ಒಂದನೇ ತರಗತಿಗೆ ದಾಖಲಾದ ವರ್ಷ ಮನೆಯಿಂದ ಶಾಲೆಗಿರುವ ಹಾದಿಯಲ್ಲಿದ್ದ ನಿಸರ್ಗವೇ ನನ್ನ ಕಲಿಕಾ ಕೇಂದ್ರವಾಗಿತ್ತು. ಶಾಲೆ ಎಂಬ ನರಕದಿಂದ ತಪ್ಪಿಸಿಕೊಳ್ಳಲು ಎಷ್ಟೋ ಸಲ ಮನೆಯವರನ್ನು ಯಾಮಾರಿಸಿ ಮನುಷ್ಯರಿಲ್ಲದ ಜಾಗದಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲ ನಿತ್ಯದ ಹಾದಿಯಲ್ಲಿ ಎದುರಾಗುತ್ತಿದ್ದ ಎರಡು ಬೆಟ್ಟಗಳನ್ನು ತಪ್ಪದೇ ನೋಡುತ್ತಿದ್ದೆ. ಒಂದು ಬೆಟ್ಟವು ಮರಗಿಡಗಳ ನಡುವೆ ದೊಡ್ಡ ಬಂಡೆಗಳಿಂದ ಮೈದುಂಬಿಕೊಂಡಿದ್ದರೆ, ಮತ್ತೊಂದು ಭತ್ತವನ್ನು ರಾಶಿ ಮಾಡಿಟ್ಟ ಹಾಗೆ ಮೈಪಡೆದಿತ್ತು( ಆದರೆ ಆ ಬೆಟ್ಟವು ನಾನು ಆಗ ಕಾಣುತ್ತಿದ್ದ ಸ್ವರೂಪವನ್ನು ಇಂದು ಹೊಂದಿಲ್ಲ. ಯಾರೋ ಮಹಾಶಯರು ಆ ಬೋಳು ಗುಡ್ಡದ ಮೇಲೆ ಅಕೇಶಿಯಾ ನೆಟ್ಟು ಬಂದರು. ಯಾರಿಗೋ ಲಾಭವಾಯಿತು! ನಾನು ನೊಂದುಕೊಳ್ಳುತ್ತಿರುವೆ!).
ಮೂರು ವರ್ಷ ಅದೇ ಶಾಲೆಯಲ್ಲಿ ಕಳೆದ ನನಗೆ ಆಮೇಲೆ ನನ್ನ ಸಹಪಾಠಿಗಳ ದರ್ಶನವಾಗಲೇ ಇಲ್ಲ( ನನ್ನ ಸಂಬಂಧಿಯೊಬ್ಬರ ಹೊರತು). ಅವರೆಲ್ಲ ಈಗ ಎಲ್ಲಿರುವರು? ಹೇಗಿರುವರು?ನನ್ನ ನೆನಪು ಅವರಲ್ಲಿರಬಹುದೇ? ಎಂಬೆಲ್ಲ ಕುತೂಹಲಗಳು ನಿತ್ಯ ನನ್ನನ್ನು ಎಡತಾಕುತ್ತವೆ.
ಆ ಶಾಲೆಯ ಮುಖವನ್ನು ಆಗಾಗ ನೋಡುತ್ತೇನೆ. ನಾನು ಬಾಲ್ಯದಲ್ಲಿ ಕಂಡ ಆ ಊರಿನ ಮುಖಗಳನ್ನು ಅಲ್ಲಿ- ಸೋಮವಾರದ ಸಂತೆಯಲ್ಲಿ- ಸಂಚರಿಸುವ ದಾರಿಯಲ್ಲಿ ನೋಡುತ್ತೇನಾದರೂ ಅವರೊಂದಿಗೆ ಮಾತಿರಲಿ, ನಗುವನ್ನೂ ವಿನಿಮಯಿಸಿಕೊಳ್ಳುವುದಿಲ್ಲ. ಹಾಗೊಮ್ಮೆ ಮಾಡಿದೆನೆಂದರೆ ನನ್ನ ಪೂರ್ವಾಪರಗಳನ್ನು ಅವರ ತಲೆಯಲ್ಲಿ ತುಂಬಬೇಕಾಗುತ್ತದೆ, ಅದು ಬೆಂಕಿಯಂತೆ ಊರೆಲ್ಲ ತಲುಪುತ್ತದೆ. ಆಮೇಲೆ ಅವರು ನನ್ನನ್ನು ನೋಡಲು ಬಯಸುವುದು ಮತ್ತೆ ಪರಿಚಯವಾಗುವುದು ಇವೆಲ್ಲ ನನಗೆ ಬೇಕಿರದ ಸಂಗತಿಗಳೇ ಆಗಿವೆ. ನನಗೆ ಮಾತ್ರ ಪರಿಚಯವಿರುವ ಅವರ ನೆನಪನ್ನೂ, ನನ್ನ ಅಮಾಯಕ ಬಾಲ್ಯವನ್ನೂ ಒಟ್ಟುಮಾಡಿ ಗಾಳಿಗೆ ಬಿಟ್ಟುಬಿಡುತ್ತೇನೆ.
