ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 22, 2020

ನಿಶಾಗಂಧಿ


ಎರಡು ವರ್ಷಗಳಿಂದ ಖಾಲಿಯಾಗಿದ್ದ ಪಕ್ಕದ ರೂಮಿಗೆ ಈ ವರ್ಷದ ಸುಯ್ಯೋ ಮಳೆಗಾಲ ಶುರುವಾಗುವ ಹೊತ್ತಿಗೆ ಬಾಡಿಗೆದಾರರೊಬ್ಬರು ಬಂದಿದ್ದರು. ಅದರ ಪಕ್ಕದ, ಅಂದರೆ ಎದುರಿಗಿನ ಕೋಣೆಯಲ್ಲಿ ಕಳೆದೆರಡು ವರ್ಷಗಳಿಂದ ಪಂಚಾಯತ್ ಕಾರ್ಯದರ್ಶಿ ಶ್ರೀನಿವಾಸ ವಾಸವಾಗಿದ್ದ. ಹುಣಸೂರು ಸಮೀಪದ ಕಲ್ಲಹಳ್ಳಿಯವನು. ಇನ್ನೂ ಸಣ್ಣ ಪ್ರಾಯ.


ಶ್ರೀನಿವಾಸ ಅಮ್ಮನನ್ನು ಬಿಟ್ಟು ಹೊರಗಿದ್ದವನೇ ಅಲ್ಲ. ಅಮ್ಮ ಮನೆಯಲ್ಲಿ ಒಬ್ಬಳೇ ಎನ್ನುವ ಕಾರಣಕ್ಕೆ ಕೆಲವು ಉದ್ಯೋಗಗಳನ್ನು ತ್ಯಜಿಸಿದರೂ ಕಡೆಗೆ ಮಡಿಕೇರಿಯಿಂದ ಮೂರು ಗಂಟೆ ಅಂಕುಡೊಂಕಿನ ಉಬ್ಬುತಗ್ಗಿನ ರಸ್ತೆಯನ್ನು ಕ್ರಮಿಸಿದರೆ ಸಿಗುವ ಕರಿಕೆ ಪಂಚಾಯತ್ತಿನಲ್ಲಿ ಕಾರ್ಯದರ್ಶಿಯಾಗಿ ಸೇರಿಕೊಂಡಿದ್ದ.


ಹೀಗಿರುವಾಗ ನೆರೆಮನೆಗೆ ಬಂದವರು ಬ್ಯಾಂಕ್ ಉದ್ಯೋಗಿ ಶಮಿತಾ. ಮಂಡ್ಯದ ಹುಡುಗಿ. ಇವಳದ್ದೂ ಶ್ರೀನಿವಾಸನದ್ದೇ ಕಥೆ. ಪದವಿ ಮುಗಿದ ಮೇಲೆ ಒಂದೆರಡು ವರ್ಷ ಮನೆಯಲ್ಲೇ ಇದ್ದು ಬೇಜಾರಾಗಿ ‘ಕೆಲ್ಸ ಯಾವ್‍ದಾದ್ರೂ ಸರಿ ಎಲ್ಲಾದ್ರೂ ಸರಿ ಹೋಗಿಬಿಡ್ತೇನೆ’ ಎಂಬ ನಿರ್ಧಾರಕ್ಕೆ ಬಂದು ಈ ಊರು ಸೇರಿದ್ದಳು.


