' ನೆರೆಯ ರಾಷ್ಟ್ರದಲ್ಲಿ ಕಾಲಿನ ಮೂಲಕ ಶರೀರವನ್ನು ಪ್ರವೇಶಿಸುವ ಸೂಕ್ಷ್ಮ ಜೀವಿಯೊಂದಿದೆ, ಅದು ಹೃದಯವನ್ನು ಘಾಸಿಗೊಳಿಸುತ್ತದೆ, ಎಲ್ಲಾ ರಾಷ್ಟ್ರಗಳಿಗೆ ಅದು ಹಬ್ಬಲಿದೆ' ಎಂಬ ಸುದ್ದಿ ಕ್ಷಣಮಾತ್ರದಲ್ಲಿ ಜಗತ್ತಿನ ಕಿವಿಗೆ ತಲುಪಿತು!
ದೇಶದ ಗಡಿಗಳನ್ನು ಭದ್ರಪಡಿಸಲಾಯಿತು. ವಿದೇಶದಲ್ಲಿರುವವರೆಲ್ಲ ಮರಳಲು ಒಂದು ವಾರದ ಗಡುವು ಕೊಡಲಾಯಿತು.
ಕಾಲಿಗೆ ಸಾಕ್ಸ್ ಧರಿಸುವುದು, ಶೂ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಧರಿಸದೆ ಬೀದಿಗಿಳಿಯುವವರ ಕಾಲು ಮುರಿಯಲಾಯಿತು.
ಬಗೆಬಗೆಯ ಸಾಕ್ಸುಗಳು, ಶೂಗಳು ಮಾರುಕಟ್ಟೆಗೆ ಬಂದವು. ಅವುಗಳನ್ನು ಶುಚಿಗೊಳಿಸಲು ಸೋಪುಗಳು, ಪೌಡರುಗಳು, ಬ್ರಶ್ಶುಗಳು, ಪಾಲಿಶ್ಶುಗಳು, ಬಟ್ಟೆಗಳು..
ಹೊರಬರಲಾರದೆ ಜನ ಹಸಿವಿನಿಂದ ಸತ್ತರು. ಭಯದಿಂದ ಸತ್ತರು. ಎಷ್ಟೋ ಮಂದಿ ಹೃದಯಾಘಾತವಾಗಿ ಸತ್ತರು. ನಡೆದು ದಣಿದು ಸತ್ತರು...
ಅವರ ಹೃದಯಗಳನ್ನು ಒಟ್ಟಿಗೆ ಸುಡಲಾಯಿತು.
ಹೀಗೇ ಮುಂದುವರಿಯಿತು. ತಿಂಗಳುಗಳ ನಂತರ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳತೊಡಗಿತು.
'ಎಲ್ಲರೂ ಕಡ್ಡಾಯವಾಗಿ ಹೃದಯ ಪರೀಕ್ಷೆ ಮಾಡಿಸಬೇಕು ' ಎಂಬ ಆದೇಶ ಹೊರಬಂತು.
ಪರೀಕ್ಷೆ ನಡೆಯಿತು. ಅನೇಕ ಜನರಿಗೆ 'ಹೃದಯವೇ ಇಲ್ಲ' ಎಂಬ ವರದಿ ಹೊರಬಂದಿತು. ಅಂಥವರನ್ನು ಕೂಡಿಹಾಕಲಾಯಿತು.
ಕಡೆಗೆ ಒಂದು ಮಾತ್ರೆಯನ್ನು ಕಂಡುಹಿಡಿಯಲಾಯಿತು. ಬಲವಂತವಾಗಿ ಅದನ್ನು ನುಂಗಿಸಲಾಯಿತು. ಅದನ್ನು ನುಂಗಿದ ಕೆಲವರು ಸತ್ತರು.
ಕಾಡಂಚಿನ ಜನರು ಪರೀಕ್ಷೆ ಮಾಡಿಸಿಕೊಳ್ಳುವ ಭಯದಿಂದ, ಮಾತ್ರೆ ನುಂಗುವ ಭಯದಿಂದ ಕಾಡಿನಲ್ಲಿ ಅಡಗಿ ಕುಳಿತರು. ಗೆಡ್ಡೆ ಗೆಣಸುಗಳನ್ನು ತಿಂದು, ಮೀನುಗಳನ್ನು ಸುಟ್ಟು ತಿಂದು ಸುಖೀ ಜೀವನ ನಡೆಸಿದರು.
*
ಕಾಜೂರು ಸತೀಶ್
No comments:
Post a Comment