ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, January 16, 2024

ಪೋಸ್ಟಾಫೀಸಿನಲ್ಲಿ ಪ್ರಬಂಧಗಳ ಜಡ್ಜ್ಮೆಂಟ್

ಈಚೆಗೆ ಲಲಿತ ಪ್ರಬಂಧ ಕೃತಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕೆಲವು ಲಲಿತ ಪ್ರಬಂಧಗಳನ್ನು ಓದಿದ ಅನಂತರ ಇವು ಆತ್ಮ ಚರಿತ್ರೆಯಾಗುತ್ತಿರುವುದರ ಬಗ್ಗೆ ಕಳವಳವೆನಿಸಿದ್ದಿದೆ. ತದ್ವಿರುದ್ಧವಾಗಿ , ರಹಮತ್ ತರೀಕೆರೆ ಅವರ ಬಿಡಿ ಪ್ರಬಂಧಗಳನ್ನು ಓದಿದಾಗಲೆಲ್ಲ ಪ್ರಬಂಧಗಳಿಗಿರುವ ಅಗಾಧ ಸಾಮರ್ಥ್ಯಗಳ ಬಗ್ಗೆ ಬೆರಗಾಗಿದ್ದೇನೆ.

ತಿಂಗಳುಗಳ ಹಿಂದೆ ಅಮರೇಶ ಗಿಣಿವಾರರು ತಮ್ಮ 'ಪೋಸ್ಟಾಫೀಸಿನಲಿ ಅಕ್ಕನ ಜಡ್ಜಮೆಂಟು' ಎಂಬ ಪ್ರಬಂಧಗಳ ಸಂಕಲನ ಕಳಿಸಿದ್ದರು. ಹಿಂಡುಕುಳ್ಳು (👈ಇಲ್ಲಿ ಕ್ಲಿಕ್ಕಿಸಿ) ಕಥಾ ಸಂಕಲನದ ಮೂಲಕ ಗಮನ ಸೆಳೆದಿದ್ದ ಗಿಣಿವಾರರ ಈ ಸಂಕಲನವನ್ನು ಓದಿ ಬೆರಗುಗೊಂಡೆ. ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಸಾಹಿತ್ಯದ ಅಕಡೆಮಿಕ್ ಜ್ಞಾನವನ್ನು ಗಳಿಸಿ ತಮ್ಮ ನೆಲದ(ಸಿಂಧನೂರು) ನುಡಿಯಲ್ಲಿ/ ನುಡಿಗಟ್ಟುಗಳಲ್ಲಿ ವಿವಿಧ ಆಕರಗಳೊಂದಿಗೆ ಮಂಡಿಸುತ್ತಾರೆ ಎಂದರೆ ಸಾಹಿತ್ಯವು ಅಷ್ಟರಮಟ್ಟಿಗೆ ಅವರನ್ನು ಸೆಳೆದಿದೆ/ಆವರಿಸಿದೆ ಎಂದರ್ಥ. ಪ್ರಬಂಧವನ್ನು ಅವರು ರಸಾಸ್ವಾದಕ್ಕೂ ರಿಸೋರ್ಸ್ ಆಗುವುದಕ್ಕೂ ಕಡೆದಿಟ್ಟಿದ್ದಾರೆ. ಕೇಂದ್ರ ಪ್ರಜ್ಞೆಯೊಂದನ್ನು ಅನುಭವದ- ಮಾಹಿತಿಯ ಮೂಸೆಯಲ್ಲಿ ಲಲಿತವಾಗಿ ಹೊಸೆಯುವ ಮೂಲಕ ಏಕಕಾಲದಲ್ಲಿ ಕೃತಿಕಾರನ ಭಾವ ಪ್ರಪಂಚಕ್ಕೂ ಜಗತ್ತಿನ ದರ್ಶನಕ್ಕೂ ಸೇತುವಾಗುವ ಹಾಗೆ ನೋಡಿಕೊಂಡಿದ್ದಾರೆ.




ಬಸಿರು ,ಹೆಂಡತಿ ,ಸಾವು, ಬಸ್ಸು, ಪೋಸ್ಟ್ ಆಫೀಸ್, ಬಾಲ್ಯ, ಊರು, ರೇಡಿಯೋ , ಜೀರಂಗಿ, ,ಅಂಗಾಂಗ, ಅಪಾನವಾಯು- ಇಂತಹ ಸಹಜ ಸಂಗತಿಗಳ ಮೇಲೆ ಪ್ರಬಂಧಗಳು ಹರಿದಿದ್ದರೂ, ಸಿದ್ಧ ಹಾದಿಯನ್ನು ಮುರಿದು, ಖಾಸಗಿಗೊಳ್ಳಬಹುದಾದ ಪ್ರಬಂಧವನ್ನು ಸಮುದಾಯದತ್ತ ಜಿಗಿಸಿ ಮಾನವೀಯಗೊಳಿಸುತ್ತಾರೆ. ತಾವು ಓದಿದ ಸಾಹಿತ್ಯ ಕೃತಿಗಳ/ವಸ್ತುಗಳ ಪ್ರಸ್ತಾಪ ಮಾಡುತ್ತಾರೆ.


ಅಂಗಗಳೇ ತಮ್ಮನ್ನು ತಾವು ಪರಿಚಯಿಸುವ/ನಿರೂಪಿಸುವ 'ಅಂಗಾಂಗಗಳ ನೆನೆದು' ಹೊಸ ಮಾದರಿಯ ಪ್ರಬಂಧ. ಅವರನ್ನು ತೀವ್ರವಾಗಿ ಕಾಡುವ 'ಸಾವು' (ಸಾವೆಂಬುದು ಸಾಯದ ನೆನಪು, ಸಾವಿಗೆ ಒಂದು ಪತ್ರ) 'ದೇಹಮೀಮಾಂಸೆ'( ಅಂಗಾಂಗಗಳ ನೆನೆದು, ಬಸಿರಾಯಣ) 'ಅಸ್ತಿತ್ವವಾದ'ದ ವಿವರಗಳು ಸಾಹಿತ್ಯ ಪರಂಪರೆಯ ಕೆಲವು ಟಿಪ್ಪಣಿಗಳೊಂದಿಗೆ ವ್ಯಕ್ತವಾಗಿವೆ(ಅನಂತಮೂರ್ತಿ, ಕಮೂ,ಕಾಫ್ಕ, ಗೂಗಿ, ಸಾರ್ತ್ರ, ಮಾರ್ಕ್ವೆಜ಼್...)


ಮುಗ್ಧ ಜನ ವಲಯದಲ್ಲಿ ಬೆರೆತುಹೋಗಿರುವ ಹಾಸ್ಯವನ್ನು ಅವರು ಹೆಕ್ಕುತ್ತಾರೆ. ಬಸಿರು, ಹೆಂಡತಿ ಮುಂತಾದವುಗಳ ಬಗ್ಗೆ ಹೇಳುವಾಗ 'ಪರ' ವಹಿಸುವುದಿಲ್ಲ. ಅಮರೇಶ ಗಿಣಿವಾರರಿಗೆ ಪ್ರಬಂಧದ ಓಘ ಮತ್ತು ಭಾಷಿಕ ಹಿಡಿತ ಎಷ್ಟರಮಟ್ಟಿಗೆ ಇದೆಯೆಂದರೆ, 'ಅಪಾನವಾಯು ಸಿಡಿದಾಗ' ಪ್ರಬಂಧದ ಆರಂಭವನ್ನೇ ಗಮನಿಸಿ:

