ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, October 30, 2020

ಅಸ್ತಮಾನ



ಪಪ್ಪಾಯಿ ತೋಟದಲ್ಲಿ
ಚದುರಿಬಿದ್ದ ಪಪ್ಪಾಯಿ ಹಣ್ಣಿನ ಹಾಗೆ ಪಶ್ಚಿಮ

ಚಿಕ್ಕ ಚಿಕ್ಕ ತುಂಡುಗಳ ಕೊಕ್ಕಿನಲಿ ಕುಕ್ಕಿ
ಗೂಡಿನತ್ತ ಕೆಂಪು ಕೊಕ್ಕಿನ ಗಿಳಿಗಳ ಹಿಂಡು

ಪಪ್ಪಾಯಿ ಹಣ್ಣನ್ನು ಕಿವುಚಿ ಮುಖಕ್ಕೆ ಹಚ್ಚಿ
ಮಂಡಿಯವರೆಗೆ ತಲೆಗೂದಲನಿಳಿಸಿ
ಅಂಗಳದಲ್ಲೆಲ್ಲ ನಡೆದಾಡುತ್ತಿದ್ದಾಳೆ ಅಕ್ಕ

ಕೂದಲು ಹಬ್ಬುತ್ತಿದೆ ಅಂಗಳಕ್ಕೆ ತೋಟಕ್ಕೆ

ಆಮೇಲೆ ಎಲ್ಲೆಲ್ಲೂ ಕೂದಲ ರಾಶಿ.
*



ಮಲಯಾಳಂ ಮೂಲ- ಅಮ್ಮು ದೀಪ

ಕನ್ನಡಕ್ಕೆ - ಕಾಜೂರು ಸತೀಶ್

Wednesday, October 28, 2020

ಪ್ರಿಯತಮ


ಹೆಣ್ಣಿಗೆ ಸದಾ ಒಬ್ಬ ಪ್ರಿಯತಮನಾದರೂ ಇರಬೇಕು
ಮನೆಗೆಲಸದ ಪ್ರಳಯಜಲದೊಳಗೆ
ಮುಳುಗಿ ಸಾಯುತ್ತಿರುವಾಗಲೂ
ನಿನ್ನನ್ನು ಸಾಯಲು ಬಿಡುವುದಿಲ್ಲವೆಂದು
ಹೊರಗೆಳೆದು ಎದೆಗಪ್ಪಿಕೊಳ್ಳಲು
ಮಕ್ಕಳ ಬುತ್ತಿ ಕಟ್ಟಿಡಲಿಲ್ಲ
ಸಮವಸ್ತ್ರ ಇಸ್ತ್ರಿ ಮಾಡಿಡಲಿಲ್ಲ
ಮಧ್ಯಾಹ್ನದ ಊಟ ಇನ್ನೂ ಸಿದ್ಧವಾಗಲಿಲ್ಲ
ಎಂಬಿತ್ಯಾದಿ ತಕರಾರುಗಳ ಉರಿಯಲ್ಲಿ ಕಪ್ಪುಗಟ್ಟುವಾಗ
ನೀನೆಂದೆಂದೂ ಸುಂದರಿಯೇ ಎಂದು ಸಮಾಧಾನಿಸಲು
ಜ್ವರದಿಂದ ನಡುಗುತ್ತಿದ್ದರೂ
ಕಚೇರಿಗೆ ರಜೆಹಾಕಿದ್ದರೂ
ಕೆಲಸ ಮುಗಿಸಿದರಷ್ಟೆ ವಿಶ್ರಮಿಸುವವಳ ಅಸಹಾಯಕತೆಗೆ
ಪ್ರೀತಿಯೇ ಇಲ್ಲದ ತಂಗಾಳಿ ಬೀಸುವಾಗ
ಕುಶಲ ವಿಚಾರಿಸಿ
ಪ್ರೀತಿಯ ಬೆಚ್ಚನೆಯ ಹೊದಿಕೆ ಹಾಸಲು
'ನನ್ನ ಕಂದಾ' ಎಂದು
ಕಲ್ಪನೆಯಲ್ಲಾದರೂ ಮುದ್ದಿಸಲು
*


ಮಲಯಾಳಂ ಮೂಲ - ರಶ್ಮಿ ಎನ್. ಕೆ.

ಕನ್ನಡಕ್ಕೆ- ಕಾಜೂರು ಸತೀಶ್

Tuesday, October 27, 2020

ಎಲ್ಲಿ?


ಈ ಕಾಳರಾತ್ರಿ
ಇಲ್ಲೆಲ್ಲ ಮರಗಳಿವೆ
ಅಲ್ಲೆಲ್ಲ ಮನೆಗಳಿವೆ
ಎಂದು ನೆನಪಿನ ಬಲದಿಂದ ಹೇಳುತ್ತೇನೆ.

ಒಂದೊಮ್ಮೆ ನನಗೆ ತುಂಬು ಮರೆವಿರುವುದಾದರೆ
ಮರಗಳು ಮತ್ತು ಮನೆಗಳು
ಹೀಗೆ ಹೇಳಿಕೊಳ್ಳಲು ಎಲ್ಲಿರುತ್ತಿದ್ದವು ಈ ಕಾಳರಾತ್ರಿಯಲ್ಲಿ?

ಹೇಳು ಬೆಳಕೇ
ಹೇಳು ಮಳೆಯೇ
ಹೇಳು ಬರವೇ
ಹೇಳು ಗಾಳಿಯೇ
ಹೇಳು ಗರಗಸವೇ
ಹೇಳು ಜೆಸಿಬಿಯೇ
ಎಲ್ಲಿರುತ್ತಿದ್ದವು ಅವು?
*


ಕಾಜೂರು ಸತೀಶ್

Saturday, October 24, 2020

ಅಜ್ಜಿ ನಡೆಯುತ್ತಿದ್ದಾಳೆ



ಕಣ್ಮುಚ್ಚಿ ಮಲಗಿರುವ ಈ ಬೀದಿಯಲಿ ನಡೆಯುತ್ತಿದ್ದಾಳೆ ಅಜ್ಜಿ
ಮುಪ್ಪು ಬಂದಿದೆ ಅವಳು ಎಳೆದು ಸಾಗುತ್ತಿರುವ ಕಾಲಕ್ಕೆ
ತುಸು ಹೆಚ್ಚೇ ಆಗಿದೆ ಕಾಣದ ಅದರ ಭಾರ, ಬಾಗಿದೆ ಬೆನ್ನು
ಹಿಂದೆ ಬಹಳ ಹಿಂದೆ ಬಳುಕುವ ಅವಳ ನಡುವ ಹಿಂಬಾಲಿಸುತ್ತಿದ್ದ ಪಿಳಿಪಿಳಿ ಕಣ್ಣ ರೆಪ್ಪೆಗಳು
ಬಿಳಿಯಾಗಿವೆ, ಕುಡಿನೋಟವೂ...


ತರಗುಡುವ ಕೈ ಸೃಷ್ಟಿಸುತಿದೆ ಅವಳು ಉಸಿರಾಡುವಷ್ಟು ಗಾಳಿಯನ್ನು
ಅವಳ ಚರುಮದ ಮೇಲೆ ಹಕ್ಕುಸ್ವಾಮ್ಯ ಸಾಧಿಸಿದ ಸೂರ್ಯ
ಸಿದ್ಧನಾಗಿದ್ದಾನೆ ತಪ್ಪಿದರೆ ದಾವೆ ಹೂಡಲು


ಅವಳ ಒಡೆದ ಹಿಮ್ಮಡಿಯ ಒಳಗೆ ಸಿಲುಕಿದ ಮಣ್ಣಕಣದೊಳಗೆ
ಯಾವುದೋ ಕಾಲದ ಯಾರೋ ಒಬ್ಬ ಮನುಷ್ಯನ ಮೈಸುಟ್ಟ ಪಸೆಯಿದೆ
ಭೂಮಿ ಕೈಚಾಚುತಿದೆ ‘ಯವ್ವಾ’ ಎನುತ ದಣಿವಾರಿಸಿಕೊಳುವ ಗಳಿಗೆಯಲಿ
ಅಪ್ಪುಗೆಗಾಗಿಯೋ ಏನೋ ಅವಳು ಬಾಗಿದ್ದಾಳೆ


ಅಜ್ಜಿ ಎಳೆದೊಯ್ಯುತಲಿರುವ ಅವಳಿಗಿಂತಲೂ ಮುದಿಯಾದ ಕಾಲ
ಮಗುವಿನಂತೆ ಹಿಂಬಾಲಿಸುತಿದೆ ಅವಳ.
*


-ಕಾಜೂರು ಸತೀಶ್

ಐಕ್ಯ



ಈ ಮನೆಗೂ ಆ ಮನೆಗೂ ದ್ವೇಷ

ಒಮ್ಮೆ ಆ ಮನೆಯ ಒಡೆಯ ಸತ್ತ
ಈ ಮನೆಯವರಾರೂ ಹೋಗಲಿಲ್ಲ ಅಲ್ಲಿಗೆ

ಸುಡಲಾಯಿತು ಅವರನ್ನು
ಮೈ ಮಾಗಿ ಹೊಗೆಯೆದ್ದಿತು

ಇವರಿಲ್ಲಿ ಉಸಿರಾಡಿದರು

ಒಂದಾದರು
ಸತ್ತ ಆ ಮನೆಯೊಡೆಯ
ಮತ್ತು ಬದುಕಿರುವ ಇವರು

*


ಕಾಜೂರು ಸತೀಶ್

Friday, October 23, 2020

ಗೋಷ್ಠಿ



ಬೆಂಗಳೂರು ಸಾಹಿತ್ಯ ಮೇಳದ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ರವಿಗೆ ಆಹ್ವಾನ ಬಂದಾಗ ಅದನ್ನು ನಯವಾಗಿ ನಿರಾಕರಿಸಿದರೂ ಮತ್ತೆ ಮತ್ತೆ ಒತ್ತಾಯಿಸಿದ ಕಾರಣದಿಂದಾಗಿ ಒಪ್ಪಿಗೆ ಸೂಚಿಸಿದ್ದನು. ಇಷ್ಟು ದೂರದಿಂದ ಹೊರಡುವುದು, ಆ ನಗರದ ಗಡಿಬಿಡಿ ಎಲ್ಲ ನೆನೆದಾಗ ಹೊಟ್ಟೆ ತೊಳಸಿದಂತಾಗುತ್ತಿತ್ತು. ‘ಸಮಕಾಲೀನ ಸಾಹಿತ್ಯದಲ್ಲಿ ಸ್ತ್ರೀ’ ಎಂಬ ಗೋಷ್ಠಿ. ಅದೂ ಖ್ಯಾತ ವಿಮರ್ಶಕ ಹೃದಯೇಶ ಅವರ ಅಧ್ಯಕ್ಷತೆಯಲ್ಲಿ! ಸ್ವಲ್ಪ ನಡುಕ ಒಳಗೊಳಗೇ.


ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಚಿತ್ರಾ ಲಾಡ್ಜಿನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ಮೆಜಸ್ಟಿಕ್ನಿಂದ ನಡೆದೇ ಹೋದ. ಹಾಗೆ ದಿನಮೊದಲೇ ಲಾಡ್ಜು ಸೇರಿಕೊಂಡ ರವಿಯು ತಾನು ಬಂದಿರುವ ಸುದ್ದಿಯನ್ನು ಗೆಳೆಯರ್ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಗೋಷ್ಠಿಗೆ ತಯಾರಾಗಲು ಪುರುಸೊತ್ತು ಸಿಗದ ಕಾರಣ ಒಂದಷ್ಟು ಪುಸ್ತಕಗಳನ್ನು ತುಂಬಿಕೊಂಡು ಹೋಗಿದ್ದರಿಂದ ಸ್ವಲ್ಪ ದಣಿವು ಆವರಿಸಿತ್ತು. ಕುರ್ಚಿಗೆ ಮೈಯನ್ನೊಪ್ಪಿಸಿ ಕುಳಿತ. ಸುಮಾರು ಐದು ನಿಮಿಷ ಹಾಗೇ ನಿರಾಳವಾಗಿ ಕುಳಿತ. ಹೊರಗಿನ ವಾಹನಗಳ ಸದ್ದು ಒಟ್ಟು ಸೇರಿ ಕ್ರಮೇಣ ಕಿವಿಯೊಂದಿಗೆ ಹೊಂದಿಕೊಂಡಿತು.


ಬಾಗಿಲು ತಟ್ಟಿದ ಸದ್ದಾಯಿತು. ಥತ್ ಎಂದು ತೆರೆದು ನೋಡಿದರೆ ರೂಂಬಾಯ್ ಮತ್ತು ಮಧ್ಯವಯಸ್ಸಿನ ಒಬ್ಬಾತ. 

‘ಏನಾದ್ರೂ ಸ್ಪೆಷಲ್ ಬೇಕಾ ಸರ್?’ ಮುಖದಲ್ಲಿ ನಗು ಬರಿಸಿಕೊಂಡು ನುಡಿದ ಆ ಮಧ್ಯವಯಸ್ಕ. ರೂಂಬಾಯ್‍ನ ಮುಖದಲ್ಲಿ ತುಸು ಹೆಚ್ಚೇ ನಗು ಕವಿದಿತ್ತು.


‘ಏನೂ ಬೇಡ, ರಾತ್ರಿಯ ಊಟ ಇಲ್ಲೇ ಸಿಗುತ್ತಲ್ಲಾ ಅಷ್ಟೆ ಸಾಕು’ ರವಿ ನಿರ್ಲಿಪ್ತನಾಗಿ ನುಡಿದ.

‘ಸ್ಸಾರಿ ಸರ್ ಅದಲ್ಲ... ನಮ್ಮಲ್ಲಿ ಇವೂ ಇವೆ... ಒಂದ್ನೈಟಿಗೆ ಥೌಸಂಡ್ ಅಷ್ಟೇ’. ಮೊಬೈಲಿನಲ್ಲಿದ್ದ ನಾಲ್ಕೈದು ಹುಡುಗಿಯರ ಚಿತ್ರ ತೋರಿಸಿದ.

‘ಅಯ್ಯೋ.. ಛೇ.. ಬೇಡ ಬೇಡ’ ಎಂದು ಸಾರಾಸಗಟಾಗಿ ತಿರಸ್ಕರಿಸಿ ಒಳಗೆ ಬಂದು ಬಚ್ಚಲ ಮನೆ ಸೇರಿ ತಣ್ಣೀರನ್ನು ಮುಖಕ್ಕೆ ಚುಮುಕಿಸಿಕೊಂಡ. ಟ್ರಾಫಿಕ್ಕಿನ ಹೊಗೆ, ಪ್ರಯಾಣದ ಆಯಾಸ, ಈಗಷ್ಟೇ ಕೇಳಿಸಿಕೊಂಡ ಇವನ ಮಾತು.. ಎಲ್ಲವೂ ಜರ್ರನೆ ಇಳಿದುಹೋಯಿತು.


ಇಂಥಾ ಅನುಭವಗಳೆಲ್ಲ ರವಿಗೆ ತೀರಾ ಹೊಸತು. ‘ಇನ್ನೂ ನಂಗೆ ಈ ರಸ್ತೆ ದಾಟ್ಲಿಕ್ಕೆ ಗೊತ್ತಿಲ್ವಲ್ಲಾ’ ಹಂಗಿಸಿಕೊಳ್ಳುತ್ತಾನೆ ತನನ್ನೇ. ಹಳ್ಳಿ ಹೈದರನ್ನೆಲ್ಲ ತನ್ನ ಕೆಂಪು ತುಟಿಗಳ ಕೊಂಕಿಸಿ ಆಕರ್ಷಿಸುವ ಈ ಬೆಂಗಳೂರು ತನ್ನನ್ನು ನೋಡುತ್ತಿರುವುದು ಎರಡನೇ ಬಾರಿ. ಹಕ್ಕಿಗಳಿಲ್ಲದ ನದಿಗಳಿಲ್ಲದ ಹಸಿರಿಲ್ಲದ ಮೌನವಿಲ್ಲದ ಊರು. ಆದರೆ ಸ್ವಾತಂತ್ರ್ಯವಿದೆ. ನಡೆಯುವಾಗ ಈ ರಸ್ತೆಗಳೂ ನನ್ನ ಕಾಲಿನ ಕುರಿತು ದೇಹದ ಕುರಿತು ಮತ್ತು ನನ್ನ ಮನಸ್ಸಿನಲ್ಲಿ ಹರಿದಾಡುತ್ತಿರುವ ಭಾವನೆಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಇದೊಂಥರಾ ಚಂದ ಎನಿಸಿತು ಅವನಿಗೆ .


