ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 22, 2020

ವ್ಯವಸ್ಥೆ



ಮನೆಯ ಯಜಮಾನ ತನ್ನ ಮಗ(ಚಿಕ್ಕ ಯಜಮಾನ)ನಿಗೆ ಒಂದು ಕೆಲಸವನ್ನು ವಹಿಸಿದ. ಚಿಕ್ಕ ಯಜಮಾನನು ಆ ಕೆಲಸವನ್ನು ಮಾಡಲು ತನ್ನ ಸಹಾಯಕನಿಗೆ ತಿಳಿಸಿದ. ಸಹಾಯಕನು ಆ ಕೆಲಸವನ್ನು ನಿರ್ವಹಿಸಲು ಮನೆಯ ನಾಯಿಗೆ ಹೇಳಿದ. ನಾಯಿಯು ತನ್ನ ಕೆಲಸವನ್ನು ಅದರ ಬಾಲಕ್ಕೆ ವಹಿಸಿತು.

ನಾಯಿಯ ಬಾಲವು ಆ ಕೆಲಸವನ್ನು ಮಾಡತೊಡಗಿತು. ಅದಿನ್ನೂ ಅಪೂರ್ಣವಾಗಿರುವಾಗಲೇ, ಮತ್ತೊಂದು ಕೆಲಸ ಅದರ ಮೇಲೆ ಬಿದ್ದಿತು.

ಎರಡೂ ಕೆಲಸಗಳನ್ನು ಮಾಡತೊಡಗಿದ ಬಾಲಕ್ಕೆ ನಾಯಿಯು 'ಇನ್ನೂ ಆಗ್ಲಿಲ್ವಾ??ಇನ್ನೇನಾಗುತ್ತೆ ನಿಂಗೆ ಅಲ್ಲಾಡ್ಸೋದೊಂದ್ ಬಿಟ್ಟು' ಎಂದು ಬೈದಿತು.

ನಾಯಿಗೆ ಆ ಸಹಾಯಕನು 'ಮೂಸೋದು ಕಾಲೆತ್ತೋದು ಬಿಟ್ಟು ಇನ್ನೇನ್ ಕಲ್ತಿದ್ದೀಯ ನೀನು' ಎಂದನು.

ಸಹಾಯಕನಿಗೆ ಚಿಕ್ಕ ಯಜಮಾನನು 'ಮಾನ-ಮರ್ಯಾದೆ ಇಲ್ವಾ ನಿಂಗೆ, ಎಷ್ಟ್ಹೊತ್ ಬೇಕು ಈ ಕೆಲ್ಸ ಮಾಡ್ಲಿಕ್ಕೆ' ಎಂದನು.

ಯಜಮಾನನು ಚಿಕ್ಕ ಯಜಮಾನನಿಗೆ 'ಏನ್ ನಿದ್ದೆ ಮಾಡ್ತಿದ್ದೀಯಾ? ಹೊದ್ಕೊಂಡ್ ಮಲ್ಕೊ ಹೋಗು' ಎಂದನು.

ಅಷ್ಟರಲ್ಲಿ ಬಾಲದ ಬೆನ್ನಿಗೆ ಮತ್ತೊಂದು ಕೆಲಸ ಬಂದು ಅಂಟಿಕೊಂಡಿತು.

'ಕೆಲಸ ಮುಗಿದ ತಕ್ಷಣ ಈ ಬಾಲವನ್ನು ಕತ್ತರಿಸಿ ಹೊಸ ಬಾಲವನ್ನು ಜೋಡಿಸು' ಯಜಮಾನ ಚಿಕ್ಕ ಯಜಮಾನನಿಗೆ ಆದೇಶಿಸಿದ.
*


ಕಾಜೂರು ಸತೀಶ್

No comments:

Post a Comment