ಹೊಸದಾಗಿ ಬರೆಯಲು ಆರಂಭಿಸಿದ ಯುವಕನೊಬ್ಬ ಹಿರಿಯ ಕವಿ 'ಶಾಂತಸಮುದ್ರ'ರನ್ನು ಭೇಟಿಯಾಗಲು ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿದನು.
ಶಾಂತಸಮುದ್ರರು ಪುಸ್ತಕವನ್ನು ಓದುತ್ತಿದ್ದರು. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ತಾನೊಬ್ಬ ಕತೆಗಾರ ಮತ್ತು ಕವಿ ಎಂದು ತನ್ನ ಪರಿಚಯವನ್ನು ಯುವಕನು ಹೇಳಿಕೊಂಡನು . ತನ್ನ ಬರೆಹಗಳನ್ನು ನಾಡಿನ ಪ್ರಖ್ಯಾತ ಕತೆಗಾರರಾದ ಸೆಬಾಸ್ಟಿಯನ್ ಅವರು ಬಹುವಾಗಿ ಮೆಚ್ಚಿ ಜನಪ್ರಿಯ 'ಪ್ರಜಾಮಾತು' ಪತ್ರಿಕೆಯ ಉಪಸಂಪಾದಕರಾದ ಸಂದೀಪ ಅವರಿಗೆ ಪ್ರಕಟಿಸಲು ತಿಳಿಸಿದ್ದರಿಂದ ಆ ಪತ್ರಿಕೆಯಲ್ಲಿ ಎರಡು ಕತೆಗಳು ಪ್ರಕಟಗೊಂಡಿವೆ ಎಂದು ಹೇಳಿದನು.
ತಾನು ಬರೆಯುವ ಕತೆಗಳ ಪಾತ್ರಗಳ ಬಗ್ಗೆ ಹೇಳಿಕೊಂಡನು. ತನ್ನ ಊರು, ಮನೆ,ಕುಟುಂಬ, ಪ್ರೇಯಸಿಯರು, ಹವ್ಯಾಸ, ಅಭ್ಯಾಸ , ಕೆಲಸ, ಮಾಧ್ಯಮ, ರಾಜಕೀಯ, ಶಿಕ್ಷಣ... ಇವುಗಳ ಕುರಿತು ಹೆಮ್ಮೆಯಿಂದ ಮಾತನಾಡಿದನು..
'ನಿಮ್ಮ ಯಾವುದೋ ಒಂದು ಕತೆ ಓದಿದ್ದೇನೆ' ಎಂದು ಮಾತಿನ ನಡುವೆ ಸೇರಿಸಿದನು.
ಶಾಂತಸಮುದ್ರರು ತಲೆಯಾಡಿಸುತ್ತಿದ್ದರು. ಒಂದು ಪದವನ್ನೂ ಅವರು ಆಡುತ್ತಿರಲಿಲ್ಲ.
ಒಂದು ಗಂಟೆ ಕಳೆಯಿತು. ಶಾಂತಸಮುದ್ರರು ಮೌನ ಮುರಿದರು. ' ನನಗೆ ನಿದ್ದೆ ಬರುತ್ತಿದೆ.. ವಯಸ್ಸಾಯ್ತಲ್ವಾ.. ಅವಕಾಶ ಕೊಡ್ತೀರಾ?' ಎಂದರು.
ಯುವಕ ಅವರೊಡನೆ ಒಂದು selfie ತೆಗೆದುಕೊಂಡು ಅದನ್ನು ಡಿಪಿಗೆ ಹಾಕಿ , status ಮತ್ತು ಗುಂಪುಗಳಲ್ಲಿ ಹಂಚಿಕೊಂಡು, ಅಲ್ಲಿಂದ ತೆರಳಿದನು.
ಹೊರಡುವಾಗ 'ಬಾಯ್ ಸರ್' ಎಂದನು.
*
ಕಾಜೂರು ಸತೀಶ್
No comments:
Post a Comment