ಐದು ವರ್ಷಗಳ ಹಿಂದೆ ಕೋವರ್‍ಕೊಲ್ಲಿಯ ಕೊಥಾರಿ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ. ಯಾವ ಪಟ್ಟೆಯಲ್ಲಿ ಕಾಡಾನೆಗಳಿರುತ್ತವೆ, ಸಿಲೋನ್ ಪಟ್ಟೆಯಲ್ಲೇ ಯಾಕೆ ಜಾಸ್ತಿ ಆನೆಗಳಿರುತ್ತವೆ, ಯಾವ ಪಟ್ಟೆಯಲ್ಲಿ ಕಪ್ಪೆಗಳು ತುಂಬಿಕೊಂಡಿರುತ್ತವೆ, ಎಲ್ಲಿ ಬೋರರ್ ಹಾವಳಿ ಜಾಸ್ತಿ ಮುಂತಾದ ಮಾಹಿತಿಗಳಿಗಾಗಿ ರೈಟರ್‍ಗಳು ರವಿಯನ್ನೇ ನೆಚ್ಚಿಕೊಂಡಿದ್ದರು. ಕಾಫಿ ಗಿಡಗಳಿಗೆ ನೀರು ಹಾಯಿಸುವಾಗ ಸ್ಪ್ರಿಂಕ್ಲರ್‍ಗೆ ಮುಖವೊಡ್ಡಿದಾಗಲೆಲ್ಲ ಹೀಗೇ ನಿರಾಳವಾಗುತ್ತಿದ್ದ. ಮೂರು ಬಾರಿ ಸಿವಿಲ್ ಸರ್ವೀಸ್ ಪರೀಕ್ಷೆಯ ಸಂದರ್ಶನವನ್ನು ಎದುರಿಸಿ ಬಂದಿದ್ದರೂ ಕೆಲಸ ಕೈಗೂಡಿರಲಿಲ್ಲ. ಕಡೆಗೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ತನ್ನನ್ನು ಅರ್ಪಿಸಿಕೊಂಡಿದ್ದ.


ಬಿಚ್ಚಿಟ್ಟಿದ್ದ ಕೈಗಡಿಯಾರವನ್ನೆತ್ತಿ ನೋಡಿದ- ಐದು ಗಂಟೆ. ಹಿಂದಿನ ದಿನದ ವಿಪರೀತ ಕೆಲಸಗಳು ನೆನಪಿಗೆ ಬಂದವು. ಎರಡು ದಿನದ ಕೆಲಸಗಳನ್ನು ಮಾಡಿದ್ದರೂ ರಜೆ ಸಿಗುವ ಸಾಧ್ಯತೆ ಕಡಿಮೆಯೇ ಆಗಿತ್ತು. ‘ ಅವಂಗೆ ಮಾಡಿಕೆ ಬ್ಯಾರೆ ಕೆಲ್ಸ ಇಲ್ಲೆ’ ಬಾಸ್ ತನಗೆ ಕೇಳುವಂತೆ ಗೊಣಗುಟ್ಟಿದ್ದ. ತನಗೂ ಹಾಗೇ ಅನಿಸಿತ್ತು. ಅಷ್ಟು ದೂರ ಕ್ರಮಿಸಿ ಅರ್ಧ ಗಂಟೆ ಮಾತನಾಡುವುದು. ಕುಳಿತಿರುವ ಮಂದಿ ಮೊಬೈಲ್ ಕುಟ್ಟುತ್ತಾ ಸ್ವಲ್ಪ   ಕೇಳಿಸಿಕೊಳ್ಳುವುದು. ಆಮೇಲೆ ಸೆಲ್ಫಿ ತೆಗೆದುಕೊಳ್ಳುವುದು, ಡಿಪಿಗೆ ಹಾಕಿ ಖುಷಿಪಡುವುದು..

  ಇನ್ನೇನು ಈ ವರ್ಷವೇ ನಿವೃತ್ತಿ ಬಾಸ್ಗೆ. ಮೈಸೂರಿನಲ್ಲಿ ಮನೆಮಾಡಿಕೊಂಡು ಎರಡು ವರ್ಷವಾಗಿದ್ದಷ್ಟೆ. ಹೆಂಡತಿ ತೀರಿಕೊಂಡು ಒಂದು ವರ್ಷ. ಒಂದು ತಿಂಗಳು ಇನ್ನೂ ಕಳೆದೇ ಇರಲಿಲ್ಲ ಹೊಸದಾಗಿ ಬಂದಿದ್ದ ಜ್ಯೋತಿಯೊಂದಿಗೆ ಚಕ್ಕಂದ ಆಡಿ ಸಿಕ್ಕಿಹಾಕಿಕೊಂಡಿದ್ದ. ನಿವೃತ್ತಿಯ ನಂತರ ಅವಳನ್ನೇ ಮದುವೆ ಆಗುತ್ತಾನಂತೆ.


ಹೋಗಲಿ. ಏನಾದರೂ ಮಾಡಿಕೊಳ್ಳಲಿ. ತಾನಿಲ್ಲಿ ಬಂದಿದ್ದು? ಯಾಕೋ ಇವೆಲ್ಲ ಬೇಡವಾಗಿತ್ತು ಎಂದು ತೀವ್ರವಾಗಿ ಅನಿಸತೊಡಗಿತು ರವಿಗೆ. ಅಷ್ಟಕ್ಕೂ ಈ ಉಪನ್ಯಾಸಗಳಿಂದ ಯಾರಿಗಾದರೂ ಉಪಯೋಗವಿದೆಯೇ? ತಮಾಷೆಯೆನಿಸಿತು. ಇಂಥಾ ಕಾರ್ಯಕ್ರಮಗಳಿಗೆ ಬರುವುದಿಲ್ಲವೆಂದು ಇನ್ನು ಮುಂದೆ ಮುಲಾಜಿಲ್ಲದೆ ಹೇಳಿಬಿಡಬೇಕು. ಇಂಥಾ ಹಿಂಸೆಗಳಿಂದ ಪಾರಾಗುವುದನ್ನು ಕಲಿಯಬೇಕು.


ಏನನ್ನೂ ಯೋಚಿಸದೆ ಸುಮ್ಮನೆ ಕುಳಿತುಕೊಳ್ಳಬೇಕೆನಿಸಿತು. ಯಾಕೋ ಆ ರೂಂಬಾಯ್ ಮತ್ತು ಆ ಮಧ್ಯವಯಸ್ಕ ಆಡಿದ ಮಾತುಗಳು ಅವನನ್ನು ಆಕ್ರಮಿಸತೊಡಗಿದವು. ಹುಡುಗಿ! ಅರವತ್ತು ತುಂಬಿದ ಮುದುಕನೇ ಅಷ್ಟೆಲ್ಲ ಆಟವಾಡುವುದಾದರೆ ತನ್ನಂಥ ಯುವಕ ಏನು ಮಾಡಬೇಡ! ಇದುವರೆಗೆ ಒಬ್ಬರೊಂದಿಗೂ ಕಣ್ಣಿಗೆ ಕಣ್ಣು ನೆಟ್ಟು ಮಾತನಾಡಲಿಲ್ಲ. ಅದನ್ನಾದರೂ ಕಲಿಯಲಿಲ್ಲ. ಪ್ರೇಮ-ಕಾಮವೆಲ್ಲ ಹಾಳುಬಿದ್ದು ಹೋಗಲಿ. ಕನಿಷ್ಟ ಅಷ್ಟಾದರೂ!


 ‘ಹುಡುಗಿ’ ಪದ ಕೇಳಿದರೇ ದೂರ ಉಳಿಯುವಷ್ಟು ಮುಜುಗರದ ರವಿಯ ಮನದ ಯಾವುದೋ ಮೂಲೆಯಲ್ಲಿದ್ದ ತುಮುಲವೊಂದು ಅವನ ಒಳಗನ್ನು ಮುಟ್ಟಿ  ‘ಛೆ! ಬೇಡ ಅನ್ಬಾರ್ದಿತ್ತು’ ಎಂಬ ಮಾತನ್ನುದುರಿಸಿತ್ತು. 

ಮತ್ತೆ ಬೆವರತೊಡಗಿದ. ಆದದ್ದಾಗಲಿ ಎಂದು ಧೈರ್ಯಮಾಡಿಕೊಂಡು ಫೋನಾಯಿಸಿದ.


ಅವರಿಬ್ಬರೂ ಅಷ್ಟೇ ವೇಗದಲ್ಲಿ ಬಂದರು. ‘ಅವರಲ್ಲಿ ಯಾರ್ನಾದ್ರೂ ಒಬ್ರನ್ನ ಕಳ್ಸಿ', ಎಂದವನೇ ರೂಮಿನ ಒಳಗೆ ಸೇರಿಕೊಂಡ. 

ಪುಸ್ತಕ ತೆರೆದ. ಒಂದೊಂದನ್ನೇ ಹೊರಗೆ ತೆಗೆದು ಗುರುತುಮಾಡಿಟ್ಟುಕೊಂಡ. ಈಗಾಗಲೇ ಟಿಪ್ಪಣಿ ಮಾಡಿಟ್ಟುಕೊಂಡ ಹಾಳೆಯತ್ತ ಕಣ್ಣಾಡಿಸಿದ.


ಹಸಿವಾಗತೊಡಗಿತು. ಗೆಳೆಯ ಸುಕುಮಾರನ ಮೆಸೇಜು. ‘ಅರ್ಜೆಂಟ್ 2000 ದುಡ್ಡು ಹಾಕು ಅಕೌಂಟಿಗೆ’. ಕಳೆದ ತಿಂಗಳಲ್ಲಿ 5000 ಹಾಕು ಎಂದು ಹಾಕಿಸಿಕೊಂಡು ಅದನ್ನು ಮರೆತುಬಿಟ್ಟಿದ್ದ.


ಬಾಗಿಲು ಸದ್ದು ಮಾಡಿತು. ತೆರೆದ. ಎದೆಯಲ್ಲಿ ಮಿಂಚು ಹೊತ್ತಿಸಿದ ಅನುಭವ. ಹುಡುಗಿ!

‘ಬನ್ನಿ’ ಎಂದ.

ಅವಳು ಎಷ್ಟೋ ದಿನಗಳ ಪರಿಚಯ ಇರುವಂತೆ ಸಹಜವಾಗಿದ್ದಳು. ಕುಳಿತುಕೊಳ್ಳಲು ಹೇಳಿದ. ಮತ್ತೆ ಪುಸ್ತಕದ ಮೇಲೆ ಕಣ್ಣಾಡಿಸಿದ. ಆದರೆ ಏನೂ ಅರ್ಥವಾಗಲಿಲ್ಲ.


ಬಾಥ್ರೂಮಿಗೆ ಹೋಗಿ ಮುಖಕ್ಕೆ ನೀರು ಚಿಮುಕಿಸಿಕೊಂಡ. ಈ ಹಿಂದೆ ಕೊಟ್ಟ ಮುದವನ್ನು ಈಗ ಅದು ಕೊಡಲಿಲ್ಲ. ತಲೆಗೆ ನೀರು ಸುರಿದುಕೊಂಡ. ಹಿತವೆನಿಸಿತು.


ಹಾಸಿಗೆಯ ಮೇಲೆ ಸಿಮನ್ ದ ಬೊವಾಳ ‘ದಿ ಸೆಕೆಂಡ್ ಸೆಕ್ಸ್’  ಪುಸ್ತಕವಿತ್ತು. ‘ಏನಂದುಕೊಂಡಳೋ ಅವಳು’ ಹೇಳಿಕೊಂಡ ಮನಸ್ಸಿನಲ್ಲೇ.


ರವಿ ಯಾವ ಹುಡುಗಿಯರ ಹಿಂದೆ ಹೋದವನಲ್ಲ. ಅಷ್ಟು ಮುಜುಗರ ಅವನಿಗೆ. ಆದರೆ ಕುತೂಹಲವಿತ್ತು. ಅವನ ಬಡತನ ಅದನ್ನೆಲ್ಲ ದೂರ ಓಡಿಸಿತ್ತು. ಮೂವತ್ತು ದಾಟಿದರೂ ಮದುವೆಗೆ ಹುಡುಗ ಸಿಗದೆ ಪರದಾಡುತ್ತಿದ್ದ ಅಕ್ಕ, ಮೂವತ್ತರ ಆಸುಪಾಸಿನಲ್ಲಿದ್ದ ಕಿರಿಯ ಅಕ್ಕ, ಆಮೇಲೆ ಅವರಿಬ್ಬರನ್ನೂ ಮದುವೆ ಮಾಡಿಸಿದ್ದಕ್ಕೆ ಸಾಲದ ಮೇಲೆ ಸಾಲ. ಅಪ್ಪ-ಅಮ್ಮನನ್ನು ‘ಸಾವು’ ಪ್ರೀತಿಸಿ ಕದ್ದೊಯ್ದಿತ್ತು. ಸರ್ಕಾರಿ ಕೆಲಸ ಸಿಕ್ಕಿದ್ದರೂ ವಾಸ ಮಾತ್ರ ಅದೇ ಮುರುಕಲು ಮನೆಯಲ್ಲಿ. ಈ ಕಾರಣಕ್ಕಾಗಿಯೇ ಹುಡುಗಿ ಕೂಡ ಸಿಗಲಿಲ್ಲ. ಇನ್ನೇನು ತನಗೂ ಮೂವತ್ತು ದಾಟಿತು. ಹೀಗೇ ಇದ್ದುಬಿಡುವುದೊಳ್ಳೆಯದು ಎಂದು ನಿರ್ಧರಿಸಿದ್ದ.


ಬಚ್ಚಲಿನಿಂದ ಹೊರಬಂದ. ಅವಳು ಅವನನ್ನು ಸುಮ್ಮನೆ ದಿಟ್ಟಿಸಿದಳು. ಸಮುದ್ರವೊಂದು ಅಲುಗಾಡದೆ ಸುಮ್ಮನೆ ನಿಂತಂತೆನಿಸಿತು ಅವನಿಗೆ.

‘ಹಸಿವಾಗ್ತಿದೆಯಾ?’ ಕೇಳಿದ.

‘ಇಲ್ಲ’ ಎಂದಳು.

‘ಊಟ ಮಾಡೋಣ’ ಎಂದ

‘ಬೇಡ’ ಎಂದಳು.

‘ಪ್ಲೀಸ್’ ಎಂದ ತಡವರಿಸುತ್ತಾ.

ಸುಮ್ಮನಾದಳು.

‘ಹೆಸರು?’

‘ಶಾಲಿನಿ’

‘ನಿಜವಾಗ್ಲೂ ಶಾಲಿನಿ?’

‘ಹುಂ’.


ರೂಂ ಬಾಯ್ ಎರಡು ಊಟ ತಂದಿಟ್ಟು ಮುಖದ ತುಂಬ ಕಳ್ಳ ನಗು ತುಂಬಿಕೊಂಡು ಹೊರಹೋದ.

 ಊಟ ಮಾಡಿದರು.

‘ಎಷ್ಟ್ ವರ್ಷ ಆಯ್ತು ಈ ಕೆಲ್ಸಕ್ಕಿಳ್ದು?’

‘ಒಂದು ವರ್ಷ’


ಅವಳು ಕೈತೊಳೆದು ಬರುವಾಗ ಒಮ್ಮೆ ದಿಟ್ಟಿಸಿದ. ಎಂಥಾ ಚೆಲುವು! ಅವಳು ನೀಲಿ ಜೀನ್ಸ್ ಮತ್ತು ಹಳದಿ ಟಿ-ಷರ್ಟನ್ನು ಧರಿಸಿದ್ದಳು. ತನಗಿಂತ ತುಸು ಹೆಚ್ಚೇ ಎತ್ತರವಿರುವಂತೆ ಕಂಡಳು. ಪ್ರಾಯ ಇಪ್ಪತ್ತೆರಡರಿಂದ ಇಪ್ಪತ್ತೈದು, ಅಷ್ಟೆ.


