬ, ಪ್ರೇಯಸಿಯರು, ಹವ್ಯಾಸ, ಅಭ್ಯಾಸ , ಕೆಲಸ, ಮಾಧ್ಯಮ, ರಾಜಕೀಯ, ಶಿಕ್ಷಣ... ಇವುಗಳ ಕುರಿತು ಹೆಮ್ಮೆಯಿಂದ  ಮಾತನಾಡಿದನು..

'ನಿಮ್ಮ ಯಾವುದೋ ಒಂದು ಕತೆ ಓದಿದ್ದೇನೆ' ಎಂದು ಮಾತಿನ ನಡುವೆ ಸೇರಿಸಿದನು.

ಶಾಂತಸಮುದ್ರರು ತಲೆಯಾಡಿಸುತ್ತಿದ್ದರು. ಒಂದು ಪದವನ್ನೂ ಅವರು ಆಡುತ್ತಿರಲಿಲ್ಲ. 

ಒಂದು ಗಂಟೆ ಕಳೆಯಿತು. ಶಾಂತಸಮುದ್ರರು ಮೌನ ಮುರಿದರು. ' ನನಗೆ ನಿದ್ದೆ ಬರುತ್ತಿದೆ.. ವಯಸ್ಸಾಯ್ತಲ್ವಾ.. ಅವಕಾಶ ಕೊಡ್ತೀರಾ?' ಎಂದರು.

ಯುವಕ ಅವರೊಡನೆ ಒಂದು selfie ತೆಗೆದುಕೊಂಡು ಅದನ್ನು ಡಿಪಿಗೆ ಹಾಕಿ , status ಮತ್ತು ಗುಂಪುಗಳಲ್ಲಿ ಹಂಚಿಕೊಂಡು, ಅಲ್ಲಿಂದ ತೆರಳಿದನು.

ಹೊರಡುವಾಗ 'ಬಾಯ್ ಸರ್' ಎಂದನು.
*


ಕಾಜೂರು ಸತೀಶ್