ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, June 30, 2020

ಕಾಗುಣಿತ, ABCD, ಅಧಿಕಾರಿ, ನಿರುದ್ಯೋಗಿ etc!

KAS ಅಧಿಕಾರಿಯೊಬ್ಬರು ಬರೆದುಕೊಂಡಿದ್ದ ತಮ್ಮ ಆ ದಿನದ ಅನುಭವಗಳನ್ನು ಓದುತ್ತಿದ್ದೆ. ಕನ್ನಡ ಸಾಹಿತ್ಯವನ್ನು ಮುಖ್ಯ ವಿಷಯವನ್ನಾಗಿ ಆಯ್ದುಕೊಂಡಿದ್ದ ಅವರ ಬರೆವಣಿಗೆಯಲ್ಲಿ ಅನೇಕ ಕಾಗುಣಿತದ ತಪ್ಪುಗಳಿದ್ದವು!
*

' ಇದು ನಿಜ್ವಾಗಿಯೂ ಅವರೇ ಬರ್ದಿದ್ದಾ?'
'ಹೌದು'
'ಏಳ್ನೇ ಕ್ಲಾಸ್ fail ಆದವ್ರೂ ಇದ್ಕಿಂತ ತಪ್ಪಿಲ್ದೆ ಬರೀತಾರೆ'
'(smiley )'

ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಸಂದೇಶವನ್ನು ಓದಿ ದೂರದೇಶದ ಒಬ್ಬರು ಹೀಗೆ ಪ್ರತಿಕ್ರಿಯಿಸಿದ್ದರು.
*

"ಕಾಗುಣಿತ ತಿಳಿಯದ ಕನ್ನಡ ಮೇಷ್ಟ್ರು , singular- pluralಗಳಿದ್ದಾಗ ಬಳಸಬೇಕಾದ ಕ್ರಿಯಾಪದಗಳ ಅರಿವೂ ಇಲ್ಲದ ಇಂಗ್ಲೀಷ್ ಮೇಷ್ಟ್ರು ..." ಇಂತಹ ಸಂಗತಿಗಳು ನಮ್ಮಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿರುತ್ತವೆ. ಓದು-ಬರೆಹಗಳನ್ನು ಚೆನ್ನಾಗಿಯೇ ಬಲ್ಲ ಇಂಥವರ ವಿದ್ಯಾರ್ಥಿಗಳು ಮತ್ತು ಕೈಕೆಳಗೆ ದುಡಿಯುವ ನೌಕರರು ತಮ್ಮ ಹಣೆಬರೆಹವನ್ನು ಶಪಿಸಿಕೊಂಡು ಆಯುಷ್ಯವನ್ನು ಮುಗಿಸಿಬಿಡುತ್ತಾರೆ.

ಮತ್ತೆ 'ಅದೇ' ಪರಂಪರೆ ಬೆಳೆದು ನಿಲ್ಲುತ್ತದೆ.
*

ನನಗೆ ಎಷ್ಟೋ ಬಾರಿ ಅನಿಸಿವುದು : 'ಆಡಳಿತಾತ್ಮಕ ವಿಭಾಗದ ಉನ್ನತ ಹುದ್ದೆಯಲ್ಲಿರುವವರಿಗೆ ಓದು-ಬರೆಹ ಬೇಕಿಲ್ಲ. ವ್ಯಾವಹಾರಿಕ ಜ್ಞಾನ ಮತ್ತು ತಂತ್ರ ಇದ್ದರೆ ಸಾಕು (IQಗಿಂತ EQ). ಅವರಿಗೆ ತಂತ್ರಜ್ಞಾನದ ಬಳಕೆ ಗೊತ್ತಿರಲೇಬೇಕೆಂದೇನೂ ಇಲ್ಲ. ಆ ಕೆಲಸವನ್ನು ಅವರ ಅಧೀನದಲ್ಲಿರುವ ನೌಕರರು ಮಾಡುತ್ತಾರೆ. ಹಾಗಾಗಿ ಅಂಥವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಗತ್ಯವಾದರೂ ಏನು!' ಎಂದು.
*
ಕಾಗುಣಿತ ತಿಳಿಯದಿರುವವರನ್ನು ಆಯ್ಕೆ ಮಾಡುವ ಮೌಲ್ಯಮಾಪಕನಿಗೂ ಕಾಗುಣಿತ ತಿಳಿದಿರುವುದಿಲ್ಲ. ಎಲ್ಲೋ ಸಂಭವಿಸಿದ ಭ್ರಷ್ಟತೆ ಇಡೀ ವ್ಯವಸ್ಥೆಯನ್ನೇ ಹೇಗೆ ಬುಡಮೇಲು ಮಾಡುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇದು.
*
ಏಳು ಪದವಿಗಳನ್ನು ಪಡೆದಿರುವ ಬಳ್ಳಾರಿಯ ವ್ಯಕ್ತಿಯೊಬ್ಬರು (ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸುತ್ತಿರುವ) ಬರೆದ 'ನನಗೊಂದು ನೌಕರಿ ಒದಗಿಸಿ' ಎಂಬ ಪತ್ರವನ್ನು ನೋಡಿ ಇವೆಲ್ಲಾ ಮನಸ್ಸಿನಲ್ಲಿ ಬಂದುಹೋದವು. ನಮಗೆ ನಾವೇ ಶಿಕ್ಷೆ ವಿಧಿಸಿಕೊಳ್ಳಬೇಕಾದ ಕಾಲದಲ್ಲಿ ಇಂತಹ ಶಿಕ್ಷೆಗಳು ನಮಗೆ ಪ್ರಾಪ್ತಿಯಾಗುತ್ತಲೇ ಇರುತ್ತವೆ!
*

-ಕಾಜೂರು ಸತೀಶ್

No comments:

Post a Comment