ಪುಸ್ತಕಗಳನ್ನು ಒಮ್ಮೆ ಕೈಗೆತ್ತಿಕೊಂಡು ಮತ್ತೆ ಪುಟಗಳನ್ನು ಸರಿಸಿದ.
 ‘ಸ್ವಲ್ಪ ಹೊರಗೆ ಹೋಗಿ ಬರೋಣ್ವಾ?’ ಕೇಳಿದ.

‘ಹುಂ’ ಎಂದಳು. 

ಅಪರಿಚಿತ ಊರು. ಯಾರ ಮುಖ ಯಾರು ನೋಡುತ್ತಾರೆ? ಯಾರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ಅವಳಿಗೆ ಬೆಂಗಳೂರಿನ ರಾತ್ರಿಗಳು, ಹಗಲುಗಳು, ದಿಗಿಲುಗಳು, ರಸ್ತೆಗಳು, ಟ್ರಾಫಿಕ್ಕು... ಎಲ್ಲ ಚಿರಪರಿಚಿತ. 

'ಎಷ್ಟೆಲ್ಲ ಕಣ್ಣುಗಳು ಇವಳನ್ನು ಸೀಳಿ ಆಚೆಗೆ ಬಂದಿರಬಹುದು.. ಅದರಲ್ಲಿ ಇವಳನ್ನು ಭೋಗಿಸಿದ ಕಣ್ಣುಗಳೂ ಇರಬಹುದು, ಆ ಕಣ್ಣುಗಳು ತನ್ನನ್ನೂ ಸ್ಕ್ಯಾನ್ ಮಾಡಿ ಏನೇನೋ ಕಲ್ಪನೆಗಳನ್ನು ಹೆಣೆದಿರಬಹುದು.. ಇವಳು ಅವರನ್ನು ನೋಡಿದರೆ ಗುರುತು ಹಿಡಿಯುತ್ತಾಳೆಯೇ?' ಹೀಗೆ  ಪ್ರಶ್ನೆಗಳು ಒಂದೊಂದೇ ಮುತ್ತಿ ಇವನನ್ನು ಹಿಂಸಿಸಲಾರಂಭಿಸಿದವು. ಈ ನಡಿಗೆಯಲ್ಲಿ ಸ್ವಾತಂತ್ರ್ಯದ ಕೊರತೆಯಿದೆ ಎಂದು ಅನಿಸತೊಡಗಿತು...

 ರಸ್ತೆ ದಾಟುವಾಗ ತಡಬಡಾಯಿಸುವಾಗ ಅವಳಿಗೆ ಒಳಗೊಳಗೇ ನಗು. 

 ‘ಯಾವ್ನೋ ಮೆಂಟಲ್ ಕೈಗೆ ಸಿಕ್ಹಾಕೊಂಡೆ ಇವತ್ತು’ ಎಂದು ಅವಳು ಅಂದುಕೊಂಡಿರಬಹುದೆಂದು ಇವನು ಲೆಕ್ಕಹಾಕಿದ. ಆ ಕತ್ತಲೆಯ ಬೆಳಕಿಗೆ ಅವನಿಗೆ ಎದುರುಗೊಳ್ಳಲು ಆಗಲಿಲ್ಲ.

 ‘ಸಾಕು ಬನ್ನಿ’ ಮತ್ತೆ ಲಾಡ್ಜಿಗೆ ಕರೆದೊಯ್ದ.


ರಾತ್ರಿ ಸ್ವಲ್ಪ ಚಳಿ ಹೆಚ್ಚಿತ್ತು. ಆದರೆ ಸೆಖೆಯೆನಿಸುತ್ತಿತ್ತು ರವಿಗೆ. ಬಟ್ಟೆ ಬದಲಾಯಿಸಿ ಬಿಳಿಯ ಪಂಚೆ, ಬಿಳಿಯ ಟಿ-ಷರ್ಟ್ ಧರಿಸಿ ಕುಳಿತ.

 ‘ಬಟ್ಟೆ ಬದಲಾಯಿಸಿಕೊಳ್ಳಿ’ ಎಂದ. ‘ಇಲ್ಲ ತಂದಿಲ್ಲ’ ಎಂದಳು. ‘ಓ ಸ್ಸಾರಿ’ ಎಂದ. ತನ್ನ ಟೀ ಷರ್ಟ್ ಮತ್ತು ನೈಟ್ ಪ್ಯಾಂಟುಗಳನ್ನು ನೀಡಿದ. ಅವಳು ಧರಿಸಿಕೊಂಡಳು.


ನಾಳಿನ ಕಾರ್ಯಕ್ರಮದ ಬಗ್ಗೆ ನೆನೆದಾಗ ಮತ್ತೆ ಗಾಬರಿಯಾಗತೊಡಗಿತು. ಇನ್ನೂ ಏನೂ ತಯಾರಾಗಿಲ್ಲ. ಹೃದಯೇಶ ನಿಷ್ಠುರ ನುಡಿಯವರು. ಎಲ್ಲಾದರೂ ಎಡವಿದರೆ ಮಾನ ಹರಾಜಾಗುವಂತೆ ಮಾತನಾಡಿಬಿಡುತ್ತಾರೆ.


ಪುಸ್ತಕಗಳನ್ನು ಒಂದೊಂದಾಗಿ ತೆರೆದು ಟಿಪ್ಪಣಿ ಮಾಡುವುದನ್ನು ಮುಂದುವರೆಸಿದ. ಮುಕ್ಕಾಲು ಗಂಟೆ ಕಳೆದಿರಬಹುದು. ಸುಮ್ಮನೇ ಕುಳಿತಿದ್ದವಳು 'ಟಿವಿ ಆನ್ ಮಾಡ್ಲಾ?'ಕೇಳಿದಳು. 

'ಮಾಡಿ' ಎಂದ. 

ನಿಜವಾಗಿಯೂ ಅವಳು ಟಿವಿ ನೋಡುತ್ತಿದ್ದಳೋ ಅಥವಾ ಹಾಗೆ ನಟಿಸುತ್ತಿದ್ದಳೋ ಇವನಿಗೆ ಅರ್ಥವಾಗಲಿಲ್ಲ.


‘ಅಲ್ಲಾ, ನೀವ್ಯಾಕೆ ಈ ಕೆಲ್ಸಕ್ಕಿಳ್ದಿದ್ದು ಅಂತ ಹೇಳ್ಲಿಲ್ಲ?’ ಕೇಳಿದ.

‘ನನ್ನ ಫ್ರೆಂಡ್ ಕೆಲ್ಸ ಕೊಡಿಸ್ತೀನಿ ಅಂತ ಮೋಸ ಮಾಡ್ದ. ಎಲ್ಲಾ ಕಳ್ಕೊಂಡೆ ಅನ್ನಿಸ್ತು. ಒಂದ್ಸಲ ಕಳ್ಕೊಂಡ ಮೇಲೆ ಇನ್ನೇನ್ ಉಳ್ದಿರುತ್ತೆ ಹುಡ್ಗೀರಲ್ಲಿ... ಇಲ್ಲಿಗೆ ಬಂದೆ.’
ಸ್ವಲ್ಪ ಭಾವುಕವಾದಂತೆ ಕಂಡಳು. 

ದನಿಯಲ್ಲಿ ಅಂಥಾ ಬದಲಾವಣೆಯೇನೂ ಕಾಣಿಸಲಿಲ್ಲ.

‘ಹಾಗಾದ್ರೆ ಇನ್ನು ಮದ್ವೆ ಆಗಲ್ವಾ?’ ಕೇಳಿದ.

ಮೊದಲ ಬಾರಿಗೆ ನಗು ತಂದುಕೊಂಡಳು ಮುಖದಲ್ಲಿ. ಮತ್ತಷ್ಟೂ ಮುದ್ದಾಗಿ ಕಂಡಳು.

‘ಅಯ್ಯೋ.. ಯಾರು ಬರ್ತಾರೆ ಮದ್ವೆ ಆಗ್ಲಿಕ್ಕೆ? ವಿಷಯ ತಿಳಿದವರ್ಯಾರೂ ಹತ್ರ ಬರಲ್ಲ... ತಿಳಿಯದವ್ರ ಜೊತೆಗೆ ಮದ್ವೆ ಆಗ್ಲಿಕ್ಕೆ ನಂಗೆ ಇಷ್ಟವಿಲ್ಲ’.


ಅರ್ಧ ಗಂಟೆಯಲ್ಲಿ ಸುಮಾರು ಮಹತ್ವದ ವಿಷಯಗಳನ್ನು ಕಲೆಹಾಕಿದ ಮೇಲೆ ಅವುಗಳನ್ನು ಕ್ರಮಪ್ರಕಾರವಾಗಿ ಜೋಡಿಸಿ ಲೇಖನ ಸಿದ್ಧಪಡಿಸಿದ. ಹತ್ತಿರ ಹತ್ತಿರ ಮಧ್ಯರಾತ್ರಿ. ನಿರಾಳ ಭಾವ ಕಾಡಿತು. ನಿದ್ದೆ ಕಣ್ಣಂಚಲ್ಲಿ ತಣ್ಣಗೆ ನಿದ್ದೆಗೆ ಇಳಿದಿತ್ತು.


ಅವಳು ಮೂರ್ನಾಲ್ಕು ಬಾರಿ ಆಕಳಿಸಿದಳು. ಕಣ್ಣುಗಳು ತೂಗಾಡುತ್ತಿದ್ದವು. ‘ಮಲ್ಕೊಳ್ಳಿ’ ಎಂದ. ಅವಳು ಹಠಾತ್ತನೆ ಎಚ್ಚರಗೊಂಡಂತೆ ಅವನನ್ನು ದಿಟ್ಟಿಸಿ ಹಾಸಿಗೆಯ ಮೇಲೆ ಬಿದ್ದುಕೊಂಡಳು. ಇವನೂ ಹಾಸಿಗೆಗೆ ಹೊರಳಿದ.
ಬೆಳಿಗ್ಗೆ ಬೇಗ ಎದ್ದು ಮತ್ತೊಮ್ಮೆ ಸೆಮಿನಾರ್ ಪೇಪರ್ ಓದಿಕೊಂಡ. ಪರವಾಗಿಲ್ಲ ಎನಿಸಿತು. ಸುಮಾರು ಹೊತ್ತಾದ ಮೇಲೆ ಅವಳು ಬೆರಗಾದಂತೆ ಎದ್ದು ಇವನನ್ನೇ ನೋಡಿದಳು. ಸಣ್ಣ ನಗು ಅವಳ ತುಟಿಯಂಚಿನಲ್ಲಿ ಮಿಂಚಿತು.


‘ಸೆಮಿನಾರಿಗೆ ಬನ್ನಿ ಪ್ಲೀಸ್’ ಒತ್ತಾಯಿಸಿದ. ಸುಮಾರು ಹೊತ್ತು ಯೋಚಿಸಿ ಒಪ್ಪಿಕೊಂಡಳು. 

**

ಸಭಾಂಗಣ ತುಂಬಿತ್ತು. ಬ್ಯಾಗನ್ನು ಲಾಡ್ಜಿನಲ್ಲೇ ಇಟ್ಟು ಬಂದಿದ್ದ. ಇವನು ಕೊಡಿಸಿದ ಬಟ್ಟೆಯಲ್ಲಿ ಅವಳು ಚೆಲುವಾಗಿ ಕಾಣುತ್ತಿದ್ದಳು. ಅವನ ಹಿಂದೆಯೇ ಹೋಗುತ್ತಿದ್ದಳು.


ಹೃದಯೇಶ ಅವರನ್ನು ಸುತ್ತುವರಿದುಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದರು.

 ‘ಸರ್, ನಾನು ರವಿ, ಇವತ್ತಿನ ಗೋಷ್ಠಿಯ ಉಪನ್ಯಾಸ ಮಾಡ್ಲಿಕ್ಕೆ ಬಂದಿದ್ದು’. ಪರಿಚಯಿಸಿಕೊಂಡ. 

ಇವಳನ್ನು ನೋಡಿದ್ದೇ ‘ಇವಳ್ನ ಯಾಕೆ ಇಲ್ಲಿಗೆ ಕರ್ಕೊಂಡು ಬಂದೆ? ಮಾಡೋದೆಲ್ಲಾ ಮಾಡಿ ಇಲ್ಲಿಗೂ ಎಳ್ಕೊಂಡು ಬಂದಿದ್ದಾನೆ!’ ಮುಖ ಕೆಂಪು ಮಾಡಿಕೊಂಡು ಅರಚಿ ಹೊರಟು ಹೋದರು ಹೃದಯೇಶ.

‘ಅವ್ರನ್ನು ಗೊತ್ತಾ?’ ಅವಳನ್ನು ಕೇಳಿದ.

‘ಹುಂ.. ವಾರಕ್ಕೊಮ್ಮೆ ಲಾಡ್ಜಿಗೆ ಬರ್ತಾರೆ.. ರಾಕ್ಷಸ!’


ರವಿಯ ಉಪನ್ಯಾಸ ಮುಗಿಯಿತು. ಒಂದೊಂದು ಮಾತುಗಳೂ ಹೃದಯೇಶರ ಹೃದಯಕ್ಕೆ ಕೊಳ್ಳಿ ಇಡುತ್ತಿದ್ದವು. ಅವಳ ಒಂದು ಕಣ್ಣಲ್ಲಿ ಒಂದು ಹನಿ ಮೆಲ್ಲಗೆ ಜಾರುತ್ತಿತ್ತು. ಅವಳದನ್ನು ಒರೆಸಿಕೊಳ್ಳದೆ ಕೇಳಿಸಿಕೊಳ್ಳುತ್ತಿದ್ದಳು. ಹೃದಯೇಶರ ಅಧ್ಯಕ್ಷೀಯ ನುಡಿಗಳು ಕೇವಲ ಐದು ನಿಮಿಷಕ್ಕೇ ಮುಗಿದುಹೋಯಿತು. 

‘ಹುಷಾರಿಲ್ವಂತೆ’ ಜನ ಮಾತನಾಡುತ್ತಿದ್ದರು.

ಲಾಡ್ಜಿಗೆ ಹಿಂತಿರುಗಿ ಲಾಡ್ಜಿನವನಿಗೆ ಮತ್ತೊಂದು ಸಾವಿರ ನೀಡಿ 'ಈ ರಾತ್ರಿಗೆ' ಎಂದು ಅವಳನ್ನು ಕರೆದೊಯ್ದ.

ಸಂಜೆ ಹೊರಡುವಾಗ ‘ ನನ್ಜೊತೆ ಬರ್ತೀಯಾ?’ ಕೇಳಿದ. ಅವಳು ತುಟಿಬಿರಿಸಿ ನಕ್ಕು ಅವನ ಹಿಂದೆ ಹಿಂದೆ ನಡೆದಳು. ನಡಿಗೆ ಹಾಗೇ ಮುಂದುವರಿದಂತೆ ಅವಳು ಅವನ ಪಕ್ಕದಲ್ಲೇ ನಡೆಯತೊಡಗಿದಳು. ಮೊದಲ ಬಾರಿಗೆ ಅವಳ ಕೈಯನ್ನೊಮ್ಮೆ ಮುಟ್ಟಿದ. ಮೈ ಜುಮ್ಮೆನಿಸಿದರೂ ಏನೋ ಸಾಧಿಸಿದ ಖುಷಿ ಮೈತುಂಬ ಆವರಿಸಿತು. ಅವಳು ಅವನ ಬೆರಳುಗಳ ಒಳಗೆ ಬೆರಳು ಪೋಣಿಸಿದಳು.
 

