ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 22, 2020

'ಗಾಯದ ಹೂವುಗಳು' ಕುರಿತು ರಾಜೇಂದ್ರ ಪ್ರಸಾದ್

ಕೃತಿ : ಗಾಯದ ಹೂವುಗಳು
ಕವಿ : ಕಾಜೂರು ಸತೀಶ್

ಪ್ರತಿಕ್ರಿಯೆ

ನನ್ನ ತಲೆಮಾರಿನ ಹಲವು ಕವಿಗಳಲ್ಲಿ ಗಮನಿಸಲೇಬೇಕಾದ ಕವಿ ಕಾಜೂರು ಸತೀಶ್. ಕಾಡಂಚಿನ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿಕೊಂಡು ತನ್ನಷ್ಟಕ್ಕೆ ಸುತ್ತಾಡಿಕೊಂಡು ಒಳಗೊಳಗೇ ಬೆಂದರೂ ಹೊರಗೆ ನಗು ಮೊಗೆಯನ್ನು ತೋರುತ್ತಾ ಹೊಳೆಯಂಚಿನಲ್ಲಿ ಕಳೆದುಹೋದ ಹುಡುಗ. ಮಲೆಯಾಳಂನಿಂದ ಹಲವಾರು ಕವಿತೆಗಳನ್ನು ಕನ್ನಡದ್ದೇ ಎಂಬಷ್ಟು ತೀವ್ರವಾದ ಭಾಷೆಯಲ್ಲಿ ಅನುವಾದಿಸಿದ್ದಾರೆ. ಈಗಲೂ ಅನುವಾದ ನಡೆಯುತ್ತಲೇ ಇದೆ. ನಮಗೆ ಮತ್ತು ಮಲೆಯಾಳಂಗೆ ಒಳ್ಳೆಯ ಸೇತು ಆಗಬಲ್ಲವರು. ಸತೀಶ್ ಕವಿಗೋಷ್ಠಿ, ಕಾರ್ಯಕ್ರಮ ಯಾವುದಕ್ಕೂ ಹೆಚ್ಚು ಹೊರಗೆ ಕಾಣಿಸಿಕೊಳ್ಳದೆ ಒಳಗೇ ಅವಿತುಕೊಳ್ಳುವ ಸಂಕೋಚ ಸ್ವಭಾವದವರು.. ಕವಿತೆಗಳು ಹಾಗೆಯೇ, ಗಡಿನಾಡಿನ ಮಳೆನಾಡಿನ ಒಳ-ಹೊರಗೆ ಹುಟ್ಟಿ ಹರಿಯುತ್ತವೆ.


ಗಾಯದ ಹೂವುಗಳು ಪ್ರಕಟವಾಗಿದ್ದು ೨೦೧೫ ರಲ್ಲಿ. ಅದರ ಹಸ್ತಪ್ರತಿಗೆ “ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ” ಬಂದಿದೆ. ಇದು ಅವರ ಮೊದಲ ಸಂಕಲನ ಮತ್ತು ಇದರ ನಂತರ ಒಂದು ಮಲೆಯಾಳಂ ಅನುವಾದಿತ ಕವಿತೆಗಳ ಸಂಕಲನ ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ. ಸತೀಶರ ಕವಿತೆಗಳ ವೈಶಿಷ್ಟ್ಯ ಇರುವುದು ಪ್ರಕೃತಿಯ ಎಲ್ಲ ಚರಾಚರಗಳ ಜೊತೆಗೆ ನಡೆಸುವ ಸಂವಾದ, ಅನುಸಂಧಾನ ಮತ್ತು ಸ್ವಗತಗಳಲ್ಲಿ..

ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ “ (ಮೊದಲ ಕವಿತೆ, ಪುಟ ೧೯ )

ಎನ್ನುವ ಕವಿತೆಯೊಂದಿಗೆ ಶುರುವಾಗುವ ಸಂಕಲನ ಉದ್ದಕ್ಕೂ ಇಷ್ಟೇ ಸೂಕ್ಷ್ಮವಾಗಿ ಪರಿಸರ, ಸಂಬಂಧ, ಮಾತುಕತೆ, ಸಂಕಟಗಳ ಜೊತೆಗೆ ಒಡನಾಡುತ್ತ ಮುಂದುವರಿಯುತ್ತದೆ.