ಶಮಿತಾಳ ಕೋಣೆಗೂ ಶ್ರೀನಿವಾಸನ ಕೋಣೆಗೂ ಒಂದು ಸಣ್ಣ ಟಾರು ರೋಡಿನ ಅಂತರವಿತ್ತು. ಇವನು ಏಳುವ ಹೊತ್ತಿಗೆ ಅವಳ ಕೋಣೆಯಲ್ಲಿ ಬೆಳಕು ಕಾಣಿಸುತ್ತಿತ್ತು. ಇಬ್ಬರ ಕೋಣೆಯ ಬಾಗಿಲುಗಳೂ ಮುಚ್ಚಿದ ಸ್ಥಿತಿಯಲ್ಲೇ ಇರುತ್ತಿದ್ದವು. ಲೆಕ್ಕಾಚಾರಗಳಲ್ಲಿ ಮಧ್ಯರಾತ್ರಿಯವರೆಗೂ ಕಳೆದುಹೋಗುತ್ತಿದ್ದ ಇವನು ಅವಳ ಕೋಣೆಯಲ್ಲಿ ಬೆಳಕು ಮೂಡಿದ ನಂತರವಷ್ಟೇ ಕಣ್ಣುತೆರೆಯುವುದು. ಅಷ್ಟರಲ್ಲಾಗಲೇ ಕಾಡುಕೋಳಿಗಳ ಹಾಡು, ಕೆಲಸದ ಜನರನ್ನು ಹೊತ್ತೊಯ್ಯುವ ಬರ್ರೋ ಜೀಪಿನ ಸದ್ದು, ಶಾಲೆಯ ಮಕ್ಕಳು ಸಿಳ್ಳೆಹೊಡೆದುಕೊಂಡು ಎದುರಿಗಿದ್ದ ಸೀಬೆ, ಮಾವಿನ ಮರದಲ್ಲಿ ಮಿಡಿಗಳು ಕಾಣುತ್ತಿವೆಯೇ ಎಂದು ನೋಡುತ್ತಾ ಸಾಗುವ ದೃಶ್ಯ, ಮೊಬೈಲಿನಲ್ಲಿ ಆಗಲೇ ಬಂದು ಕುಳಿತ ಮಿಸ್ಡ್ ಕಾಲ್‍ಗಳು.. ಇವೆಲ್ಲದರ ಅನುಭವವಾಗಿರುತ್ತಿದ್ದವು. ರಸ್ತೆ, ಚರಂಡಿ, ಶೌಚಾಲಯ, ಮನೆ... ಹೀಗೆ ನೂರೆಂಟು ಪ್ರಶ್ನೆಗಳು.


ಎಷ್ಟೋ ಬಾರಿ ಎದುರು ಮನೆಯವಳೊಂದಿಗೆ ಮಾತನಾಡಬೇಕೆನಿಸಿತ್ತು ಶ್ರೀನಿವಾಸನಿಗೆ. ಆದರೆ ಮಾತನಾಡುವುದಿರಲಿ, ಮುಖನೋಡಿಬಿಟ್ಟರೂ ಅದಕ್ಕೆ ರೆಕ್ಕೆ-ಪುಕ್ಕಗಳು ಮೂಡುತ್ತಿದ್ದವು ಈ ಹಳ್ಳಿಯಲ್ಲಿ. ಸ್ವಲ್ಪ ಹೆಚ್ಚುಕಮ್ಮಿಯಾದರೂ ಮನೆಯ ಯಜಮಾನ ಮನೆ ಖಾಲಿಮಾಡಿಸಿಬಿಡುತ್ತಿದ್ದ. ಆಮೇಲೆ ಇಡೀ ಊರು ಸುತ್ತಿದರೂ ಅಲ್ಲೆಲ್ಲೂ ಬಾಡಿಗೆ ಮನೆಗಳಿರಲಿಲ್ಲ.


ತಿಂಗಳುಗಳು ಕಳೆದವು. ಮಳೆಯ ಆರ್ಭಟಕ್ಕೆ ಅವಳು ತುಸು ಗಾಬರಿಗೊಂಡಂತೆ ಕಂಡಳು. ರಸ್ತೆಗೆ ಅಡ್ಡಲಾಗಿ ಮರ ಬೀಳುವುದು, ರಸ್ತೆಯನ್ನೇ ಕೊಚ್ಚಿಕೊಂಡು ಹೋಗುವಂತೆ ನೀರು ಹರಿಯುವುದು, ಎಲ್ಲೆಲ್ಲಿಂದಲೋ ಹಾವುಗಳು ಬಂದು ಕಿಟಕಿಯ, ಬಾಗಿಲ ಸಂದಿಯಲ್ಲಿ ನಿಲ್ಲುವುದು ಇತ್ಯಾದಿಗಳನ್ನು ಅರಗಿಸಿಕೊಳ್ಳುವುದಕ್ಕೆ ತಿಂಗಳುಗಳು ಬೇಕಾದವು.


ತಿಂಗಳುಗಳು ಕಳೆದರೂ ಶ್ರೀನಿವಾಸನಿಗೆ ಅವಳ ಹೆಸರಿನ ಬಗ್ಗೆಯಾಗಲೀ, ಊರಿನ ಬಗ್ಗೆಯಾಗಲೀ ಏನೂ ತಿಳಿದಿರಲಿಲ್ಲ. ಒಂದು ಸಂಜೆ ಸಮೀಪದಲ್ಲಿ ವೈಫೈ ಇದೆಯೆಂದು ಸಂದೇಶ ಬಂದಾಗ ‘ಶಮಿತಾ ಸಂಗೀತಾ’ ಎಂದಿತ್ತು. ಫೇಸ್ಬುಕ್ಕಿನಲ್ಲಿ ಅದೇ ಹೆಸರು ಹುಡುಕಿದರೆ ಎದುರಿಗಿರುವ ಅದೇ ಹುಡುಗಿ! ಹಾಗೆ ಅವಳ ಹೆಸರು ತಿಳಿಯಿತು. ಕೆಲವು ಬೆಟ್ಟಗಳ,ನದಿ-ತೊರೆಗಳ ಚಿತ್ರಗಳಿದ್ದವು. ಅವಳ ಇರುವಿಕೆಗಿಂತಲೂ ಮುದ್ದಾದ ಅವಳ ಪಟಗಳಿದ್ದವು. ಒಂದೊಂದಕ್ಕೂ ಸಾವಿರಗಟ್ಟಲೆ ಲೈಕುಗಳು. ತನ್ನ ಕುರಿತು ‘ಸೌಂಡ್ ಆಫ್ ಸೈಲೆನ್ಸ್’ ಎಂದು ಬರೆದುಕೊಂಡಿದ್ದಳು. ಒಂದೇ ಉಸಿರಿನಲ್ಲಿ ಅವುಗಳೆಲ್ಲವನ್ನೂ ಡೌನ್ಲೋಡ್ ಮಾಡಿ ನೋಡಿದರೆ ಅವಳು ಹಾಡಿರುವ ಹಾಡುಗಳು. ಆ ‘ಮೇಘ ಮಲ್ಹಾರ’ದಲ್ಲಿ ಆಲಾಪಿಸಿದ್ದಂತೂ ಸುಪರ್ಬ್. ಬೆರಗಾದ ಶ್ರೀನಿವಾಸ.


ಶ್ರೀನಿವಾಸನೂ ಒಳ್ಳೆಯ ಹಾಡುಗಾರನೇ. ಒಂದಷ್ಟು ಮಾದೇಶನ ಹಾಡುಗಳು, ತತ್ವಪದಗಳು ಅವನ ನಾಲಗೆಯಲ್ಲಿ ನಿತ್ಯ ನಲಿದಾಡುತ್ತಿದ್ದವು. ಹಾಗೆಂದು ಅವನ್ನು ಈ ಫೇಸ್ಬುಕ್ಕಿನಲ್ಲೆಲ್ಲಾ ಹಾಕಿರಲಿಲ್ಲ.


ಅತ್ತ ಒಬ್ಬಳೇ ಇದ್ದೂ ಇದ್ದೂ ಬೇಜಾರಾಗಿ ಕಮಲವ್ವ ‘ಲೋ ಯಾವ್ದಾದ್ರೂ ಹುಡ್ಗಿ ನೋಡ್ಲಾ... ನನ್ಕೈಲಾಗಕಿಲ್ಲ, ಬೇಗ ಲಗ್ನ ಆಗು ಹ್ಞೂಂ...’ ಎಂದು ಇವನು ಫೋನು ಮಾಡಿದಾಗಲೆಲ್ಲ ಹೇಳುತ್ತಿದ್ದಳು. ಯಾಕೋ ಏನೋ ಕೆಲಸ ಸಿಕ್ಕ ನಂತರದ ಎರಡು ವರ್ಷಗಳಲ್ಲಿ ಬಿಡುವಿಲ್ಲದ ದುಡಿಮೆಯ ನಡುವೆ ಅದನ್ನೆಲ್ಲ ಯೋಚಿಸಿಯೇ ಇರಲಿಲ್ಲ ಶ್ರೀನಿವಾಸ.


ಫೇಸ್ಬುಕ್ಕಿನ ಅವಳ ಹಾಡುಗಳು ಅವನ ಮನದ ಕೋಣೆಯನ್ನೆಲ್ಲ ಆವರಿಸಿಕೊಂಡು ಇವನನ್ನು ನಿಲ್ಲಲೂ ಕೂರಲೂ ಬಿಡುತ್ತಿರಲಿಲ್ಲ. ಹೊಸದೊಂದು ಖಾತೆ ತೆರೆದು ‘ಸಂಗೀತ ಶ್ರೀನಿ’ ಎಂದು ಹೆಸರು ಕೊಟ್ಟ. ಎಲ್ಲೂ ತನ್ನ ಪಟವನ್ನು ಹಾಕಿಕೊಳ್ಳಲಿಲ್ಲ. ಕೋಣೆಯ ಮಬ್ಬು ಬೆಳಕಿನಲ್ಲಿ ತಾನು ಹಾಡಿದ ಮಂಟೇಸ್ವಾಮಿಯ ಪದವೊಂದನ್ನು ಅಪ್ಲೋಡ್ ಮಾಡಿದ. ಒಂದಷ್ಟು ಹಾಡುಗಾರರನ್ನು ಗೆಳೆಯರನ್ನಾಗಿಸಿಕೊಂಡ ನಂತರ ಎಷ್ಟೋ ಬಾರಿ ಯೋಚಿಸಿ ಒಂದು ರಿಕ್ವೆಸ್ಟ್ ಕಳಿಸಿದ. ಅಷ್ಟರಲ್ಲಾಗಲೇ ಬೆವರಿ ನೀರಾಗಿದ್ದ. ಎದುರುಗಡೆಯ ಅವಳು ಮೊಬೈಲನ್ನು ಹಿಡಿದು ಕೂತಿದ್ದಿರಬೇಕು, ನಾಲ್ಕೈದು ನಿಮಿಷಗಳ ನಂತರ ರಿಕ್ವೆಸ್ಟ್ ಆಕ್ಸೆಪ್ಟ್ ಆಗಿತ್ತು. ಆ ಖುಷಿಯಲ್ಲಿ ಹೊರಬಂದು ಎದುರಿಗಿದ್ದ ಬೆಟ್ಟದ ಮುಖ ನೋಡಿದ. ಅಲ್ಲೊಂದಿಲ್ಲೊಂದು ವಿದ್ಯುದ್ದೀಪ ಹೊತ್ತಿಕೊಂಡಿತ್ತು. ಒಂದೊಂದು ದೀಪಕ್ಕೂ ಕನಿಷ್ಟ ನೂರು ಮೀಟರ್ ಅಂತರವಿರಬಹುದು ಅಥವಾ ಹೆಚ್ಚೇ ಇರಬಹುದೇನೋ. ತನಗೂ ಶಮಿತಾಳಿಗೂ ಒಂದು ರಸ್ತೆಯ ಅಂತರವಿದೆ ಅಥವಾ ಒಂದು ಕೋಣೆಯ ಅಂತರವಿದೆ. ವಿಪರೀತ ಬೆವರತೊಡಗಿ ಫ್ಯಾನಿನ ಕೆಳಗೆ ಬಂದು ಕುಳಿತ.


ಅಂದಿನಿಂದ ಇವನು ಹಾಡುವುದು, ಅಪ್ಲೋಡ್ ಮಾಡುವುದು ಮತ್ತು ಅದನ್ನು ಕೇಳಿ ಅವಳು ಕಮೆಂಟು ಮಾಡುವುದು, ಆಗ ಮಹಾನಂದದ ಸಾಗರದಲ್ಲಿ ಇವನು ಮುಳುಗೇಳುವುದು- ನಡೆಯುತ್ತಿತ್ತು. ಅವಳ ಶಾಸ್ತ್ರೀಯ ಗಾನಕ್ಕೆ ಮೊದಲು ಕಮೆಂಟಿಸುವುದು ಇವನೇ. ಹೀಗೆ ಮಾಡುತ್ತಲೇ ಅವನೊಳಗಿನ ಸಂಕೋಚ ಕಡಿಮೆಯಾಗುತ್ತಿರುವುದನ್ನು ನೆನೆದು ಪುಳಕಗೊಂಡ. ಕೈಗೊಂದು ಕ್ಯಾಮರವೂ ಬಂದ ಮೇಲೆ ಹಾಕುವ ಚಿತ್ರಗಳಿಗೆ ಅವಳ ಕಮೆಂಟುಗಳ ಸುರಿಮಳೆ.


ಕಳೆದ ದೀಪಾವಳಿಗೆ ಯುವಕ ಸಂಘದ ವತಿಯಿಂದ ನಡೆದ ಗಾಯನ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಶ್ರೀನಿವಾಸ ಈ ಸಲ ಶಮಿತಾ ಇದ್ದ ಕಾರಣ ಗಂಟಲು ಸರಿಯಿಲ್ಲವೆಂದು ಸುಳ್ಳು ಹೇಳಿ ಹಾಡುವ ಗೋಜಿಗೇ ಹೋಗಿರಲಿಲ್ಲ. ಶಮಿತಾ ಅದರಲ್ಲಿ ಗೆದ್ದಾಗ ಸಂಭ್ರಮಿಸಿದ್ದ.


ಇವರಿಬ್ಬರು ಒಮ್ಮೆಯೂ ಒಬ್ಬರನ್ನೊಬ್ಬರು ಹತ್ತಿರದಿಂದ ನೋಡಿರಲಿಲ್ಲ. ಶ್ರೀನಿವಾಸನಿಗೆ ತನ್ನ ಕಪ್ಪು ಮುಖ, ದಪ್ಪ ತುಟಿಯ ಬಗ್ಗೆ ಒಂಥರಾ ಕೀಳರಿಮೆಯಿತ್ತು. ಅದಕ್ಕೆ ಸರಿಯಾಗಿ ಬಿಳಿಬಿಳಿ ಗಡ್ಡವೂ ಅಲ್ಲಲ್ಲಿ ಇಣುಕುಹಾಕಿತ್ತು. ‘ನಾನಿಂಥಾ ಕರಿಮುಸುಂಡಿ ಅಂತ ಅವ್ಳಿಗೆ ಗೊತ್ತಿದ್ದಿದ್ರೆ ಒಂದ್ ಕಮೆಂಟೂ ಮಾಡ್ತಿರ್ಲಿಲ್ಲ’ ಎಂದು ಒಬ್ಬನೇ ಹೇಳಿಕೊಂಡಿದ್ದ. ಜೊತೆಗೆ ತನ್ನಪ್ಪ ಬದುಕಿದ್ದಾಗ ಮಾಡುತ್ತಿದ್ದ ತಮಟೆ ಹೊಡೆಯುವ ಕೆಲಸದ ಬಗ್ಗೆ ತಿಳಿದರಂತೂ...

ಮತ್ತೆರಡು ವರ್ಷಗಳು ಕಳೆದೇಹೋದವು. ಈ ನಡುವೆ ಕಮಲವ್ವ ಹೊಲದಲ್ಲಿ ಬಿದ್ದು ಕಾಲುಮುರಿದುಕೊಂಡಳು. ಕಂಡಕಂಡವರಲ್ಲೆಲ್ಲ ಶ್ರೀನಿವಾಸನಿಗೆ ಹುಡುಗಿ ಹುಡುಕಲು ಹೇಳುತ್ತಿದ್ದಳು.


ಶಮಿತಾಳಿಗೆ ವರ್ಗಾವಣೆಯಾಗಿರುವ ಸುದ್ದಿ ಅವಳ ಫೇಸ್ಬುಕ್ ಪೋಸ್ಟ್‍ನಿಂದ ತಿಳಿಯಿತು. ಏನೂ ಕಮೆಂಟಿಸಲಿಲ್ಲ ಶ್ರೀನಿವಾಸ. ಬೆಳಿಗ್ಗೆಯೇ ಒಂದು ಕಾರು ಬಂದು ನಿಂತಿತ್ತು. ಲಗ್ಗೇಜನ್ನು ಅದಾಗಲೇ ಅದಕ್ಕೆ ತುಂಬಲಾಗಿತ್ತು. ಒಂದು ಮಾತನ್ನಾದರೂ ಆಡಬೇಕು ಅನ್ನಿಸಿತು. ಬಾಗಿಲು ತೆರೆದು ಹೊರಬಂದ. ಅವಳು ಕಾರುಹತ್ತಿ ಹೊರಟುಹೋದಳು. ಶ್ರೀನಿವಾಸನ ಗಂಟಲು ಬಿಗಿದಿತ್ತು.


ಕಮಲವ್ವನ ಫೋನು- ‘ಲೇ ತಿಕ್ಲೇಸಿ ನೀನ್ ಯಾವ್ದಾದ್ರೂ ಬೆಳ್ಗಿರೋ ಮೂದೇವಿನ ತಂದ್ಯೋ, ಅಮ್ಯಾಕೆ ಅವ್ಳು ನನ್ನ ನೋಡ್ಕತಾಳೆ ಅಂತ ಮಾತ್ರ ಅನ್ಕಬೇಡ. ನಿನ್ಮೂತಿಗೆ ಒಬ್ಳು ಕರ್ರಗಿರೋ ಹುಡ್ಗೀನೇ ಸಿಗ್ಲಿ... ನನ್ಕೈಲಾಗ್ತಿಲ್ಲ ಕಣ್ಲಾ ಬೇಗ ಮಾಡ್ಕ..’
ಒಳ ಬಂದವನೇ ತನ್ನ ಫೇಸ್ಬುಕ್ ಖಾತೆಯ ಹೆಸರನ್ನು ‘ಶ್ರೀನಿವಾಸ ಶ್ರೀನಿ’ ಎಂದು ಬದಲಾಯಿಸಿ ಪ್ರೊಫೈಲ್ ಫೊಟೊ ಜಾಗದಲ್ಲಿ ತನ್ನ ಪಟವನ್ನು ಮತ್ತಷ್ಟೂ ಕರ್ರಗಾಗುವಂತೆ ಎಡಿಟ್ ಮಾಡಿ ಅಪ್ಲೋಡ್ ಮಾಡಿದ.


ಕಮಲವ್ವನಿಗೆ ಕರೆಮಾಡಿ ‘ಅಕ್ಕೋ.. ನೀನೇ ಎಲ್ಲಾದ್ರೂ ನೋಡ್ಕಂಡಿರು.. ತಡಿ ಮುಂದಿನ್ವಾರ ಬತ್ತೀನಿ ಮದ್ವೆ ಆಗೂವಂತೆ’ ಹೇಳಿದ.
*



-ಕಾಜೂರು ಸತೀಶ್


No comments:

Post a Comment