‘ಸ್ಸಾರಿ ನನ್ಹೆಸ್ರು ಶಾಲಿನಿ ಅಲ್ಲ ಜಾನಕಿ’ ಎಂದಳು ಎದುರಿಗಿದ್ದ ತುಂಬಿದ ರಸ್ತೆಯನ್ನೇ ದಿಟ್ಟಿಸಿಕೊಂಡು.
*


ಕಾಜೂರು ಸತೀಶ್ 

Thursday, October 22, 2020

ನಿಶಾಗಂಧಿ


ಎರಡು ವರ್ಷಗಳಿಂದ ಖಾಲಿಯಾಗಿದ್ದ ಪಕ್ಕದ ರೂಮಿಗೆ ಈ ವರ್ಷದ ಸುಯ್ಯೋ ಮಳೆಗಾಲ ಶುರುವಾಗುವ ಹೊತ್ತಿಗೆ ಬಾಡಿಗೆದಾರರೊಬ್ಬರು ಬಂದಿದ್ದರು. ಅದರ ಪಕ್ಕದ, ಅಂದರೆ ಎದುರಿಗಿನ ಕೋಣೆಯಲ್ಲಿ ಕಳೆದೆರಡು ವರ್ಷಗಳಿಂದ ಪಂಚಾಯತ್ ಕಾರ್ಯದರ್ಶಿ ಶ್ರೀನಿವಾಸ ವಾಸವಾಗಿದ್ದ. ಹುಣಸೂರು ಸಮೀಪದ ಕಲ್ಲಹಳ್ಳಿಯವನು. ಇನ್ನೂ ಸಣ್ಣ ಪ್ರಾಯ.


ಶ್ರೀನಿವಾಸ ಅಮ್ಮನನ್ನು ಬಿಟ್ಟು ಹೊರಗಿದ್ದವನೇ ಅಲ್ಲ. ಅಮ್ಮ ಮನೆಯಲ್ಲಿ ಒಬ್ಬಳೇ ಎನ್ನುವ ಕಾರಣಕ್ಕೆ ಕೆಲವು ಉದ್ಯೋಗಗಳನ್ನು ತ್ಯಜಿಸಿದರೂ ಕಡೆಗೆ ಮಡಿಕೇರಿಯಿಂದ ಮೂರು ಗಂಟೆ ಅಂಕುಡೊಂಕಿನ ಉಬ್ಬುತಗ್ಗಿನ ರಸ್ತೆಯನ್ನು ಕ್ರಮಿಸಿದರೆ ಸಿಗುವ ಕರಿಕೆ ಪಂಚಾಯತ್ತಿನಲ್ಲಿ ಕಾರ್ಯದರ್ಶಿಯಾಗಿ ಸೇರಿಕೊಂಡಿದ್ದ.


ಹೀಗಿರುವಾಗ ನೆರೆಮನೆಗೆ ಬಂದವರು ಬ್ಯಾಂಕ್ ಉದ್ಯೋಗಿ ಶಮಿತಾ. ಮಂಡ್ಯದ ಹುಡುಗಿ. ಇವಳದ್ದೂ ಶ್ರೀನಿವಾಸನದ್ದೇ ಕಥೆ. ಪದವಿ ಮುಗಿದ ಮೇಲೆ ಒಂದೆರಡು ವರ್ಷ ಮನೆಯಲ್ಲೇ ಇದ್ದು ಬೇಜಾರಾಗಿ ‘ಕೆಲ್ಸ ಯಾವ್‍ದಾದ್ರೂ ಸರಿ ಎಲ್ಲಾದ್ರೂ ಸರಿ ಹೋಗಿಬಿಡ್ತೇನೆ’ ಎಂಬ ನಿರ್ಧಾರಕ್ಕೆ ಬಂದು ಈ ಊರು ಸೇರಿದ್ದಳು.


ಶಮಿತಾಳ ಕೋಣೆಗೂ ಶ್ರೀನಿವಾಸನ ಕೋಣೆಗೂ ಒಂದು ಸಣ್ಣ ಟಾರು ರೋಡಿನ ಅಂತರವಿತ್ತು. ಇವನು ಏಳುವ ಹೊತ್ತಿಗೆ ಅವಳ ಕೋಣೆಯಲ್ಲಿ ಬೆಳಕು ಕಾಣಿಸುತ್ತಿತ್ತು. ಇಬ್ಬರ ಕೋಣೆಯ ಬಾಗಿಲುಗಳೂ ಮುಚ್ಚಿದ ಸ್ಥಿತಿಯಲ್ಲೇ ಇರುತ್ತಿದ್ದವು. ಲೆಕ್ಕಾಚಾರಗಳಲ್ಲಿ ಮಧ್ಯರಾತ್ರಿಯವರೆಗೂ ಕಳೆದುಹೋಗುತ್ತಿದ್ದ ಇವನು ಅವಳ ಕೋಣೆಯಲ್ಲಿ ಬೆಳಕು ಮೂಡಿದ ನಂತರವಷ್ಟೇ ಕಣ್ಣುತೆರೆಯುವುದು. ಅಷ್ಟರಲ್ಲಾಗಲೇ ಕಾಡುಕೋಳಿಗಳ ಹಾಡು, ಕೆಲಸದ ಜನರನ್ನು ಹೊತ್ತೊಯ್ಯುವ ಬರ್ರೋ ಜೀಪಿನ ಸದ್ದು, ಶಾಲೆಯ ಮಕ್ಕಳು ಸಿಳ್ಳೆಹೊಡೆದುಕೊಂಡು ಎದುರಿಗಿದ್ದ ಸೀಬೆ, ಮಾವಿನ ಮರದಲ್ಲಿ ಮಿಡಿಗಳು ಕಾಣುತ್ತಿವೆಯೇ ಎಂದು ನೋಡುತ್ತಾ ಸಾಗುವ ದೃಶ್ಯ, ಮೊಬೈಲಿನಲ್ಲಿ ಆಗಲೇ ಬಂದು ಕುಳಿತ ಮಿಸ್ಡ್ ಕಾಲ್‍ಗಳು.. ಇವೆಲ್ಲದರ ಅನುಭವವಾಗಿರುತ್ತಿದ್ದವು. ರಸ್ತೆ, ಚರಂಡಿ, ಶೌಚಾಲಯ, ಮನೆ... ಹೀಗೆ ನೂರೆಂಟು ಪ್ರಶ್ನೆಗಳು.


ಎಷ್ಟೋ ಬಾರಿ ಎದುರು ಮನೆಯವಳೊಂದಿಗೆ ಮಾತನಾಡಬೇಕೆನಿಸಿತ್ತು ಶ್ರೀನಿವಾಸನಿಗೆ. ಆದರೆ ಮಾತನಾಡುವುದಿರಲಿ, ಮುಖನೋಡಿಬಿಟ್ಟರೂ ಅದಕ್ಕೆ ರೆಕ್ಕೆ-ಪುಕ್ಕಗಳು ಮೂಡುತ್ತಿದ್ದವು ಈ ಹಳ್ಳಿಯಲ್ಲಿ. ಸ್ವಲ್ಪ ಹೆಚ್ಚುಕಮ್ಮಿಯಾದರೂ ಮನೆಯ ಯಜಮಾನ ಮನೆ ಖಾಲಿಮಾಡಿಸಿಬಿಡುತ್ತಿದ್ದ. ಆಮೇಲೆ ಇಡೀ ಊರು ಸುತ್ತಿದರೂ ಅಲ್ಲೆಲ್ಲೂ ಬಾಡಿಗೆ ಮನೆಗಳಿರಲಿಲ್ಲ.


ತಿಂಗಳುಗಳು ಕಳೆದವು. ಮಳೆಯ ಆರ್ಭಟಕ್ಕೆ ಅವಳು ತುಸು ಗಾಬರಿಗೊಂಡಂತೆ ಕಂಡಳು. ರಸ್ತೆಗೆ ಅಡ್ಡಲಾಗಿ ಮರ ಬೀಳುವುದು, ರಸ್ತೆಯನ್ನೇ ಕೊಚ್ಚಿಕೊಂಡು ಹೋಗುವಂತೆ ನೀರು ಹರಿಯುವುದು, ಎಲ್ಲೆಲ್ಲಿಂದಲೋ ಹಾವುಗಳು ಬಂದು ಕಿಟಕಿಯ, ಬಾಗಿಲ ಸಂದಿಯಲ್ಲಿ ನಿಲ್ಲುವುದು ಇತ್ಯಾದಿಗಳನ್ನು ಅರಗಿಸಿಕೊಳ್ಳುವುದಕ್ಕೆ ತಿಂಗಳುಗಳು ಬೇಕಾದವು.


ತಿಂಗಳುಗಳು ಕಳೆದರೂ ಶ್ರೀನಿವಾಸನಿಗೆ ಅವಳ ಹೆಸರಿನ ಬಗ್ಗೆಯಾಗಲೀ, ಊರಿನ ಬಗ್ಗೆಯಾಗಲೀ ಏನೂ ತಿಳಿದಿರಲಿಲ್ಲ. ಒಂದು ಸಂಜೆ ಸಮೀಪದಲ್ಲಿ ವೈಫೈ ಇದೆಯೆಂದು ಸಂದೇಶ ಬಂದಾಗ ‘ಶಮಿತಾ ಸಂಗೀತಾ’ ಎಂದಿತ್ತು. ಫೇಸ್ಬುಕ್ಕಿನಲ್ಲಿ ಅದೇ ಹೆಸರು ಹುಡುಕಿದರೆ ಎದುರಿಗಿರುವ ಅದೇ ಹುಡುಗಿ! ಹಾಗೆ ಅವಳ ಹೆಸರು ತಿಳಿಯಿತು. ಕೆಲವು ಬೆಟ್ಟಗಳ,ನದಿ-ತೊರೆಗಳ ಚಿತ್ರಗಳಿದ್ದವು. ಅವಳ ಇರುವಿಕೆಗಿಂತಲೂ ಮುದ್ದಾದ ಅವಳ ಪಟಗಳಿದ್ದವು. ಒಂದೊಂದಕ್ಕೂ ಸಾವಿರಗಟ್ಟಲೆ ಲೈಕುಗಳು. ತನ್ನ ಕುರಿತು ‘ಸೌಂಡ್ ಆಫ್ ಸೈಲೆನ್ಸ್’ ಎಂದು ಬರೆದುಕೊಂಡಿದ್ದಳು. ಒಂದೇ ಉಸಿರಿನಲ್ಲಿ ಅವುಗಳೆಲ್ಲವನ್ನೂ ಡೌನ್ಲೋಡ್ ಮಾಡಿ ನೋಡಿದರೆ ಅವಳು ಹಾಡಿರುವ ಹಾಡುಗಳು. ಆ ‘ಮೇಘ ಮಲ್ಹಾರ’ದಲ್ಲಿ ಆಲಾಪಿಸಿದ್ದಂತೂ ಸುಪರ್ಬ್. ಬೆರಗಾದ ಶ್ರೀನಿವಾಸ.


ಶ್ರೀನಿವಾಸನೂ ಒಳ್ಳೆಯ ಹಾಡುಗಾರನೇ. ಒಂದಷ್ಟು ಮಾದೇಶನ ಹಾಡುಗಳು, ತತ್ವಪದಗಳು ಅವನ ನಾಲಗೆಯಲ್ಲಿ ನಿತ್ಯ ನಲಿದಾಡುತ್ತಿದ್ದವು. ಹಾಗೆಂದು ಅವನ್ನು ಈ ಫೇಸ್ಬುಕ್ಕಿನಲ್ಲೆಲ್ಲಾ ಹಾಕಿರಲಿಲ್ಲ.


ಅತ್ತ ಒಬ್ಬಳೇ ಇದ್ದೂ ಇದ್ದೂ ಬೇಜಾರಾಗಿ ಕಮಲವ್ವ ‘ಲೋ ಯಾವ್ದಾದ್ರೂ ಹುಡ್ಗಿ ನೋಡ್ಲಾ... ನನ್ಕೈಲಾಗಕಿಲ್ಲ, ಬೇಗ ಲಗ್ನ ಆಗು ಹ್ಞೂಂ...’ ಎಂದು ಇವನು ಫೋನು ಮಾಡಿದಾಗಲೆಲ್ಲ ಹೇಳುತ್ತಿದ್ದಳು. ಯಾಕೋ ಏನೋ ಕೆಲಸ ಸಿಕ್ಕ ನಂತರದ ಎರಡು ವರ್ಷಗಳಲ್ಲಿ ಬಿಡುವಿಲ್ಲದ ದುಡಿಮೆಯ ನಡುವೆ ಅದನ್ನೆಲ್ಲ ಯೋಚಿಸಿಯೇ ಇರಲಿಲ್ಲ ಶ್ರೀನಿವಾಸ.


ಫೇಸ್ಬುಕ್ಕಿನ ಅವಳ ಹಾಡುಗಳು ಅವನ ಮನದ ಕೋಣೆಯನ್ನೆಲ್ಲ ಆವರಿಸಿಕೊಂಡು ಇವನನ್ನು ನಿಲ್ಲಲೂ ಕೂರಲೂ ಬಿಡುತ್ತಿರಲಿಲ್ಲ. ಹೊಸದೊಂದು ಖಾತೆ ತೆರೆದು ‘ಸಂಗೀತ ಶ್ರೀನಿ’ ಎಂದು ಹೆಸರು ಕೊಟ್ಟ. ಎಲ್ಲೂ ತನ್ನ ಪಟವನ್ನು ಹಾಕಿಕೊಳ್ಳಲಿಲ್ಲ. ಕೋಣೆಯ ಮಬ್ಬು ಬೆಳಕಿನಲ್ಲಿ ತಾನು ಹಾಡಿದ ಮಂಟೇಸ್ವಾಮಿಯ ಪದವೊಂದನ್ನು ಅಪ್ಲೋಡ್ ಮಾಡಿದ. ಒಂದಷ್ಟು ಹಾಡುಗಾರರನ್ನು ಗೆಳೆಯರನ್ನಾಗಿಸಿಕೊಂಡ ನಂತರ ಎಷ್ಟೋ ಬಾರಿ ಯೋಚಿಸಿ ಒಂದು ರಿಕ್ವೆಸ್ಟ್ ಕಳಿಸಿದ. ಅಷ್ಟರಲ್ಲಾಗಲೇ ಬೆವರಿ ನೀರಾಗಿದ್ದ. ಎದುರುಗಡೆಯ ಅವಳು ಮೊಬೈಲನ್ನು ಹಿಡಿದು ಕೂತಿದ್ದಿರಬೇಕು, ನಾಲ್ಕೈದು ನಿಮಿಷಗಳ ನಂತರ ರಿಕ್ವೆಸ್ಟ್ ಆಕ್ಸೆಪ್ಟ್ ಆಗಿತ್ತು. ಆ ಖುಷಿಯಲ್ಲಿ ಹೊರಬಂದು ಎದುರಿಗಿದ್ದ ಬೆಟ್ಟದ ಮುಖ ನೋಡಿದ. ಅಲ್ಲೊಂದಿಲ್ಲೊಂದು ವಿದ್ಯುದ್ದೀಪ ಹೊತ್ತಿಕೊಂಡಿತ್ತು. ಒಂದೊಂದು ದೀಪಕ್ಕೂ ಕನಿಷ್ಟ ನೂರು ಮೀಟರ್ ಅಂತರವಿರಬಹುದು ಅಥವಾ ಹೆಚ್ಚೇ ಇರಬಹುದೇನೋ. ತನಗೂ ಶಮಿತಾಳಿಗೂ ಒಂದು ರಸ್ತೆಯ ಅಂತರವಿದೆ ಅಥವಾ ಒಂದು ಕೋಣೆಯ ಅಂತರವಿದೆ. ವಿಪರೀತ ಬೆವರತೊಡಗಿ ಫ್ಯಾನಿನ ಕೆಳಗೆ ಬಂದು ಕುಳಿತ.


ಅಂದಿನಿಂದ ಇವನು ಹಾಡುವುದು, ಅಪ್ಲೋಡ್ ಮಾಡುವುದು ಮತ್ತು ಅದನ್ನು ಕೇಳಿ ಅವಳು ಕಮೆಂಟು ಮಾಡುವುದು, ಆಗ ಮಹಾನಂದದ ಸಾಗರದಲ್ಲಿ ಇವನು ಮುಳುಗೇಳುವುದು- ನಡೆಯುತ್ತಿತ್ತು. ಅವಳ ಶಾಸ್ತ್ರೀಯ ಗಾನಕ್ಕೆ ಮೊದಲು ಕಮೆಂಟಿಸುವುದು ಇವನೇ. ಹೀಗೆ ಮಾಡುತ್ತಲೇ ಅವನೊಳಗಿನ ಸಂಕೋಚ ಕಡಿಮೆಯಾಗುತ್ತಿರುವುದನ್ನು ನೆನೆದು ಪುಳಕಗೊಂಡ. ಕೈಗೊಂದು ಕ್ಯಾಮರವೂ ಬಂದ ಮೇಲೆ ಹಾಕುವ ಚಿತ್ರಗಳಿಗೆ ಅವಳ ಕಮೆಂಟುಗಳ ಸುರಿಮಳೆ.


ಕಳೆದ ದೀಪಾವಳಿಗೆ ಯುವಕ ಸಂಘದ ವತಿಯಿಂದ ನಡೆದ ಗಾಯನ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಶ್ರೀನಿವಾಸ ಈ ಸಲ ಶಮಿತಾ ಇದ್ದ ಕಾರಣ ಗಂಟಲು ಸರಿಯಿಲ್ಲವೆಂದು ಸುಳ್ಳು ಹೇಳಿ ಹಾಡುವ ಗೋಜಿಗೇ ಹೋಗಿರಲಿಲ್ಲ. ಶಮಿತಾ ಅದರಲ್ಲಿ ಗೆದ್ದಾಗ ಸಂಭ್ರಮಿಸಿದ್ದ.


ಇವರಿಬ್ಬರು ಒಮ್ಮೆಯೂ ಒಬ್ಬರನ್ನೊಬ್ಬರು ಹತ್ತಿರದಿಂದ ನೋಡಿರಲಿಲ್ಲ. ಶ್ರೀನಿವಾಸನಿಗೆ ತನ್ನ ಕಪ್ಪು ಮುಖ, ದಪ್ಪ ತುಟಿಯ ಬಗ್ಗೆ ಒಂಥರಾ ಕೀಳರಿಮೆಯಿತ್ತು. ಅದಕ್ಕೆ ಸರಿಯಾಗಿ ಬಿಳಿಬಿಳಿ ಗಡ್ಡವೂ ಅಲ್ಲಲ್ಲಿ ಇಣುಕುಹಾಕಿತ್ತು. ‘ನಾನಿಂಥಾ ಕರಿಮುಸುಂಡಿ ಅಂತ ಅವ್ಳಿಗೆ ಗೊತ್ತಿದ್ದಿದ್ರೆ ಒಂದ್ ಕಮೆಂಟೂ ಮಾಡ್ತಿರ್ಲಿಲ್ಲ’ ಎಂದು ಒಬ್ಬನೇ ಹೇಳಿಕೊಂಡಿದ್ದ. ಜೊತೆಗೆ ತನ್ನಪ್ಪ ಬದುಕಿದ್ದಾಗ ಮಾಡುತ್ತಿದ್ದ ತಮಟೆ ಹೊಡೆಯುವ ಕೆಲಸದ ಬಗ್ಗೆ ತಿಳಿದರಂತೂ...

ಮತ್ತೆರಡು ವರ್ಷಗಳು ಕಳೆದೇಹೋದವು. ಈ ನಡುವೆ ಕಮಲವ್ವ ಹೊಲದಲ್ಲಿ ಬಿದ್ದು ಕಾಲುಮುರಿದುಕೊಂಡಳು. ಕಂಡಕಂಡವರಲ್ಲೆಲ್ಲ ಶ್ರೀನಿವಾಸನಿಗೆ ಹುಡುಗಿ ಹುಡುಕಲು ಹೇಳುತ್ತಿದ್ದಳು.


ಶಮಿತಾಳಿಗೆ ವರ್ಗಾವಣೆಯಾಗಿರುವ ಸುದ್ದಿ ಅವಳ ಫೇಸ್ಬುಕ್ ಪೋಸ್ಟ್‍ನಿಂದ ತಿಳಿಯಿತು. ಏನೂ ಕಮೆಂಟಿಸಲಿಲ್ಲ ಶ್ರೀನಿವಾಸ. ಬೆಳಿಗ್ಗೆಯೇ ಒಂದು ಕಾರು ಬಂದು ನಿಂತಿತ್ತು. ಲಗ್ಗೇಜನ್ನು ಅದಾಗಲೇ ಅದಕ್ಕೆ ತುಂಬಲಾಗಿತ್ತು. ಒಂದು ಮಾತನ್ನಾದರೂ ಆಡಬೇಕು ಅನ್ನಿಸಿತು. ಬಾಗಿಲು ತೆರೆದು ಹೊರಬಂದ. ಅವಳು ಕಾರುಹತ್ತಿ ಹೊರಟುಹೋದಳು. ಶ್ರೀನಿವಾಸನ ಗಂಟಲು ಬಿಗಿದಿತ್ತು.


ಕಮಲವ್ವನ ಫೋನು- ‘ಲೇ ತಿಕ್ಲೇಸಿ ನೀನ್ ಯಾವ್ದಾದ್ರೂ ಬೆಳ್ಗಿರೋ ಮೂದೇವಿನ ತಂದ್ಯೋ, ಅಮ್ಯಾಕೆ ಅವ್ಳು ನನ್ನ ನೋಡ್ಕತಾಳೆ ಅಂತ ಮಾತ್ರ ಅನ್ಕಬೇಡ. ನಿನ್ಮೂತಿಗೆ ಒಬ್ಳು ಕರ್ರಗಿರೋ ಹುಡ್ಗೀನೇ ಸಿಗ್ಲಿ... ನನ್ಕೈಲಾಗ್ತಿಲ್ಲ ಕಣ್ಲಾ ಬೇಗ ಮಾಡ್ಕ..’
ಒಳ ಬಂದವನೇ ತನ್ನ ಫೇಸ್ಬುಕ್ ಖಾತೆಯ ಹೆಸರನ್ನು ‘ಶ್ರೀನಿವಾಸ ಶ್ರೀನಿ’ ಎಂದು ಬದಲಾಯಿಸಿ ಪ್ರೊಫೈಲ್ ಫೊಟೊ ಜಾಗದಲ್ಲಿ ತನ್ನ ಪಟವನ್ನು ಮತ್ತಷ್ಟೂ ಕರ್ರಗಾಗುವಂತೆ ಎಡಿಟ್ ಮಾಡಿ ಅಪ್ಲೋಡ್ ಮಾಡಿದ.


ಕಮಲವ್ವನಿಗೆ ಕರೆಮಾಡಿ ‘ಅಕ್ಕೋ.. ನೀನೇ ಎಲ್ಲಾದ್ರೂ ನೋಡ್ಕಂಡಿರು.. ತಡಿ ಮುಂದಿನ್ವಾರ ಬತ್ತೀನಿ ಮದ್ವೆ ಆಗೂವಂತೆ’ ಹೇಳಿದ.
*



-ಕಾಜೂರು ಸತೀಶ್


Wednesday, October 21, 2020

ಅಲ್ಲೇ ಇದೆ ನಮ್ಮ ಮನೆ



‘ಯುಕ್ತಿ’ ಪತ್ರಿಕೆಯಲ್ಲಿ ಬಂದ ‘ಮನೆ ಮಾರಾಟಕ್ಕಿದೆ’ ಜಾಹೀರಾತು ಓದಿ, ಅದರಲ್ಲಿದ್ದ ನಂಬರಿಗೆ ಫೋನ್ ಮಾಡಿ, “ಸರ್ ಇದು ಎಲ್ಬರುತ್ತೆ? ಸೋಮವಾರಪೇಟೆ ಹತ್ರ ಇರೋ ಶೆಟ್ಟಳ್ಳಿನಾ? ಯಾಕಂದ್ರೆ ಸಕ್ಲೇಶಪುರದತ್ರ ಒಂದು ಶೆಟ್ಟಳ್ಳಿ ಇದೆ ಅದ್ಕೆ ಕೇಳ್ದೆ” ಎಂದು ಒಂದೇ ಉಸಿರಿನಲ್ಲಿ ರಾಘವ ಕೇಳಿದ.

“ಸೋಮವಾರಪೇಟೆ ಹತ್ರಾನೇ. ಬನ್ನಿ ನೋಡ್ಕೊಂಡು ಬರುವಂತೆ”

“ಸರ್.. ಆ ಹಾಲೆಣ್ಣು ಮರದ್ಹತ್ರನಾ?”

ಫೋನ್ ಕಡಿತಗೊಂಡಿತ್ತು.

ವರುಷಗಳ ಹಿಂದೆ ನಾಪತ್ತೆಯಾಗಿದ್ದ ಅಪ್ಪ ನೆನಪಾಗಿ ಬಂದು ರಾಘವನ ಕಣ್ಣುಗಳನ್ನು ಕದಡಿ ಹೋಗಿದ್ದ.

***

ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ. ಮನೆಮಾರಿ, ಒಂದು ಲಾರಿಯಲ್ಲಿ ಪಾತ್ರೆಗೀತ್ರೆ, ಬಟ್ಟೆಬರೆ, ಸೌದೆಗೀದೆ ಎಲ್ಲ ತುಂಬಿಕೊಂಡು ಊರುಬಿಡುವ ಸಿದ್ಧತೆಯಲ್ಲಿತ್ತು ವೇಲುವಿನ ಕುಟುಂಬ. ಪೋಲೀಸರ ಭಯದಿಂದ ರಾತ್ರೋರಾತ್ರಿ ಸೌದೆ ಸುಟ್ಟು ಮಸಿ ಉತ್ಪಾದಿಸಿ ಕಾಸು ಸಂಪಾದಿಸುತ್ತಿದ್ದ ವೇಲು ಅಲಿಯಾಸ್ ವೇಲಾಯುದನಿಗೆ ಮನೆಮಂದಿಯ ಹೊಟ್ಟೆಗಳನ್ನು ಸಾಕಲು ಸಾಧ್ಯವಾಗುತ್ತಿರಲಿಲ್ಲ. ಪಾಲುವಾಣ ಸವರುವುದು, ಎರತೆ ಮಾಡುವುದು, ಅಗತೆ ಮಾಡುವುದು, ಚಿಗುರು ತೆಗೆಯುವುದು, ಕಾಫಿ ಕುಯ್ಯುವುದು, ಮನೆ ಕಟ್ಟುವುದು, ಅಡುಗೆ ಮಾಡುವುದು ಮುಂತಾದ ಬಹುಮುಖ ಕೆಲಸಗಾರನಾದರೂ, ವರುಷವಿಡೀ ಕೆಲಸವಿರದೆ ಒಲೆಬುಡದಲ್ಲಿ ಕುಳಿತು ಬಾಳೆಕಾಯಿ, ಅಣಬೆ, ಸಿಹಿಗೆಣಸನ್ನೆಲ್ಲ ಸುಟ್ಟು ತಿನ್ನುತ್ತಾ ರೇಡಿಯೋ ಸಿಲೋನಿನ ಹಾಡಿಗೆ ದನಿಗೂಡಿಸುತ್ತಿದ್ದ. ಹೆಂಡತಿ ನಾರಾಯಣಿಗೆ ಜ್ವರ ಬಂದರೂ, ಬೆರಳು ಕುಯ್ದುಕೊಂಡರೂ, ಕಾಲ್ಬೆರಳ ಸಂದಿಯಲ್ಲಿ ಹುಳ ತಿಂದು ಉರಿಹತ್ತಿ ‘ಹಾ..’ ಅಂದರೂ ಕೆಲಸಕ್ಕೆ ಕಳಿಸುವುದಕ್ಕೆ ಮಾತ್ರ ಮರೆಯುತ್ತಿರಲಿಲ್ಲ ವೇಲು. ಬೆನ್ನಿಗೆ ಬಿದ್ದಿರುವ ಮೂರು ಮಕ್ಕಳನ್ನು ನೆನೆಸಿಕೊಂಡು ಈರಪ್ಪಗೌಡರ ಕಾಫಿತೋಟಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದಳು ನಾರಾಯಿಣಿ.


ಹೀಗಿರುವ ಈ ಕುಟುಂಬ ಊರು ಬಿಡುವ ಸುದ್ದಿ ನೆರೆಕರೆಯವರಿಗೆಲ್ಲ ಖುಷಿ ತರಿಸಿತ್ತು. ಮನೆಯ ದಶದಿಕ್ಕುಗಳಿಗೂ ಚಾಚಿಕೊಂಡ ವೀರೇಶಗೌಡರು, ಸುಬ್ಬಯ್ಯಗೌಡರುಗಳಿಗೆಲ್ಲ ಒಳಗೊಳಗೇ ಒಂಥರಾ ಖುಷಿಯಾದರೂ, ‘ಛೆ! ಪಾಪ!’ ಎಂಬ ಮಾತೊಂದನ್ನು ಬಿಸಾಕಿ ಬೀಳ್ಕೊಟ್ಟಿದ್ದರು. ರವಿಗೌಡ ಆ ಮನೆ, ಜಾಗವನ್ನೆಲ್ಲ ಕೊಂಡುಕೊಂಡು ಹನ್ನೊಂದು ಸಾವಿರ ರೂಪಾಯಿಯನ್ನು ಕೊಟ್ಟು ಕಳಿಸಿದ್ದ.
ವೇಲುವಿನ ಮೂರನೇ ಮಗ ‘ಕಣ್ಣ’ ಪ್ರತೀವರ್ಷ ಕಾಯುತ್ತಿದ್ದ ಬೆಣ್ಣೆಹಣ್ಣಿನ ಗಿಡದಲ್ಲಿ ಫಸಲು ತುಂಬಿ ತುಳುಕುತ್ತಿತ್ತು. “ಗತಿಕೆಟ್ಟ ಕಾಲದಲ್ಲಿ ಹೀಗೆಲ್ಲ ಫಸಲು ಬಿಡುತ್ತೆ” ನಾರಾಯಿಣಿ ಸಮಾಧಾನಕ್ಕೇನೋ ಎಂಬಂತೆ ನುಡಿಯುತ್ತಿದ್ದಳು.


ಕಿತ್ತಳೆ, ಮಾವು, ಹಲಸು, ಚಕ್ಕೋತ, ಬಾಳೆ... ಇವೆಲ್ಲ ಮರಕ್ಕೇ ಭಾರವಾಗುತ್ತೇನೋ ಎಂಬಂತೆ ತೂಗಿ ತೊನೆಯುತ್ತಿದ್ದಾಗ ಎಂಥವನಿಗೂ ಆ ಜಾಗ, ಆ ಮನೆಯನ್ನು ಮಾರಲು ಮನಸ್ಸಾಗುವುದಿಲ್ಲ. “ಯಾಕಪ್ಪಾ ಇದನ್ನೆಲ್ಲ ಮಾರ್ತಿದ್ದೀಯ?” ಕಣ್ಣ ಕೇಳಿದರೆ, “ಹೋಗ್ಲಿಬಿಡು, ಈ ಜಾಗ ಸಿಗಲ್ಲ.. ಏನಾದ್ರೂ ಮಾಡಿ ಅವ್ರು ಕಿತ್ಕೋತಾರೆ.. ನೋಡ್ತಿದ್ದೀಯಲ್ಲ ನೀನೇ..” ಪ್ರಶ್ನೆ ಬೆಳೆಸದ ಹಾಗೆ ಉತ್ತರಿಸುತ್ತಿದ್ದ ವೇಲು.


