ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, June 7, 2020

ಕೌತುಕವಾಗುಳಿಯುವ ಭಾರದ್ವಾಜರ 'ಕೌತುಕವಲ್ಲದ ಕ್ಷಣಗಳು' ಕೃತಿಯ ಒಂದು ಸುತ್ತು..


ತಮ್ಮ ಪಾಡಿಗೆ ತಾವು ಬರೆಯುತ್ತಾ ಹಾರ- ತುರಾಯಿ, ವೇದಿಕೆ,ಗೋಷ್ಠಿಗಳಿಂದ ಬಹುದೂರ ಉಳಿದವರು ಭಾರದ್ವಾಜ ಕೆ ಆನಂದತೀರ್ಥರು. ನಮ್ಮ ನಡುವೆ ಇದ್ದರೂ ಇವರ ಕೃತಿಗಳನ್ನು ಇಷ್ಟು ಕಾಲ ಓದಿರಲಿಲ್ಲ. 'ಕಳೆದುಕೊಂಡವರು' ಕಾದಂಬರಿಯನ್ನು ಓದಿದ ಮೇಲೆ ಇಂತಹ ಸೂಕ್ಷ್ಮ ಸಂವೇದನೆಯ ವ್ಯಕ್ತಿಯೊಬ್ಬರು ನಮ್ಮ ನಡುವೆ ಕಳೆದುಹೋಗಿರುವ ಕುರಿತು ಮರುಕ ಹುಟ್ಟಿತು. 

ಸಾಹಿತ್ಯದ ವಿವಿಧ ಮಾದರಿಗಳನ್ನು ಸ್ಪರ್ಶಿಸಿರುವ ಭಾರದ್ವಾಜರ 'ಕೌತುಕವಲ್ಲದ ಕ್ಷಣಗಳು' ಕೃತಿಯನ್ನು ಇಂದು ಓದಿದೆ(ಲಲಿತ ಪ್ರಬಂಧ).


ಇವರ ಕೃತಿಗಳ ವೈಶಿಷ್ಟ್ಯವೆಂದರೆ ಅಲ್ಲಿ ಮುನ್ನುಡಿ-ಬೆನ್ನುಡಿಗಳ ಭಾರವಿಲ್ಲ. 'ನನ್ನ ಮಿತಿ ನನಗೆ ತಿಳಿದಿದೆ; ತಿಳಿದಷ್ಟು ಬರೆಯುತ್ತೇನೆ' ಎಂದುಕೊಂಡು ಬರೆಯುವ ಇವರಿಗೆ ಮುನ್ನುಡಿ-ಬೆನ್ನುಡಿಗಳ ಅಗತ್ಯವೂ ಇಲ್ಲ.
*

'ಕೌತುಕವಲ್ಲದ ಕ್ಷಣಗಳು' ಕೃತಿಯ ಕುರಿತು 'ಇದು ಲಲಿತ ಪ್ರಬಂಧಗಳ ಸಂಗ್ರಹವೋ ಅಥವಾ ಸಣ್ಣಕತೆಗಳ ಸಂಕಲನವೋ ಅಥವಾ ಮೇಲಿನ ಯಾವ ಲಕ್ಷಣವೂ ಇಲ್ಲದ ಅವಲಕ್ಷಣವೋ ಅನ್ನುವುದು ನನಗೆ ಸ್ಪಷ್ಟವಾಗಬೇಕಾದರೆ ಈ ಪುಸ್ತಕವನ್ನು ನೀವು ಓದಿ ಪ್ರತಿಕ್ರಿಯೆ ನೀಡಬೇಕು' ಎಂದಿದ್ದಾರೆ. ತಮ್ಮ ಮಿತಿಯನ್ನು ಕಂಡುಕೊಳ್ಳುವ ಬಗೆ ಅದು. ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣ ಈ ಕೃತಿ. ಸಣ್ಣಕತೆ , ಲಲಿತ ಪ್ರಬಂಧ , ವೈಚಾರಿಕ ಲೇಖನ - ಈ ಮೂರು ಪ್ರಕಾರಗಳೂ ಇದರಲ್ಲಿ ಬೆರೆತಿವೆ. ಓದುಗ ಎದುರಿಸಬಹುದಾದ ಏಕತಾನತೆಯನ್ನು ಈ fusion ನಿವಾರಿಸಿಬಿಡುತ್ತದೆ.

ಲಲಿತ ಪ್ರಬಂಧಗಳು ಒಂದು ಕೇಂದ್ರದ ಸುತ್ತ ಗಿರಕಿ ಹೊಡೆಯುತ್ತಾ ಅದನ್ನು  ಎತ್ತೆತ್ತಲೋ ಹಿಗ್ಗಿಸಿ ಕೇಂದ್ರಕ್ಕೆ ಮತ್ತೆ  ಬಂದು ಕುಳಿತುಬಿಡುವ ಪ್ರಕಾರ. ಭಾರದ್ವಾಜರ 'ಕಾಡು ಬೆಳೆಸಿದ ಪರಿ' ಇಲ್ಲಿರುವ ಉಳಿದೆಲ್ಲವುಗಳಿಗಿಂತ ರಾಚನಿಕ ದೃಷ್ಟಿಯಿಂದ ಲಲಿತ ಪ್ರಬಂಧವನ್ನು ಹೋಲುತ್ತದೆ. 

ಹಾಸ್ಯ/ವಿಡಂಬನೆ(satire)ಯಂತಹ ಗಂಭೀರ ಅಭಿವ್ಯಕ್ತಿ ಮತ್ತೊಂದಿಲ್ಲ. ಅದಕ್ಕೆ ಅಷ್ಟು ಮೊನಚು ಮತ್ತು ಪ್ರಖರತೆ. ಪಡ್ಡೆಹುಡುಗರನ್ನು ಸಂತೃಪ್ತಿಗೊಳಿಸುವ ಹಾಸ್ಯ silly ಆಗಿ ಒಂದಷ್ಟು ನಗಿಸಿ ಸತ್ತುಬಿಡುತ್ತದೆ. ಆದರೆ ಭಾರದ್ವಾಜರ ಈ ಕೃತಿಯಲ್ಲಿ ಎದುರಾಗುವ ಹಾಸ್ಯ ಪ್ರಸಂಗಗಳು ಗ್ರಾಮೀಣ ಬದುಕಿನಲ್ಲಿ ಘಟಿಸಿದ್ದು, ಘಟಿಸುವಂಥದ್ದು. ಅದರ ಒಳಗೆ ಗಹನವಾದ ಚಿಂತನೆ ತಾತ್ತ್ವಿಕತೆಗಳಿವೆ.

ಗ್ರಾಮಸಭೆ ತೆರೆದು ತೋರಿಸುವ ಗುಂಪುಗಾರಿಕೆ, ಭ್ರಷ್ಟಾಚಾರ ; ಚುನಾವಣೆಯು ಸೃಷ್ಟಿಸುವ ಸಾಮಾಜಿಕ, ಆರ್ಥಿಕ , ಧಾರ್ಮಿಕ ಮತ್ತು ರಾಜಕೀಯ ಬದಲಾವಣೆಗಳು; ಚೀಟಿಕಟ್ಟಿ ಮೋಸಕ್ಕೊಳಗಾದವರ ವರ್ತನೆಗಳು; ಮನುಷ್ಯನ Identity Crisis; ಮೌಢ್ಯ, ವಾಸ್ತವ ಮತ್ತು ಕ್ರಾಂತಿ; ಕೃಷಿ ಮತ್ತು ಪರಿಸರ; ಜೀವನ ಪ್ರೀತಿ ಮತ್ತು ಹೋರಾಟದ ಬದುಕು; ಸ್ತ್ರೀ ಚಿತ್ರಣ- ಇಂತಹ ಸಾಮಾನ್ಯ ಸಂಗತಿಗಳನ್ನು ಗ್ರಾಮೀಣ ಬದುಕಿನ ಲಯದೊಂದಿಗೆ ಗ್ರಹಿಸಿ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ(ಮುದ್ರಣ ದೋಷಗಳಿವೆ ಅಲ್ಲಲ್ಲಿ).

ಇನ್ನೆರಡು ಕೃತಿಗಳು ನನ್ನ ಎದುರಿಗಿವೆ. ಓದುವಾಗಲೆಲ್ಲ ಈ ಮನುಷ್ಯ ಯಾಕೆ ಹೀಗೆ ಅಜ್ಞಾತವಾಗಿ ಉಳಿದುಬಿಟ್ಟರು ಎಂಬ ಸಂಗತಿ ಕಾಡುತ್ತಲೇ ಇದೆ. ಓದಿಸುತ್ತಿರುವ ಅವರಿಗೆ ಶರಣು.
*



ಕಾಜೂರು ಸತೀಶ್






No comments:

Post a Comment