ಕೃಪೆ- ಬುಕ್ ಬ್ರಹ್ಮ
'ಲೋಕ ಸಂಕಟಕ್ಕೆ ಪರಿಹಾರ ಪ್ರಕೃತಿಯಲ್ಲಿಯೇ ಇದೆ. ಆ ಕಾರಣದಿಂದಲೇ ಪ್ರಕೃತಿಗೆ ಕಿವಿಗೊಡಬೇಕು. ಹಗಲು ರಾತ್ರಿ ಬದಲಾದಂತೆ ಕಾಡಿನ ನೆರಳು ಚಲಿಸುವಂತೆ ಮನುಷ್ಯ ಚಲಿಸಬೇಕಾಗಿದೆ. ಅಂತಹ ಸಂವೇದನೆ ಇಲ್ಲಿಯ ಕವಿತೆಯಲ್ಲಿ ಕಾಣಬಹುದು' ಎನ್ನುತ್ತಾರೆ ಕವಿ ಮಧು ಬಿರಾದಾರ ಅವರು ಕಾಜೂರು ಸತೀಶ ಅವರ ಕಣ್ಣಲ್ಲಿಳಿದ ಮಳೆಹನಿ ಸಂಕಲನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
‘ಕಣ್ಣಲ್ಲಿಳಿದ ಮಳೆಹನಿ’ ದಟ್ಟವಾದ ಕಾಡಿನ ಅನುಭವವನ್ನು ಕಟ್ಟಿಕೊಡುವ ಸಂಕಲನ. ಇಲ್ಲಿಯ ಪ್ರಾಣಿ, ಪಕ್ಷಿ ನಿಸರ್ಗ ಸಹಜವಾಗಿ ಬದುಕುತ್ತವೆ. ಬದುಕನ್ನು ಸಂಭ್ರಮಿಸುತ್ತವೆ. ಕವಿಯೂ ಕಾಡಿನ ಭಾಗವಾದಂತೆ ಕಾಣುವನು. ದಟ್ಟವಾದ ಕಾಡು ಕ್ರಮೇಣ ಮೃಗಾಲಯವಾಗುವುದರ ಕುರಿತು ಕವಿಗೆ ಆತಂಕವಿದೆ. ಇಲ್ಲಿಯ ಸಂವೇದನೆಯ ಸೂಕ್ಷ್ಮತೆಯನ್ನು ಗಮನಿಸಬೇಕು. ಕಾಡಿನ ಮರ್ಮರವನ್ನು ಗ್ರಹಿಸಿಕೊಂಡ ಮನಸ್ಸಿಗೆ ಕಾಡೇ ಇಲ್ಲವಾಗುವ ಸಂದರ್ಭ ಬಂದಾಗ ಆಗುವ ಆಘಾತ ಭಯಂಕರವಾದದ್ದು. ಇದು ಕಾಡಿನ ಕಥೆಯಾದರೆ ನಾಡಿನ ವ್ಯಥೆ ಇನ್ನೊಂದು ತರಹವಿದೆ. ಹಳ್ಳಿ ಕೇಂದ್ರಿತ ಜೀವನ ಕ್ರಮವೆಂದರೆ ಅದು ನಿಸರ್ಗ ಜನ್ಯ ಬದುಕಿನಂತೆ. ಭೂಮಿಯ ಮಡಿಲಲ್ಲಿ ಉಸಿರಾಡುವ ಇಲ್ಲಿಯ ಬದುಕು ಕ್ರಮೇಣ ಆಧುನಿಕ ನಗರ ಕೇಂದ್ರಿತ ವಾಸನೆಗೆ ಬಲಿಯಾಗಿ ನರಳುತ್ತದೆ. ವಿಘಟನೆಯ ಬೀಜ ಬಿದ್ದು ಹೆಮ್ಮರವಾಗುವುದರ ಬಗ್ಗೆ ಕವಿ ಕಳವಳ ವ್ಯಕ್ತಪಡಿಸುವನು. ಇಲ್ಲಿಯ ಕವಿತೆ ಲೋಕದ ನಗಾರಿ ನುಡಿಸಿದರೂ ಅದು ಲೋಕಕ್ಕೆ ಸಂಬಂಧಿಸಿದ ಪ್ರತಿಮೆಗಳ ಮೂಲಕವಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಕಾಡಿನ ಪ್ರತಿಮೆಗಳನ್ನು ಬಳಸುವ ಕವಿ ಮಿತ ಭಾಷಿಕನಂತೆ ಕಾಣುವನು. ಎಲ್ಲಿಯೂ ಅಬ್ಬರ ವಾಚಾಳಿತನದ ವ್ಯಸನ ಕಾಣಲಾರದು. ತಾನು ಬದುಕುತ್ತಿರುವ ಕಾಲಮಾನದ ಅಬ್ಬರದ ಪ್ರವಾಹದಿಂದ ದೂರವಿದ್ದು, ಭಿನ್ನವಾದ ದಾರಿಯಲ್ಲಿ ಕ್ರಮಿಸುತ್ತಿರುವ ಕವಿಯೊಬ್ಬನ ಕವಿತೆಯಂತಿವೆ.