ಗಂಟು-ಮೂಟೆ ಕಟ್ಟಿ ಲಾರಿಗೆ ತುಂಬಿಸಿದ್ದಾಯಿತು. ಮುದಿಯಾಗಿದ್ದ ಲಾರಿ ಊಂ...ಊಂ... ಎಂದು ಏದುಸಿರುಬಿಡುತ್ತಾ ಸಾಗುವಾಗ ಅದರ ಒಳಗೆ ಕಟ್ಟಿಹಾಕಿದ್ದ ಜಿಮ್ಮಿ ಓಓ.. ಎಂದು ಊಳಿಡತೊಡಗಿದ. ಅದಕ್ಕೆ ಮೊದಲ ಪ್ರಯಾಣವಾದ್ದರಿಂದ ‘ವ್ಯಾ..ವ್ಯಾ..’ ಮಾಡಿ ನಾರಾಯಿಣಿಯಿಂದ ಏಟು ತಿಂದು ‘ಕುಂಯ್’ ಎಂದು ತೆಪ್ಪಗೆ ಮುದುರಿ ಮಲಗಿಕೊಂಡಿತು. ವೇಲುವಿನ ಮುಖದಲ್ಲಿ ಗೆಲುವಿದ್ದರೆ, ನಾರಾಯಿಣಿಯ ಕಣ್ಣುಗಳು ಹೊರಗೆ ಸುರಿಯುತ್ತಿದ್ದ ಮಳೆಯನ್ನೇ ನೆನಪಿಸುತ್ತಿದ್ದವು.


ಐಗೂರು ಗ್ರಾಮದ ಮಾರಮ್ಮನ ಗುಡಿಗೆ ಹೋಗುವ ರಸ್ತೆಯ ಸ್ವಲ್ಪ ಮೇಲೆ ಗುಡಿಸಲೊಂದರಲ್ಲಿ ಹೊಸಾ ಬದುಕನ್ನು ಆರಂಭಿಸಿದ ವೇಲುವಿನ ಕುಟುಂಬಕ್ಕೆ ಸುರಿಯುತ್ತಿದ್ದ ‘ಸುಯ್ಯೋ’ ಮಳೆಗೆ ಹುಲ್ಲಿನ ಮಾಡಿನಿಂದ ಸೋರುತ್ತಿದ್ದ ಕೆಂಪುಹನಿಗಳೆಲ್ಲ ಒಗ್ಗಿಹೋಗಿದ್ದವು. ಆ ಬಿರುಮಳೆಗೆ ಕೆಲಸ ಇಲ್ಲದಿದ್ದಾಗ ವೇಲು ಸುಟ್ಟು ತಿನ್ನುತ್ತಿದ್ದ ಹಲಸಿನ ಬೀಜ, ಗೇರುಬೀಜ, ಒಣಮೀನುಗಳು ಕೇವಲ ವಾಸನೆಯಿಂದ ನೆರೆಮನೆಯವರ ಹೊಟ್ಟೆ ತುಂಬಿಸುತ್ತಿದ್ದವು. ಈ ನಡುವೆ ವೇಲುವಿನ ತಂಗಿ ರುಕ್ಮಿಣಿಯು ಅವಿವಾಹಿತನಾಗಿದ್ದ ತೋಟದ ಮಾಲಿಕನನ್ನು ಪಟಗಾಯಿಸಿಕೊಂಡು ಒಂದಷ್ಟು ಕಾಫಿ, ಒಳ್ಳೆಮೆಣಸನ್ನೆಲ್ಲ ಮನೆಗೊಯ್ದು ಸಿರಿವಂತರ ಪಟ್ಟಿಯಲ್ಲಿ ನಿಧಾನವಾಗಿ ಜಾಗಪಡೆದುಕೊಂಡ ಸುದ್ದಿ ಒಂದು ಸೋಮವಾರದ ದಿನ ಸೋಮವಾರಪೇಟೆ ಸಂತೆಯಲ್ಲಿ ಯಾರಿಂದಲೋ ಅವನಿಗೆ ತಿಳಿಯಿತು.


ಸದಾ ಶ್ರೀಮಂತನಾಗುವ ತನ್ನ ಕನಸಿಗೆ ಬರೀ ‘ಓದು ಓದು’ ಎಂದು ಶಾಲೆಗೆ ತೆರಳುವ ಮೂವರು ಮಕ್ಕಳು ಅಡ್ಡಿಯಾಗಿದ್ದರು. ವೇಲುವಿನ ಒಳಗೆ ಒಂದು ದೊಡ್ಡ ಕೊರಗು ಹಾಗೇ ಉಳಿದುಕೊಂಡಿತ್ತು. ಅವನ ತಾಯಿ ತೀರಿಕೊಂಡಾಗ ಸಿಕ್ಕ ಕಿವಿಯ ಓಲೆಯನ್ನು ಕಷ್ಟಕ್ಕೆ ಬೇಕಾಗಬಹುದು ಎಂದು ಯಾರಿಗೂ ತಿಳಿಯದಂತೆ ಮನೆಯ ಒಳಗಡೆ ಹೂತಿಟ್ಟಿದ್ದ. ಕ್ರಮೇಣ ಅವನಿಗೆ ವಿಪರೀತ ಮರೆವು ಬಾಧಿಸಿ ನಿಖರವಾಗಿ ಅದನ್ನು ಎಲ್ಲಿ ಇಟ್ಟಿದ್ದನೆಂದು ನೆನಪು ಮಾಡಿಕೊಳ್ಳಲು ಸೋತುಬಿಟ್ಟಿದ್ದ. ಮೈಮೇಲೆ ದೇವರು ಬಂದು ಕುಣಿಯುವ ಹಲವು ದೇವರುಗಳ ಕಾಲು ಹಿಡಿದು ಕೇಳಿಯೇ ಕೇಳಿದ್ದ. ತನ್ನ ತಂಗಿಯ ಮೇಲೂ ದೇವರು ಬರುವುದಾದರೂ ಈ ಸುದ್ದಿ ಬಹಿರಂಗವಾಗಬಹುದೆಂದು ಬಚ್ಚಿಟ್ಟಿದ್ದ. ಒಮ್ಮೆ ನೆಲವನ್ನೆಲ್ಲ ಬಗೆದಾಗ ಕುಡಿಕೆಯಲ್ಲಿ ಹತ್ತು, ಇಪ್ಪತ್ತು ಪೈಸೆಗಳ ಚಿಲ್ಲರೆ ಸಿಕ್ಕಿದ್ದವು ಅಷ್ಟೆ.


ಅದ್ಯಾವ ಕೇಡುಗಾಲಕ್ಕೋ ಏನೋ, ಆ ವರ್ಷದ ಮಳೆ ಬೆಂಕಿಯ ಹಾಗೆ ಸುಡಲು ತೊಡಗಿತ್ತು. ಚೋರಣ್ಣ ಹೊಳೆಯ ಮೀನುಗಳೆಲ್ಲ ಹಿಗ್ಗಾಮುಗ್ಗಾ ನುಗ್ಗಿ ನಾಲೆ, ಕೊಲ್ಲಿ, ಗದ್ದೆಗಳಿಗೆ ತಮ್ಮ ನೆಲೆಗಳನ್ನು ವಿಸ್ತರಿಸಿದ್ದವು. ವಾರಾನುಗಟ್ಟಲೆ ತರಕಾರಿ ಖರ್ಚು ಉಳಿಯಿತಲ್ಲ ಎಂದು ಸಂಭ್ರಮಿಸಿ ಬ್ಯಾಗು ತುಂಬ ಮಳ್ಳಿ, ಬಾಳೆ, ಹಾವುಮೀನುಗಳನ್ನೆಲ್ಲ ತುಂಬಿಕೊಂಡು ಬಂದಿದ್ದ ವೇಲು. “ಈ ಪುಡಿಮೀನು ತಂದ್ರೆ ಬೇಕಾದ್ರೆ ನೀವೇ ಸರಿ ಮಾಡ್ಬೇಕು.. ನಂಗಾಗಲ್ಲ” ನಾರಾಯಿಣಿ ಬಡಬಡಾಯಿಸಿದ್ದಳು.


ವೇಲುವಿನ ಒಳಗೆ ತಾನು ಹೂತಿಟ್ಟ ಚಿನ್ನವನ್ನು ಪತ್ತೆಹಚ್ಚುವ ಮತ್ತು ಒಂದು ಸಣ್ಣ ಮನೆಯನ್ನು ಕಟ್ಟಿಸುವ ಆಸೆ ಕುಡಿಯೊಡೆದು ಬೆಳೆಯಲಾರಂಭಿಸಿತು. ಸಿಕ್ಕಾಪಟ್ಟೆ ಮನೆಯು ಸೋರಲು ತೊಡಗಿ ಹುಲ್ಲಿನ ಮೇಲೆ ಪ್ಲಾಸ್ಟಿಕ್ ಹಾಸಿದರೂ ಪರಿಹಾರ ಕಾಣಲಿಲ್ಲ. ಇಂತಹ ಅಸಹಾಯಕತೆಗಳ ನಡುವೆಯೂ ಕೆಲಸಕ್ಕೆ ಹೋಗುತ್ತಿದ್ದ ನಾರಾಯಿಣಿ ಸಂಜೆ ಚಳಿಯಿಂದ ಗಡಗಡ ನಡುಗುತ್ತಾ ಬಂದು ಅಂಟಿಕೊಂಡ ಜಿಗಣೆಗಳನ್ನು ಕೀಳುವಾಗ, “ಏ ರಂಡೆ, ನೀನೇನ್ಮಾಡಿದ್ದೀಯ ಅಂತ ಗೊತ್ತು ನಂಗೆ..” ಎಂದು ಪೀಠಿಕೆ ಹಾಕುತ್ತಿದ್ದ.

“ನೀನು ಆ ಚಿನ್ನಾನ ಆ ಕಳ್ಳ ಸೂಳೆಮಗ್ನಿಗೆ ಕೊಟ್ಟಿದ್ದೀಯ... ಅವನ್ಮನೆ ಹಾಳ್ಬಿದ್ಹೋಗ” ಕೈಯನ್ನು ಮೂರು ಬಾರಿ ನೆಲಕ್ಕೆ ಬಡಿದು ಶಪಿಸುತ್ತಿದ್ದ.

“ನಾನು ಹಾಗೆ ಮಾಡಿದ್ರೆ ಹಾವು ಕಡೀಲಿ ನಂಗೆ” ಕಣ್ಣಲ್ಲಿ ನೀರು ತುಂಬಿ ಮೂಗು ಸೀಟುತ್ತಿದ್ದಳು ನಾರಾಯಿಣಿ.

ಇಂತಹ ಕಿತ್ತಾಟಗಳಲ್ಲಿ ಮನೆಮಂದಿಯೆಲ್ಲ ಉಪವಾಸ ಬೀಳುತ್ತಿದ್ದರೆ ನಾರಾಯಿಣಿ ಮತ್ತು ಮಕ್ಕಳ ಕಣ್ಣಿಗೆ ಕಣ್ಣೀರಿನ ಹಬ್ಬ. ಜಿಮ್ಮಿಯ ಹೊಟ್ಟೆ ಮಾತ್ರ ಭರ್ತಿಯಾಗಿರುತ್ತಿತ್ತು.
ಬೆಳಿಗ್ಗೆಗೆ ಸಿಟ್ಟು ಕಡಿಮೆಯಾಗಿರಬಹುದು, ಏನಾದರೂ ಸ್ವಲ್ಪ ಹೊಟ್ಟೆಗೆ ಏರಿಸಿಕೊಳ್ಳಬಹುದೆಂಬ ನಾರಾಯಿಣಿಯ ನಿರೀಕ್ಷೆ, ಆಸೆಗಳೆಲ್ಲ ಸೂರ್ಯೋದಯವಾಗುತ್ತಲೇ ಕಮರಿಹೋಗುತ್ತಿದ್ದವು.

“ನಾನೇನೂ ಆ ಕಳ್ಳ ನನ್ಮಕ್ಳಿಗೆ ಹೆದರ್ಕೊಂಡು ಊರ್ಬಿಡ್ಲಿಲ್ಲ. ಎಲ್ಲ ನಿನ್ನಿಂದಾಗಿ... ಆ ಬೋಳಿಮಗನಿಂದಾಗಿ” ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿದ್ದ. ನೆರೆಯ ರಾಜುವಿನ ಮನೆಯಿಂದ ಕೇಳಿಬರುವ ಸುಪ್ರಭಾತಕ್ಕೆ ಸೆಡ್ಡುಹೊಡೆಯುವಂತಿದ್ದವು ವೇಲುವಿನ ಸುಪ್ರಭಾತ.


ಇತ್ತ ಹಸಿವಿನಿಂದ ಕಂಗೆಟ್ಟೂ, ‘ಹೂತಿಟ್ಟ ಚಿನ್ನ’, ‘ಅಮ್ಮನ ಅಕ್ರಮ ಸಂಬಂಧ’ದ ಸತ್ಯಾಸತ್ಯತೆಯನ್ನು ಧ್ಯಾನಿಸಿಯೂ ದಿನೇದಿನೇ ಮಕ್ಕಳು ಬಡಕಲಾಗಿ ಮೌನಿಗಳಾಗತೊಡಗಿದವು. ಹೆಂಡ ಕುಡಿಯದ, ಬೀಡಿ ಸೇದದ ಅಪ್ಪನ ಮಾತು ಸತ್ಯವಿರಬಹುದೇ? ಅಥವಾ ತನ್ನ ಹೊಟ್ಟೆ ಕಟ್ಟಿ ಮಕ್ಕಳಿಗೆ ತಂದುಣಿಸುತ್ತಿದ್ದ ಅಪ್ಪನ ಮಾತು ಕೇಳಿದಾಗಲೆಲ್ಲ ಕಣ್ಣೀರಾಗುತ್ತಿದ್ದ ಅಮ್ಮ ಹಾಗೆಲ್ಲಾ ಮಾಡುತ್ತಾಳೆಯೇ? ತಲೆ ಚಿಟ್ಟುಹಿಡಿಯುವಂತೆ ಯೋಚಿಸಿದ ಮಕ್ಕಳು, ಜನರೊಂದಿಗೆ ಬೆರೆಯುವುದನ್ನೂ ಬಿಟ್ಟುಬಿಟ್ಟವು.


ಆಷಾಢದ ಮಳೆ ಎಷ್ಟು ಭಯಂಕರವಾಗಿ ಸುರಿಯುತ್ತಿತ್ತೆಂದರೆ ಸಾರಾಯಿ ಅಂಗಡಿಯ ಎದುರಿಗಿನ ಚರಂಡಿಯಲ್ಲಿ ಹಾಯಾಗಿ ಸುಖನಿದ್ದೆಯಲ್ಲಿ ಮುಳುಗುತ್ತಿದ್ದವರೆಲ್ಲ ಹೇಗೋ ಮನೆಸೇರಿಕೊಂಡಿದ್ದರು. ಇತ್ತ ಮನೆಯ ಮೇಲೆ ಹಾಸಿದ್ದ ಒಣಹುಲ್ಲು, ಪ್ಲಾಸ್ಟಿಕ್ಕುಗಳಿಗೆಲ್ಲ ಕೇರು ಮಾಡದ ಮಳೆಯು ಗೋಡೆಯ ಮೇಲೆ ಇಳಿದು ಹಸಿಇಟ್ಟಿಗೆಯನ್ನು ಕರಗಿಸಿ ನಿಧಾನಕ್ಕೆ ಉರುಳಿಸತೊಡಗಿತು.
“ಅಯ್ಯೋ.. ಇದ್ನೂ ಕಿತ್ಕೊಂಡ್ನಲ್ಲಾ, ನಮ್ಮನ್ನೂ ಕರ್ಕೊಳ್ಲಿ ಜೊತೆಗೆ..” ಗೋಳಿಡುತ್ತಾ ನಾರಾಯಿಣಿ ಮಕ್ಕಳ ಸಹಾಯದಿಂದ ಪಾತ್ರೆ ಪಗಡೆಗಳನ್ನೆಲ್ಲ ಹೊರಗೆಳೆದು ಹಲಸಿನ ಮರದ ಕೆಳಗೆ ಹರಡಿ ಪ್ಲಾಸ್ಟಿಕ್ಕು ಮುಚ್ಚಿದರೆ, ವೇಲು ತನ್ನ ಪ್ರೀತಿಯ ರೇಡಿಯೋದ ಆರೋಗ್ಯ ಹದಗೆಡದಂತೆ ಎಚ್ಚರ ವಹಿಸಿದ್ದ.