**
ಮೊನ್ನೆ ಭತ್ತದ ರಾಶಿಯಂತಿದ್ದ ಆ ಗುಡ್ಡಕ್ಕೆ ಹೋಗುತ್ತಿದ್ದೆವು. ವಾಹನದ ನೆತ್ತಿಯು ಕೊಂಬೆಯೊಂದಕ್ಕೆ ತಗುಲಿದಾಗ ಅಲ್ಲೇ ಸನಿಹದಲ್ಲಿದ್ದ ಮನೆಯಿಂದ ಹೊರಬಂದ ವ್ಯಕ್ತಿ 'ಇದಲ್ಲ ದಾರಿ, ಅದು' ಎಂದು ಕೈತೋರಿಸಿದ. 'ತೋರಿಸ್ತೀರಾ?'ಎಂದಿದ್ದಕ್ಕೆ ಸ್ಕೂಟರ್ ಏರಿ ಮಗಳನ್ನು ಕೂರಿಸಿಕೊಂಡು ಮುಂದೆ ಮುಂದೆ ಸಾಗಿ ನಮಗೆ ದಾರಿ ತೋರಿಸಿದ.
'ನಾನು ಈ ಬೆಟ್ಟವನ್ನು ಯಾವಾಗಲೂ ಒಮ್ಮೆ ನೋಡಿದ್ದೆ' ಎಂದ . ನಾನು 'ನಡ್ಕೊಂಡು ಹೋಗಿದ್ದೇನೆ ಇಲ್ಲೆಲ್ಲಾ' ಎಂದೆ.
'ಏನ್ಹೆಸ್ರು?' ಕೇಳಿದೆ.
ಅವನು ಅವನ ಹೆಸರು ಹೇಳುವುದಕ್ಕೂ ನನ್ನ ಒಂದನೆಯ ತರಗತಿಯ ಆ ಹುಡುಗನ ಮುಖಕ್ಕೂ ಇವನ ಮುಖಕ್ಕೂ, ಆ ಹೆಸರಿಗೂ ಈ ಹೆಸರಿಗೂ ತಾಳೆಯಾಗಿ ಒಂದು ಕ್ಷಣ 'ವಾವ್' ಎಂದೆ ಮನಸ್ಸಿನೊಳಗೇ! ಒಬ್ನಾದ್ರೂ ಸಿಕ್ಬಿಟ್ಟ!
ನನ್ನ ಬಗ್ಗೆ ವಿಚಾರಿಸಿದ. ನಾನು ಓದಿದ ಆ ಶಾಲೆಯನ್ನು ಬಿಟ್ಟು ಉಳಿದೆಲ್ಲ ಶಾಲೆಗಳ ಹೆಸರು ಹೇಳಿದೆ. ಅವನು ಹತ್ತನೆಯವರೆಗೆ ಓದಿರುವ ಸಂಗತಿ ಹೇಳಿದ. ಏನೂ ತಿಳಿಯದವರಂತೆ ಅವನ ಬಾಲ್ಯವನ್ನು ಕೆದಕಿದೆ. ಈಗಿನ ಮಕ್ಕಳಂತೆ ಏನೂ ನೆನಪಿಲ್ಲದ ವ್ಯಕ್ತಿಯೇನೂ ಅವನಲ್ಲ. ಹಲವು ಮೇಷ್ಟ್ರುಗಳನ್ನು ಅವನು ನೆನಪಿಸಿಕೊಂಡ. (ಅದರಲ್ಲಿ ನನ್ನ ಜನ್ಮದಿನಾಂಕವನ್ನೂ, ಜಾತಿಯನ್ನೂ ಸೃಷ್ಟಿಸಿದವರೆಲ್ಲರೂ ಬಂದುಹೋದರು!) ಅವನಿಗಿರುವ ಕ್ರೀಡೆಯ ಮೇಲಿರುವ ಒಲವನ್ನು ಹೇಳಿದ . ಒಂದನೇ ತರಗತಿಯಲ್ಲಿದ್ದಾಗಲೇ ನಾವಿಬ್ಬರು ಪ್ರಚಂಡ ಕಬಡ್ಡಿ ಆಟಗಾರರಾಗಿದ್ದೆವು. 'ನಾನು ಓದೋದ್ರಲ್ಲಿ ಕ್ಲಾಸಿಗೇ ಫಸ್ಟ್ ಇದ್ದೆ' ಎಂದ. ಅವನು ನನ್ನನ್ನು ಗುರುತಿಸಲಿಲ್ಲ ಎಂಬ ಖುಷಿ ನನ್ನೊಳಗೆ ಕುಣಿದಾಡುತ್ತಿತ್ತು. ನಾನು ಪಿಯುಸಿ ಮುಗಿಸುವಷ್ಟರಲ್ಲಿ ಅವನು ಹುಡುಗಿಯೊಬ್ಬಳ ತಂದೆಯಾಗಿದ್ದ! ( ಅವಳು ಅಲ್ಲಿ ಅವನಿಗಿಂತ ತುಸು ದೂರದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು). ಕೆಲವು ಚಿತ್ರಗಳನ್ನು ಸೆರೆಹಿಡಿದು ಒಂದೆರಡನ್ನು ಮಾತ್ರ ಅವನಿಗೆ whatsapp ಮಾಡಿ ಹೇಳಲು ಉಳಿಸಿದ ನನ್ನ ಮಾತುಗಳಂತೆ ಅವುಗಳನ್ನೂ ಉಳಿಸಿಕೊಂಡೆ.
*
ಕಾಜೂರು ಸತೀಶ್
👍💐💐
ReplyDeleteಕ್ಲಾಸ್ಮೇಟ್ ಒಬ್ಬ 30 ವರ್ಷ ಆದ್ಮೇಲೆ ಸಿಕ್ಕರೂ ಪರಿಚಯ ಹೇಳದೇ ಇರಲು ಗಟ್ಟಿಯಾದ ಕಾರಣವೇ ಇರಬಹುದು.
ReplyDelete