ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 1, 2020

ಶಿಕ್ಷಣ ಮತ್ತು ಸ್ವಾತಂತ್ರ್ಯ

ಮಂಡ್ಯ ಅನ್ನೋ ತನ್ನ ಪಾಡಿಗೆ ತಾನು ಬದುಕುವ ಒಂದು ಊರು ನನಗೆ ಸಿನಿಮಾದ ಹುಚ್ಚು ಹಿಡಿಸಿದ್ದು. ಅಲ್ಲಿನ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯವನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ಅದಕ್ಕೆ ಮುಖ್ಯ ಕಾರಣ ಅದು ನಮಗೆ ಕೊಟ್ಟಿದ್ದ ಸ್ವಾತಂತ್ರ್ಯ. ಹಾಗೆ ನೋಡಿದರೆ ನನ್ನ ವಿದ್ಯಾರ್ಥಿ ಜೀವನ ಹತ್ತನೇ ತರಗತಿಯಲ್ಲೇ ಕೊನೆಗೊಂಡಿತ್ತು. ಅನಂತರದ್ದು ನರಕ. ಸ್ವಾತಂತ್ರ್ಯವೇ ಇಲ್ಲದ ಶಿಕ್ಷಣವನ್ನು 'ವೈಭವೋಪೇತ' ಎಂದು ವರ್ಣಿಸಲು ನನ್ನಿಂದಾಗದು.


ಹಳೇ 'ಕೈನೆಟಿಕ್ ಹೊಂಡ'ದಲ್ಲಿ ಬಂದು ಒಂದು ದಮ್ಮು ಎಳೆದು ತೋಳು ಮಡಿಸಿಕೊಂಡು ಯಾವುದೇ ವಿಷಯವನ್ನು ನೀಡಿದರೂ ಲೀಲಾಜಾಲವಾಗಿ ಮಾತನಾಡುತ್ತಿದ್ದ ಡಾ.ಶಂಕರೇಗೌಡ ಸರ್, ಸದಾ ನಗುಮೊಗದ; ಇಂಗ್ಲೀಷ್ ತಿಳಿಯದಿದ್ದರೂ ಅಪಾರ ಆತ್ಮವಿಶ್ವಾಸದಿಂದ ತಮಗೆ ತಿಳಿದ ಪದಗಳನ್ನೆಲ್ಲ ಒಟ್ಟುಗೂಡಿಸಿ ಮಾತನಾಡುತ್ತಿದ್ದ ಡಾ.ಚನ್ನಕೃಷ್ಣಯ್ಯ ಸರ್, ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದರೂ ಏನನ್ನೂ ಹೇಳಿಕೊಳ್ಳದೆ ವಿಷಯ(content)ವನ್ನು ತಿಳಿಸಲು ಶ್ರಮಿಸುತ್ತಿದ್ದ ಡಾ.ಸುವರ್ಣ ಮೇಡಂ , ಕಲೆಯಲ್ಲಿ ಮಿಂದೇಳುತ್ತಿದ್ದ ಡಾ.ಚಿದಾನಂದ ಸರ್.. ಇವರೆಲ್ಲರೂ ನಮಗೆ ಕೊಟ್ಟಿದ್ದ ಸ್ವಾತಂತ್ರ್ಯವನ್ನು ನಾವು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಂಡಿದ್ದೆವು.
*
ವಿಶೇಷ ಉಪನ್ಯಾಸ ನೀಡಲು ಇತರೆ ಕಾಲೇಜಿನಿಂದ ಆಗಮಿಸುತ್ತಿದ್ದ ಉಪನ್ಯಾಸಕರನ್ನೂ ನಾವೆಲ್ಲಾ ತೂಗಿ ನೋಡುತ್ತಿದ್ದೆವು. Depth ಇರುವ ಮಂದಿಯ ಮಾತುಗಳನ್ನು ಕೇಳುತ್ತಿದ್ದರೆ ನನಗೆ ಎದ್ದು ತಕತೈ ಕುಣಿಯಬೇಕೆನಿಸುವಷ್ಟು ಖುಷಿಯಾಗುತ್ತಿತ್ತು. ಅಂಥವರನ್ನು ನನ್ನ ಗೆಳೆಯರೆಲ್ಲಾ 'ಏನು ಕುಯ್ತಾನಪ್ಪಾ' ಎಂದು ಶಪಿಸುತ್ತಿದ್ದರು. Sillyಯಾಗಿ ಮಾತನಾಡಿ ಸಮಯ ಹಾಳುಮಾಡುವವರನ್ನು ಕಂಡರೆ ಎದ್ದು ಓಡಿಬಿಡೋಣ ಎನಿಸುತ್ತಿತ್ತು. ಅವರನ್ನು 'ಸಖತ್ ಮಗಾ' ಎಂದು ನನ್ನ ಗೆಳೆಯರು ಸಂಭ್ರಮಿಸುತ್ತಿದ್ದರು. ನಾನು ಎಲ್ಲೋ ಎಡವಿದ್ದೇನೆ ಎಂದು ಆಗೆಲ್ಲಾ ಅನಿಸುತ್ತಿತ್ತು.

ಒಮ್ಮೆ ಡಾ. ಲ್ಯಾನ್ಸಿ ಡಿಸೋಜ ಸರ್ ಅವರನ್ನು ಕರೆಸಿದ್ದರು. ಅವರ ವಿಷಯದ ಆಳ, ಪ್ರಸ್ತುತಪಡಿಸುವ ವಿಧಾನಗಳು ನನ್ನನ್ನು ಆಕರ್ಷಿಸಿತ್ತು. ಗೆಳೆಯರಿಗೆ ಅವರು ಇಷ್ಟವಾಗಲಿಲ್ಲ. ಪಿಸಪಿಸ ಮಾತು ಆರಂಭವಾಯಿತು. 'ನಿಮಗೆ ಇಷ್ಟವಿಲ್ಲದಿದ್ದರೆ ನೀವು ಹೊರಗೆ ಹೋಗಿ,ಇಲ್ಲದಿದ್ದರೆ ನಾನೇ ಹೋಗುತ್ತೇನೆ' ಎಂದಾಗ ಅವರ ಸದ್ದು ಅಡಗಿದ್ದನ್ನು ನಾನು ಒಳಗೊಳಗೇ ಸಂಭ್ರಮಿಸಿದ್ದೆ.
*
ನಾವೇ ನಾವಾಗಿ ಓದಿಕೊಂಡು ಕಲಿಯುತ್ತೇವಲ್ಲಾ- ಅದರಲ್ಲಿ ಸ್ವರ್ಗ ಸುಖವಿದೆ. ಅಲ್ಲಿ ಸ್ವಾತಂತ್ರ್ಯವಿರುತ್ತದೆ. ಹಾಗಾಗಿ ಕಲಿತದ್ದು ಅಚ್ಚೊತ್ತಿ ನಿಲ್ಲುತ್ತದೆ.
ಇಷ್ಟಾದರೂ ಕಾಲೇಜು ಜೀವನವನ್ನೇ ಅನುಭವಿಸದ ನೋವು ಮಾತ್ರ ಆಗಾಗ ಕಾಡುತ್ತದೆ.
*


ಕಾಜೂರು ಸತೀಶ್

No comments:

Post a Comment