ಈ ಪ್ರಬಂಧದ ತಲೆಬರಹ 'ಅಪಾನವಾಯು ಸಿಡಿದಾಗ' ಅಂತ ಬಳಸುವುದು ನನಗೆ ಸೂಕ್ತವೆನಿಸಿತು. 'ಹೂಸು ಬಿಟ್ಟಾಗ' ಅಂತ ಇಟ್ಟಿದ್ದರೆ ಓದುಗರಿಗೆ ಆರಂಭದಲ್ಲಿ ವಾಸನೆ ಹಿಡಿಸಿದಂತಾಗುತ್ತಿತ್ತು .ಅಪಾನ ವಾಯು ಎಂಬ ಶಬ್ದ ಸ್ವಲ್ಪ ನನ್ನ ಬಗ್ಗೆ ಗೌರವ ಉಳಿಸಿದೆ. ಬೇರೆ ಯಾವುದೇ ಮೂಲ ಕನ್ನಡ ಪದಗಳ ಬದಲಾಗಿ ಸಂಸ್ಕೃತ ಅಥವಾ ಪಾರಿಭಾಷಿಕ ಶಬ್ದ ಬಳಸುವುದರಿಂದ ಮೂಲ ಕನ್ನಡ ಪದಗಳ ಬಗ್ಗೆ ಕೀಳರಿಮೆ ಹುಟ್ಟುತ್ತದೆ ಎಂಬ ದಾಟಿಯಲ್ಲಿ ಕೀಲಾರ ನಾಗೇಗೌಡ ಇನ್ನಿತರರು ಜಾಲತಾಣದಲ್ಲಿ ಚರ್ಚೆಗಿಳಿದಿದ್ದರು...
*

ಕಾಜೂರು ಸತೀಶ್

Monday, January 15, 2024

ಅಮ್ಮ



ಅಮ್ಮ ನನ್ನ ಆತ್ಮ ದೇಹ ಮಾತ್ರ ಬೇರೆ
ಪ್ರೀತಿಯಲ್ಲಿ ಕರುಣೆಯಲ್ಲಿ ಅವಳು ವರ್ಷಧಾರೆ

ಗರ್ಭದಲ್ಲೇ ಲಾಲಿ ಹಾಡಿ ತನ್ನ ಕುಡಿಯ ಮಲಗಿಸುವಳು
ಚಕ್ರವ್ಯೂಹವನ್ನೇ ಮುರಿಯುವಂಥ ಕಥೆಯ ಕಲಿಸುವವಳು
||ಅಮ್ಮ||

ತಾನು ಹಸಿದು ತನ್ನ ಕೂಸಿಗಾಗಿ ಅನ್ನ ಉಣಿಸುವವಳು
ಪರರಿಗಾಗಿ  ಉರಿದು ನಗುವ ನಂದಾದೀಪ ಅವಳು 
||ಅಮ್ಮ||

ಜಗದ ಸಕಲ ಪ್ರೀತಿಯನೆಲ್ಲ  ತನ್ನೊಡಲಲಿ ತುಂಬುವವಳು
ಕಣ್ಣನೀರಿನಂಥ ಕಡಲಿನಂತೆ ಹರಡಿ ಬೆಳೆಯುವವಳು
||ಅಮ್ಮ||

ನೆಲಮುಗಿಲಿನಂತೆ ಅವಳು ಕಾಯುವಳು ಸಹಿಸುವಳು
ತುಳಿದರೂ ನೋಯದಂಥ ಭೂಮಿತಾಯಿಯಂಥವಳು
||ಅಮ್ಮ||
*
ಕಾಜೂರು ಸತೀಶ್ 

ಚಿಂತಕ

ಚಿಂತಕ ತೀರಿಕೊಂಡ

ಅವನ ಹೆಸರಿಗಾಗಿ ಹಗ್ಗಜಗ್ಗಾಟ ನಡೆಯಿತು. ಎಡಭಾಗದಲ್ಲಿದ್ದವರು ಹೆಸರಿನ ಅರ್ಧಭಾಗವನ್ನೂ ಬಲಭಾಗದಲ್ಲಿದ್ದವರು ಇನ್ನರ್ಧ ಭಾಗವನ್ನೂ ಹಂಚಿಕೊಂಡರು .

ಸೀಟಿ ಊದಿ ತೀರ್ಪುನೀಡಿದ ನಿರ್ಣಾಯಕನಿಗೆ ಸ್ವಲ್ಪ ನಡುವಿನ ಭಾಗ ಸಿಕ್ಕಿತು.
*
ಕಾಜೂರು ಸತೀಶ್ 

ಮಂತ್ರಿ

ನಡೆದೂ ನಡೆದೂ ಬಳಲಿದ ದೂರ ದೇಶದ ಮನುಷ್ಯನಿಗೆ ಮರವೊಂದು ಸಿಕ್ಕಿತು. ಆ ಬಟಾಬಯಲಿನಲ್ಲಿದ್ದ ವಿಶಾಲ ಒಂಟಿಮರದ ಕೆಳಗೆ ಕುಳಿತು ದಣಿವಾರಿಸಿಕೊಂಡ. ಅದರಲ್ಲಿ ಹೂಬಿಟ್ಟಿತ್ತು. ಮೊದಲ ಫಸಲಿನ ಸಂಭ್ರಮ ಆ ಮರಕ್ಕೆ. ಹಕ್ಕಿಗಳ ಕಲರವ.

ಕೆಲಕಾಲದ ಅನಂತರ ಮರದ ತುಂಬಾ ಹಣ್ಣುಗಳು! ಹೊಟ್ಟೆ ತುಂಬಾ ತಿಂದ. ಉಳಿದ ಹಣ್ಣುಗಳನ್ನು ಮಾರಲು ಇಟ್ಟ. ಅದನ್ನು ಕೊಳ್ಳಲು ಜನರ ನೂಕುನುಗ್ಗಲು.

ಆ ಬಯಲಿನ ಒಡೆಯನಾದ. ಹಣ್ಣು ಕೊಳ್ಳಲು ಬಂದ ಕೆಲವರು ಅವನ ಸೇವಕರಾಗಿ ಕೆಲಸಕ್ಕೆ ಸೇರಿಕೊಂಡರು. ಬಯಲ ತುಂಬೆಲ್ಲ ಆ ಗಿಡವನ್ನು ನೆಡಿಸಿದ.

ಮುಂದೆ ಅವನು ಮಂತ್ರಿಯಾದ.
*


ಕಾಜೂರು ಸತೀಶ್ 

Sunday, January 14, 2024

ಒಂದನೇ ಇಯತ್ತೆ ಮತ್ತು ನನ್ನ ನೆನಪಿನಂತಹ ಆ ಬೆಟ್ಟ


ಒಂದನೇ ತರಗತಿಗೆ ದಾಖಲಾದ ವರ್ಷ ಮನೆಯಿಂದ ಶಾಲೆಗಿರುವ ಹಾದಿಯಲ್ಲಿದ್ದ ನಿಸರ್ಗವೇ ನನ್ನ ಕಲಿಕಾ ಕೇಂದ್ರವಾಗಿತ್ತು. ಶಾಲೆ ಎಂಬ ನರಕದಿಂದ ತಪ್ಪಿಸಿಕೊಳ್ಳಲು ಎಷ್ಟೋ ಸಲ ಮನೆಯವರನ್ನು ಯಾಮಾರಿಸಿ ಮನುಷ್ಯರಿಲ್ಲದ ಜಾಗದಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲ ನಿತ್ಯದ ಹಾದಿಯಲ್ಲಿ ಎದುರಾಗುತ್ತಿದ್ದ ಎರಡು ಬೆಟ್ಟಗಳನ್ನು ತಪ್ಪದೇ ನೋಡುತ್ತಿದ್ದೆ. ಒಂದು ಬೆಟ್ಟವು ಮರಗಿಡಗಳ ನಡುವೆ ದೊಡ್ಡ ಬಂಡೆಗಳಿಂದ ಮೈದುಂಬಿಕೊಂಡಿದ್ದರೆ, ಮತ್ತೊಂದು ಭತ್ತವನ್ನು ರಾಶಿ ಮಾಡಿಟ್ಟ ಹಾಗೆ ಮೈಪಡೆದಿತ್ತು( ಆದರೆ ಆ ಬೆಟ್ಟವು ನಾನು ಆಗ ಕಾಣುತ್ತಿದ್ದ ಸ್ವರೂಪವನ್ನು ಇಂದು ಹೊಂದಿಲ್ಲ. ಯಾರೋ ಮಹಾಶಯರು ಆ ಬೋಳು ಗುಡ್ಡದ ಮೇಲೆ ಅಕೇಶಿಯಾ ನೆಟ್ಟು ಬಂದರು. ಯಾರಿಗೋ ಲಾಭವಾಯಿತು! ನಾನು ನೊಂದುಕೊಳ್ಳುತ್ತಿರುವೆ!).



ಮೂರು ವರ್ಷ ಅದೇ ಶಾಲೆಯಲ್ಲಿ ಕಳೆದ ನನಗೆ ಆಮೇಲೆ ನನ್ನ ಸಹಪಾಠಿಗಳ ದರ್ಶನವಾಗಲೇ ಇಲ್ಲ( ನನ್ನ ಸಂಬಂಧಿಯೊಬ್ಬರ ಹೊರತು). ಅವರೆಲ್ಲ ಈಗ ಎಲ್ಲಿರುವರು?  ಹೇಗಿರುವರು?ನನ್ನ ನೆನಪು ಅವರಲ್ಲಿರಬಹುದೇ? ಎಂಬೆಲ್ಲ ಕುತೂಹಲಗಳು ನಿತ್ಯ ನನ್ನನ್ನು ಎಡತಾಕುತ್ತವೆ.


ಆ ಶಾಲೆಯ ಮುಖವನ್ನು ಆಗಾಗ ನೋಡುತ್ತೇನೆ.  ನಾನು ಬಾಲ್ಯದಲ್ಲಿ ಕಂಡ ಆ ಊರಿನ ಮುಖಗಳನ್ನು ಅಲ್ಲಿ- ಸೋಮವಾರದ ಸಂತೆಯಲ್ಲಿ- ಸಂಚರಿಸುವ ದಾರಿಯಲ್ಲಿ ನೋಡುತ್ತೇನಾದರೂ ಅವರೊಂದಿಗೆ  ಮಾತಿರಲಿ, ನಗುವನ್ನೂ ವಿನಿಮಯಿಸಿಕೊಳ್ಳುವುದಿಲ್ಲ. ಹಾಗೊಮ್ಮೆ ಮಾಡಿದೆನೆಂದರೆ  ನನ್ನ ಪೂರ್ವಾಪರಗಳನ್ನು ಅವರ ತಲೆಯಲ್ಲಿ ತುಂಬಬೇಕಾಗುತ್ತದೆ, ಅದು ಬೆಂಕಿಯಂತೆ ಊರೆಲ್ಲ ತಲುಪುತ್ತದೆ. ಆಮೇಲೆ ಅವರು ನನ್ನನ್ನು ನೋಡಲು ಬಯಸುವುದು ಮತ್ತೆ ಪರಿಚಯವಾಗುವುದು ಇವೆಲ್ಲ ನನಗೆ ಬೇಕಿರದ ಸಂಗತಿಗಳೇ ಆಗಿವೆ. ನನಗೆ ಮಾತ್ರ ಪರಿಚಯವಿರುವ ಅವರ ನೆನಪನ್ನೂ, ನನ್ನ ಅಮಾಯಕ ಬಾಲ್ಯವನ್ನೂ ಒಟ್ಟುಮಾಡಿ ಗಾಳಿಗೆ ಬಿಟ್ಟುಬಿಡುತ್ತೇನೆ.
**


ಮೊನ್ನೆ ಭತ್ತದ ರಾಶಿಯಂತಿದ್ದ ಆ ಗುಡ್ಡಕ್ಕೆ ಹೋಗುತ್ತಿದ್ದೆವು. ವಾಹನದ ನೆತ್ತಿಯು ಕೊಂಬೆಯೊಂದಕ್ಕೆ ತಗುಲಿದಾಗ ಅಲ್ಲೇ ಸನಿಹದಲ್ಲಿದ್ದ ಮನೆಯಿಂದ ಹೊರಬಂದ ವ್ಯಕ್ತಿ 'ಇದಲ್ಲ ದಾರಿ, ಅದು' ಎಂದು ಕೈತೋರಿಸಿದ.  'ತೋರಿಸ್ತೀರಾ?'ಎಂದಿದ್ದಕ್ಕೆ ಸ್ಕೂಟರ್ ಏರಿ  ಮಗಳನ್ನು ಕೂರಿಸಿಕೊಂಡು ಮುಂದೆ ಮುಂದೆ ಸಾಗಿ ನಮಗೆ ದಾರಿ ತೋರಿಸಿದ.

'ನಾನು ಈ ಬೆಟ್ಟವನ್ನು ಯಾವಾಗಲೂ ಒಮ್ಮೆ ನೋಡಿದ್ದೆ' ಎಂದ . ನಾನು 'ನಡ್ಕೊಂಡು ಹೋಗಿದ್ದೇನೆ  ಇಲ್ಲೆಲ್ಲಾ' ಎಂದೆ.  

