ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, February 18, 2025

ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1

ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು.

ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆಲ್ಲಿಹುದಿಕೇರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ರೋಹಿತ್ ಕೆ.ಮತ್ತೊಬ್ಬರು ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ಡಾ. ಪ್ರಕಾಶ್ ಬಿ.


ಆ ದಿನ ರೋಹಿತ್ ಸರ್ ಅವರು ಜಿ ಟಿ ನಾರಾಯಣರಾವ್ ಅವರ ಕುರಿತು ಮಾತನಾಡಿದರೆ ಪ್ರಕಾಶ್ ಸರ್ ಅವರು ಕಟ್ಟೀಮನಿ ಅವರ ಕುರಿತು ಮಾತನಾಡಿದ್ದರು.

 ಇವರಿಬ್ಬರಲ್ಲಿ ನನಗೆ ಮೊದಲು ಪರಿಚಿತರಾದವರು ರೋಹಿತ್ ಸರ್. ಕೊಡ್ಲಿಪೇಟೆಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ರೋಹಿತ್ ಸರ್, ಗೂಗಿಯ ಬಗ್ಗೆ ಪ್ರಸ್ತಾಪಿಸಿದಾಗ ಅವರ ಮಾತುಗಳಿಂದ ಪ್ರೇರಿತನಾಗಿ ಅವರನ್ನು ಮಾತನಾಡಿಸಿದ್ದೆ.

 ಆಮೇಲೆ 2013ರಲ್ಲಿ ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದೆ. 'ಸಾಹಿತ್ಯ ಸಮ್ಮೇಳನಗಳಲ್ಲಿ ಇಷ್ಟು ಡೀಪ್ ಆಗಿ ಮಾತನಾಡಬಾರದು' ಎಂದು ನನ್ನ ಮಾತುಗಳ ಕೊರತೆಯನ್ನು ಅವರು ಬೊಟ್ಟು ಮಾಡಿ ತೋರಿಸಿದ್ದರು. ನನಗದು ಸರಿ ಎನ್ನಿಸಿ ಅವರ ಮೇಲಿನ ಅಭಿಮಾನ ಹೆಚ್ಚಾಗಿತ್ತು.

 ರೋಹಿತ್ ಸರ್ ಅವರು ಈ ಜಿಲ್ಲೆಯನ್ನು ಬಿಟ್ಟು ಹಾಸನಕ್ಕೆ ತೆರಳಿದಾಗ ವಿದ್ವತ್ಪೂರ್ಣ ಮಾತುಗಳಿಗಾಗಿ ಉಳಿದವರು ಡಾ. ಪ್ರಕಾಶ್ ಸರ್. ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಗಳಲ್ಲಿ ಅವರ ಮಾತುಗಳನ್ನು ತಪ್ಪದೇ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ.(ಕೇವಲ ಇಬ್ಬರ ಮಾತುಗಳನ್ನಷ್ಟೇ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ-ಮತ್ತೊಬ್ಬರು ಬಾಲಸುಬ್ರಮಣ್ಯ ಕಂಜರ್ಪಣೆ). ಆದರೆ ಕಡೆಗೂ ಅವುಗಳನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. 


 ಹಲವು ಗೋಷ್ಠಿಗಳಲ್ಲಿ ಪ್ರಕಾಶ್ ಸರ್ ಅವರೊಂದಿಗೆ ಭಾಗವಹಿಸಿದ್ದೆ. ನಟರಾಜು ಬೂದಾಳು ಸರ್ ಅವರ ಶೈಲಿಯಂತೆಯೇ ಅನಿಸುತ್ತಿದ್ದ ಅವರ ಮಾತುಗಳು ನನಗೆ ಬೆರಗಿನ ಹಾಗೆ ತೋರುತ್ತಿದ್ದವು. ಅವರು ತರುಣ ಡಿ ಆರ್ ರಂತೆ ಕಾಣಿಸುತ್ತಿದ್ದರು. 

ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಥಾ ಕಮ್ಮಟದಲ್ಲಿ ಅವರ ಮಾತುಗಳನ್ನು ಜೀರ್ಣಿಸಿಕೊಳ್ಳಲು ಅಲ್ಲಿದ್ದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. (ನನಗೇ ಅರ್ಥವಾಗಲಿಲ್ಲ ಎಂದು ಪಕ್ಕದಲ್ಲಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಹೇಳಿದ್ದರು!). ಅಷ್ಟು ಆಳಕ್ಕಿಳಿದು ತಮ್ಮನ್ನು ತಾವು ಹುಡುಕುತ್ತಿದ್ದರು - ಕಳೆದುಕೊಳ್ಳುತ್ತಿದ್ದರು!


 ಪ್ರಕಾಶ್ ಸರ್ ಯಾವುದೇ ವಿಷಯದ ಆಳ-ಅಗಲಗಳನ್ನು ತಿಳಿದು ಮಾತನಾಡುವ ಪ್ರೌಢಿಮೆಯನ್ನು ಗಳಿಸಿಕೊಂಡಿದ್ದರು. ವಿಷಯವೊಂದರ ಋಣಾತ್ಮಕ ಆಯಾಮಗಳ ಬಗ್ಗೆ ಅವರು ಕಠೋರವಾಗಿ ಟೀಕಿಸುತ್ತಿರಲಿಲ್ಲ-ಮೌನವಾಗಿಬಿಡುತ್ತಿದ್ದರು. ವಿಶ್ವವಿದ್ಯಾನಿಲಯದ ವಿಚಾರಗೋಷ್ಠಿಯಲ್ಲಿ ನಾವಿಬ್ಬರು ಪ್ರತಿಕ್ರಿಯೆ ನೀಡಬೇಕಿತ್ತು. ಪ್ರಕಾಶ್ ಸರ್, ವಿಚಾರವನ್ನು ಮಂಡಿಸಿದವರ ತೀರಾ ತೆಳುವಾದ ಗ್ರಹಿಕೆಯನ್ನು ಮನಸಾರೆ ಖಂಡಿಸಿದರೂ ಎಲ್ಲೂ ಅದನ್ನು ಪ್ರಸ್ತಾಪಿಸದೆ ತಮ್ಮದೇ ಆದ ವಿಭಿನ್ನ ಒಳನೋಟಗಳನ್ನು ನೀಡಿದ್ದರು.


 ಪ್ರಕಾಶ್ ಸರ್ ಅವರು ಮೊಬೈಲ್ ಬಳಕೆಯಿಂದ ದೂರ ಉಳಿದಿದ್ದರು. ಏನಾದರೂ ಕಳಿಸುವುದಿದ್ದರೆ ಸ್ವಾಮಿ ಸರ್ ಅವರಿಗೆ ಕಳಿಸಿ ಎನ್ನುತ್ತಿದ್ದರು. ತೀರಾ ತಡವಾಗಿ ಫೇಸ್ಬುಕ್ಕಿಗೆ ಎಂಟ್ರಿ ಕೊಟ್ಟಿದ್ದರು. ಮಡಿಕೇರಿಗೆ ಬರುವಾಗಲೆಲ್ಲ ಮೊಹಿದ್ದೀನ್ ಸರ್, ಅವರ ಜೊತೆಯಾಗಿರುತ್ತಿದ್ದರು. ಕಣಿವೆಯ ಭಾರದ್ವಾಜ್ ಸರ್ ಅವರು, ಅವರ ವಿದ್ವತ್ ಶಕ್ತಿಗೆ ಬೆರಗಾಗಿದ್ದರು.

 2015ರ ಮಡಿಕೇರಿ ದಸರಾ ಕವಿಗೋಷ್ಠಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಕಾಶ್ ಸರ್ ಆಹ್ವಾನಿತರಾಗಿದ್ದರು. ಕುತೂಹಲದಿಂದ ಅವರ ಮಾತುಗಳನ್ನು ತುಂಬಿಕೊಂಡಿದ್ದೆ. ಆ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾನು ವಹಿಸಿದ್ದೆ. ಪ್ರಕಾಶ್ ಸರ್ ಸ್ವಾಮಿ ಸರ್ ರವರೊಂದಿಗೆ ಆಗ ಆಗಮಿಸಿದ್ದರು. ಅವರಿಬ್ಬರೂ ಒಟ್ಟಿಗೆ ಕುಳಿತು ನನ್ನ ಭಾಷಣವನ್ನು ಕೇಳಿಸಿಕೊಳ್ಳುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟುವಂತಿದೆ.