ರೂ. ಐದುಸಾವಿರ ಕೊಟ್ಟು ಕೊಂಡುಕೊಂಡಿದ್ದ ಸ್ವಲ್ಪ ಜಾಗದಲ್ಲಿ ಮನೆಕಟ್ಟುವುದು ಅನಿವಾರ್ಯವಾದಾಗ ವೇಲುವಿನ ಒತ್ತಡ ಜಾಸ್ತಿಯಾಗಿ ಜಗಳಕ್ಕಿದ್ದ ಎರಡು ವಿಷಯಗಳು ದಿನೇದಿನೇ ಬೆಳೆಯತೊಡಗಿದವು. ಕೂಡಿಟ್ಟ ಉಳಿದ ಆರುಸಾವಿರದಲ್ಲಿ ಹೆಂಚುಹಾಕಿದ ‘ಮನೆ’ ಎಂಬ ಗುಡಿಸಲು ನಿರ್ಮಾಣವಾಯಿತು. ಹೊಸಮನೆಗೆ ಸೇರಿದ ಮೇಲೆ ಸ್ವಲ್ಪ ದಿನ ಕ್ಯಾತೆ ತೆಗೆಯುವುದನ್ನೂ ಬಿಟ್ಟುಬಿಟ್ಟಿದ್ದ.


ಅದೆಲ್ಲಿದ್ದನೋ ಅಷ್ಟು ದಿನ, ಪೂವಯ್ಯ ತನ್ನ ಬೆನ್ನಿಗೆ ಒಂದಷ್ಟು ಜನರನ್ನು ಕಟ್ಟಿಕೊಂಡು “ಯಾರನ್ನು ಕೇಳಿ ಮನೆ ಕಟ್ಟಿದ್ಯಾ ಇಲ್ಲಿ? ಎಲ್ಲೆಲ್ಲಿಂದಲೋ ಬಂದು ಸಾಯ್ತೀರಿ ಇಲ್ಲಿ.. ಮಲಯಾಳೀ ಸೂಳೇಮಕ್ಳಾ” ಎಂದು ತಾನು ಧರಿಸಿದ್ದ ಬಿಳಿವಸ್ತ್ರಕ್ಕೂ ತನ್ನ ಮಾತಿಗೂ ಯಾವ ಸಂಬಂಧವೂ ಇಲ್ಲದಂತೆ ಕಿರುಚತೊಡಗಿದ.

“ಈ ವಾರ ಖಾಲಿ ಮಾಡ್ಬೇಕು, ಇಲ್ಲಾಂದ್ರೆ ಹುಟ್ಟಿಲ್ಲಾ ಅನ್ಸ್ಬಿಡ್ತೇನೆ.. ನಿಮ್ಗೆಲ್ಲ ಹೇಳವ್ರು ಕೇಳವ್ರು ಯಾರೂ ಇಲ್ಲ ಅಂದ್ಕೊಂಡ್ರಾ?” ಅಬ್ಬರಿಸಿದ ಪಂಚಾಯತಿ ಅಧ್ಯಕ್ಷ ಚಂದ್ರ.


ಅದು ಕೇಳಿದ ಮೇಲೆ ವೇಲು ವಿಪರೀತ ಮೌನಿಯಾದ; ನಿದ್ರಾಹೀನನಾದ. ವಾರದ ಏಳೂ ದಿನವೂ ಕತ್ತೆಯ ಹಾಗೆ ದುಡಿಯತೊಡಗಿದ. ಹಿರಿಯ ಮಗ ರಾಘವನಿಗೆ “ನಾನಿರ್ತೀನೋ ಇಲ್ವೋ ಗೊತ್ತಿಲ್ಲ, ನೀನು ಏನಾದ್ರೂ ಮಾಡಿ ಓದ್ಬೇಕು.. ಲಾಯರ್ರೋ ಪೋಲೀಸೋ ಏನಾದ್ರೂ ಆಗ್ಬೇಕು. ನಾನು ಬದುಕಿದ್ರೆ ನಿನ್ನ ಓದ್ಸೇ ಓದ್ಸ್ತೇನೆ. ಮತ್ತೆ ಆ ಶೆಟ್ಟಳ್ಳಿಯ ಮನೇನ ಹೇಗಾದ್ರೂ ಮಾಡಿ ನೀನು ಕೊಂಡ್ಕೋಬೇಕು” ಎಂದಿದ್ದ.

 ಆ ಮನೆ ಕೊಂಡ್ಕೋಬೇಕು ಎನ್ನುವ ಅಪ್ಪನ ಮಾತು ಅವನಿಗೆ ವಿಚಿತ್ರವಾಗಿ ಕಂಡಿತು. 'ಹೀಗೆಲ್ಲ ಆಗ್ಲಿಕ್ಕೆ ಇದೇನು ಸಿನಿಮಾನಾ ಅಥವಾ ಕಥೆನಾ' ಕೇಳಿದ್ದ ನೇರವಾಗಿ.


ವಾರ ಮುಗಿಯುತ್ತಾ ಬಂತು. “ಅವ್ನು ಬರ್ಲಿ ಮಾಡ್ತೀನಿ ಅವ್ನಿಗೆ... ನಾ ನನ್ನಪ್ನಿಗೆ ಹುಟ್ಟಿದ್ ಮಗ್ನೇ ಆಗಿದ್ರೆ” ಎನ್ನುತ್ತಿದ್ದ ವೇಲುವಿಗೆ “ಏನಾಗುತ್ತೆ ನಿಮಗೆ.. ಬರೀ ಬಾಯಲ್ಲಿ” ಕುಟುಕಿದಳು ನಾರಾಯಿಣಿ.


ಅವತ್ತು ಸಂಜೆ ಶಾಲೆಯಿಂದ ಮನೆಗೆ ತಲುಪಿದ್ದೇ ಅಂಗಳದಲ್ಲಿ ಪೂವಯ್ಯನ ಹೆಣ ಇಷ್ಟಗಲ ಕಣ್ಣುತೆರೆದು ಆಕಾಶ ದಿಟ್ಟಿಸುತ್ತಾ ಮಲಗಿದ್ದನ್ನು ಕಂಡು ಮಕ್ಕಳು ಗಾಬರಿಬಿದ್ದು ಜೋರಾಗಿ ಕಿರುಚಿಕೊಂಡವು. ಎಷ್ಟು ಹುಡುಕಿದರೂ ವೇಲುವಿನ ಸುಳಿವು ಸಿಗಲೇ ಇಲ್ಲ. ಕೆಲವು ಸಂಘಟನೆಗಳ ಸಹಕಾರವಿದ್ದುದರಿಂದ ಅವನ ಕುಟುಂಬವನ್ನು ಅಲ್ಲಿಂದ ಓಡಿಸಲು ಪೂವಯ್ಯನ ಹಿಂಬಾಲಕರಿಗೆ ಸಾಧ್ಯವಾಗಲಿಲ್ಲ. ಪಂಚಾಯತ್ ಅಧ್ಯಕ್ಷ ಚಂದ್ರ,ಈ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರದ ಆಜ್ಞೆ ಹೊರಡಿಸಿದ.


ಬದುಕು ಮೂರಾಬಟ್ಟೆಯಾಯಿತು. ವೇಲುವಿನ ಪತ್ತೆಯಾಗದೆ ಅವನ ಮೇಲೆ ಊರಿನವರು ದಿನಕ್ಕೊಂದು ಕತೆ ಕಟ್ಟಿ ಬೆಳೆಸತೊಡಗಿದರು. ನಾರಾಯಿಣಿ ಮಕ್ಕಳಿಗಾಗಿ ತನ್ನ ಬದುಕನ್ನು ಒತ್ತೆಯಿಟ್ಟಳು.

***

ತಹಶೀಲ್ದಾರ್ ಆದ ಖುಷಿ ರಾಘವನಿಗಿಂತ ನಾರಾಯಿಣಿಗೇ ಹೆಚ್ಚಿತ್ತು. ಊರಿನ ಬಹಿಷ್ಕಾರ ಈಗ ಕ್ರಮೇಣ ಕುಸಿದು ಒಬ್ಬಬ್ಬರೇ ಹತ್ತಿರವಾಗತೊಡಗಿದರು. ಕಾಕತಾಳೀಯವೆಂಬಂತೆ ಶೆಟ್ಟಳ್ಳಿಯ ಆ ಮನೆಮಾರುವುದಕ್ಕೆ ಅದರ ಮಾಲಿಕ ರವಿಗೌಡ ಹೊರಟಿರುವ ಸುದ್ದಿ ಆ ದಿನದ ‘ಯುಕ್ತಿ’ ಪತ್ರಿಕೆಯಲ್ಲಿ ನೋಡಿ ಅದನ್ನು ಕೊಳ್ಳಲು ಮರುದಿನ ಹೊರಡುವವನಿದ್ದ ರಾಘವ ತುಂಬಾ ಭಾವುಕನಾಗಿದ್ದ.


ಆ ರಾತ್ರಿಯ ಕನಸಿನಲ್ಲಿ ಶೆಟ್ಟಳ್ಳಿಯ ಮನೆಯ ಹಿಂಭಾಗದ ಬೆಣ್ಣೆಹಣ್ಣಿನ ಮರದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಣ್ಣುಗಳು ತೂಗಿದ್ದವು. ಮುಖಕ್ಕೆಲ್ಲ ಬಳಿದುಕೊಂಡಂತಿದ್ದ ಬಿಳಿಯ ಮೀಸೆ, ಗಡ್ಡದಿಂದ ತುಂಬಿಕೊಂಡಿದ್ದ ತನ್ನಪ್ಪ ಮೇಲಿನಿಂದ ಒಂದು ಗುದ್ದಲಿ, ಹಾರೆ ಹಿಡಿದು ಕಾಯುತ್ತಿದ್ದ. ‘ಚಿನ್ನ...ಮನೆ...’ ಕನವರಿಸುತ್ತಲೇ ಇದ್ದ ರಾಘವ.
*


ಕಾಜೂರು ಸತೀಶ್





Tuesday, October 20, 2020

ಭಕ್ತಿ

ದೇಶಭಕ್ತಿಯ ಕುರಿತು , ನಾಡು ನುಡಿಯ ಕುರಿತು ಘೋಷಣೆಗಳನ್ನು ಕೂಗಲು ಮತ್ತು ಆ ಕುರಿತು ಭಾಷಣ ಮಾಡಲು ಅವರು ಬೇರೆ ಬೇರೆ ಕಡೆಗಳಿಗೆ ಹೋಗುತ್ತಿದ್ದರು. ಒಂದು ದಿನವೂ ಅವರಿಗೆ ಬಿಡುವಿರುತ್ತಿರಲಿಲ್ಲ.

ತಿಂಗಳ ಕಡೆಯ ದಿನ ಕಚೇರಿಗೆ ಹೋಗಿ ಆ ತಿಂಗಳ ಸಹಿ ಮಾಡುವುದನ್ನು ಮಾತ್ರ ಅವರು ಮರೆಯುತ್ತಿರಲಿಲ್ಲ. ಸಂಬಳ ಬಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಎಲ್ಲರಿಗಿಂತ ಮೊದಲು ಇವರಿಂದಲೇ ಆಗುತ್ತಿತ್ತು. ಒಂದು ವೇಳೆ ತಡವಾದರೆ ಪ್ರತಿಭಟನೆಯ ಮುಂದಾಳತ್ವವನ್ನು ಇವರೇ ವಹಿಸಿಕೊಳ್ಳುತ್ತಿದ್ದರು.
*


ಕಾಜೂರು ಸತೀಶ್

Monday, October 19, 2020

ಅನುವಾದದ ಭಾಷೆ



ಕನ್ನಡಕ್ಕೆ ಅನುವಾದಿಸುವ ವಿಚಾರದಲ್ಲಿ ನಾನು ಬಳಸುವ ಭಾಷಾ ಕ್ರಮದ ಕುರಿತು:

* ಮೂಲದ ಭಾಷೆ ಸರಳವಾಗಿದ್ದರೆ ಅದೇ ಸರಳತೆಯನ್ನು ಕನ್ನಡದಲ್ಲಿ ತರುತ್ತೇನೆ.

*ಮೂಲ ಕೃತಿ/ಸೃಷ್ಟಿಯ ರಚನೆಯಾದ ಕಾಲಕ್ಕನುಸಾರವಾಗಿ ಆ ಕಾಲದ ಭಾಷೆಯನ್ನು ಕನ್ನಡದಲ್ಲಿ ಬಳಸುತ್ತೇನೆ.

* ಮೂಲದಲ್ಲಿ ಸರಳತೆಯ ಮೂಲಕ ಗಂಭೀರಾರ್ಥವನ್ನು ಹೊಳೆಯಿಸುವ ಕವಿತೆಗಳನ್ನು ಹೆಚ್ಚು ಆಯ್ದುಕೊಳ್ಳುತ್ತೇನೆ ಮತ್ತು ಅಂತಹ ಸಂದರ್ಭಗಳಲ್ಲಿ ಹೆಚ್ಚು ಜನಬಳಕೆಯಲ್ಲಿಲ್ಲದ ಪದಗಳನ್ನು ತಂದು ಗದ್ಯಗಂಧಿಯಾದ ಪದ್ಯವನ್ನು ಪದ್ಯದ ಬಿಗಿಹಿಡಿತಕ್ಕೆ ಒಳಪಡಿಸುವುದಿಲ್ಲ.

* ಶುದ್ಧ ಛಂದಸ್ಸಿಗೆ ಒಳಪಟ್ಟ ಕವಿತೆಯನ್ನು ಸರಿಸುಮಾರು ಅದೇ ಲಯದಲ್ಲಿ ಮತ್ತು ಅದೇ ಮಾದರಿಯ ಒಗ್ಗುವ ಭಾಷೆಯನ್ನು ಕನ್ನಡದಲ್ಲಿ ಬಳಸುತ್ತೇನೆ.


ಪಂಡಿತರ ಪರಂಪರೆಯೊಂದಿದೆ- ಅವರಿಗೆ ಸರಳ ಪದ, ಸರಳಾಭಿವ್ಯಕ್ತಿ ಎಂದರೆ ಇಷ್ಟವಾಗುವುದಿಲ್ಲ. ಅನುವಾದದಲ್ಲೂ ಈ ಆಡಂಬರವನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. 

ಅದರಲ್ಲೂ ಈ facebook ಎಂಬ 'ನೋಡುವ' ತಾಣದಲ್ಲಿ ಕಮೆಂಟುಗಳು ಲೈಕುಗಳನ್ನು ಗಮನಿಸಿದರೆ ನಾವು ಕುರಿಗಳಾಗುತ್ತಿರುವ ಸಂಗತಿ ಸ್ಪಷ್ಟವಾಗುತ್ತದೆ.
*


ಕಾಜೂರು  ಸತೀಶ್ 

ರಾಜಪುರಂ ನೆನಪುಗಳು

ಯಾಕೋ ಏನೋ ಇದ್ದಕ್ಕಿದ್ದ ಹಾಗೆ ರಾಜಪುರಂ ನೆನಪಾಯಿತು.

ಇವತ್ತು facebookನಲ್ಲಿ ಮಲಯಾಳಂ ಕವಿ ಪಿ ಎನ್ ಗೋಪಿಕೃಷ್ಣನ್ ಅವರ ಚಿತ್ರವನ್ನು ನೋಡುತ್ತಿದ್ದೆ. ಹಿರಿಯರೊಬ್ಬರ ಕನ್ನಡ ಅನುವಾದ ನನಗೆ ಹುಚ್ಚುಹಿಡಿಸುತ್ತಿತ್ತು. ಅದನ್ನು ತಲೆಯಿಂದ ವಿಸರ್ಜಿಸಿದ ಮೇಲೆ ಕರಿಕೆಯ ಬದುಕಿನ ಕೆಲವು ಪುಟಗಳು ತೆರೆದುಕೊಂಡವು.


*

ಬ್ಯಾಂಕಿಗೆ/ ಎಟಿಎಂನಲ್ಲಿ ಹಣ ತೆಗೆಯಲು( ನನ್ನ ಸ್ನೇಹಿತ ಅದನ್ನು ಕೆರ್ಕೊಂಡ್ಬರೋದು ಎನ್ನುತ್ತಿದ್ದರು) ಮಡಿಕೇರಿಗೆ ಹೋಗಬೇಕಿತ್ತು. ಅದಕ್ಕಾಗಿ ಒಂದು ದಿನ ರಜೆ ಮಾಡಬೇಕಿತ್ತು. ಕರಿಕೆಯ ಬದುಕು ದುಬಾರಿ. ತೆಂಗಿನಕಾಯಿ ಕುಂಬಳಕಾಯಿ ..ಹೀಗೆ ಎಲ್ಲವನ್ನೂ ತೂಕ ಮಾಡಿಯೇ ಕೊಡುವವರು ಅವರು. ಒಂದೊಮ್ಮೆ ಜೇಬು ಖಾಲಿಯಾಯಿತೆಂದರೆ ಅಥವಾ ಇದ್ದ ಹಣವನ್ನು ಯಾರಾದರೂ ಈಗ ಕೊಡುತ್ತೇನೆಂದು ನಯವಾಗಿ ಪಡೆದುಕೊಂಡರೆ ಬದುಕು ಕಷ್ಟವಾಗುತ್ತಿತ್ತು. ಅವರಾದರೋ, ಮರುದಿನ 'ನೀನು ಕೊಡಲಿಲ್ಲ ನಾನು ತೆಗೆದುಕೊಳ್ಳಲಿಲ್ಲ' ಎಂಬ ಸೂತ್ರಕ್ಕೆ ಕಟ್ಟುಬಿದ್ದಿರುತ್ತಾರೆ. ಹಾಗಾಗಿ ಉಪವಾಸ ಬದುಕುವುದೂ ಅಲ್ಲಿದ್ದಾಗಿನ ಬದುಕಿನ ಕ್ರಮವೇ ಆಗಿತ್ತು.

ಈ ನರಕದ ಜ್ವಾಲೆಯಿಂದ ಪಾರಾಗುವ ಬಗೆಯನ್ನು ಸುತ್ತಲೂ ಆಕಾಶದೆತ್ತರಕ್ಕೆ ಬೆಳೆದುನಿಂತಿದ್ದ ಗುಡ್ಡಗಳನ್ನು ತದೇಕಚಿತ್ತದಿಂದ ನೋಡಿ ಯೋಚಿಸಿದರೂ ಪರಿಹಾರ ಸಿಕ್ಕಿರಲಿಲ್ಲ. ಕಡೆಗೂ ಕೇರಳದ ರಾಜಪುರಂ ಎಂಬ ಊರು ATM ಎಂಬೋ ಮಾಂತ್ರಿಕನನ್ನು ತನ್ನ ಒಡಲಲ್ಲಿರಿಸಿಕೊಳ್ಳುವ ಸಾಹಸ ಮಾಡಿತು.

ಒಂದು ಬಗೆಯ ಹಿಂಸೆಯಿಂದ ನಮ್ಮನ್ನು ಹಣ್ಣು ಮಾಡಿತ್ತು ರಾಜಪುರಂ ಎಂಬ ಊರು. ನಮ್ಮ ಹಸಿವು ನೀಗಿಸಿದ ಆ ಊರಿಗೆ ಕೃತಜ್ಞತೆಗಳು!

ಕೇರಳದ ನೆಲದೊಂದಿಗಿನ ಒಡನಾಟವು ನನಗೆ ಮಲಯಾಳಂ ಸಾಹಿತ್ಯದ ಮೇಲೆ ಅತೀವ ಆಸಕ್ತಿ ಹುಟ್ಟುವಂತೆ ಮಾಡಿತು. ಪಾಣತ್ತೂರು ಹೋದಾಗಲೆಲ್ಲ ಮಾತೃಭೂಮಿ/ ಮಾಧ್ಯಮಂ ನನ್ನ ಕೈಗಂಟಿಕೊಳ್ಳುತ್ತಿತ್ತು. ನನ್ನ ಕೈಯಲ್ಲಿ ಮಲಯಾಳಂ ಪುಸ್ತಕವನ್ನು ನೋಡಿದ ಜನ 'ಇದೇನು ಮಲಯಾಳಂ ಪುಸ್ತಕ?' ಎಂದು ಕೇಳುತ್ತಿದ್ದರು. ನಾನು ಸುಮ್ಮನೆ ನಕ್ಕು 'ಕನ್ನಡ ಪುಸ್ತಕ ಸಿಗಲ್ವಲ್ಲಾ' ಎನ್ನುತ್ತಿದ್ದೆ. ಚಿತ್ರ ನೋಡಲು ಪುಸ್ತಕ ಕೊಂಡಿದ್ದಾರೆ ಎಂದು ಎಷ್ಟೋ ಜನ ಅಂದುಕೊಂಡಿದ್ದರು!

ಪಿ ಎನ್ ಗೋಪಿಕೃಷ್ಣನ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದೆ. ಆದರೆ ಅವರು ಯಾವ ಊರಲ್ಲಿ ಇದ್ದಾರೆಂದು ಅವರನ್ನು ಕೇಳಿರಲಿಲ್ಲ. ಒಂದು ದಿನ, ನಾನು ಬರೆದ ಮಲಯಾಳಂ ಕವಿತೆಯನ್ನು ಅವರು ಪತ್ರಿಕೆಗೆ ಕಳುಹಿಸಿ ಪ್ರಕಟ ಮಾಡಿಸಿದ್ದರು. ನನಗೆ ನಿಜಕ್ಕೂ ಖುಷಿಯಾಗಿತ್ತು.


ಅವರೊಂದಿಗೆ ಅಂತರ್ಜಾಲದಲ್ಲಿ ಸಂಪರ್ಕಿಸುವ ಹೊತ್ತಿನಲ್ಲಿ ಅವರು ಕಾಸರಗೋಡಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆಗಾಗ ರಾಜಪುರಂಗೆ ಬಂದು ಹೋಗುತ್ತಿದ್ದರು.   ಆಮೇಲೆ ಅವರು ನನ್ನ landmark ವಿಚಾರಿಸಿದರು. ನಾನು ಹೇಳಿದೆ. ಇಷ್ಟು ದಿನ ಅಲ್ಲೇ ಇದ್ದೆ, ಈಗ ವರ್ಗಾವಣೆ ಆಯಿತು ಎಂದರು!
*

ಯಾಕೋ ಏನೋ ರಾಜಪುರಂ ಎಂದಾಗ ಇಷ್ಟೆಲ್ಲ ನೆನಪಾಯಿತು!
*


ಕಾಜೂರು ಸತೀಶ್

Monday, October 12, 2020

ಬೆಳಗು

ಎಲ್ಲ ನಿದ್ರಿಸುವಾಗ ಸೂರ್ಯ ಮೂಡಣ ಕಡಲಿನಲ್ಲಿ ಮೈತೊಳೆದುಕೊಳ್ಳಲು ಸಿದ್ಧನಾಗುವ ಮುಂಜಾವದಲ್ಲಿ ಜಗತ್ತು ನಿರ್ಮಲವಾಗಿರುತ್ತದೆ, ಸುಖಿಯಾಗಿರುತ್ತದೆ. ರಾತ್ರಿಯ ನಿದ್ದೆ ಮನುಷ್ಯನ ದುರ್ಗುಣಗಳನ್ನು ಅಳಿಸುತ್ತಾ ಬೆಳಕು ಮೂಡುವ ಹೊತ್ತಲ್ಲಿ ಬಹುತೇಕ ಶಮನಗೊಂಡಿರುತ್ತದೆ.

ಬೆಳಕು ಮೂಡುವ ತುಸು ಮುನ್ನಾಕ್ಷಣಗಳು ಎಷ್ಟು ದಿವ್ಯವಾಗಿರುತ್ತವೆ! ಪಕ್ಕದಲ್ಲಿ ಸಣ್ಣ ಗೊರಕೆ, ದೂರದಲ್ಲೆಲ್ಲೋ ಉಳಿವಿಗಾಗಿ ಬೊಗಳುವ ನಾಯಿ, ಮಿಡತೆಯ ಪ್ರೇಮಾಲಾಪ, ಕಪ್ಪೆಗಳ ಇರುವಿಕೆಯ ಹಾಡು, ಮೈಮುರಿಯುವ ಮರ/ಎಲೆ- ಅದರ ಮೈಯಿಂದ ಆಗಷ್ಟೇ ಹುಟ್ಟುವ ಎಳೆಗಾಳಿ, ಮುಲ್ಲಾನ ಕೂಗು.. ಇವಿಷ್ಟು ಬಿಟ್ಟರೆ ಜಗದ ಕಿವಿ, ಹೃದಯ, ಮನಸ್ಸು ತಣ್ಣಗಿರುತ್ತದೆ. ಸಾವಿನ ನಂತರದ ದೇಹವೊಂದು ಪಡೆದುಕೊಳ್ಳುವ ಪ್ರಶಾಂತ ಸ್ಥಿತಿಯದು.

ಇವಿಷ್ಟು ಬಿಟ್ಟರೆ ಯಾರೂ ಕರೆ ಮಾಡಿ ತಮ್ಮ ಕೆಲಸವನ್ನು ಇನ್ನೊಬ್ಬರ ಮೇಲೆ ಹೇರುವುದಿಲ್ಲ. ಹಿಂಸಿಸುವುದಿಲ್ಲ. ಕೊಲ್ಲುವುದಿಲ್ಲ.

ಇವೆಲ್ಲಾ ಬೆಳಕು ಮೂಡುವವರೆಗೆ ಅಷ್ಟೆ. ಆಮೇಲೆ ಬದುಕು ಅಡುಗೆಮನೆಯಾಗುತ್ತದೆ, ಕಾರ್ಖಾನೆಯಾಗುತ್ತದೆ, ಆಂಬ್ಯುಲೆನ್ಸುಗಳಾಗುತ್ತವೆ. ವೇಷಗಳು ಬದಲಾಗುತ್ತವೆ. ಹೊಟ್ಟೆಯು ಉಳಿವಿಗಾಗಿ ಎದ್ದುನಿಲ್ಲುತ್ತದೆ.  

ಶಮನಗೊಳ್ಳಲು ಮರುದಿನದ ಆ ದಿವ್ಯ ಮುಂಜಾವದವರೆಗೂ ಕಾಯಬೇಕು.
*


ಕಾಜೂರು ಸತೀಶ್ 

Thursday, October 8, 2020

ಸಾವು ಹುಟ್ಟಿತು

ಮಗುವಿನಂಥ ಮೊದಲ ಸಾಲು ಹುಟ್ಟಿತು
ಅಳಿಸಿ ಹಾಕಬೇಕಾದಾಗ ನನ್ನ ನೆಲದ ಕಳ್ಳುಬಳ್ಳಿ ತುಂಡಾಯಿತು

ಹೂವಿನಂಥ ಎರಡನೇ ಸಾಲು ಹುಟ್ಟಿತು
ಅಳಿಸಿ ಹಾಕಬೇಕಾದಾಗ ಹಸಿರು ಶಾಯಿ ನನ್ನ ಕಣ್ಣ ತಿಂದಿತು

ನೀರಿನಂಥ ಮೂರನೇ ಸಾಲು ಹುಟ್ಟಿತು
ಅಳಿಸಿ ಹಾಕಬೇಕಾದಾಗ ನನ್ನ ಹೆಸರೇ ನರಳಿ ಸತ್ತಿತು

ಹುಟ್ಟುತ್ತಿಲ್ಲ ಸಾಲುಗಳೊಂದೂ ಈಗ
ಮಾತುಗಳೇ ಬೆಳೆದು ನನ್ನ ಕರುಳ ತಿಂದು ಸಾವು ಹುಟ್ಟಿತು
*


- ಕಾಜೂರು ಸತೀಶ್



ಸಾವು



ಎರಡು ಮೂರು ದಿನಗಳ ಬಿಡುವಿಲ್ಲದ ಕೆಲಸ. ಆ ಯುವಕ ತನ್ನ ಕೋಣೆಯಲ್ಲಿ ಹೃದಯಾಘಾತವಾಗಿ ತೀರಿಕೊಂಡಿದ್ದ.

ಮೊಬೈಲ್ ಚಾರ್ಜಿಗೆ ಇಟ್ಟಿದ್ದ. ಇಂಟರ್ನೆಟ್ ಆನ್ ಆಗಿತ್ತು. 

ನೂರಾರು ಕರೆಗಳು ಬಂದಿದ್ದವು. ಸಾವಿರಾರು whatsapp  ಸಂದೇಶಗಳೂ.

' ಸುರೇಶ ಕರೆ ಸ್ವೀಕರಿಸುತ್ತಿಲ್ಲ. ಕರೆ ಸ್ವೀಕರಿಸಿದರೆ ಸರಿ, ಇಲ್ಲದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು'

' ಈಗ ಬೆಂಗಳೂರಿಗೆ ಹೋಗಿ ಸಭೆಗೆ ಹಾಜರಾಗು, ಕಚೇರಿಗೆ ಬಂದು ಹೋಗು or receive my call'

whatsapp ಗುಂಪಿನಲ್ಲಿ ಸಂದೇಶಗಳ ಸುರಿಮಳೆ.

" ರೀ ಸುರೇಶನಿಗೆ ಕಾಲ್ ಮಾಡಲು ಹೇಳ್ರೀ, ಎಲ್ಲಿ ಸತ್ತಿದ್ದಾನೆ ಅವ್ನು". ಕಚೇರಿಯ ಇತರ ಕೆಲಸಗಾರರಿಗೆ  ಮೇಲಿನಿಂದ ಕರೆಗಳು ಬರಲಾರಂಭಿಸಿದವು.
ಅವರೆಲ್ಲರೂ ಒಂದು ಪಾರ್ಟಿಯಲ್ಲಿ ತಲ್ಲೀನರಾಗಿದ್ದರು. ತುಸು ಹೆಚ್ಚೇ ಎಣ್ಣೆ ಹೊಡೆದಿದ್ದರು.

ಒಬ್ಬೊಬ್ಬರೇ ಕರೆಮಾಡಲಾರಂಭಿಸಿದರು. ಪ್ರತಿಕ್ರಿಯೆಯಿಲ್ಲ.


ಸಂದೇಶ ಕಳುಹಿಸಲಿಲ್ಲವೆಂದು, ಕರೆ ಸ್ವೀಕರಿಸಲಿಲ್ಲವೆಂದು ಹುಡುಗಿಯೂ ಹುಸಿ ಕೋಪ ತೋರಿಸಿ ಮಾತುಬಿಟ್ಟಳು.

ದಿನಗಳು ಕಳೆದವು.

ಕಚೇರಿಯಲ್ಲಿ ಆದೇಶ ಟೈಪಿಸಲಾಗುತ್ತಿತ್ತು. ಕರ್ತವ್ಯ ಲೋಪದ ಮೇಲೆ ಆ ಯುವಕನನ್ನು 'ಸಸ್ಪೆಂಡ್' ಮಾಡಲಾಗಿತ್ತು.

ಆದೇಶ ಹಿಡಿದುಕೊಂಡು ಬಂದ ನೌಕರ ಬಾಗಿಲು ಕುಟ್ಟಿದ. ಸದ್ದೇ ಇಲ್ಲ. ಕಿಟಕಿ ತೆರೆದು ನೋಡಿದ. 

ಝುಂಯ್ಯ್ಯ್ಯ್ ಎಂಬ ಸದ್ದು ಅವನ ಕಿವಿಯನ್ನೂ, ಕಡಲ ಅಲೆಗಳ ಹಾಗೆ ಚಲಿಸುತ್ತಿದ್ದ ಹುಳುಗಳು ಅವನ ಕಣ್ಣುಗಳನ್ನೂ, ಗಂಮ್ಮ್ಮ್ ಎನ್ನುತ್ತಿದ್ದ ವಾಸನೆ ಅವನ ಮೂಗನ್ನೂ ಒಮ್ಮೆಲೇ ತಿವಿದು ಕೆಳಕ್ಕೆ ಬೀಳಿಸಿದವು ಮತ್ತು ಆ ಆದೇಶದ ಪ್ರತಿಯ ಮೇಲೆ ಬಿದ್ದು ಸಹಿ ಮಾಡಿ ಸ್ವೀಕರಿಸಿದವು.
*




ಕಾಜೂರು ಸತೀಶ್