ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, April 19, 2024

ಆಹಾ


ಒಂದಾನೊಂದು ಕಾಲದಲ್ಲಿ
ಒಂದು ಊರಿನಲ್ಲಿ
ಮನೆಗೆಲಸದ ನಡುವೆ
ಸೊಂಟ ಸರಿಪಡಿಸಿ
ದಣಿವಾರಿಸಿಕೊಳ್ಳುವುದರ ನಡುವೆ
ಹೆಂಡತಿ ಒಂದು ಕವಿತೆ ಬರೆದಳು
ಓದಿದವರೆಲ್ಲರೂ ''ಆಹಾ'' ಎಂದರು.

ಹೆಂಡತಿ ಮತ್ತೊಂದು ಕವಿತೆ ಬರೆದಳು
ಓದಿದ ಅವರೆಲ್ಲರೂ ಅಂದರು
"ಇವತ್ತು ಗಂಡಂದಲ್ವಾ ಅಡುಗೆ?''
ಆಹಾ!

ಹೆಂಡತಿ ಮತ್ತೆ ಕವಿತೆ ಬರೆದಳು
ಓದಿದವರೆಲ್ಲರೂ ಒಟ್ಟಾಗಿ ಅಂದರು
''ಇವತ್ತು ಪಾತ್ರೆ-ಪಗಡೆ ತೊಳಿಯೋ ಕೆಲಸ ಎಲ್ಲಾ
ಗಂಡಂದೇ ಅಲ್ವಾ?''
ಆಹ್ಹಾ!

ಹೆಂಡತಿ ಮತ್ತೆ ಕವಿತೆ ಬರೆದಳು
ಓದಿದವರಿಗೀಗ ಸಹಿಸಲಾಗುತ್ತಿಲ್ಲ
''ಮನೆಗೂಡಿಸೋದೆಲ್ಲ ಗಂಡನೇ ಅಲ್ವಾ?''
ಆಹ್ಹಾ!

ಹೆಂಡತಿ ಮತ್ತೆ ಕವಿತೆ ಬರೆದಳು 
ಓದಿದವರೆಲ್ಲ ತಿರಸ್ಕಾರದಿಂದ
''ಇವಳ ಗಂಡ ಅಮ್ಮಾವ್ರ ಗಂಡನೇ ಇರಬೇಕು''
ಆಹ್ಹಾ!

ಹೆಂಡತಿ ಮತ್ತೆ ಒಂದು ಕವಿತೆ ಬರೆದಳು
ಓದಿದವರು ಸೆಟೆದೆದ್ದರು
''ಇವಳ್ನೆಲ್ಲಾ  ನಿಯಂತ್ರಿಸದಿರೋದಕ್ಕೆ ಒಬ್ಬ ಸರಿಯಾದ ಗಂಡ್ಸು ಇಲ್ಲದಿರೋದೇ ಕಾರಣ''
ಆಹ್ಹಾ!

ಗಂಡ ಎಂದಿನಂತೆ
ಕವಿತೆ ಬರೆಯುತ್ತಿದ್ದಾನೆ
ಕಥೆ ಬರೆಯುತ್ತಿದ್ದಾನೆ
ಆತ್ಮರತಿಯಲ್ಲಿ ಮುಳುಗಿದ್ದಾನೆ
 ಓದಿದವರು ಅಹುದಹುದೆನ್ನುತ್ತಿದ್ದಾರೆ
' ಓರ್ವ ಯಶಸ್ವಿ ಪುರುಷನ ಹಿಂದೆ 
 ಒಳ್ಳೆಯ ಹೆಣ್ಣೊಬ್ಬಳಿರುತ್ತಾಳೆ'
ಗಂಡ ಮತ್ತೆ ಮತ್ತೆ ಬರೆಯುತ್ತಿದ್ದಾನೆ 
ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ
ಆಹಾ!


ಮಲಯಾಳಂ ಮೂಲ - ವಿ ಕೆ ಶಾಹಿನ



ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment