ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 5, 2020

ಒಂದು ಚೇಳಿನ ರಾತ್ರಿ




ನನ್ನಮ್ಮನಿಗೆ ಚೇಳು ಕುಟುಕಿದ ರಾತ್ರಿ
ಇನ್ನೂ ನೆನಪಿದೆ ನನಗೆ
ಸತತ ಹತ್ತು ಗಂಟೆಗಳ ಬಿರುಮಳೆಗೆ
ಒಳತೆವಳಿ ಆಶ್ರಯಿಸಿತ್ತದು ಅಕ್ಕಿಮೂಟೆಯ ಕೆಳಗೆ.

ಆ ಕತ್ತಲ ಕೋಣೆಯಲ್ಲಿ
ಬಾಲವನ್ನೆತ್ತಿ ಫಳಾರನೆ ಮಿಂಚಿಸಿ
ವಿಷವನ್ನಿಳಿಸಿ ಹಿಂತಿರುಗಿತು ಮತ್ತೆ ಮಳೆಗೆ.

ಓಡೋಡಿ ಬಂದು ಮುತ್ತಿದರು ರೈತರು -ಗಾಯದ ಮೇಲಿನ ನೊಣಗಳಂತೆ
ಪಠಿಸಿದರು ಮಂತ್ರಗಳ , ಪ್ರಾರ್ಥಿಸಿದರು ನೂರು ಬಾರಿ
'ದುಷ್ಟ ಶಕ್ತಿಗಳ ನಾಶಮಾಡೋ ದೇವಾ..'

ಮೊಂಬತ್ತಿಗಳ ಹಿಡಿದು ಲಾಟೀನುಗಳ ಹಿಡಿದು
ದೈತ್ಯ ಚೇಳಿನ ನೆರಳು ಚೆಲ್ಲಿದರು
ಸುಟ್ಟ ಮಣ್ಣ ಗೋಡೆಗಳ ಮೇಲೆ
ಇಂಚಿಂಚೂ ಹುಡುಕಿದರು ಸುಮ್ಮನೆ.

ಅವರೆಂದರು:
'ಅದು ಹೊರಳಿದಂತೆಲ್ಲ ಇವಳ ರಕ್ತದಲ್ಲಿ ವಿಷವೇರುತ್ತದೆ
ಅದು ಅಲುಗಾಡದಿರಲಿ..'
'ನಿನ್ನ ಕಳೆದ ಜನ್ಮದ ಪಾಪಗಳೆಲ್ಲ ಈ ರಾತ್ರಿ ಉರಿದುಹೋಗಲಿ..'
'ನಿನ್ನೀ ನೋವು ಮರುಜನ್ಮದ ದುಃಖಗಳ ಕಳೆಯಲಿ..'
'ಈ ಮಿಥ್ಯೆಯ ಜಗದಲ್ಲಿ
ಜಗದ ಅಷ್ಟೂ ಕೆಡುಕುಗಳು ಒಳಿತಿನೆದುರು ಕರಗಿ
ಸಮದೂಗಲಿ ನಿನ್ನ ನೋವಿನಿಂದ..'
'ನಿನ್ನ ರಕ್ತದಲ್ಲಿನ ವಿಷವು
ಶುದ್ಧಗೊಳಿಸಲಿ ನಿನ್ನ ಆಸೆ ಆಕಾಂಕ್ಷೆಗಳನ್ನು'

ಕುಳಿತರು ಅವರು ನನ್ನಮ್ಮನ ಸುತ್ತ
ಅವಳ ಅರ್ಥೈಸಿಕೊಂಡವರಂತೆ ಶಾಂತಚಿತ್ತದಿಂದ
ಮತ್ತಷ್ಟೂ ಮೊಂಬತ್ತಿಗಳು, ಮತ್ತಷ್ಟೂ ಲಾಟೀನುಗಳು
ನೆರೆಯವರು, ಕೀಟಗಳು
ಬಿಡದೆ ಸುರಿಯುವ ಮಳೆ
ಮತ್ತು
ನಡುವೆ ಚಾಪೆಯಲಿ ನರಳಿ ಒದ್ದಾಡುತ್ತಿರುವ ನನ್ನಮ್ಮ.

ನನ್ನಪ್ಪ ಬುದ್ಧಿಜೀವಿ, ಯಾವುದನ್ನೂ ಸುಲಭಕ್ಕೆ ಒಪ್ಪಿಕೊಳ್ಳದವ
ಹರಸಿ ಶಪಿಸಿ ಅವಳ ಕಿವಿಯಲ್ಲಿ ಉಸುರಿದ ತರ್ಕ ಸಿದ್ಧಾಂತಗಳ
ಹಚ್ಚಿದ ಬಗೆಬಗೆಯ ಪುಡಿ, ಮೂಲಿಕೆ, ಮಿಶ್ರಣಗಳ..
ನೋವು ನೀಗಲೇ ಇಲ್ಲ

ಚೇಳು ಕುಟುಕಿದ ಹೆಬ್ಬೆರಳಿಗೆ
ಪ್ಯಾರಾಫೀನ್ ಸುರಿದು ಕಡ್ಡಿ ಗೀರಿದ
ಅವಳ ಸಾರ ಹೀರಿ
ಬೆಂಕಿ ಧಗಧಗಿಸುವುದ ನೋಡಿದೆ
ನೋವ ನೀಗಿಸಲು
ಪಟಪಟ ಮಂತ್ರ ಪಠಿಸುತ್ತಿದ್ದವನ ನೋಡಿದೆ

ನೋವು ಇಳಿಯಿತು
ಇಪ್ಪತ್ತು ಗಂಟೆಗಳ ಅನಂತರ

ಅಮ್ಮ ಹೇಳಿದಳು
'ದೇವ್ರೇ.. ಸದ್ಯ, ಚೇಳು ನನ್ನ ಮಕ್ಕಳಿಗೆ ಕಚ್ಚಲಿಲ್ಲವಲ್ಲಾ..'
*


ಇಂಗ್ಲೀಷ್ ಮೂಲ- ನಿಸ್ಸೀಮ್ ಎಜೆ಼ಕಿಯಲ್ 



ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment