ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, December 28, 2025

'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'

ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವು ಹುಟ್ಟುವ ಮೂಲವು ಸಮಕಾಲೀನ ಸಮಾಜದ ಅಸ್ತವ್ಯಸ್ತತೆಯನ್ನೇ ಆಧರಿಸಿವೆ. ಪ್ರಸ್ತುತ ಕೃತಿಯ ಶೀರ್ಷಿಕೆಯೇ( ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ) ಅದನ್ನು ಧ್ವನಿಸುತ್ತದೆ. ಕೊಡವ ಮಕ್ಕಳ ಕೂಟ ಪ್ರಕಟಿಸಿರುವ ಈ ಕೃತಿಗೆ ಡಾ.ಸೂರ್ಯಕುಮಾರ್ ಕೆ ಬಿ ಅವರ ಅಮೂಲ್ಯ ಮುನ್ನುಡಿಯಿದೆ.


ಬಾಳೆಯಡ ಕಿಶನ್ ಪೂವಯ್ಯ ಅವರು ಎತ್ತುವ ಪ್ರಶ್ನೆಗಳು, ವಿಶ್ಲೇಷಿಸುವ ಸಂಗತಿಗಳು ಪೂರ್ವಗ್ರಹವನ್ನು ಮೀರಿದವುಗಳಾದ್ದರಿಂದ ಧರ್ಮಾತೀತವೂ, ಜಾತ್ಯತೀತವೂ, ಪಕ್ಷಾತೀತವೂ ಆಗಿವೆ. ಹೀಗೆ ಮೂಲಭೂತವಾದವನ್ನು ಪಕ್ಕಕ್ಕಿಟ್ಟು ಲೋಕವನ್ನು ಗ್ರಹಿಸುವಾಗ ಒಳಗೇ ಇರಬಹುದಾದ ವೈಫಲ್ಯಗಳೂ ಕಾಣಸಿಗುತ್ತವೆ: ಸಾಂಸ್ಕೃತಿಕವಾಗಿ ಕೊಡಗಿನ ನೆಲದಲ್ಲಿ ಅನೇಕ ಸ್ಥಿತ್ಯಂತರಗಳು ನಡೆಯುತ್ತಿದ್ದರೂ ( ರೆಸಾರ್ಟ್, ಬಾಂಗ್ಲಾ ವಲಸಿಗರು, ಕೃಷಿ ಭೂಮಿಗಳ ಪರಿವರ್ತನೆ, ನಗರೀಕರಣ..) ಎರಡು ಜಾತಿಗಳ ನಡುವಣ ಬಲಪ್ರದರ್ಶನವೇ ಮುಖ್ಯವಾದುದರ ಕುರಿತ ವಿಶ್ಲೇಷಣೆಯಿದೆ.
ದೇವಾಲಯಗಳ ವ್ಯಾಪಾರಿಕರಣದ ಕುರಿತು ದರ್ಶನಕ್ಕೆ ದರ ನಿಗದಿಪಡಿಸಿ ಹೆಚ್ಚಿನ ದರ ನೀಡುವವರಿಗೆ ಸರತಿ ಸಾಲಿನಿಂದ ವಿನಾಯಿತಿ ಮತ್ತಿತರ ಹುಳುಕುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ . ರಾಜಕೀಯ ಭಾಷಣಗಳು ವೈಯಕ್ತಿಕ ತೇಜೋವಧೆಗೇ ಮೀಸಲಾಗಿರುವುದು, ಪತ್ರಿಕೆಗಳ ವ್ಯಾಪಾರೀಕರಣ- ಅದರ ಮೇಲಿನ ಅಧಿಕಾರಶಾಹಿ ಹಿಡಿತ, ಕ್ರೀಡೆಯ ಹೆಸರಲ್ಲಿ ಅದ್ದೂರಿತನ, ಕ್ರೀಡಾ ಹುಮ್ಮಸ್ಸು ಹಾಗೂ ಕಲರವ ಕಡಿಮೆಯಾಗಿರುವುದು, ಸೇವೆಯ ಹೆಸರಲ್ಲಿ ಮನೆಮಾಡಿರುವ ಸ್ವಾರ್ಥ, ಸಿದ್ಧಾಂತದ ಹಂಗಿಲ್ಲದ ರಾಜಕೀಯ ಮೈತ್ರಿ ಮತ್ತು ಚುನಾವಣಾ ವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕಾಧಿಪತಿಗಳ ರಾಜ್ಯಭಾರ, ಹೋರಾಟದಿಂದ ವಿಮುಖರಾಗಿರುವ ಯುವಜನಾಂಗ.. ಹೀಗೆ ಈ ಕ್ಷಣದ ಸವಾಲುಗಳನ್ನು ಬೊಟ್ಟುಮಾಡಿ ತೋರಿಸುತ್ತಾ ಬದಲಾವಣೆಯ ಹಂಬಲವನ್ನು  ಅವರು ವ್ಯಕ್ತಪಡಿಸಿದ್ದಾರೆ.




ವಸ್ತ್ರ ಸಂಹಿತೆಯ ಬಗ್ಗೆ ಪ್ರಸ್ತಾಪಿಸುತ್ತಾ " ಗಣೇಶ ಉತ್ಸವ, ದಸರಾ ಹಬ್ಬದಲ್ಲಿ ಡಿ ಜೆ ಹಾಕಿಕೊಂಡು ಪಾನಮತ್ತರಾಗಿ ಲಿಂಗಭೇದವಿಲ್ಲದೆ ಪ್ಯಾಂಟು ಚಡ್ಡಿ ಹಾಕಿ ಹುಚ್ಚು ಕುಣಿತ ಕುಣಿಯುವಾಗ ಏಕೆ ವಸ್ತ್ರಸಂಹಿತೆ ಇರುವುದಿಲ್ಲ " ಎಂದು ಪ್ರಶ್ನಿಸುತ್ತಾರೆ.

 ಜಿಲ್ಲಾ ಕ್ರೀಡಾಂಗಣದ ಮರವನ್ನು ಉಳಿಸಿಕೊಳ್ಳಲು ಮಾಡಿದ ಸಾಹಸವನ್ನು ಹೇಳುವುದರೊಂದಿಗೆ, ಅದು ಮುರಿದು ಬಿದ್ದಾಗ ಮರದೊಂದಿಗೆ ಇದ್ದ ಸಂಬಂಧವನ್ನು ಸ್ಮರಿಸಿ ಮರುಗುತ್ತಾರೆ. ಜೀವಪರ ನಿಲುವು ಅವರದು..

 ಹೀಗೆ ಧ್ವನಿಯೆತ್ತುವ ಅವರ ಕಾಳಜಿಗೆ, ಬದ್ಧತೆಗೆ ಸಲಾಂ ಹೇಳಲೇಬೇಕು.
*
✍️ ಕಾಜೂರು ಸತೀಶ್

No comments:

Post a Comment