ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, March 30, 2016

ಶ್ರದ್ಧಾಂಜಲಿ

ತೀರಿಕೊಂಡವರು ನವ ವಧುವಾಗಿದ್ದರೆ
ಮದುವೆ ಆಲ್ಬಮ್ಮಿನಿಂದ ಒಂದು ಸುಂದರವಾದ ಚಿತ್ರ.
ಮಗುವಾಗಿದ್ದರೆ
ಹುಟ್ಟುಹಬ್ಬದ್ದು
ಅಥವಾ ಆಟವಾಡುವಾಗ ತೆಗೆದದ್ದು.
ಇಪ್ಪತ್ತು, ಮೂವತ್ತರ ಪ್ರಾಯದವರಾಗಿದ್ದರೆ
ಪಾಸ್ಪೋರ್ಟಿನ ಅಥವಾ ಐಡಿ ಕಾರ್ಡಿನ
ಕಪ್ಪು-ಬಿಳುಪು ಅಥವಾ ಬಣ್ಣದ ಚಿತ್ರ
ಪತ್ರಿಕೆಯಲ್ಲಿ ಅಚ್ಚಾಗುತ್ತದೆ.

ಪ್ರತಿಯೊಬ್ಬರಲ್ಲೂ ಹೀಗೆ ಅಳಿಸಲಾಗದ ನಗುವಿನ ಕ್ಷಣಗಳು
ಉಳಿದುಬಿಟ್ಟಿರುತ್ತವೆ ಚಿತ್ರಗಳಲ್ಲಿ.



ದೊಡ್ಡವರ ಸಾವಿಗೇನಿದ್ದರೂ ಪುಟದ ಮೇಲಿನ ಜಾಗ.
ಮಿಕ್ಕವರು ಪುಟದ ಇಷ್ಟಿಷ್ಟೇ ಸಣ್ಣ ಜಾಗದಲ್ಲಿ.

ಯಾರೂ ಕೇಳಿಸಿಕೊಳ್ಳಲಾಗದ ರಹಸ್ಯ ಹೇಳುತ್ತಾರೆ.
ಅವರ ಕಣ್ಣಗುಡ್ಡೆಗಳು ಓದುಗರ ದಿಟ್ಟಿಸಿ
ಕ್ಯಾಕರಿಸಿ ಉಗಿಯುತ್ತವೆ.
ನಾನೂ ನೀನೂ ಪುಟ ತಿರುಗಿಸಿ ಸುದ್ದಿಯನ್ನೋದುವಾಗ
ನಮ್ಮ ಸಾವಿಗಿರುವ ಅಂತರ ಒಂದು ನಿಮಿಷದಷ್ಟು ಕಡಿಮೆಯಾಗುತ್ತದೆ.
ನಮ್ಮಿಬ್ಬರಿಗಾಗಿ ಯಾರೋ ಎಲ್ಲೋ
ಇಷ್ಟು ಜಾಗವನ್ನು ಮೀಸಲಿಟ್ಟು
ಶ್ರದ್ಧಾಂಜಲಿ ಬರೆಯಲು ತೊಡಗುತ್ತಾರೆ.



ಮಲಯಾಳಂ ಮೂಲ- ಸುತಾರ್ಯ ಸಿ

ಕನ್ನಡಕ್ಕೆ- ಕಾಜೂರು ಸತೀಶ್


No comments:

Post a Comment