“ಹಸಿದ ಜಿಗಣೆಯೇ
ಬಾ ಹೀರು ನನ್ನನ್ನು
ಸ್ವಲ್ಪದರಲ್ಲೇ ನೀನು
ದ್ರಾಕ್ಷಿಯಾಗಿ ಉದುರುತ್ತೀ
ನೀ ಹೆರುವ ಕೂಸಿಗೆ
ನನ್ನ ಹೆಸರಿಡುವುದ ಮರೆಯದಿರು
ಅಪ್ಪನಾಗುವ ಖುಷಿಯಿದೆ ನನಗೆ” (ಮಿಕ್ಕವರಾರನ್ನೂ ಹೀರಕೂಡದು ಪುಟ ೪೬ )

ಜಿಗಣೆ ಜೊತೆಗಿನ ಈ ಸಂವಾದ ಕಲ್ಪನೆ ಎಷ್ಟು ಅದ್ಭುತವಾಗಿದೆ. ರಕ್ತ ಕುಡಿಯುತ್ತಿದ್ದರೂ ಕವಿಯು ಅದರ ಕೂಸಿಗೆ ಅಪ್ಪನಾಗಲು ಬಯಸುತ್ತಿದ್ದಾನೆ. ಒಂದು ಕಡೆಯಿಂದ ಹತಾಶೆ, ಮತ್ತೊಂದು ಕಡೆಯಿಂದ ಅನುಭಾವ, ತನ್ಮಯದಿ ಕೂತು ಕಂಡರೆ ಸೃಷ್ಟಿ ಜೊತೆಗಿನ ಕಾಣ್ಕೆ ಎಂಬಂತೆ ಕವಿತೆ ಮತ್ತೆ ಮತ್ತೆ ನಮ್ಮ ಬುದ್ಧಿಯೊಳಕ್ಕೆ ಜಿಗಣೆಯಂತೆ ಅಂಟುತ್ತದೆ.

ಇದುವರೆಗೆ ಬರೆಸಿಕೊಂಡ ನನ್ನ ಕವಿತೆಗಳೆಲ್ಲವೂ 
ವೈದ್ಯನಿಗೆ ಕೊಡಲು ಕಾಸಿಲ್ಲದೆ 
ನರಳುತ್ತಲೇ ಇವೆ ಹಸಿನೆಲದ ಮೇಲೆ“ (ಅಸ್ವಸ್ಥ ಕವಿತೆಗಳು, ಪುಟ ೬೪ )
ಎದೆಯಾಳದ ಸಂಕಟಕೆ ಕವಿತೆಗಳು ಜೊತೆಯಾದ, ಮದ್ದಾದ ಪರಿ. ಅಥವಾ ಕವಿತೆಗಳೇ ನಿಜವಾಗಲು ಅಸ್ವಸ್ಥಗೊಂಡಿವೆಯೋ? ಆ ಹಸಿನೆಲವು ಕವಿಯ ಹೃದಯ, ಅದರ ಮೇಲೆ ಬಿದ್ದ ಅಸ್ವಸ್ಥ ಕವಿತೆ ಬದುಕಿನ ಹಲವು ಸಂಕಟ ಮತ್ತು ಸಮಾಜ. 

ಈ ಸಂಕಲನದ ತುಂಬೆಲ್ಲ ಸಂಕಟ, ಏಕಾಂತ, ನೆನೆಪು, ವೃತ್ತಿಯ ತಕರಾರು- ತಳಮಳ, ಅಲ್ಲೆಲ್ಲೋ ಹೊಳೆಯ ನಡುವೆ ಕೂತ ದುಮ್ಮಾನದ ಹಾಡು ಬೇಕಾದಷ್ಟಿವೆ. ಮಾನುಷ ಜೀವನ ಇದಕ್ಕೆ ಹೊರತಾದುದೇನು? ಅಸಲಿಗೆ ಸಂತಸವು ಸೃಜನಶೀಲತೆಯನ್ನು ಹುಟ್ಟಿಸುವುದು ಕಡಿಮೆ.. ಆದರೆ ನೋವು ಅನ್ನುವುದರ ತಳದಲ್ಲೇ ಕಲೆಯ ನೆಲೆ ಇದೆ. ಅದಕೆ ಈ ಸಾಲು ಸಾಕ್ಷಿ..
ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ 
ಒಸರುವ ಅಷ್ಟೂ ರಕ್ತವು ಹೂವಿಗೆ ಅಂದ ನೀಡಬೇಕು” 
(ಗಾಯದ ಹೂವುಗಳು, ಪುಟ ೭೯ )

