ಯಾಕೋ ಏನೋ ಇದ್ದಕ್ಕಿದ್ದ ಹಾಗೆ ರಾಜಪುರಂ ನೆನಪಾಯಿತು.
ಇವತ್ತು facebookನಲ್ಲಿ ಮಲಯಾಳಂ ಕವಿ ಪಿ ಎನ್ ಗೋಪಿಕೃಷ್ಣನ್ ಅವರ ಚಿತ್ರವನ್ನು ನೋಡುತ್ತಿದ್ದೆ. ಹಿರಿಯರೊಬ್ಬರ ಕನ್ನಡ ಅನುವಾದ ನನಗೆ ಹುಚ್ಚುಹಿಡಿಸುತ್ತಿತ್ತು. ಅದನ್ನು ತಲೆಯಿಂದ ವಿಸರ್ಜಿಸಿದ ಮೇಲೆ ಕರಿಕೆಯ ಬದುಕಿನ ಕೆಲವು ಪುಟಗಳು ತೆರೆದುಕೊಂಡವು.
*
ಬ್ಯಾಂಕಿಗೆ/ ಎಟಿಎಂನಲ್ಲಿ ಹಣ ತೆಗೆಯಲು( ನನ್ನ ಸ್ನೇಹಿತ ಅದನ್ನು ಕೆರ್ಕೊಂಡ್ಬರೋದು ಎನ್ನುತ್ತಿದ್ದರು) ಮಡಿಕೇರಿಗೆ ಹೋಗಬೇಕಿತ್ತು. ಅದಕ್ಕಾಗಿ ಒಂದು ದಿನ ರಜೆ ಮಾಡಬೇಕಿತ್ತು. ಕರಿಕೆಯ ಬದುಕು ದುಬಾರಿ. ತೆಂಗಿನಕಾಯಿ ಕುಂಬಳಕಾಯಿ ..ಹೀಗೆ ಎಲ್ಲವನ್ನೂ ತೂಕ ಮಾಡಿಯೇ ಕೊಡುವವರು ಅವರು. ಒಂದೊಮ್ಮೆ ಜೇಬು ಖಾಲಿಯಾಯಿತೆಂದರೆ ಅಥವಾ ಇದ್ದ ಹಣವನ್ನು ಯಾರಾದರೂ ಈಗ ಕೊಡುತ್ತೇನೆಂದು ನಯವಾಗಿ ಪಡೆದುಕೊಂಡರೆ ಬದುಕು ಕಷ್ಟವಾಗುತ್ತಿತ್ತು. ಅವರಾದರೋ, ಮರುದಿನ 'ನೀನು ಕೊಡಲಿಲ್ಲ ನಾನು ತೆಗೆದುಕೊಳ್ಳಲಿಲ್ಲ' ಎಂಬ ಸೂತ್ರಕ್ಕೆ ಕಟ್ಟುಬಿದ್ದಿರುತ್ತಾರೆ. ಹಾಗಾಗಿ ಉಪವಾಸ ಬದುಕುವುದೂ ಅಲ್ಲಿದ್ದಾಗಿನ ಬದುಕಿನ ಕ್ರಮವೇ ಆಗಿತ್ತು.
ಈ ನರಕದ ಜ್ವಾಲೆಯಿಂದ ಪಾರಾಗುವ ಬಗೆಯನ್ನು ಸುತ್ತಲೂ ಆಕಾಶದೆತ್ತರಕ್ಕೆ ಬೆಳೆದುನಿಂತಿದ್ದ ಗುಡ್ಡಗಳನ್ನು ತದೇಕಚಿತ್ತದಿಂದ ನೋಡಿ ಯೋಚಿಸಿದರೂ ಪರಿಹಾರ ಸಿಕ್ಕಿರಲಿಲ್ಲ. ಕಡೆಗೂ ಕೇರಳದ ರಾಜಪುರಂ ಎಂಬ ಊರು ATM ಎಂಬೋ ಮಾಂತ್ರಿಕನನ್ನು ತನ್ನ ಒಡಲಲ್ಲಿರಿಸಿಕೊಳ್ಳುವ ಸಾಹಸ ಮಾಡಿತು.
