ಅಪಾರ ಜನಸಂದಣಿಯಲ್ಲಿ
ಬೆರಳಿಗೆ ಬೆರಳು ಸೇರಿಸಿ ನಡೆದದ್ದು
ಡೈನಿಂಗ್ ಟೇಬಲಿನಲ್ಲಿ ಎದುರುಬದುರಾಗಿ ಕುಳಿತು
ಕಾಲಿಗೆ ಕಾಲು ತಾಗಿಸಿದ್ದು
ಸ್ಕೂಟರಿನ ಕನ್ನಡಿಯನ್ನು
ನಿನಗೆ ನಾನು ನನಗೆ ನೀನು ಕಾಣುವ ಹಾಗೆ
ಜಾಣ್ಮೆಯಿಂದ ಹೊಂದಿಸಿ
ಹಿಂದೆ ಮುಂದೆ ರಸ್ತೆಯ ತುಂಬಾ ಸಾಗಿ
ಪರಸ್ಪರ ಮುಖನೋಡಿಕೊಂಡಿದ್ದು
ಹೆಸರನ್ನೇ ಬರೆಯದ ಉಡುಗೊರೆಗಳಿಗೆ
ಪ್ರೀತಿಯ ಹೊದಿಕೆ ಹಾಕಿ ರವಾನಿಸಿದ್ದು
ಯಾರನ್ನೋ ನೋಡುತ್ತಿರುವ ಹಾಗೆ
ರೆಪ್ಪೆಗಳ ಮಿಟುಕಿಸದೆ
ಸನಿಹಕೆ ಬಂದು ಕಡಲ ತಡಿಯಲ್ಲಿ ನಿಂತದ್ದು
ಒಂದೇ ಅಲೆಯಲ್ಲಿ ಮಿಂದ
ನಮ್ಮಿಬ್ಬರ ನಿಶ್ವಾಸವನ್ನು ಪರಸ್ಪರ ಉಸಿರಾಡಿದ್ದು
ಎಲ್ಲವೂ ರಹಸ್ಯವಾಗಿಯೇ ಉಳಿದಿತ್ತು.
ನಮ್ಮಿಬ್ಬರ ಸ್ಕೂಟರುಗಳು
ಒಂದೇ ಲಾರಿಯ ಚಕ್ರಕ್ಕೆ ಸಿಲುಕಿ
ನರಳಾಡಿ ಸಾಯುವವರೆಗೆ
ಎಲ್ಲವೂ ರಹಸ್ಯವಾಗಿಯೇ ಉಳಿದಿತ್ತು.
*
ಮಲಯಾಳಂ ಮೂಲ- ರಗಿಲ ಸಜಿ
ಕನ್ನಡಕ್ಕೆ- ಕಾಜೂರು ಸತೀಶ್
No comments:
Post a Comment