ಪ್ರಕೃತಿಯೊಂದಿಗೆ ಸಂವಾದಿಸುವ ಕವಿತೆ ಈ ಲೋಕದ ವಿದ್ಯಮಾನವನ್ನು ಅರ್ಥಪೂರ್ಣವಾಗಿ ಮತ್ತು ಭಿನ್ನವಾಗಿ ತೆರೆದಿಟ್ಟಂತೆ ಇಲ್ಲಿಯ ಕವಿತೆಗಳು ನೇರವಾಗಿ ಸಮಾಜದೊಂದಿಗೆ ಅಥವಾ ಲೋಕದೊಂದಿಗೆ ಸಂವಾದಿಸುವುದಿಲ್ಲ. ಆ ಚಪಲವೂ ಇಲ್ಲ. ಲೋಕ ಸಂಕಟಗಳನ್ನು ಮೈಮೇಲೆ ಹೊತ್ತು ಕಿರುಚಾಡುವುದಿಲ್ಲ. ಕವಿತೆಯ ನಡಿಗೆ ಪ್ರಕೃತಿಯ ಚಲನೆಯಂತಿದೆ. ಇಲ್ಲಿಯ ತಿಳಿವಳಿಕೆ, ಗ್ರಹಿಕೆಗಳು ಪೂರ್ವ ನಿರ್ಧರಿತವಲ್ಲ. ಪ್ರಕೃತಿಯೊಂದಿಗೆ ಮುಗ್ಧ ಮಗುವಿನ ಕೌತುಕದ ಮಾತಿನಂತೆ ಎದೆ ಹಾಲು ಕುಡಿಯುವ ಮಗು ತಾಯಿಯೊಂದಿಗೆ ಮಾತಿಗಿಳಿದಂತಿದೆ. ಇದು ತಾಯಿ ಮಗುವಿನ ನಡುವಿನ ಸಂಭಾಷಣೆಯಾದರೂ ಅದು ಲೋಕಕ್ಕೆ ಸಂಬಂಧಿಸಿದ್ದೇ ಹೊರತು (ತಾಯಿ-ಮಗು) ಆ ಇಬ್ಬರಿಗೆ ಸಂಬಂಧಿಸಿದಂತೆ ಭಾವಿಸಬೇಕಿಲ್ಲ. ಕವಿತೆಯಲ್ಲಿ ಗಟ್ಟಿಯಾದ ತಾತ್ವಿಕತೆ ರೂಪಗೊಳ್ಳುವುದು ಎಂದರೆ ಬೀಜದೊಳಗಿನ ಮರದಂತೆ. ಕೆಸರಿನ ಒಡಲಿಂದ ಎದ್ದು ಬರುವುದಕ್ಕೂ ಮೈಗೆ ಕೆಸರು ಲೇಪಿಸಿಕೊಂಡಿರುವುದಕ್ಕೂ ವ್ಯತ್ಯಾಸವಿದೆ. ಮೈಗೆ ಅಂಟಿಸಿಕೊಂಡಿರುವ ಕೆಸರಿನ ಪಸೆ ಆರಿದಂತೆ ಉದುರಿ ಬೀಳುತ್ತದೆ. ಕೆಸರಿನ ಒಡಲಿಂದ ಜೀವ ಪಡೆದ ಮೊಳಕೆಗೆ ಕೆಸರೇ ಜೀವ ದ್ರವ್ಯವಾಗಿರುತ್ತದೆ.
ಪ್ರಸ್ತುತ ಸಮಾಜ ವಿಘಟನೆ ಮತ್ತು ಕಲುಷಿತಗೊಳ್ಳುತ್ತಿರುವ ಕಾಲದಲ್ಲಿ ಪ್ರಕೃತಿಯೊಂದಿಗೆ ಸಂವಾದಿಸುವುದೆಂದರೆ ಅಂತರಂಗದೊಂದಿಗೆ ಮಾತಿಗಿಳಿದಂತೆ. ಲೋಕ ಸಂಕಟಕ್ಕೆ ಪರಿಹಾರ ಪ್ರಕೃತಿಯಲ್ಲಿಯೇ ಇದೆ. ಆ ಕಾರಣದಿಂದಲೇ ಪ್ರಕೃತಿಗೆ ಕಿವಿಗೊಡಬೇಕು. ಹಗಲು ರಾತ್ರಿ ಬದಲಾದಂತೆ ಕಾಡಿನ ನೆರಳು ಚಲಿಸುವಂತೆ ಮನುಷ್ಯ ಚಲಿಸಬೇಕಾಗಿದೆ. ಅಂತಹ ಸಂವೇದನೆ ಇಲ್ಲಿಯ ಕವಿತೆಯಲ್ಲಿ ಕಾಣಬಹುದು.
ನಾಗರಿಕತೆಯ ಇತಿಹಾಸ, ನಾಗರಿಕ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಒಂದು ಕಾಲಮಾನದ ಒಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವಂತಾಗಬಾರದು. ಮನುಷ್ಯನ ಕಥೆ ಅಥವಾ ಚರಿತ್ರೆಯೆಂದರೆ ಅದು ನೆನಪು ತಾನೆ? ಅಕ್ಷರ ಮನುಷ್ಯ ಜನ್ಮದ ಕೋಶ. (ನೆನಪಿನಕೋಶ, ಜ್ಞಾಪಕ ಕೋಶ) ಲಕ್ಷಾಂತರ ವರ್ಷಗಳ ಹಿಂದೆ ಸಂವಹನದ ಭಾಷೆಯಂತೆ ಲಿಪಿಯು ಮುಖ್ಯವಾಯಿತು. ಅಕ್ಷರಗಳ ಮೂಲಕ ಮನುಷ್ಯ ತನ್ನ ಭಾವ ಕೋಶಗಳನ್ನು ಕುತೂಹಲ, ಅಚ್ಚರಿ, ವಿಸ್ಮಯಗೊಳಿಸುವ ಸಂಗತಿಗಳನ್ನು ದಾಖಲಿಸುತ್ತ ಬಂದ. ಒಂದು ವೇಳೆ ಹಾಗೆ ಆಗದೆ ಹೋಗಿದ್ದರೆ? ಇವತ್ತಿನ ನಾವುಗಳು ಹೀಗೆ ಇರಲು ಸಾಧ್ಯವಿತ್ತೆ? ‘ಎಲ್ಲಿ’? ಕವಿತೆಯ ತಾತ್ಪರ್ಯವಿದು. ‘ಎಲ್ಲಿ’ ಅರ್ಥವಾದರೆ ಆದಿಮ ಜಗತ್ತು ಮತ್ತು ಸಮಕಾಲೀನ ಜಗತ್ತಿನ ಸ್ಥಾನ ಸ್ಪಷ್ಟವಾಗುತ್ತದೆ.
ಇಲ್ಲಿಯ ಪ್ರತಿಮೆಗಳು ಆದಿಮಾನವನ ಕಾಡಿನಿಂದ ಕಾಂಕ್ರೀಟ್ ಕಾಡಿನ ಜೆಸಿಬಿವರೆಗೆ ಹಾದುಬರುತ್ತವೆ. ಪ್ರಕೃತಿಯ ಚಲನೆಗೆ ಅನುಗುಣವಾಗಿ ನಾಗರಿಕತೆ ಬೆಳೆಯುತ ಬಂದಿದೆ. ಆದರೆ ಅದರೊಳಗೆ ಸೇರಿರುವ ಮೃಗತ್ವ ಅಥವಾ ರಾಕ್ಷಸಿತನ ಒಟ್ಟು ಚಲನೆಯ ದಿಕ್ಕನ್ನೇ ಬದಲಿಸುತ್ತಿದೆ. ಅದು ಮುಟ್ಟುವ ಗಮ್ಯದಿಂದ ಆಗುವ ಅನಾಹುತ ಪ್ರಾಯಶಃ ಯಾರಿಗೂ ಅರಿವಿಗೆ ಬಾರದಿಲ್ಲ. ವಿಚಿತ್ರವೆಂದರೆ ನೆರಳ ಮೋಹ ಪ್ರೇತವಾಗಿ ಕಾಡಿದಂತಿದೆ. ಬಿಡಿಸಿದಷ್ಟು ಗುಂಜಾಗುವುದನ್ನು ಕವಿತೆ ಸರಳವಾಗಿ ಮನವರಿಕೆ ಮಾಡಿಸುತ್ತದೆ.
“ಒಂದೊಮ್ಮೆ ನನಗೆ ತುಂಬು ಮರೆವಿರುವುದಾದರೆ
ಮರಗಳು ಮತ್ತು ಮನೆಗಳು
ಹೀಗೆ ಹೇಳಿಕೊಳ್ಳಲು ಎಲ್ಲಿರುತ್ತಿದ್ದವು ಈ ಕಾಳರಾತ್ರಿಯಲ್ಲಿ”?(ಪು15)
ಕಾಡಿನ ಮಧ್ಯ ಅಲೆಮಾರಿ ಬೇಟೆಗಾರನಾಗಿದ್ದ ಮನುಷ್ಯ, ಆಧುನಿಕತೆಗೆ ತೆರೆದುಕೊಂಡಂತೆ ವಿನಾಶದ ದಾರಿಯನ್ನೇ ತುಳಿದ. ಆಧುನಿಕತೆ ಎಲ್ಲ ಕಾಲಕ್ಕೂ ಸಂಭ್ರಮದಿಂದಲೇ ಸ್ವಾಗತಿಸಲಾಯಿತು. ಆದರೆ ಅದರ ಒಡಲೊಳಗೆ ವಿಘಟನೆಯ ಬೀಜ ಬಿದ್ದು ಮೊಳಕೆ ಒಡೆದು ಮರವಾಗುವ ಪ್ರಕ್ರಿಯೆ ಸದ್ದಿಲ್ಲದ ನಡೆಯುತ್ತಿತ್ತು. ಈ ಪ್ರಕ್ರಿಯೆ ಬಹುತೇಕ ಇವತ್ತು ‘ವಸುದಾವಲಯ’ ಆವರಿಸಿಕೊಂಡಿದೆ. ಒಂದು ಕಾಲದಲ್ಲಿ ಬದುಕಿಗೆ ಬೆಳಕಾಗಿದ್ದು ಕಾಲಾಂತರದಲ್ಲಿ ಕಗ್ಗತ್ತಲೆಯಾಗಿದ್ದು ಇತಿಹಾಸದ ಪುಟದಿಂದ ತಿಳಿದು ಬರುತ್ತದೆ. ವಿಚಿತ್ರವೆಂದರೆ ಅಕ್ಷರವು ಮನುಷ್ಯನ ಬಾಳಿನ ಬೆಳಕೆಂದು ಭಾವಿಸಲಾಯಿತು. ಇದನ್ನು ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳು ಕವಿಗಳು ಸಾರಿ ಸಾರಿ ಹೇಳಿದ್ದಾರೆ. ದಂಡಿ- ಅಕ್ಷರವೆಂಬ ಬೆಳಕು ಇರದಿದ್ದರೆ ಜಗತ್ತು ಕತ್ತಲೆಯಿಂದ ಕೂಡಿರುತ್ತಿತ್ತೆಂದು ಸಾವಿರ ವರ್ಷಗಳ ಹಿಂದೆ ಹೇಳಿದ್ದಾನೆ. ಎರಡು ಸಾವಿರ ವರ್ಷಗಳ ಹಿಂದೆ ಚೀನಿ ತತ್ವಜ್ಞಾನಿ ಲಾವ್ ತ್ಸು ರಾಜ, ಪ್ರಜೆ, ರಾಜ್ಯ, ಮತ್ತು ಸೇವಕ ಈ ಎಲ್ಲ ದಾರಿಯೂ ವಿಘಟನೆಯದ್ದೇಯಾಗಿದೆ ಎನ್ನುವನು. ರಾಜನಾದವನು ಋಷಿಯಾಗಿರಬೇಕು. ಋಷಿಯಾದವನು ರಾಜನಾಗಬೇಕೆನ್ನುವನು. ‘ಎಲ್ಲಿ’, ಮರ ಯಾರದು? ಈ ಕವಿತೆಗಳು ಈ ತರಹದ ತಾತ್ವಿಕತೆಯನ್ನು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹಾಗಿದ್ದರೆ ಮನುಷ್ಯನಿಗೆ ಘಾಸಿಗೊಳಿಸುತ್ತಿರುವುದು ಯಾವುದು? ಅಕ್ಷರ ಪಥ ಬದಲಿಸಿದೆಯೆ? ಅಲ್ಲಮ ಇದನ್ನೇ ಹೇಳಲಿಲ್ಲವೆ? ಒಂದು ಕಾಲದ ಬರಹ ದೈವವಾಗಿತ್ತು. ಇವತ್ತು? ಕುತೂಹಲದಿಂದ ಕಣ್ಣರಳಿಸಿ ಜಗತ್ತಿನ ವಿಸ್ಮಯವನ್ನು ಅರಿಯುವ ಪ್ರಯತ್ನ ಮಾಡಬೇಕಾದ ಅದೆಷ್ಟೋ ಮೊದಲ ತಲೆಮಾರಿನ ಜನಾಂಗ ಘಾಸಿಗೊಂಡಂತ್ತಿದೆ. ಘಾಸಿಗೊಳ್ಳುವುದೆಂದರೆ ಮುಗ್ಧ ಲೋಕವನ್ನು ಹಾಳುಗೆಡುವುದು. ಭೀತಿ ತಲ್ಲಣವನ್ನು ಹುಟ್ಟು ಹಾಕುವುದು. ಇದು ನಿಜಕ್ಕೂ ಭಯಾನಕವಾದದ್ದು. ‘ಎಲ್ಲಿ’, ‘ಮರ ಯಾರದು’? ಎತ್ತುವ ತಾತ್ವಿಕ ಪ್ರಶ್ನೆ ಕೂಡ ಪ್ರಜ್ಞಾವಂತ ಜಗತ್ತಿನಿಂದ ಪ್ರಜ್ಞಾಪೂರ್ವಕವಾಗಿ ಎತ್ತಿದ ಪ್ರಶ್ನೆಯಂತಲ್ಲ. ಪ್ರಕೃತಿಯ ಭಾಗವಾದವನ್ನೊಬ್ಬ ಅದರಿಂದ ಬೇರ್ಪಟ್ಟ ಸಂಕಟದಂತಿದೆ. ತಾಯಿಯನ್ನು ಅಗಲಿದ ಕರುವಿನಂತೆ.