ಒಂದು ಬಗೆಯ ಹಿಂಸೆಯಿಂದ ನಮ್ಮನ್ನು ಹಣ್ಣು ಮಾಡಿತ್ತು ರಾಜಪುರಂ ಎಂಬ ಊರು. ನಮ್ಮ ಹಸಿವು ನೀಗಿಸಿದ ಆ ಊರಿಗೆ ಕೃತಜ್ಞತೆಗಳು!
ಕೇರಳದ ನೆಲದೊಂದಿಗಿನ ಒಡನಾಟವು ನನಗೆ ಮಲಯಾಳಂ ಸಾಹಿತ್ಯದ ಮೇಲೆ ಅತೀವ ಆಸಕ್ತಿ ಹುಟ್ಟುವಂತೆ ಮಾಡಿತು. ಪಾಣತ್ತೂರು ಹೋದಾಗಲೆಲ್ಲ ಮಾತೃಭೂಮಿ/ ಮಾಧ್ಯಮಂ ನನ್ನ ಕೈಗಂಟಿಕೊಳ್ಳುತ್ತಿತ್ತು. ನನ್ನ ಕೈಯಲ್ಲಿ ಮಲಯಾಳಂ ಪುಸ್ತಕವನ್ನು ನೋಡಿದ ಜನ 'ಇದೇನು ಮಲಯಾಳಂ ಪುಸ್ತಕ?' ಎಂದು ಕೇಳುತ್ತಿದ್ದರು. ನಾನು ಸುಮ್ಮನೆ ನಕ್ಕು 'ಕನ್ನಡ ಪುಸ್ತಕ ಸಿಗಲ್ವಲ್ಲಾ' ಎನ್ನುತ್ತಿದ್ದೆ. ಚಿತ್ರ ನೋಡಲು ಪುಸ್ತಕ ಕೊಂಡಿದ್ದಾರೆ ಎಂದು ಎಷ್ಟೋ ಜನ ಅಂದುಕೊಂಡಿದ್ದರು!
ಪಿ ಎನ್ ಗೋಪಿಕೃಷ್ಣನ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದೆ. ಆದರೆ ಅವರು ಯಾವ ಊರಲ್ಲಿ ಇದ್ದಾರೆಂದು ಅವರನ್ನು ಕೇಳಿರಲಿಲ್ಲ. ಒಂದು ದಿನ, ನಾನು ಬರೆದ ಮಲಯಾಳಂ ಕವಿತೆಯನ್ನು ಅವರು ಪತ್ರಿಕೆಗೆ ಕಳುಹಿಸಿ ಪ್ರಕಟ ಮಾಡಿಸಿದ್ದರು. ನನಗೆ ನಿಜಕ್ಕೂ ಖುಷಿಯಾಗಿತ್ತು.
ಅವರೊಂದಿಗೆ ಅಂತರ್ಜಾಲದಲ್ಲಿ ಸಂಪರ್ಕಿಸುವ ಹೊತ್ತಿನಲ್ಲಿ ಅವರು ಕಾಸರಗೋಡಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆಗಾಗ ರಾಜಪುರಂಗೆ ಬಂದು ಹೋಗುತ್ತಿದ್ದರು. ಆಮೇಲೆ ಅವರು ನನ್ನ landmark ವಿಚಾರಿಸಿದರು. ನಾನು ಹೇಳಿದೆ. ಇಷ್ಟು ದಿನ ಅಲ್ಲೇ ಇದ್ದೆ, ಈಗ ವರ್ಗಾವಣೆ ಆಯಿತು ಎಂದರು!
*
ಯಾಕೋ ಏನೋ ರಾಜಪುರಂ ಎಂದಾಗ ಇಷ್ಟೆಲ್ಲ ನೆನಪಾಯಿತು!
*
ಕಾಜೂರು ಸತೀಶ್
No comments:
Post a Comment