 2017ರ ಕೊಡಗಿನ ಗೌರಮ್ಮ ಪುಸ್ತಕ ಬಹುಮಾನಕ್ಕೆ ನಾನು ಮತ್ತು ಅವರು ತೀರ್ಪುಗಾರರಾಗಿದ್ದೆವು(ಬಹುಮಾನ ವಿತರಣೆಯ ಸಂದರ್ಭದಲ್ಲಿ ನನಗದು ತಿಳಿದಿದ್ದು). ತೀರ್ಪುಗಾರರ ಅನಿಸಿಕೆ ಸಂದರ್ಭದಲ್ಲಿ ನನಗ ತಿಳಿದದ್ದು ತೀರ್ಪುಗಾರರ ಅನಿಸಿಕೆಯ ಸಂದರ್ಭದಲ್ಲಿ ನಾವಿಬ್ಬರು ಮಾತನಾಡಿದ್ದೆವು. ಶಾಂತಿ ಅಪ್ಪಣ್ಣ ಅವರ ಕೃತಿಗೆ ಬಹುಮಾನ ಬಂದಿದ್ದನ್ನು ನಾವಿಬ್ಬರು ಸಂಭ್ರಮಿಸಿದ್ದೆವು.


ಆಮೇಲೆ ಪ್ರಕಾಶ್ ಸರ್ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿ ಕೊಣನೂರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ತೆರಳಿದರು. ಆಗಲೂ 'ಇವರ ಜ್ಞಾನ ಭಂಡಾರದ ವಿಸ್ತಾರಕ್ಕೆ ಅದು ವೇದಿಕೆಯಲ್ಲ' ಎಂದು ಮನಸಾರೆ ಅಂದುಕೊಂಡಿದ್ದೆ. ಸಿಕ್ಕಾಗಲೆಲ್ಲ 'ನೀವೂ ಪರೀಕ್ಷೆ ಬರೆಯಬೇಕಿತ್ತು ಸತೀಶ್' ಎನ್ನುತ್ತಿದ್ದರು.

 ಪ್ರಕಾಶ್ ಸರ್ ಉಪನ್ಯಾಸಕ್ಕೆ ಬರುತ್ತಿದ್ದದ್ದು ಒಂದು ದೊಡ್ಡ ದಿನಚರಿಯನ್ನು ಕೈಯಲ್ಲಿ ಹಿಡಿದುಕೊಂಡು. ಅದರಲ್ಲಿ ಹಲವು ಉಪನ್ಯಾಸ ಗಳಿಗೆ ಮಾಡಿಕೊಂಡಿದ್ದ ಟಿಪ್ಪಣಿಗಳಿದ್ದವು. ಯಾವುದೇ ಉಪನ್ಯಾಸಕ್ಕೆ ಅವರು ಅದನ್ನು ತರುತ್ತಿದ್ದರು. ಉಪನ್ಯಾಸಕ್ಕೂ ಮುನ್ನ ಒಂದು ಸಿಗರೇಟ್ ಹಚ್ಚಿಬರುತ್ತಿದ್ದರು. 

 ಆ ದಿನ ಭಾರದ್ವಾಜ್ ಸರ್ ಅವರು ಕರೆ ಮಾಡಿ 'ಪ್ರಕಾಶ್ ಹೋಗ್ಬಿಟ್ರು' ಎಂದಾಗ 'ಯಾವ ಪ್ರಕಾಶ್?' ಎಂದು ಕೇಳಿದ್ದೆ. ಎಂಥಾ ಮೇರು ಪ್ರತಿಭೆಯೊಂದರ ನಿರ್ಗಮನವಾಯಿತು ಎಂದು ನರಳಿದ್ದೆ!

ಪ್ರಕಾಶ್ ಸರ್ ನಮ್ಮನ್ನು ಅಗಲಿದ್ದು ತುಂಬಲಾರದ ನಷ್ಟ. ಕುಶಾಲನಗರದ ಪದವಿ ಕಾಲೇಜಿನಲ್ಲಿ ನಡೆದ ಸೆಮಿನಾರಿನಲ್ಲಿ ಮಾಡಿಕೊಂಡಿದ್ದ ವಿಡಿಯೋ ತುಣುಕಿನಲ್ಲಿ ಪ್ರಕಾಶ್ ಸರ್ ಅವರ ಆಗಮನದ ದೃಶ್ಯವೊಂದಿದೆ. ಒಮ್ಮೊಮ್ಮೆ ಅದನ್ನು ನೋಡಿಕೊಳ್ಳುತ್ತೇನೆ.
**


 'ಸೋಮಾರಿ ಪ್ರಕಾಶ' ಎಂದೇ ನೆನಪಿಸಿಕೊಳ್ಳುವ ಡಾ. ಸುಕನ್ಯಾ ಅವರು ತಮ್ಮ ಪತಿಯ ಬದುಕು ಬರೆಹ ಮತ್ತು ಭಾಷಣಗಳನ್ನು 'ನುಡಿ ಸಂಕಥನ'ದಲ್ಲಿ ದಾಖಲಿಸಿದ್ದಾರೆ. ಪ್ರಕಾಶರ ಕುರಿತ ಬರೆವಣಿಗೆಯು ಬೆಳೆದಂತಲ್ಲ ಹೆಣ್ಣೊಬ್ಬಳ ಬದುಕಿನ ಸಂಕಟಗಳನ್ನು, ಅವಳು ಮಾಡಬೇಕಾದ /ಮಾಡಿರುವ ತ್ಯಾಗವನ್ನು ಬಿಚ್ಚಿಡುತ್ತಾರೆ. ಕಣ್ಣುಗಳನ್ನು ತೋಯಿಸುತ್ತವೆ ಅವು. ಅತ್ಯಂತ ಪ್ರಾಮಾಣಿಕ ಅನಿಸಿಕೆಗಳವು. ತಮ್ಮ ಅಧ್ಯಯನದ ಮಿತಿಗಳನ್ನು ಒಪ್ಪಿಕೊಳ್ಳುತ್ತಲೇ ಎರಡನೆಯ ಗುರುವಾದ ಪತಿಯ ಏಳಿಗೆಯನ್ನು ಬಯಸಿದವರು ಸುಕನ್ಯಾ . ಅದಕ್ಕಾಗಿ ಪತಿಯ ಸಿದ್ಧಾಂತಗಳನ್ನು ತಾವೂ ಪಾಲಿಸಿದವರು. ತಮ್ಮ ಆದ್ಯತೆ/ ಅಧ್ಯಯನವನ್ನೆಲ್ಲ ಬದಿಗಿಟ್ಟು ಗಂಡನ, ಮಕ್ಕಳ ಆರೈಕೆಯಲ್ಲೇ ಸುಖವನ್ನು ಕಾಣುವ, ಪತಿಯ ಅಧ್ಯಯನಕ್ಕೆ ಸಮಯವನ್ನು ಕಲ್ಪಿಸಿಕೊಡುವ , ಖಾಸಗಿ ವಾಹನವಿಲ್ಲದೆ ಬದುಕುವುದನ್ನು ಕಲಿಯುವ ಮುಂತಾದ ಹಲವು ತ್ಯಾಗಗಳನ್ನು ಮಾಡಿದವರು ಡಾ.ಸುಕನ್ಯಾ ಮೇಡಂ.  

ಗಂಡನೊಂದಿಗಿನ ಪ್ರೀತಿ, ಮುನಿಸು, ರೇಗಿಸುವಿಕೆ ರಾಜಿಗಳೊಂದಿಗೆ ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಹವಣಿಸುವ ಹೆಣ್ಣಿನ ದಿನಚರಿಯು ಕೃತಿಯ ಪೂರ್ವಾರ್ಧದಲ್ಲಿದೆ. 

