ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, September 9, 2025

ನಿನ್ನೊಡಲಿನಲ್ಲಿ

ಪುಸ್ತಕದ ಒಳಗೆ ಭದ್ರವಾಗಿ ಬದುಕಿಕೊಂಡಿತ್ತು ನನ್ನೀ ಕವಿತೆ. ಇಪ್ಪತ್ತು ವರ್ಷಗಳ ಹಿಂದೆ, ನಾನು ವಿದ್ಯಾರ್ಥಿಯಾಗಿದ್ದಾಗ ಹುಟ್ಟಿದ್ದು . ಪತ್ರಿಕೆಗೆ ಕಳುಹಿಸಲು ಟೈಪ್ ರೈಟರಿನಲ್ಲಿ ಟೈಪು ಮಾಡಿಸಿ ಇಟ್ಟಿದ್ದೆ. ಅದರ ಛಾಯಾ ಪ್ರತಿಯನ್ನು ಸ್ಥಳೀಯ ಪತ್ರಿಕೆಯೊಂದಕ್ಕೆ ಕಳಿಸಿದ್ದೆ.ಅದು ಪ್ರಕಟವಾಗಲಿಲ್ಲ ಅನ್ನೋದು ನನಗೀಗ ಖುಷಿಯ ಸಂಗತಿ! (ಆದರೆ ಆಗ ಬೇಸರವಾಗಿತ್ತು!)

ಈ ಕವಿತೆಯಲ್ಲಿ ಮಾತು ಹೆಚ್ಚಿದೆ.  ಹೊಸ ನುಡಿಚಿತ್ರಗಳನ್ನು ಕಟ್ಟುವ ಹಂಬಲವಿದ್ದರೂ ಪೂರ್ವಸೂರಿಗಳ ನೆರಳಿದೆ. ಈಗ ನಾನು ಮೂರ್ನಾಲ್ಕು ಸಾಲುಗಳಲ್ಲಿ ಇದೇ ಅರ್ಥವನ್ನು ಹೆಣೆಯಬಹುದಾದ/ ಹೊಳೆಯಿಸಬಹುದಾದ ಈ ಕವಿತೆ ನನಗೆ ಹೊಸ ಭರವಸೆಯನ್ನೂ, ಅಧ್ಯಯನಕ್ಕೆ ಮುನ್ನುಡಿಯನ್ನೂ ಒದಗಿಸಿದ್ದಂತೂ ಸತ್ಯ.
*


 

ನಿನ್ನೊಡಲಿನಲ್ಲಿ
-----------------------

ನಿನ್ನ ಮೌನ ಸಾಮ್ರಾಜ್ಯದ ತುಂಬ ನಿತ್ಯ ಪರ್ವ
ಗರಿಬಿಚ್ಚಿ ಚಿಗಿಯುತಿದೆ ಹಸಿರು ಸೀರೆಯ ನೀರೆ
ಎದೆಯೊಳಗವಿತು ಹರಿದರೇನು ವೈತರಣಿಯ ನೆತ್ತರ ಧಾರೆ?
ಧಾರಣದ ಹಾಲುಮೊಗದಿ ನಲಿಯುತಿದೆ ಬೆರಗಿನ ಕೋಟಿ ತಾರೆ.

ಅರಿವಿನ ಝಳಪಿನಲಿ ಇರುಳು ಕ್ಷಯಿಸುವ ಹಾಗೆ
ಬೂರುಗ, ಮುತ್ತುಗದ ಸಾಲುದೀಪದ ಹೊಳಪಿಗೆ
ಸಕಲ ಕಣ್ಣ ಇರುಳ ತೆರೆಹರಿದು ಹೃದಯಸುಮ ಬಿರಿದು ದುಂಬಿಗಳ ಕರೆದು
ನೆನಪಿನಾಳದ ಬಿರುಕುಗಳೆಲ್ಲಾ ಬಿಗಿದು
ಚಿತ್ರ-ವಿಚಿತ್ರ ಸ್ವಪ್ನಗಳಾಗುತ್ತವೆ!

ನಿನ್ನುಸಿರ ಮಂದಾನಿಲದ ಸ್ಪರ್ಶಕೆ
ಈ ಲೇಖನಿ, ಕೋಟಿ ಉದರವಿರದ ಹಸುಳೆಗಳು ನಿದ್ರಿಸುತ್ತವೆ
ಒಮ್ಮೊಮ್ಮೆ ಉಸಿರು ಮಂದ್ರವಾಗಿ ಮೈಕೊಡವಿದಾಗ
ಜೀವಜಾಲ ನಿರ್ಲಿಪ್ತಗೊಳ್ಳುತ್ತದೆ
ಎದೆಯ ಮಬ್ಬು ಕರಗಿ ವಿಮಲ ದೀಪಗಳುರಿಯುತ್ತವೆ.

ಬೇಡ ತಾಯೇ, ಬೇಡ ಗುರುವೇ
ನಿನ್ನೊಡಲಿನಲ್ಲಿ ಬೋಧಿವೃಕ್ಷವಾಗುವುದು ಬೇಡ
ಒಂದು ಕಿರು ಮಿಂಚುಹುಳುವಾದರೂ ಸರಿಯೆ
ಹೆಸರಿರದ ಬಾಂದಳದ ಚುಕ್ಕಿಯಂತೆ
ನನ್ನದೇ ಬೆಳಕಿನಲಿ ಬದುಕಲವಕಾಶ ನೀಡು.
*

✍️ಕಾಜೂರು ಸತೀಶ್

1 comment: