ನನ್ನ ಮಾತು
ನಮ್ಮಿಬ್ಬರ ನಡುವಿನ ಅವರಿಂದಾಗಿ
ನನ್ನ ತುಟಿಯ ದಿವ್ಯ ಮೌನಕ್ಕೆ ಸಿಕ್ಕು
ಹೂತುಹೋಗಿದೆ
ಬಾ ತುಟಿಯೊತ್ತಿ ಎತ್ತಿಬಿಡು
ಮಾಗಿಯ ನಮ್ಮ ಬಿರಿದ ತುಟಿಗಳಿಂದ ಒಸರುವ ರಕುತದಿಂದಾದರೂ
ನಮ್ಮಿಬ್ಬರ ಮಾತುಗಳು ಬಟವಾಡೆಯಾಗಲಿ.
ನನ್ನ ಅಂಗೈಯ ಗೆರೆಗಳು
ನಿನ್ನತ್ತ ಹಳಿಗಳ ನಿರ್ಮಿಸಿವೆ
ಅವರು ಕೊಟ್ಟ ಸಲಾಕೆಯ ಬಿಗಿಹಿಡಿತಕ್ಕೆ
ಹಳಿಗಳು ಸವೆದುಹೋಗಿವೆ
ಜೋರುಮಳೆ ನಮ್ಮಿಬ್ಬರ ನಡುವೆ
ಬಾ ಬೇಗ
ರೈಲು ಹೊರಡುವ ಹೊತ್ತಾಗಿದೆ.
ನನ್ನ ಎದೆಯ ದಾರಿಗಳು
ಬೃಹತ್ ವಾಹನಗಳು ಸಂಚರಿಸಿ ದುರಸ್ತಿಯಲ್ಲಿವೆ
ನಮ್ಮಿಬ್ಬರ ನಡುವಿನ ಅವರು
ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ
ನಿನ್ನ ಕೆಂಬಟ್ಟೆಯ ತುಂಡೊಂದನ್ನು
ಬಾವುಟದಂತೆ ನೇತುಹಾಕಲಾಗಿದೆ ಅಲ್ಲಿ
ಟಾರು ಕುದಿಯುವ ಮುನ್ನವೇ
ಆ ಕೆಂಪು ಧ್ವಜವನ್ನಿಳಿಸಿ ಬಾ
ಎದೆಯೊಳಗಿನ ಮಗು ಮಲಗಲು ಹೊತ್ತಾಗಿದೆ
ಅಪ್ಪಿ ಹಾಲುಣಿಸಿಬಿಡು ಬೇಗ.
ವಸಂತ ಬಂದಿದೆ
ನಮ್ಮಿಬ್ಬರ ನಡುವಿನ ಅವರಿಗೆ
ಬಾ
ಗೂಡು ಕಟ್ಟಿಕೊಡೋಣ
ಕಾವು ಕೊಟ್ಟುಬಿಡೋಣ
ಬಿರಿದು ಕುಹೂ ಕುಹೂ ಹಾಡಿಕೊಳ್ಳಲಿ
ಇನ್ನು ಅಟ್ಟಾಡಿಸುವುದು ಬೇಡ
ಕಪ್ಪು ಸಾಕು ನಮಗೆ
ಕಪ್ಪು
ಸಾಕು.
*
ಕಾಜೂರು ಸತೀಶ್
No comments:
Post a Comment