ಕಡೆಗೆ ಕವಿಯೊಂದು ಉಯಿಲು ಬರೆದಿದ್ದಾನೆ.. ಅವನ ಕಾಲದ ನಂತರ ಅವನ್ನು ಏನು ಮಾಡಬೇಕೆಂದು.  ನಾವು ಮಾಡಬಲ್ಲೆವೇ? ಕಾಡುದಾರಿಯ ನಡುವೆ ಅವನ ಸಮಾಧಿ, ಅವನ ಬೆಳಕಿನ ತಂತಿಯ ವಿಸ್ತರಣೆ, ಬೋನ್ಸಾಯ್ ಗಿಡ, ಅಲ್ಲಿ ಹಕ್ಕಿಗಳ ಹಿಕ್ಕೆ ಕಡೆಗೆ 
ಮರೆತುಬಿಡಿ ನನ್ನ 
ನಿತ್ಯದ ನಿಮ್ಮ ವಿಸರ್ಜನೆಯ ಹಾಗೆ”    (ಉಯಿಲು, ಪುಟ ೯೬ )    
ಅಷ್ಟು ಸುಲಭಕ್ಕೆ ಕವಿ ಅಥವಾ ಕವಿತೆಯನ್ನು ನಾವು ಮರೆಯಲು ಅಥವಾ ವಿಸರ್ಜಿಸಲು ಸಾಧ್ಯವೇ ? ಅಂತಹ ಕಾರಣವೇ ಇದ್ದರೆ, ಅದು ಎಂದೂ ಮರೆಯದಂತೆ ಒಳಗೆ ಉಳಿದುಹೋಗುತ್ತದೆ, ನೆನೆಪಿನ ಪಡಸಾಲೆಯಲ್ಲಿ ಒಂದು ಫೋಟೋ ಖಾಯಂ. 

ಇದು ಕವಿಯ ಮೊದಲ ಸಂಕಲನ. ಹಾಗಾಗಿ ಕಾವ್ಯ ಭಾಷೆಯ, ಪದೋಕ್ತಿಯ, ಸಂರಚನೆಯ ತೊಂದರೆಗಳು ಕಾಣಿಸುತ್ತವೆ. ಆದರೆ ಸೂತ್ರಕ್ಕೆ ಬಿಗಿದುಕೊಳ್ಳುವ ಕಲೆಯನ್ನು ನಾನು ಒಪ್ಪುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಸತೀಶ ಮೊದಲಿನಂತೆ ಬರೆಯುವುದು ಕಡಿಮೆ ಮಾಡಿದ್ದಾರಾದರೂ, ಅಸಲಿಗೆ ವಸ್ತು-ವಿಷಯವನ್ನು ಹರಳುಗಟ್ಟಿಸಿ ಹವಳಗಳಂತೆ ಬರೆಯುತ್ತಿದ್ದಾರೆ. ಈ ಅವಧಿಯಲ್ಲಿ ಅವರ ಬೇರೆ ಬೇರೆ ಅನುವಾದಿತ ಕವಿತೆಗಳು ಮತ್ತು ಸ್ವರಚಿತ ಕವಿತೆಗಳನ್ನು ನಾನು ಓದಿರುವುದರಿಂದ ಅವರ ಕಾವ್ಯದ ಈ ಬೆಳವಣಿಗೆಯನ್ನು ಚೆನ್ನಾಗಿ ಗುರುತಿಸಬಲ್ಲೆ. ಅವರು ದಿಕ್ಕು ತಪ್ಪದ ಹಾಗೆ ಅದೇ ದಾರಿಯಲ್ಲಿ ಮುಂದುವರಿಯಲಿ.. 
ನನ್ನ ಜೊತೆಯ ಕವಿಯು ಮತ್ತಷ್ಟು ಬರೆಯಲಿ, ಮತ್ತಷ್ಟು ಯಶಸ್ಸು ಸಿಕ್ಕಲಿ ಎಂದು ಹಾರೈಸುವೆ. 
*


~ ರಾಜೇಂದ್ರ ಪ್ರಸಾದ್ (ಆರ್ ಪಿ)

2 comments: