ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, April 12, 2024

ಪ್ರೊಫೆಸರ್



ನನ್ನ ನೆನಪಿದ್ಯಾ ನಿಂಗೆ?
ನಾನು ಪ್ರೊಫೆಸರ್ ಸೇಠ್
ನಿಂಗೆ ಭೂಗೋಳಶಾಸ್ತ್ರ ಕಲಿಸ್ತಿದ್ದೆ

ಹ್ಮ್..ಆರಾಮ
ಈಗ ನಿವೃತ್ತಿ ಜೀವನ
ಆದ್ರೂ ಗಟ್ಟಿಮುಟ್ಟಿಯಾಗಿದ್ದೇನೆ ನೋಡು

ಹೆಂಡ್ತಿ ತೀರ್ಕೊಂಡ್ಳು
ಕೆಲವು ವರ್ಷಗಳಾದ್ವು

ದೇವ್ರ ದಯದಿಂದ ಎಲ್ಲಾ ಮಕ್ಳು ಒಂದು ಹಂತಕ್ಕೆ ಬಂದಿದ್ದಾರೆ
ಒಬ್ಬ ಸೇಲ್ಸ್ ಮ್ಯಾನೇಜರ್
ಮತ್ತೊಬ್ಬ ಬ್ಯಾಂಕ್ ಮ್ಯಾನೇಜರ್
ಇಬ್ರಿಗೂ ಕಾರಿದೆ

ಮೂರ್ನೇಯವ್ನು ಪರವಾಯಿಲ್ಲ
ಆದ್ರೆ ಹೇಳುವಷ್ಟೇನೂ ಇಲ್ಲ ಬಿಡು
ಇರ್ತಾರಲ್ವಾ ಎಲ್ಲರ ಮನೇಲೂ ಒಬ್ಬೊಬ್ರು -ಕಪ್ಪುಚುಕ್ಕೆ ಥರ

ಸರಳ ಮತ್ತು ತರಳ ಇಬ್ರಿಗೂ ಮದ್ವೆಯಾಯ್ತು
ಇಬ್ರಿಗೂ ಒಳ್ಳೆ ಗಂಡಂದಿರೇ ಸಿಕ್ಕಿದ್ರು
ನೀನು ನಂಬಲ್ಲ,  ನಂಗೀಗ ಹನ್ನೊಂದು ಮೊಮ್ಮಕ್ಳು!
ನಿಂಗೆ? ಮೂರು?
ಬಿಡು, ಫ್ಯಾಮಿಲಿ ಪ್ಲ್ಯಾನಿಂಗ್ ಕಾಲ ಅಲ್ವಾ?
ಛೆ! ಛೆ! ನಾನೇನು ಅದರ ವಿರುದ್ಧ ಅಲ್ಲ ಬಿಡು
ಕಾಲಕ್ಕೆ ತಕ್ಕ ಕೋಲ ಹಾಕ್ಬೇಕಲ್ವಾ?
ಜಗತ್ತೇ ಬದಲಾಗ್ತಿದೆ, ನಾವೂ ಬೆಳೀತಿದ್ವಿ ನೋಡು
ಹಳೇ ಮೌಲ್ಯವೆಲ್ಲಾ ಹೋಯ್ತು
ಈಗೇನಿದ್ರೂ ಹೊಸ ರೀತಿನೀತಿಗಳು
ಕಣ್ಮುಚ್ಚಿ ತೆಗೆಯುವಷ್ಟ್ರಲ್ಲಿ ಎಲ್ಲಾ ಬದಲಾಗಿರ್ತದೆ

ವಯಸ್ತಾಯ್ತಲ್ವಾ
ಹಿಂದಿನ ಹಾಗೆ ಸುತ್ತಾಡ್ಲಿಕ್ಕೆ ಆಗ್ತಿಲ್ಲ

ಸ್ವಲ್ಪ ಮೈಕೈ ನೋವು ಬಿಟ್ರೆ ಬೇರೆ ಎಲ್ಲಾ ಓಕೆ
ಶುಗರ್ ಇಲ್ಲ ಬಿಪಿ ಇಲ್ಲ ಹಾರ್ಟ್ ಅಟ್ಯಾಕ್ ಆಗಿಲ್ಲ
ಇದೆಲ್ಲಾ ಯಾಕೆ ಅಂದ್ರೆ ಆಗ ನನಗಿದ್ದ ಶಿಸ್ತುಬದ್ಧ ಜೀವನ ಶೈಲಿ

ನೀನು ಹೇಗಿದ್ದೀಯ ?
ಚೆನ್ನಾಗಿದ್ದೀಯ? ತುಂಬಾ ಸಂತೋಷ
ಈ ವರ್ಷ ನಂಗೆ ಅರವತ್ತೊಂಬತ್ತು ತುಂಬುತ್ತೆ
ಸೆಂಚುರಿ ಹೊಡೀಬೇಕು ಅಂದ್ಕೊಂಡಿದ್ದೀನಿ

ನೀನು ಆಗ ಕಡ್ಡಿ ಥರ ಒಣಗಿಹೋಗಿದ್ದೆ
ಈಗ ಊದ್ಬಿಟ್ಟಿದ್ದೀಯಲ್ವಪ್ಪ!
ಏಯ್.. ಸುಮ್ನೆ ತಮಾಷೆ ಮಾಡ್ದೆ ಆಯ್ತಾ

ಇನ್ನು ಈ ದಾರೀಲಿ ಬರುವಾಗ
ನಮ್ಮ ಮನೆಗೆ ಬರ್ಬೇಕು
ಆ ಮನೆ ಕಾಣ್ತಿದೆಯಲ್ವಾ
ಅದರ ಹಿಂದೆನೇ ನಮ್ಮನೆ.
*


ಇಂಗ್ಲಿಷ್ ಮೂಲ- ನಿಸ್ಸೀಮ್ ಎಜೆ಼ಕಿಯಲ್ 


ಕನ್ನಡಕ್ಕೆ- ಕಾಜೂರು ಸತೀಶ್ 



1 comment:

  1. ಒಳ್ಳೆಯ ಅನುವಾದ, ವೃದ್ದಪದ್ಯ

    ReplyDelete