 ಎಲ್ಲರೂ ಕಾರು-ಬೈಕಿನಲ್ಲಿ ಸಂಚರಿಸುವಾಗ ತಾವು ಸಾರ್ವಜನಿಕ ವಾಹನಕ್ಕಾಗಿ ಕಾಯುವ, ಹಣ-ಆಸ್ತಿಗಳ ಹಿಂದೆ ಬೀಳುವವರ ನಡುವೆ ಬಾಡಿಗೆಮನೆಯಲ್ಲಿ ಸುಖ ಕಾಣುವ ಸಂಸಾರ ಇವರದಾಗಿತ್ತು . ತಾವು ನಂಬಿದ ಸಿದ್ಧಾಂತದಂತೆ ಬದುಕಲು ಹೊರಟ ಪ್ರಕಾಶರನ್ನು ಅನುಸರಿಸಿಕೊಂಡು ಹೋದವರು ಸುಕನ್ಯಾ. ಮದುವೆ ಮತ್ತಿತರ ಲೌಕಿಕ ಸಂಗತಿಗಳಿಂದ ವಿಮುಖರಾಗಿದ್ದ ಪ್ರಕಾಶರನ್ನು ಸೆಳೆದದ್ದು ಸುಕನ್ಯಾ ಅವರ ಪ್ರೀತಿ ಮತ್ತು ತ್ಯಾಗ . ಅದು ಇಷ್ಟು ಬೇಗ ಮುಗಿಯುತ್ತದೆ ಎನ್ನುವುದೇ ದುಃಖಕರ ಸಂಗತಿ.  

ವೈಚಾರಿಕವಾಗಿ ಪ್ರಕಾಶರಾಗಿದ್ದ ಪ್ರಕಾಶರ ಬದುಕನ್ನು ಪ್ರೊ. ರಹಮತ್ ತರೀಕೆರೆ, ಡಾ. ರಾಜಪ್ಪ ದಳವಾಯಿ ಅವರು ಬರೆದುಕೊಂಡಿದ್ದಾರೆ. ತಮ್ಮ ಶಿಷ್ಯನ ಅಧ್ಯಯನ, ಪ್ರೀತಿ, ಕಾಳಜಿಗಳ ಕುರಿತ ಅಪಾರ ಗೌರವ ಇವರಲ್ಲಿದೆ.

 ಡಾ. ಪ್ರಕಾಶ್ ಸರ್ ಬರೆದದ್ದು ತೀರಾ ಕಡಿಮೆ. ಪುಸ್ತಕಗಳಿಗೆ ಮುನ್ನುಡಿ/ ಬೆನ್ನುಡಿ/ಪ್ರತಿಕ್ರಿಯೆಯ ರೂಪದಲ್ಲಿ ಬರೆದ ಬರೆಹಗಳನ್ನು ಬಿಟ್ಟರೆ, ಅವರ ವಿದ್ವತ್ಪೂರ್ಣ ಭಾಷಣಗಳೆಲ್ಲ ರೆಕಾರ್ಡ್ ಆಗಲಿಲ್ಲ. ಆದರೆ ಅವರು ಮಾಡಿಟ್ಟ ಟಿಪ್ಪಣಿಗಳು ಇಲ್ಲಿ ಹಲವರಿಂದ ಬರೆಹ ರೂಪ ಪಡೆದುಕೊಂಡಿವೆ. ಭಾಗ ಎರಡರಲ್ಲಿ ಕಾಣಸಿಗುವ ಪ್ರಕಾಶರ ಬಹುಮುಖೀ ಅಧ್ಯಯನಗಳು, ಜೀವಪರ ಕಾಳಜಿಗಳು, ಶಿಸ್ತಿನ ಅಧ್ಯಯನಗಳು ನಮ್ಮನ್ನು ಗಾಢವಾಗಿ ತಟ್ಟುತ್ತವೆ. 
*
ಕಾಜೂರು ಸತೀಶ್ 

No comments:

Post a Comment