ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, March 30, 2016

ಶ್ರದ್ಧಾಂಜಲಿ

ತೀರಿಕೊಂಡವರು ನವ ವಧುವಾಗಿದ್ದರೆ
ಮದುವೆ ಆಲ್ಬಮ್ಮಿನಿಂದ ಒಂದು ಸುಂದರವಾದ ಚಿತ್ರ.
ಮಗುವಾಗಿದ್ದರೆ
ಹುಟ್ಟುಹಬ್ಬದ್ದು
ಅಥವಾ ಆಟವಾಡುವಾಗ ತೆಗೆದದ್ದು.
ಇಪ್ಪತ್ತು, ಮೂವತ್ತರ ಪ್ರಾಯದವರಾಗಿದ್ದರೆ
ಪಾಸ್ಪೋರ್ಟಿನ ಅಥವಾ ಐಡಿ ಕಾರ್ಡಿನ
ಕಪ್ಪು-ಬಿಳುಪು ಅಥವಾ ಬಣ್ಣದ ಚಿತ್ರ
ಪತ್ರಿಕೆಯಲ್ಲಿ ಅಚ್ಚಾಗುತ್ತದೆ.

ಪ್ರತಿಯೊಬ್ಬರಲ್ಲೂ ಹೀಗೆ ಅಳಿಸಲಾಗದ ನಗುವಿನ ಕ್ಷಣಗಳು
ಉಳಿದುಬಿಟ್ಟಿರುತ್ತವೆ ಚಿತ್ರಗಳಲ್ಲಿ.



ದೊಡ್ಡವರ ಸಾವಿಗೇನಿದ್ದರೂ ಪುಟದ ಮೇಲಿನ ಜಾಗ.
ಮಿಕ್ಕವರು ಪುಟದ ಇಷ್ಟಿಷ್ಟೇ ಸಣ್ಣ ಜಾಗದಲ್ಲಿ.

ಯಾರೂ ಕೇಳಿಸಿಕೊಳ್ಳಲಾಗದ ರಹಸ್ಯ ಹೇಳುತ್ತಾರೆ.
ಅವರ ಕಣ್ಣಗುಡ್ಡೆಗಳು ಓದುಗರ ದಿಟ್ಟಿಸಿ
ಕ್ಯಾಕರಿಸಿ ಉಗಿಯುತ್ತವೆ.
ನಾನೂ ನೀನೂ ಪುಟ ತಿರುಗಿಸಿ ಸುದ್ದಿಯನ್ನೋದುವಾಗ
ನಮ್ಮ ಸಾವಿಗಿರುವ ಅಂತರ ಒಂದು ನಿಮಿಷದಷ್ಟು ಕಡಿಮೆಯಾಗುತ್ತದೆ.
ನಮ್ಮಿಬ್ಬರಿಗಾಗಿ ಯಾರೋ ಎಲ್ಲೋ
ಇಷ್ಟು ಜಾಗವನ್ನು ಮೀಸಲಿಟ್ಟು
ಶ್ರದ್ಧಾಂಜಲಿ ಬರೆಯಲು ತೊಡಗುತ್ತಾರೆ.



ಮಲಯಾಳಂ ಮೂಲ- ಸುತಾರ್ಯ ಸಿ

ಕನ್ನಡಕ್ಕೆ- ಕಾಜೂರು ಸತೀಶ್


Sunday, March 27, 2016

ಬೀಗ ಜಡಿದ ಆ ಮನೆ

ಆ ಮನೆಗೆ ಬೀಗ ಜಡಿದು
ಎಷ್ಟೋ ದಿನಗಳಾದವು.

ಒಂದು ರಾತ್ರಿ
ಒಬ್ಬ ಕಳ್ಳ
ಮನೆಯೊಳಗೆ ಎಲ್ಲರೂ ನಿದ್ರಿಸುತ್ತಿರಬಹುದು ಎಂದುಕೊಂಡು
ಹೆಂಚು ತೆಗೆದು
ಅಟ್ಟದಿಂದಿಳಿದು
ಬೆಕ್ಕಿನ ಹೆಜ್ಜೆಯಿಟ್ಟು
ಬಾಗಿಲು, ಕಿಟಕಿಯ ಪರದೆಯೊಳಗೆಲ್ಲ ಅಡಗಿ
ಸದ್ದಿಲ್ಲದೆ ಹುಡುಕಾಡತೊಡಗಿದ.

ಅವನ ಕೈಬೆರಳುಗಳಿಂದ
ಕಾಲಿನ ಹೆಜ್ಜೆಗಳಿಂದ
ಸೂಕ್ಷ್ಮ ನೋಟದಿಂದ
ಮೈ 'ಜುಂ' ಎಂದು
ರೋಮಗಳು ನಿಮಿರಿ
ಕಣ್ಣುಗಳು ಕಿರಿದಾಗಿ
ಎಷ್ಟೋ ದಿನಗಳಿಂದ
ಬೀಗ ಜಡಿದ ಆ ಮನೆಗೆ
ಕಚಗುಳಿಯಿಟ್ಟಂತೆನಿಸುತಿದೆ
ಕಚಗುಳಿಯಿಟ್ಟಂತೆನಿಸುತಿದೆ!


ಮಲಯಾಳಂ ಮೂಲ- ಅಜೀಶ್ ದಾಸನ್

ಕನ್ನಡಕ್ಕೆ- ಕಾಜೂರು ಸತೀಶ್


Friday, March 25, 2016

ತಪ್ಪು ಅಳತೆ

ಕೆಲವೊಮ್ಮೆ ತಪ್ಪಾದ ಅಳತೆಗೋಲಿನಿಂದಲೇ ಅಳೆಯುತ್ತೇವೆ ನಾವು
ಮತ್ತೆ ಮತ್ತೆ ಅಳೆಯುತ್ತಲೇ ಇರುತ್ತೇವೆ.

ಯಾವುದೋ ಸಂಖ್ಯೆಯೊಂದರ ಸಣ್ಣ ತಪ್ಪು
ಅದರಿಂದ ತಪ್ಪಾಗುವ ದೂರ, ವೇಗ,
ಆಳ, ಅಗಲ.
ಈ ನಡುವೆ ಒಂದು ಸಣ್ಣ ಅಕ್ಷರ ತಪ್ಪು
ನೆನಪುಗಳನ್ನೇ ಬುಡಮೇಲಾಗಿಸುತ್ತದೆ.

ಆದರೂ,
ನಮಗೆ ತಪ್ಪಾದ ಅಳತೆಯೇ ಇಷ್ಟ.
ದೂರ ಕಡಿಮೆಯಾಗಿ, ವೇಗ ಹೆಚ್ಚಾಗಿ
ಆಳ ಅಗಲಗಳೆಲ್ಲ ಒಂದಾಗಿಬಿಡುತ್ತವೆ.
ಆಮೇಲೆ ಎಲ್ಲವೂ ಸುಲಭ.

ನಿನ್ನಲ್ಲಿಗಿರುವ ದೂರ,
ನಿನ್ನಲ್ಲಿಗೆ ಬರಬೇಕಾದ ವೇಗ
ತಪ್ಪಿಹೋದಾಗಲೇ
ನಾನು ಎಲ್ಲೂ ತಪ್ಪದ ಹಾಗೆ ತೂಗುಹಾಕಿದ್ದು,
ಬಾವಲಿಯ ಹಾಗೆ.
*

ಮಲಯಾಳಂ ಮೂಲ- ಸುತಾರ್ಯ ಸಿ

ಕನ್ನಡಕ್ಕೆ- ಕಾಜೂರು ಸತೀಶ್


Thursday, March 24, 2016

ದಿನಚರಿ -18

ಆ ವರ್ಷ ಮರದ ತುಂಬಾ ಬೆಣ್ಣೆಹಣ್ಣಿನ 'ಮಿಡಿ'ಗಳು ತುಂಬಿಹೋಗಿದ್ದವು. ಅದು ಹಣ್ಣಾಗುವ, ಅದನ್ನು ಸಕ್ಕರೆಯೊಂದಿಗೆ ಕಲಸಿ ತಿನ್ನುವ ಕನಸು ಕಾಣಲು ತೊಡಗಿ ವರ್ಷಗಳೇ ಬೇಸತ್ತಿದ್ದವು. ಹುಟ್ಟಿ, ಎಂಟು ವರ್ಷ ಬದುಕಿದ್ದೆ ಅಲ್ಲಿ. ಒಂದಿಡೀ ಆಯುಷ್ಯವನ್ನೇ ಸವೆಸಿದ್ದಷ್ಟು ಅನುಭವಗಳನ್ನು ತುಂಬಿಕೊಟ್ಟಿದ್ದವು ಆ ದಿನಗಳು.

ಮಳೆಗಾಲ. ತುಂಬಾ ಮಳೆಯಾಗುವ ಊರು ಅದು. ಮನೆಯ ಎಲ್ಲ ಸಾಮಾನುಗಳನ್ನೂ ಲಾರಿಗೆ ತುಂಬಿದ್ದೆವು. ಮನೆ ಬಿಡುವ ಕಡೆಯ ಕ್ಷಣದಲ್ಲಿ ಬೆಣ್ಣೆಹಣ್ಣಿನ ಮರವನ್ನೊಮ್ಮೆ ನೋಡಿದೆ- ಬಲಿಯಲು ಇನ್ನೊಂದು ತಿಂಗಳಷ್ಟೇ ಸಾಕಿತ್ತು. ನೆಲ ಕಳೆದುಕೊಂಡ ದುಃಖಕ್ಕಿಂತ ಕನಿಷ್ಟ ಒಂದು ಹಣ್ಣನ್ನಾದರೂ ತಿನ್ನಲಾಗಲಿಲ್ಲವಲ್ಲ ಎಂಬುದೇ ಆಗಿನ ನನ್ನ ಸಂಕಟದ ವಿಷಯವಾಗಿತ್ತು!
*
ಕಾಜೂರು ಸತೀಶ್


Wednesday, March 23, 2016

ದಿನಚರಿ -17

ಆಗಷ್ಟೇ ಪರಿಚಯವಾದ ವ್ಯಕ್ತಿ ಶಿಕ್ಷಕರಾದಲ್ಲಿ ಒಂದು ಸಂಗತಿಯನ್ನು ಪರಸ್ಪರ ಹಂಚಿಕೊಂಡೇ ಹಂಚಿಕೊಂಡಿರುತ್ತೇವೆ- 'ನಮ್ಮಲ್ಲಿ ಇಷ್ಟು ಮಕ್ಕಳು, ನಿಮ್ಮಲ್ಲಿ ?'

ನಾಳೆ ದಿನ ಸರ್ಕಾರಿ ಶಾಲೆಗಳೆಲ್ಲ ಬಾಗಿಲು ಹಾಕಿಕೊಂಡು ವ್ಯಥೆ ಪಡುತ್ತದಲ್ಲಾ ಎಂಬುದನ್ನು ನೆನೆದಾಗ ಮುಖ್ಯವಾಗಿ ನೆನಪಾಗುವುದು: ಸೋಮಾರಿ ಶಿಕ್ಷಕರು, ಶಾಲೆಯನ್ನೇ ಉದ್ಯಮವಾಗಿಸಿಕೊಂಡಿರುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಮತ್ತು ಎ.ಸಿ. ರೂಮಿನ ಶಿಕ್ಷಣ ತಜ್ಞರು.

ಭಾಷೆ-ಸಂಸ್ಕೃತಿಗಳ ಬಗ್ಗೆ ಉದ್ದುದ್ದ ಮಾತನಾಡುವ ಸಾಹಿತಿಗಳೆಲ್ಲಿದ್ದಾರೆ ಬೆಂಕಿಬಿದ್ದ ಈ ಹೊತ್ತಲ್ಲಿ?!
*
ಕಾಜೂರು ಸತೀಶ್


Tuesday, March 22, 2016

ದಿನಚರಿ -16

'ಟಿ.ವಿ. ಇಲ್ಲದೆ ಹೇಗಿರುತ್ತೀಯ?' ಕೇಳುತ್ತಾರೆ ಗೆಳೆಯರು.

ಏಕೆಂದರೆ ಇಲ್ಲಿರುವ 'ಲೊಡಕಾಸಿ' ಬಿ.ಎಸ್.ಎನ್.ಎಲ್. ಟವರ್ ದಿನಕ್ಕೆ ಹನ್ನೆರಡು ಗಂಟೆಗಳ ಕಾಲವಾದರೂ ಎಚ್ಚರದ ಸ್ಥಿತಿಯಲ್ಲಿರುವುದಿಲ್ಲ. ಸ್ವಲ್ಪ ಮೋಡವಾದರೂ ರೇಡಿಯೋ ಸಿಗ್ನಲ್ ಇಲ್ಲದೆ ಗೊರಗೊರ ಕೆಮ್ಮಲು ತೊಡಗುತ್ತದೆ.

'ಇಂತಹ ಕೊರತೆಗಳನ್ನು ತುಂಬುವುದಾದರೂ ಹೇಗೆ?' ಅವರ ಪ್ರಶ್ನೆ.

ಒಂದು ನಿಮಿಷದ ಏಕಾಂತವಾದರೂ ಸಿಗಲಿ ಎಂದು ನಿತ್ಯ ಕಾದು ಕೂರುತ್ತೇನೆ. ನೆರೆಹೊರೆಯವರ 'ಆರ್ಭಟ'ವೇ ನನಗೆ ಸಂಗೀತ. ಅವರ 'ಕೊರೆತ'ವೇ ಉಪನ್ಯಾಸ. ಹುಟ್ಟಿದಾಗಲೇ ಸತ್ತುಹೋದ ನೂರಾರು ಕತೆ-ಕವಿತೆಗಳನ್ನೆಲ್ಲ ಅವರಿಗೇ ಅರ್ಪಿಸಿಬಿಡುತ್ತೇನೆ.

ಇಷ್ಟಾದರೂ ಈ ರೇಡಿಯೋ ಅವರ ಆರ್ಭಟಗಳಿಂದ ನನ್ನನ್ನು ಸ್ವಲ್ಪವಾದರೂ ಪಾರುಮಾಡುತ್ತಿದೆ. ದಿನ ಕಳೆದು ಅಥವಾ ಎಷ್ಟೋ ದಿನಗಳಾದ ಮೇಲೆ ಸಿಗುವ ಅಥವಾ ಪತ್ರಿಕೆಗಳ ಮುಖ ನೋಡಲೂ ಸಾಧ್ಯವಾಗದ ಹೊತ್ತಲ್ಲೆಲ್ಲ ರೇಡಿಯೋ ನನಗೆ ಜಗತ್ತನ್ನು ತೋರಿಸಿ ಹಸಿವನ್ನು ನೀಗಿಸಿದೆ.

ಬಾಲ್ಯದಿಂದಲೂ ಜೊತೆಗಿದ್ದ ಈ ಗೆಳತಿ, ನಾನು ಬದುಕಿರುವವರೆಗೂ ಜೊತೆಗೇ ಇರುತ್ತಾಳೆ!
*
ಕಾಜೂರು ಸತೀಶ್