ನನ್ನ ಮಾತು
ಬಸ್ಸಿನ ಕಿಟಕಿಯ ಸೀಟು ಬಿಟ್ಟು
ಈಚೆಗೆ ಬಂದು ಕೂರುತ್ತದೆ
ಗಾಳಿಮಳೆಯಲ್ಲಿ ನೆನೆದ
ಹಾಡುಗಳನ್ನು ಆಸ್ವಾದಿಸದೆ
ಮರುದಿನದ ಮಧ್ಯಾಹ್ನದ ಊಟಕ್ಕೆ
ಮಕ್ಕಳಿಗೇನು ಸಾರು ಮಾಡಲೆಂದು
ಲೆಕ್ಕ ಹಾಕುತ್ತದೆ
ಬಸ್ಸಿಂದಿಳಿದು
ಹಾದಿಬದಿಯ ಚೆಲುವನ್ನು ಆಸ್ವಾದಿಸದೆ
ಬಹುಬೇಗ ಹಾದಿ ಸಾಗಲೆಂದು
ಬಿರಬಿರನೆ ಹೆಜ್ಜೆಯಿಟ್ಟು
ಬೆವರಲ್ಲಿ ಸ್ನಾನಮಾಡಿ ಮನೆಸೇರುತ್ತದೆ
ಕತ್ತಲಾಗುವ ಕುರುಹುಗಳನ್ನು
ಒಲೆಯಲ್ಲಿಟ್ಟು ಕುದಿಸುತ್ತದೆ
ಬೆಳುಬೆಳದಿಂಗಳು ಮನೆಯನ್ನಾವರಿಸುವ
ಬೆರಗನ್ನು ಅರಿತೂ ಅರಿಯದಂತೆ
ಬಟ್ಟೆಗಳ ಮಡಚಿಟ್ಟು
ಪಾತ್ರೆಗಳ ತೊಳೆದಿಟ್ಟು
ತಡವಾಗಿ ಮಲಗುತ್ತದೆ
ನುಸುಳುವ ಕನಸುಗಳನ್ನು
ಮುಲಾಜಿಲ್ಲದೆ ಹೊರಗೇ ನಿಲ್ಲಿಸುತ್ತದೆ
ನನ್ನ ಮಾತು
ಬೆಳಿಗ್ಗೆ ಬೇಗ ಎದ್ದು
ಕಲ್ಪನೆಗಳಲಿ ಮುಳುಗೇಳದೆ
ಕಾಫಿ ಕುಡಿದು
ಯಾರ ಗಮನಕ್ಕೂ ಬರದಂತೆ
ಮನೆಯ ಒಳಗೆ, ಹಿತ್ತಿಲಿನಲ್ಲಿ
ಬಾವಿಯಲ್ಲಿ ಅಲೆದು 'ತೀರು'ತ್ತದೆ.
*
ಮಲಯಾಳಂ ಮೂಲ- ರಗಿಲ ಸಜಿ
ಕನ್ನಡಕ್ಕೆ- ಕಾಜೂರು ಸತೀಶ್
No comments:
Post a Comment