‘ತಳದಲ್ಲಿ ಕುಳಿತು
ಗೆಲ್ಲುಗಳಲಿ ಕುಳಿತು
ಓದದೆ ಇದ್ದಿದ್ದರೆ
ಕವಿತೆ ಬರೆಯದೆ ಇದ್ದಿದ್ದರೆ
ತಂಗಾಳಿಯಲಿ ಮುಳುಗೇಳದೆ ಇದ್ದಿದ್ದರೆ
ನನ್ನದೇ ಆಗಿರುತ್ತಿತ್ತು ಈ ಮರ
ನನ್ನದೇ ಮರ’ (ಪು-17)
ಇಲ್ಲಿಯ ಕವಿತೆಗಳ ಉದ್ದಕ್ಕೂ ಮನುಷ್ಯನ ಪ್ರವೇಶವೇ ಆದಂತೆ ಅನಿಸುವುದಿಲ್ಲ. ಪ್ರಕೃತಿಯ ಕೇಂದ್ರ ಚಲನೆಯೇ ಪಿಸುಗುಟ್ಟಿದಂತೇನಿಸುತ್ತದೆ. ಇದು ಉತ್ಪ್ರೇಕ್ಷಿತವೆನಿಸಿದರೂ ನಿಜ. ಕವಿ ಪ್ರಕೃತಿಯ ಚಲನೆಯ ಭಾಗವಾಗಿದ್ದಾನೆಯೇ? ಅಥವಾ ಕಾಲದ ಚಲನೆಯ ಭಾಗವಾಗಿದ್ದಾನಾ? ಎರಡೂ ಒಂದೇಯೆ? ಅಥವಾ ಎರಡೂ ಬೇರೆ ಬೇರೆ? ಯಾವುದು ಸರಳವಾಗಿಲ್ಲ. ಕವಿತೆಯ ಒಳಗೆ ಇಳಿದಂತೆ ಕಾಡು ಹೊಕ್ಕಂತೆ ಭಾಸವಾಗುತ್ತದೆ. ನಿತ್ಯ ವಿದ್ಯಮಾನದ ಭಾಷಿಕ ಕಿರುಚಾಟವೆಲ್ಲ ಪ್ರೇತದ ಎದುರು ನಿವಾಳಿಸಿದಂತೆ ಇಲ್ಲಿ ಎಲ್ಲವೂ ಸ್ತಬ್ಧ. ಹಾಗೆಂದ್ದರೇ ಗಾಳಿ, ಬೆಳಕು, ಎಲೆ ಬಳ್ಳಿಗಳ ಬಳುಕಾಟ, ಮನುಷ್ಯನ ರಕ್ತದ ಪರಿಚಲನೆ ನಿತ್ತಂತಲ್ಲ. ‘ನಿಶಬ್ದ ನಿಶಬ್ದ ಶಬ್ದದಾಚೆಯ ಶಬ್ದ/ ನಿಶಬ್ದವಿದ್ದರೂ ಮೌನವಲ್ಲ/ ನಿಸ್ಸೀಮ ್ನಿಟೇಸ್ಸೀಮ ಸೀಮದಲೆ ನಿಸ್ಸೀಮ/ ನಿಸ್ಸೀಮವೆಂದರೂ ಶೂನ್ಯವಲ್ಲ’(ನನ್ನನಲ್ಲ ಪುಟ-13) ಮಧುರ ಚೆನ್ನರ ಸಾಲು ಇನ್ನಷ್ಟು ಅದನ್ನು ಸ್ಪಷ್ಟಪಡಿಸುತ್ತದೆಂದು ಭಾವಿಸುವೆ.
