ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, August 21, 2019

ವಾಲ್ಟರ್ ಹಿಲರಿ ಡಿಮೆಲ್ಲೊ- ಅಭಿವೃದ್ಧಿಯ ಹರಿಕಾರ


ವಾಲ್ಟರ್ ಹಿಲರಿ ಡಿಮೆಲ್ಲೊ ಸರ್ ಡಯಟ್ ಕೂಡಿಗೆಗೆ ಬಂದ ಮೊದಲ ವಾರದಲ್ಲಿ ಅವರ ಮಾತನ್ನು ಕೇಳಿಸಿಕೊಂಡಿದ್ದೆ. 'ನನ್ನ ಅಪ್ಪ ಕಲಿತ ಸಂಸ್ಥೆ' ಎಂದು ಅಭಿಮಾನದಿಂದ ಹೇಳಿಕೊಳ್ಳುವಾಗ ಅದರಲ್ಲಿ 'ಅದನ್ನು ಹೀಗೆ ಇಟ್ಟುಕೊಂಡಿದ್ದೀರಲ್ಲ' ಎನ್ನುವ ಕೊರಗೂ ಕಾಣಿಸುತ್ತಿತ್ತು.


ಆಮೇಲೆ ಅವರು DIETನ ಸ್ವರೂಪವನ್ನೇ ಬದಲಿಸಿಬಿಟ್ಟರು.  ಸುಣ್ಣ-ಬಣ್ಣ ಬಳಿದು ಬಾಹ್ಯ ರೂಪವನ್ನು ಚಂದಗಾಣಿಸುವಂತೆ ಮಾಡಿದ್ದಷ್ಟೇ ಅಲ್ಲ, ಅದಕ್ಕೂ ಮಿಗಿಲಾಗಿ DIETನ (ಮತ್ತು ಜಿಲ್ಲೆಯ) ಆಂತರಿಕ ಸ್ವರೂಪವನ್ನೇ ಬದಲಿಸಿಬಿಟ್ಟರು. ಸ್ವತಃ ತಾವೇ ಮೊದಲು ಕಚೇರಿಗೆ ಬರುವುದು, ಗಿಡಗಳಿಗೆ ನೀರುಹಾಕಿಸುವುದರಿಂದ ಅವರ ಕಚೇರಿಯ ಕೆಲಸಗಳು ಮೊದಲ್ಗೊಳ್ಳುತ್ತಿದ್ದವು. ಅವರ ಕೆಲಸಕ್ಕೆ ಹಗಲು-ರಾತ್ರಿಗಳ ಹಂಗಿರಲಿಲ್ಲ. 

ಅವರೊಬ್ಬ ಪಕ್ಕಾ ಡೆಮಾಕ್ರಟಿಕ್. ನಗುನಗುತ್ತಲೇ ಕೆಲಸವನ್ನು ಪೂರೈಸಿಕೊಳ್ಳುವವರು. ಪ್ರೇರಣಾದಾಯಕವಾಗಿ ಮತ್ತು ಖಡಕ್ಕಾಗಿ ಮಾತನಾಡಿ ಸೋಮಾರಿಗಳನ್ನೂ ಕೆಲಸ ಮಾಡುವಂತೆ ಮಾಡಬಲ್ಲವರು. ಕೆಲಸದ ವಿಷಯದಲ್ಲಿ ಅವರು ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ.

 DDPI(development ) ಮತ್ತು DIET ಪ್ರಾಂಶುಪಾಲರಾಗಿದ್ದ ಅವರನ್ನು ನೋಡಿ ಯಾರೂ ಭಯಪಡುತ್ತಿರುಲಿಲ್ಲ; ಬದಲಾಗಿ ಅವರ ಕರ್ತವ್ಯ ಪ್ರಜ್ಞೆ ಮತ್ತು ಅವರ ಮೇಲಿನ ಗೌರವ ಉಳಿದವರನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಪ್ರೇರೇಪಿಸುತ್ತಿತ್ತು.

ಅಪಘಾತವಾಗಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಇವರು ಮರುದಿನವೇ  ಕರ್ತವ್ಯಕ್ಕೆ ಹಾಜರಾಗಿದ್ದರು!
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅವರು ಶ್ರಮಿಸಿದ ಪರಿ ಅದ್ಭುತ. ಚುನಾವಣಾ ಸಂದರ್ಭದಲ್ಲಿಯೂ ಅವರ ಸೇವೆ ಅನನ್ಯ.

ಇವರ ನೇತೃತ್ವದಲ್ಲಿ ಎಷ್ಟೋ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಒಮ್ಮೆಯೂ ನಮ್ಮನ್ನು ಉಪವಾಸವಿರಿಸಿ ದಿನವಿಡೀ ಸಭೆ ಮಾಡಿದವರಲ್ಲ. ಅವರ ಖಚಿತ ನಿಲುವು, ನುಡಿದಂತೆ ನಡೆಯುವ ಬದುಕು ನಮ್ಮೆಲ್ಲರಿಗೂ ಸದಾ ಮಾದರಿ. 

ಈಗ ಅವರ ಅನುಪಸ್ಥಿತಿ ನಮ್ಮನ್ನು ತೀವ್ರವಾಗಿ  ಕಾಡುತ್ತಿದೆ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಗೆಯ ಶೈಕ್ಷಣಿಕ ಸಂಚಲನ ಮೂಡಿಸಿದ ವಾಲ್ಟರ್ ಹೆಚ್ ಡಿಮೆಲ್ಲೊ ಸರ್ ಈಗ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡು ತೆರಳಿದ್ದಾರೆ. 

ಶರಣು ಸರ್ ನಿಮ್ಮ ಕರ್ತವ್ಯ ಪ್ರಜ್ಞೆಗೆ, ಮಾನವೀಯತೆಗೆ, ಅಪಾರ ಉತ್ಸಾಹಕ್ಕೆ.

*

ಕಾಜೂರು ಸತೀಶ್ 

1 comment:

  1. ಉಪನಿರ್ದೇಶಕರು (ಅಭಿವೃದ್ಧಿ) ಪದನಾಮಕ್ಕೆ ಗರಿಮೆ ತಂದವರು.

    ReplyDelete