ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, September 29, 2019

ನಾ ಕಂಡ ಗಲ್ಲಿ ಬಾಯ್

'ಗಲ್ಲಿ ಬಾಯ್'- ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿದೆ. ಈ ಚಿತ್ರವನ್ನು ನೋಡಿದ ಅನೇಕ ನನ್ನ ಗೆಳೆಯರು 'ಅದು ಆಸ್ಕರ್ material ಅಲ್ಲವೇ ಅಲ್ಲ, ಹೇಗೆ ಆಯ್ಕೆಗೊಂಡಿತೋ ತಿಳಿಯುತ್ತಿಲ್ಲ'ಎನ್ನುತ್ತಿದ್ದರು.

ಗಲ್ಲಿ ಬಾಯ್ ಸಿನಿಮಾದ ಕತೆಗಿಂತ ತಂತ್ರವೇ ಹೆಚ್ಚು ಗಮನ ಸೆಳೆಯುತ್ತದೆ. ಆಸ್ಕರನ್ನು ಗಮನದಲ್ಲಿಟ್ಟುಕೊಂಡೇ ಚಿತ್ರವನ್ನು ರೂಪಿಸಲಾಗಿದೆಯೇ ಎನ್ನುವ ಅನುಮಾನವೂ ನನ್ನನ್ನು ಕಾಡಿದ್ದಿದೆ.


ಸಂಗೀತ, ಚಿತ್ರೀಕರಣ, ಎಡಿಟಿಂಗ್, ಸಂಭಾಷಣೆ- ಇವು ಚಿತ್ರದ ಗಮನಾರ್ಹ ಅಂಶಗಳು. ದನಿ ಮೊದಲು ಬಂದು ಆಮೇಲೆ ವ್ಯಕ್ತಿ ಗೋಚರವಾಗುವುದು, ಪಾತ್ರಗಳ ಚಲನೆಯನ್ನು ನೆರಳು ಬೆಳಕಿನೊಳಗೆ ಜಾದೂ ಮಾಡುತ್ತಾ ಎತ್ತರದಿಂದ ಮುಮ್ಮುಖ ಹಾಗೂ ಹಿಮ್ಮುಖವಾಗಿ ಸೆರೆಹಿಡಿಯುವುದು, ಸಹಜಾಭಿನಯ, ಕಾವ್ಯಾತ್ಮಕ ಸಾಲುಗಳು, ಸಂಭಾಷಣೆಯ ಪ್ರಬುದ್ಧ ಅಭಿವ್ಯಕ್ತಿ, ನೋಡುಗರನ್ನು ಚಕಿತಗೊಳಿಸುವ ಕೆಲವು ದೃಶ್ಯಗಳು ಈ ಚಿತ್ರದ ಹೆಚ್ಚುಗಾರಿಕೆ.

ನೈಜ ಘಟನೆಯನ್ನಾಧರಿಸಿದ ಸಿನಿಮಾವಿದು. ಕಲಾತ್ಮಕ ಚಿತ್ರಗಳಲ್ಲಿರುವ ಸಾವಧಾನ ಇಲ್ಲಿಲ್ಲ. ಮುಂಬಯಿಯ ಗಲ್ಲಿಯೊಂದರಿಂದ ಬದುಕಿನ ಬಲೆಯೊಳಗೆ ಸಿಲುಕಿ ಛಲದಿಂದ ಹೊರಬಂದು ಸುಂದರ ಬದುಕನ್ನು ಕಟ್ಟಿಕೊಳ್ಳುವ ರ್ಯಾಪರ್ ಒಬ್ಬನ ಕತೆ. ಅದರೊಳಗೆ ಪ್ರೀತಿಯ ಸೇರ್ಪಡೆ. ಕತೆ ಹೇಳುವುದರಲ್ಲಿ ಈ ಸಿನಿಮಾ ಆಸ್ಥೆ ವಹಿಸುವುದಿಲ್ಲ. ಕ್ಲೈಮ್ಯಾಕ್ಸ್ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾಜಿಕ ,ಸಾಂಸ್ಕೃತಿಕ ಆಯಾಮಗಳಿವೆಯಾದರೂ ಕಲಾತ್ಮಕ ನಿರ್ವಹಣೆಯಲ್ಲಿ ಸೋಲುತ್ತದೆ ಸಿನಿಮಾ.

ಸಂಭಾಷಣೆಯಲ್ಲಿ ಕಾವ್ಯಾತ್ಮಕ ಶ್ರಮವಿದೆ. ರಣಬೀರ್,ಆಲಿಯಾ ಅವರ ಪ್ರಬುದ್ಧ ಅಭಿನಯ ಗಮನ ಸೆಳೆಯುತ್ತದೆ. ಯಾವ ನಟ/ನಟಿಯ ಅಭಿನಯದ ಬಗ್ಗೆ ಚಕಾರ ಎತ್ತುವಂತಿಲ್ಲ- ಅಷ್ಟು ಸಹಜ ಮತ್ತು ಅದ್ಭುತ.

*
ಕಾಜೂರು ಸತೀಶ್