ಕವಿಗೆ ಪ್ರಕೃತಿಯ ಬಗ್ಗೆ ಅದಮ್ಯವಾದ ಹಂಬಲವಿದೆ. ಅಳಿಯುತ್ತಿರುವ ಕಾಡಿನ ಬಗೆಗೆ ಬೇಸರವಿದೆ. ಇಲ್ಲಿಯ ಶಕ್ತಿ ಎಂದರೆ ದಟ್ಟವಾದ ಕಾಡು. ಮತ್ತು ಜುಳು ಜುಳು ಹರಿಯುವ ನೀರಿನಂತೆ, ಹಕ್ಕಿಗಳ ಕಲರವದಂತೆ ಕಾಡಿನ ಹಸಿರಂತೆ ಕವಿಯ ಒಳಗೆ ಗಟ್ಟಿಯಾದ ಸಕಾರಾತ್ಮಕ ಮನೋಭಾವವಿದೆ. ಕಣ್ಣೆದುರಿನ ವಿನಾಶಕ್ಕೆ ವಿಚಲಿತನಾದರೂ ಅದಕ್ಕಿಂತಲೂ ವೇಗವಾಗಿ, ತೀವ್ರವಾಗಿ ಭರವಸೆಯ ಬೀಜ ಬಿತ್ತುವ ಬಯಕೆ ಇಲ್ಲಿಯ ಕವಿಗೆ. ‘ಎಷ್ಟೊಂದು ಹಕ್ಕಿಗಳಿವೆ ಇಲ್ಲಿ ಒಂದಾದರೂ ಬರಬಾರದೆ’?(ಪುಟ-22) ಎನ್ನುವ ಕವಿ.
‘ಒಂದು ಮರಕುಟಿಗವಾದರೂ ಬಂದು ಕುಟುಕುಟು ಕುಟುಕಿ
ಮೊಬೈಲಿನಲ್ಲೊಂದು ತೂತುಮಾಡಿ ನುಗ್ಗಿ
ಜೋರಾಗಿ ಹಾಡಿ’
ವಿನಾಶ ಮತ್ತು ವಿದ್ರೋಹತನದ ಒಡದೊಳಗೆ ಪ್ರಚಂಡ ಇಚ್ಛಾಶಕ್ತಿ ಇರುವುದಕ್ಕೆ ಈ ಕವಿತೆ ಸಾಕ್ಷಿ. ಕವಿಯ ಬಯಕೆ, ಕನವರಿಕೆ ಎಲ್ಲವೂ ಆದಿಮ ಜಗತ್ತಿನದು. ಆದಿಮವೆಂದರೆ ಕಲುಷಿತಗೊಳ್ಳದ ಮುಗ್ಧ ಜಗತ್ತು. ಅಲ್ಲಿ ಮನುಷ್ಯನಷ್ಟೋ ಬಾಳುವ ಹಕ್ಕು ಎಲ್ಲ ಜೀವಿಗಳಿಗೆ ಇದೆ. ಆ ಎಲ್ಲದರೊಂದಿಗೆ ಮನುಷ್ಯ ಸಹಜೀವಿಯಾಗಿ ಬದುಕುವುದು ಹಾಗೂ ಮುಖ್ಯವಾಗಿ ಮನುಷ್ಯ ಮನುಷ್ಯರ ನಡುವೆ ಮತ್ಸರ, ವಂಚನೆ, ಕಾಳಗ ಮತ್ತು ಅಧಿಕಾರ ಈ ಯಾವುದು ಇಲ್ಲದ ಕಾಲದ ಬದುಕು. ಅದು ಆದಿಮವೆನ್ನಬಹುದೇನೋ. ಇಡೀ ಮನುಕುಲವೇ ಯಂತ್ರ ಮತ್ತು ಯಾಂತ್ರಿಕವಾಗಿರುವಾಗಲೂ ಕವಿ ವಿಚಲಿತನಾಗದೆ; ಒಂದು ಹಕ್ಕಿ ಮೊಬೈಲ್ ಕುಕ್ಕಿ, ಮೊಬೈಲಿನ ರಿಂಗ್ಟೋನಾಗಿ, ಡಿಪಿಯಾಗಿ ಹಾರಿ ಹೋಗುವಾಗ ಬಿದ್ದ ಹಿಕ್ಕಿಯಲ್ಲೊಂದು ಬೀಜ ಬಿದ್ದು ಅದರಿಂದ ಮರ ಹುಟ್ಟಿ ಆ ಮರದಿಂದ ಕಾಡಾಗಿ, ಇಡೀ ಯಂತ್ರ ಜಗತ್ತು ಪುಡಿಪುಡಿಯಾಗಿ ಮನುಷ್ಯನ ಎದೆಯಲ್ಲಿ ಹಕ್ಕಿ ಹಾಡುವುದ್ದನ್ನು ನೋಡುವ ಮತ್ತು ಮತ್ತೇ ಮನುಷ್ಯ ಬದುಕಿನ ಸಹಜತೆಗೆ ಮರಳುವುದನ್ನು ನೋಡುವ ಬಯಕೆ ಇಲ್ಲಿಯ ಕವಿತೆಯಲ್ಲಿ ಎದ್ದು ಕಾಣುತ್ತದೆ.
ಕಾಡು ಮತ್ತು ನಾಡಿನಲ್ಲಾದ ಪಲ್ಲಟದಿಂದಾಗಿ ಏನೆಲ್ಲ ಸಂಭವಿಸುತ್ತಿದೆ ಎನ್ನುವುದನ್ನು ನಾವು ಇವತ್ತು ನೋಡುತ್ತಿದ್ದೇವೆ. ನಗರ ಕೇಂದ್ರಿತ ಪ್ರದೇಶದ ಮಳೆಗಾಲದ ಸ್ಥಿತಿ. ಕಾಡು ಅಳಿದು ಉಳ್ಳವರ ಆಸ್ತಿಯಾದಾಗ ಸಂಭವಿಸಿದ ಪ್ರಾಕೃತಿಕ ವಿಕೋಪ ಒಂದೆಡೆಯಾದರೆ, ಕಾಡ ಪ್ರಾಣಿಗಳ ದಾಳಿ ಇನ್ನೊಂದು ಬಗೆಯದು. ಈ ಎಲ್ಲ ಅಂಶಗಳನ್ನು ಸೂಚಿಸುವ ಅತ್ಯಂತ ಸರಳ ಮತ್ತು ಅರ್ಥಪೂರ್ಣ ಸಾಲು ‘ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ’ ಮತ್ತು ‘ಕಾಡು ಗವಿತೆ’ ಈ ಎರಡು ಕವಿತೆಗಳು.
‘ಈ ಕಾಡು ಹಾದಿಯಲ್ಲಿ
ಇರುವೆಗಳೆರಡು ಮಾತನಾಡಿಕೊಂಡಂತೆ ಕವಿತೆ’ ಎಂದುಕೊಂಡೆ
‘ಈಗೀಗ ಕಾಡು ಕಡಿದಿದ್ದಾರೆ ಜನ
ಹಾದಿಯಲ್ಲಿ ಆನೆಗಳಿವೆ’ (ಕಾಡುಗವಿತೆ-ಪು-18)
ಈ ಕವಿತೆ ಕಾಡಿನ ವಿನಾಶದ ಬಗ್ಗೆ ಮಾತನಾಡಿದಂತೆ ಇಲ್ಲಿಯ ಹಲವು ಕವಿತೆಗಳು ಈ ಬಗೆಯಲ್ಲಿ ಪಿಸುಗುಡುವವು. ಕುತೂಹಲವೆನೆಂದರೆ ಇಲ್ಲಿಯ ಭಾಷೆ, ತಂತ್ರ, ಪ್ರತಿಮೆ, ರೂಪ ಹೊಸದನ್ನು ದರ್ಶಿಸುವಂತಿದೆ. ಇನ್ನೊಂದು ವಿಷಯವೇನೆಂದರೆ ಕವಿತೆ ಆಧುನಿಕ ನಗರ ಕೇಂದ್ರಿತ ಜಗತ್ತಿನಲ್ಲಿ ನಿಂತು ಮಾತನಾಡುವುದಿಲ್ಲವೆನ್ನುವುದು. ಇಲ್ಲಿಯ ಕವಿತೆ ಮಣ್ಣಿಗೆ ತಾಗಿ ಉಸಿರಾಡುತ್ತದೆ. ಮಣ್ಣಿಗೆ ಬಿದ್ದ ಬೀಜ ಮರವಾಗುವ, ಬೆಳಕಾಗುವ, ಗಾಳಿ, ಮಳೆ, ನೆರಳ, ಆಶ್ರಯ, ಆಶ್ರಮ ಲೋಕದ ಚರಾಚರ ಜೀವಿಗಳೊಂದಿಗೆ ಸಮೃದ್ಧಿಯಾಗಿ ಬದುಕುವ ಕನಸು. ಈ ಕನಸು ಬಣ್ಣದ ಬಲೂನಲ್ಲ. ವಾಸ್ತವದ ಉಸಿರಾಟ. ಇಲ್ಲಿಯ ಕವಿತೆಯದು ಹದಮಿರದಂತೆ, ಹದವರಿತ ಬದುಕುವ ದಾರಿ. ಮನುಷ್ಯ ಕಾಡಿನ ನಂಟನ್ನು ಬಿಡಿಸಿಕೊಳ್ಳದಂತೆ ಹೆಣೆದುಕೊಂಡಿದೆ ಇಲ್ಲಿಯ ಬದುಕು.
