ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ಹಿಂದಿ ಅನುವಾದ. Show all posts
Showing posts with label ಹಿಂದಿ ಅನುವಾದ. Show all posts

Monday, February 3, 2025

ನಗರ


ನಗರವನ್ನು ನೋಡಿದೆ
ಮುಗುಳ್ನಕ್ಕೆ

ಅಲ್ಲಿ ಯಾರು, ಹೇಗೆ ಬದುಕಬಹುದೆಂದು 
ತಿಳಿಯಲು ತೆರಳಿದ್ದೆ

ಮತ್ತೆ ಮರಳಲೇ ಇಲ್ಲ.
*


ಹಿಂದಿ ಮೂಲ - ಮಂಗಲೇಶ್ ದಬ್ರಾಲ್ 

ಕನ್ನಡಕ್ಕೆ - ಕಾಜೂರು ಸತೀಶ್ 

Sunday, February 2, 2025

ಕೆಂಪು ಹಸ್ತಗಳು



ಮೊದಲ ಬಾರಿಗೆ 
ನೋಡಿದೆ ನಾನು 
ಭ್ರಮರವೊಂದು 
ಕಮಲವಾಗುವುದನ್ನು 
ಕಮಲವು 
ನೀಲ ಕೊಳವಾಗುವುದನ್ನು 
ಮತ್ತೆ ಈ ನೀಲ ಕೊಳ 
ಅಸಂಖ್ಯ ಬಿಳಿಹಕ್ಕಿಗಳಾಗುವುದನ್ನು 
ಮತ್ತೆ ಬಿಳಿಹಕ್ಕಿಗಳೆಲ್ಲ 
ಕೆಂಪು ಆಗಸವಾಗುವುದನ್ನು 
ಆಮೇಲೆ ಆಗಸವು ಬದಲಾಗಿ 
ನಿನ್ನ ಕೆಂಪು ಕರಗಳಲ್ಲಿ ಹನಿಯುವುದನ್ನು 
ಮತ್ತು ಈ ನನ್ನ ಕಣ್ಣುಗಳನ್ನು ಮುಚ್ಚಿದಾಗ 
ಕಣ್ಣಹನಿಗಳೆಲ್ಲ ಕನಸಾಗಿ ಬದಲಾಗುವುದನ್ನು 

ನೋಡಿದೆ ನಾನು ಮೊದಲ ಬಾರಿ ನೋಡಿದೆ 
*


ಹಿಂದಿ ಮೂಲ -ಸರ್ವೇಶ್ವರ ದಯಾಳ್ ಸಕ್ಸೇನಾ 

ಕನ್ನಡಕ್ಕೆ - ಕಾಜೂರು ಸತೀಶ್ 


Saturday, July 29, 2023

ತೋಳ


-1-
ತೋಳದ ಕಣ್ಣುಗಳು ಕೆಂಪು ಕೆಂಡದಂತಿವೆ.

ದಿಟ್ಟಿಸಿ ನೋಡಿ ನೀವು ಅದನ್ನು
ಅದರ ಕಣ್ಣ ಕೆಂಪು ನಿಮ್ಮ ಕಣ್ಣಿಗೆ ಬರುವವರೆಗೆ 

ಇನ್ನೇನು ಮಾಡಲು ಸಾಧ್ಯ ನಿಮಗೆ
ಅದು ನಿಮ್ಮೆದುರಿಗೇ  ನಿಂತುಬಿಟ್ಟರೆ?

ನೀವು ಮುಖ ಮುಚ್ಚಿಕೊಳ್ಳಬಹುದು
ತಪ್ಪಿಸಿಕೊಂಡು ಓಡಬಹುದು
ಆದರೂ ನಿಮ್ಮ ಒಳಗೊಂದು ತೋಳ
ನಿಂತುಬಿಟ್ಟಿರುತ್ತದೆ ಹಾಗೇ ಒಂದಿಷ್ಟೂ ಕದಲದ ಹಾಗೆ

ತೋಳದ ಕಣ್ಣುಗಳು ಕೆಂಪು ಕೆಂಡದಂತಿವೆ
ಮತ್ತೀಗ ನಿಮ್ಮ ಕಣ್ಣುಗಳು ?

-2-
ತೋಳ ಊಳಿಡುತ್ತದೆ
ನೀವೊಂದು ದೀಪ ಬೆಳಗಿಸಿ
ಅದರ ಮೈಮೇಲೆ ಬೆಳಕ ಚೆಲ್ಲಿ
ನಿಮ್ಮ ಮೈಯ್ಯ ಮೇಲೂ

ಒಂದೇ ಒಂದು ವ್ಯತ್ಯಾಸವೆಂದರೆ
ತೋಳಕ್ಕೆ ದೀಪ ಹಚ್ಚಲು ಬರುವುದಿಲ್ಲ 

ಈಗ ಆ ದೀಪವನ್ನೆತ್ತಿಕೊಳ್ಳಿ
ತೋಳದ ಬಳಿ ಸಾಗಿರಿ
 ಓಟಕ್ಕೀಳುತ್ತವೆ ಅವೆಲ್ಲಾ 

ಸಾವಿರ ಸಾವಿರ ಕೈಗಳಲ್ಲಿ
ಕಂದೀಲು ಹಿಡಿದು
ಪೊದೆಯಿಂದ ಪೊದೆಗೆ ನುಗ್ಗಿರಿ
ದಿಕ್ಕು ತಪ್ಪಿ ಓಡುತ್ತವೆ ಅವು
ಒಂದೂ ಉಳಿಯದಂತೆ

ಆಮೇಲೆ ಕಾಡಿನಿಂದ ಹೊರಗೆಸೆಯಿರಿ 
ಎಸೆದುಬಿಡಿ ಅವನ್ನು ಹಿಮದ ಮೇಲೆ
ಹಸಿದ ಅವು ಊಳಿಡುತ್ತವೆ ತಮ್ಮತಮ್ಮಲ್ಲೇ
ಸಿಗಿದು ತಿನ್ನುತ್ತವೆ ಒಂದನ್ನೊಂದು

ತೋಳಗಳು ಸಾಯುತ್ತವೆ
ಮತ್ತೆ ನೀವು?

- 3-
ಮತ್ತೆ ಬರುತ್ತದೆ ತೋಳ

ಇದ್ದಕ್ಕಿದ್ದಂತೆ ಒಂದು ದಿನ
ನಿಮ್ಮಲ್ಲೊಬ್ಬರು ತೋಳವಾಗುತ್ತೀರಿ
ಒಂದು, ನೂರು, ಸಾವಿರವಾಗಿ
ವೃದ್ಧಿಸುತ್ತದೆ ಸಂತತಿ

ನಿಜಕ್ಕೂ ಬರಬೇಕಿದೆ ತೋಳ
ನಿಮ್ಮನ್ನು ನೀವು ನೋಡಿಕೊಳ್ಳಲು
ನಿಮ್ಮ ನೀವು ಪ್ರೀತಿಸಲು
ಭಯರಹಿತ ಸ್ಥಿತಿಯನ್ನು ಸುಖಿಸಲು
ಗೆಲುವಿನಿಂದ ದೀಪ ಹಚ್ಚಲು

ಚರಿತ್ರೆಯ ಕಾಡಿನಲ್ಲಿ 
ಗುಂಪಿನಿಂದ ಹೊರಹಾಕಲ್ಪಡುತ್ತದೆ ತೋಳ ಪ್ರತೀ ಬಾರಿಯೂ
ಆಗ ಮನುಜರೆಲ್ಲ ಒಂದಾಗಿ
ಕಂದೀಲು ಹಿಡಿದು ನಿಲ್ಲುತ್ತಾರೆ

ಚರಿತ್ರೆ ಜೀವಂತವಾಗುತ್ತದೆ
ನೀವೂ
ಮತ್ತು
ತೋಳವೂ.
*
ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ


ಕನ್ನಡಕ್ಕೆ- ಕಾಜೂರು ಸತೀಶ್

Tuesday, June 23, 2020

ಹಿಂದುಳಿದವನು



ಎಲ್ಲರೂ ಏರುದನಿಯಲ್ಲಿ ಮಾತನಾಡುತ್ತಿದ್ದಾಗ
ಇವನು ಸದಾ ಮೌನಿಯಾಗಿರುತ್ತಿದ್ದ

ಎಲ್ಲರೂ ಸರಸರ ನಡೆಯುತ್ತಿದ್ದಾಗ
ಇವನು ಸದಾ ಹಿಂದಿರುತ್ತಿದ್ದ

ಎಲ್ಲರೂ ಗಬಗಬ ತಿನ್ನುವುದರಲ್ಲಿ ಮುಳುಗಿದ್ದಾಗ
ಇವನು ಮಂಕಾಗಿ ಮೂಲೆಯಲ್ಲಿ ಕುಳಿತಿರುತ್ತಿದ್ದ

ಎಲ್ಲರೂ ಮಲಗಿ ಗೊರಕೆ ಹೊಡೆಯುತ್ತಿದ್ದಾಗ
ಇವನು ಕತ್ತಲ ಶೂನ್ಯದೊಳಗೆ ಕಣ್ಣುನೆಟ್ಟಿರುತ್ತಿದ್ದ

ಆದರೂ
ಗುಂಡಿನ ದಾಳಿ ನಡೆದಾಗ
ಮೊದಲು ಸತ್ತುಬಿದ್ದದ್ದು ಇವನೇ ಆಗಿದ್ದ.
*


ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ


ಕನ್ನಡಕ್ಕೆ- ಕಾಜೂರು ಸತೀಶ್


Monday, April 20, 2020

ಕವಿತೆ



ಕವಿತೆ- ಹಗಲು ದಣಿವಾಗಿ
ರಾತ್ರಿ ನಿದಿರೆಯಾಗಿ ಬರುತ್ತದೆ
ಬೆಳಿಗ್ಗೆ ಹಾಸಿಗೆಯಿಂದೇಳುವಾಗ ಕೇಳುತ್ತದೆ:
'ಹಸಿವಾಗ್ತಿದೆಯಾ? ರಾತ್ರಿ ಊಟ ಮಾಡಿರ್ಲಿಲ್ವಾ?'
*


ಹಿಂದಿ ಮೂಲ- ಮಂಗಳೇಶ್ ಡಬರಾಲ್


ಕನ್ನಡಕ್ಕೆ- ಕಾಜೂರು ಸತೀಶ್

Tuesday, May 10, 2016

ಈ ಚಳಿಗಾಲದಲ್ಲಿ

ಕಳೆದ ಚಳಿಗಾಲ ಎಷ್ಟು ಭೀಕರವಾಗಿತ್ತು!
ಈ ಚಳಿಗಾಲ ಅಷ್ಟು ಕಠೋರವಾಗಿರದಿದ್ದರೂ
ನೆನಪಿಸಿಕೊಂಡರೆ ನಡುಕ ಹುಟ್ಟುತ್ತಿದೆ

ಕಳೆದ ಚಳಿಗಾಲದಲ್ಲಿ ಅವ್ವ ತೀರಿಕೊಂಡಳು
ಜೋಪಾನವಾಗಿರಿಸಿದ್ದ ಪ್ರೇಮ ಪತ್ರ ಎಲ್ಲೋ ಕಳೆದುಹೋಯಿತು
ಇದ್ದ ಕೆಲಸವೂ ಹೋಯಿತು
ಆ ರಾತ್ರಿಗಳಲ್ಲಿ ಎಲ್ಲೆಲ್ಲಿ ಅಲೆದೆನೋ
ಯಾರ್ಯಾರಿಗೆ ಕರೆಮಾಡಿದೆನೋ ನೆನಪಿಲ್ಲ
ಇಟ್ಟ ವಸ್ತುಗಳೆಲ್ಲ ಬೀಳುತ್ತಿದ್ದವು ನನ್ನ ಮೇಲೇ.

ಈ ಚಳಿಗಾಲದಲ್ಲಿ
ಕಳೆದ ಚಳಿಗಾಲದಲ್ಲಿ ಧರಿಸಿದ ಬಟ್ಟೆಗಳನ್ನು
ಒಂದೊಂದಾಗಿ ತೆಗೆದು ನೋಡುತ್ತಿದ್ದೇನೆ
ಕಂಬಳಿ, ಟೊಪ್ಪಿ, ಸಾಕ್ಸ್, ಮಫ್ಲರ್,
ಮತ್ತೆ ಮತ್ತೆ ನೋಡುತ್ತಿದ್ದೇನೆ

ಮತ್ತೀಗ ಯೋಚಿಸುತ್ತಿದ್ದೇನೆ
ಈ ಚಳಿಗಾಲ ಯಾಕೆ ಅದರಂತೆ ಕಠೋರವಾಗಿರಬೇಕು
ಅದೆಲ್ಲ ಕಳೆದುಹೋದದ್ದಲ್ಲವೇ?!
**
ಹಿಂದಿ ಮೂಲ- ಮಂಗಲೇಶ್ ಡಬರಾಲ್

ಕನ್ನಡಕ್ಕೆ- ಕಾಜೂರು ಸತೀಶ್