'ಏನ್ಹೆಸ್ರು?' ಕೇಳಿದೆ.
ಅವನು ಅವನ ಹೆಸರು ಹೇಳುವುದಕ್ಕೂ ನನ್ನ ಒಂದನೆಯ ತರಗತಿಯ ಆ  ಹುಡುಗನ ಮುಖಕ್ಕೂ ಇವನ ಮುಖಕ್ಕೂ, ಆ ಹೆಸರಿಗೂ ಈ ಹೆಸರಿಗೂ  ತಾಳೆಯಾಗಿ ಒಂದು ಕ್ಷಣ 'ವಾವ್' ಎಂದೆ ಮನಸ್ಸಿನೊಳಗೇ! ಒಬ್ನಾದ್ರೂ ಸಿಕ್ಬಿಟ್ಟ!

ನನ್ನ ಬಗ್ಗೆ ವಿಚಾರಿಸಿದ. ನಾನು ಓದಿದ ಆ ಶಾಲೆಯನ್ನು ಬಿಟ್ಟು ಉಳಿದೆಲ್ಲ ಶಾಲೆಗಳ ಹೆಸರು ಹೇಳಿದೆ. ಅವನು ಹತ್ತನೆಯವರೆಗೆ ಓದಿರುವ ಸಂಗತಿ ಹೇಳಿದ. ಏನೂ ತಿಳಿಯದವರಂತೆ ಅವನ ಬಾಲ್ಯವನ್ನು ಕೆದಕಿದೆ. ಈಗಿನ ಮಕ್ಕಳಂತೆ ಏನೂ ನೆನಪಿಲ್ಲದ ವ್ಯಕ್ತಿಯೇನೂ ಅವನಲ್ಲ. ಹಲವು ಮೇಷ್ಟ್ರುಗಳನ್ನು ಅವನು ನೆನಪಿಸಿಕೊಂಡ. (ಅದರಲ್ಲಿ ನನ್ನ ಜನ್ಮದಿನಾಂಕವನ್ನೂ, ಜಾತಿಯನ್ನೂ ಸೃಷ್ಟಿಸಿದವರೆಲ್ಲರೂ ಬಂದುಹೋದರು!)  ಅವನಿಗಿರುವ ಕ್ರೀಡೆಯ ಮೇಲಿರುವ ಒಲವನ್ನು ಹೇಳಿದ . ಒಂದನೇ ತರಗತಿಯಲ್ಲಿದ್ದಾಗಲೇ ನಾವಿಬ್ಬರು ಪ್ರಚಂಡ ಕಬಡ್ಡಿ ಆಟಗಾರರಾಗಿದ್ದೆವು.  'ನಾನು ಓದೋದ್ರಲ್ಲಿ ಕ್ಲಾಸಿಗೇ ಫಸ್ಟ್ ಇದ್ದೆ' ಎಂದ. ಅವನು ನನ್ನನ್ನು ಗುರುತಿಸಲಿಲ್ಲ ಎಂಬ ಖುಷಿ ನನ್ನೊಳಗೆ ಕುಣಿದಾಡುತ್ತಿತ್ತು. ನಾನು ಪಿಯುಸಿ ಮುಗಿಸುವಷ್ಟರಲ್ಲಿ ಅವನು ಹುಡುಗಿಯೊಬ್ಬಳ ತಂದೆಯಾಗಿದ್ದ! ( ಅವಳು ಅಲ್ಲಿ ಅವನಿಗಿಂತ ತುಸು ದೂರದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು). ಕೆಲವು ಚಿತ್ರಗಳನ್ನು ಸೆರೆಹಿಡಿದು ಒಂದೆರಡನ್ನು ಮಾತ್ರ ಅವನಿಗೆ whatsapp ಮಾಡಿ ಹೇಳಲು ಉಳಿಸಿದ ನನ್ನ ಮಾತುಗಳಂತೆ ಅವುಗಳನ್ನೂ ಉಳಿಸಿಕೊಂಡೆ.
*
ಕಾಜೂರು ಸತೀಶ್