ಈ ಸಂಕಲನದ ಕವಿತೆಗಳು ಸಮರ್ಥ ಪ್ರತಿಮೆಗಳ ಮೂಲಕ ಮೂಲ ಸತ್ಯದ ಕುರಿತು ಮಾತನಾಡಿದಂತೆ ಹೊಸ ಬಗೆಯ ಚಿತ್ರವನ್ನೇ ಕಟ್ಟಿಕೊಡುತ್ತದೆ. ಇಲ್ಲಿಯ ಕೇಂದ್ರ ಕಾಳಜಿ ಕಾಡು ಮತ್ತು ಮನುಷ್ಯ. ಮನುಷ್ಯನ ವಿನಾಶತನವನ್ನು ತಣ್ಣಗೆ ಚಿತ್ರಿಸುವ ಕವಿ ಮತ್ತು ‘ಕಾವ್ಯ ಮೀಮಾಂಸೆ’ಯ ಮೂಲಕ ಕಾವ್ಯ ತಳೆಯಬೇಕಾದ ನಿಲುವನ್ನು ಸ್ಪಷ್ಟಪಡಿಸುವನು. ಇಲ್ಲಿಯ ಬಹುತೇಕ ಪ್ರತಿಮೆಗಳು ಬೌದ್ಧಿಕ ಕಸರತ್ತಿನಾಚೆಯವು. ಸಹಜತೆ ಮತ್ತು ಸ್ಪಷ್ಟತೆಗೆ ಸಾಕ್ಷಿಯಂತೆ ‘ಬುಡ್ಡಿ ದೀಪದ ಬುಡ’ ಮುಖ್ಯವಾಗುತ್ತದೆ.
ಹಚ್ಚಿಟ್ಟರೆ ಬುಡ್ಡಿ ದೀಪ
ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು.
‘ಆಮೇಲೆ
ಬುಡ್ಡಿ ದೀಪದ ಬುಡದ ಕಪ್ಪುಗಂಬಳಿ
ಲಾಲಿ ಹಾಡುವುದು
ಸಾವನು ಲಾಲಿ ಹಾಡುವುದು
ಹಸಿದು ಸತ್ತವರಿಗೆಲ್ಲ ಹೀಗೇ
ಒಂದು ಹಣ್ಣು ಕಂಡಿರಬಹುದು
ಬೆಳಕ ಭ್ರಮೆಯಲ್ಲಿ’.(ಪು-50)
ಕಾಲ ಮತ್ತು ಸಾವು ಕವಿತೆಯ ಸ್ಥಾಯಿಭಾವವಾಗಿ ಗಮನ ಸೆಳೆದಂತೆ ಕತ್ತಲೆ ಹಾಗೂ ಬೆಳಕು ನಿಶ್ಶಬ್ದವಾಗಿ ದಿಗಂತದಾಚೆಯ ದಾರ್ಶನಿಕತೆಯ ಚಿತ್ರ ಮೂಡಿಸುತ್ತದೆ. ನಿಧಾನ ಮತ್ತು ಧ್ಯಾನ ಅರಿವಿನ ದಾರಿಯಾಗಿ ಕವಿತೆಗಳು ಎದೆಗಿಳಿಯುತ್ತವೆ. ಒಟ್ಟಾರೆ ಈ ಬ್ರಹ್ಮಾಂಡವೇ ಕಾಡು. ಮನುಷ್ಯನೂ ಎಲ್ಲ ಜೀವಿಗಳಂತೆ. ಹಾಗಾಗಿ ಇಲ್ಲಿ ಮನುಷ್ಯನಂತೆ ಇನ್ನುಳಿದ ಚರಾಚರವೆಲ್ಲವೂ ಮಾತನಾಡುತ್ತವೆ. ಆದರೆ ಎಲ್ಲಿಯೂ ತನ್ನ ಲಯವನ್ನು ತಪ್ಪಲಾರವು. ಲಯ ತಪ್ಪಿದ, ತಪ್ಪುತ್ತಿರುವ ಮನುಷ್ಯನಿಗೆ ಕಾಡೇ ಮರಳಿ ಲಯಕ್ಕೆ ತರುವಂತೆ ಇಲ್ಲಿ ಕವಿತೆಗಳಿವೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ‘ಕಣ್ಣಲ್ಲಿಳಿದ ಮಳೆಹನಿ’ ಪ್ರಕೃತಿಯ ಲಯವೆನ್ನಬಹುದೇನೋ.
*
✍️ ಡಾ. ಮಧು ಬಿರಾದಾರ
ಆಕರ ಗ್ರಂಥ: ಕಾಜೂರು ಸತೀಶ್- ಕಣ್ಣಲ್ಲಿಳಿದ ಮಳೆಹನಿ- ಸಂಗಾತ ಪುಸ್ತಕ ಗದಗ-2021
No comments:
Post a Comment